Saturday, August 26, 2017

ದೇವರೂ ....ಭಕ್ತರು



“ಸರ್ವೇಷಾಮವಿರೋಧೇನ ಪೂಜಕರ್ಮ ಸಮಾರಭೇ”
          ಯಾವುದೇ ಪೂಜೆ ಪುನಸ್ಕಾರವಿರಲಿ ವೈದಿಕ ಕ್ರಿಯಾಭಾಗವಿರಲಿ ಪುರೋಹಿತರು ಸಂಕಲ್ಪ ಮಂತ್ರದಲ್ಲಿ ಹೇಳುವ ಮಂತ್ರವಿದು. ಇದರ ಅರ್ಥ ವಿಶಾಲ್ಯದ ಬಗ್ಗೆ ಯಾರೂ ಗಂಭೀರವಾಗಿ ಚಿಂತಿಸುವುದಿಲ್ಲ. ಸ್ವತಃ ಹಲವು ಪುರೋಹಿತರಿಗೇ ಇದರ ಅರ್ಥ ತಿಳಿದಿರುವುದಿಲ್ಲ. ಗುರುವಿನಿಂದ ಪಾಠವಾದುದನ್ನು ಉರು ಹೊಡೆದು ಅದನ್ನೇ ಯಥಾ ಪ್ರಕಾರ ಒಪ್ಪಿಸಿಬಿಡುತ್ತಾರೆ.  ಸರ್ವೇಷಾಂ ಅವಿರೋಧೇನ ಪೂಜ ಕರ್ಮ ಸಮಾರಭೇ ಎಂದು ವಿಂಗಡಿಸಿ ಹೇಳುವ ಕ್ರಮವಿಲ್ಲ. ಒಂದುವೇಳೆ ಹೀಗೆ ವಿಂಗಡಿಸಿ ಅರ್ಥವಿಸಿಕೊಳ್ಳುವ ವಿದ್ವತ್ತು ಇರುತ್ತಿದ್ದರೆ? ಹೋಗಲಿ ಸರ್ವೇಷಾಂ ಎಂದರೆ ಸರ್ವರಿಗೂ ಅವಿರೋಧವಾಗುವ ಹಾಗೇ ಅಂದರೆ ಯಾರಿಗೂ ತೊಂದರೆಯನ್ನು ಉಂಟು ಮಾಡದೇ ಸಂಕಲ್ಪಿಸಿ ಕೊಂಡಂತಹ ಪೂಜಾ ಕರ್ಮವನ್ನು ಮಾಡುತ್ತೇನೆ ಎಂಬುದಾಗಿರುತ್ತದೆ. ಸಂಧ್ಯಾವಂದನೆಯಲ್ಲೂ ಪ್ರತೀ ಪೂಜಾ ಕ್ರಿಯೆಯಲ್ಲೂ ಇದನ್ನು ಸಂಕಲ್ಪಿಸಿಯೇ ಮುಂದಿನ ವಿಧಿಯನ್ನು ಮುಂದುವರೆಸುವುದು ಕ್ರಿಯಾಧರ್ಮ. ಸನಾತ ಭಾರತೀಯ ಹಿಂದು ಸಂಸ್ಕೃತಿಯ ಆಳ ವೈಶಾಲ್ಯತೆ ಇದರಿಂದ ವ್ಯಕ್ತವಾಗುತ್ತದೆ. ನಾವು ಪಾಲಿಸುವಂತಹ ಧರ್ಮ ಆದು ಮತ್ತೊಬ್ಬನಿಗೆ ತೊಂದರೆಯಾಗಬಾರದು. ಅದು ಸ್ವ ಆತ್ಮೋನ್ನತಿಗೆ ಇರುವಂತಹ ಮಾರ್ಗ. ಆದರೆ ಈ ಢಾಂಬಿಕ ಜಗತ್ತಿನಲ್ಲಿ ಇಲ್ಲಿಯ ಬದುಕುವ ನೀತಿಯಲ್ಲಿ ಇಂತಹ ಉದಾತ್ತ ತತ್ವಗಳು ಚಲಾವಣೆಯಿಲ್ಲದ ನಾಣ್ಯಗಳಾಗಿ ಕೇವಲ ಗ್ರಾಂಥಿಕ ಉಲ್ಲೇಖಕ್ಕೆ ಸೀಮಿತವಾಗಿ ಪುಸ್ತಕದಲ್ಲೇ ಉಳಿದು ಬಿಡುತ್ತದೆ.
          ಎರಡು ದಿನ ಮೊದಲು ನಮ್ಮ ಒಬ್ಬ ಕಕ್ಷಿದಾರ ಮಿತ್ರನ ಅನುಭವ ಕಂಡಾಗ ನಿಜಕ್ಕೂ ಈ ಮಾತು ವಾಸ್ತವದ ಸತ್ಯವಾಗಿ ಗೋಚರವಾಗುತ್ತದೆ. ಈ ಮಿತ್ರನಿಗೆ ಬೆಂಗಳೂರಿನಲ್ಲಿ ಒಂದು ಚಿಕ್ಕ ಕಿರಾಣಿ ಅಂಗಡಿ. ದಿನವೂ ಅದರಲ್ಲಿ ಗಳಿಸುವ ಕೇವಲ ಸಂಪಾದನೆಯೊಂದೇ ಆತನ ಜೀವನ ನಿರ್ವಹಣೆಯ  ಏಕೈಕ   ಮಾರ್ಗ. ಹೆಂಡತಿ ಮಕ್ಕಳು ವೃದ್ದ ತಾಯಿ ತಂದೆ ಹೀಗೆ ಒಂದಷ್ಟು ಮಂದಿಯಿರುವ ಕುಟುಂಬವದು. ನಾನು ಹಲವು ಸಲ ನೋಡುತ್ತೇನೆ. ಯಾರನ್ನು ಕೆಲಸಕ್ಕಿಟ್ಟುಕೊಳ್ಳದೆ ಮನೆ ಮಂದಿಯೆಲ್ಲಾ ತಮ್ಮ ಸಮಯವನ್ನು ವಿನಿಯೋಗಿಸಿ ಅಂಗಡಿ ನಿರ್ವಹಣೆಯನ್ನು ಮಾಡುತ್ತಿರುತ್ತಾರೆ. ಹಲವು ಸಲ ವೃದ್ದ ತಂದೆ ತಾಯಿಯರು ತಮ್ಮ ಶಿಥಿಲ ದೇಹವನ್ನು ಹಿಡಿದುಕೊಂಡು ಮಗನ ಜೀವನ ನಿರ್ವಹಣೆಯ ಭಾರಕ್ಕೆ ಹೆಗಲು ಕೊಟ್ಟು ತಮ್ಮ ತುತ್ತಿನ ಅನ್ನಕ್ಕೆ ದುಡಿಮೆಯನ್ನು ಸಲ್ಲಿಸುತ್ತಾರೆ.

 ಹೀಗೆ ಸಾಗುತ್ತಿರಬೇಕಾದರೆ  ಕಳೆದವಾರ ಅಂಗಡಿಯ ರಸ್ತೆಯಲ್ಲಿ ಕೆಲವು  ಯವಕರ ಗುಂಪು ಗಣೇಶನನ್ನು ಕೂರಿಸುವ ಪವಿತ್ರ ಕಾರ್ಯಕ್ಕೆ ಕಟಿಬದ್ದರಾಗುತ್ತಾರೆ. ಗಣೇಶನನ್ನು ಜೋಪಡಿ ಕಟ್ಟಿ ಅದರಲ್ಲೇ ಕೂರಿಸಿ ಪೂಜಿಸಬೇಕೆಂಬ ಶಾಸ್ತ್ರ ಅದಾವ ಗ್ರಂಥದಲ್ಲಿ ಉಲ್ಲೇಖವಾಗಿದೆಯೋ ಆ ಗಣೇಶನಿಗೂ ಗೊತ್ತಿದೆಯೋ ತಿಳಿಯದು. ಇರಲಿ ಅವರವರ ನಂಬಿಕೆ ವಿಶ್ವಾಸ. ಸಾಮಾನ್ಯವಾಗಿ  ಈ ಯುವಕರಿಗೆ ಚೌತಿ ಅಣ್ಣಮ್ಮ ಉತ್ಸವಗಳಾಗುವಾಗ ಮಾತ್ರ ದೈವಭಕ್ತಿ ಪ್ರೇರಣೆಯಾಗುತ್ತದೆ.  ಇದರಿಂದಲಾಗಿಯೇ  ಪಕ್ಕದ ರಸ್ತೆಯ ಯುವಕರ ತಂಡದೊಂದಿಗೆ ಸ್ಪರ್ಧೆ ಏರ್ಪಡುತ್ತದೆ. ಪಕ್ಕದ ರಸ್ತೆ ಏಕೆ ನೆರೆ ಹೊರೆಯ ಮನೆ ಮನೆಗೂ ಈ ಸ್ಪರ್ಧೆ ಸಾಮಾನ್ಯ. ಸ್ಪರ್ಧೆ ಭಗವಂತನ ಭಕ್ತಿಯನ್ನೂ ಮೀರಿಸುತ್ತದೆ. ಗಣಪತಿಯನ್ನು ಕೂರಿಸುವುದು ಎಂದು ಪ್ರೇರಣೆಯಾದರೆ ಚೌತಿ ಕಳೆದು ವಾರಗಳ ಕಾಲ ಇದು ಅವ್ಯಾಹತವಾಗಿ ಭಕ್ತಿ ಪ್ರಕಟಣೆಯಾಗುತ್ತದೆ. ಸಾಮಾನ್ಯವಾಗಿ ಚೌತಿಯ ದಿನ ಗಣಪತಿಯನ್ನು ಕೂರಿಸಿ ಒಂದೆರಡು ದಿನ ಪೂಜಿಸಿ ನಂತರ ವಿಸರ್ಜಿಸುವುದು ಸಾಮಾನ್ಯ ಪದ್ದತಿ. ಆದರೆ ಇದು ಚೌತಿಯೇ ಆಗಬೇಕೆಂದೇನೂ ಇಲ್ಲ ಯಾವಾಗ ವಾರಾಂತ್ಯ ಬಂತೋ ಆವಾಗ ಪ್ರೇರಣೆಯಾಗುತ್ತದೆ.

          ಯಥಾ ಪ್ರಕಾರ ಪ್ರೇರಣೆಯಾದಾಗ ರಶೀದಿ ಪುಸ್ತಕ ಅಥವಾ ಒಂದು ನೋಟು ಪುಸ್ತಕ ಹಿಡಿದು ಮನೆ ಮನೆ ಅಂಗಡಿ ಅಂಗಡಿ ಸುತ್ತುತ್ತಾರೆ.ಹಾಗೇ ಈ ಮಿತ್ರನ ಅಂಗಡಿಗೂ ಬರುತ್ತಾರೆ. ಇಷ್ಟೇ ಕೊಡಬೇಕು ಎಂಬಂತೆ ಒತ್ತಡ ಹೇರುತ್ತಾರೆ. ಮಿತ್ರನಿಗೆ ಬೇರೆ ಆದಾಯ ಮಾರ್ಗವಿಲ್ಲ. ಪುಟ್ಟ ಅಂಗಡಿಯಲ್ಲಿ ಅದೆಷ್ಟು ಆದಾಯ ಸಾಧ್ಯ? ಮೊದಲೇ ಮಾಲ್ ಸೂಪರ್ ಮಾರ್ಕೇಟ್ ಧಾಳಿಯಿಂದ ನಗದು ವ್ಯವಹಾರಕ್ಕೆ ಸಾಕಷ್ಟು ಧಕ್ಕೆಯಾಗಿ ವ್ಯಾಪಾರವೇ ಇಲ್ಲ ಎಂಬಂತಹ ಸ್ಥಿತಿಯಲ್ಲಿರುವಾಗ ಈ ಭಕ್ತಿಯ ಪರಾಕಷ್ಠೆಯ ತಂಡಕ್ಕೆ ಅದಾವುದೂ ಕಾಣುವ ವಿಷಯಗಳೇ ಅಲ್ಲ. ಅದ್ದೂರಿ ಗಣೇಶೋತ್ಸವ ಆಚರಣೆಯೊಂದೆ ಪ್ರಧಾನ. ತಮಟೇ ವಾದ್ಯ ರಸಮಂಜರಿ ಸಾಧ್ಯವಾದರೆ ಒಂದಷ್ಟು ಈ ಹೆಸರಲ್ಲಿ ಗುಂಡು ಹೋಗಲಿ ಅವರವರ ವಿಶ್ವಾಸ. ಅದರೆ ಅಂಗಡಿಯಾತನಿಗೆ? ಮರುದಿನ ತಂದೆಯ ಔಷಧಿಗೆ ಮೀಸಲಿರಿಸಿದ ದುಡ್ಡು, ಮಕ್ಕಳ ವಿದ್ಯಾಭ್ಯಾಸಕ್ಕೋ ಮತ್ತೊಂದಕ್ಕೋ ಮೀಸಲಿರಿಸಿದ ಚಿಲ್ಲರೆ ದುಡ್ಡು ಈ ಯುವಕರ ಪಾಲಾಗುತ್ತದೆ. ಬಲವಂತವಾಗಿ ಹೇಳಿದ ದುಡ್ಡು ಕಿತ್ತುಕೊಳ್ಳುವಾಗ ಮಿತ್ರ ನಿಜಕ್ಕೂ ಕಂಬನಿ ಮಿಡಿಯುತ್ತಾನೆ. ಇದು ಆ ಗಣಪತಿಗೂ ಕಾಣುತ್ತದೋ ಇಲ್ಲವೋ ಎಂಬುದು ಅನುಮಾನ.
          ಇದು ಕೇವಲ ಒಂದು ರಸ್ತೆಯ ಅಂಗಡಿಯ ಕಥೆಯಲ್ಲ. ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ಇಂತಹ ಕಥೆಗಳು ಬೇಕಾದಷ್ಟು ಸಿಗುತ್ತವೆ. ಇದು ಹೊರಬರುವುದಿಲ್ಲ. ಇದಕ್ಕೆ ದೇವರ ಭಯವಂತೂ ಖಂಡಿತಾ ಅಲ್ಲ. ಈ ಭಯ ಭೀತಿಯ ವಾತಾವರಣ ಯಾವ ಮಾಧ್ಯಮದಲ್ಲೂ ಚರ್ಚೆಯಾಗುವುದಿಲ್ಲ. ಮುಂಜಾನೆ ಐದರ ಹೊತ್ತಿಗೆ ಧ್ವನಿ ವರ್ಧಕದ ಸದ್ದಿನ ಬಗ್ಗೆ ಚರ್ಚೆಯಾಗುತ್ತದೆ. ಆದರೆ ಈ ದರೋಡೆ ಕೇವಲ ಒಂದು ಧರ್ಮಕ್ಕೆ ಸೀಮಿತವಲ್ಲ. ಮನುಷ್ಯನ ಢಾಂಬಿಕ ಆಚರಣೆಗಳಿಗೆ ಎಲ್ಲ ಕಡೆಯಲ್ಲೂ ಬಲಿಪಶುಗಳ ಸೃಷ್ಟಿಯಾಗುತ್ತದೆ. ಮತ್ತೊಬ್ಬನಿಗೆ ತೊಂದರೆ ಕೊಟ್ಟು ನನ್ನನ್ನು ಪೂಜಿಸು ಎಂದು ಯಾವ ದೇವರೂ ಯಾವ ಧರ್ಮವೂ ಹೇಳಿಲ್ಲ. ಒಂದುವೇಳೆ ಹೇಳಿದ್ದರೆ ಆ ಧರ್ಮದಿಂದ ಸಮಾಜದ ಉನ್ನತಿಯೂ ಸಾಧ್ಯವಾಗುವುದಿಲ್ಲ. ಸಮಾಜದ ಹಿತಾಸಕ್ತಿಯೂ ಗೌರವಿಸಲ್ಪಡುವುದಿಲ್ಲ.  ಯಾರಿಗೂ ತೊಂದರೆ ಕೊಡದೆ ದೇವರ ಆರಾಧನೆಯನ್ನು ಮಾಡುತ್ತೇನೆ ಎನ್ನುವ ಸಂಕಲ್ಪ ಶುದ್ದಿಯ ಉದಾತ್ತ ಧ್ಯೇಯಕ್ಕೆ ಅರ್ಥವೇ ಇರುವುದಿಲ್ಲ. ಅರ್ಥ ಇರಬೇಕಾದರೆ ಸಂಕಲ್ಪ ಶುದ್ದಿ ಎಂಬುದರ ಅರಿವಾದರೂ ಆಗಬೇಕಲ್ಲ?


          ಆಚರಣೆಗಳು ಅನುಷ್ಠಾನಗಳು ಅವರವರ ನಂಬಿಕೆ ವಿಶ್ವಾಸಕ್ಕೆ ಸಂಸ್ಕೃತಿಗೆ ಅವಲಂಬಿಸುವಂಥವುಗಳು. ಇದಕ್ಕೆ ಯಾವ ಆಕ್ಷೇಪವೂ ಇಲ್ಲ. ಆದನ್ನು ಹೇಗಾದರೂ ಆಚರಿಸುವ ಹಕ್ಕು ಎಲ್ಲರಿಗೂ ಇರುತ್ತದೆ. ಅದನ್ನು ಶಾಂತಿಯಿಂದಲೋ ಕೇಕೆ ಹಾಕಿ ಗದ್ದಲವೆಬ್ಬಿಸಿ ಆಚರಿಸುವುದೋ  ಅವರವರಿಗೆ ಬಿಟ್ಟದ್ದು. ಆದರೆ ಇನ್ನೊಬ್ಬರಿಗೆ ತೊಂದರೆಯಾಗುವುದಿದ್ದರೆ ಅಲ್ಲಿ ಮರುಗುವ ಮನಸ್ಸುಗಳಿರುತ್ತವೆ. ತಡ ರಾತ್ರಿಯವರೆಗೂ ಸಹ ಕಿವಿಯ ತಮ್ಮಟೆ ಕಿತ್ತು ಹೋಗುವ ಹಾಗೆ ಅಧಿಕ ಗದ್ದಲದಲ್ಲಿ ರಸಮಂಜರಿ, ತಮಟೇ ವಾದ್ಯಗಳ ನ್ನು ಮೊಳಗಿಸುವಾಗ ಅಕ್ಕ ಪಕ್ಕದ ಮನೆಯಲ್ಲಿರುವ ಹೃದಯ ರೋಗಿಗಳು ಎದೆಯನ್ನು ಕೈಯಲ್ಲಿ ಹಿಡಿದು ನಿದ್ದೆ ಗೆಟ್ಟು ಕುಳಿತಿರುತ್ತಾರೆ. ಇದು ಯಾವುದೇ ಡಿಬೇಟ್ ಗೆ  ವಿಷಯವಾಗುವುದಿಲ್ಲ. ಪ್ರತಿಷ್ಠೆಯನ್ನು ಮೆರೆಸುವ ಈ ಭಕ್ತಿ ಪ್ರಕಟಣೆಯ ಪೂಜೆ ಉತ್ಸವಗಳಿಂದ ಯಾವ ದೇವರ ಪ್ರಸನ್ನನಾಗುತ್ತಾನೋ ತಿಳಿಯುವುದಿಲ್ಲ. ದೇವರ ಮೇಲಿನ ಭಕ್ತಿ ಆರಾಧಿಸುವ ಮನಸ್ಸು ಇದ್ದರೆ ಮುಂಜಾನೆ ಎದ್ದು ಏಕಾಂತದಲ್ಲಿ ಭಗವಂತನ ಸ್ಮರಣೆಯಿಂದ ತಣ್ಣಗೇ ಕುಳಿತುಬಿಡಬಹುದು. ಲೈಟ್ ದೀಪ ಹಚ್ಚದೇ ಇದ್ದರೂ ಕತ್ತಲೆಯಲ್ಲಿ ಮೌನವಾಗಿ ಕುಳಿತುಬಿಡಬಹುದು. ಈ ಧ್ಯಾನದಲ್ಲಿ ಯಾರಿಗೂ ತೊಂದರೆಯೂ ಆಗುವುದಿಲ್ಲ. ಯಾರ ಆಕ್ಷೇಪವೂ ಇರುವುದಿಲ್ಲ. ಮಿಕ್ಕುಳಿದ ಯಾವ ಆಧಾನ ವಿಧಿಗಳಲ್ಲಿ ಸಿಗದ ಶಾಂತಿ ಸಮಾಧಾನ ಇಲ್ಲಿ ಸಿಗುತ್ತದೆ. ಆದರೆ ಇದು ಯಾರಿಗೂ ಆಕರ್ಷಣೀಯ ಎನಿಸುವುದಿಲ್ಲ. ತಾವು ನಮಸ್ಕರಿಸುವುದು ಆರಾಧಿಸುವುದು ನಮ್ಮ ದೇವರ ವಿಶ್ವಾಸ ಮತ್ತೋಬ್ಬರೂ ಗಮನಿಸಬೇಕೆಂಬುದೇ ನಮ್ಮ ಧ್ಯೇಯ. ಒಂದು ವೇಳೆ ಗಮನ ಹರಿಸದೇ ಇದ್ದಲ್ಲಿ ತೊಂದರೆ ಕೊಟ್ಟಾದರೂ ಗಮನವನ್ನು ಸೆಳೆಯುವ ಪ್ರವೃತ್ತಿ.  ಹಾಗಾಗಿ ನಮ್ಮ ದೇವರ ಮೇಲೆ ಭಯ ಹುಟ್ಟಿಸಿ ತಮ್ಮ ಸ್ವಾರ್ಥವನ್ನು ನಡೆಸುವ ಭಕ್ತರು ನಿಜಕ್ಕೂ  ಭಯೋತ್ಮಾದಕರೇ  ಆಗಿಬಿಡುತ್ತಾರೆ.   ಭೂಮಿಯ ಮೇಲೆ ಪ್ರತಿಯೊಂದು ಜೀವಿ ಪ್ರಾಣಿ ಸಂಕುಲಗಳು  ಹುಟ್ಟಿ ಬರುವುದು ಜೀವಿಸುವುದಕ್ಕಾಗಿ. ಸಾಯುವುದಕ್ಕಾಗಿಯಲ್ಲ. 

No comments:

Post a Comment