Tuesday, May 23, 2017

ಉಸಿರೊಳಗಿನ ಜೀವನ


ಒಂದು ಸಲ ಮಾರುಕಟ್ಟೆಯಲ್ಲಿ ತರಕಾರಿ ಕೊಳ್ಳಲು ಹೋಗಿದ್ದೆ. ಅಲ್ಲೊಬ್ಬಳು ಧಡೂತಿ ಹೆಂಗಸು ಹೊರಲಾಗದ ತನ್ನ ಮೈಭಾರವನ್ನು ಹೊತ್ತುಕೊಂಡು ಈರುಳ್ಳಿ ಕೊಳ್ಳುವುದಕ್ಕಾಗಿ ಬಂದಿದ್ದಳು.  ಅಂಗಡಿಯವನು ಈರುಳ್ಳಿ ಆಯುವುದಕ್ಕೆ ಅವಕಾಶ ಕೊಡದೆ ತಾನೇ ತುಂಬಿಸಿ ತೂಗುತ್ತಿದ್ದರೆ,  ಈಕೆ ಆತನಲ್ಲಿ ಚೌಕಾಶಿ ಮಾಡಿ ಆಯ್ದುಕೊಳ್ಳುತ್ತಿದ್ದಳು. ಇವರಿಬ್ಬರ ಹಗ್ಗಜಗ್ಗಾಟ ಬಹಳ ಹೊತ್ತು ನಡೆಯಿತು. ಇದನ್ನು ಗಮನಿಸುತ್ತಿದ್ದ ನನಗೆ ಮಹಿಳೆಯ ಧಡೂತಿ ದೇಹ ನೋಡಿ ಅನಿಸಿತು. ನಾವು ಎಲ್ಲ ಕಡೆಯಲ್ಲೂ ಉತ್ತಮವಾದುದನ್ನು ಆಯ್ಕೆ ಮಾಡುವುದಕ್ಕಾಗಿ ಹೆಣಗಾಡುತ್ತೇವೆ. ಆದರೆ ಜೀವನದ ಆರೋಗ್ಯವನ್ನು ಆಯ್ಕೆ ಮಾಡುವಾಗ ಉತ್ತಮವಾದುದುದನ್ನು ತಿರಸ್ಕರಿಸುತ್ತೇವೆ.
ಪ್ರಪಂಚದಲ್ಲಿ ಶೇಕಡ ನೂರರಷ್ಟು ಪೂರ್ಣ ಆರೋಗ್ಯವಂತರು ಯಾರೂ ಇಲ್ಲ. ಒಂದೋ ಎರಡೋ ಅಪವಾದವಿದ್ದರೆ ಅದು ತೀರ ವಿರಳ . ಅಂದರೆ ಒಂದಲ್ಲ ಒಂದು ವಿಧದಲ್ಲಿ ರೋಗ ಬಾಧೆಗೆ ಪ್ರತಿಯೊಬ್ಬರೂ ಒಳಗಾಗಿದ್ದಾರೆ ಎನ್ನಬಹುದು. ಹೀಗಿದ್ದರೂ ಇಂದು ಆರೋಗ್ಯ ಪ್ರಜ್ಜೆ ಕೇವಲ ಶೇಕಡ ಹತ್ತರಷ್ಟು ಜನರಲ್ಲೂ ಇಲ್ಲ ಎಂಬುದು ವಿಪರ್ಯಾಸ. ಇಲ್ಲಿ ಆರೋಗ್ಯದ ಬಗ್ಗೆ ನಮಗಿರುವ ಕಾಳಜೆ ಪ್ರಶ್ನಾರ್ಹವಾಗುತ್ತದೆ.
ದುಡ್ಡುಕೊಟ್ಟು  ತರಕಾರಿಯನ್ನು ಕೊಳ್ಳುವಾಗ ಕಷ್ಟವಾದರೂ ಉತ್ತಮವಾದದ್ದೇ ಆಯ್ಕೆ ಮಾಡುವ ತುಡಿತ ನಮ್ಮಲ್ಲಿರುತ್ತದೆ. ಶ್ರಮವಹಿಸಿ ನಮ್ಮ ಹಣವನ್ನು ಖರ್ಚುಮಾಡುವಾಗ  ಹಿಂದೆ ಮುಂದೆ ಬಹಳಷ್ಟು ಯೋಚಿಸುತ್ತೇವೆ.   ಆದರೆ ಎಷ್ಟು ದುಡ್ದುಕೊಟ್ಟರೂ ಸಿಗದ ಆರೋಗ್ಯದ ಆಯ್ಕೆಯಲ್ಲಿ ಮಾತ್ರ ನಾವು ಔದಾಸಿನ್ಯವನ್ನು ತೋರುತ್ತೇವೆ. ಆರೋಗ್ಯವೇ ಭಾಗ್ಯ ಸಾಮಾನ್ಯವೆಂಬಂತೆ  ಹೇಳಿ ಸುಮ್ಮನಾಗುತ್ತೇವೆ. ಆದರೆ ಆರೋಗ್ಯ ಭಾಗ್ಯವಾಗುವುದು ನಮ್ಮ ಜೀವನ ಶೈಲಿಯಿಂದ ಎಂಬುದು ಸರಳವಾದ ತತ್ವ. ಮನೆಯೊಳಗಿನ ಪಾಮೋರಿನ್ ಡಾಬರ್ ಮನ್ ಅಥವಾ ಲಾಬ್ರಡೋರ್ ನಾಯಿಯನ್ನು ಮುತ್ತಿಕ್ಕಿದಂತೆ ರಸ್ತೆಬದಿಯ ಬೀದಿ ನಾಯಿಯನ್ನು ಮುತ್ತಿಕ್ಕುವುದಕ್ಕೆ ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ ಆ ನಾಯಿಗಳ  ಜೀವನ ಶೈಲಿ. ಹಾಗಾದರೆ ನಾವು ಆಯ್ಕೆ ಮಾಡುವ ಜೀವನ ಶೈಲಿ ಉತ್ತಮವಾಗಿರಬೇಡವೇ?  
ದೇಹದ ಆರೋಗ್ಯ ಕೆಟ್ಟು ನಾವು ನಮ್ಮ ಮನಸ್ಸಿನ  ಮತ್ತು  ದೇಹದ ನಿಯಂತ್ರಣವನ್ನು ಕಳೆದುಕೊಳ್ಳುವಾಗ ವೈದ್ಯರೋ ಅಲ್ಲ  ಮತ್ತೊಬ್ಬರು ಅದರಲ್ಲಿ ನಿಯಂತ್ರಣ ಸಾಧಿಸುತ್ತಾರೆ ಎಂದರೆ ಇದೊಂದು ರೀತಿಯಲ್ಲಿ ನಾವು ಗುಲಾಮರಾದಂತೆ.  ವಿಚಿತ್ರವೆಂದರೆ ಎಲ್ಲದರಲ್ಲೂ ಸ್ವಾಭಿಮಾನ ತೋರುವಾಗ ಆರೋಗ್ಯದ ವಿಚಾರದಲ್ಲಿ ತಿಳಿಯದೇ ವೈದ್ಯರ  ಗುಲಾಮರಾಗಿಬಿಡುತ್ತೇವೆ.
ನಮ್ಮ ಬೀದಿಯ ಹುಡುಗನೊಬ್ಬ ಅಂಗಡಿಯೊಂದರಲ್ಲಿ ಸಿಗರೇಟು ಸೇದುವುದನ್ನು ನೋಡಿ ಬಹಳ ಮರುಕ ಹುಟ್ಟಿತು. ಹೆಚ್ಚು ಕಡಿಮೆ ನನ್ನ ಮಗನ ಪ್ರಾಯದ ಹುಡುಗನ ಭವಿಷ್ಯಕ್ಕೆ ಸಿಗರೇಟಿನ ಹೊಗೆ ಈಗಲೇ ಆವರಿಸಿ ಕಪ್ಪಾದಂತೆ ಭಾಸವಾಯಿತು. ಇಷ್ಟು ಸಣ್ಣ ಪ್ರಾಯದಲ್ಲೇ ಸಿಗರೇಟು ಕೈಯಲ್ಲಿ ಹಿಡಿದು ಲೋಕವನ್ನೇ ಗೆದ್ದ ಭಂಗಿಯಲ್ಲಿ ನಿಂತಿದ್ದ. ಬಹುಶಃ  ಆತನ ಉನ್ಮಾದ ಲಾಲಸೆ ಈಗ ಈಡೇರಬಹುದು. ಧೂಮ ಲಹರಿಯಲ್ಲಿ ಜಗತ್ತಿನ ಎಲ್ಲ ಸುಖಗಳೂ ಮಿಥ್ಯವಾಗಿ ಕಾಣಬಹುದು. ಆದರೆ, ಪಶ್ಚಾತ್ತಾಪದಿಂದ ಪರಿತಪಿಸಿದರೂ ಪರಿಹಾರವಾಗದ ದುರಂತ ಕಣ್ಣ ಮುಂದೆ ದಟ್ಟವಾಗಿ ನಿಂತಿರುತ್ತದೆ. ಮಧ್ಯವಯಸ್ಸು ದಾಟಿದ ಕೂಡಲೇ ದೇಹ ಸಾಮಾರ್ಥ್ಯ ಕುಗ್ಗುತ್ತದೆ. ತಮ್ಮ ಪ್ರಾಥಮಿಕ ಅವಶ್ಯಕತೆಗಳಿಗೂ ಪರಾವಲಂಬಿಯಾಗಬೇಕಾದಾಗ  ಅನಾರೋಗ್ಯವೂ ಕಾಡತೊಡಗುತ್ತದೆ. ಹೋಗಲಿ ಖೆಮ್ಮು ಅಸ್ತಮಾ ಕಿಡ್ನಿ ಬಾಧೆ ಕೇವಲ ರೋಗಿಯೊಬ್ಬನನ್ನು ಬಾಧಿಸುವುದಲ್ಲ. ಮನೆಯ ಇತರರು ಅದಕ್ಕೆ ತಲೆಕೊಡಬೇಕಾಗಿ ಬರುತ್ತದೆ. ರಾತ್ರಿ ಪೂರ್ತಿ ಕಫ ಕಟ್ಟಿ ಖೆಮ್ಮುತ್ತಿದ್ದರೆ ಆತನಂತೂ ನಿದ್ದೆ ಮಾಡುವುದಿಲ್ಲ. ಮನೆಯಲ್ಲಿ ಉಳಿದವರೂ ಅನಾವಶ್ಯಕ ನಿದ್ದೆಗೆಡುವ ಅನಿವಾರ್ಯತೆ ಒದಗಿಬಿಡುತ್ತದೆ. ಕ್ಷಣಿಕ ಉನ್ಮಾದ ಬಯಕೆ ಎಲ್ಲವ್ನೂ ಮೀರಿ ಭೂತದಂತೆ ನಿಂತುಬಿಡುತ್ತದೆ.
ಆರೋಗ್ಯ ಬೇಕು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಹಲವರು ಅದನ್ನು ಅದೃಷ್ಟದ ಕೈಗೆ ಕೊಟ್ಟು  ತಾವು ನಿರಪರಾಧಿ ಮನೋಭಾವ ತಾಳುತ್ತಾರೆ. ಇನ್ನು ಕೆಲವರು ಜೀವನ ಇರುವುದೇ ಅನುಭವಿಸುವುದಕ್ಕೆ ಎಂದು ತಿಳಿಯುತ್ತಾರೆ. ಆದರೆ ಆ ಅನುಭವ ಮಾತ್ರ ಕಠೋರವಾಗುವುದು ಉಡಿಯಲ್ಲಿ ಗೆಂಡ ಕಟ್ಟಿಕೊಂಡಂತೆ ಪರಿಣಾಮ ತಿಳಿಯುವಾಗ. ಅದಾಗಲೇ ಬದುಕು ಆಹುತಿಯಾಗಿರುತ್ತದೆ. ಬಹುಶಃ  ಬದುಕಿನಲ್ಲಿ ಅತ್ಯಂತ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗುವುದೆಂದರೆ ಅದು ಆರೋಗ್ಯ.
ಆರೋಗ್ಯ ಬದುಕಿನ ವಿಧಾನಗಳು ಇಂದು ಹಲವಾರು ಇದೆ.  ಅದರಲ್ಲಿ ಸರಳವಾಗಿ ಸಾಮಾನ್ಯವಾಗಿ ಆಚರಣೆಯಲ್ಲಿರುವುದು ಮುಂಜಾನೆಯ ನಡಿಗೆ.  ಏನೂ ಮಾಡದೇ ಇರುವಾಗ ಇಷ್ಟನ್ನಾದರೂ ಮಾಡಲೇ ಬೇಕು. ಆದರೆ ಇದು ಪರ್ಯಾಪ್ತವೂ ಅಲ್ಲ. ವಿಚಿತ್ರವೆಂದರೆ ಬದುಕಿನಲ್ಲಿ ಉತ್ತಮವನ್ನೇ ಆಯ್ಕೆ ಮಾಡುವವರು ಆರೋಗ್ಯದ ವಿಚಾರದಲ್ಲಿ ಮಾತ್ರ ಇಷ್ಟನ್ನೇ ಆಯ್ಕೆ ಮಾಡಿಬಿಡುತ್ತಾರೆ.
            ಹದಿನೈದು ನಿಮಿಷದ ಪ್ರಾಣಾಯಾಮದಲ್ಲಿ ನಿವಾರಣೆಯಾಗುವ ಅನಾರೋಗ್ಯದ ಸಮಸ್ಯೆಗಳು, ನಿತ್ಯ ಬದುಕಿನ ಸಮಸ್ಯಗಳು ಇವುಗಳನ್ನು ಪಟ್ಟಿ ಮಾಡುತ್ತಾ ಹೋದಲ್ಲಿ ಗಾಬರಿಯಾಗಬಹುದು. ಆದರೂ ಬಹಳಷ್ಟು ಮಂದಿ ಪ್ರಾಣಾಯಾಮದ ವಿಷಯ ಹೇಳುತ್ತಿದ್ದಂತೆ ನಮಗೆ ಹೇಳಿದ್ದಲ್ಲ ಎಂದು ಪಲಾಯನ ಮಾಡಿಬಿಡುತ್ತಾರೆ. ಸರಳವಾಗಿ ಯಾರೂ ಆಚರಿಸಬಹುದಾದ ಅತ್ಯಂತ ಸುಲಭ ಪ್ರಕ್ರಿಯೆಗಿಂತ ಬೇರೆ ದೇಹದ ಸರ್ಕಸ್ ಇಷ್ಟವಾಗುವುದೇಕೋ ಅರ್ಥವಾಗುವುದಿಲ್ಲ.
            ಉಸಿರು...ಮನುಷ್ಯನ ಜೀವ ಅಸ್ತಿತ್ವದ ಸಂಕೇತ. ಯಾವುದೇ ಪ್ರಾಣಿಯಾಗಲೀ ಮನುಷ್ಯನಾಗಲೀ ಜೀವವಿದೆ ಎಂದು ತಿಳಿಯುವುದು ಉಸಿರಾಟದಿಂದ. ಹುಟ್ಟಿನಿಂದ ಜೀವ ಸಂಕೇತವಾಗಿರುವ ಉಸಿರಾಟ ಕ್ರಮಬದ್ಧವಾಗಿದ್ದರೆ ಉಳಿದವುಗಳು ಸರಿಯಾಗಿರುತ್ತವೆ. ವಾಕಿಂಗ್ ಮಾಡಿ, ವ್ಯಾಯಾಮ ಮಾಡಿ ಇನ್ನೇನೋ ಮಾಡಿದರೂ,  ಸರಾಗವಾದ ಉಸಿರಾಟ ಇಲ್ಲದಿದ್ದರೆ ಅದಾವುದೂ ನಿರೀಕ್ಷಿತ ಫಲ ಕೊಡುವುದಿಲ್ಲ. ಉಸಿರಾಟ ಸರಾಗವಾಗಬೇಕಾದರೆ ಪ್ರಣಾಯಾಮ ಅನಿವಾರ್ಯ. ಪ್ರಾಣಾಯಾಮದಿಂದಷ್ಟೇ ಉಸಿರಾಟ ಲಯಬದ್ಧವಾಗುತ್ತದೆ. ವೈದ್ಯರ ಬಳಿಗೆ ಹೋದಾಗ ಅಲ್ಲಿ ಮೊದಲು ಪರೀಕ್ಷೆಗೆ ಒಳಗಾಗುವುದು ನಮ್ಮ ಉಸಿರಾಟ.  ಅವರು ಮೊದಲು ನೋಡುವುದು ಎದೆ ಬಡಿತ ನಾಡಿ ಮಿಡಿತ.  ಉಸಿರಾಟ ಸಮರ್ಪಕವಿಲ್ಲವಾದರೆ ಇವುಗಳ ತಾಳತಪ್ಪುತ್ತದೆ. ಆರೋಗ್ಯವೂ ಲಯವನ್ನು ಕಳೆದು ಕೊಳ್ಳುತ್ತದೆ. ಬದುಕೂ ತಾಳ ಲಯವಿಲ್ಲದ ಸಂಗೀತದಂತೆ ಅತಂತ್ರವಾಗುತ್ತದೆ.

            ಮಹಾತ್ಮರಾದವರು ತಮಗಾಗಿ ತಾವು ಬದುಕುವುದಿಲ್ಲ. ಪರರಿಗಾಗಿ ತಮ್ಮ ಬದುಕನ್ನು ಮೀಸಲಿಟ್ಟು ನಿಸ್ವಾರ್ಥದಿಂದ ಪರರಿಗಾಗಿ ಬದುಕುತ್ತಾರೆ. ಆದರೆ ಆರೋಗ್ಯದ ವಿಷಯಕ್ಕೆ ಬಂದಾಗ ನಾವು ನಮಗಾಗಿ ಬದುಕಬೇಕು. ಯೋಗಾಭ್ಯಾಸದಲ್ಲಿ ನಮ್ಮ ಬಗ್ಗೆ ನಾವು ಸ್ವಾರ್ಥಪರರಾಗಬೇಕು. ನಮಗಾಗಿ ಕಿಂಚಿತ್ ಸಮಯವನ್ನು ಮೀಸಲಿಟ್ಟು ನಾವು ಸ್ವಾರ್ಥಿಗಳಾಗಬೇಕು. ಹಾಗಿದ್ದಲ್ಲಿ ಉಳಿದ ನಿಸ್ವಾರ್ಥದ ಬದುಕು ಅರ್ಥಪೂರ್ಣವಾಗುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲವಾದರೆ ನಮ್ಮ ಬದುಕು ಪರಾವಲಂಬಿಯಾಗುತ್ತದೆ. ಅನಿವಾರ್ಯವಾಗಿ ಬದುಕಿನಲ್ಲಿ ಸಂಪೂರ್ಣವಾಗಿ ಸ್ವಾರ್ಥಿಗಳಾಗಬೇಕಾಗುತ್ತದೆ. 

No comments:

Post a Comment