ಫೇಸ್ ಬುಕ್ ಗಳಲ್ಲಿ ಅಥವಾ ಬ್ಲಾಗ್ ಗಳಲ್ಲಿ ಹಾಗೇ ನನ್ನ ಅನಿಸಿಕೆಗಳನ್ನು ಬರೆಯುವುದು ನನ್ನ ಹವ್ಯಾಸ. ಇವುಗಳು ಬದುಕಿನ ಸಹಚರನಿದ್ದಂತೆ. ಯಾರು ಓದುತ್ತಾರೋ ಇಲ್ಲವೋ ಎಂಬ ನಿರೀಕ್ಷೆಗಳಿಲ್ಲಿ ಇರುವುದಿಲ್ಲ. ಕೇವಲ ಗುಡ್ಡದ ತುದಿಯಲ್ಲಿ ನಿಂತು ಮನ ಬಿಚ್ಚಿದ ಮಾತುಗಳಂತೆ. ಸ್ನಾನದ ಕೋಣೆಯಲ್ಲಿ ಹಾಡುವ ಹಾಡುಗಳಂತೆ. ಅಲ್ಲಿ ಕೇಳುಗನ ಸ್ಥಾನ ಕೇವಲ ಗೌಣವಾಗಿರುತ್ತದೆ. ಹಾಗೇ ನನ್ನ ಅನಿಸಿಕೆಗಳನ್ನು ಓದಿದ ಮಿತ್ರರೊಬ್ಬರು ಕೇಳಿದರು. " ಬರವಣಿಗೆ ಚೆನ್ನಾಗಿದೆ. ಇದೆಲ್ಲ ಹೇಗೆ ಬರೆಯುತ್ತೀರಿ? " ಎಂದು. ನಾನಂದೆ ನಾನು ಜೀವನದ ಪ್ರತಿಕ್ಷಣಗಳನ್ನು ನೋಡುವ ದೃಷ್ಟಿಕೋನವೇ ಹಾಗೆ. ಯಾಕೋ ಹಲವು ಕ್ಷಣಗಳಲ್ಲಿ ನನ್ನದೇ ಆದ ಹಲವು ಚಿಂತನೆಗಳು ಯೋಚನೆಗೆ ಬರುತ್ತವೆ. ಅದನ್ನು ಹಾಗೇ ಭಾಷೆಯ ರೂಪಕ್ಕೆ ಇಳಿಸಿ ಬರೆದು ಬಿಡುವುದು. ಯಾರಿಗೂ ತೊಂದರೆಯಾಗದೇ ಮನಸ್ಸಿಗೆ ನೋವುಂಟು ಮಾಡದ ಕಾಳಜಿಯಲ್ಲಿ ಅನಿಸಿಕೆಗಳು ವ್ಯಕ್ತವಾಗುತ್ತವೆ. ಇದಕ್ಕೆ ಪುಷ್ಟಿಕೊಡುವಂತೆ ಒಂದು ಘಟನೆ ಇದು.
ಅಂದು ನಾನು ಬೆಂಗಳೂರಿನಿಂದ ನನ್ನೂರಿಗೆ ಅಂದರೆ ಮಂಗಳೂರಿಗೆ ಹೋಗುವುದಕ್ಕೆ ರೈಲನ್ನು ಏರಿದೆ. ನನ್ನ ಆಸನ ಹುಡುಕುತ್ತಾ ಬ್ಯಾಗ್ ಹೆಗಲಿಗೇರಿಸಿ ಒಂದು ಭೋಗಿಯ ಈ ತುದಿಯಿಂದ ಆತುದಿಗೆ ಹೋಗುತ್ತಿದ್ದೆ. ಸಾಮಾನ್ಯವಾಗಿ ರೈಲಿನಲ್ಲಿ ಬದಿಯ ಆಸನವನ್ನೇ ಹೆಚ್ಚಾಗಿ ನಾನು ಆರಿಸುವುದು. ಬಹಳ ಸೌಕರ್ಯವನ್ನು ಅದರಲ್ಲಿ ಕಾಣುತ್ತೇನೆ. ಹಾಗೆ ಅರಸುತ್ತಾ ಮುಂದೆ ಹೋದಾಗ ನನಗೆ ಮೀಸಲಿರಿಸಿದ ಆಸನ ಸಿಕ್ಕಿತು. ಆದರೆ ಅಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಕುಳಿತು ದೇವರ ಪ್ರಾರ್ಥನೆ ಮೌನವಾಗಿ ಸಲ್ಲಿಸುತ್ತಿದ್ದಳು. ರೈಲಿನ ಪ್ರಯಾಣಿಸುವ ಇತರ ಯಾತ್ರಿಕರು ಅವರವರ ಪಾಡಿಗೆ ಅವರಿದ್ದರು. ಮಹಿಳೆ ಮೌನವಾಗಿ ಪ್ರಾರ್ಥನೆಯಲ್ಲಿ ತಲ್ಲೀನಳಾಗಿದ್ದರು. ನಾನು ನನ್ನ ಲಗೇಜ್ ಗಳನ್ನು ಪಕ್ಕದ ಸೀಟ್ ನಲ್ಲಿರಿಸಿ ಬೇರೆಯೇ ಸೀಟ್ ನಲ್ಲಿ ಕುಳಿತು ಸಾವರಿಸಿಕೊಳ್ಳುತ್ತಿದ್ದೆ. ಸುಮಾರು ಹೊತ್ತು ಕಳೆದ ನಂತರ ಮಹಿಳೆ ಪ್ರಾರ್ಥನೆ ಮುಗಿಸಿ ನನ್ನ ಕಡೆಗೆ ನೋಡಿದಳು. ಇದು ನಿಮ್ಮ ಸೀಟಾ ಎಂದು ಕೇಳಿದಳು ನಾನು ಹೌದೆಂದೆ. ಆಕೆ ನಗುವಿನಲ್ಲೇ ಕ್ಷಮೆ ಯಾಚಿಸಿದಂತೆ ಎದ್ದು ತನ್ನ ವಸ್ತ್ರ ಮುಂತಾದ ವಸ್ತುಗಳನ್ನು ತಾನು ಕುಳಿತುಕೊಳ್ಳುವ ಸೀಟಿನತ್ತ ಚಲಿಸಿದಳು. ನಾನು ವಿಚಲಿತನಾಗಲಿಲ್ಲ. ನಾನು ಬಂದಕೂಡಲೇ ಆಕೆಯ ಪ್ರಾರ್ಥನೆಗೆ ಭಂಗ ತರಬಹುದಿತ್ತು. ಸೀಟು ಬಿಟ್ಟುಕೊಡುವಂತೆ ಕೇಳಬಹುದಿತ್ತು. ಆದರೆ ನಾನು ಹಾಗೆ ಮಾಡದೇ ಆಕೆಯ ಕಾರ್ಯಗಳೆಲ್ಲ ಮುಗಿಯುವ ತನಕ ಕಾದು ಕುಳಿತೆ. ನಾನು ಹಿಂದೂ ಧರ್ಮಿಯನಾದರೂ ಆಕೆಯ ಧರ್ಮವನ್ನು ಕರ್ಮವನ್ನೂ ಗೌರವದಿಂದ ನೋಡಿದೆ. ನಮ್ಮ ಧರ್ಮದ ಬಗ್ಗೆ ನಮಗೆ ಅಭಿಮಾನವಿರಬೇಕು. ಆದರೆ ಪರಧರ್ಮವನ್ನು ಕಡೆಗಣಿಸುವ ಹಾಗಿರಬಾರದು. ಇದು ನಾನು ರೂಢಿಸಿಕೊಂಡ ತತ್ವ. ಇಷ್ಟಕ್ಕೂ ಆಕೆ ಯಾರಿಗೂ ದ್ರೋಹವೆಸಗುವ ಕೆಲಸವನ್ನೇನೂ ಮಾಡುತ್ತಿರಲಿಲ್ಲ. ಆತ್ಮಾರ್ಥವಾಗಿ ತೀರಾ ವೈಯಕ್ತಿಕವಾದ ದೈವ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದಳು. ನಿಜಕ್ಕೂ ಒಂದು ಗೌರವ ಭಾವನೆ ನನ್ನಲ್ಲಿ ತಂದಿತ್ತು. ಅಷ್ಟೊಂದು ಪ್ರಯಾಣಿಕರು ಗಲಾಟೆಯ ನಡುವೆ ಆಕೆ ಶ್ರದ್ದೆಯಿಂದ ಸಲ್ಲಿಸುವ ಪ್ರಾರ್ಥನೆಯ ಬಗ್ಗೆ ನಿಜಕ್ಕೂ ಗೌರವ ಮೂಡಿತು. ನಾನು ಸೀಟಿನಲ್ಲಿ ಕುಳಿತುಕೊಳ್ಳಬೇಕಾದರೆ ಆ ಸೀಟನ್ನು ತನ್ನ ವಸ್ತ್ರದಿಂದ ಉಜ್ಜಿ ಸ್ವಚ್ಚ ಗೊಳಿಸಿ ನನಗೆ ಕುಳಿತುಕೊಳ್ಳುವಂತೆ ಹೇಳಿದಳು. ಇದು ಘಟನೆಯ ಒಂದು ಮುಖ. ನಿಜಕ್ಕಾದರೆ ನನಗೆ ಹಲವು ಧರ್ಮದ ವ್ಯಕ್ತಿಗಳು ಸ್ನೇಹಿತರಿದ್ದಾರೆ, ನನ್ನೊಂದಿಗೆ ಆತ್ಮಿಯವಾಗಿ ವ್ಯವಹರಿಸುವ ವ್ಯಕ್ತಿಗಳೀದ್ದಾರೆ. ಅವರಲ್ಲಿ ಯಾವ ಸಮಸ್ಯೆಯೂ ಇಲ್ಲದೆ ಜೀವನ ವ್ಯವಹಾರಗಳನ್ನು ನಾನು ಮಾಡುತ್ತೇನೆ. ಯಾರು ಯಾರಿಗೆ ಅನಿವಾರ್ಯರೋ ಅದು ವಿಚಾರವಲ್ಲ. ತೋಟ ನಮ್ಮದೇ ಆದರೂ ಅಲ್ಲಿ ನಮ್ಮ ಅಂಕೆಯಲ್ಲಿಲ್ಲದ ಪ್ರಾಣಿ ಪಕ್ಷಿಗಳು ಇರುತ್ತವೆ. ಮರಗಿಡ ಬಳ್ಳಿಗಳು ಇರುತ್ತವೆ. ಅವುಗಳ ನಡುವೆ ನಾವು ಜೀವಿಸುವುದಿಲ್ಲವೇ?
ಅದೇ ರೀತಿ ರೈಲು ಮುಂದೆ ಹೋಯಿತು. ಮರುದಿನ ಮುಂಜಾನೆ ನಾಲ್ಕು ಘಂಟೆಗೆ ನಿದ್ದೆಯಲ್ಲಿದ್ದ ನನಗೆ ಎಚ್ಚರವಾಯಿತು. ಯಥಾ ಪ್ರಕಾರ ನಾನು ಶೌಚಾಲಯಕ್ಕೆ ಹೋಗಿ ಹಲ್ಲುಜ್ಜಿ ಮುಖತೊಳೆದು ನನ್ನ ಸೀಟಲ್ಲಿ ಬಂದು ಕುಳಿತೆ. ನಿತ್ಯವೂ ಅದೇ ಹೊತ್ತಿನಲ್ಲಿ ಏಳುವ ನನಗೆ ಪ್ರಯಾಣದಲ್ಲಾದರೂ ರೂಢಿ ತಪ್ಪುವುದಿಲ್ಲ. ಎದ್ದು ಕುಳಿತುಕೊಳ್ಳುತ್ತೇನೆ. ಮನೆಯಲ್ಲಾದರೆ ನಿತ್ಯ ಸ್ನಾನ ಜಪ ಪೂಜೆ ಇರುತ್ತದೆ. ಪ್ರಯಾಣದಲ್ಲಿ ಅದು ಸಾಧ್ಯವಿಲ್ಲ. ರೈಲು ಸಕಲೇಶ ಪುರ ದಾಟಿ ಘಾಟ್ ರಸ್ತೆಯಲ್ಲಿ ನಿಧಾನವಾಗಿ ಸಾಗುತ್ತಿತ್ತು. ಭೋಗಿಯಲ್ಲಿ ಬಹಳಷ್ಟು ಮಂದಿ ನಿದ್ದೆಯಲ್ಲಿದ್ದರು. ನಿತ್ಯದಂತೆ ನಾನು ಕುಳಿತಲ್ಲೇ ಧ್ಯಾನಾಸಕ್ತನಾಗುತ್ತೇನೆ. ಆ ನೀರವ ಮೌನದಲ್ಲಿ ದೇವರ ಧ್ಯಾನ ಬಹಳಷ್ಟು ಶಾಂತಿಯನ್ನು ಕೊಡುತ್ತದೆ. ಹಾಗೆ ನೆಟ್ಟಗೆ ಕುಳಿತು ಕಣ್ಣು ಮುಚ್ಚಿ ಮಂತ್ರ ಜಪಿಸುತ್ತಿರುವಾಗ ಮನಸ್ಸಿನಲ್ಲಿನಲ್ಲಿ ದೈವ ಸಾನ್ನಿಧ್ಯ ಒದಗಿ ಬರುತ್ತದೆ.. ಅದೊಂದು ವಿಶಿಷ್ಟ ಅನುಭವ. ಅಲ್ಲಿಗೇ ತಲ್ಲೀನನಾಗಿಬಿಡುತ್ತೇನೆ. ಮನುಷ್ಯ ತಾನೆಷ್ಟೇ ಎಂದು ತಿಳಿದುಕೊಂಡರೂ ತನ್ನಲ್ಲಿಲ್ಲದ ತಾನಲ್ಲದ ಒಂದು ಶಕ್ತಿಯಿರುತ್ತದೆ. ಅದು ಭಗವಂತ. ಇದಕ್ಕೆ ಜಾತಿ ಧರ್ಮದ ಸೀಮೆ ಇರುವುದಿಲ್ಲ. ಹೀಗೆ ನಾನು ನಾನು ಪ್ರಾರ್ಥನೆಯಲ್ಲಿ ತಲ್ಲೀನನಾಗಿರಬೇಕಾದರೆ ಕೆಲವರು ಆಕಡೆ ಈಕಡೆ ಸುಳಿಯುತ್ತಾರೆ. ಅದೇನೂ ತೊಂದರೆ ಅಂತ ಅನ್ನಿಸುವುದಿಲ್ಲ ಆದರೆ ಹಾಗೆ ಅತ್ತಿತ್ತ ಸುಳಿಯುವವರು ಕಣ್ಣು ಮುಚ್ಚಿ ಪ್ರಾರ್ಥನೆಯಲ್ಲಿ ತಲ್ಲೀನ ನಾಗಿ ಇರುವ ನನ್ನನ್ನು ಎಚ್ಚರಿಸಿ ಕೇಳುತ್ತಾರೆ....." ಎಲ್ಲಿಗೆ ಮುಟ್ಟಿತು? ಕುಕ್ಕೆ ಸುಬ್ರಹ್ಮಣ್ಯಕ್ಕೆ ಇನ್ನು ಎಷ್ಟು ಹೊತ್ತಿದೆ.? "
ಮೊದಲದಿನ ಅಷ್ಟೊಂದು ಮಂದಿ ಆಚೀಚೇ ಸಂಚರಿಸುತ್ತಿದ್ದರೂ ಅಲ್ಲಿಯೇ ಪ್ರಾರ್ಥನೆ ಸಲ್ಲಿಸುತ್ತಿದ್ದ ಮಹಿಳೆಗೆ ಯಾವ ತೊಂದರೆಯನ್ನು ಮಾಡಿಲ್ಲ. ಪ್ರಾರ್ಥನೆ ಸಲ್ಲಿಸುತ್ತಿದ್ದ ಆಕೆಯನ್ನು ಎಚ್ಚರಿಸುವುದಾಗಲಿ ಆಕೆಯಲ್ಲಿ ಕೇಳುವುದಾಗಲೀ ಮಾಡಿಲ್ಲ. ಆಕೆಯ ಕೆಲಸವನ್ನು ಗೌರವದಿಂದಲೇ ಕಂಡಿದ್ದರು. ಆದರೆ ನಾನು ಪ್ರಾರ್ಥನೆ ಸಲ್ಲಿಸುವಾಗ ಅದೆಷ್ಟು ವಿಘ್ನಗಳು. ಅದೆಷ್ಟು ಅಡೆ ತಡೆಗಳು. ಅಷ್ಟಕ್ಕೂ ಹಾಗೆ ಮಧ್ಯೆ ಅದು ಇದು ಅಂತ ಕೇಳುತ್ತಿದ್ದವರು ಹಿಂದುಗಳೇ ಆಗಿದ್ದರು.
ಈ ಘಟನೆ ಬಹಳಷ್ಟು ಚಿಂತನೆಯನ್ನು ಮನಸ್ಸಿನಲ್ಲಿ ಚಿಂತಿಸುವಂತೆ ಮಾಡಿತು. ಮೊದಲಾಗಿ ನಮ್ಮ ಧರ್ಮದ ಬಗ್ಗೆ ನಮಗೆ ಅಭಿಮಾನ ಬೇಕು. ನಮ್ಮ ತಾಯಿತಂದೆಯರನ್ನು ನಾವು ಮೊದಲಿಗೆ ಗೌರವಿಸಬೇಕು. ಆನಂತರ ಲೋಕ ಗೌರವವನ್ನು ನಿರೀಕ್ಷಿಸಬೇಕು. ನಾನು ಜಪ ಮಾಡುವುದು ನೋಡಿದರೆ ತಿಳಿಯುತ್ತಿತ್ತು. ಆದರೂ ಅದು ಅವರಲ್ಲಿ ಗೌರವವನ್ನು ಮೂಡಿಸಲಿಲ್ಲ. ಜಗತ್ತಿನ ವ್ಯವಹಾರಗಳು ಅದೆಷ್ಟು ವಿಚಿತ್ರವಾಗಿರುತ್ತದೆ.
ನಾನು ಪ್ರತಿಯೊಂದು ಧರ್ಮವನ್ನು ಗೌರವಿಸುತ್ತೇನೆ. ಇದು ಪ್ರಾಮಾಣಿಕ ಅನಿಸಿಕೆ. ಮಾತ್ರವಲ್ಲ ನನ್ನ ಧರ್ಮವನ್ನು ಅತ್ಯಂತ ಅಭಿಮಾನದಿಂದ ಅನುಸರಿಸುತ್ತೇನೆ.