Sunday, July 10, 2011

ಪ್ರಾಣಾಯಾಮ

ಇತ್ತೀಚಿನ ಹಲವು ಲೇಖನದಲ್ಲಿ ಯೋಗ ಧ್ಯಾನ ಪ್ರಾಣಾಯಾಮ ಮುಂತಾದ ಸಾಮಾನ್ಯ ವಿಚಾರಗಳ ಪ್ರಸ್ತಾಪ ಮಾಡಿದ್ದೆ. ಹೆಚ್ಚಿನ ವಿಚಾರಗಳು ಸ್ವ ಅನುಭವಳನ್ನೇ ಅವಲಂಬಿಸಿದ್ದುವು. ಎಲ್ಲದಕ್ಕೂ ನನ್ನಾತ್ಮ ಮಾತ್ರ ನನಗೆ ದೃಷ್ಟಾಂತವಾಗಿತ್ತು. ನನ್ನ ಪರಿಧಿಯೊಳಗೆ ಬರುವ ಎಲ್ಲಾ ವ್ಯಕ್ತಿಗಳಲ್ಲಿಯೂ ಯೋಗದ ಬಗೆಗೆ ಸಾಧ್ಯವಾದಷ್ಟು ಪ್ರಚೋದನೆ ಕೊಡುವ ಪ್ರಯತ್ನ ನನ್ನದು ಅದರ ಪರಿಣಾಮ ಏನೇ ಆದರು ಉತ್ತಮ ಒಂದು ನಿದರ್ಶನ ಎನ್ನಬಹುದಾದಂತಹ ಒಂದು ಸ್ಪಂದನವನ್ನು ಅನುಭವಿಸುವ ಪ್ರಮೇಯ ಒದಗಿ ಬಂತು.  
ನೀರಿನ ಕೊಳಕ್ಕೆ ಕಲ್ಲುಗಳನ್ನು ಎಸೆಯುತ್ತಿದ್ದ ಒಬ್ಬಾತ.ಕಾರಣವೇನೆಂದು ಕೇಳಿದಾಗ ಆತ ಹೇಳಿ ಇಷ್ಟೆಲ್ಲ ಕಲ್ಲು ಬಿಸಾಡಿರುವೆನಲ್ಲ ಅದರಲ್ಲಿ ಒಂದಾದರೂ ಮೊಳಕೆ ಬಾರದೆ ಇದ್ದೀತೆ? ಬಿಸಾಡುತ್ತಿರುವುದು ನೀರಲ್ಲಿ ಕರಗದ ಕಲ್ಲು ಎಂದು ಆತನಿಗೂ ಗೊತ್ತು. ಕಲ್ಲು ಕರಗುವುದೆಲ್ಲಿ? ಅಥವಾ ಮೊಳಕೆ ಬರುವುದೆಲ್ಲಿ.? ಹುಚ್ಚುತನದ ಕೆಲಸ ಎಂದು ಮೇಲ್ನೋಟಕ್ಕೆ ಅನಿಸಿದರೂ ಕಲ್ಲನ್ನೂ ಕರಗಿಸುವ ಆತನ ಪ್ರಯತ್ನ !!!!  ಹಾಗೆ ಪ್ರತಿಯೊಬ್ಬರಲ್ಲಿ ಯೋಗ ಪ್ರಾಣಾಯಾಮದ ಬಗ್ಗೆ ಪುಕ್ಕಟೆಯ ಸಲಹೆ ಕೊಡುತ್ತಿದ್ದೆ. ಪ್ರೇರೆಪಿಸುತ್ತಿದ್ದೆ. ಪ್ರಯತ್ನ ಮಾತ್ರ ಶೂನ್ಯ ಅಂತಲೆ ಹೇಳಬಹುದು. ನಿತ್ಯವೂ ನೆಗಡಿ ಕೆಮ್ಮು ಜ್ವರ ಎಂದು ಪಾಡು ಪಡುತ್ತಿದ್ದವರಲ್ಲಿ ಹಲವು ಸಲ ವಿನಂತಿಸಿಕೊಂಡೆ ಯೋಗ ಪ್ರಾಣಾಯಾಮ ಮಾಡಿ ನೋಡು. ನಾಸಿಕದ ಸೊಂಕಿನಿಂದ (ಸೈನೆಸ್) ಬಳಲಿ ಒಂದು ಬಾರಿ ಶಸ್ತ್ರಚಿಕಿತ್ಸೆಗೂ ಒಳಗಾದವರಿಗೆ ನನ್ನ ಸಲಹೆಯಾಗಿತ್ತು ಅದು. ಯಥಾ ಪ್ರಕಾರ ನನ್ನದು ಹುಚ್ಚು ಮಾತಾಗಿಯೇ ಪರಿಣಮಿಸಿತು.ಬದಲಾಗಿ  ಒಂದು ಪ್ರಶ್ನೆ. ಯೋಗ ಮಾಡುವುದಿದ್ದರೆ.. ಆ ಮಂತ್ರ ಎಲ್ಲ ಹೇಳಲೇ ಬೇಕೆ?  ಬಹಳ ಬಾಲಿಶವಾಗಿ ಕಂಡಿತ್ತು. ಹೀಗೆ ಮತ್ತೊಬ್ಬರಲ್ಲಿ ಇದೇ ತರಹ ಕೇಳಿದಾಗ ವಿಚಿತ್ರ ಅನ್ನಬಹುದಾದ ಪ್ರತಿಕ್ರಿಯೆ ಬಂದಿತ್ತು.

ಇಲ್ಲ ನಾನು ಯೋಗ ಅಲ್ಲ ಬ್ರೀಥಿಂಗ್ ಟ್ರೀಟ್ ಮೆಂಟ್ ಮಾಡ್ತಾ ಇದ್ದೆನೆ

ಎಂತಹ ವಿಚಿತ್ರ. ಇದೊಂದು ತರಹ ಮಾಂಸಾಹಾರಿ ಹೋಟೆಲ್ ಗೆ ಶಾಖಾಹಾರಿ ಹೋಗಿ ಹೋಳು ಬೇಡ ರಸಮಾತ್ರ ಸಾಕು ಎಂದು ಹೇಳಿದಂತೆ ಕಂಡಿತು. ಮಂತ್ರ ಶ್ಲೋಕ ಹೇಳುವುದಕ್ಕೆ ಮಡಿವಂತಿಕೆ.

ಇವೆಲ್ಲದರ ನಡುವೆ ಸಿಕ್ಕಿದ ಒಂದು ಪ್ರತಿಕ್ರಿಯಿಂದ ನಾನು ತುಂಬ ಪ್ರಭಾವಿತನಾದೆ. ನಿತ್ಯ ಕಾಣುವ ಮಿತ್ರರೊಬ್ಬರು ಮೊನ್ನೆ ಒಂದು ದಿನ ಕಾಣುತ್ತಿದ್ದಂತೆ ಯೋಗದ ಬಗ್ಗೆ ವಿಚಾರಿಸಿದರು. ನಿತ್ಯವೂ ಛೇಡಿಸುವ ಅವರು ಈ ಬಾರಿ ಹೇಳಿದ್ದು ಮಾತ್ರ ಆಶ್ಚರ್ಯವನ್ನುಂಟು ಮಾಡಿತ್ತು. ನನ್ನ ಸಹೋದರ ಇತ್ತಿಚೆಗೆ ಯೋಗ ತರಬೇತಿಗೆ ಸೇರಿದ್ದ. ಶೀತ ಕಫ ಖೆಮ್ಮು ಎಂದು ಬಳಲುತ್ತಿದ್ದವ ಸೇರಿದ ಒಂದೆರಡುವಾರದಲ್ಲೇ ಮಿತ್ರರಲ್ಲಿ ಪ್ರತಿಕ್ರಿಯಿಸಿದ್ದ ಬಗೆ,

ಬೆಳಗ್ಗೆ ಎದ್ದು ಬನ್ನಿ ಸಾರ್. ಚೆನ್ನಾಗಿರುತ್ತದೆ. ಒಂದು ವರ್ಷ ಒಂದು ದಿನವನ್ನು ಬಿಡದೆ ನೀವು ಬಂದ್ರೆ ಅಲ್ಲಿಯ ತಿಂಗಳ ಫೀಸು ನಾನು ಕೊಡ್ತೇನೆ. ಒಂದು ದಿನವೂ ರಜೆ ಹಾಕದೆ ನಿತ್ಯ ಬರಬೇಕು ಸಾಧ್ಯವೆ?

ಈ ಮಾತಿನ ಅಂತರಾರ್ಥ ಎಷ್ಟು ವಿಶಾಲವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಆರಂಭದಲ್ಲಿ ಇದ್ದ ಉತ್ಸಾಹ ನಂತರ ಇರುವುದಿಲ್ಲ. ಇಂತಹ ಕೆಲಸಗಳಲ್ಲಿ ಅಂತಹ ಔದಾಸಿನ್ಯ ಅಧಿಕ ಅಂತಲೇ ಹೇಳಬಹುದು. ಬೆಳಗ್ಗಿನ ವಾಕಿಂಗ್ ಗೆ ಪಾರ್ಕ್ ಗಳಲ್ಲಿ ಇಂತಹ ಸಂದರ್ಭ ನಿತ್ಯವೂ ಕಾಣಬಹುದು. ಇವತ್ತಿದ್ದ ಆಸಕ್ತಿ ನಾಳೆ ಇರುವುದಿಲ್ಲ. ಯಾರೋ ವ್ಯಾಯಾಮ ಮಾಡುತ್ತಿರುವುದನ್ನು ಕಂಡು ಕ್ಷಣಿಕ ಉತ್ತೇಜನಗೊಂಡು, ಅರೋಗ್ಯದ ಪ್ರಜ್ಞೆ ಜಾಗೃತವಾದ ಹಾಗೆ ಕೈ ಕಾಲು ಕುಣಿಸಿ ವ್ಯಾಯಾಮ ಮಾಡುತ್ತಾರೆ ಅದು ಕೇವಲ ಒಂದೇ ದಿನಕ್ಕೆ ಮೀಸಲು ಮರುದಿನ ನೋಡಿದರೆ ಆತ ಇರುವುದೇ ಇಲ್ಲ.ಇಂತಹ ಕೆಲಸಗಳಲ್ಲಿ  ಮುಖ್ಯವಾಗಿ ಇರಬೇಕಾದ ಬದ್ದತೆ ಇರುವುದೇ ಇಲ್ಲ. ಯಾವುದೋ ಆರೋಗ್ಯದ ತೊಂದರೆಗೆ ಸಲಹೆ ಕೇಳಿದಾಗ ತಿಳಿದವರು ಹೇಳಿದರು ಪ್ರಾಣಾಯಾಮ ಮಾಡು ಕಡಿಮೆಯಾಗುತ್ತದೆ. ಆವಾಗ ಆತನ ಪ್ರಶ್ನೆ ಎಷ್ಟು ಮೌಢ್ಯವನ್ನು ತೋರಿಸುತ್ತದೆ ಎಂದರೆ ಆತ- ಪ್ರಾಣಾಯಾಮವಾ? ಅದು ಎಷ್ಟುದಿನ ಮಾಡಬೇಕು.? ಏನು ಹೇಳಬಹುದು? ಪ್ರಾಣಾಯಾಮವನ್ನು ಚಿಕಿತ್ಸೆ ಎಂದು ತಿಳಿದುಕೊಳ್ಳಬಹುದೇ? ಯಾವಾಗಿನವರೆಗೆ ಉಸಿರಾಟ ಇರುತ್ತದೋ ಆವಾಗಿನ ವರೆಗೆ ಪ್ರಾಣಾಯಾಮ ಮಾಡಲೇಬೇಕು.

ಪ್ರಾಣಾಯಾಮದ ಸರಳವಾದ ಹಲವು ವಿಧಾನಗಳು ಇಂದು ಬಳಕೆಯಲ್ಲಿವೆ.ಪ್ರಾಣಾಯಾಮ ಎಂಬುದು ಪ್ರಧಾನವಾದ ಭಾಗ. ಯೋಗಾಸನ ಅಥವಾ ಸೂರ್ಯನಮಸ್ಕಾರ ಯಾವುದೇ ಆಗಲಿ ಅದರ ಗರಿಷ್ಠ ಪ್ರಯೋಜನ ಪಡೆಯಬೇಕಾದರೆ ಪ್ರಾಣಾಯಾಮ ಕಡ್ಡಾಯವಾಗಿ ಮಾಡಲೇಬೇಕು.

ಧ್ಯಾನ ಪ್ರಕ್ರಿಯೆ ಮುಗಿಸಿದಾಗ ಮನಸ್ಸು ಒಂದೆಡೆ ಕೇಂದ್ರೀಕೃತವಾಗಿ ನಿಶ್ಚಿಂತೆಯಿಂದ ನಿರಾಳವಾಗಿ ಉಸಿರಾಟ ಸಾಗುತ್ತಿರುತ್ತದೆ. ದೀರ್ಘ ಶ್ವಾಸೋಛ್ಚಾಸ ಎಂಬುದೂ ಒಂದು ಯೋಗ ಅthಥವಾ ಪ್ರಾಣಾಯಮ ಎಂದು ಕರೆಸಲ್ಪಡುತ್ತದೆ. ಯಾವುದೇ ಆಸನದಲ್ಲಿ ನೇರವಾಗಿ ಕುಳಿತು. ತಡೆಯಿಲ್ಲದೆ ನಿರಾಳವಾಗಿ  ಹತ್ತರಿಂದ ಹದಿನೈದು ಬಾರಿ ಮನಸ್ಸನ್ನು ಕೇಂದ್ರೀಕರಿಸಿ ಉಸಿರಾಟ ನಡೆಸಿ. ಅದರ ಅನುಭವ ಸ್ವತಹ ಅನುಭವಿಸಬಹುದು. ಈ ದೀರ್ಘ  ಹಾಗೂ ನಿರಾಳವಾದ ಉಸಿರಾಟದ ಪರಿಣಾಮ ಅನುಭವಿಸಬೇಕಾದರೆ, ರಾತ್ರಿ ನಿದ್ದೆಯ ಸಮಸ್ಯೆಇದ್ದು ನಿದ್ದೆ ಬಾರದೇ ಇದ್ದಲ್ಲಿ ನೇರವಾಗಿ ಮೇಲ್ಮುಖವಾಗಿ ಮಲಗಿ, ತಲೆದಿಂಬು ಇಲ್ಲವಾದರೆ ಒಳ್ಳೆಯದು. ತಲೆದಿಂಬು ಉಪಯೋಗ ನಿರಾಳವಾದ ಉಸಿರಾಟಕ್ಕೆ ಸೂಕ್ತವೂ ಅಲ್ಲ. ನೇರವಾಗಿ ಮಲಗಿ ಇಪ್ಪತ್ತೊಂದು ಬಾರಿ ಎಣಿಕೆ ಮಾಡಿ ಉಸಿರಾಡಿದರೆ, ಇಪ್ಪತ್ತೊಂದನೇ ಬಾರಿಯ ಉಸಿರಾಟ ಜ್ಞಾಪಕವೇ ಇರುವುದಿಲ್ಲ. ಇದು ದೀರ್ಘ ಉಸಿರಾಟದ ಮಹತ್ವವನ್ನು ತೋರಿಸುತ್ತದೆ.ನಿದ್ರಾಹೀನತೆ ಯೋಗಕ್ಕಿಂತ ಉತ್ತಮ ಚಿಕಿತ್ಸೆ ಇನ್ನೊಂದು ಇರಲಾರದು.

          ಒಂದೆರಡು ನಿಮಿಷದ ಧ್ಯಾನದ ತರುವಾಯ ಪ್ರಾಣಾಯಾಮ ಆರಂಭಿಸಬೇಕು. ಧ್ಯಾನದಲ್ಲಿ ಏಕಾಗ್ರತೆ  ಹೊಂದಿಕೊಂಡ ಮನಸ್ಸನ್ನು ಅದೆ ನಿಶ್ಚಲ ಸ್ತಿಥಿಯಲ್ಲಿರಿಸಿ ನಾಲ್ಕೈದು ಬಾರಿ ದೀರ್ಘಶ್ವಾಸ ಏಕ ರೂಪದಲ್ಲಿ ತೆಗೆದು ಕೊಳ್ಳಬೇಕು. ಆರಂಭದಲ್ಲಿ ಶ್ವಾಸ ಒಳಕ್ಕೆಳೆದುಕೊಳ್ಳುವಾಗ ಮನಸ್ಸಿನಲ್ಲೇ ಒಂದು ಏರಡು ಎಂದು ಮನಸ್ಸಿನಲ್ಲೆ ಎಣಿಕೆ ಮಾಡುತ್ತಾ ಉಸಿರು ಬಿಡುವಾಗಲೂ ಅಷ್ಟೇ ಸಂಖ್ಯೆಯನ್ನು ಎಣಿಸಿ ಒಂದೇ ರೀತಿಯ ಸಮಯವನು ಪಾಲಿಸಿಕೊಳ್ಳಬೇಕು. ನಾಲ್ಕೈದು ಬಾರಿಯ ಉಸಿರಾಟದ ಪ್ರಾಣಾಯಮದ ಮೊದಲ ಹಂತ ಆರಂಭವಾಗಿಬಿಡುತ್ತದೆ.

ಕಪಾಲ ಭಾತೀ ಪ್ರಾಣಾಯಾಮ: ಮೊದಲು ನೇರವಾಗಿ ನಿಶ್ಚಲವಾಗಿ ಕುಳಿತು ಭಂಗಿಯಲ್ಲೇ  ಉಸಿರನ್ನು ರಭಸವಾಗಿ ನಾಸಿಕದ ರಂಧ್ರದಿಂದ ಹೊರ ಹಾಕುವುದು. ಉಸಿರನ್ನು ಹೊರಹಾಕುವುದರಲ್ಲೇ ಮನಸ್ಸನ್ನು ಕೇಂದ್ರೀಕರಿಸಬೇಕು. ಒಳಬರುವ ಉಸಿರು ತಾನೇ ತಾನಾಗಿ ಒಳಬರುತ್ತದೆ.ರಭಸದಲ್ಲಿ ಉಸಿರನ್ನು ಉಸಿರನ್ನು ಹೊರ ಹಾಕುವಾಗ ಹೊಟ್ಟೆಯನ್ನು ಒಳಕ್ಕೆ ಎಳೆದುಕೊಂಡರೆ ಉಸಿರನ್ನು ಹೊರಹಾಕುವಾಗ ಬಲ ತುಂಬಲು ಅನುಕೂಲವಾಗುವುದು. ಈ ಪ್ರಕ್ರಿಯೆಯನ್ನು ಇಪ್ಪತ್ತರಿಂದ ಎಷ್ಟು ಸಾಧ್ಯವೋ ಅಷ್ಟು ಬಾರಿ ಮಾಡಿದ ನಂತರ ಉಸಿರನ್ನು ಬಿಗಿ ಹಿಡಿದು ಕೇವಲ ಕುಂಭಕ ಇದು ಒಂದು ಪ್ರಾಣಾಯಾಮ ಉಸಿರನ್ನು ಬಿಗಿಹಿಡಿಯುವುದು.ಇದರಲ್ಲಿ ಉಸಿರು ಒಳಗೂ ಹೊರಗೂ ಹೊಗದೆ ತಟಸ್ಥವಾಗಿರುವುದು ಇದರ ಅವಧಿ ಎರಡು ನಿಮಿಷ ಕಾಲ ಮಾಡಬಹುದು. . ಕಪಾಲ ಭಾತೀ ಪ್ರಾಣಾಯಾಮ ಪರಿಣಾಮದಿಂದ  ಕೇವಲ ಕುಂಭಕವು ಅಪ್ರಯತ್ನವಾಗಿ ಮಾಡಬಹುದು. ಇದನ್ನು ಎರಡರಿಂದ ಮೂರು ಬಾರಿ ಮಾಡಬೇಕು. ಈ ಪ್ರಾಣಾಯಾಮ ಉಸಿರಾಟದ ತಡೆಗಳನ್ನು ನಿವಾರಿಸುತ್ತದೆ ಮಾತ್ರವಲ್ಲ ಶೀತ ನೆಗಡಿ ಖೆಮ್ಮು ಕಫ ಮುಂತಾದ ಹಲವು ಸಮಸ್ಯೆ ನಿವಾರಣಗೆ ಬಹಳ ಅನುಕೂಲವಾಗುವುದು. ನಿಯಮಿತವಾಗಿ ಇದನ್ನು ಮಾಡುತ್ತಿದ್ದರೆ ಶೀತ ಕಫ ಸಂಬಂಧೀ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ.  ಕಪಾಲ ಭಾತಿ ಪ್ರಾಣಾಯಾಮ ಮಾಡಿದೊಡನೆ ಕಫದ ತೊಂದರೆ ಇದ್ದಲ್ಲಿ ಗಂಟಲದ್ವಾರದಲ್ಲಿ  ಕೆಲವೊಮ್ಮೆ ಅದರ ಪ್ರಭಾವ ಅರಿವಿಗೆ ಬರುತ್ತದೆ. ಆವಾಗ ಧೋತಿ ಪ್ರಾಣಾಯಾಮ ಮಾಡಿದಲ್ಲಿ ನಿರಾಳತೆಯ ಅನುಭವವಾಗಿ ಕಪಾಲ ಭಾತಿಯನ್ನು  ಒಂದೆರಡು ಸಲ ದೀರ್ಘ ಶ್ವಾಸೋಚ್ಛಾಸ ಉಸಿರಾಡಿ ಮುಂದುವರೆಸಬಹುದು. ಈ ರೀತಿ ಮಾಡುವುದರಿಂದ ಶೀತ, ಖೆಮ್ಮು , ತಲೆನೋವು ಮುಂತಾದ ಸಮಸ್ಯೆಯಿಂದ ಶಾಶ್ವತವಾಗಿ ದೂರವಾಗಬಹುದು ಮಾತ್ರವಲ್ಲ ಉಸಿರಾಟ ಸರಾಗವಾಗಿ ಮತ್ತು ನಿರಾಳವಾಗಿ ಉಸಿರಾಡುವಲ್ಲಿ ಸಹಾಯಕವಾಗುವುದು.

ಧೌತಿ ಪ್ರಾಣಾಯಾಮ:  ಇದು ಬಹಳ ಸುಲಭವಾಗಿ ಮಾಡಬಹುದಾದ ಪ್ರಾಣಾಯಾಮ ಮಾತ್ರವಲ್ಲ ಅಷ್ಟೇ ಪರಿಣಾಮಕಾರಿ  ಪ್ರಾಣಾಯಾಮ. ಪ್ರಾಣಾಯಾಮದ ಆಸನದಲ್ಲೆ ಕುಳಿತು ಎರಡು ಕೈಯನ್ನು ನೆಲದಲ್ಲಿ ಊರಿ ದೀರ್ಘ ಶ್ವಾಸ ತೆಗೆದು ಕೊಂಡು ಆ ಶ್ವಾಸವನ್ನು ಭಾಯಿ ಮೂಲಕ ಬಲವಾಗಿ ಹೊರ ಹಾಕಬೇಕು. ಮಾತ್ರವಲ್ಲ ಹೀಗೆ ಶ್ವಾಸ ಹೊರಹಾಕುವಾಗ ತಲೆಯನ್ನು ರಭಸದಲ್ಲಿ ಅದಕ್ಕೆ ತಕ್ಕಂತೆ ಬಾಗಿಸಬೇಕು ಹಾಗೆ ಗಂಟಲೊಳಗಿಂದ ರಭಸವಾಗಿ ಗಾಳಿಯನ್ನು ಹೊರಹಾಕಬೇಕು. ಐದಾರು ಬಾರಿ ಈ ಪ್ರಕ್ರಿಯ ಮಾಡುತ್ತಿದ್ದರೆ ಗಂಟಲೊಳಗಿನ ಸಮಸ್ಯೆ ನಮಗರಿವಿಲ್ಲದೇ ಮಾಯವಾಗಿಬಿಡುತ್ತದೆ.

ಶೀತಲೀ ಪ್ರಾಣಾಯಾಮ:  ಪ್ರಾಣಾಯಾಮದಿಂದ ಅಧಿಕ ಉಷ್ನತೆಯ ಅನುಭವಾದಲ್ಲಿ ಈ ಪ್ರಾಣಾಯಾಮ ಮಾಡುವುದು ಬಹಳ ಪರಿಣಾಮಕಾರಿ. ಇದು ಮಾಡುತ್ತಿದ್ದಂತೆ ಬಿಸಿಯಾಗುವ ದೇಹಕ್ಕೆ ತಂಪಾದ ಮತ್ತು ನಿರಾಳತೆಯ ಅನುಭವಾಗಿಬಿಡುತ್ತದೆ. ನಾಲಗೆಯನ್ನು ತುಟಿಯಂಚಿನಲ್ಲಿ ಕೊಳವೆಯಂತೆ ಮಾಡಿ ಆ ನಾಲಿಗೆಯ ಕೊಳವೆಯ ಮುಖಾಂತರ ಶ್ವಾಸವನ್ನು ದೀರ್ಘವಾಗಿ ಒಳಕ್ಕೆಳೆದು ಅದೇರೀತಿ ದೀರ್ಘವಾಗಿ ಮೂಗಿನ ಮೂಲಕ ಬಿಡಬೇಕು. ಐದಾರು ಬಾರಿ ಈ ರೀತಿ ಮಾಡಿದಾಗ,  ಮೂಗಿನಿಂದ ಬಿಡುವ ಆ ಶ್ವಾಸ ತಂಪಾಗಿದ್ದು ದೇಹಕ್ಕೆ ತಂಪಿನ ಅನುಭವವನ್ನು ನೀಡುತ್ತದೆ. ಕಪಾಲಭಾತಿಯಲ್ಲಿ ಉಷ್ಣತೆಯನ್ನು ಹೇಗೆ ಹೆಚ್ಚಿಸುತ್ತೇವೋ ಅದೇ ರೀತಿ ಇದು ಅದಕ್ಕೆ ವಿರುದ್ದವಾಗಿ ದೇಹವನ್ನು ತಂಪಾಗಿಸುತ್ತದೆ. ಒಟ್ಟಿನಲ್ಲಿ ದೇಹದ ಉಷ್ಣತೆಯ ಮಟ್ಟವನ್ನು ಕಾಪಾಡುವಲ್ಲಿ ಬಹಳ ಸಹಾಯಕವಾಗುತ್ತದೆ.

ಈ  ಪ್ರಾಣಾಯಾಮ ಮಾಡುವ ವೇಳೆಗೆ ದೇಹದಲ್ಲಿ ಮನಸ್ಸಿನಲ್ಲಿ ಅಗುವ ಪ್ರಭಾವ ಅದು ಅನುಭವಿಸಿಯೇ ಅರಿಯಬೇಕು. ಮುಂಜಾನೆಯ ಹಿತವಾದ ವಾತಾವರಣ, ತಂಪಾದ ಪ್ರಕೃತಿ ಈಗ ನಮ್ಮ ದೇಹ ಪ್ರಕೃತಿಯ ಸಂವೇದನೆ ಸ್ಪ್ಂದಿಸಿ ಆ ಪ್ರಕೃತಿಯಲ್ಲಿ ಒಂದಾಗತೊಡಗುತ್ತದೆ. ದೇಹ ಮತ್ತು ಮನಸ್ಸಿಗೆ ಆಗುವ ಈ ವಿಶಿಷ್ಟ ಅನುಭವ ಮಾನಸಿಕ ಮತ್ತು ದೈಹಿಕ ಸ್ಥಿತಿಯ ಸತ್ಯದರ್ಶನವನ್ನು ಉಂಟುಮಾಡತೊಡಗುತ್ತದೆ. ನಾವೇನು ನಮ್ಮ ಇರುವಿಕೆ ಎಂದರೇನು . ಆತ್ಮವೆಂದರೇನು ಮುಂತಾದ ಪಾರಮಾರ್ಥಿಕ ದರ್ಶನದ ಹಾದಿಯನ್ನು ತೋರಿಸುತ್ತದೆ. ಆ ಹಾದಿಯನ್ನು ಕ್ರಮಿಸುವುದು ನಮ್ಮ ಪ್ರಯತ್ನವನ್ನು ಅವಲಂಬಿಸಿರುತ್ತದೆ. ನಮ್ಮ ಪ್ರಯತ್ನ ಮತ್ತು ಬದ್ದತೆಗೆ ಅನುಸಾರವಾಗಿ ದರ್ಶನದ ಪ್ರಾಪ್ತಿಯಾಗ ತೊಡಗುತ್ತದೆ. ಇದೇ ಪಾರಾಮಾರ್ಥಿಕ ಬದುಕಿನ ಚಿಂತನೆಯಾಗಬಹುದು.

ವಿಶಿಷ್ಟ ಅನುಭವ ಸೂಚ್ಯವಾಗಿಯೇ ಇಲ್ಲಿಯ ತನಕ ಮನವರಿಕೆಯಾಗತೊಡಗಿದರೆ ಪ್ರಾಣಾಯಾಮದ ಮುರ್ಧನ್ಯತೆಯ ಅನುಭವ ಸಿದ್ದಿಸುವುದು ಅನುಲೋಮ ವಿಲೋಮ ಪ್ರಾಣಾಯಾಮ ಮಾಡಿದಾಗಲೇ. ಇದರಲ್ಲಿ ಹಲಾವಾರು ವಿಧಗಳು ಬಳಕೆಯಲ್ಲಿದ್ದರೂ ಅದರ ಒಂದು ಮಾದರಿ ಹೀಗಿದೆ.

 ಹಲವಾರು ಬಾರಿ ದೀರ್ಘವಾದ ಶ್ವಾಸೋಚ್ಛಾಸ  ಕ್ರಿಯೆಯೂ ಪ್ರಾಣಾಯಾಮ ಅಂತಲೇ ಹೇಳಬಹುದು. ಈ ರೀತಿಯ ಶ್ವಾಸೋಚ್ಛಾಸ ಮಾಡಿ ಬಲಗೈಯ ಹೆಬ್ಬೆರಳಿಂದ ಮೂಗಿನ ಬಲ ಹೊಳ್ಲೆಯನ್ನು ಬಿಗಿಯಾಗಿ ಅದುಮಿ ಹಿಡಿಯಬೇಕು. ಮತ್ತು ಎಡಭಾಗದ ಹೊಳ್ಳೆಯಿಂದ ಸರಾಗಾವಾಗಿ, ಮತ್ತು ಅಡೆ ತಡೆಯಿಲ್ಲದ ನಿರಾಳವಾದ ಗಾಳಿಯನ್ನು ಒಳಕ್ಕೆಳೆದು ಮತ್ತೆ ಅದೇ ಮೂಗಿನಿಂದ ನಿಧಾನವಾಗಿ ಹೊರಗೆ ಬಿಡಬೇಕು. ಹೀಗೆ ಏಳೆಂಟು ಬಾರಿ ಮಾಡಿದಾಗ ತಲೆ ಬುರುಡೆಯ ಬಲಭಾಗದಲ್ಲಿ ವಿಶಿಷ್ಟ  ಸಂವೇದನೆಯ ಅನುಭವಾಗುತ್ತದೆ. ಮಾತ್ರವಲ್ಲ ದೇಹ ತಂಪಾಗತೊಡಗುತ್ತದೆ. ಮನಸ್ಸು ಮತ್ತು ಏಕಾಗ್ರತೆಯತ್ತ ಜಾರಿಕೊಳ್ಳುತ್ತದೆ. ನಮ್ಮ ಎಲ್ಲಾ ಗಮನವನ್ನು ಅದರಲ್ಲಿ ಕೇಂದ್ರಿಕರಿಸಬೇಕು ಇದು ಒಮ್ಮಿಂದೊಮ್ಮೆಲೇ ಸಿದ್ದಿಸುವಂತಹುದಲ್ಲವಾದರೂ ಅಸಾಧ್ಯವಾದುದಂತೂ ಅಲ್ಲವೇ ಅಲ್ಲ. ಏಕಾಗ್ರತೆ ಎಂದರೇನು ಎಂಬುದರ ನಿಜ ಅರಿವಾಗುವುದು ಈಗಲೇ. ಐದಾರು ಇದೇ ರೀಗಿ ಶ್ವಾಸೋಚ್ಛಾಸ ಮಾಡಿದ ನಂತರ ಕೈಯನ್ನು ಕೆಳಗಿರಿಸಿ ಚಿನ್ಮುದ್ರೆಯಲ್ಲಿ ನಾಲ್ಕೈದು ಬಾರಿ ದೀರ್ಘಶ್ವಾಸವನ್ನು ಎರಡು ಮೂಗಿನ ಹೊಳ್ಳಗಳಿಂದ ಉಸಿರಾಡಿ ಮೊದಲಿನ ಪ್ರಕ್ರಿಯನ್ನು ಸರೀ ವಿರುದ್ಧವಾಗಿ ಅಂದರೆ ಮೂಗಿನ ಬಲ ಹೊಳ್ಳೆಯಿಂದ  ಗಾಳಿಯನ್ನು ಒಳಕ್ಕೆಳೆದು ಅದೇದ್ವಾರದಲ್ಲೇ ಪುನಃ ಹೊರಬಿಡಬೇಕು. ಈಗ ಮೊದಲಿನ ಕ್ರಮಕ್ಕೆ ವಿರುದ್ದವಾದ ಅನುಭವ ಆಗತೊಡಗುತ್ತದೆ. ತಲೆಯ ಎಡಭಾಗದಲ್ಲಿ ಸಂವೇದನೆ ಉಂಟಾಗತೊಡಗುತ್ತದೆ. ದಿನಾ ನಿರಂತರವಾಗಿ ಮಾಡುತ್ತಿದ್ದಂತೆ ನಮ್ಮ ಶ್ವಾಸನಾಳ ತೆರೆದುಕೊಂಡು ಅಗಲವಾಗುತ್ತಿರುವ ಅನುಭವಾಗುತ್ತದೆ.  ಮೊದಲಿನ ಪ್ರಾಣಾಯಾಮ ಅನುಲೋಮ ಎಂದು ಅದಕ್ಕೆ ವಿರುದ್ಧವಾದದ್ದು ವಿಲೋಮ ಎಂದು ಕರೆಯುತ್ತಾರೆ. ಹೀಗೆ ಅನುಲೋಮ ವಿಲೋಮ ಪ್ರಾಣಾಯಾಮ ವಾದನಂತರ  ಪ್ರಾಣಾಯಾಮದ ಅಂತಿಮ ಹಂತಕ್ಕ್ ಮತ್ತು ಆಷ್ಟೆ ಪರಿಣಾಮಕಾರೀ ಭಾಗಕ್ಕೆ ಹೋಗಬೇಕು. ಕ್ರಮವಾಗಿ ದೀರ್ಘವಾದ ಶ್ವಾಸ ಐದಾರು ಬಾರಿ ಮಾಡಿ ಎಡ ಮೂಗಿನ ಹೊಳ್ಳೆಯಿಂದ ಗಾಳಿಯನ್ನು ಒಳಕ್ಕೆ ಎಳೆದು ಬಲ ಮೂಗಿನ ಹೊಳ್ಳೆಯಿಂದ ಹೊರಬಿಡಬೇಕು. ಮತ್ತದೇ ದ್ವಾರದಿಂದ ಶ್ವಾಸ ಒಳಕ್ಕೆಕೆಳೆದು ಎಡಭಾಗದ ಹೊಳ್ಳೆಯಿಂದ ಹೊರ ಬಿಡಬೇಕು. ಇದೇಕ್ರಮವನ್ನು ಹತ್ತರಿಂದ ಹನ್ನೆರಡು ಮಾರಿ ಮಾಡಬೇಕು. ಮನಸ್ಸನ್ನು ಕೇಂದ್ರಿಕರಿಸಿ ಅಡೆತಡೆ ಯಿಲ್ಲದೆ ಉಸಿರಾಡಬೇಕು. ಅಲುಗಾಡದೆ ನೆಟ್ಟಗೆ ಶರೀರವನ್ನು ಸೆಟೆದು ಕುಳಿತು ಈ ಪ್ರಾಣಾಯಾಮ ಮಾಡಿದಲ್ಲಿ ಇದರ ಪರಿಣಮ ಅತ್ಯಂತ ಪ್ರಭಾವಕಾರಿಯಾಗಿರುತ್ತದೆ. ಮೂಗಿನ ಅಡೆತಡೆ ನಿವಾರಣೆಯಾಗುವುದು ಮಾತ್ರವಲ್ಲ ದೇಹಾದ್ಯಂತ ಹೊಸ ಚೈತನ್ಯ ಹುಟ್ಟಿಕೊಳ್ಳುತ್ತದೆ. ನಿರಂತರ ಪ್ರಾಣಾಯಾಮ ಮಾಡಿದೊಡನೆ ಜೀರ್ಣಶಕ್ತಿಯ ವೃದ್ಧಿಯಾದುದಕ್ಕೆ ಪುರಾವೆ ಎಂಬಂತೆ ಬಾಯಾರಿಕೆ ಅಧಿಕವಾಗತೊಡಗುತ್ತದೆ. ಅಧಿಕವಾಗಿ ನೀರು ತನ್ನಿಂತಾನಾಗಿ ದೇಹವನ್ನು ಸೇರುತ್ತದೆ. ತುಂಬ ಸರಳವಿಧಾನದಿಂದ ಎಂತಹ ಅದ್ಭುತ ಪರಿಣಾಮ.!!! ಅತ್ಯಂತ ಸರಳವಾದ ಪ್ರಾಣಾಯಾಮದ ಕ್ರಮವಿದು.

ಭ್ರಾಮರೀ ಪ್ರಾಣಾಯಾಮ: ಇದು ಭ್ರಮರದಂತೆ ಅದೇ ತತ್ವವನ್ನು ಅನುಸರಿಸಿ ಇರುವ ಪ್ರಾಣಾಯಾಮ. ನೆಟ್ಟಗೆ ಸ್ಥಿರವಾಗಿ ಕುಳಿತು ಎರಡೂ ಕೈ ತುದಿಯಿಂದ ಎರಡು ಕಣ್ಣನ್ನು  memmmಮುಚ್ಚಿ ಹಿಡಿದು ಕೊಳ್ಳಬೇಕು. ಕೈ ಹೆಬ್ಬೆರಳಿಂದ ಕಿವಿಯನ್ನು ಬಲವಾಗಿ ಮುಚ್ಚಿಕೊಳ್ಳಬೇಕು. ಶ್ವಾಸ ಒಳಕ್ಕೆಳೆದು ಬಿಡುವಾಗ ಕಿವಿ ಮೇಲಿನ ಹೆಬ್ಬೆರಳನ್ನು ಬಿಗಿಗೊಳಿಸುತ್ತಾ ಮೂಗಿನಲ್ಲಿ ಭ್ರಮರದಂತೆ , ಅನುಸ್ವರದಲ್ಲಿ ಶಬ್ದವನ್ನುಂಟು ಮಾಡುತ್ತಾ ಉಸಿರನ್ನು ನಿಧಾನವಾಗಿ ಬಿಡಬೇಕು ಹತ್ತರಿಂದ ಹನ್ನೆರಡು ಬಾರಿ ಮೂರು ನಾಲ್ಕು ನಿಮಿಷಗಳ ಕಾಲ ಈ ಪ್ರಾಣಾಯಾಮ ಮಾಡಬೇಕು. ನಂತರ ನಿಧಾನವಾಗಿ ಕಣ್ಣು ಕಿವಿಯಿಂದ ಕೈತೆಗೆಯುತ್ತಿದ್ದಂತೆ ಅದ್ಭುತ ದಿವ್ಯದರ್ಶನ ಅನುಭವವಾಗುತ್ತದೆ. ಶ್ವಾಸ ನಿರಾಳವಾಗುತ್ತಾ ಸಂಪೂರ್ಣ ದೇಹ ಹಗುರವಾದ ಅನುಭವಾಗುತ್ತದೆ. ಕುಳೀತ ಭಂಗಿಯಲ್ಲಿ ನೆಟ್ಟಗೆ ಅದೇ ಭಂಗಿಯನ್ನು ಮುಂದುವರೆಸಿ ಬಿಗಿಯಾಗಿ ಚಿನ್ಮುದ್ರೆಯನ್ನು ಬಲಗೊಳಿಸುತ್ತಾ ಮನಸ್ಸನ್ನು ವಿಚಿತ್ರ ಅನುಭವದಲ್ಲೇ ಲೀನ ಗೊಳಿಸಬೇಕು. ಹೆಬ್ಬೆರಳು ಮತ್ತು ತೋರುಬೆರಳಿನ ಹಿಡಿತ ಬಿಗಿಯಾಗಿಸುತ್ತ ಹೋದಂತೆ ದೇಹವಿಡೀ ಸುಖ ಚೈತನ್ಯದ ಉತ್ಪತ್ತಿಯಾದಂತೆ ದೇಹ ಆತ್ಮ ಪ್ರಕೃತಿಯಲ್ಲಿ ಲೀನವಾದ ಅನುಭವಾಗತೊಡಗುತ್ತದೆ. ಇದು ಸಾಮಾನ್ಯವಾಗಿ ಯಾರೂ ಮಾಡಬಹುದಾದ ಪ್ರಾಣಾಯಾಮ. ನಮ್ಮ ದೇಹದಲ್ಲಿ ಸಂಚರಿಸುವ ಪ್ರಾಣವಾಯುವಿಗೆ ನಿತ್ಯವೂ ಹೊಸ ಆಯಾಮವನ್ನೆ ಉಂಟುಮಾಡುವ ಪ್ರಕ್ರಿಯೆ ಇದು. 

3 comments:

 1. ಪ್ರಾಣಾಯಾಮದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದೀರಿ ಸರ್, ಧನ್ಯವಾದಗಳು.

  ReplyDelete
  Replies
  1. pranayam ondu sahaj hgoo sralavad vidhanvagiddu,ellarigoo upayuktavadudagide.pranayam madi ellaroo nirogigalagbekendu ashisuttene

   Delete
 2. ತುಂಬಾ ಧನ್ಯವಾದಗಳು ಗುರುಗಳೆ..

  ReplyDelete