ನಮ್ಮ ಹಿರಿಯರು ಒಂದು ಕಥೆ ಹೇಳುತ್ತಿದ್ದರು. ಒಂದಾನೊಂದು ಊರಿನಲ್ಲಿ ಒಬ್ಬ ಸೌದೆಗಾಗಿ ಕಾಡಿಗೆ ಹೋದನಂತೆ. ಹಾಗೆ ಸೌದೆಯ ಮರ ಕಡಿಯಬೇಕಾದರೆ ಅದರಲ್ಲಿ ಒಬ್ಬ ರಾಕ್ಷಸ ಇದ್ದನು. ಆತ ಇವನನ್ನು ತಿನ್ನುವುದಕ್ಕೆ ಬಂದನು. ಈತ ಹೆದರಿ ಓಡುವುದಕ್ಕೆ ತೊಡಗಿದ. ರಕ್ಕಸ ಹಿಂಬಾಲಿಸಿ ಅಟ್ಟಿಸಿಕೊಂಡು ಬಂದ. ಆ ರಕ್ಕಸನಿಗೊಂದು ಏಕ ಮಾತ್ರ ಸದ್ಗುಣವಿತ್ತು. ಎಲ್ಲಿ ಗಂಟೆಯ ನಾದ ಕಿವಿಗೆ ಕೇಳಿಸುತ್ತದೋ ಅಲ್ಲಿ ಭಗವಂತನ ನೆನಪಾಗಿ ಸುಮ್ಮನೇ ನಿಂತು ಬಿಡುವುದು. ಹಾಗೆ ಅಟ್ಟಿಸಿ ಕೊಂಡು ಬರುವಾಗ ಒಂದು ಗುಡಿಯ ಬಳಿಯಲ್ಲೇ ಹಾದು ಹೋಗುವಾಗ ಮನುಷ್ಯನ ಕೈ ಅಲ್ಲಿ ನೇತು ಹಾಕಿದ್ದ ಗಂಟೆಗೆ ತಗಲುತ್ತದೆ. ಗಂಟೆಯ ಠಣ್ ಸದ್ದಿಗೆ ರಕ್ಕಸ ಸ್ತಬ್ಧನಾಗಿ ನಿಂತು ಬಿಡುತ್ತಾನೆ. ಈ ಅವಕಾಶ ಉಪಯೋಗಿಸಿ ಮನುಷ್ಯ ತಪ್ಪಿಸಿ ಓಡುತ್ತಾನೆ. ಗಂಟೆಯ ಸದ್ದು ನಿಂತೊಡನೆ ರಕ್ಕಸ ಪುನಃ ಹಿಂಬಾಲಿಸುತ್ತಾನೆ. ಮನುಷ್ಯ ಒಂದು ಉಪಾಯ ಮಾಡುತ್ತಾನೆ. ಗುಡಿಯ ಗಂಟೆ ಕೈಯಲ್ಲಿ ತೆಗೆದುಕೊಂಡು ರಕ್ಕಸ ಹತ್ತಿರ ಬರುತ್ತಿದ್ದಂತೆ ಗಂಟೆ ಬಾರಿಸುತ್ತಿದ್ದ. ರಕ್ಕಸ ಸುಮ್ಮನೇ ನಿಂತು ಬಿಡುತ್ತಿದ್ದ. ಹಾಗೆ ಮಾಡುತ್ತಾ ಮನುಷ್ಯ ಊರಿನೊಳಗೆ ಬಂದು ಮನೆಯನ್ನು ಸೇರುತ್ತಾನೆ. ರಕ್ಕಸನಿಂದ ಮನುಷ್ಯ ಹೀಗೆ ಪಾರಾಗಿಬಿಡುತ್ತಾನೆ. ರಕ್ಕಸನಲ್ಲಿ ಎಲ್ಲವೂ ಕೆಟ್ಟಗುಣಗಳಿತ್ತು. ಆದರೆ ಒಂದು, ಆತನಲ್ಲಿದ್ದ ದೈವ ಭಯ ಮನುಷ್ಯನಿಗೆ ರಕ್ಷಣೆಯನ್ನು ಒದಗಿಸಿತ್ತು.
ಇದೇ ಬಗೆಯ ಭೀಮ ಪುರುಷಾಮೃಗದ ಕಥೆ ಮಹಾಭಾರತಲ್ಲಿ ರಾಜಸೂಯ ಸಂದರ್ಭದಲ್ಲಿ ಬರುತ್ತದೆ. ನಮ್ಮೂರಲ್ಲಿ ಇದನ್ನೇ ಯಕ್ಷಗಾನದಲ್ಲಿ ಆಡುತ್ತಾರೆ. ಭೀಮ ಪುರುಷಾಮೃಗವನ್ನು ಕರೆತರುವುದಕ್ಕೆ ಹೋಗುತ್ತಾನೆ. ದಾರಿಯಲ್ಲಿಆತನಿಗೆ ಹನುಮಂತ ಸಿಗುತ್ತಾನೆ.ಆತ ಹನುಮಂತ ಎಂದು ತಿಳಿದಿರುವುದಿಲ್ಲ. ಆತನ ಬಾಲ ಈತನ ಹಾದಿಗೆ ಅಡ್ಡವಾಗಿರುತ್ತದೆ. ಅದನ್ನು ದಾಟುವುದು ಸರಿಯಲ್ಲ ಎಂದು ತಿಳಿದು ಬಾಲವನ್ನು ಎತ್ತಿಡುವಂತೆ ಹನುಮನಿಗೆ ಹೇಳುತ್ತಾನೆ. ಕೃಷಾಕಾಯನಾಗಿ ವೃದ್ದಾಪ್ಯದಲ್ಲಿದ್ದ ಹನುಮ ನನ್ನಿಂದ ಬಾಲ ಎತ್ತುವುದಕ್ಕೂ ತ್ರಾಣವಿಲ್ಲ ನೀನೇ ಎತ್ತಿಟ್ಟು ಆಕಡೆಗೆ ಹೋಗು ಎನ್ನುತ್ತಾನೆ. ಭೀಮನಿಗೆ ಬಾಲ ಎತ್ತುವುದಕ್ಕಾಗದೆ ಬಸವಳಿಯುತ್ತಾನೆ. ನಂತರ ಭೀಮ ವಾಯು ಪುತ್ರ ಎಂದು ತಿಳಿದ ಮೇಲೆ ಹನುಮ ಆತನನ್ನು ಸಹೋದರ ಭಾವದಿಂದ ಕಂಡು ತನ್ನ ಬಾಲದ ಮೂರು ರೂಮಗಳನ್ನು ಕಿತ್ತು ಕೊಡುತ್ತಾನೆ. ಶಿವ ಸಂಭೂತನಾದ ಹನುಮನ ಬಾಲದ ರೋಮ ಎಲ್ಲೆಲ್ಲಿ ಹಾಕುವುದೋ ಅಲ್ಲಿ ಶಿವಲಿಂಗ ಉದ್ಭವವಾಗುತ್ತದೆ ಎಂದು ಹೇಳುತ್ತಾನೆ. ಪುರುಷಾಮೃಗದ ಬಳಿಗೆ ಹೋದಾಗ ಪುರುಷಾಮೃಗ ಭೀಮನನ್ನು ಅಟ್ಟಿಸಿಕೊಂಡು ಬರುತ್ತದೆ. ಭೀಮ ಓಡುತ್ತಾ ಒಂದೊಂದೇ ಕಡೆಯಲ್ಲಿ ಹನುಮನ ಬಾಲದ ರೋಮವನ್ನು ಹಾಕುತ್ತಾನೆ. ಅಲ್ಲಿ ಲಿಂಗ ಉದ್ಭವವಾಗುತ್ತದೆ. ಆಗ ಪುರುಷಾ ಮೃಗ ಆಲಿಂಗಕ್ಕೆ ಪೂಜೆ ಮಾಡಿ ಮತ್ತೆ ಮುಂದುವರೆಯಬೇಕು. ಆಗ ಭೀಮನಿಗೆ ಮತ್ತಷ್ಟು ಮುಂದೆ ಓಡುವುದಕ್ಕೆ ಅವಕಾಶ ಸಿಗುತ್ತದೆ. ಹೀಗೆ ಪ್ರತಿಯೊಂದು ಕಡೆಯಲ್ಲು ಭೀಮ ಪುರುಷಾಮೃಗದ ಕೈಗೆ ಸಿಗುತ್ತದೆ ಎನ್ನುವಾಗ ಈ ರೋಮವನ್ನು ಹಾಕಿಕೊಂಡು ಪುರುಷಾಮೃಗವನ್ನು ಕರೆದುಕೊಂಡು ಬರುತ್ತಾನೆ.
ಈ ಕಥೆಯ ಸಾರಾಂಶ ಇಷ್ಟೇ...ಎಲ್ಲಿ ದೈವ ಭಕ್ತಿ ಇರುತ್ತದೋ ಅಲ್ಲಿ ನಿರ್ಭಯವಾಗಿ ನಿರಾತಂಕವಾಗಿ ಇರಬಹುದು. ಯಾವುದೇ ಧರ್ಮ ಇರಬಹುದು ಅಲ್ಲಿ ದೈವ ಭಕ್ತಿ ಇದ್ದರೆ ಆ ಧರ್ಮವನ್ನು ನಿಂದಿಸುವುದು ಸರಿಯಲ್ಲ. ಧರ್ಮ ನಿಂದನೆ ಎಂದರೆ ಅದು ದೈವನಿಂದನೆಯಾಗುತ್ತದೆ. ಮನುಷ್ಯ ಮೇಲೆ ನೋಡಿ ಉಗುಳಿದಂತೆ ಅದು ಪರೋಕ್ಷವಾಗಿ ನಮ್ಮ ಮೂಲಕ್ಕೆ ಬಂದು ಬಿಡುತ್ತದೆ. ನಾವು ಭಯ ಆತಂಕ ಪಡಬೇಕಾಗಿರುವುದು ಯಾವುದೋ ಧರ್ಮಾಚರಣೆಗೆ ಅಲ್ಲ. ಆತ ಹಿಂದುವೊ ಮುಸ್ಲಿಂ ಕ್ರಿಶ್ಚನ್ ಅಥವಾ ಇನ್ನವುದೋ ಧರ್ಮವಾಗಿರಬಹುದು...ಅಲ್ಲಿ ಒಂದು ದೈವ ಭಕ್ತಿ ಇದ್ದೇ ಇರಬೇಕು. ನಾವು ಭಯ ಪಡಬೇಕಾಗಿರುವುದು...ಎಲ್ಲಿ ದೈವ ಭಯ ಇಲ್ಲವೋ ಎಲ್ಲಿ ಭಕ್ತಿ ಇಲ್ಲವೋ ಅಥವಾ ದೈವದ ಅಸ್ತಿತ್ವವನ್ನು ನಂಬದೇ ಇರುವಲ್ಲಿ ನಾವು ಭಯ ಪಡಬೇಕು. ದೈವ ಭಯ ಇದ್ದಲ್ಲಿ ಕೊನೇ ಪಕ್ಷ ಆ ದೈವ ಭಕ್ತಿಯಾದರೂ ನಮ್ಮನ್ನು ಕಾಪಾಡುತ್ತದೆ.
ಹಿರಣ್ಯ ಕಶಿಪು ಎಂಬ ದಾನವನಿದ್ದ. ಪ್ರಹ್ಲಾದನ ಅಪ್ಪ . ನಾನೇ ದೇವರುಎಂದು ಕೊಂಡು ಈತ ದೌರ್ಜನ್ಯದಿಂದ ಮೆರೆಯುತ್ತಿದ್ದ. ಪ್ರಹ್ಲಾದನಿಗೆ ಹರಿಯನ್ನು ನಂಬಬೇಡ ಅಂದರೆ ದೇವರನ್ನು ನಂಬ ಬೇಡ ಎಂದು ಹೇಳುತ್ತಿದ್ದ. ಇಂತಹ ಹಿರಣ್ಯ ಕಶಿಪು ಸಂತಾನಗಳಿಗೆ ನಾವು ಆತಂಕ ಪಡಬೇಕು. ಎಷ್ಟೋ ಧಾರ್ಮಿಕ ಕಾರ್ಯಕ್ರಮಗಳು ಆಗುತ್ತವೆ. ಉತ್ಸವಾಚರಣೆಗಳಲ್ಲಿ ಇಂದು ಸಭಾಕಾರ್ಯಕ್ರಮವೇ ಹೆಚ್ಚು ಪ್ರಧಾನವಾಗಿರುತ್ತವೆ. ಧರ್ಮ ಜಾಗೃತಿ ಈ ಕಾರ್ಯಕ್ರಮಗಳ ಉದ್ದೇಶ. ಅದರಲ್ಲೇನು ತಪ್ಪಿಲ್ಲ. ಆದರೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಮತ್ತೊಂದು ಧರ್ಮವನ್ನು ನಿಂದಿಸುವ ಮಟ್ಟಕ್ಕೆ ಹೋಗಬಾರದು. ನಮ್ಮ ಧರ್ಮದ ಬಗ್ಗೆ ಹೇಳಬಹುದು. ನಮ್ಮ ಧರ್ಮದ ಹಾದಿಯನ್ನು ತೋರಿಸಬಹುದು...ಆದರೆ ಮತ್ತೊಂದು ಹಾದಿಯನ್ನು ನಿಂದಿಸುವುದು ಸರಿಯಲ್ಲ. ಧರ್ಮ ಧರ್ಮದ ನಡುವೆ ಹೋಲಿಕೆ ಇಂದಿನ ಕ್ಷೋಭೆಗೆ ಬಹು ಮುಖ್ಯ ಕಾರಣ. ಏನಿಲ್ಲ ಎಂದಿದ್ದರೂ ಅಲ್ಲೊಂದು ದೈವನಂಬಿಕೆ ಇದೆ ಎಂದು ತಿಳಿಯಬೇಕು. ದೇವರು ಎಲ್ಲಿದ್ದರೂ ದೇವರೆ. ಅದು ರೂಪವಿದ್ದೋ ರೂಪವಿಲ್ಲದೆಯೋ ಅಸ್ತಿತ್ವದಲ್ಲಿ ಇದೆ ಎಂದು ತಿಳಿವಲ್ಲಿ ಧರ್ಮದ ಅಸ್ತಿತ್ವ ಇರುತ್ತದೆ. ನಾವು ಅಕ್ಕಿ ಅಂತ ಕರೆಯುವುದನ್ನು ಇನ್ನೊಬ್ಬರು ಏನೋ ಒಂದು ಕರೆದರೆ ಅದು ಅಕ್ಕಿಅಲ್ಲದೇ ಆಗುವುದಿಲ್ಲ. ಹಾಗಾಗಿಯೇ ಭಗವಂತನಿಗೆ ಸಹಸ್ರ ನಾಮಗಳಿರುತ್ತವೆ.
ಧಾರ್ಮಿಕ ಆಚರಣೆಗಳ ಸಭೆಗಳಲ್ಲಿ ಧಾರ್ಮಿಕ ಆಚರಣೆಯ ಅರಿವನ್ನು ಮೂಡಿಸಬೇಕು. ಹಿಂದೆ ನಮ್ಮೂರ ದೇವಸ್ಥಾನದಲ್ಲಿ ಸಹಸ್ರ ಚಂಡಿಕಾ ಯಾಗ ನಡೆಯಿತು. ಆ ಸಂದರ್ಭದಲ್ಲಿ ಕ್ರಮದಂತೆ ಧಾರ್ಮಿಕ ಸಭೆ ನಡೆಯಿತು. ಅಲ್ಲಿ ಆಶೀರ್ವಚನ ನೀಡಿದ ಪೂಜ್ಯ ಶ್ರೀ ಶೃಂಗೇರಿ ಜಗದ್ಗುರುಗಳು ಚಂಡಿಕಾ ಯಾಗದ ವಿಧಿ ವಿಧಾನಗಳನ್ನು ಅದರ ಮಹತ್ವವನ್ನು ದುರ್ಗಾ ಚಂಡಿಕೆ ಈ ಅವತಾರದ ಕಾರಣಗಳನ್ನು ಸಪ್ತಶತಿ ಪಾರಾಯಣದ ಮಹತ್ವವನ್ನು ಸವಿಸ್ತಾರವಾಗಿ ಹೇಳಿದರು. ಅವರು ಇದನ್ನು ಕೇಳಿದ ನಂತರ ಚಂಡಿಕಾಯಾಗದ ಪೂರ್ಣಾಹುತಿಯನ್ನು ಕಾಣುವಾಗ ಅದನ್ನು ಕಾಣುವ ದೃಷ್ಟಿಕೋನವೇ ಬದಲಾಗಿಬಿಟ್ಟಿತು. ಅವರು ಯಾವುದೇ ವ್ಯಕ್ತಿಯನ್ನು ದೂಷಿಸಲಿಲ್ಲ. ಯಾವುದೇ ಧರ್ಮವನ್ನು ನಿಂದಿಸಲಿಲ್ಲ. ನಿಂದಿಸುವುದು ಬಿಡಿ ವಿಮರ್ಶಿಸಲೂ ಇಲ್ಲ. ಜಗದ್ಗುರು ಅನ್ನಿಸುವುದೇ ಇಂತಹ ಗುಣಗಳಿಂದ. ಇದು ಧಾರ್ಮಿಕ ಸಭೆಯ ಮಹತ್ವ. ಆಸ್ತಿಕನಾಗುವುದು ಮುಖ್ಯವಲ್ಲ. ಆದರ ಅರ್ಥವನ್ನು ತಿಳಿಯುವುದು ಮುಖ್ಯ ನಮ್ಮ ಧರ್ಮದ ಶ್ರೇಷ್ಠತೆಯನ್ನು ಹೇಳಬೇಕಾದರೆ ನಮ್ಮ ಧರ್ಮವನ್ನು ಅದರ ತತ್ವಗಳನ್ನು ಅಧ್ಯಯನ ಮಾಡಿ ತಿಳಿದುಕೊಳ್ಳಬೇಕು. ಅಧ್ಯಯನ ಸಾಧ್ಯವಾಗದಿದ್ದರೆ ಇಂಥ ಧಾರ್ಮಿಕ ಪ್ರವಚನಗಳು ಪ್ರೇರಕವಾಗಿರಬೇಕು. ಅದಲ್ಲದೇ ಯಾವುದೋ ಪರ ಧರ್ಮದ ಬಗ್ಗೆ ಹೇಳಬೇಕಾದರೆ ನಾವು ಪರಧರ್ಮವನ್ನು ಅಧ್ಯಯನ ಮಾಡಬೇಕು. ಇಲ್ಲಿ ನಮ್ಮ ಧರ್ಮದ ಅಧ್ಯಯನವೇ ಸಾಧ್ಯವಾಗುವುದಿಲ್ಲ ಎಂದಾಗ ಮತ್ತೊಂದು ಧರ್ಮದ ಬಗ್ಗೆ ಗಮನ ಹರಿಸಿ ಅದನ್ನು ವಿಮರಿಸುವ ಅವಶ್ಯಕತೆಯಾದರೂ ಯಾಕೆ ಬೇಕು. ಇಂದಿನ ಹಲವು ಸಮಸ್ಯೆಗಳು ಹುಟ್ಟಿಕೊಳ್ಳುವುದೇ ಇಲ್ಲಿಂದ. ಧರ್ಮ ಧರ್ಮದ ನಡುವೆ ವ್ಯಕ್ತಿಯ ವ್ಯಕ್ತಿಯ ನಡುವೆ ತುಲನೆ ಮಾಡುವುದು ಇದು ಆರೋಗ್ಯಕರ ಚಿಂತನೆ ಎನಿಸುವುದಿಲ್ಲ. ಧರ್ಮದ ಅರಿವನ್ನುಮೂಡಿಸುವಲ್ಲಿ ಧಾರ್ಮಿಕ ಸಭೆಯ ಮಹತ್ವ ಬಹಳ ಇರುತ್ತದೆ. ದೇವರಿಲ್ಲ ಎನ್ನುವ ಚಿಂತನೆಯನ್ನು ದೂರವಿಟ್ಟು ದೇವರಿದ್ದಾನೆ ಎಂದು ನಂಬಿ ವಿಶ್ವಾಸದಲ್ಲಿ ನಡೆಯುವವನ್ನು ಗೌರವಿಸುವ. ಕೊನೇ ಪಕ್ಷ ಎಲ್ಲೋ ಒಂದು ಕಡೆ ಅವನಲ್ಲಿರುವ ದೇವರಿದ್ದಾನೆ ಎಂಬ ಭಾವ ಹುಲ್ಲುಕಡ್ಡಿಯಷ್ಟಾದರೂ ನಮಗೆ ರಕ್ಷಣೆಯನ್ನು ನೀಡಬಹುದು.
ಈ ಚಿಂತನೆಗಳು ಎಷ್ಟು ಸೂಕ್ತವೋ ತಿಳಿಯದು. ಆದರೆ ಸನಾತನ ಹಿಂದೂ ಧರ್ಮ ಎಲ್ಲ ಧರ್ಮಗಳ ಸಾರವನ್ನೂ ಒಳಗೊಂಡಿದೆ. ಹಾಗಾಗಿ ಇದೊಂದು ಹಿರಿಯಣ್ಣನಂತೆ. ಇದ