Sunday, April 20, 2025

ಯಜ್ಞೋಪವೀತ ದರ್ಶನ

ಬಾಲ್ಯದಲ್ಲಿ ಪ್ರಾಥಮಿಕ ಶಾಲೆಗೆ ಹೋಗುತ್ತಿರಬೇಕಾದರೆ ಬ್ರಹ್ಮೋಪದೇಶವಾಯಿತು. ಅದು ವರೆಗೆ ನನಗೆ ಯಾವಾಗ ಉಪನಯನ ಅಂತ ಕೇಳುತ್ತಿದ್ದವನಿಗೆ ಒಂದು ದಿನ ಉಪನಯನವಾಯಿತು. ಬಡತನದಲ್ಲಿದ್ದವರಿಗೆ ಈ ಮದುವೆಯಾದರೂ ಸುಲಭದಲ್ಲಿ ಆಗಬಹುದು. ಅಲ್ಲಿ ಗಂಡು ಹೆಣ್ಣು ಮೆಚ್ಚಿದರೆ ಈ ಕಾಲದಲ್ಲಿ ಮದುವೆಯಾಗಿಬಿಡುತ್ತದೆ. ಆದರೆ ಉಪನಯನ ಎಂಬುದು ಅಷ್ಟು ಸುಲಭದಲ್ಲಿ ಸಾಧ್ಯವಾಗುವುದಿಲ್ಲ. ಕೇವಲ ಒಬ್ಬ ಪುಟ್ಟ ಬಾಲಕನಿಗೆ ಆಗುವ ಒಂದು ಪುಟ್ಟ ಕಾರ್ಯಕ್ರಮವಾದರೂ ಅದಕ್ಕೆ ಹಲವಾರು ನಿಬಂಧನೆಗಳು ಇರುತ್ತವೆ. ಯಾಕೆಂದರೆ ಬ್ರಹ್ಮೋಪದೇಶ ಆ ಮಗುವಿಗೆ ಸಿಗುವ ಶಿಕ್ಷಣಕ್ಕೆ ಅಂದೇ ನಾಂದಿ. ಯಾವುದೇ ವ್ಯಕ್ತಿಯಾದರು ಹುಟ್ಟಿದ ಕೂಡಲೇ ಮೊದಲು ಸಿಗುವ ವಸ್ತುವೆಂದರೆ ಶಿಕ್ಷಣ. ಬದುಕಿನ ಕ್ಷಣ ಕ್ಷಣವೂ ಸಿಗುವುದಕ್ಕೆ ಶಿಕ್ಷಣ ಅಂತ ಹೇಳಬಹುದು.  ಆಗ ತಾನೆ ಹುಟ್ಟಿದ ನವಜಾತ ಶಿಶುವಿಗೆ ಬಾಯಿಗೆ ತೊಟ್ಟು ಹಾಲು ಸಿಗಬೇಕಾದರೆ ಅತ್ತರೆ ಸಿಗುತ್ತದೆ ಎಂಬ ಜ್ಞಾನ ಒದಗಿ ಬರುವಲ್ಲಿಂದ ಶಿಕ್ಷಣ ತೊಡಗಿಬಿಡುತ್ತದೆ. ಆದರೆ ಬದುಕಿನಲ್ಲಿ ನಾನು ಯಾಕೆ ಹುಟ್ಟಿದೆ ಅಂತ ತಿಳಿಯುವ ಶಿಕ್ಷಣ ಒದಗಿ ಬರುವುದು ಉಪನಯನದಿಂದ. ಅದೊಂದು ಮರು ಜನ್ಮ. ಹಾಗಾಗಿ ಅದಕ್ಕೆ ಮೂಹೂರ್ತ ಸುಲಭದಲ್ಲಿ ಸಿಗುವುದಿಲ್ಲ. ಬೇಕಾದರೆ ಜ್ಯೋತಿಷಿಗಳಲ್ಲಿ ಒಂದು ಸಲ ವಿಚಾರಿಸಿ. ತಂದೆ ಮಗನ ಗ್ರಹ ಬಲ ಜತೆಗೆ ಒದಗಿಬರಬೇಕು. ಹಾಗಾಗಿ ಬಡತನದಲ್ಲಿ ಉಪಯನ ಆಗುತ್ತದೆ ಎಂದು ವಿಶ್ವಾಸ ಇಡುವ ಹಾಗಿಲ್ಲ. ಆದರೂ ದೈವಾನುಗ್ರಹದಿಂದ ಉಪನಯನ ಆಯಿತು.  ಹಿರಿಯರು ಸಂಧ್ಯಾವಂದನೆ ಮಾಡುವಾಗ ಮಂತ್ರ ಹೇಳುವಾಗ ಮಕ್ಕಳು ಕುತೂಹಲದಿಂದ ಆಶೆ ಗಣ್ಣಿನಿಂದ ನೋಡುತ್ತೇವೆ. ಯಾಕೆಂದರೆ ಉಪಯನಯನವಾಗದೇ ಮಂತ್ರ ಹೇಳುವುದಕ್ಕೆ ಅಧಿಕಾರವಿಲ್ಲ. ಮಗುವಿಗೆ ಮೊದಲು ಬ್ರಹ್ಮೋಪದೇಶವಾಗಿ ಗಾಯತ್ರಿ ಮಂತ್ರದ ಉಪದೇಶವಾಗಬೇಕು.  ಕಾಲ ಯಾವುದೆಂದು ಗೊತ್ತಿಲ್ಲ. ಆ ಕಾಲದಿಂದ ವಿಶ್ವಾಮಿತ್ರ ಋಷಿಯ ಕಂಡ ಮಂತ್ರ ಗಾಯತ್ರಿ ಮಂತ್ರ. ಅದು  ನಮ್ಮ ನಾಲಿಗೆಯಲ್ಲಿ ಕುಣಿಯಬೇಕಾದರೆ ಅದಕ್ಕೊಂದು ಇತಿಹಾಸವಿದೆ. ಇತಿಹಾಸಕ್ಕಿಂತಲೂ ಅದಕ್ಕೊಂದು ಸಂಪ್ರದಾಯವಿದೆ. ಪೂರ್ಣವಿರಾಮ ಇಲ್ಲದ ಒಂದು ಸಂಪ್ರದಾಯವದು. 

ಸಂಧ್ಯಾವಂದನೆ....ಹೇಳುವುದಕ್ಕೆ ಒಂದು ಆಕ್ಷೇಪ ಉಂಟು. ಹಿಂದುಗಳೂ ಮೂರ್ತಿ ಪೂಜಕರು. ಸಾವಿರಾರು ದೇವರು ಇದ್ದಾರೆ...ಹೀಗೆ ಅಪೂರ್ಣ ಜ್ಞಾನದ ಸಂಗತಿಗಳು. ನಿಜಕ್ಕಾದರೆ ಸಂಧ್ಯಾವಂದನೆಯಲ್ಲಿ ಯಾವುದೇ ಮೂರ್ತಿಯೂ ಇಲ್ಲ. ಯಾವುದೇ ಕ್ಷೇತ್ರವೂ ಇಲ್ಲ.  ಯಾವುದೇ ಪರಿಕರದ ಅಗತ್ಯವೂ ಇರುವುದಿಲ್ಲ. ಬ್ರಹ್ಮೋಪದೇಶದ ನಂತರ ಅದು ಅನಿವಾರ್ಯ ಕರ್ಮ. ಮೂರೆಳೆ ಜನಿವಾರದಿಂದ ಬಂಧಿತವಾಗುವ ಅನಿವಾರ್ಯ ಕರ್ಮ ಅದು ಅಂತ ಹಲವರಿಗೆ ತಿಳಿದಿಲ್ಲ. ಹೊರಗೆ ಎಲ್ಲೂ ಕಾಣಲಾಗದ ಭಾವ ರೂಪವಿಲ್ಲದ ಭಗವಂತನನ್ನು ಆ ಪರಮೇಶ್ವರನನ್ನು ತನ್ನಲ್ಲೇ ಕಾಣುವ ಒಂದು ಪವಿತ್ರ ಕರ್ಮ. ಪವಿತ್ರ ಎಂದರೆ ಅಲ್ಲಿ ಪರಿಶುದ್ಧಿ ಇರಬೇಕು. ಆದರೆ ಪರಿಶುದ್ದಿ ಪಾವಿತ್ರ್ಯ ಎಂದರೆ ಇಂದಿಗೂ ಅದು ನಿಗೂಢ ಸತ್ಯ. ಹಲವರಿಗೆ ಅದು ತಿಳಿದಿಲ್ಲ. 

ಯಾವುದೇ ಪೂಜೆ ಪುನಸ್ಕಾರ, ಕರ್ಮಗಳನ್ನು ಮಾಡುವಾಗ ಪದೇ ಪದೇ ಅಚಮನ ಮಾಡುತ್ತಾರೆ. ಯಾಕೆಂದರೆ ಎಲ್ಲ ಭವ ಬಂಧನದ ಕಲ್ಮಷಗಳನ್ನು ಒಂದಿಷ್ಟಾದರೂ ಕಳೆದುಕೊಳ್ಳುವ ಸಾಮಾನ್ಯ ಕ್ರಿಯೆ. ಅಚಮನ ಮಾಡಿ ಪ್ರಾಣಾಯಾಮ ಮಾಡುತ್ತೇವೆ. ಪ್ರಾಣಾಯಾಮ ಎಂದರೆ ಏನು?  ಅಧುನಿಕ ಯೋಗ ಶಿಕ್ಷಣ ಹೇಳುತ್ತದೆ. ಪೂರಕ ರೇಚಕ ಕುಂಭಕದಲ್ಲಿ ಉಸಿರಾಟದ ತಂತ್ರಗಾರಿಕೆ. ಆದರೆ ಇದಿಷ್ಟೇ ಅಲ್ಲ. ಸನಾತನ ಧರ್ಮ ತೋರಿಸಿಕೊಡುವ ಪರಮ ಸತ್ಯ ಬೇರೆ  ಇದೆ. ಯಾವುದೇ ಪಾರಾಮಾರ್ಥಿಕ ಅನುಭವವಾಗಬೇಕಾದರೆ ನಾವು ನಮ್ಮ ಪಂಚೇಂದ್ರಿಯಗಳ ಸಂವೇದನೆ, ಪ್ರಚೋದನೆಯಿಂದ ದೂರಾಗಬೇಕು. ಕಣ್ಣು ಕಾಣಬಾರದು, ಕಿವಿ ಮೂಗು ತಟಸ್ಥವಾಗಬೇಕು. ದೇಹದ ಅಂಗಾಂಗಳು ಸ್ಪರ್ಶಜ್ಞಾನವನ್ನು ಕಳೆಯಬೇಕು. ವಿಸರ್ಜನಾಂಗಗಳು ತನ್ನ ಚಟುವಟಿಕೆಯನ್ನು ಸ್ತಭ್ದ ಗೊಳಿಸಬೇಕು. ಅದೊಂದು ಸ್ಥಿತಪ್ರಜ್ಞ ಸ್ಥಿತಿ. ಅದನ್ನು ಸಾಧಿಸುವ ಪುಟ್ಟ ಕ್ರಿಯೆ ಪೂರಕ ರೇಚಕ ಕುಂಭಕದ ಒಂದು ಕ್ರಿಯೆ. ಕೇವಲ ಮೂಗು ಹಿಡಿದು ಗಾಯತ್ರೀ ಮಂತ್ರ ಸ್ಮರಣೆಯಲ್ಲಿ ಪ್ರಾಣಾಯಾಮವಾಗುವುದಿಲ್ಲ. ಸೂರ್ಯ ಭೇದನ ಕ್ರಿಯೆಯಿಂದ ತೊಡಗುವ ಪ್ರಾಣಾಯಾಮ,  ಕಣ್ಣನ್ನು ಮುಚ್ಚಿಸುತ್ತದೆ. ಉಸಿರಾಟವನ್ನು ಸ್ತಬ್ಧಗೊಳಿಸುತ್ತದೆ.   ನಮ್ಮ  ದೇಹದ ಸ್ಪರ್ಶವನ್ನು ನಿಯಂತ್ರಿಸುತ್ತದೆ. ಈ ಅದ್ಭುತ ಕ್ರಿಯೆ ಎಂದರೆ ಅದು ಪರಿಶುದ್ದಿಯ ಸಂಕೇತ. ತಾನು ಈ ಭವಬಂಧನಿಂದ ಕ್ಷಣ ಹೊತ್ತಾದರೂ ಬೇರಾಗಿ ಪವಿತ್ರ ನಾದೆ ಎಂದು ತಿಳಿಯುವ ಕ್ರಿಯೆ. ದೇಹ ಸ್ಪರ್ಶಜ್ಞಾನದಿಂದ ದೂರಾಗುವುದೆಂದರೆ ಬಾಹ್ಯ ಜಗತ್ತಿನ ಅಂದರೆ ಈ ಲೌಕಿಕ ಜಗತ್ತಿನ ಸ್ಪರ್ಶವನ್ನು ದೂರಾಗಿಸುವುದೆಂದು ಅರ್ಥ ,.ಅದನ್ನು ಅಸ್ಪೃಶ್ಯತೆ ಅಂತ ಕೆಟ್ಟದಾಗಿ ವ್ಯಾಖ್ಯಾನಿಸುತ್ತಾರೆ. ಸ್ಪರ್ಶ ಎಂಬುದು ಲೌಕಿಕ ಜಗತ್ತಿನ ಸೆಳೆತ. ಪಾರಾಮಾರ್ಥಿಕ ಚಿಂತನೆ ಎಂದರೆ ಈ ಸೆಳೆತದಿಂದ ದೂರಾಗುವುದು. ಆದರೆ ಮೂರ್ಖರಿಗೆ ಅದು ಅರ್ಥವಾಗುವುದಿಲ್ಲ. ಅವರಿಗೆ ಲೌಕಿಕ ಜಗತ್ತೇ ಶ್ರೇಷ್ಠ. ಪರಮಾತ್ಮನ ಸಾನ್ನಿಧ್ಯದ  ಮತ್ತದರ  ಪಾವಿತ್ರತೆ ತಿಳಿಯದ ಅಜ್ಞಾನದ ಮುಸುಕಿನೊಳಗೆ ಚಡಪಡಿಸುವವರು ಇವರು.  ಪರಿಶುದ್ಧಿಯ ಪರಿಪೂರ್ಣ ಪವಿತ್ರ ಅರ್ಥ ತಿಳಿದಿವರಿಗೆ ಮಾತ್ರ ಅಸ್ಪೃಶ್ಯತೆಯ ಅರಿವಾಗಬಹುದು. ಹಾಗಾಗಿ ಸಂಧ್ಯಾವಂದನೆಗೆ ಕೇವಲ ಸ್ನಾನ ಮಾಡಿ ಪರಿಶುದ್ದಿಯಾದರೆ ಸಾಲದು. ಪ್ರಾಣಾಯಾಮದಿಂದ ಅಂತರಂಗವೂ ಪರಿಶುದ್ಧಿಯಾಗಿ ಮನಸ್ಸು ದೇವರಲ್ಲಿ ಐಕ್ಯವಾಗಿ ತಾನೂ ಈಶ್ವರನೆಂಬ ಅದ್ವೈತ ಜ್ಞಾನ ಸಿದ್ಧಿಯಾಗಬೇಕು. ಆದರೆ ಪಾಮರರಿಗೆ ಇದನ್ನು ತಿಳಿಸಿ ಹೇಳುವ ವ್ಯವಧಾನ ಯಾರಿಗೂ ಇಲ್ಲ. ಕೇವಲ ಅಸ್ಪೃಶ್ಯತೆಯ ಜಪ. 

ಬದುಕಿನ ಪಾವಿತ್ರ್ಯತೆಯ ಅರಿವು ಮೂಡುವುದಕ್ಕೆ ಸಂಧ್ಯಾವಂದನೆ ತೊಡಗಿಕೊಳ್ಳುವುದೇ ಬ್ರಹ್ಮೋಪದೇಶದಿಂದ. ಬ್ರಹ್ಮ ಪರಬ್ರಹ್ಮದ ಅರಿವಿದ್ದವರಿಗೆ ಮಾತ್ರ ಅದರ ಸತ್ಯ ಅರಿವಾಗುತ್ತದೆ. ಹಾಗಾಗಿ ಬ್ರಹ್ಮೋಪದೇಶ ಅದು ಕೇವಲ ಜಾತಿಯಿಂದ ಬ್ರಾಹ್ಮಣರಿಗೆ ಮಾತ್ರ ಅನಿವಾರ್ಯವಲ್ಲ. ಮನುಷ್ಯನಾಗಿ ಹುಟ್ಟಿದವನಿಗೆ ಇಹ ಪರದ ಚಿಂತನೆ ಇರುವವನಿಗೆ ಅದು ಅನಿವಾರ್ಯ. ಇಲ್ಲಿ ಸಂಸ್ಕಾರ ವೆತ್ಯಾಸವಿರಬಹುದು. ಆದರೆ ಕ್ರಿಯೆಯಲ್ಲಿ ವೆತ್ಯಾಸ ವಿರುವುದಿಲ್ಲ. ವಿಪರ್ಯಾಸವೆಂದರೆ ಇದನ್ನು ಕೇವಲ ಬ್ರಾಹ್ಮಣರಿಗೆ ಮಾತ್ರ ಸೀಮಿತವಾಗಿಸಿ ಪ್ರತ್ಯೇಕಿಸುತ್ತಾರೆ.  ಹಾಗಾಗಿ ಬಾಲ್ಯದಲ್ಲಿ ಉಪನಯನವಾಗುತ್ತದೆ. ಶಾಲೆಗೆ ಹೋಗುವುದರಿಂದ ಬಾಹ್ಯ ಪ್ರಪಂಚದ ವ್ಯವಹಾರ ತೊಡಗಿಬಿಡುತ್ತದೆ. ಅದುವರೆಗೆ ಹಾಗೇ ಬರುತ್ತಿದ್ದವನಿಗೆ ಕೆಲವೊಂದು ಶಿಸ್ತು ಕ್ರಮಗಳು ಒದಗಿಬರುತ್ತದೆ. ಎಲ್ಲದಕ್ಕೂ ಮೊದಲು ಎದೆಗೆ ಒತ್ತಿಕೊಂಡು ದೇಹವನ್ನು ಆವರಿಸಿ ಒಂದು ಯಜ್ಞೋಪವೀತದ ಬಂಧನವಿರುತ್ತದೆ. ನಮ್ಮ ಅಜ್ಜ ಹೇಳುತ್ತಿದ್ದರು, ಏನು ಮಾಡುವುದಿದ್ದರೂ ಒಂದು ಸಲ ಜನಿವಾರ ಮುಟ್ಟಿ ನೋಡು. ಅವರು ಹೇಳುತ್ತಿರಬೇಕಾದರೆ ಆಗ ಅದರ ಗಂಭೀರತೆ ಅರಿವಾಗಲಿಲ್ಲ. ಆದರೆ ಬದುಕು ಸವೆಸಿದಂತೆ ಈ ಜನಿವಾರ ಅದೆಂತಹ ಪರಮಾತ್ಮ ಸಾನ್ನಿಧ್ಯವನ್ನು ಒದಗಿಸುತ್ತದೆ ಎಂದರೆ ಅದನ್ನು ಧರಿಸಿ ಅದರ ಪಾವಿತ್ರ್ಯತೆಯನ್ನು ತಿಳಿವಾಗ ಅರಿವಾಗುತ್ತದೆ. ಇಲ್ಲಿ ಪಾವಿತ್ರ್ಯತೆಯನ್ನು ತಿಳಿವಾಗ ಎಂದು ಪದೇ ಪದೇ ಉಲ್ಲೇಖಿಸಬೇಕು. ಯಾಕೆಂದರೆ ಹಲವರಿಗೆ ಅದು ಕೇವಲ ಅಲಂಕಾರಿಕ ವಸ್ತುವಾಗುತ್ತದೆ. ಹಾಗಾಗಿ ಅವರು ಮನೆಯ ಮೊಳೆಗೆ ಜನಿವಾರವನ್ನು ನೇತು ಹಾಕಿ ಎಲ್ಲ ಕರ್ಮಗಳಿಂದಲೂ ಅಜ್ಞಾನ ಸ್ವಾತಂತ್ರ್ಯವನ್ನು  ಪಡೆಯುತ್ತಾರೆ !.

ಉಪನಯನವಾಗಿ ಹಣೆಗೆ ತಿಲಕ ನಾಮ ಇಟ್ಟು ಶಾಲೆಗೆ ಹೋದರೆ ಸಹಪಾಠಿಗಳಿಂದ ಲೇವಡಿ ಗೇಲಿ ಆರಂಭವಾಗಿಬಿಡುತ್ತದೆ. ಆಗಿನಿಂದಲೇ ಒಂದು ಅವಮಾನ ಎಂಬ ಭಾವನೆ ಮೊಳೆತರೂ ಅಂತರಂಗದ ಭಾವನೆ ದೃಢವಾಗಿರುತ್ತದೆ. ನಾವೇ ಹಲವು ಸಲ ಮನೆಯಿಂದ ಹೊರಡಬೇಕಿದ್ದರೆ ತಿಲಕ ನಾಮ ಎಲ್ಲವನ್ನು ಉಜ್ಜಿ ತೊಡೆದು ಹೊರಗೆ ಕಾಲಿಡುತ್ತಿದ್ದೆವು. ಹೊರಗಿನ ಪ್ರಪಂಚಕ್ಕೆ ನಾನು ಬ್ರಹ್ಮೋಪದೇಶ ಪಡೆದವನು ಎಂದು ತೋರಿಸಿಕೊಳ್ಳುವುದಕ್ಕೂ ಒಂದು ಹಿಂಜರಿಕೆ. ಬ್ರಹ್ಮೋಪದೇಶದಲ್ಲಿ ಯಾವುದೇ ಅನ್ಯಧರ್ಮವನ್ನು ಅನ್ಯ ಸಂಸ್ಕಾರವನ್ನು ಕೀಳಾಗಿ ಕಾಣು ಎಂದು ಹೇಳುವುದಿಲ್ಲ. ನಿನ್ನ ಧರ್ಮವನ್ನು ಒಪ್ಪಿಕೊಳ್ಳದವನ್ನು ಹಿಂಸಿಸು, ತುಚ್ಚವಾಗಿ ಕಾಣು ಎಂದು ಉಪದೇಶಿಸುವುದಿಲ್ಲ. ಕೇವಲ ನಿನ್ನ ಶ್ರೇಯೋಭಿವೃದ್ಧಿಗೆ ಇದನ್ನು ಅನುಸರಿಸು ಅಂತ ಉಪದೇಶಿಸುತ್ತಾರೆ. ಹಾಗಾಗಿ ಸಂಧ್ಯಾವಂದನೆ ತೊಡಗುವಾಗ ಮಮೋಪಾತ್ತ ದುರಿತಕ್ಷಯದ್ವಾರ ಅಂತ ಸಂಕಲ್ಪಿಸುತ್ತಾರೆ. ಮಮೋಪಾತ್ತ ದುರಿತದ ಕ್ಷಯ...ಅದು ಕೇವಲ ವೈಯಕ್ತಿಕ ನೆಲೆಗಟ್ಟಿಗೆ ಮಾತ್ರ ಸೀಮಿತ. ಇದೆಲ್ಲ ಹೊರಗಿನ ಜಗತ್ತಿಗೆ ಅರಿವಾಗುವುದಿಲ್ಲ. ಅರಿವಾಗಬೇಕಾದರೆ ಸರಿಯಾದ ಅಧ್ಯಯನ ಬೇಕು. ಇಂದು ವಿಮರ್ಶೆಗಳು ಪ್ರತಿಕ್ರಿಯೆಗಳು ಅಧ್ಯಯನ ವಿಲ್ಲದ ಮೂರ್ಖ ಪ್ರವಚನಗಳಾಗಿರುತ್ತವೆ. 

  ವಿದ್ಯಾರ್ಥಿ ಜೀವನದಲ್ಲೇ ಈ ಕೀಳರಿಮೆಯಿಂದ ಬೆಳೆಯುವಾಗ ಸಂವಿಧಾನ ಬದ್ಧವಾದ ಹಕ್ಕು ಸ್ವಾತಂತ್ರ್ಯದಿಂದ ನಾವು ವಂಚಿತರಾಗುತ್ತೇವೆ ಎಂಬ ಅರಿವಿರುವುದಿಲ್ಲ.  ಜನಿವಾರದ ಭಾರ ಭಾವನಾತ್ಮಕವಾಗಿ ಬ್ರಹ್ಮೋಪದೇಶ ಪಡೆದವನ ಮೇಲಿರುತ್ತದೆ. ಆದರೆನಾವು ಜನಿವಾರ ಹಾಕಿದರೆ ಅದರ ಭಾರ ಮತ್ತೊಬ್ಬರ ಹೆಗಲ ಮೇಲಿರುತ್ತದೆ. ವಿಚಿತ್ರ. ಮಂಗಳೂರಲ್ಲಿ ಪ್ರಾಥಮಿಕ ಶಾಲೆಗೆ ಹೋಗುವಾಗ ಒಂದು ಘಟನೆ, ಅದರ ವಿವರ ಸರಿಯಾಗಿ ಜ್ಞಾಪಕವಿಲ್ಲ.  ಒಬ್ಬ ಬ್ರಾಹ್ಮಣ ಹುಡುಗ ಉಪನಯನದ ನಂತರ ಶಾಲೆಗೆ ಬರುತ್ತಾನೆ. ಉಳಿದ ಮಕ್ಕಳು ಆತನ ಜನಿವಾರ ಹಿಡಿದೆಳೆದು ತಮಾಷೆ ನೋಡುತ್ತಾರೆ.  ಹೀಗೆ ಮಾಡಿ ಎಲ್ಲರೂ ಪುಕ್ಕಟೆ ಮನರಂಜನೆ ಅನುಭವಿಸುತ್ತಾರೆ. ಹುಡುಗ ಮಾತ್ರ ಅವಮಾನದಿಂದ ಕುಗ್ಗಿಬಿಡುತ್ತಾನೆ. ಮರುದಿನ ಜನಿವಾರ ಕಾಣಂತೆ ಇಡುತ್ತಾನೋ ಇಲ್ಲ ಕಳಚಿ ಮನೆಯಲ್ಲಿ ಬಿಟ್ಟು ಬಂದನೋ ಗೊತ್ತಿಲ್ಲ. ಆನಂತರ ಇದು ನಡೆಯಲಿಲ್ಲ. ಅದೇ ರೀತಿ ಒಬ್ಬನ ಟೊಪ್ಪಿ ತೆಗೆದು ಆಟವಾಡುತ್ತಾರೆ. ಅದೊಂದು ಧರ್ಮ ಬೇರೆಯೇ ಉಂಟು ಅಂತ. ಅಗ ನನಗೆ ಅರಿವಿಲ್ಲ. ಮರುದಿನ ಆ ಹುಡುಗನ ಮನೆಯಿಂದ ವಿಚಾರಿಸುವುದಕ್ಕೆ ಕೆಲವು ಮಂದಿ ಬರುತ್ತಾರೆ. ವೆತ್ಯಾಸ ಇಷ್ಟೆ. ವಿಚಾರಿಸುವುದಕ್ಕೆ ಬಂದುದಕ್ಕೆ ಆಕ್ಷೇಪವಲ್ಲ. ಆದರೆ ಇಲ್ಲಿ ಇಂತಹ ಖಾಸಗಿ ವಿಚಾರಗಳು ನಗೆ ಪಾಟಲಿಗೆ ಈಡಾಗುವುದು ನಿಜಕ್ಕೂ ಬೇಸರ ತರಿಸುತ್ತದೆ.  ಹಲವರ ಜೀವನದಲ್ಲೂ ಇದೇ ಬಗೆಯ ಘಟನೆಗಳು ನಡೆದಿರುತ್ತವೆ. ಹೆಚ್ಚಿನವರು ಇದು ಸಾಮಾನ್ಯ ಅಂತ ಹೇಳದೇ ಉಳಿಯುತ್ತಾರೆ. ವಿಚಿತ್ರವೆಂದರೆ ಇದು ಗಂಭೀರ ಅಂತ ಅನ್ನಿಸುವಾಗ ...ಕಾಲ ಮಿಂಚಿ ಹೋಗಿರುತ್ತದೆ. ಸ್ವಾತಂತ್ರ್ಯ ಅಂದರೆ ಏನು ಅಂತ ಯೋಚಿಸುವಂತಾಗುತ್ತದೆ. ಕಾನೂನು ನಿಯಮಗಳು ಎಲ್ಲವೂ ಸಮಾನವಾಗಿರಬೇಕು. ಇಲ್ಲವಾದರೆ ಅದು ನಾಗರೀಕ ಜೀವನದಕ್ಕು  ಜನೋಪಯೋಗಿಯಾಗುವುದಕ್ಕೆ ಸಾಧ್ಯವಿಲ್ಲ. 

ನಾನು ಒಂದು ಸಲ ಒಬ್ಬ ಹಿರಿಯರಲ್ಲಿ ಹೇಳಿದೆ, ಎಲ್ಲರೂ ಸೇರಿ ಸಂಧ್ಯಾವಂದನೆಯ ಅಭಿಯಾನವನ್ನು ಮಾಡಬೇಕು. ಹಲವರು ಹಲವು ಕಾರಣಗಳಿಂದ ಇದರಿಂದ ವಿಮುಖರಾಗಿರುತ್ತಾರೆ. ಅಥವಾ ಪುನಃ ತೊಡಗಿಸುವುದಕ್ಕೆ ಏನೋ ಹಿಂಜರಿಕೆ. ಮಂತ್ರಗಳು ಕಲಿತಿರುವುದಿಲ್ಲ. ಇಂತಹವರಿಗೆ ಪ್ರೇರಕವಾಗುವಂತೆ ಒಂದು ಅಭಿಯಾನ ಮಾಡಿ ಇದರ ಶಿಕ್ಷಣವನ್ನು ಒದಗಿಸಬೇಕು. ಎಲ್ಲರಿಗೂ ಇದರ ಮಹತ್ವವನ್ನು ಗಂಭೀರತೆಯನ್ನು ತಿಳಿಸಬೇಕು. ವಿಪರ್ಯಾಸವೆಂದರೆ ಇದಕ್ಕೆ ಯಾರೂ ಸ್ಪಂದಿಸಲಿಲ್ಲ. ನಮಗೆ ಗೌರವ ಸಿಗಬೇಕು. ನಮ್ಮ ಚಿಂತನೆಗಳಿಗೆ ನಮ್ಮ ಭಾವನೆಗಳಿಗೆ ಮನ್ನಣೆ ಸಿಗಬೇಕು ಅಂತ ಪ್ರತಿಯೊಬ್ಬರೂ  ಆಶಿಸುತ್ತಾರೆ. ಅದಕ್ಕೆ ಪ್ರತಿಯಾಗಿ ನಮ್ಮ ನಡವಳಿಕೆಗಳೂ ಅದಕ್ಕೆ ಅನುಗುಣವಾಗಿರಬೇಕು. ನಮ್ಮ ಧಾರ್ಮಿಕ ವಿಚಾರಗಳಿ ಮೊದಲು ನಾವು ಗೌರವ ಕೊಡಬೇಕು. ಸಂಧ್ಯಾವಂದನೆ , ಅನುಷ್ಠಾನ ನಿಯಮಗಳನ್ನು ನಾವು ಮೊದಲು ಗೌರವದಿಂದ ಅನುಸರಿಸಬೇಕು. ಮತ್ತೊಬ್ಬರು ಅದನ್ನು ಭಯದಿಂದ ಗೌರವದಿಂದ ಕಾಣುವಂತೆ ನಮ್ಮ ವರ್ತನೆ ಇರಬೇಕು. ಇದಕ್ಕೆ ವ್ಯತಿರಿಕ್ತವಾಗಿ ನಾವು ಇರುವಾಗ ಸಹಜವಾಗಿ ನಗೆ ಪಾಟಲಿಗೆ ನಾವು ಅಥವಾ ಇನ್ಯಾರೋ ಈಡಾಗಿ ಬಿಡುತ್ತಾರೆ. ಎಲ್ಲರಿಗೂ ಅವರವರ ಹಾದಿ ಆಯ್ಕೆ ಮಾಡುವ ಸ್ವಾತಂತ್ರ್ಯವಿರುತ್ತದೆ. ಒಬ್ಬರ ಸ್ವೇಚ್ಛಾಚಾರದಿಂದ ಅದರ ಗಂಭೀರತೆ ನಷ್ಟವಾಗಿ ಅದರ ಪರಿಣಾಮ ಇನ್ಯಾರದೋ ಮೇಲೆ ಆಗುವುದು ವಿಡಂಬನೆ. ಒಂದು ಮನೆಯಲ್ಲಿ ನಾನೇ ನೋಡಿದ್ದೇನೆ, ಜನಿವಾರ  ಗೋಡೆಗೆ ನೇತು ಹಾಕಿರುತ್ತದೆ. ಬೇಕಾಗುವಾಗ ಧರಿಸುವ ಉಡುಗೆಯಂತೆ. ಹೇಳಿಕೇಳಿ ಇದು ಯಜ್ಞೋಪವೀತ..ಅಂದರೆ ಉಪವಸ್ತ್ರ. ಅಕ್ಷರಶಃ ಇದು ವಿಪರೀತಾರ್ಥದಲ್ಲಿ ಬಳಕೆಯಾಗುತ್ತದೆ. ಇನ್ನು ಸಂಧ್ಯಾವಂದನೆ ಮಾಡುವಾಗಲಂತೂ ಮೊಬೈಲ್ ಹತ್ತಿರವೇ ಇರುತ್ತದೆ. ಇಲ್ಲ ಅದು ಕಾಟಾಚಾರಕ್ಕೆಂಬಂತೆ ಮಾಡುತ್ತಾರೆ. ಯಾರೊಂದಿಗೊ ಮಾತನಾಡುತ್ತಾ ಇನ್ನೇನೋ ಕೆಲಸ ಜತೆಯಲ್ಲಿ ಮಾಡುತ್ತಾ ಸಂಧ್ಯಾವಂದನೆ ಮಾಡುವುದರಲ್ಲಿ ಭಗವಂತನ ಮೇಲೆ ಗಮನ ಹೇಗೆ ಸಾಧ್ಯ. ಕೇವಲ ಒಂದು ಹತ್ತು ನಿಮಿಷ ಕೂಡಾ ಅದಕ್ಕೆ ಸಂಪೂರ್ಣವಾಗಿ ವಿನಿಯೋಗಿಸುವ ಮನಸ್ಸು ಇಲ್ಲವಾದರೆ ಅದನ್ನು ಆಚರಿಸಿ ಆ ದೇವರಿಗೆ ಸವಾಲೊಡ್ಡುವ ಅವಶ್ಯಕತೆ ಇದೆಯೇ ಅಂತ ಅನ್ನಿಸುತ್ತದೆ.  ಒಂದು ಕಾಲದಲ್ಲಿ ನಾನೂ ಇದನ್ನು ಅವಗಣನೆ ಮಾಡಿದ್ದೆ. ಆದರೆ ಜೀವನ ಶಿಕ್ಷಣ ಅನುಭವ ಎಂಬುದು ಪಾಠ ಕಲಿಸುವಾಗ ನಾವು ಏನೂ ಅಲ್ಲ ಎಂಬ ಶೂನ್ಯತೆಯ ಅರಿವಾಗುವಾಗ ಇವುಗಳ ಆದ್ಯತೆ ಅರಿವಾಗುತ್ತದೆ. 

ಈಗ ನಿಯಮಿತವಾಗಿ ಸಂಧ್ಯಾಕಾಲಾದಲ್ಲಿ ಈ ಸಂಧ್ಯಾವಂದನೆ ಮಾಡುತ್ತೇನೆ. ಅದು ಮನೆ ಬಿಟ್ಟು ಹೊರಗೆ ಹೋದಾಗಲೂ..ಆ ಸಮಯವನ್ನುಆದಷ್ಟು ಪ್ರಯತ್ನ ಪೂರ್ವಕ ಅದಕ್ಕೆ ವಿನಿಯೋಗ ಮಡುತ್ತೇನೆ. ಪ್ರಯಾಣದಲ್ಲಿ ಆ ಸಮಯ ಬಂದರೆ ಒಂದಷ್ಟು ಸುಮ್ಮನೆ ಕುಳಿತು ಧ್ಯಾನವನ್ನಾದರೂ ಮಾಡಿ ಬಿಡುತ್ತೇನೆ. ಹಲವು ಕಡೆ ಮದುವೆಯಂತಹ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ಕಷ್ಟಪಟ್ಟು ಸಂಧ್ಯಾವಂದನೆಗೆ ಕುಳಿತು ಬಿಡುತ್ತೇನೆ. ವಿಚಿತ್ರವೆಂದರೆ ಅಲ್ಲೂ ಕೆಲವರು ಅದೂ ಬ್ರಾಹ್ಮಣರೂ ವಿಚಿತ್ರವಾಗಿ ನೋಡುತ್ತಾರೆ.  ತಾವು ಮಾಡಲಾಗದ ಹತಾಶೆಯೋ ಅಲ್ಲ ನನ್ನದು ಢಂಭಾಚಾರವಾಗಿ ಕಾಣುವುದೋ ಗೊತ್ತಿಲ್ಲ ಅಂತೂ ಹಲವು ಸಲ ನನಗೇ ಹೀಗೆ ಅಂತ ಅನ್ನಿಸಿದ್ದಿದೆ. ಎಲ್ಲರಂತೆ ನಾನೂ ಮಾಡದೇ ಇರಬಹುದಲ್ಲ ಅಂತ ಅನ್ನಿಸಿದರೂ ಸಮಯ ಬಂದಾಗ ಉಳಿದವರಿಗಾಗಿ ನನ್ನದನ್ನು ನಾನೇಕೆ ಕಳೆದುಕೊಳ್ಳಬೇಕು. ಅಷ್ಟಾಗಿ ಇದು ಯಾರಿಗೂ ತೊಂದರೆ ಕೊಡುವ ಕಾರ್ಯವಲ್ಲ.  


ಇನ್ನು ನಮ್ಮ ಧಾರ್ಮಿಕ ವಿಧಿ ವಿಧಾನಗಳು ದೇಶ ಪ್ರದೇಶಕ್ಕೆ ಹೊಂದಿಕೊಂಡು ವಿಭಿನ್ನವಾಗಿರುತ್ತವೆ. ಹಿರಿಯರಿಂದ ಬಂದ ಸಂಸ್ಕಾರ ಯವುದಾದರೂ ಅದನ್ನು ಗೌರವದಿಂದ ಕಾಣುವ ಮನೋಭಾವ ನಮ್ಮಲ್ಲಿರಬೇಕು. ನಮ್ಮ ಬ್ರಾಹ್ಮಣರಲ್ಲೇ ತನ್ನದು ಮಾತ್ರ ಶ್ರೇಷ್ಠ ಎನ್ನುವ ಭಾವನೆ ಹಲವು ಕಡೆಯಲ್ಲಿ ಪ್ರಕಟವಾಗುತ್ತದೆ. ಒಂದು ಕಾರ್ಯಕ್ರಮದಲ್ಲಿ ಊಟಕ್ಕೆ ಕುಳಿತಾಗ ಅಲ್ಲಿ ದಕ್ಷಿಣ ಕನ್ನಡದವರು ನಾವಿಬ್ಬರೇ ಇದ್ದೆವು. ಹಸ್ತೋದಕ ತೆಗೆಯುವ ಕ್ರಮಕ್ಕೆ ಒಬ್ಬ ಪುರೋಹಿತರು ಕೊಂಕು ನುಡಿದರು. ಆಗ ನಾನು ತೀವೃವಾಗಿ ಸಮಾಧಾನದಿಂದ ಆಕ್ಷೇಪ  ವ್ಯಕ್ತಪಡಿಸಿದ್ದೆ. ವಿಧಿ ವಿಧಾನಗಳು ಹಿರಿಯರಿಂದ ಸಿಗುವ ಸಂಸ್ಕಾರಗಳು ವಿಭಿನ್ನವಾಗಿದ್ದರೂ ಅದು ತೆಗಳುವ ಸಾಧನವಲ್ಲ. ತನ್ನದು ಮಾತ್ರ ಶ್ರೇಷ್ಠ ಅಂತ ಯಾರು ತಿಳಿದಿರುತ್ತಾನೋ ಆತನಿಗೆ ಅಧ್ಯಯನಲ್ಲಿ ಅಧ್ಯಯನದ ಕೊರತೆ ಇರುತ್ತದೆ. ನಮ್ಮ ಹಿರಿಯರಿಂದ ಬಂದ ಸಂಸ್ಕಾರವನ್ನು ನಾವು ಅನುಸರಿಸಬೇಕು. ವಿಶ್ವಾಮಿತ್ರನ ಕಾಲದಿಂದ ಅದು ನಮ್ಮ ಪಿತೃಗಳ ತನಕ ಬಂದಿದೆ ಎಂದರೆ ಅದು ಸತ್ವಹೀನವಾಗುವುದಕ್ಕೆ ಸಾಧ್ಯವಿಲ್ಲ. ವೇದ ಅಂದರೆ ನಿಯಮ. ನಮ್ಮ ಬದುಕನ್ನು ರೂಪಿಸುವ ನಿಯಮ. ನಾವು ಹೀಗೆ ನಡೆಯಬೇಕು ಎಂದು ನಿರ್ದೇಶಿಸುವ ನಿಮಯಗಳು. ಇದರ ಅರ್ಥ ತಿಳಿಯದೇ ನಮ್ಮಲ್ಲೇ ನಾವು ಮತ್ತೊಬ್ಬರನ್ನು ಹೀನಾಯವಾಗಿ ಕಂಡರೆ ಉಳಿದವರಿಂದ ಗೌರವ ಸಿಗಬೇಕು ಎನ್ನುವ ಹಕ್ಕೇ ಉಳಿಯುವುದಿಲ್ಲ. ಜಾತಿ ಯಾವುದಾದರೇನು ಧರ್ಮ ಯಾವುದಾದರೇನು ಗಂಗೆ ಹರಿಯುವಲ್ಲೇ ಯಮುನೆಯೂ ಹರಿಯುತ್ತಾಳೆ.  ಪ್ರಕೃತಿ ತೋರಿಸುವ ಪಾಠವಿದು. 


ಯಾವುದೋ ಹುಡುಗನ ಜನಿವಾರ ಕಿತ್ತೆಸೆದಿದ್ದಾರೆ. ನಾವು ಅದರ ಬಗ್ಗೆ ಪ್ರತಿಭಟಿಸುತ್ತೇವೆ. ನಿಜಕ್ಕೂ ಇದೊಂದು ವಿಷಾದನೀಯ ಘಟನೆ. ಇಲ್ಲಿ ಏನಾದರೂ ಯಾರೂ ರಸ್ತೆಗೆ ನುಗ್ಗುವುದಿಲ್ಲ. ಕಲ್ಲು ಎಸೆಯುವುದಿಲ್ಲ. ವಾಹನ ಉರಿಸುವುದಿಲ್ಲ. ಹಾಗಾಗಿ ಇಂತಹ ಘಟನೆಗಳು ಲೋಕ ಮುಖದಲ್ಲಿ ಗಂಭೀರವಾಗುವುದಿಲ್ಲ. ಬದಲಾಗಿ ಅಪಸ್ವರವೇ ಮೂಡುತ್ತದೆ. ಈ ಪವಿತ್ರತೆ, ಪರಿಶುದ್ದಿ ಮೋಕ್ಷ ಇದೆಲ್ಲ ಚಲಾವಣೆಯಾಗದ ವಿಷಯಗಳು. ಸ್ವತಹ ನಮಗೇ ಅದರ ಅರ್ಥ ತಿಳಿಯದೇ ಇದ್ದರೆ ಆಗುವ ಅವಗಣನೆಗೆ ಪರೋಕ್ಷವಾಗಿ ನಾವೇ ಕಾರಣೀಭೂತರಾಗಿಬಿಡುತ್ತೇವೆ. ಹಲವು ಸಲ ಸಾರ್ವಜನಿಕವಾಗಿ ನಾನು ಬ್ರಾಹ್ಮಣ ಎಂದ ಕೂಡಲೆ ಹಲವರ ವಕ್ರ ನೋಟದ ಅನುಭವ ನನಗೂ ಆಗಿದೆ. ಬ್ರಹ್ಮ ಎಂಬುದು ಎಂದಿಗೂ ಸಣ್ಣದಾಗುವ ವಸ್ತುವಲ್ಲ. ಹಾಗಾಗಿ ಅದನ್ನು ಪಾಲಿಸುವವನು ಎಂದಿಗೂ ಸಣ್ಣದಾಗುವುದಿಲ್ಲ. ಲೋಕ ಕಾಣಬಹುದು, ಆದರೆ ಎಲ್ಲರೂ ನಂಬುವ ಭಗವಂತನಿಗೆ ಅರಿವಿಲ್ಲದೆ ಇರುವುದಕ್ಕೆ ಸಾಧ್ಯವಿಲ್ಲ. ಈ ವಿಶ್ವಾಸದಲ್ಲೇ ನಮ್ಮ ನಡೆ ಇರಬೇಕು. 



 

No comments:

Post a Comment