Saturday, May 27, 2017

ಹರಸು ಎನ್ನುವ ಬದಲು ಕ್ಷಮಿಸು ಎನ್ನಲೇ?


ಮಧ್ಯಾಹ್ನದ ಊಟ ಮಾಡಿ ತುಸು ಸುಧಾರಿಸಿಕೊಂಡು  ಮೊದಲೇ ಸಿದ್ದ ಪಡಿಸಿದ ಬ್ಯಾಗ್ ನ್ನು ಅಂಗಳದಲ್ಲಿರಿಸಿದೆ. ಅದು ಹೊರಡುವ ಸೂಚನೆ. ನಂತರ  ಒಳಗೆ ಹೋಗಿ ಎಲ್ಲರಿಗೂ ಒಂದು ಸಲ ವಿದಾಯ ಹೇಳುತ್ತೇನೆ.  ಬಂದು ಹೋದ ನಡುವಿನ ಘಳಿಗೆ ಸಂದುದೇ ಅರಿವಿಲ್ಲ.  ಬದುಕೇ ಹಾಗೆ,   ಕಾಲವದು ನಿಂತು ಬಿಡುತ್ತದೆ ಎಂಬ ಭ್ರಮೆಯಲ್ಲೇ ಬದುಕನ್ನು ಕಳೆದಿರುತ್ತೇವೆ. ಆದರೆ ಸ್ವಾಧೀನವಿಲ್ಲದ ಕಾಲ ನಮಗೆ ಭ್ರಮೆಯನ್ನು ಹುಟ್ಟಿಸುತ್ತಾ ನಮ್ಮ ಕೈ ನುಸುಳಿ ಸರಿದು ಹೋಗಿರುತ್ತದೆ.

 ಮನೆ ಮಂದಿಯಲ್ಲಿ ಕೆಲವರು ಅಂಗಳಕ್ಕೆ ಬಂದರೆ ಇನ್ನು ಕೆಲವರು ಕಿಟಿಕಿಯಿಂದ ಇಣುಕಿ ಕಣ್ಣಲ್ಲೇ ಕೈ ಆಡಿಸಿಬಿಡುತ್ತಾರೆ. ಎಲ್ಲರೀಗೂ ವಿದಾಯ ಹೇಳಿದ ಮೇಲೆ  ತಕ್ಕಡಿಯ  ಎರಡೂ ಬದಿಯ ತಟ್ಟೆಯಲ್ಲಿ ಹೃದಯಗಳನ್ನು ಇಟ್ಟು ತೂಗಿದಂತೆ ಒಂದು ಸಲ ಅವರ ಹೃದಯ ಭಾರವಾದರೆ ಇನ್ನೊಮ್ಮೆ ನಮ್ಮ ಹೃದಯದತ್ತ ಭಾರ ವಾಲುತ್ತದೆ. ಇನ್ನೇನು ಚಪ್ಪಲಿ ಧರಿಸಿ ಹೊರಡಬೇಕೆನ್ನುವಾಗ ಮುಖ್ಯ ಕೆಲಸವೊಂದು ನೆನಪಾಗುತ್ತದೆ. ಅಲ್ಲೇ ಕಣ್ಣು ತೇವ ಮಾಡಿಕೊಂಡು ಇಲ್ಲದ ನಗುವನ್ನು ತಂದು ಕೊಂಡು ಇದ್ದ ಹಿರಿಯ ಜೀವವೊಂದು,    ಹಾಗೆ ಹೇಳಿದರೆ ಸಾಲದು ಅದನ್ನು ಚೇತನ ಎಂದೇ ಹೇಳಬೇಕು  ಮೌನವಾಗಿ ನಿಂತಿರುತ್ತದೆ. 

ಸಾಮಾನ್ಯವಾಗಿ ಹಿರಿಯರಲ್ಲಿ ಗೌರವವಾದರ ಇದ್ದರೂ ಕಾಲಿಗೆರಗುವುದು ದೈವೀ ಭಾವವನ್ನು ಕಂಡಾಗ ಮಾತ್ರ.  ಹಾಗೆ ನಮಸ್ಕರಿಸುವ ಪ್ರಚೋದನೆಯನ್ನು ತರುವ ವ್ಯಕ್ತಿಗಳು ಬದುಕಿನಲ್ಲಿ ನಿತ್ಯ ಚೇತನರಾಗಿಬಿಡುತ್ತಾರೆ. ಎಲ್ಲರ ಬದುಕಿನಲ್ಲೂ ತಿಳಿದೋ ತಿಳಿಯದೆಯೋ ಈ ಬಂಧನ ಬೆಸೆದಿರುತ್ತದೆ. ಹಲವರ ಜೀವನದಲ್ಲಿ ಇಂತಹಾ ವ್ಯಕ್ತಿಗಳ ದರ್ಶನವಾಗುತ್ತದೆ. ಕೆಲವು ವ್ಯಕ್ತಿಗಳು ಗೌರವಾದರಕ್ಕೆ ಕಾರಣಾಗುತ್ತಾರೆ. ಆದರೆ ಈ ಗೌರವಾದರಗಳಲ್ಲೂ ಕೆಲವು ಕೇವಲ ಕರನಮನಕ್ಕೆ ಮಾತ್ರ ಸೀಮಿತವಾದರೆ ಕೆಲವರು ಅದ್ವಿತೀಯವಾದ ಭಾವ ಪ್ರಚೋದನೆಯನ್ನು ಮೂಡಿಸುತ್ತಾರೆ. ಅವರ ಪಾದನಮನಕ್ಕೆ ಶರೀರ ಸಹಜವಾಗಿ ಬಾಗಿಬಿಡುತ್ತದೆ.

ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದೆ ನಮ್ಮದು ಬಡತನವಲ್ಲದೇ ಇದ್ದರೂ ಸಿರಿವಂತಿಗೆ ಮಾತ್ರ ಇರಲಿಲ್ಲ. ನಾಳೆಯದು ಹೇಗೆ ಎನ್ನುವುದಕ್ಕೆ ಕೈ ತೋಳುಗಳಲ್ಲಿ ಉಕ್ಕುತ್ತಿದ್ದ ಶಕ್ತಿಯೇ ಉತ್ತರ ಹೇಳುತ್ತಿದ್ದರೆ ಆತ್ಮ ಸ್ತೈರ್ಯ ಅದಕ್ಕೆ ಬೆಂಬಲವನ್ನು ಕೊಡುತ್ತಿತ್ತು.  ರಕ್ತ ಬಿಸಿ ಏರುತ್ತಿದ್ದ ದಿನಗಳವು.

ಹಲವರು ಹೇಳುವುದುಂಟು “ಯಾರು ಬಂದರೇನು ಹೋದರೇನು ನಮ್ಮ ಹೊಟ್ಟೆಗೆ ನಾವೇ ದುಡಿಯಬೇಕು.”  ದುಡಿಯುವುದು,  ಅದೂ ಸಹ ತನ್ನ ಹೊಟ್ಟೆಗಾಗಿ  ಮನುಷ್ಯನಿಗೆ ಇಷ್ಟವಿರುವುದೇ ಇಲ್ಲ. ಯಾರದೋ ದುಡಿಮೆ ಅನುಭವಿಸುವ ಹಂಬಲ.  ಆದರೆ ಆಗಿನ ಅಂತಹ ಬಡತನ ಕಲಿಸಿದ ಪಾಠ ಒಂದೇ ಅದು ದುಡಿಯಬೇಕು. ಅದೂ ಸಹ ಪ್ರಾಮಾಣಿಕವಾಗಿ. ಪ್ರಾಮಾಣಿಕ ದುಡಿಮೆಯ ಫಲದಲ್ಲಿ ಮಾನಸಿಕವಾಗಿ ನಾವೇ ಪೂರ್ಣ ಹಕ್ಕುದಾರರಾಗಿರುತ್ತೇವೆ.  ಇಲ್ಲವಾದರೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಮುಳ್ಳೊಂದು ಚುಚ್ಚಿದ ಅನುಭವ. ತಿಂದರೂ ತೇಗಿದರೂ ಪೂರ್ಣವಾಗಿ ಅನುಭವಿಸಿದ ತೃಪ್ತಿ ಸಿಗುವುದಿಲ್ಲ. ಯಾರದೋ ಹೊಸತಾದ ಉಡುಗೆ ತೊಡುಗೆಯನ್ನು ಧರಿಸಿ ಮೆರೆದ ಹಾಗೆ. ಬಿಡಿಗಾಸಿನ ದುಡಿಮೆಗೂ ನಮ್ಮಲ್ಲಿ ಅಭಿಮಾನವಿರುತ್ತದೆ.

ಇಂತಹ ಮಧ್ಯಮ ಬಡತನದಲ್ಲಿ ಈ ಹಿರಿಯ ಜೀವದ ಪ್ರವೇಶವಾಗುತ್ತದೆ. ಅದಾವ ಅನುಬಂಧವೋ ಎನ್ನುಂತೆ ಬೆಳೆಯುತ್ತದೆ. ಕೈ ಹಿಡಿದು ಮುಂದೇ ಕರೆದೊಯ್ದರೆ ಹಿಂದೆ ಹೋಗುವುದಕ್ಕೆ ಅದೇನೋ ಅಳುಕು. ಹಿಂಜರಿತ.   ಆದರೂ ಮುಂದೆ ಮುಂದೆ  ನಡೆಸಿದ ಆ ವ್ಯಕ್ತಿಯ  ಹುಮ್ಮಸ್ಸು ಅದನ್ನು  ಮರೆಯುವುದಕ್ಕೆ ಉಂಟೆ?  ಜೀವನದಲ್ಲಿ ಆತ್ಮವಿಶ್ವಾಸ ಮೂಡುವುದು ಇಂತಹ ವಿಷಯಗಳಿಂದಲೇ.  ಸಾಮಾನ್ಯಾವಾಗಿ ಮದುವೆಯಾಗುವ ಹೆಣ್ಣಾಗಲೀ ಹೆಣ್ಣಿನ ಹೆತ್ತ ತಾಯಿ ತಂದೆಯಾಗಲೀ ಗಂಡಿನ ಆರ್ಥಿಕ ಮಟ್ಟವನ್ನು ಮೊದಲು ನೋಡುತ್ತಾರೆ. ಯಾಕೆಂದರೆ ಮೊದಲು ಕಣ್ಣಿಗೆ ಕಾಣುವ ಸತ್ಯವದು. ಆನಂತರವೆ ಮಾನಸಿಕ ನೆಲಗಟ್ಟು ಸ್ವಭಾವ ಇತ್ಯಾದಿಗಳು ಗಮನಕ್ಕೆ ಬರುವುದು. ಹಲವು ಸಲ ಮೊದಲಿನದ್ದು ಅಂದರೆ ಆರ್ಥಿಕ ಮಟ್ಟ,  ಅದು ಬಿಟ್ಟುಳಿದವುಗಳೆಲ್ಲ ಗೌಣವಾಗಿಬಿಡುತ್ತವೆ. ಗಂಡಿನ ಗುಣ ನಡತೆ ಅರಿವಿಗೆ ಬರಬೇಕಾದರೆ ತುಸುವಾದರೂ ಬೆರೆಯುವ ಅವಶ್ಯಕತೆ ಇರುತ್ತದೆ. ನನ್ನ ವಿಚಾರದಲ್ಲಿ ಮೊದಲಿನದ್ದು ಇಲ್ಲ ಎರಡನೆಯದ್ದರ ಪರಿಯಚಯ ಆಗುವುದಕ್ಕೆ ಸಾಧ್ಯವೇ ಇಲ್ಲ. ಆದರೂ ಆದರೂ ನನ್ನ ಕೈ ಹಿಡಿದು ಎಳೆದೊಯ್ದರು. ಅದೆಂತಹ ಹಿಡಿತ ? ಭದ್ರವಾದ ಬಿಗಿ ಹಿಡಿತ. ಇಂದಿಗೂ ಅದರಿಂದ ಬಿಡಿಸಿಕೊಳ್ಳುವುದಕ್ಕೆ ಮನಸ್ಸು ಒಪ್ಪುವುದಿಲ್ಲ. ಅಂತಹ ಆತ್ಮೀಯ ಸ್ಪರ್ಶ. ಇದನ್ನೇ ದೈವಾನುಗ್ರಹ ಎನ್ನಬಹುದೇ?

ಆರಂಭದಲ್ಲಿ ಒಂದು ಸಲ ಹೇಳಿದ್ದೆ ನನ್ನ ಮನೆ ಚಿಕ್ಕದು  ಜಾಗವಿಲ್ಲ. ಕರೆಂಟಿಲ್ಲ. ನೀರಿಲ್ಲ. ಹಲವು ಇಲ್ಲಗಳು ಮನೆಯಲ್ಲಿ ಸರದಿಯಲ್ಲಿ ಬಂದಿತ್ತು. ಆಗ ಅವರೆಂದ ಮಾತು ಈಗಲೂ ನೆನಪಿದೆ “ ರಾಜ, ನೀವು ಯಾವುದು ಕೊಡದೇ ಇದ್ದರೂ ಅಡ್ಡಿ ಇಲ್ಲ. ಕಣ್ಣೀರು ಒಂದು ಕೊಡದೇ ಇದ್ದರೆ ಸಾಕು. ತಿಳಿ ಗಂಜಿಯಲ್ಲಿ ಮಿಕ್ಕೆಲ್ಲವನ್ನೂ ಪಡೆಯಬಹುದು. “  ಎಂತಹ ಸರಳವಾದ ವೇದಾಂತ ಅಂತ ಅನ್ನಿಸಿತು.  ಇಂದಿಗೂ ನನ್ನಾಕೆಯ ಕಣ್ಣು ತೇವವಾದಾಗ ಈ ವೇದಾಂತ ನೆನಪಾಗುತ್ತದೆ. ಆಕೆಯ ಮುಖ ನನ್ನ ಬೊಗಸೆಯೊಳಗೆ ಬರುತ್ತದೆ. ಗಂಡ ಹೆಂಡತಿಯನ್ನು ನೋಡುವುದಕ್ಕೆ, ಹೆಂಡತಿ ಗಂಡನನ್ನು ಗಮನಿಸುವುದಕ್ಕೆ ಈ ಗಮನಿಸು ಎಂದು ಹೇಳುವುದಕ್ಕೆ ಬಹಳ ಅರ್ಥವಿದೆ. ಅದಕ್ಕೆ ಯಾವ ಸಿ. ಸಿ. ಕ್ಯಾಮೆರಾದ ಅವಶ್ಯಕತೆಯಿಲ್ಲ. ಇಂತಹ ಭಾವಾನಾತ್ಮ ವಿಶ್ವಾಸ ಇದ್ದರೆ ಸಾಕು. ಒಳಗಣ್ಣಿನ ಸಿ ಸಿ ಯಿಂದ ಯಾವ ಮನುಷ್ಯನೂ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ.

ಇಷ್ಟೆಲ್ಲ ಹೇಳುವಾಗ ಈಗ ಚಿತ್ರಣ ಸ್ವಲ್ಪ ಸ್ಪಷ್ಟವಾದ ಹಾಗೆ ಕಾಣಬಹುದು. ಹೌದು ಇದು ನನ್ನ ಗ್ರಹಸ್ಥಾಶ್ರಮ ಪ್ರವೇಶದ ಕಥೆ. ಹೇಳುವುದಕ್ಕೆ ಬಹಳಷ್ಟಿದೆ. ಆದರೆ ಅದನ್ನು ಸ್ವಲ್ಪವಾಗಿ ಹಂಚಿದಾಗಲೇ ರುಚಿ ಹೆಚ್ಚು.

ಹೋಗಿ ಕಾಲಿಗೆ ನಮಸ್ಕರಿಸುತ್ತೇನೆ. ಹಿರಿಯರ ಆಶೀರ್ವಾದದಿಂದ ನಮಗೆ ಶುಭವಾಗಲಿ ಎಂದು ಬಯಸುವುದರಲ್ಲಿ  ಒಂದು ಸ್ವಾರ್ಥ ಅಡಗಿರುತ್ತದೆ. ಹಾಗಾಗಿ ಮನಸ್ಸು ಹೇಳುತ್ತದೆ. ” ತಿಳಿದೋ ತಿಳಿಯದೆಯೋ ಈ ಹಿರಿಯ ಮನಸ್ಸಿಗೆ ನೋವು ಕೊಟ್ಟಿರಬಹುದು. ಕಣ್ಣೀರು ಹಾಕಿಸಿರಬಹುದು. ಪ್ರಾಯಶ್ಛಿತವಾಗಿ ಪರಿಮಾರ್ಜನೆಗೆ ಇದಕ್ಕಿಂತ ಬೇರೆ ದಾರಿ ಸಿಗುವುದಿಲ್ಲ.”  ಹಾಗಾಗಿ ಬಾಗಿ ಕಾಲಿಗೆ ನಮಸ್ಕರಿಸುತ್ತೆನೆ. ಆದರೂ ಹರಸುತ್ತಾರೆ “ಖುಷಿಯಲ್ಲೇ ಇರಿಯಪ್ಪಾ”.   ಅಲ್ಲಿಗೆ ಒಂದೆರಡು ದಿನದ ಸುಖವಾಸದ ಅವಧಿ ಮುಗಿದಂತೆ. ಮತ್ತೆ ನಿಧಾನವಾಗಿ ಹೆಜ್ಜೆ ರಸ್ತೆಯತ್ತ ಸರಿಯುತ್ತದೆ. ಕೈಯಲ್ಲಿರುವ ಬ್ಯಾಗ್ ಬರುವಾಗ ಇದ್ದುದಕ್ಕಿಂತಲೂ ಹೆಚ್ಚು ಭಾರಾವಾಯ್ತೆಂದು ಅನಿಸುತ್ತದೆ. ಆದರೆ ಹಗುರವಾಗುವ ಹೃದಯಕ್ಕೆ ಆ ಭಾರ ಲೆಕ್ಕವೇ ಅಲ್ಲ.



1 comment:

  1. Good Articles. I am a publisher. You can contact me below number -9844406266

    ReplyDelete