ಮಧ್ಯಾಹ್ನ ಚಪಾತಿ ನಮ್ಮಲ್ಲಿ ನಿತ್ಯದ ಮುಖ್ಯ ಅಹಾರ. ಅದರಲ್ಲೂ ಮಕ್ಕಳಿಗೆ ಅದೇಕೋ ಅನ್ನಕ್ಕಿಂತಲೂ ಚಪಾತಿ ಮಡಿಸಿ ಬಾಯಿಗಿಡುವುದೆಂದರೆ ಅನ್ನ ಕಲಸಿ ಮುದ್ದೆಮಾಡುವುದಕ್ಕಿಂತಲೂ ಸುಲಭ ಅಂತ ಕಾಣುತ್ತದೆ. ಹಾಗಾಗಿ ನಮ್ಮಲ್ಲಿ ಸಾರು ಸಾಂಬಾರು ಎನ್ನುವುದು ಅಪರೂಪಕ್ಕೆ ಎನ್ನುವ ಹಾಗೆ ಆಗ್ತದೆ. ಚಪಾತಿಗಾದರೋ ಜತೆ ಸೇರಿಸಲೂ ವಿಶೇಷವಾದ ಖಾದ್ಯವೇ ಆಗಬೇಕು. ಇವತ್ತಿನದ್ದು ಪುನರಾವರ್ತನೆಯಾದರೆ ಚಪಾತಿಯೂ ಮಾಡಿದ ಅಡುಗೆಯೂ ತೃಪ್ತಿಯಾಗುವಂತೆ ಸೇವಿಸುವುದಿಲ್ಲ. ಹಾಗಾಗಿ ನಿತ್ಯವೂ ನೂತನವಾದ ಅಡುಗೆ ಅನ್ವೇಷಣೆ ಮಾಡುತ್ತಲೇ ಇರಬೇಕು. ಹೆಚ್ಚಿನ ಎಲ್ಲಾ ಮನೆಯಲ್ಲೂ ಈ ರೀತಿಯ ಸಮಸ್ಯೆ ಇದ್ದೇ ಇರುತ್ತದೆ. ಸ್ವಲ್ಪ ಬುದ್ದಿವಂತ ಗೃಹಿಣಿಯಾದರೆ ಇವುಗಳನ್ನೆಲ್ಲ ಸುಲಭದಲ್ಲಿ ನಿರ್ವಹಿಸಿ ಬಿಡುತ್ತಾಳೆ. ಇರಲಿ ನಮ್ಮಲ್ಲೂ ವಾರಕ್ಕೆ ಎರಡು ಮೂರು ಹೊಸ ಪ್ರಯೋಗಗಳು ಆಗುತ್ತವೆ. ಮಾತ್ರವಲ್ಲ ಅದು ಅನಿವಾರ್ಯ. ಹಾಗಾಗಿ ಈ ದಿನ ಹೊಸತೊಂದು ಖಾದ್ಯ ತಯಾರಿಯಾಗಿದೆ. ಆಸಕ್ತಿಕರ, ರುಚಿಕರ ಮಾತ್ರವಲ್ಲ ಮಾಡುವುದು ಸುಲಭ ಮತ್ತು ಎಲ್ಲರೂ ಚಪ್ಪರಿಸಿ ತಿಂದ ಒಂದು ಖಾದ್ಯ.
ಸಾಮಾನ್ಯವಾಗಿ ಸಾಯಂಕಾಲದ ಹೊತ್ತು ಡಿನ್ನರ್ ರಾತ್ರಿಯ ಊಟಕ್ಕೆ ಹೋಟೆಲಿಗೆ ನುಗ್ಗುವುದು ಈಗ ಸಾಮಾನ್ಯ. ಇದಕ್ಕೆ ವೃದ್ದರೂ ಸೇರಿ ಯಾರೂ ಹೊರತಲ್ಲ. ಹೋಟೆಲಿನ ಸಹವಾಸವೇ ಬೇಡ ಮನೆ ಊಟವೇ ಆರೋಗ್ಯ್ಕಕ್ಕೆ ಒಳ್ಳೆದು ಅಂತ ರಾಗ ಎಳೆಯುವವರೂ ವಾರಾಂತ್ಯದ ಸಾಯಂಕಾಲ "ಊಟಕ್ಕೆ ಹೊರಗೆ ಹೋಗೋಣವಾ" ಎಂದು ಕೇಳಿದರೆ ದೊಡ್ಡ ಉಪಕಾರ ಮಾಡಿದವರಂತೆ ಹೊರಡುತ್ತಾರೆ ನಂತರ ಪಟ್ಟಾಗಿ ಹೊಟ್ಟೆಯಲ್ಲಿ ಜಾಗವಿಲ್ಲದಷ್ಟು ನುಗ್ಗಿಸಿ ತೇಗುತ್ತಾರೆ. ಮೊದಲೆಲ್ಲ ಮನೆಯಲ್ಲಿ ತಿಂದು ಊರ ಹೊರಗೆ ಇಲ್ಲವೇ ಗುಡ್ಡದ ಅಂಚಿಗೆ ತಂಬಿಗೆ ಹಿಡಿದು ಹೋಗುತ್ತಿದ್ದರೆ ಇಂದು ಬದಲಾಗಿ ಊರ ಹೊರಗೆ ತಿಂದು ಮನೆಯಲ್ಲಿ ಬಾಗಿಲು ಹಾಕಿ ಕಷ್ಟ ಪಡುತ್ತಾರೆ.!!!
ಇರಲಿ ರಾತ್ರಿ ಡಿನ್ನರ್ ಗೆ ಹೋಟೇಲಿಗೆ ಹೋದಾಗ ಬಾಣಂತಿಯ ಪುಟ್ಟ ಮಗುವನ್ನು ಕೈಯಲ್ಲಿ ಹಿಡಿದು ನೋಡುವಂತೆ ಎಲ್ಲರೂ ಮೆನು ಕಾರ್ಡ್ ನೋಡುವವರೆ. ತಮ್ಮ ತಮ್ಮ ಆಯ್ಕೆಯನ್ನು ಹುಡುಕಿ ಸೂಚಿಸುವುದಕ್ಕೆ ಬಹಳಷ್ಟು ಸಮಯ ವ್ಯಯವಾಗುತ್ತದೆ. ಆದರೂ ಮೆನು ಕಾರ್ಡಿನಲ್ಲಿ ಸೂಚಿಸಿದ ಬಹಳಷ್ಟು ವಿಭವಗಳು ಓದುವುದಕ್ಕಷ್ಟೇ ಗೊತ್ತು. ಅದು ಏನಪ್ಪಾ ಎಂದು ಆಶ್ಚರ್ಯವಾಗುತ್ತದೆ. ಹಾಗಾಗಿ ಏನೋ ಒಂದು ಹೆಸರು. ಏನೋ ಒಂದು ತಿಂಡಿ ಅಂತ ಬೇಡಿಕೆ ಸಲ್ಲಿಸಿ ಟೇಬಲ್ ಎದುರು ತಂದಾಗ ಇದುವಾ ಅಂತ ತಿಂದು ಬೆರಳು ಚೀಪುತ್ತ ಹನಿ ಹನಿಯನ್ನೂ ಉಳಿಸದಂತೆ ಮಾಡುವುದುಂಟು. ಹೆಸರು ಏನೋ ಎಂದು ಯೋಚಿಸುವಾಗ ಇವುಗಳೆಲ್ಲ ಯೋಚನೆಗೆ ಬಂತು. ಹಾಗಾಗಿ ಈ ತಿಂಡಿಗೆ ಹಾಗೆ ಒಂದು ಹೆಸರು ಇಡೋಣ. ಹೆಸರಲ್ಲೇನಿದೆ. ಇದು ವ್ಯಾಪಾರಕ್ಕೆ ಅಲ್ಲವಲ್ಲ. ಹಸುರಾಗಿ ಇರುವ ಕಾರಣ ಇದಕ್ಕೆ ಹರಿಯಾಲಿ ಅಂತ ಸೇರಿಸಿ ಇದರಲ್ಲಿ ದೊನ್ನೆ ಮೆಣಸು ಪ್ರಧಾನ ವಾಗಿರುವುದರಿಂದ ಕಾಪ್ಸಿಕಂ ಹರಿಯಾಲಿ ಅಂತ ಇಟ್ಟು ಕೊನೆಯಲ್ಲಿ ನಿಮ್ಮ ಮನೆ ಊರಿನ ಹೆಸರು ಸೇರಿಸಿ ಬಿಡಿ.
ಬೇಕಾಗುವ ಸಾಮಾಗ್ರಿಗಳು : 1. ಶುಂಠಿ ಬೆಳ್ಳುಳ್ಳಿ ಮಿಶ್ರಣ (ಪೆಸ್ಟ್) , 2 ಈರುಳ್ಳಿ ಕಾಲು ಕೇಜಿ (ಮೂರರಿಂದ ನಾಲ್ಕು ) ( ಸ್ವಲ್ಪ ಈರುಳ್ಳಿಯನ್ನು ದೊಡ್ಡದಾಗಿ ಹೆಚ್ಚಿ ಒಂದು ಈರುಳ್ಳಿಯನ್ನು ಅತ್ಯಂತ ಚಿಕ್ಕದಾಗಿ ಹೆಚ್ಚಿಕೊಳ್ಳಬೇಕು) 3. ಎರಡು ಮೂರು ಹಸಿಮೆಣಸು, 4 . ಕೊತ್ತಂಬರಿ ಸೊಪ್ಪು, 5. ಒಂದು ಚಿಕ್ಕ ಕಟ್ಟು ಪಾಲಕ್ ಸೊಪ್ಪು, ದೊನ್ನೆ ಮೆಣಸು ಮೂರು 6. ಬೆಳ್ಳುಳ್ಳಿ ನಾಲ್ಕು ಎಸಳು 7. ಟೊಮೆಟೊಹಣ್ಣು ನಾಲ್ಕೈದು 8. ಗೋಡಂಬಿ ಬೀಜ ಐದಾರು 9. ಹಾಲು ಕಾಲು ಲೋಟ 10. ಪರಿಮಳಕ್ಕೆ ಚೆಕ್ಕೆ, ಯಾಲಕ್ಕಿ, 11. ಎಣ್ಣೆ, 12 ಸ್ವಲ್ಪ ಬೆಣ್ಣೆ, ಒಂದು ಚಮಚ ಗರಂ ಮಸಾಲೆ, ಅರ್ಧ ಚಮಚ ಅರಶಿನ ಪುಡಿ, ಒಂದು ಚಮಚ ಮೆಣಸಿನ ಪುಡಿ. ಉಪ್ಪು
ತಯಾರಿಸುವ ವಿಧಾನ
1. ಒಂದು ಬಾಂಡಲಿಯನ್ನು (ತವ) ಸಣ್ಣ ಉರಿಯಲ್ಲಿ ಬಿಸಿ ಮಾಡಿ. ನಂತರ ಮೂರು ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಕೂಡಲೇ ಅದಕ್ಕೆ ಹೆಚ್ಚಿದ ದೊನ್ನೆಮೆಣಸು ಹಾಕಿ ಹುರಿದು ತೆಗೆದಿಡಬೇಕು.
ನಂತರ
2. ಪುನಃ ಎರಡುಮೂರು ಚಮಚ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಕೂಡಲೆ ಚೆಕ್ಕೆ ಯಾಲಕ್ಕಿ ಹಾಕಿ ತುಸು ಕಾಯಿಸಿ ನಂತರ ದೊಡ್ಡದಾಗಿ ಹೆಚ್ಚಿದ ಈರುಳ್ಳಿ ಹಸಿಮೆಣಸು ಬೆಳ್ಳುಳ್ಳಿ. ಉಪ್ಪು ಹಾಕಿ ಹುರಿಯಬೇಕು. ಈರುಳ್ಳಿ ಕೆಂಪಗಾದಕೂಡಲೇ ಹೆಚ್ಚಿದ ಟೊಮೆಟೊ ಹಣ್ಣು, ಗೋಡಂಬಿ ಹಾಕಿ ಒಂದು ಐದು ನಿಮಿಷ ಹುರಿಯಬೇಕು. ನಂತರ ಅದಕ್ಕೆ ಪಾಲಕ್ ಮತ್ತು ಕೊತ್ತಂಬರಿ ಸೊಪ್ಪು ಹೆಚ್ಚಿ ಹಾಕಿ ಹಸಿ ವಾಸನೆ ಹೋಗುವತನಕ ಹುರಿಯಬೇಕು. ಈ ಹುರಿದ ಮಿಶ್ರಣ ತಣಿದ ನಂತರ ಅದನ್ನು ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ಮಾಡಿ ಇರಿಸಿಕೊಳ್ಳಬೇಕು. ಅದು ಹಸುರು ಬಣ್ಣದ ಪೇಸ್ಟ್ ಆಗಿರುತ್ತದೆ.
ನಂತರ
3. ಪುನಃ ಬಾಣಲೆಯಲ್ಲಿ ಬೆಣ್ಣೆ ಹಾಕಿ ಬಿಸಿಮಾಡಬೇಕು. ತುಸು ಎಣ್ಣೆಯನ್ನು ಸೇರಿಸಬಹುದು. ಬಿಸಿ ಎಣ್ಣೆಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ನಂತರ ಅದಕ್ಕೆ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಬೇಕು. ನಂತರ ಮಿಕ್ಸಿಯಲ್ಲಿ ರುಬ್ಬಿ ಇರಿಸಿದ ಪೇಸ್ಟ್ ಹಾಕಿ ಹತ್ತು ನಿಮಿಷ ಬಿಸಿ ಮಾಡಬೇಕು. ನಂತರ ಅದಕ್ಕೆ ಅರಶಿನ ಪುಡಿ, ಮೆಣಸಿನ ಪುಡಿ, ಗರಂ ಮಸಾಲೆ ಹಾಲು ಹಾಕಿ ಬಿಸಿ ಮಾಡಬೇಕು. ಬಿಸಿಮಾಡುವಾಗ ಸೌಟಿನಲ್ಲಿ ತಿರುವುತ್ತಾ ಇರಬೇಕು. ಇಲ್ಲವಾದರೆ ಅದು ತಳ ಹಿಡಿಯುವ ಸಂಭವ ಇರುತ್ತದೆ. ಕೊಂಚ ಹೊತ್ತಿನ ನಂತರ ಅದರ ಎಣ್ಣೆ ಬಿಡುವುದಕ್ಕಾರಂಭವಾಗುತ್ತದೆ. ಆಗ ಅದಕ್ಕೆ ಹುರಿದಿಟ್ಟ ದೊನ್ನೆಮೆಣಸು ಹಾಕಿ ಮಿಶ್ರ ಮಾಡಿ ತುಸು ನೀರನ್ನು ಹಾಕಿ ಐದರಿಂದ ಹತ್ತು ನಿಮಿಷ ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು.
ನಂತರ
4. ಬೇಕಾದರೆ ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪು ಇಲ್ಲವೇ ಕಸೂರಿ ಮೇಥಿ ಹಾಕಿ ಅಲಂಕರಿಸಬಹುದು.
ಈಗ ಕಾಪ್ಸಿಕಂ ಹರಿಯಾಲಿ ಚಪಾತಿ ರೋಟಿಯೊಂದಿಗೆ ಸವಿಯಲು ಸಿದ್ದ.
ಸಾಮಾನ್ಯವಾಗಿ ಹೋಟೆಲಿನಲ್ಲಿ ನೂರು ಇನ್ನೂರು ತೆತ್ತು ಚಪ್ಪರಿಸಿ ಸವಿದು ತಿನ್ನುವುದಕ್ಕಿಂತ ಇದು ರುಚಿಯಾಗಿ ಮತ್ತು ಯಾವುದೇ ರಾಸಾಯನಿಕ ಬೆರೆಸದೆ ಆರೋಗ್ಯಪೂರ್ಣವಾಗಿಯೂ ಇರುತ್ತದೆ. ಹೋಟೇಲಿನಲ್ಲಿ ಮಾಡುವ ಡಿನ್ನರ್ ಕಡಿಮೆ ಖರ್ಚಿನಲ್ಲಿ ಮನೆಯಲ್ಲಿ ಮಾಡಿ ಅರೋಗ್ಯ ಪೂರ್ಣವಾಗಿರಬಹುದು.
ತಯಾರಿಸಿ ನೋಡಿ. ರುಚಿಯಾಗಿದ್ದರೆ ಹೇಳಿ ಸವಿಯಲು ಸಾಧ್ಯವಾದರೆ ನಾನೂ ಬರುತ್ತೇನೆ.
No comments:
Post a Comment