ಮನೆಯೋದರಲ್ಲಿ ಗಣಹೋಮಮುಗಿಸಿ ಅಂದು ನಾನು ನನ್ನ ಅಜ್ಜನ ಜತೆ ಚೇವಾರಿನ ಗುಡ್ಡಡ ಮೇಲೆ ನಡೆದುಕೊಂಡು ಬರುತ್ತಿದ್ದೆವು. ಅಲ್ಲಿ ಸಿಕ್ಕಿದ ಅಕ್ಕಿ ತೆಂಗಿನ ಕಾಯಿ ಚೀಲ ನನ್ನ ಹೆಗಲಲ್ಲಿತ್ತು. ಆಗ ನನ್ನ ಬಾಲ್ಯದ ಹತ್ತರ ಹರಯ. ಅಜ್ಜನ ಬಳಿ ವೇದ ಮಂತ್ರ ಕಲಿಯುತ್ತಿದ್ದೆ. ಹಾಗೇ ನಡೆದುಕೊಂಡು ಬರುತ್ತಿದ್ದಾಗ ಒಬ್ಬಾತ ಅಜ್ಜನನ್ನು ಕಂಡು ಓಡೋಡಿ ಬಂದ. ಆತ ಬರುತ್ತಿದ್ದವನನ್ನು ನೋಡಿ ಅಜ್ಜ ಗೊಣಗಿಕೊಂಡರು, "ಇವನಿಗೆ ನನ್ನನ್ನು ಕಾಣುವಾಗ ಸತ್ಯನಾರಾಯಣ ಪೂಜೆ ನೆನಪಾಗುತ್ತದೆ." ಈ ಮೊದಲು ಅಜ್ಜನನ್ನು ಹಲವು ಸಲ ಅಲ್ಲಿ ಇಲ್ಲಿ ನೋಡಿದ್ದ. ಆಗೆಲ್ಲ ಸತ್ಯನಾರಾಯಣ ಪೂಜೆಯ ಬಗ್ಗೆ ಹೇಳುತ್ತಿದ್ದ. ಆತ ತೋಟ ಗದ್ದೆಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದವನು. ಅಜ್ಜನ ಬಳಿಗೆ ಬಂದವನೇ, " ಅಣ್ಣೆರೆ" ಅಂತ ನಮಸ್ಕರಿಸಿದ.
ಹಲವು ಸಲ ಅಜ್ಜನನ್ನು ನೋಡಿದ್ದ. ಆತನಿಗೆ ಮನೆಯಲ್ಲಿ ಒಂದು ಸತ್ಯನಾರಾಯಣ ಪೂಜೆ ಮಾಡಬೇಕಿತ್ತು. ಅದಕ್ಕಾಗಿ ಈಗ ಪುನಃ ಅಜ್ಜನನ್ನು ನೋಡುತ್ತಿದ್ದಂತೆ ಹತ್ತಿರ ಬಂದು ಹೇಳಿದ್ದು ಇಷ್ಟೆ. ಆತ ಹಲವರಲ್ಲಿ ಸತ್ಯನಾರಾಯಣ ಪೂಜೆ ಮಾಡುವ ಬಗ್ಗೆ ಕೇಳಿಕೊಂಡಿದ್ದ. ಆದರೆ ಎಲ್ಲರೂ ಅಷ್ಟು ಖರ್ಚಾಗ್ತದೆ, ಹಲವಾರು ಪೂಜೆ ಸಾಮಾಗ್ರಿಗಳನ್ನು ಹೇಳಿ ಜಾರಿಕೊಳ್ಳುತ್ತಿದ್ದರು. ಆತ ಒಬ್ಬ ಕೂಲಿಯಾಳು, ಆತನ ಮನೆಯ ಪರಿಸ್ಥಿತಿ ನೋಡಿದರೆ ಆತ ಆ ಖರ್ಚುಗಳನ್ನು ನಿಭಾಯಿಸುವುದಕ್ಕೆ ಸಮರ್ಥನಲ್ಲ. ಅಜ್ಜನಲ್ಲಿ ಆತ ಅದನ್ನೇ ಹೇಳಿದ್ದ. ತಾನು ಬಡವ. ತನಗೆ ಪೂಜೆ ಮಾಡಲೇಬೇಕು. ಆತನ ಮನೆಯಲ್ಲಿ ಏನಾದರೂ ಒಂದು ದೈವ ಕಾರ್ಯ ಮಾಡಬೇಕು. ಅದೇಕೋ ತನ್ನ ಕಷ್ಟಗಳಿಗೆ ಆತ ಕಂಡುಕೊಂಡ ದಾರಿಯದು. ಹಲವು ಕಡೆ ಸತ್ಯನಾರಾಯಣ ಪೂಜೆ ಮಾಡುವಾಗ ಅದರ ಕಥೆ ಕೇಳಿ ಅದು ಆತನಿಗೆ ಪೂಜೆ ಮಾಡಬೇಕೆನ್ನುವ ಬಯಕೆಯನ್ನು ಸೃಷ್ಟಿ ಮಾಡಿತ್ತು. ಹೇಗಾದರೂ ಪೂಜೆ ಮಾಡಿದರೆ ತನ್ನ ಬಡತನದ ಹಲವು ಸಮಸ್ಯೆಗಳು ಪರಿಹಾರವಾಗಬಹುದು ಎಂಬುದು ಆತನ ದೃಢವಾದ ನಂಬಿಕೆ. ಆದರೆ ಹೇಗೆ? ಪೂಜೆಯ ಸಾಮಾಗ್ರಿ, ಭಟ್ಟರಿಗೆ ಕೊಡಬೇಕಾದ ಸಂಭಾವನೆ ಹೀಗೆ ಬಹಳ ದೊಡ್ಡ ಮೊತ್ತದ ಹಣ ಆತನ ಬಳಿ ಇರಲಿಲ್ಲ. ಹಲವು ಸಲ ಬೇಡಿಕೊಂಡ ನಂತರ,
ಅಜ್ಜ ಕೆಲವು ತೀರಾ ಅಗತ್ಯದ ವಸ್ತುಗಳ ಪಟ್ಟಿ ಆತನಿಗೆ ಕೊಟ್ಟು ಹೇಳಿದರು "ನಾಳೆ ರಾತ್ರಿಗೆ ನಿನ್ನ ಮನೆಗೆ ಬರುತ್ತೇನೆ. ಆ ಸಾಮಾನು ಎಲ್ಲ ತಂದಿಡು. ನಾಳೆ ಪೂಜೆ ಮಾಡುವ. ಬೆಳಗಿನಿಂದ ಉಪವಾಸ ಇರಬೇಕು. ಮನೆಯವರು ಎಲ್ಲ ಸ್ನಾನ ಎಲ್ಲ ಮಾಡಿ ಕುಳಿತುಕೊಳ್ಳಿ ಬರುತ್ತೇನೆ" ಆತ ಸಂತೋಷದಿಂದ ತೆರಳಿದ.
ಅಜ್ಜನಿಗೆ ಆತ ಮಾಡುತ್ತಾನೆ ಎಂಬ ವಿಶ್ವಾಸ ಆದರೂ ಇರಲಿಲ್ಲ. ಕಂಡದ್ದಕ್ಕೆ ಒಂದು ಪರಿಹಾರ ಅಂತ ಹೇಳಿದ್ದರು. ಆದರೂ ಮರುದಿನ ಸಾಯಂಕಾಲವಾಗುತ್ತಿದ್ದಂತೆ ಅಜ್ಜ ನನ್ನನ್ನು ಕರೆದುಕೊಂಡು ಸ್ವಲ್ಪ ಬೇಗನೆ ಹೊರಟರು. ಆತನ ಮನೆಗೆ ಅಂಗಳಕ್ಕೆ ಕಾಲಿಡುತ್ತಿದ್ದಂತೆ ಅಜ್ಜನಿಗೆ ಆಶ್ಚರ್ಯವಾಯಿತು. ಅಂಗಳವೆಲ್ಲ ಸೆಗಣಿ ಸಾರಿಸಿ ಸ್ವಚ್ಛ ಮಾಡಿ ಇಡಲಾಗಿತ್ತು. ಮನೆ ಮಂದಿಯೆಲ್ಲ ಸ್ನಾನ ಮಾಡಿದ್ದರು. ಅಕ್ಕ ಪಕ್ಕದ ಕೆಲವು ಮನೆಯವರು ಸೇರಿದ್ದರು. ಅಜ್ಜನನ್ನು ಕಾಣುತ್ತಿದ್ದಂತೆ ಸಂತೋಷದಿಂದ ಗೌರವದಿಂದ ಹತ್ತಿರ ಬಂದು ನಿಂತ. ತಂದಿಟ್ಟ ಎಲ್ಲ ಸಾಮಾನು ತೋರಿಸಿದ. ಅಜ್ಜನಿಗೂ ಸಂತೋಷವಾಯಿತು. ಮನೆಯ ಜಗಲಿಯ ಒಂದು ತುದಿಯಲ್ಲಿ ಪೂಜೆಗೆ ಸಿದ್ಧತೆ ಮಾಡಬೇಕಿತ್ತು. ನನ್ನಲ್ಲಿ ಕೆಲವು ಸಾಮಾನುಗಳನ್ನು ಎತ್ತಿಡುವಂತೆ ಹೇಳಿದರು. ಹತ್ತಿರದ ಬಾವಿಯಿಂದ ನೀರು ತರುವುದಕ್ಕೆ ಹೇಳಿದರು. ಜಗಲಿಯ ತುದಿಯಲ್ಲಿ ಪೂಜೆಗೆ ಮಂಡಲ ಬಿಡಿಸಿ ಎಲ್ಲವನ್ನು ಅಣಿಗೊಳಿಸುತ್ತಿದ್ದರು. ನಾನು ನನಗೆ ತಿಳಿದಂತೆ ಅಜ್ಜನಿಗೆ ಸಹಾಯ ಮಾಡುತ್ತಿದ್ದೆ. ಅಲ್ಲೇ ಒಂದು ಕಡೆ ಮೂರು ಕಲ್ಲು ಇಟ್ಟು ತತ್ಕಾಲದ ಒಲೆ ಹಾಕುವಂತೆ ಮನೆಯವರಿಗೆ ಹೇಳಿದರು. ಅಲ್ಲಿ ಸತ್ಯನಾರಾಯಣ ಪೂಜೆಯ ಸಪಾದ ಭಕ್ಷ್ಯ ಮಾಡಬೇಕಿತ್ತು. ಗೋಧಿ ಹಿಟ್ಟು ತುಪ್ಪ ಸಕ್ಕರೆ ಹಾಲು ಬಾಳೆ ಹಣ್ಣು ಎಲ್ಲ ಸಿದ್ದಗೊಳಿಸುತ್ತಿದ್ದಂತೆ ಅಜ್ಜ ಬೆಂಕಿ ಉರಿಸಿ ಭಕ್ಷ್ಯವನ್ನು ತಯಾರಿಸುತ್ತಿದ್ದಂತೆ ಸುತ್ತಲೂ ಘಂ ಎಂಬ ಪರಿಮಳ...ನಿಜಕ್ಕೂ ಶುಭಕಾರ್ಯದ ವಾತಾವರಣ ನಿರ್ಮಾಣವಾಯಿತು.
ಅಜ್ಜನ ವೃತ್ತಿ ಪರತೆಯಲ್ಲಿ ಎರಡು ಮಾತಿಲ್ಲ. ಪುಟ್ಟ ಬಾಲಕ ನನ್ನ ಸಹಾಯ ಬಿಟ್ಟರೆ ಅವರಿಗೆ ಬೇರೆ ಪರಿಚಾರಕರು ಬೇಕಿರಲಿಲ್ಲ. ಮಾತ್ರವಲ್ಲದೆ ಯಾವ ಪೂಜಾ ವಿಧಿಗಳನ್ನೆ ಮಾಡಲಿ ಅವರು ವೇದ ಮಂತ್ರಗಳನ್ನು ಪುಸ್ತಕ ನೋಡಿ ಹೇಳಿದ್ದನ್ನು ನಾನು ನೋಡಲಿಲ್ಲ. ಎಲ್ಲವೂ ನಾಲಿಗೆ ತುದಿಯಲ್ಲಿ. ಸರಸ್ವತಿ ನಾಲಿಗೆಯ ಮೇಲೆ ಕುಣಿದಂತೆ. ಅದ್ಭುತ ಸ್ಮರಣ ಶಕ್ತಿ. ಸಂಪೂರ್ಣ ಋಗ್ವೇದ ಇವರ ನಾಲಿಗೆಯ ತುದಿಯಲ್ಲಿತ್ತು.
ಸುಮಾರು ರಾತ್ರಿಯ ತನಕವು ಪೂಜಾವಿಧಿ ನಡೆಯಿತು. ಅಜ್ಜ ಸತ್ಯನಾರಾಯಣ ಕಥೆ ಹೇಳುತ್ತಿದ್ದಂತೆ ಮನೆ ಮಂದಿಯ ಜತೆಗೆ ಬಂದವರೆಲ್ಲ ತಮ್ಮ ಕೆಲಸವನ್ನು ಬಿಟ್ಟು ಕಥೆ ಕೇಳುವುದಕ್ಕೆ ಶ್ರಧ್ದೆಯಿಂದ ಕುಳಿತರು. ಕೆಲವು ಕಡೆ ಈ ಶ್ರದ್ದೆ ಕಂಡುಬರುವುದಿಲ್ಲ. ಅರ್ಚಕರು ಬಿಟ್ಟರೆ ಉಳಿದವರೆಲ್ಲ ತಮ್ಮ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಅದೊಂದು ಯಾಂತ್ರಿಕ ವಿಧಿಯಾಗಿರುತ್ತದೆ. ಇಲ್ಲಿ ಮನೆ ಮಂದಿಯ ಶ್ರದ್ದೆ ನೋಡಿ ಅಜ್ಜನಿಗೂ ಉತ್ಸಾಹ.
ತಡರಾತ್ರಿ ಮಂಗಳಾರತಿ ಮುಗಿಸಿ ಪೂಜೆ ಸಮಾಪ್ತಿಯಾಯಿತು. ಎಲ್ಲರಿಗೂ ಪ್ರಸಾದ ವಿತರಣೆಯಾಗಿ ಅಜ್ಜ ಪೂಜೆ ಮುಗಿಸಿ ಎದ್ದರು. ಆತ ಭಕ್ತಿಯಿಂದ ತನ್ನಲ್ಲಿದ್ದ ಒಂದಷ್ಟು ಚಿಲ್ಲರೆ ದುಡ್ಡನ್ನು ತಟ್ಟೆಯಲ್ಲಿ ಎಲೆ ಅಡಿಕೆಯ ಜತೆಗೆ ಇಟ್ಟು ಅಜ್ಜನ ಕಾಲಿಗೆರಗಿದ. ಅಜ್ಜ ಆ ತಟ್ಟೆಯಿಂದ ಕೇವಲ ಒಂದು ನಾಣ್ಯ ತೆಗೆದಿರಿಸಿ ಉಳಿದದ್ದನ್ನು ಎಲ್ಲವನ್ನು ಅಲ್ಲೆ ಬಿಟ್ಟು ಆತನಿಗೆ ಆಶೀರ್ವಾದ ಮಾಡಿ ನನ್ನನ್ನು ಕರೆದುಕೊಂಡು ಹೊರಟರು. ಕೊಟ್ಟ ದಕ್ಷಿಣೆಯನ್ನು ಬಿಟ್ಟು ಬಂದ ಅಜ್ಜನ ಆದರ್ಶ ಅದೊಂದು ಮಾದರೀ ವ್ಯಕ್ತಿತ್ವ. ಆಗ ಅದರ ಗಂಭೀರತೆ ಅರಿವಾಗದಿದ್ದರೂ ಅಜ್ಜ ಹಾಗೇಕೆ ಮಾಡಿದರು ಎಂದು ಯೋಚಿಸಿದರೆ ಅದರ ಮಹತ್ವ ಈಗ ಅರಿವಾಗುತ್ತದೆ. ವೈದ್ಯನಾದವನ ವೃತ್ತಿ ಪರತೆ ಇರುವುದು ಆತನ ವೈದ್ಯೋ ನಾರಾಯಣೋ ಹರಿಃ ಎಂಬುದರ ಅರ್ಥ ತಿಳಿದು ನಡೆದುಕೊಳ್ಳುವಾಗ. ಹಾಗೇಯೆ ಪುರೋಹಿತನಾಗುವುದು ಅನುಷ್ಠಾನದಲ್ಲಿ. ಇಂದಿನ ವ್ಯಾವಹಾರಿಕ ಪ್ರಪಂಚದಲ್ಲಿ ಇದನ್ನು ಕಾಣುವುದು ಅಪರೂಪ. ಅಜ್ಜ ಆಡಂಬರದ ಪುರೋಹಿತರಾಗಿರಲಿಲ್ಲ. ಸದಾ ಸರಳ ಉಡುಗೆಯಲ್ಲಿರುತ್ತಿದ್ದರು. ಒಂದರ್ಥದಲ್ಲಿ ಬೈರಾಗಿಯಂತೆ. ಇಂದು ಪುರೋಹಿತರೆಂದರೆ ಮಂತ್ರಕ್ಕಿಂತ ಉಗುಳೇ ಹೆಚ್ಚು ಎಂಬಂತೆ ಪಟ್ಪಿಯಂಚಿನ ಪಂಚೆ ಶಲ್ಯ ವೇಷತೊಟ್ಟಂತೆ ಆಡಂಬರದಿಂದ ಕೂಡಿರುತ್ತದೆ. ಈ ನಡುವೆ ಕೆಲವರು ಸರಳವಾಗಿ ಅದರ ಮಹತ್ವ ತಿಳಿದುಕೊಂಡು ನಡೆಯುವವರಿದ್ದರೂ ಅದು ಗೌರವವನ್ನು ಮಹತ್ವವನ್ನೂ ಗಳಿಸುವುದಿಲ್ಲ.
ಬದುಕು ಆದರ್ಶವಾಗಿರಬೇಕು ಹೊರತು ಪ್ರದರ್ಶನದ ವಸ್ತುವಾಗಬಾರದು. ಹಾಗಾದರೆ ಅದು ಸ್ವಾರ್ಥವಾಗುತ್ತದೆ. ಇಂದು ಪ್ರದರ್ಶನದಿಂದ ಮುಖ್ಯವಾಗಿ ಆಚರಣೆ ಶೂನ್ಯ ವಾಗುತ್ತದೆ. ಸತ್ಸಂಕಲ್ಪ ಇಲ್ಲ ವಾಗುತದೆ.
ಪುರು ಅಂದರೆ ದೇಹ ಅಂತಲೂ ಅರ್ಥವಿದೆ, ದೇಹಕ್ಕೆ ಹಿತ ಸದ್ಗತಿಯನ್ನು ಕೊಡುವವನೇ ಪುರೋಹಿತ. ಮೂಲ ತತ್ವ ಆಶಯಗಳು ಮರೆಯಾಗುತ್ತವೆ.ಪರಿಶುದ್ಧವಾಗಬೇಕಾದ ಹಾದಿಯೇ ಕಲ್ಮಶವಾದರೆ ಉದ್ದೇಶ ಶುದ್ಧವಾಗಲು ಸಾಧ್ಯವಿಲ್ಲ. ದೇಹದ ಹಿತ ಸಹಜವಾಗಿ ಅದು ನಮ್ಮ ಮನೋಭಾವಕ್ಕೆ ಹೊಂದಿಕೊಂಡಿರುತ್ತದೆ. ಆದರೆ ದೇಹದ ಹಿತ ಏನು ಎಂಬುದನ್ನು ತೋರಿಸಿಕೊಟ್ಟು ಅದನ್ನು ವಿಧಿಸುವವನೇ ಪುರೋಹಿತ.
No comments:
Post a Comment