Sunday, February 23, 2025

ಮಹಾಕುಂಭದ ಪರೀಕ್ಷೆ

        ನಂಬಿಕೆ ವಿಶ್ವಾಸ ಎಂದು  ಬರುವಾಗ ನನಗೆ ನೆನಪಿಗೆ ಬರುವುದು "ಅದಾಮಿಂದೆ ಮಗನ್ ಅಬು " ಎಂಬ ಹಳೆಯ ಮಲಯಾಳಂ ಚಲನ ಚಿತ್ರ. ಇದರ ಬಗ್ಗೆ ಹಿಂದೆ ಕಾಶಿ ಯಾತ್ರೆಯ ಕುರಿತ ಲೇಖನದಲ್ಲಿ ಒಂದು ಸಲ ಬರೆದಿದ್ದೆ.  ಈಗಲೂ ಅದೇ ಬಗೆಯ ವಿಷಯ ಹೇಳುವುದಕ್ಕೆ ಇದು ಬಿಟ್ಟರೆ ನನಗೆ ಬೇರೆ ಯಾವ ಸೂಕ್ತ ಉದಾಹರಣೆಯೂ ನೆನಪಿಗೆ ಬರುವುದಿಲ್ಲ. ಇದರಲ್ಲಿ  ಕಥಾನಾಯಕ ಪತ್ನಿ ಸಹಿತ ಹಜ್ ಗೆ ಹೋಗುವ ಸಿದ್ದತೆಯ  ಕಥಾವಸ್ತು. ಅದಾಂನ ಮಗ ಅಬುವಾಗಿ  ಹಿರಿಯ ನಟ ಸಲೀಂ ಕುಮಾರ್ ಮನೋಜ್ಞವಾಗಿ ಅಭಿನಯಿಸಿದ ಚಲನಚಿತ್ರವಿದು. ಸಂಪ್ರದಾಯಸ್ಥ ಮುಸಲ್ಮಾನನಾಗಿ ಹಜ್ ಗೆ ಹೋಗುವುದಕ್ಕೆ ಆತ ಎಲ್ಲ ಸನ್ನಾಹವನ್ನೂ ಮಾಡುತ್ತಾನೆ. ಹೋಗುವ ಮೊದಲು ನಿಯಮದಂತೆ, ಪರಿಶುದ್ದನಾಗಬೇಕು. ಯಾರಿಗೂ ವಂಚನೆ ಮಾಡದೆ, ಇರುವ ಋಣ ಎಲ್ಲವನ್ನು ಸಂದಾಯ ಮಾಡಬೇಕು. ಯಾರಲ್ಲೇ ಆಗಲಿ ದ್ವೇಷ ಮನಸ್ತಾಪ ಇದ್ದರೆ ಅದನ್ನು ಪರಿಹರಿಸಿಕೊಳ್ಳಬೇಕು.  ಶುದ್ದ ಮನಸ್ಸಿನಿಂದ ಶುದ್ದ ಅಂತಃಕರಣದಲ್ಲಿ ಹಜ್ ಯಾತ್ರೆ ಮಾಡಬೇಕು.  ಚಲನ ಚಿತ್ರದ ಪ್ರತಿಯೊಂದು ಸನ್ನಿವೇಶವೂ ಈ ತತ್ವವನ್ನು ತೋರಿಸುತ್ತಾ ಸಾಗುತ್ತದೆ. ಎಲ್ಲಕ್ಕಿಂತ ಮೊದಲಾಗಿ ಭಗವಂತನ ಮೇಲೆ, ತನ್ನ ಧರ್ಮದ ಮೇಲೆ ಆತನಿಗಿರುವ ವಿಶ್ವಾಸ ನಂಬಿಕೆ ತುಂಬಾ ಗಾಢವಾಗಿರುತ್ತದೆ. ಭಗವಂತ ಮತ್ತು ಆತನ ಬಳಿಗೆ ಹೋಗುವ ಹಾದಿ ಪರಿಶುದ್ದತೆ ಇದೆಲ್ಲವನ್ನು ನೋಡಿದರೆ  ಮನುಷ್ಯ ಕೇವಲ ಸ್ನಾನ ಮಾಡಿ ದೇಹ ಶುದ್ದಿ ಹೊಂದಿದರೆ ಸಾಲದು, ತನ್ನ ಮನಸ್ಸು, ಬದುಕಿನ ಹಾದಿ ಎಲ್ಲವೂ  ಪರಿಶುದ್ದವಾಗಬೇಕು.  ಇದೇ ರೀತಿ  ಎಲ್ಲಾ ಪಾಪ ದುರಿತಗಳಿಂದ ಪರಿಶುದ್ಧನಾಗುವುದು  ಎಂದರ್ಥ. ಎಲ್ಲ ಧರ್ಮದಲ್ಲಿರುವ ತತ್ವ ಇದೇ. ಅದರ ಮೇಲೆ ಇರಬೇಕಾದ ನಂಬಿಕೆಯೂ ಅದೇಆಗಿರುತ್ತದೆ.  ಮನುಷ್ಯ ತನ್ನ ನಂಬಿಕೆಯ ವಿಷಯ ಬರುವಾಗ ಎಂದೂ ಆತ್ಮವಂಚನೆ ಮಾಡಲಾರ. ಮಾಡಿದರೆ ಆತನ ನಂಬಿಕೆ ಕಲುಷಿತವಾಗಿಬಿಡುತ್ತದೆ.  ಆತ ಬಡತನದಲ್ಲೂ  ಬಹಳ ಕಷ್ಟ ಪಟ್ಟು, ಜತೆಯಲ್ಲಿ ಯಾರೂ ಇಲ್ಲದೇ ಇದ್ದರೂ ಇದ್ದ ಮನೆ ವಸ್ತು ಎಲ್ಲವನ್ನು ಬಿಟ್ಟು ಹಜ್ ಗೆ ಹೋಗುವಾಗ ಮರಳಿ ಬರುವ ನಿರೀಕ್ಷೆ ಇರುವುದಿಲ್ಲ. ಆದರೂ ಹೋಗಬೇಕು ಎನ್ನುವ ಹಂಬಲ ಅದಕ್ಕಾಗಿ ಇರುವ ಪ್ರಯತ್ನ ಕೇವಲ ಆತನ ನಂಬಿಕೆ ವಿಶ್ವಾಸ. ಎಲ್ಲ ಧರ್ಮದ ನೆಲೆಗಟ್ಟು ಇರುವುದು ವಿಶ್ವಾಸದಲ್ಲಿ. ಅದನ್ನುಮೌಢ್ಯ ಎಂದು ವಿಶ್ವಾಸ ಬೆಲೆ ತಿಳಿಯದವರು ಹೇಳುತ್ತಾರೆ. 

ಸಾವಿರ ಸಂಖ್ಯೆಯ ಜನ ಎನ್ನುವಾಗ ನಮಗೆ ಗಾಬರಿಯಾಗುತ್ತದೆ. ಆದರೆ ಪ್ರಯಾಗ್ ರಾಜ್ ನ  ಮಹಾಕುಂಭದಲ್ಲಿ ಕೋಟಿ ಕೋಟಿ ಸಂಖ್ಯೆಯಲ್ಲಿ ಕೇವಲ ಗಂಗೆಯ ನೀರು ಸೋಕಿಸಿಕೊಳ್ಲುವುದಕ್ಕೆ ಬರುವುದೆಂದರೆ ವಿಶ್ವ ನಿಬ್ಬೆರಗಾಗುತ್ತದೆ. ಇದೊಂದು ಜಗತ್ತಿನ ಅದ್ಭುತ ಎನ್ನಬೇಕು. ಇಷ್ಟಾದರೂ ಗಂಗೆ ತನ್ನ ಮಡಿಲಲ್ಲಿ ಎಲ್ಲರನ್ನು ಸೇರಿಸಿ ಪಾವನವಾಗಿಸುತ್ತಾಳೆ. ಮನುಷ್ಯನ ನಂಬಿಕೆ ಎಂದರೆ ಅದೊಂದುಉತ್ಕಟ ಭಾವದ ಸಂಕೇತ. 

ಇತ್ತೀಚೆಗೆ ದೇಶೀಯ ಉತ್ಸವವಾಗಿ ಆಚರಿಸಿದ ಮಹಾ ಕುಂಭ ಮೇಳ, ಮನುಷ್ಯನ ಈ ನಂಬಿಕೆಗಳಿಗೆ ಸಾಕ್ಷ್ಯವಾಗಿ ಕಣ್ಣ ಮುಂದೆ ನಿಂತರೂ ವಿವಾದಗಳು ಈ ನಂಬಿಕೆಗಳಿಗೆ ಸವಾಲಾಗಿ ನಿಂತು ಬಿಡುತ್ತದೆ. ಮನುಷ್ಯ ಮಾತ್ರ ಸಹಜವಾಗಿ ಈ ವಿವಾದಗಳ ಬಗ್ಗೆ ಪರಿವೆ ಇಲ್ಲದೆ ತನ್ನ ನಂಬಿಗೆ ವಿಶ್ವಾಸದ ಮೇಲೆ ಗಾಢವಾಗಿ ವರ್ತಿಸುತ್ತಾನೆ. ಪರಿಶುದ್ದನಾಗುವುದು ಮನುಷ್ಯ ಜನ್ಮದ ಮೂಲ ತತ್ವ. ಮಹಾ ಕುಂಭದಲ್ಲಿ ಮುಳುಗೆದ್ದವರಿಗೆ ಬೇರೆ ಯಾವ ಧ್ಯೇಯವೂ ಇದ್ದಂತಿಲ್ಲ. ಯಾವುದೋ ಇರಾದೆಯಿಂದ, ಸಂಕಲ್ಪದಿಂದ ಮನುಷ್ಯ ದೇವರ ಎದುರು ಹಲವು ಹರಿಕೆಗಳನ್ನು ಹೊರುತ್ತಾನೆ. ತನ್ನ ಹಲವಾರು ಹಂಬಲಗಳಿಗೆ ದೈವಾನುಗ್ರಹ ಒದಗಿ ಬರಲಿ ಎಂದು ಆಶಿಸುತ್ತಾನೆ. ಅದು ವ್ಯಾಪಾರ ವ್ಯವಹಾರದ ಅಭಿವೃದ್ಧಿಯಾಗಲಿ , ಮಕ್ಕಳ ಉಜ್ವಲ ಭವಿಷ್ಯತ್ ಗೆ ಆಗಲಿ , ಅಥವಾ ಎದುರಾದ ಕಷ್ಟ ನಷ್ಟ ಪರಿಹರಿಸುವುದಕ್ಕೆ ಹರಕೆ ಹೊತ್ತು ದೇವರಿಗೆ ಮೊರೆ ಹೋಗುತ್ತಾನೆ. ದೇವರು ಪರಿಹರಿಸುತ್ತಾನೋ ಇಲ್ಲವೋ ಆದರೆ ತನ್ನ ನಂಬಿಕೆಯ ಮೇಲೆ ಅಚಲ ವಿಶ್ವಾಸ. ಕಷ್ಟ ಪರಿಹಾರವಾಗದೇ ಇದ್ದರೂ ತನ್ನ ಕರ್ಮವನ್ನು ನೆನೆಯುತ್ತಾನೆ ಹೊರತು ತನ್ನ ನಂಬಿಕೆಯ ದೇವರನ್ನು ದೂರುವುದಿಲ್ಲ. ಈ ಮಹಾಕುಂಭದಲ್ಲಿ ಮಿಂದೆದ್ದ ಕೋಟಿ ಕೋಟಿ ಮಂದಿಗಳಲ್ಲಿ ಕೇಳಿದರೆ ಇಂತಹ ಯಾವ ಉದ್ದೇಶಗಳೂ ಇರುವುದಿಲ್ಲ. ಕೇವಲ ಕೇವಲ ತನ್ನ ಪಾಪ ಪರಿಹಾರಕ್ಕೆ ಗಂಗೆಯ ಮಡಿಲಿಗೆ ತಲೆ ಕೊಡುತ್ತಾನೆ. ಇದನ್ನು ವಿವಾದಕ್ಕೆ ಎಳೆಯುವವರಿಗೆ ಇಂತಹ ಪವಿತ್ರ ವಿಚಾರಗಳು ಅದರ ಗಂಭೀರತೆ ಅರ್ಥವಾಗುವುದಿಲ್ಲ. ಯಾರಾದರೂ ನನಗೆ ಘನ ಸಂಪತ್ತು ಐಶ್ವರ್ಯ ಒದಗಿಬರಲಿ ಎಂದು ಗಂಗೆಯಲ್ಲಿ ಮುಳುಗುವುದಿಲ್ಲ. ಮುಳುಗಿ ಪವಿತ್ರನಾಗುವುದು ಮಾತ್ರ ಆತನ ಧ್ಯೇಯ. ಅದು ಆದಾಂಮಿಂದೆ ಮಗ ಅಬುವಿನ ನಂಬಿಕೆಗಿಂತ ಏನೂ ಭಿನ್ನವಾಗಿ ಇಲ್ಲ. 


ನಂಬಿಕೆಗಳು ವಿಶ್ವಾಸಗಳು ಅದರಲ್ಲೂ ಸನಾತನ ಹಿಂದೂ ಸಂಸ್ಕೃತಿ ಮೌಢ್ಯವಾಗಿ ಹಲವರಿಗೆ ಕಾಣುತ್ತದೆ. ಅದನ್ನು ಮೌಢ್ಯ ಎಂದು ಹೇಳುವುದರಲ್ಲೂ ಸ್ವಾರ್ಥವಿರುತ್ತದೆ. ಈ ಸ್ವಾರ್ಥದ ಅರಿವಿದ್ದೇ ಮನುಷ್ಯ ಕೋಟಿ ಸಂಖ್ಯೆಯಲ್ಲಿ ಮುಳುಗೇಳುತ್ತಿರುವುದು. ಒಂದು ಕೊಳಚೆ ಹೊಂಡದಲ್ಲಿ ಚಿನ್ನದ ತುಂಡು ಒಂದು ಬಿದ್ದಿರುತ್ತದೆ. ಆ ಚಿನ್ನ ಕೈವಶ ಮಾಡಿಕೊಳ್ಳುವುದಕ್ಕೆ ಕೊಳಚೆ ನೀರಾದರೂ ಅದನ್ನು ಲೆಕ್ಕಿಸದೆ ಹೊಂಡಕ್ಕೆ ಇಳಿದುಬಿಡುತ್ತಾನೆ. ಆ ನೀರು ಕೊಳಚೆ ಅಂತ ಆಕ್ಷಣಕ್ಕೆ ಅನಿಸುವುದಿಲ್ಲ. ಯಾರೋ ಒಬ್ಬ ಕೊಳಚೆ ಹೊಂಡಕ್ಕೆ ಬಿದ್ದು ಬಿಡುತ್ತಾನೆ. ಬಿದ್ದವನ ಜೀವದ ಮೌಲ್ಯವನ್ನು ಗ್ರಹಿಸಿ ಕೊಳಚೆಯನ್ನು ಲೆಕ್ಕಿಸದೆ ಹೊಂಡಕ್ಕೆ ಇಳಿದು ಬಿಡುತ್ತಾರೆ. ಇಲ್ಲಿನ ಕೊಳಕು ಗಮನಾರ್ಹವೆನಿಸುವುದಿಲ್ಲ.  ಗಂಗೆಯ ನೀರು ಕಲ್ಮಷ ಅಂತ ಹೇಳಿದರೆ ಅದನ್ನು ಕೇಳಿಸಿಕೊಳ್ಳುವ ವ್ಯವಧಾನ ಇರುವುದಿಲ್ಲ. ಚಿನ್ನಕ್ಕಿಂತಲೂ ಜೀವಕ್ಕಿಂತಲೂ ಮಿಗಿಲಾದ ಒಂದು ಭಾವನೆ ಆ ಗಂಗೆಯಲ್ಲಿ ಅಡಕವಾಗಿರುತ್ತದೆ. ಒಂದು ಮುಳುಗಿನ ಜಲಸ್ಪರ್ಷದಲ್ಲಿ ಆ ಮಹತ್ವವಿರುತ್ತದೆ. ಆದರೆ ಇದನ್ನು ಲೇವಡಿ ಮಾಡುವ ಒಂದೇ ಉದ್ದೇಶದಲ್ಲಿ ಇನ್ನಿಲ್ಲದ ವಿವಾದ ಸೃಷ್ಟಿ ಮಾಡುತ್ತಾರೆ. ಗಂಗೆಯ ನೀರು ಸ್ನಾನಕ್ಕೆ ಯೋಗ್ಯವಲ್ಲ ಎಂದು ಹೇಳುವವರಿಗೆ ಈ ಗಂಗೆಯಲ್ಲಿ ಸಿಗುವ ಪರಿಶುದ್ದತೆಯ ಅರಿವು ಇರುವುದಿಲ್ಲ. ದೇಹ ಶುದ್ದಿಗಾಗಿ ಮನುಷ್ಯ ಇಲ್ಲಿ ಮುಳುಗುವುದಿಲ್ಲ. ಇಲ್ಲಿ ಆತ್ಮ ಶುದ್ಧಿ ಮಾತ್ರ ಮುಖ್ಯವಾಗುತ್ತದೆ. ಆದರೆ ಲೌಕಿಕ ಚಿಂತನೆಯ ಮೂರ್ಖ ಮನಸ್ಸುಗಳಿಗೆ ಇಲ್ಲಿ ಸಿಗುವ ಪರಿಶುದ್ದಿಯ ಜ್ಞಾನವಿರುವುದಿಲ್ಲ. ಈ ಘಳಿಗೆಯಲ್ಲಿ ಶುದ್ದವಾದ ದೇಹ....ಮತ್ತೊಂದು ಘಳಿಗೆಯಲ್ಲಿ ಮಲಿನವಾಗಬಹುದು. ಆದರೆ ಪೂರ್ಣ ಜನ್ಮವೇ ಪಾವನವಾಗಿ ಪರಿಶುದ್ದವಾಗುವ ನಂಬಿಕೆಯಲ್ಲಿ ಕ್ಷುಲ್ಲಕ ದೇಹ ಶುದ್ದಿ ಮುಖ್ಯವಾಗುವುದಿಲ್ಲ. ಆದರೆ   ಗಂಗೆಯಲ್ಲಿ ಮಿಂದರೆ ಹೊಟ್ಟೆತುಂಬುತ್ತಾ ಎಂದು ಕೇಳುವ ಅದರ ಬಗ್ಗೆ ಅಪಸ್ವರ ಎತ್ತುವ ಮೂರ್ಖರಿಗೆ ಈ ಪಾವಿತ್ರ್ಯತೆ ಅರ್ಥವಾಗುವುದಿಲ್ಲ. ಕೇವಲ ಲೌಕಿಕ ಚಿಂತನೆ. ದೇಹದ ಹಸಿವಿನ ಬಗ್ಗೆ ಮಾತ್ರ ಯೋಚಿಸುವವನಿಗೆ ಅದರಿಂದಾಚೆಗಿನ ಜಗತ್ತಿನ ಹಸಿವು ಕಣ್ಣಿಗೆ ಕಾಣುವುದಿಲ್ಲ.  ಮೋಕ್ಷದ ಅರ್ಥ ತಿಳಿಯದವನು ಹಸಿವಿನ ಹಿಂದೆ ಹೋಗುತ್ತಾನೆ.  ಮನುಷ್ಯನಿಗೆ ಕೇವಲ ಹಸಿವು ಮಾತ್ರ ಮುಖ್ಯವಾಗುವುದಾದರೆ ಉಳಿದವುಗಳ ಹಿಂದೆ ಹೋಗುವ ಉದ್ದೇಶವಾದರೂ ಏನು? 

ಯಾವುದೇ ಯಶಸ್ಸಿನ ಹಿಂದೆ ಒಂದು ಪರೀಕ್ಷೆ ಇರುತ್ತದೆ. ನಮ್ಮನ್ನು ಪರೀಕ್ಷಿಸದೇ ಪರೀಕ್ಷೆಗೆ ಒಡ್ಡದೆ ಸಿಗುವ ಯಾವುದೇ ಯಶಸ್ಸು ಅದು ನಮ್ಮ ಅರ್ಹತೆಯನ್ನು ಹೇಳುವುದಿಲ್ಲ. ಅದರಲ್ಲಿ ಆತ್ಮಾನಂದವೂ ಲಭಿಸುವುದಿಲ್ಲ. ಆದರೆ ಒಂದು ಯಶಸ್ಸು ನಮ್ಮನ್ನು ಪರೀಕ್ಷೆಗೊಡ್ಡಿ ನಮ್ಮನ್ನು ಅರೆದು ಅರೆದು ಕೊನೆಯಲ್ಲಿ ಒದಗಿ ಬರುವ ಯಶಸ್ಸುಅದು ಸಂತೋಷಕ್ಕೆ ಕಾರಣವಾಗುವುದು ಮಾತ್ರವಲ್ಲ ಆತ್ಮ ತೃಪ್ತಿಯನ್ನು ಒದಗಿಸುತ್ತದೆ. ನಾವದಕ್ಕೆ ಅರ್ಹರು ಎಂದಾಗುವಾಗ ಅದು ಅಭಿಮಾನಕ್ಕೆ ಕಾರಣವಾಗುತ್ತದೆ. ಹೀಗಿರುವಾಗ ಭಗವಂತನ ಪದವಿ ಎಂಬುದು ಸುಮ್ಮನೇ ಒದಗಿ ಬಂದರೆ ಅದು ಕ್ಷುಲ್ಲಕ ಪದವಿಯಾಗಬಹುದು. ಅದಕ್ಕೆ ಯಾವ ಮೌಲ್ಯವೂ ಇಲ್ಲದಾಗಬಹುದು. ಒಂದು ರೀತಿಯಲ್ಲಿ ಗಂಗೆಯಲ್ಲಿ ಸ್ನಾನ ಮಾಡಿದರೆ ಬಡತನ ನೀಗುತ್ತಾ?  ಅಥವಾ ಹೊಟ್ಟೆಯ ಹಸಿವು ಶಮನವಾಗುತ್ತದಾ?   ಎಂದು ಕೇಳಿದಂತೆ. ಅದಕ್ಕೆ ಅರ್ಥವೇ ಇರುವುದಿಲ್ಲ. ಹಾಗಾಗಿಯೇ ಭಗವಂತನ ಬಳಿಗೆ ಹೋಗುವಾಗ ಅಲ್ಲಿ ಹಸಿವು ಎಂಬುದನ್ನು ಮನುಷ್ಯ ಮೊದಲು ಪಣಕ್ಕೆ ಒಡ್ಡಿ ಬಿಡುತ್ತಾನೆ. ಗಾಂಧೀಜಿಯ ಸ್ವಾತಂತ್ರ್ಯ ಹೋರಾಟದ ಕಥೆಯಲ್ಲೂ ಇದೇ ಹಸಿವಿನ ತಂತ್ರವಿದೆ. ಒಂದು ಯಶಸ್ಸಿನ ಹಿಂದೆ ಒಮ್ದು ಹಸಿವು ಇದ್ದೇ ಇರಬೇಕು. ಹಸಿವಿನ ರೂಪ ವೆತ್ಯಸ್ತವಾಗಿರಬಹುದು. ಆದರೆ ಹಸಿವು....ಅದೊಂದು ಬದುಕಿನ  ಪರೀಕ್ಷೆ. 

ಮಹಾ ಕುಂಭ ಆರಂಭವಾದಂದಿನಿಂದ ಒಂದಲ್ಲ ಒಂದು ಅನರೀಕ್ಷಿತ ಘಟನೆಗಳು ನಡೆದವು. ಕೆಲವು ಅವಘಡಗಳು ನಡೆದವು. ಪ್ರತಿಯೊಂದು ಘಟನೆಯಲ್ಲೂ ಒಂದು ಪರೀಕ್ಷೆಯ ರಹಸ್ಯವಿತ್ತು. ಈ ಪರೀಕ್ಷೆಯ ಸೋಲು ಕೂಡ ಒಂದು ಅರ್ಹತೆ. ಅಲ್ಲೊಂದು ಪ್ರಾಮಾಣಿಕತೆಯ ಪದವಿ ಇರುತ್ತದೆ. ಆದರೆ ಪರೀಕ್ಷೆ ಅದು ಎದುರಿಸುವುದಕ್ಕೆ ಇರುವ ಒಂದು ಅವಕಾಶ. ಹಾಗಾಗಿ ಅಲ್ಲಿ ಸಾವಿನ ವರದಿ ಸಾವಿರ ಸಂಖ್ಯೆಯಲ್ಲಿ ಬಂದರೂ ಸಾವಿರದ ಮಂದಿ ಯಾರೂ ಇಲ್ಲ, ಸಾವೇ ಒಂದು ಪದವಿ ಎಂಬಂತೆ ಗಂಗೆಯ ಬಳಿಗೆ ತೆರಳಿದರು. ಸಾವು ಭಯವನ್ನು ಹುಟ್ಟಿಸಲಿಲ್ಲ.  ಆ ಸಾವು  ಜೀವನ ಪರೀಕ್ಷೆಯಲ್ಲಿ ಹಿಂಜರಿಯುವಂತೆ ಮಾಡಲಿಲ್ಲ.  ಒಂದು ಅರ್ಥದಲ್ಲಿ ಸಾವು ಒಂದು ಪರೀಕ್ಷೆಯಾಗಿ ಬದಲಾಗಿ ಹೋದದ್ದು ಸನಾತನ ಧರ್ಮದ ಹಾದಿಯಲ್ಲಿದ್ದ ಬಹಳ ದೊಡ್ಡ ರಹಸ್ಯವಾಗಿ ರುಜುವಾತಾಯಿತು. ಸಾವನ್ನೂ ಸ್ವೀಕರಿಸುವ ಮನಸ್ಥಿತಿಯಲ್ಲಿ ಕೇವಲ ಹಸಿವಿನ ಚಿಂತೆ ಎಲ್ಲಿರುತ್ತದೆ. ಇದನ್ನು ತಿಳಿಯದವರು ಮೂರ್ಖತನದಿಂದ ಹೇಳಬಹುದು ಗಂಗೆಯಲ್ಲಿ ಮಿಂದರೆ ಬಡತನ ಹೋಗುತ್ತದಾ? ಹಸಿವು ನೀಗುತ್ತದಾ ಎಂದು. ಈ ಮರ್ತ್ಯ ಲೋಕದಲ್ಲಿ ಹಸಿವು ಎಂಬುದು ಅನಿವಾರ್ಯ. ಎಲ್ಲದಕ್ಕೂ ಅದೇ ಕಾರಣ. ಆದರೆ ಅದನ್ನು ಮೆಟ್ಟಿನಿಂತವನು . ಜೀವನ ಪರೀಕ್ಷೆಯನ್ನು ಗೆಲ್ಲುತ್ತಾನೆ. ಭಗವಂತನಿಗೆ ಪ್ರಿಯನಾಗುತ್ತಾನೆ. ಅದು ಪ್ರತೀ ಮನುಷ್ಯ ಜೀವಕ್ಕೆ ಪರಮ ಗುರಿಯಾಗಿರುತ್ತದೆ. 

ಪ್ರತಿಯೊಂದು ಕೆಲಸದಲ್ಲು ವಿಘ್ನಗಳು ಇದ್ದೇ ಇರುತ್ತವೆ. ಅದು ಒದಗಿ ಬರುವುದು ಒಂದು ರೀತಿಯಲ್ಲಿ ನಮಗೆ ಪರೀಕ್ಷೆಯಾಗಿರುತ್ತದೆ. ಅಲ್ಲಿ ಅವ್ಯವಸ್ಥೆ ಇರುತ್ತದೆ. ಸೌಕರ್ಯದ ಕೊರತೆ ಇರುತ್ತದೆ. ಕೆಲವು ತೊಂದರೆಗಳು ಇರಬಹುದು. ಮನೆಗೆ ಒಂದು ಹತ್ತು ಜನ ಅತಿಥಿಗಳು ಬಂದರೆ ಅವರಿಗೆ ಒಪ್ಪತ್ತಿನ ಊಟ ಹಾಕುವಾಗ ನಮಗೆ ಹಲವು ಸಂಕಷ್ಟಗಳು ಎದುರಾಗುತ್ತವೆ. ಇನ್ನು ಕೋಟಿ ಕೋಟಿ ಸಂಖ್ಯೆಯ ಜನಗಳು ಬರುವಾಗ ಅದೊಂದು ದೊಡ್ಡ ಪರೀಕ್ಷೆಯಾದರೆ ಅದು ನಿರೀಕ್ಷತ ಎಂದು ತಿಳಿದು ಕೊಳ್ಳುವುದರಲ್ಲಿ ಯಶಸ್ಸಿನ ರಹಸ್ಯವಿರುತ್ತದೆ. 

ಪ್ರತಿಯೊಂದು ಕೆಲಸದಲ್ಲು ವಿಘ್ನಗಳು ಇದ್ದೇ ಇರುತ್ತವೆ. ಅದು ಒದಗಿ ಬರುವುದು ಒಂದು ರೀತಿಯಲ್ಲಿ ನಮಗೆ ಪರೀಕ್ಷೆಯಾಗಿರುತ್ತದೆ. ಅಲ್ಲಿ ಅವ್ಯವಸ್ಥೆ ಇರುತ್ತದೆ. ಸೌಕರ್ಯದ ಕೊರತೆ ಇರುತ್ತದೆ. ಕೆಲವು ತೊಂದರೆಗಳು ಇರಬಹುದು. ಮನೆಗೆ ಒಂದು ಹತ್ತು ಜನ ಅತಿಥಿಗಳು ಬಂದರೆ ಅವರಿಗೆ ಒಪ್ಪತ್ತಿನ ಊಟ ಹಾಕುವಾಗ ನಮಗೆ ಹಲವು ಸಂಕಷ್ಟಗಳು ಎದುರಾಗುತ್ತವೆ. ಇನ್ನು ಕೋಟಿ ಕೋಟಿ ಸಂಖ್ಯೆಯ ಜನಗಳು ಬರುವಾಗ ಅದೊಂದು ದೊಡ್ಡ ಪರೀಕ್ಷೆಯಾದರೆ ಅದು ನಿರೀಕ್ಷತ ಎಂದು ತಿಳಿದು ಕೊಳ್ಳುವುದರಲ್ಲಿ ಯಶಸ್ಸಿನ ರಹಸ್ಯವಿರುತ್ತದೆ. 


Friday, February 14, 2025

ಪುರೋಹಿತ

             ಮನೆಯೋದರಲ್ಲಿ ಗಣಹೋಮ‌ಮುಗಿಸಿ ಅಂದು ನಾನು ನನ್ನ ಅಜ್ಜನ ಜತೆ ಚೇವಾರಿನ ಗುಡ್ಡಡ ಮೇಲೆ ನಡೆದುಕೊಂಡು ಬರುತ್ತಿದ್ದೆವು. ಅಲ್ಲಿ ಸಿಕ್ಕಿದ ಅಕ್ಕಿ ತೆಂಗಿನ ಕಾಯಿ ಚೀಲ  ನನ್ನ ಹೆಗಲಲ್ಲಿತ್ತು.  ಆಗ ನನ್ನ ಬಾಲ್ಯದ ಹತ್ತರ ಹರಯ.  ಅಜ್ಜನ ಬಳಿ ವೇದ ಮಂತ್ರ ಕಲಿಯುತ್ತಿದ್ದೆ.  ಹಾಗೇ ನಡೆದುಕೊಂಡು ಬರುತ್ತಿದ್ದಾಗ ಒಬ್ಬಾತ ಅಜ್ಜನನ್ನು ಕಂಡು ಓಡೋಡಿ ಬಂದ.   ಆತ ಬರುತ್ತಿದ್ದವನನ್ನು ನೋಡಿ ಅಜ್ಜ ಗೊಣಗಿಕೊಂಡರು, "ಇವನಿಗೆ ನನ್ನನ್ನು ಕಾಣುವಾಗ ಸತ್ಯನಾರಾಯಣ ಪೂಜೆ ನೆನಪಾಗುತ್ತದೆ."  ಈ ಮೊದಲು ಅಜ್ಜನನ್ನು ಹಲವು ಸಲ ಅಲ್ಲಿ ಇಲ್ಲಿ ನೋಡಿದ್ದ.  ಆಗೆಲ್ಲ ಸತ್ಯನಾರಾಯಣ ಪೂಜೆಯ ಬಗ್ಗೆ ಹೇಳುತ್ತಿದ್ದ.     ಆತ ತೋಟ ಗದ್ದೆಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದವನು. ಅಜ್ಜನ ಬಳಿಗೆ ಬಂದವನೇ, " ಅಣ್ಣೆರೆ"  ಅಂತ   ನಮಸ್ಕರಿಸಿದ. 

    ಹಲವು ಸಲ ಅಜ್ಜನನ್ನು ನೋಡಿದ್ದ. ಆತನಿಗೆ ಮನೆಯಲ್ಲಿ ಒಂದು ಸತ್ಯನಾರಾಯಣ ಪೂಜೆ ಮಾಡಬೇಕಿತ್ತು. ಅದಕ್ಕಾಗಿ ಈಗ ಪುನಃ ಅಜ್ಜನನ್ನು ನೋಡುತ್ತಿದ್ದಂತೆ ಹತ್ತಿರ ಬಂದು ಹೇಳಿದ್ದು ಇಷ್ಟೆ. ಆತ ಹಲವರಲ್ಲಿ ಸತ್ಯನಾರಾಯಣ ಪೂಜೆ ಮಾಡುವ ಬಗ್ಗೆ ಕೇಳಿಕೊಂಡಿದ್ದ. ಆದರೆ ಎಲ್ಲರೂ ಅಷ್ಟು ಖರ್ಚಾಗ್ತದೆ, ಹಲವಾರು ಪೂಜೆ ಸಾಮಾಗ್ರಿಗಳನ್ನು ಹೇಳಿ ಜಾರಿಕೊಳ್ಳುತ್ತಿದ್ದರು. ಆತ ಒಬ್ಬ ಕೂಲಿಯಾಳು, ಆತನ ಮನೆಯ ಪರಿಸ್ಥಿತಿ ನೋಡಿದರೆ ಆತ ಆ ಖರ್ಚುಗಳನ್ನು ನಿಭಾಯಿಸುವುದಕ್ಕೆ ಸಮರ್ಥನಲ್ಲ. ಅಜ್ಜನಲ್ಲಿ ಆತ ಅದನ್ನೇ ಹೇಳಿದ್ದ. ತಾನು ಬಡವ. ತನಗೆ ಪೂಜೆ ಮಾಡಲೇಬೇಕು. ಆತನ ಮನೆಯಲ್ಲಿ ಏನಾದರೂ ಒಂದು ದೈವ ಕಾರ್ಯ ಮಾಡಬೇಕು.  ಅದೇಕೋ ತನ್ನ ಕಷ್ಟಗಳಿಗೆ ಆತ ಕಂಡುಕೊಂಡ ದಾರಿಯದು. ಹಲವು ಕಡೆ ಸತ್ಯನಾರಾಯಣ ಪೂಜೆ ಮಾಡುವಾಗ ಅದರ ಕಥೆ ಕೇಳಿ ಅದು ಆತನಿಗೆ ಪೂಜೆ ಮಾಡಬೇಕೆನ್ನುವ ಬಯಕೆಯನ್ನು ಸೃಷ್ಟಿ ಮಾಡಿತ್ತು. ಹೇಗಾದರೂ ಪೂಜೆ ಮಾಡಿದರೆ ತನ್ನ ಬಡತನದ ಹಲವು ಸಮಸ್ಯೆಗಳು ಪರಿಹಾರವಾಗಬಹುದು ಎಂಬುದು ಆತನ ದೃಢವಾದ ನಂಬಿಕೆ. ಆದರೆ ಹೇಗೆ? ಪೂಜೆಯ ಸಾಮಾಗ್ರಿ, ಭಟ್ಟರಿಗೆ ಕೊಡಬೇಕಾದ ಸಂಭಾವನೆ ಹೀಗೆ ಬಹಳ ದೊಡ್ಡ ಮೊತ್ತದ ಹಣ ಆತನ ಬಳಿ ಇರಲಿಲ್ಲ. ಹಲವು ಸಲ ಬೇಡಿಕೊಂಡ ನಂತರ, 

        ಅಜ್ಜ ಕೆಲವು ತೀರಾ ಅಗತ್ಯದ ವಸ್ತುಗಳ ಪಟ್ಟಿ ಆತನಿಗೆ ಕೊಟ್ಟು ಹೇಳಿದರು "ನಾಳೆ ರಾತ್ರಿಗೆ  ನಿನ್ನ ಮನೆಗೆ ಬರುತ್ತೇನೆ. ಆ ಸಾಮಾನು ಎಲ್ಲ ತಂದಿಡು. ನಾಳೆ ಪೂಜೆ  ಮಾಡುವ. ಬೆಳಗಿನಿಂದ ಉಪವಾಸ ಇರಬೇಕು. ಮನೆಯವರು ಎಲ್ಲ ಸ್ನಾನ ಎಲ್ಲ ಮಾಡಿ ಕುಳಿತುಕೊಳ್ಳಿ ಬರುತ್ತೇನೆ"  ಆತ ಸಂತೋಷದಿಂದ ತೆರಳಿದ. 

     ಅಜ್ಜನಿಗೆ ಆತ ಮಾಡುತ್ತಾನೆ ಎಂಬ ವಿಶ್ವಾಸ ಆದರೂ ಇರಲಿಲ್ಲ. ಕಂಡದ್ದಕ್ಕೆ ಒಂದು ಪರಿಹಾರ ಅಂತ ಹೇಳಿದ್ದರು. ಆದರೂ ಮರುದಿನ ಸಾಯಂಕಾಲವಾಗುತ್ತಿದ್ದಂತೆ  ಅಜ್ಜ ನನ್ನನ್ನು ಕರೆದುಕೊಂಡು ಸ್ವಲ್ಪ ಬೇಗನೆ ಹೊರಟರು. ಆತನ  ಮನೆಗೆ ಅಂಗಳಕ್ಕೆ ಕಾಲಿಡುತ್ತಿದ್ದಂತೆ ಅಜ್ಜನಿಗೆ ಆಶ್ಚರ್ಯವಾಯಿತು. ಅಂಗಳವೆಲ್ಲ ಸೆಗಣಿ ಸಾರಿಸಿ ಸ್ವಚ್ಛ ಮಾಡಿ ಇಡಲಾಗಿತ್ತು. ಮನೆ ಮಂದಿಯೆಲ್ಲ ಸ್ನಾನ ಮಾಡಿದ್ದರು. ಅಕ್ಕ ಪಕ್ಕದ ಕೆಲವು ಮನೆಯವರು ಸೇರಿದ್ದರು. ಅಜ್ಜನನ್ನು ಕಾಣುತ್ತಿದ್ದಂತೆ ಸಂತೋಷದಿಂದ ಗೌರವದಿಂದ ಹತ್ತಿರ ಬಂದು ನಿಂತ. ತಂದಿಟ್ಟ ಎಲ್ಲ ಸಾಮಾನು ತೋರಿಸಿದ. ಅಜ್ಜನಿಗೂ ಸಂತೋಷವಾಯಿತು.  ಮನೆಯ ಜಗಲಿಯ ಒಂದು ತುದಿಯಲ್ಲಿ ಪೂಜೆಗೆ ಸಿದ್ಧತೆ ಮಾಡಬೇಕಿತ್ತು. ನನ್ನಲ್ಲಿ ಕೆಲವು ಸಾಮಾನುಗಳನ್ನು ಎತ್ತಿಡುವಂತೆ ಹೇಳಿದರು. ಹತ್ತಿರದ ಬಾವಿಯಿಂದ ನೀರು ತರುವುದಕ್ಕೆ ಹೇಳಿದರು. ಜಗಲಿಯ ತುದಿಯಲ್ಲಿ ಪೂಜೆಗೆ ಮಂಡಲ ಬಿಡಿಸಿ ಎಲ್ಲವನ್ನು ಅಣಿಗೊಳಿಸುತ್ತಿದ್ದರು. ನಾನು ನನಗೆ ತಿಳಿದಂತೆ ಅಜ್ಜನಿಗೆ ಸಹಾಯ ಮಾಡುತ್ತಿದ್ದೆ. ಅಲ್ಲೇ ಒಂದು ಕಡೆ ಮೂರು ಕಲ್ಲು ಇಟ್ಟು ತತ್ಕಾಲದ ಒಲೆ ಹಾಕುವಂತೆ ಮನೆಯವರಿಗೆ ಹೇಳಿದರು. ಅಲ್ಲಿ ಸತ್ಯನಾರಾಯಣ ಪೂಜೆಯ ಸಪಾದ ಭಕ್ಷ್ಯ ಮಾಡಬೇಕಿತ್ತು. ಗೋಧಿ ಹಿಟ್ಟು ತುಪ್ಪ ಸಕ್ಕರೆ ಹಾಲು ಬಾಳೆ ಹಣ್ಣು ಎಲ್ಲ ಸಿದ್ದಗೊಳಿಸುತ್ತಿದ್ದಂತೆ ಅಜ್ಜ ಬೆಂಕಿ ಉರಿಸಿ ಭಕ್ಷ್ಯವನ್ನು ತಯಾರಿಸುತ್ತಿದ್ದಂತೆ ಸುತ್ತಲೂ ಘಂ ಎಂಬ ಪರಿಮಳ...ನಿಜಕ್ಕೂ ಶುಭಕಾರ್ಯದ ವಾತಾವರಣ ನಿರ್ಮಾಣವಾಯಿತು. 

    ಅಜ್ಜನ ವೃತ್ತಿ ಪರತೆಯಲ್ಲಿ ಎರಡು ಮಾತಿಲ್ಲ. ಪುಟ್ಟ ಬಾಲಕ ನನ್ನ ಸಹಾಯ ಬಿಟ್ಟರೆ ಅವರಿಗೆ ಬೇರೆ ಪರಿಚಾರಕರು ಬೇಕಿರಲಿಲ್ಲ. ಮಾತ್ರವಲ್ಲದೆ ಯಾವ ಪೂಜಾ ವಿಧಿಗಳನ್ನೆ ಮಾಡಲಿ ಅವರು ವೇದ ಮಂತ್ರಗಳನ್ನು ಪುಸ್ತಕ ನೋಡಿ ಹೇಳಿದ್ದನ್ನು ನಾನು ನೋಡಲಿಲ್ಲ. ಎಲ್ಲವೂ ನಾಲಿಗೆ ತುದಿಯಲ್ಲಿ. ಸರಸ್ವತಿ ನಾಲಿಗೆಯ ಮೇಲೆ ಕುಣಿದಂತೆ. ಅದ್ಭುತ ಸ್ಮರಣ ಶಕ್ತಿ.  ಸಂಪೂರ್ಣ  ಋಗ್ವೇದ ಇವರ ನಾಲಿಗೆಯ ತುದಿಯಲ್ಲಿತ್ತು. 

           ಸುಮಾರು ರಾತ್ರಿಯ ತನಕವು ಪೂಜಾವಿಧಿ ನಡೆಯಿತು. ಅಜ್ಜ ಸತ್ಯನಾರಾಯಣ ಕಥೆ ಹೇಳುತ್ತಿದ್ದಂತೆ ಮನೆ ಮಂದಿಯ ಜತೆಗೆ ಬಂದವರೆಲ್ಲ ತಮ್ಮ ಕೆಲಸವನ್ನು ಬಿಟ್ಟು ಕಥೆ ಕೇಳುವುದಕ್ಕೆ ಶ್ರಧ್ದೆಯಿಂದ ಕುಳಿತರು. ಕೆಲವು ಕಡೆ ಈ ಶ್ರದ್ದೆ ಕಂಡುಬರುವುದಿಲ್ಲ. ಅರ್ಚಕರು ಬಿಟ್ಟರೆ ಉಳಿದವರೆಲ್ಲ ತಮ್ಮ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಅದೊಂದು ಯಾಂತ್ರಿಕ ವಿಧಿಯಾಗಿರುತ್ತದೆ. ಇಲ್ಲಿ ಮನೆ ಮಂದಿಯ ಶ್ರದ್ದೆ ನೋಡಿ ಅಜ್ಜನಿಗೂ ಉತ್ಸಾಹ. 

    ತಡರಾತ್ರಿ ಮಂಗಳಾರತಿ ಮುಗಿಸಿ ಪೂಜೆ ಸಮಾಪ್ತಿಯಾಯಿತು. ಎಲ್ಲರಿಗೂ ಪ್ರಸಾದ ವಿತರಣೆಯಾಗಿ ಅಜ್ಜ ಪೂಜೆ ಮುಗಿಸಿ ಎದ್ದರು. ಆತ ಭಕ್ತಿಯಿಂದ ತನ್ನಲ್ಲಿದ್ದ ಒಂದಷ್ಟು ಚಿಲ್ಲರೆ ದುಡ್ಡನ್ನು ತಟ್ಟೆಯಲ್ಲಿ ಎಲೆ ಅಡಿಕೆಯ ಜತೆಗೆ ಇಟ್ಟು ಅಜ್ಜನ ಕಾಲಿಗೆರಗಿದ. ಅಜ್ಜ ಆ ತಟ್ಟೆಯಿಂದ ಕೇವಲ ಒಂದು ನಾಣ್ಯ ತೆಗೆದಿರಿಸಿ ಉಳಿದದ್ದನ್ನು ಎಲ್ಲವನ್ನು ಅಲ್ಲೆ ಬಿಟ್ಟು ಆತನಿಗೆ ಆಶೀರ್ವಾದ ಮಾಡಿ ನನ್ನನ್ನು ಕರೆದುಕೊಂಡು ಹೊರಟರು.  ಕೊಟ್ಟ ದಕ್ಷಿಣೆಯನ್ನು ಬಿಟ್ಟು ಬಂದ ಅಜ್ಜನ ಆದರ್ಶ ಅದೊಂದು ಮಾದರೀ ವ್ಯಕ್ತಿತ್ವ. ಆಗ ಅದರ ಗಂಭೀರತೆ ಅರಿವಾಗದಿದ್ದರೂ ಅಜ್ಜ ಹಾಗೇಕೆ ಮಾಡಿದರು ಎಂದು ಯೋಚಿಸಿದರೆ ಅದರ ಮಹತ್ವ ಈಗ ಅರಿವಾಗುತ್ತದೆ. ವೈದ್ಯನಾದವನ ವೃತ್ತಿ ಪರತೆ ಇರುವುದು ಆತನ ವೈದ್ಯೋ ನಾರಾಯಣೋ ಹರಿಃ ಎಂಬುದರ ಅರ್ಥ ತಿಳಿದು ನಡೆದುಕೊಳ್ಳುವಾಗ. ಹಾಗೇಯೆ ಪುರೋಹಿತನಾಗುವುದು ಅನುಷ್ಠಾನದಲ್ಲಿ. ಇಂದಿನ ವ್ಯಾವಹಾರಿಕ ಪ್ರಪಂಚದಲ್ಲಿ ಇದನ್ನು ಕಾಣುವುದು ಅಪರೂಪ. ಅಜ್ಜ ಆಡಂಬರದ ಪುರೋಹಿತರಾಗಿರಲಿಲ್ಲ. ಸದಾ ಸರಳ ಉಡುಗೆಯಲ್ಲಿರುತ್ತಿದ್ದರು. ಒಂದರ್ಥದಲ್ಲಿ ಬೈರಾಗಿಯಂತೆ.  ಇಂದು ಪುರೋಹಿತರೆಂದರೆ ಮಂತ್ರಕ್ಕಿಂತ ಉಗುಳೇ ಹೆಚ್ಚು ಎಂಬಂತೆ  ಪಟ್ಪಿಯಂಚಿನ ಪಂಚೆ ಶಲ್ಯ ವೇಷತೊಟ್ಟಂತೆ ಆಡಂಬರದಿಂದ ಕೂಡಿರುತ್ತದೆ.  ಈ ನಡುವೆ ಕೆಲವರು ಸರಳವಾಗಿ ಅದರ ಮಹತ್ವ ತಿಳಿದುಕೊಂಡು ನಡೆಯುವವರಿದ್ದರೂ ಅದು ಗೌರವವನ್ನು ಮಹತ್ವವನ್ನೂ ಗಳಿಸುವುದಿಲ್ಲ.         

    ಬದುಕು ಆದರ್ಶವಾಗಿರಬೇಕು ಹೊರತು ಪ್ರದರ್ಶನದ ವಸ್ತುವಾಗಬಾರದು.  ಹಾಗಾದರೆ ಅದು ಸ್ವಾರ್ಥವಾಗುತ್ತದೆ.  ಇಂದು ಪ್ರದರ್ಶನದಿಂದ  ಮುಖ್ಯವಾಗಿ ಆಚರಣೆ ಶೂನ್ಯ ವಾಗುತ್ತದೆ. ಸತ್ಸಂಕಲ್ಪ ಇಲ್ಲ ವಾಗುತದೆ. 


        ಪುರು ಅಂದರೆ ದೇಹ ಅಂತಲೂ ಅರ್ಥವಿದೆ, ದೇಹಕ್ಕೆ ಹಿತ ಸದ್ಗತಿಯನ್ನು ಕೊಡುವವನೇ ಪುರೋಹಿತ. ಮೂಲ ತತ್ವ ಆಶಯಗಳು ಮರೆಯಾಗುತ್ತವೆ.ಪರಿಶುದ್ಧವಾಗಬೇಕಾದ ಹಾದಿಯೇ ಕಲ್ಮಶವಾದರೆ ಉದ್ದೇಶ ಶುದ್ಧವಾಗಲು ಸಾಧ್ಯವಿಲ್ಲ. ದೇಹದ ಹಿತ ಸಹಜವಾಗಿ ಅದು ನಮ್ಮ ಮನೋಭಾವಕ್ಕೆ ಹೊಂದಿಕೊಂಡಿರುತ್ತದೆ. ಆದರೆ ದೇಹದ ಹಿತ ಏನು ಎಂಬುದನ್ನು ತೋರಿಸಿಕೊಟ್ಟು ಅದನ್ನು ವಿಧಿಸುವವನೇ ಪುರೋಹಿತ. 

Saturday, February 1, 2025

ಸಂಸ್ಕಾರ ಶುದ್ಧಿ

            ಮೊನ್ನೆ ಒಬ್ಬರು ನಿಮ್ಮ ಹಾಗೇ ನಾನೂ ಮುಂಜಾನೆ ನಾಲ್ಕರ ಹೊತ್ತಿಗೆ ನಿದ್ದೆ ಬಿಟ್ಟು ಎದ್ದು ಬಿಡುತ್ತೇನೆ ಎಂದರು. ನನ್ನ ಹಾಗೆ ಎಂದು ಹೇಳುವುದಕ್ಕೆ ಇಲ್ಲಿ ಅರ್ಥವಿಲ್ಲ. ಅಥವಾ ನನ್ನನ್ನು ನೋಡಿ ಸ್ಫೂರ್ತಿಯಾಗಿದೆ ಎಂದುಕೊಳ್ಳುವಷ್ಟು ಬೆನ್ನು ತಟ್ಟಿಕೊಳ್ಳುವ ಮನೋಭಾವ ನನಗೂ ಇರುವುದಿಲ್ಲ. ಅಥವಾ ಇನ್ನೊಬ್ಬರಿಗೆ ಸ್ಫೂರ್ತಿಯಾಗಲಿ ಎಂಬ ಬಯಕೆ ನನಗೂ ಇರುವುದಿಲ್ಲ. ಮುಂಜಾನೆ ನಾನು ಮಾತ್ರ ಎದ್ದುಬಿಡುತ್ತೇನೆ ಎಂದಿದ್ದರೆ ನನ್ನ ಹಲವು ಸಮಸ್ಯೆಗಳು ಪರಿಹಾರವಾಗಿಬಿಡುತ್ತಿತ್ತು. ನನ್ನಂತೆ ನಮ್ಮ ಮೆಯಲ್ಲಿ ಉಳಿದವರೂ ಏಳುವುದರಿಂದ ಮುಂಜಾನೆಯ ಏಕಾಂತ ಅನುಭವಕ್ಕೆ  ಹಲವುಸಲ ಭಂಗವಾಗುತ್ತದೆ. ಹಾಗಾಗಿ ಎಲ್ಲರೂ ಎದ್ದೇಳಬೇಕೆಂದು ಹೇಳುವುದರಲ್ಲಿ ನಾನು ಒಂದಷ್ಟು ಅಸೌಕರ್ಯವನ್ನು ಅನುಭವಿಸುತ್ತೇನೆ. ಯಾರೂ ಎದ್ದೇಳದೆ ಇರಲಿ ಎಂದೇ ಪ್ರತಿದಿನ ಬಯಸುತ್ತೇನೆ. ಅದಕ್ಕೆ ಹಲವು ಕಾರಣವಿದೆ. ಮುಂಜಾನೆ ಏಳುವುದು ಮುಖ್ಯವಲ್ಲ. ಎದ್ದ ನಂತರದ ಜಾಗೃತ ಸ್ಥಿತಿ ಅದು ಹೇಗಿರುತ್ತದೆ ಎಂಬುದು ಮುಖ್ಯ.

       ನಾವು ಎಚ್ಚರದಿಂದ ಇರುವಾಗ ಇನ್ನಷ್ಟು ಎಚ್ಚರಿಕೆಯನ್ನು ಪಾಲಿಸಬೇಕು. ಮುಂಜಾನೆ ಏಳುವಾಗ ಮೊದಲು ಉಳಿದವರು ನಿದ್ರಿಸುತ್ತಿದ್ದಾರೆ ಎಂಬ ಪ್ರಜ್ಞೆ ಜಾಗೃತವಾಗಿರಬೇಕು. ನಮ್ಮಿಂದ ಅವರಿಗೆ ನಿದ್ರಾಭಂಗವಾಗದಂತೆ ಆದಷ್ಟು ನಿಶಬ್ದ ಪಾಲಿಸಬೇಕು. ಈ ನಿಶಬ್ದತೆ ಮುಂಜಾನೆಯ ಶಾಂತ ಮೌನವನ್ನು ಅನುಭವಿಸುವುದಕ್ಕೆ ಪ್ರಚೋದನೆಯಾಗುತ್ತದೆ. ಈ ಮೌನಕ್ಕೆ ನಮ್ಮ ಉಸಿರಿನಿಂದಲೂ ದೇಣಿಗೆ ಸಲ್ಲಿಸಬೇಕು. ಅಂದರೆ ಉಸಿರನ್ನೂ ನಿಶ್ಯಬ್ದವಾಗಿ ಬಿಡಬೇಕು. ಪರಿಸರದಲ್ಲಿ ಸಹಜವಾಗಿ ಆಗುವ ಶಬ್ದಗಳು, ಹಕ್ಕಿ ಕೂಗುವುದಾಗಲಿ, ನಾಯಿ ಬೊಗಳುವುದಾಗಲೀ ಶಾಂತ ಪರಿಸರಕ್ಕೆ ಭಂಗವನ್ನು ತರುವುದಿಲ್ಲ. ಬದಲಿಗೆ ಮನುಷ್ಯ ನಿರ್ಮಿತ ಶಬ್ದಗಳು ನೀರವ ಮೌನವನ್ನು ಕದಡಿಬಿಡುತ್ತವೆ. ನಾವು ಹೆಜ್ಜೆ ಇಡುವಾಗ, ವಸ್ತುಗಳನ್ನು  ಎತ್ತಿಡುವಾಗ ಕದವನ್ನು ಮುಚ್ಚಿದಾಗ ಎಷ್ಟು ಸಾಧ್ಯವೋ ಅಷ್ಟು ನಿಶ್ಯಬ್ದತೆ ಪಾಲಿಸಬೇಕು. ಮುಂಜಾನೆಯ ನಮ್ಮ ವರ್ತನೆ ನಮ್ಮ ಮನಸ್ಥಿತಿಯನ್ನು ಹೇಳುತ್ತದೆ. ನಮ್ಮ ಮನಸ್ಸಿನಲ್ಲಿರುವ ಉದ್ವಿಗ್ನತೆ ಸೂಕ್ಷ್ಮವಾಗಿ ನಮ್ಮ ವರ್ತನೆಯನ್ನು ತೋರಿಸುತ್ತದೆ. ಆಗ ಸುತ್ತಲಿನ ಮೌನವನ್ನು ಅನುಭವಿಸುವ ಮನಸ್ಥಿತಿ ಇಲ್ಲವಾಗಿ ಮನಸ್ಸು ಮತ್ತಷ್ಟು ಉದ್ವಿಗ್ನವಾಗುತ್ತದೆ. 

ನಿದ್ದೆಯಲ್ಲಿರುವವರನ್ನು ಧ್ಯಾನದಲ್ಲಿ ನಿರತರಾದವರನ್ನು ಎಚ್ಚರಿಸಬಾರದು, ಅಥವಾ ಅವರ ಆ ಸ್ಥಿತಿಗೆ ಭಂಗವನ್ನು ತರಬಾರದು. ಇದನ್ನು ಮಹಾ ಪಾಪ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಚಿತ್ರವೆಂದರೆ ನಾವು ನಿದ್ರಿಸುವಾಗ ಉಳಿದವರು ಮೌನವನ್ನು ಪಾಲಿಸಬೇಕು ಎಂದು ತಿಳಿದಿರುತ್ತೇವೆ. ಪರರಿಗೆ ಹಾನಿಯನ್ನು ಎಸಗುವುದು, ದ್ರವ್ಯಾಹಾನಿಯಾಗಿರಬಹುದು, ಮಾನಸಿಕ ಕ್ಷೋಭೆಯಾಗಿರಬಹುದು ಅದು ಶುದ್ದ ಸಂಸ್ಕಾರಕ್ಕೆ ವಿರುದ್ದವಾಗಿರುತ್ತದೆ. ಪರರಿಗೆ ಹಾನಿಯಾದರೂ ಅದು ಪರೋಕ್ಷವಾಗಿ ನಮ್ಮ ಮನಸ್ಥಿತಿಗೂ ಪ್ರಭಾವ ಬೀರುತ್ತದೆ. ಸಂಸ್ಕಾರವೆಂದರೆ ಮನುಷ್ಯನ ಬದುಕಿನ ರೀತಿ. 

ವಿದ್ಯೆ ಸಂಸ್ಕಾರವನ್ನು ಕೊಡುತ್ತದೆ. ಸಂಸ್ಕಾರವನ್ನು ಕೊಡದ ವಿದ್ಯೆ,  ವಿದ್ಯೆಯೇ ಅಲ್ಲ. ಸಂಸ್ಕಾರವೆಂದರೆ ಅದರ ಮೊದಲ ಸಾಲು, ಪರಹಿತ ಅಥವಾ ಪರರಿಗೆ ತೊಂದರೆಯನ್ನು ಮಾಡದೇ ಇರುವುದು. ಪರಪೀಡೆ ಇರುವ ಯಾವುದೇ ಪ್ರವೃತ್ತಿಯಾದರೂ ಅದು ಶುದ್ದ ಸಂಸ್ಕಾರವಲ್ಲ. ಅಲ್ಲಿ ವಿದ್ಯೆಗೆ ಸ್ಥಾನವಿರುವುದಿಲ್ಲ. ವಿದ್ಯೆ ಅಂದರೆ ಅದು ಬದುಕಿಗೆ ಕೊಡುವ ಸೂಚನೆ. ಬದುಕು ಹೇಗಿರಬೇಕು ಎಂಬುದನ್ನು ವಿದ್ಯೆ ತೋರಿಸಿಕೊಡುತ್ತದೆ. ಇದಿಲ್ಲದೆ ವಿದ್ಯೆಗೆ ಸ್ಥಾನವೇ ಇರುವುದಿಲ್ಲ.  ಪರಹಿತವನ್ನು ಚಿಂತಿಸುವವನಿಗೆ ಮಾತ್ರ ಸ್ವಹಿತವನ್ನು ಚಿಂತಿಸುವ ಅವಕಾಶವಿರುತ್ತದೆ. ಸಂಸ್ಕಾರ ಶೂನ್ಯನಿಗೆ ವಿದ್ಯೆಯ ಅವಶ್ಯಕತೆ ಇರುವುದಿಲ್ಲ. ಅಥವಾ ಆತ ವಿದ್ಯಾವಂತನಾಗಿರುವುದಿಲ್ಲ. ಶುದ್ದ ಸಂಸ್ಕಾರ ಉತ್ತಮ ಮನಸ್ಥಿತಿಯನ್ನು ನಿರ್ಮಿಸುತ್ತದೆ