ಮುಳ್ಳು ಸೌತೆ ಕರ್ಮಣೆ (ಎಳೇ ಸೌತೆ ತಂಬುಳಿ)
ಬೇಸಿಗೆ ಬಿರು ಬಿಸಿಲ ತಾಪಕ್ಕೆ ಮಧ್ಯಾಹ್ನದ ಭೋಜನವೆಂದರೆ ಹಲವು ಸಲ
ಶಿಕ್ಷೆಯಂತೆ ತೋರುವುದುಂಟು. “ ಅಬ್ಬಾಅ ಈ ಸೆಕೆ ಎಂತದೂ ಬೇಡಪ್ಪಾ ನೀರು ಕುಡಿದೇ ಹೊಟ್ಟೆ ತುಂಬಿತು ಹಸಿವಿಲ್ಲ” ಎಂಬ ರಾಗದ ನಡುವೆ ಮಧ್ಯಾಹ್ನ ಊಟದ ತಟ್ಟೆಯ ಹತ್ತಿರ
ಕುಳಿತಾಗ ಬಹಳ ಖಾರವಾದ ಬಿಸಿಯಾದ ಸಾಂಬಾರ್ ಅಥವಾ ಇನ್ನಿತರ ಖಾದ್ಯಗಳನ್ನು ಕಂಡು ಮತ್ತಷ್ಟು
ನಿರುತ್ಸಾಹ ಮೂಡುತ್ತದೆ. ಹೇಗಾದರೂ ಊಟದ ಶಾಸ್ತ್ರ ಮುಗಿಸಿ ಎದ್ದರಾಯಿತು ಎಂದು ಹಸಿದಿರದ
ಹೊಟ್ಟೆಗೆ ಮತ್ತಷ್ಟು ತುಂಬಿಸಿ ಹೊಟ್ಟೆ ಮೇಲೆ ಕೈಯಾಡಿಸಿ ಏಳುವುದಿದೆ. ಇಂತಹ ಸಮಯದಲ್ಲಿ ಕಣ್ಣನ್ನೂ ಮನಸ್ಸನ್ನೂ ತಂಪಾಗಿಸುವ
ವಿಭವ ಮಧ್ಯಾಹ್ನದ ಭೋಜನಕ್ಕೆ ಇದ್ದರೆ ಹಸಿವಿಲ್ಲದ ಹೊಟ್ಟೆಯಲ್ಲು ತೃಪ್ತಿಯ ತೇಗು ಬರಿಸಬಹುದು.
ಅಂತಹ ಒಂದು ಖಾದ್ಯವೇ “ ತವಶಾ ಕರ್ಮಣೆ.....ಮುಳ್ಳು ಸೌತೆ ಕರ್ಮಣೆ”
ಇದೊಂದು ಕರಾಡ ಬ್ರಾಹ್ಮಣರ ವಿಶೇಷ ಪಾಕಗಗಳಲ್ಲಿ ಒಂದು. ಈಗ ಎಲ್ಲ ಮನೆಗಳಲ್ಲೂ
ಇದು ಊಟದ ಒಂದು ಅಂಗವಾಗಿದೆ. ಕೇವಲ
ಹತ್ತಿಪ್ಪತ್ತು ನಿಮಿಷದಲ್ಲಿ ಬೆಂಕಿಇಲ್ಲದೇ ತಯಾರಿಸಬಲ್ಲ ಈ ಅದ್ಭುತ ಖಾದ್ಯ ಮೆಚ್ಚದವರು ಇಲ್ಲ. ಈ
ಬಿಸಿಲ ಝಳಕ್ಕೆ ಹೇಳಿ ಮಾಡಿಸಿದಂತಹ ಭೋಜನವಸ್ತುವಿದು. ಇದನ್ನು ಮಾಡುವ ವಿಧಾನ.
ಒಂದು ಮುಳ್ಳು ಸೌತೆ (ಎಳೆ ಸೌತೆ) ತುರಿಯಬೇಕು. ತುರಿಯುವುದರಿಂದಲೂ
ಇದನ್ನು ಸೂಕ್ಷ್ಮವಾಗಿ ಕೊಚ್ಚುವುದು ರುಚಿಗೆ ಅತಿ ಸೂಕ್ತ. ತುರಿದಾಗ ನೀರು ಬೇರೆ
ಯಾಗಿಬಿಡುವುದರಿಂದ ರುಚಿಗೆ ಅದು ಸೂಕ್ತವಲ್ಲ. ಆದರೂ ಅಭಿರುಚಿ ಮತ್ತು ಸಮಯಕ್ಕೆ ಅನುಸಾರವಾಗಿ
ಮಾಡಿಕೊಳ್ಳಬಹುದು.
ಹೀಗೆ ಕೊಚ್ಚಿದ ಸೌತೆಗೆ ರುಚಿಗೆ ತಕ್ಕ ಉಪ್ಪು ಮತ್ತು ಕಾಯಿ ಮೆಣಸು ಹಿಸುಕಿ ಮಿಶ್ರಮಾಡಿ ಇಟ್ಟುಕೊಳ್ಳಬೇಕು. ನಂತರ ಒಂದು ಸಾಧಾರಣ
ಗಾತ್ರದ ಸೌತೆಗೆ ಒಂದು ಅರ್ಧ ತೆಂಗಿನಕಾಯಿ ನುಣ್ಣಗೆ ಅರೆದು ಅದಕ್ಕೆ ಒಂದಷ್ಟು ಹುಳಿ ಮಜ್ಜಿಗೆ
ಯನ್ನು ಸೇರಿಸಿ ಎಲ್ಲವನ್ನು ಸೌತೆ ಮಿಶ್ರಣಕ್ಕೆ ಬೆರಸಬೇಕು. ನಂತರ ಇದಕ್ಕೆ ಒಗ್ಗರಣೆ ಹಾಕಬೇಕು.
ಒಗ್ಗರಣೆಗೆ ಸಾಸಿವೆ ಒಣಮೆಣಸು ಒಂದೆರಡು ತುಂಡು ಹಾಕಿ ಸಾಸಿವೆ ಸಿಡಿದ ಸ್ವಲ್ಪ ಮೇಲೆ ಕರಿಬೇವು ಹಾಕಬೇಕು.
ತಣ್ಣಗಿನ ತಂಪಾದ ಈಗ ತವಶಾ ಕರ್ಮಣೆ......ಸಿದ್ದ.
ಮಧ್ಯಾಹ್ನದ ಬಿಸಿಲ ಬಿಸಿಗೆ ತಂಪಾದ ಈ ಊಟ ಸವಿಯುವುದೇ ಒಂದು ಮಜ. ಇದಕ್ಕೆ ಮಿಡಿ ಉಪ್ಪಿನಕಾಯಿ, ಬೆಂಡೆಕಾಯಿ ಅಥವಾ ಅಲಸಂಡೆ ಪಲ್ಯ ವಿದ್ದರೆ ಕೇಳುವುದೇ
ಬೇಡ ಒಂದು ಸೇರು ಅನ್ನ ಖಾಲಿ ಸಂಶಯವಿಲ್ಲ.
ಇದನ್ನು ತೆಂಗಿನ ಕಾಯಿ ಹಾಲಿನಿಂದಲೇ ತಯಾರಿಸುತ್ತಿದ್ದರು . ಅದನ್ನು
ನೆನಸಿಕೊಂಡರೆ ಬಾಯಿಯಲ್ಲಿ ನೀರು ಸುರಿಯುತ್ತದೆ.
No comments:
Post a Comment