Sunday, February 21, 2016

ಅ-ತಿಥಿ ಸತ್ಕಾರ

           ಇಂದು ಯಾವುದೇ ಮದುವೆಗೆ ಹೋಗಲಿ. ವಧೂವರರಿಗೆ ಶುಭ ಹಾರೈಸಿದ ಮೇಲೆ ಯಜಮಾನ ಅಥವಾ ಮನೆಯವರು ಮೊದಲು ಹೇಳುವ ಮಾತಿದೆ "ಊಟ ಮಾಡಿ ಹೋಗಿ".  ಹೌದು,  ಹಲವು ಸಲ ಊಟವೇ ಪ್ರಧಾನವಾಗಿಬಿಡುತ್ತದೆ. ಊಟ ಉಂಟು ಅಂತ ನಮ್ಮ ಬಾಲ್ಯದ ಬಡತನದಲ್ಲಿ  ಒಂದೂರಿಂದ ಇನ್ನೊಂದೂರಿಗೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದುದು ನೆನಪಾಗುತ್ತಿದೆ. ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಎನ್ನುವುದು ಅದಕ್ಕೆ ಅಲ್ಲವೇ. 

ಇಂದು ಯಾವುದೇ ಕಾರ್ಯಕ್ರಮವಿರಲಿ ಊಟೋಪಚಾರ ಎಂಬುದು ಪ್ರಧಾನವಾದ ಅವಿಭಾಜ್ಯ ಅಂಗ. ಮದುವೆ ಮುಂಜಿ ಯಾವುದೇ ಕಾರ್ಯವಿರಲಿ ಅತಿಥಿಗಳನ್ನು ಹೊಟ್ಟೆ ತುಂಬಿಸಿ  ಸತ್ಕರಿಸುವುದು ಅವಿಭಾಜ್ಯ ಅಂಗವಾಗಿದೆ. ಆದರೆ ಈಗೀಗ ಬಂದ ಅತಿಥಿಗಳ ಹೊಟ್ಟೆ ತುಂಬುಸಿ ಬಿಡುವುದಷ್ಟಕ್ಕೇ ಇದು ಸೀಮಿತವಾಗುವುದು ನಿಜಕ್ಕೂ ಖೇದನೀಯ. ಅತಿಥಿಯಾದವನು ತಮ್ಮ ಮನೆಯ ಕಾರ್ಯಕ್ರಮಕ್ಕೆ ನಿಮಿತ್ತವಾಗಿ ಮನೆಯಿಂದ ಹೊರಟಮೇಲೆ ಪುನಃ ಮನೆಗೆ ಸುಕ್ಷೇಮವಾಗಿ ತಲಪುವವರೆಗೂ ಆ ಕಾರ್ಯಕ್ರಮದ ಗುಣಾವಗುಣ ಅವಲಂಬಿಸಿದೆ ಎಂದು ಬಹಳಷ್ಟು ಮಂದಿ ಯೋಚಿಸುವುದಿಲ್ಲ. ಬಂದವರಿಗೆ ಅದ್ಧೂರಿತನದ ಭೂರೀ ಭೋಜನವನ್ನು ಕೊಡುವುದಷ್ಟೇ ಹೆಗ್ಗಳಿಕೆಯಾಗಿದೆ. ಹಾಗೆ ನೋಡಿದರೆ ತಿಂದುಂಡ ಆಹಾರ ಯಾವ ಪರಿಣಾಮ ಬೀರಿದೆ ಇದು ಮುಖ್ಯವಾಗುತ್ತದೆ.  ಕಾರ್ಯಕ್ರಮ ಅದ್ದೂರಿ ಆಡಂಬರದತ್ತ ದೃಷ್ಟಿ ಬೀರುವಾಗ ಬಹಳ ಅರ್ಥಪೂರ್ಣವಾದ ವಿಷಯ ನಮ್ಮ ನೆನಪಿಗೆ ಬರುವುದೇ ಇಲ್ಲ. 

ಸಾಮಾನ್ಯವಾಗಿ ಯಾವುದೇ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಹೋದಾಗ ಹಲವರು ಕುತೂಹಲಕ್ಕೆ ಅಡುಗೆ ಕೋಣೆಯತ್ತ ಒಂದು ಸಲ ಇಣುಕು ನೋಟ ಬೀರುವುದು ಸಹಜ. ನಾನೂ ಅಷ್ಟೇ ಒಂದು ಸಲ ಅಡುಗೆ ಮನೆಯನ್ನು ಅವಲೋಕಿಸುವ ಅಭ್ಯಾಸ ಇರಿಸಿಕೊಂಡಿದ್ದೇನೆ. ಇದು ಅಲ್ಲಿ ಯಾವ ಆಹಾರ ಭಕ್ಷ್ಯ ತಯಾರಗುತ್ತದೆ ಎಂಬ ಕುತೂಹಲದಿಂದ ಎಂದು ಕೊಂಡರೆ ಅದು ತಪ್ಪು. ಅಡುಗೆ ಶಾಲೆಯ ವ್ಯವಸ್ಥೆ ಹೇಗಿದೆ ಎಂಬುದಷ್ಟೇ ಅವಲೋಕನದ ಉದ್ದೇಶ. 

ಹೀಗೆ ಅವಲೋಕನದಲ್ಲಿ ಇತ್ತೀಚೆಗೆ ಬಹಳಷ್ಟು ಗಾಬರಿಯಾಗುವಂತಹ ವಿಚಾರಗಳು ಕಣ್ಣಿಗೆ ಬೀಳುವುದು ಸಹಜವಾಗಿಬಿಟ್ಟಿದೆ.  ಒಂದು ನಗರದಲ್ಲಿನ ಮದುವೆಗೆ ಹೋಗಿದ್ದೆ. ಅಡುಗೆ ಸಿದ್ದತೆ ಬಹಳ ಜೋರಾಗಿಯೇ ಇತ್ತು. ಹತ್ತೆಂಟು ಬಾಣಸಿಗರು  ಅಡುಗೆಯ ರುಚಿಕಟ್ಟಿನ ಬಗ್ಗೆ ಟೊಂಕ ಕಟ್ಟಿ ಬೆವರು ಸುರಿಸುತ್ತಿದ್ದರು.  ಈ ಮಧ್ಯೆ ನೋಡುತ್ತಿದ್ದೆ. ತರಕಾರಿ ಹಚ್ಚುವವರು ಅದು ಸೊಪ್ಪು ಕಾಯಿ ಪಲ್ಲೆ ಯಾವುದನ್ನೂ ತೊಳೆಯದೆ ಯಥಾರೀತಿ ಕತ್ತರಿಸಿ ಪೇರಿಸುತ್ತಿದ್ದರು. ಆಚ್ಚರಿಯಿಂದಲೂ ಗಾಬರಿಯಿಂದಲೂ ನಾನು ಕಳವಳಿಸಿ ಹೋದೆ.  ಸೌತೆ ಯಾಗಿರಬಹುದು ಬೆಂಡೆ ಯಾಗಿರಬಹುದು ಮಾಗಿದ ಟೊಮೆಟೊ ವಾಗಿರಬಹುದು ಬುಟ್ಟಿ ಚೀಲಗಳಿಂದ ಯಥಾವತ್ತಾಗಿ ಕತ್ತರಿಸಲ್ಪಟ್ಟು ಪಾತ್ರೆಯನ್ನು ಸೇರುತ್ತಿದ್ದವು. ಹೋಗಲಿ ಅತ್ತ ಅನ್ನಮಾಡುತ್ತಿರುವವರು ಅಕ್ಕಿಯನ್ನು ತೊಳೆಯದೇ ಹಾಗೆಯೇ ಕುದಿವ ನೀರಿಗೆ ಸಹಜವೆಂಬಂತೆ ಗೋಣಿಯಿಂದ ಸುರಿಯುತ್ತಿದ್ದರು.  ಒಂದು ಸಲ ಅಲ್ಲಿದ್ದ ಒಬ್ಬರಲ್ಲಿ ತಡೆಯದೇ ಕೇಳಿಬಿಟ್ಟೆ....  ಇತ್ತೀಚೆ ಸಿದ್ದ ತರಕಾರಿ ಆಹಾರವಸ್ತುಗಳು ಮಾರುಕಟ್ಟೆಯಲ್ಲಿ ಸಿಗುವುದು ಸಾಮಾನ್ಯ. ದೋಸೆ ಹಿಟ್ಟು, ಸಿಪ್ಪೆ ತೆಗೆದ ಈರುಳ್ಳಿ ಬೆಳ್ಳುಳ್ಳಿ....ಹೀಗೆ    ತರಕಾರಿ ಅಕ್ಕಿ ತೊಳೆಯುವ ಅಗತ್ಯ ಇಲ್ಲಂತ ಕಾಣ್ತದೆ. ಆತ ವಿಚಿತ್ರವಾಗಿ ನೋಡಿದ. 

ಒಂದು ಸಲ ನಗರದ ಕೇಂದ್ರ ಮಾರುಕಟ್ಟೆಗೆ ಭೇಟಿಕೊಡಿ. ಅದು ಯಾವ ನಗರವಾದರೂ ಪರವಾಗಿಲ್ಲ. ಬೆಂಗಳೂರಿನ ಕೆ. ಆರ್ ಮಾರುಕಟ್ಟೆಯಾದರೆ ಉತ್ತಮ. ತರಕಾರಿ ಸೊಪ್ಪು ಪಲ್ಲೆಗಳನ್ನು ಅಲ್ಲಿ ರಾಶಿ ಹಾಕುವುದನ್ನು ನೋಡಿ. ಅದನ್ನು ಹಾಗೇ ತೊಳೆಯದೆ ತಿನ್ನುವುದನ್ನು ಕಲ್ಪಿಸುವುದೇ ಹೇಸಿಗೆಯಾಗಿಬಿಡುತ್ತದೆ. ಕಾಲೂರುವುದಕ್ಕೂ ಹೇಸುವಂತಹ ಸ್ಥಳದಲ್ಲಿ ಪೇರಿಸಿದ ತರಕಾರಿ ಹಾಗೆಯೇ ನಮ್ಮ ಉದರಸೇರುತ್ತದೆ ಎಂದಾದರೆ ಇದರಲ್ಲಿ ಉದರ ಶಮನ ಎಂಬುದು ಯಾವ ರೀತಿಯದ್ದಾಗಿರಬಹುದು? 

ಇಂದು  ಹೆಚ್ಚಿನ ಎಲ್ಲಾ ನಗರಗಳ ಹೆಚ್ಚಿನ ಎಲ್ಲ ಕಲ್ಯಾಣಮಂಟಪಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಇದರಲ್ಲೂ ನೀರಿಗೆ ಕ್ಷಾಮವಿದ್ದರಂತೂ ಕೇಳುವುದೇ ಬೇಡ.  ಹಳ್ಳಿಗಳಲ್ಲಿ ಕಾರ್ಯಕ್ರಮ ವಾದರೆ ...ನಮ್ಮ ಊರಲ್ಲಿ ತರಕಾರಿ ಹೆಚ್ಚುವುದು ಮುಂತಾದ ಸಹ ಕೆಲಸಗಳನ್ನು ಮನೆಯವರೇ ಸೇರಿ ಮಾಡಿಕೊಡುತ್ತಾರೆ. ಹಾಗಾಗಿ ಅಂತಹ ಕಡೆಯಲ್ಲಿ ಸ್ವಚ್ಛತೆಯ ಬಗ್ಗೆ ಕಾಳಜಿ ಇರುತ್ತದೆ. ಆದರೆ ಅತೀ ಸಣ್ಣ ನಗರದಲ್ಲೂ ಎಲ್ಲವನ್ನೂ ಗುತ್ತಿಗೆ ಆಧಾರದಲ್ಲಿ ಸಿದ್ಧ ಪಡಿಸುವಾಗ ಈ ಸ್ವಚ್ಛತೆ ಎಂಬುದು ಅನಿವಾರ್ಯ ಎಂದನಿಸುವುದೇ ಇಲ್ಲ. ಹಾಗಾಗಿ ಇಂದು ವಿಷಾಹಾರಸೇವನೆ ಪ್ರಕರಣ ಮಾಮೂಲು ಎಂಬಂತಾಗಿದೆ.  ಅದು ಕಾರ್ಯಕ್ರಮದ ಆಡಂಬರ ಹೆಚ್ಚಿದಷ್ಟು ಸ್ವಚ್ಛತೆಯ ಗುಣಮಟ್ಟ ಕಳಪೆಯಾಗುತ್ತಾ ಸಾಗುವುದು ವಿಚಿತ್ರ ಎನ್ನಬೇಕು.  ಅದ್ಧೂರಿತನಕ್ಕೆ ವ್ಯಯಿಸುವ ಸ್ವಲ್ಪ ಭಾಗವೂ ಸ್ವಚ್ಛತೆಗೆ ವ್ಯಯವಾಗುವುದಿಲ್ಲ ಎಂದಾದರೆ ಅದನ್ನು ಅತಿಥಿ ಸತ್ಕಾರ ಎನ್ನಬೇಕೆ? 

ಹಾಗಾಗಿ ಒಂದು ಕಳಕಳಿ, ಮನೆಯವರು ಬಂದ ಅತಿಥಿಗಳನ್ನು ಊಟ ಮಾಡಿ ಹೋಗಿ ಎನ್ನುವಲ್ಲಿನ  ಕಾಳಜಿಯನ್ನು ಅಡುಗೆ ಕೋಣೆಯತ್ತವೂ ಹರಿಸುವುದು ಅತೀ ಅಗತ್ಯ. ಅದು ನಿಜ ಅರ್ಥದಲ್ಲಿ ಅತಿಥಿ ಸತ್ಕಾರವಾದೀತು. ಇಲ್ಲವಾದರೆ ಅತಿಥಿ ದೇವೋಭವ ಎನ್ನುವುದು ಕೇವಲ ನಾಮ ಫಲಕಕ್ಕಷ್ಟೇ ಸೀಮಿತವಾಗಬಹುದು.  ತೊಳೆಯದೇ ಹಾಕಿದ ಅಕ್ಕಿಯನ್ನು ನೈವೇದ್ಯ ಎಂದು ಬಳಸುವ ಪರಿಪಾಠವಿದೆ. ಅದಕ್ಕಾಗಿಯೇ ಅನ್ನಬ್ರಹ್ಮ ಎಂದು ಪೂಜ್ಯನೀಯ ಭಾವನೆಯಲ್ಲಿ ಕಾಣುತ್ತೇವೆ. ಇದೇ ಅನ್ನವನ್ನು ವಿಷವಾಗಿಸಿ ವಮನ ಮಾಡುವ ಅಗತ್ಯವಿದೆಯೇ? 

No comments:

Post a Comment