ಅದು
ಮಂಗಳೂರಿನ ಕಂಕನಾಡಿ ರೈಲ್ವೇ ನಿಲ್ದಾಣ. ಪ್ಲಾಟ್ ಫಾರಂ ಮೂರರಿಂದ ಬೆಂಗಳೂರಿನ ಕಡೆಗೆ ಹೋಗುವ
ಕುಡ್ಲ ಎಕ್ಸ್ ಪ್ರೆಸ್ ಹೊರಡುವುದರಲ್ಲಿತ್ತು. ‘ ಕುಡ್ಲ ಎಕ್ಸ್
ಪ್ರೆಸ್ ’ ನಾವೆಂದರೆ ಟ್ರೈನ್ ಮೇಲೆ ಗೋಮಟೇಶ್ವರ ಅಂತ
ಫಲಕವಿತ್ತು. ಬೆಳಗ್ಗಿನ ಪ್ರಖರ ಬಿಸಿಲಿಗೆ ರೈಲು ಸದ್ದಿಲ್ಲದೇ ಉದ್ದಕ್ಕೆ ವಿರಮಿಸಿತ್ತು. ಪ್ಲಾಟ್ ಫಾರಂನ ಈ ತುದಿಯಿಂದ
ಆ ತುದಿಯ ವರೆಗೂ ತನ್ನ ಮೂತಿ ಬಾಲವನ್ನು ತಾಕಿಸಿ ಮಲಗಿತ್ತು. ಇನ್ನು ಕೊಡವಿಕೊಂಡು ಎಷ್ಟು
ಹೊತ್ತಿಗೆ ಹೊರಡಬಹುದಪ್ಪ ಎಂಬ ತವಕ ಅಲ್ಲಿದ್ದ ಕೆಲವು ಪ್ರಯಾಣಿಕರಿಗೆ. ಹೊರಗೆ ಬಿಸಿಲು. ರೈಲಿಗೆ
ಇನ್ನೂ ಎಂಜಿನ್ ಜೋಡಿಸಿಲ್ಲದೇ ಇದ್ದುದರಿಂದ ಒಳಂಗೆ ಫ್ಯಾನ್ ತಿರುಗುತ್ತಿಲ್ಲ. ಹಾಗಾಗಿ ಬಹಳಷ್ಟು
ಪ್ರಯಾಣಿಕರು ಒಳಗೆ ಕುಳಿತಿರುವುದಕ್ಕೂ ಆಗದೇ ಹೊರಗೆ ನಿಂತಿರುವುದಕ್ಕೂ ಆಗದೆ ಕೈಯಲ್ಲಿದ್ದ
ವಸ್ತ್ರದಿಂದ ಗಾಳಿ ಬೀಸುತ್ತಿದ್ದರು.
ವಯೋ ವೃದ್ದರೊಬ್ಬರು ಭೋಗಿಯೊಳಗೆ ಕುಳಿತು ಅದಾವುದೋ
ಪುಸ್ತಕ ಓದುತ್ತಿದ್ದರು. ಘಳಿಗೆ ಘಳಿಗೆಗೊಮ್ಮೆ ಬಾಗಿಲ ಬಳಿಗೆ ಬಂದು ಪ್ಲಾಟ್ ಫಾರಂನ ಈ ತುದಿಯಿಂದ
ಆತುದಿಯವರೆಗೂ ಕಣ್ಣು ಹಾಯಿಸುತ್ತಿದ್ದರು. ನಾನು ರೈಲು ಹತ್ತಿ ಅದೇ ಭೋಗಿಯಲ್ಲಿದ್ದ ನನ್ನ
ಸೀಟಿನಲ್ಲಿ ಕುಳಿತೆ. ಕೈಯಲ್ಲಿದ್ದ ಲಗೇಜ್ ಇರಿಸುವಲ್ಲೇ ಇರಿಸಿದೆ. ಮೊಬೈಲ್ ಗೆ ಹೆಡ್ ಸೆಟ್
ಸಿಕ್ಕಿಸಿ ರೇಡಿಯೋ ಎಫ್ ಎಂ ಹಾಕಿ ಮಂಗಳೂರು
ಆಕಾಶವಾಣಿ ಕೇಳುತ್ತಾ ಕುಳಿತೆ. ಊರಿಗೆ ಬಂದಾಗೆಲ್ಲ ಮಂಗಳೂರು ಆಕಾಶವಾಣಿ ಕಾರ್ಯಕ್ರಮಗಳನ್ನು
ಕೇಳುವುದರಲ್ಲಿ ಏನೋ ಒಂದು ಆನಂದ. ವೃಥಾ ಹರಟೆಗಳಿಲ್ಲದ ಸರಳ ಕಾರ್ಯಕ್ರಮಗಳು.
ಸ್ವಲ್ಪ ಹೊತ್ತಿಗೆ ನನ್ನ ಪಕ್ಕದ
ಆಸನದಲ್ಲಿದ್ದ ವೃದ್ದರು ಮಾತಿಗಿಳಿದರು. ನಾನು ಹೆಡ್ ಸೆಟ್ ತೆಗೆದು ಅವರ ಮಾತಿಗೆ ಕಿವಿಗೊಟ್ಟು
ಅವರ ಜತೆ ಮಾತಿಗಳಿವ ಅನಿವಾರ್ಯತೆ ಬಂತು. ಅವರು “
ನೀವು ಬೆಂಗಳೂರ..? “ ಅಂತ ಕೇಳಿದರು. ನಾನು ಹೌದು ಎಂದೆ.ನಂತರ ಹೀಗೆ ಉಭಯ ಕುಶಲಗಳು ಯಥಾಪ್ರಕಾರ
ಔಪಚಾರಿಕ ಮಾತುಗಳು. ವೃದ್ದರ ಹೆಸರು. ಐತ್ತಪ್ಪಶೆಟ್ಟಿ. ಬೆಂಗಳೂರಲ್ಲಿ ಇದ್ದ ತಮ್ಮ ಮಗನ ಮನೆಗೆ ಹೊರಟಿದ್ದಾರೆ.
ಕಾಲಿನ ಬುಡದಲ್ಲಿ ಒಂದು ಪುಟ್ಟ ಬ್ಯಾಗ್ ಅಷ್ಟೇ ಆತನ ಲಗೇಜ್. ಒಂದು ಸಲ ಬ್ಯಾಗ್ ತೆರೆದಾಗ ಬ್ಯಾಗ್
ನಲ್ಲಿ ಮೇಲೆ ಇದ್ದ ಕಟ್ಟಿನಿಂದ ಹಳದಿ ಹಳದಿಯಾದ
ನೇಂದ್ರ ಬಾಳೆಕಾಯಿ ಚಿಪ್ಸ್ ಕಂಡಿತು. ಲಗೇಜ್ ಚಿಕ್ಕದಾದರೂ ಚಿಪ್ಸ್ ಕಟ್ಟು ಸ್ವಲ್ಪ
ದೊಡ್ಡದಾಗಿಯೇ ಇತ್ತು.
ಐತ್ತಪ್ಪ ಶೆಟ್ಟರದ್ದು ಪುಟ್ಟ
ಸಂಸಾರ. ಎಡಪದವಿನ ಆಕಡೆಯ ಯಾವುದೋ ಹಳ್ಳಿಯಲ್ಲಿ ವಾಸ. ರಸ್ತೆ ಬದಿಯಲ್ಲೇ ಇರುವ
ಚಿಕ್ಕ ಮನೆ, ಅದು ಕೇವಲ ಮನೆ ಮಾತ್ರವಲ್ಲ ಚಿಕ್ಕ ಹೋಟಲ್ ಕೂಡ ಆಗಿತ್ತು. ಆ ಚಿಕ್ಕ ಹೋಟೇಲಿನಿಂದಲೇ ಇದ್ದ ಎರಡು ಮಕ್ಕಳನ್ನು ಸಾಕಿ
ಸಂಸಾರ ನಿಭಾಯಿಸಿದ್ದರು. ಅದರಲ್ಲಿ ಮಗ ಬೆಂಗಳೂರಲ್ಲಿ ಯಾವುದೋ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರೆ
ಮಗಳನ್ನು ಊರಲ್ಲೇ ಮದುವೆ ಮಾಡಿಕೊಟ್ಟಾಗಿತ್ತು. ಹೀಗೆ ಮಕ್ಕಳು ಊರು ಬಿಟ್ಟಾಗ ಇವರು ಪತ್ನಿ ಒಂಟಿ
ಮನೆಯಲ್ಲಿ ವಾಸವಾಗಿದ್ದರೆ, ಸಮಯ ಕಳೆಯುವುದಕ್ಕಾಗಿ ಹೋಟೆಲ್ ಮುಂದುವರೆಸಿದ್ದರು. ಮಕ್ಕಳು ಬೇಡ
ಎಂತಿದ್ದರೂ ನಿತ್ಯ ಬರುವ ಊರಿನ ಆಳುಗಳ ಸಂಪರ್ಕಕ್ಕೆ ಅದೊಂದೇ ಮಾಧ್ಯಮವಾದುದರಿಂದ ಮುಂಜಾನೆಯಿಂದ
ರಾತ್ರಿತನಕವೂ ಯಾಂತ್ರಿಕವಾಗಿ ಶೆಟ್ಟರ ಹೋಟೇಲ್ ಉದ್ಯಮ ನಡೆಯುತ್ತಿತ್ತು. ಎಲ್ಲವೂ
ಸಸೂತ್ರವಾಗಿದ್ದರೆ ಬದುಕಲ್ಲಿ ರಸವೇನಿದೆ?
ಕೆಲವು ವರ್ಷದ ಕೆಳಗೆ ಪತ್ನಿ
ಇಹಲೋಕ ತ್ಯಜಿಸಿದ ಮೇಲೆ ಶೆಟ್ಟರು ಅಕ್ಷಶಃ ಒಂಟಿಯಾಗಿಬಿಟ್ಟರು. ಆದರೆ ಇದೆಲ್ಲ ಬದುಕಿನ ವಾಸ್ತವ.
ಮಗಳ ಮನೆಯಲ್ಲಿ ಇರೋಣವೆಂದು ಅಲ್ಲಿಗೆ ಹೋದರೆ ಒಂದೆರಡು ದಿನದಲ್ಲೇ ಅಲ್ಲಿಂದ ಹೊರಡುವ
ಮನಸ್ಸಾಗುತ್ತದೆ. ಮಗನ ಮನೆಯಾದರೋ ದೂರದ ಬೆಂಗಳೂರಲ್ಲಿ. ಆ ನಗರದ ಜೀವನ ತನ್ನದೆಂದು ಅನಿಸುವುದೇ
ಇಲ್ಲ. ಮಾತ್ರವಲ್ಲ ದೂರದ ಬೆಂಗಳೂರಿನ ಬಸ್ ಪ್ರಯಾಣ ಇನ್ನೂ ಅಧ್ವಾನವಾಗುತ್ತಿತ್ತು.
ಒಂಟಿಯಾಗೇ ಇದ್ದ ಶೆಟ್ಟರಿಗೆ
ಮಕ್ಕಳಿಗೆ ಮಕ್ಕಳಾಗಿ ಸಂಸಾರ ಬೆಳೆಯುವಾಗ ಆ ಪುಟ್ಟ ಮಕ್ಕಳೊಂದಿಗೆ ಬೆರೆಯುವ ಆಕಾಂಕ್ಷೆ
ಈಡೆರುತ್ತಿರಲಿಲ್ಲ. ಅದರಲ್ಲು ಮಗನಿಗೆ ಪುಟ್ಟ ಮಗು ಬಂದನಂತರ ದೂರದ ಬೆಂಗಳೂರಿಗೆ ಹೋಗುವುದು ಮೊಮ್ಮಗುವಿನ ಜತೆ
ಬೆರೆಯುವುದು ಕನಸಿನ ಮಾತೇ ಆಗಿತ್ತು. ಮನದ ತುಡಿತ
ತಡೆಯಲಾಗದೆ ಒಂದೆರಡು ಸಲ ಬಸ್ ಹತ್ತಿದ್ದರು. ಆದರೆ ದೇಹ ರಾತ್ರಿಯ ಪ್ರಯಾಣಕ್ಕೆ
ಸಹಕರಿಸುತ್ತಿರಲಿಲ್ಲ. ಅದರಲ್ಲೂ ಬಸ್ ಹತ್ತಿದ ಕೂಡಲೇ ತೊಡಗುವ ದೇಹಬಾಧೆ ಪ್ರಯಾಣ ತುಂಬ
ಹಿಂಸೆಯನ್ನು ನೀಡುತ್ತಿತ್ತು. ಬಸ್ ಯಾವಾಗ ನಿಲ್ಲಿಸುತ್ತಾರೆ ಎಂದು ಕಾದು ನೋಡುವಂತೆ
ಮಾಡುತ್ತಿತ್ತು. ಹಾಗಾಗಿ ಬೆಂಗಳೂರು ಎಂಬುದು ಚಂದ್ರಲೋಕದಂತೆ ಭಾಸವಾಗತೊಡಗಿತು. ಆದರೆ
ತನ್ನವರನ್ನು ನೋಡಬೇಕು ಬೆರೆಯಬೇಕು ಎನ್ನುವ ತುಡಿತ ಹಲವು ಸಲ ಒಂಟಿಯಾಗಿ ರೋಧಿಸುವಂತೆ
ಮಾಡುತ್ತಿತ್ತು. ಒಂಟಿಯಾಗಿ ಕುಳಿತು ಕಣ್ಣೀರು ಸುರಿಸಿದರೆ ಅದನ್ನು ತೊಡೆಯುವ ಕೈಗಳೇ ಬಳಿಯಲ್ಲಿ
ಇಲ್ಲ.
ಈ ನಡುವೆ ಬೆಂಗಳೂರಿಗೆ ಟ್ರೈನ್ ಶುರುವಾಗಿತ್ತು. ಆದರೆ ಅದನ್ನು
ಉಪಯೋಗಿಸುವುದೇ ಕಷ್ಟವಾಗುತ್ತಿತ್ತು. ಸೀಟು ಸಿಗಬೇಕಾದರೆ ಹರಸಾಹಸ ಮಾಡಬೇಕಾಗುತ್ತಿತ್ತು. ಅದರ
ಬೆಂಬತ್ತಿ ಹಿಡಿಯುವಷ್ಟು ಚೈತ್ಯನ್ಯವೂ ಇಲ್ಲ. ಒಟ್ಟಿನಲ್ಲಿ ಮೊಮ್ಮಕ್ಕಳ ಒಡನಾಟ ಬರೀ
ಕನಸಾಗತೊಡಗಿತು. ಊರಲ್ಲಿ ಕಾಡುವ ಒಂಟಿತನ ನಗರಕ್ಕೆ ಒಗ್ಗಿಕೊಳ್ಳದ ಜೀವನ. ಮಕ್ಕಳ ಒಡನಾಟ. ಈಗ ಬೇಕೆಂದರೆ
ದೂರದ ಪ್ರಯಾಣವನ್ನು ಸಹಿಸಿಕೊಳ್ಳುವುದು ಅನಿವಾರ್ಯ.
ಆನಂತರ ಹಗಲು ರೈಲು ಆರಂಭವಾದಾಗ ಒಂದು ನಿಟ್ಟುಸಿರು ಬಿಟ್ಟರೂ ಕೊಂಕಣ
ಸುತ್ತಿ ಮೈಲಾರ ಎಂದು ಸುತ್ತು ಹಾಕಿಕೊಂಡು ಹೋಗುವ ರೈಲು ಪ್ರಯಾಣ ಸಮಯ ಯಾವುದೂ
ಹೊಂದಿಕೆಯಾಗುತ್ತಿರಲಿಲ್ಲ. ಮಧ್ಯರಾತ್ರಿ ಮುಟ್ಟುವ ರೈಲು ಇಳಿದು ಮನೆಗೆ ಹೋಗುವ ಬಗೆಯಾದರೂ ಹೇಗೆ.
ಹಾಗೋ ಹೀಗೋ ಆಗಿ ಇದೀಗ ಹಾಸನ ಕುಣಿಗಲ್ ಆಗಿ ಬಸ್ ಗಿಂತಲೂ ಬೇಗ ಹೋಗುವ ರೈಲು ಬಂದಿದೆ.
ಪ್ರತಿದಿನವೂ ಬೆಂಗಳೂರಿಗೆ ಹೋಗುವುದಿದ್ದರೆ ಯೋಚಿಸಬೇಕಿಲ್ಲ. ಹನ್ನೊಂದು ಘಂಟೆಗೆ ಕುಳಿತರ ಹತ್ತರ
ಮೊದಲು ಬೆಂಗಳೂರು ತಲುಪುತ್ತದೆ. ಚಿಲ್ಲರೆ ದುಡ್ಡಿನಲ್ಲಿ ಬೆಂಗಳೂರು ಸೇರಿಯಾಗುತ್ತದೆ. ಈಗ
ಮೊಮ್ಮಕ್ಕಳೋಂದಿಗೆ ಕಳೆಯುವುದು ಬದುಕಿನಲ್ಲಿ ಒಂದು ಹುರುಪನ್ನು ತಂದಿದೆ ಎನ್ನುವಾಗ ತಾತನ
ಕಣ್ಣುಗಳು ತೇವವಾದವು.
ಆದರೂ ಮಂಗಳೂರು ಕರಾವಳಿಗರ ದುರಾದೃಷ್ಟ ಎಂದರೆ ಇಷ್ಟೇ ಅಲ್ಲ. ರಾತ್ರಿಯ
ರೈಲು ಇದೇ ಕುಣಿಗಲ್ ಹಾಸನ ಮಾರ್ಗವಾಗಿ ಹೋಗುವಂತಾಗಬೇಕು. ಪ್ರತಿ ದಿನ ಬೆಂಗಳೂರಿನಿಂದ ಕರಾವಳಿಗೆ ಎರಡು ಸಾವಿರ ಮಂದಿ ಒಂದೇ
ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇದರಲ್ಲಿ ಮೈಸೂರಿನಿಂದ ಪ್ರಯಾಣಿಸುವವರ ಸಂಖ್ಯೆ ಹೆಚ್ಚೆಂದರೆ ನೂರು ಮಂದಿ ಇರಬಹುದು. ದುರ್ದೈವ
ಎಂದರೆ ಈ ನೂರು ಮಂದಿಗೆ ಬೇಕಾಗಿ ಉಳಿದ ಸಾವಿರಕ್ಕೂ ಅಧಿಕ ಜನ ತಮ್ಮ ಸಮಯವನ್ನು
ವ್ಯರ್ಥಮಾಡಬೇಕಿದೆ. ಕರಾವಳಿಯವರ ಈ ಬವಣೆ ನೋಡುವವರು ಯಾರು? ಸೂಕ್ತ ಸ್ಪಂದನೆ ಎಲ್ಲಿ ಸಿಗಬಹುದು?
No comments:
Post a Comment