ನಾವು ಚಿಕ್ಕವರಿರುವಾಗ ಮಳೆ ಬಂದರೆ, ಜೂನ್ ತಿಂಗಳಿಂದ ತೊಡಗಿ ಸಪ್ಟಂಬರ್ ವರೆಗೂ ಬಿಡದೇ ಸುರಿಯುತ್ತಿತ್ತು. ಶುಕ್ರವಾರ ಮಳೆ ಶುರುವಾದರೆ ಅದು ಮುಂದಿನ ಶುಕ್ರವಾರವೆ ನಿಲ್ಲುವುದು ಎಂಬ ಮಾತು ಇತ್ತು. ಆಟಿ ತಿಂಗಳ ಮಳೆಗೆ ಸಾಮಾನ್ಯ ಎಲ್ಲರೂ ಆಘೋಷಿತ ರಜೆ ಆಚರಿಸುತ್ತಿದ್ದರು. ಹಾಗಾಗಿ ಆಟಿ ತಿಂಗಳ ಸಮಯದಲ್ಲಿ ದುರ್ಗಾನಮಸ್ಕಾರದಂತಹ ಪೂಜಾ ಕಾರ್ಯಕ್ರಮಗಳು ಮನೆಯಲ್ಲಿ ಆಗುತ್ತಿತ್ತು. ಅದು ಸಂಪ್ರದಾಯವೂ ಆಗಿತ್ತು. ನಾನು ಚಿಕ್ಕವನಿರುವಾಗ ಯಾವಗಲೋ ಒಂದೆರಡು ಸಲ ನೆರೆ ಬರುತ್ತಿತ್ತು. ಅದೂ ಹೊಳೆ ಹರಿಯುವಲ್ಲಿ ಮಾತ್ರ. ಒಂದು ಸಲ 1975ನೇ ಇಸವಿಯಲ್ಲಿರಬೇಕು, ನೇತ್ರಾವತಿ ಉಕ್ಕಿ ಹರಿದು ಜಪ್ಪಿನ ಮೊಗರು ಸುತ್ತ ಮುತ್ತ ಮುಳುಗಡೆಯಾಗಿ ತೆಂಗಿನ ಮರದ ತುದಿ ಮಾತ್ರ ಕಂಡದ್ದು ನೆನಪಿದೆ. ಜನ ದೋಣಿಯಲ್ಲೇ ಸಂಚರಿಸುತ್ತಿದ್ದದ್ದು ನೋಡಿದ ನೆನಪು. ಆನಂತರ ಅಂತಹ ನೆರೆ ಬಂದ ನೆನಪಿಲ್ಲ. ಮತ್ತೊಂದು ತುದಿಯ ಕೂಳೂರು ದೇರೆಬೈಲು ಮುಂತಾದ ಕಡೆಗಳಲ್ಲೂ ಅಷ್ಟೇ ಕೆಲವೊಮ್ಮೆ ನೆರೆ ಬಂದು ಶಾಲೆಗೆ ಬರುವ ಮಕ್ಕಳು " ಬೊಳ್ಳ ಬಂದು ಶಾಲೆಗೆ ರಜೆ" ಅಂತ ಹೇಳುತ್ತಿದ್ದರು. ಆದರೆ ನಂತರ ಮಳೆಯ ಪ್ರಮಾಣ ಕಡಿಮೆಯಾಗಿ ವಾರಗಟ್ಟಲೆ ತಿಂಗಳು ಗಟ್ಟಲೆ ಸುರಿಯುತ್ತಿದ್ದ ಮಳೆ ಕೆಲವೇ ಗಂಟೆಗೆ ಸೀಮಿತವಾಗಿ ಬಿಟ್ಟಿತು. ಇದೀಗ ಮಂಗಳೂರು ನಗರವೇ ಜಲಾವೃತವಾಗಿರುವುದನ್ನು ನೋಡಿದರೆ ನಾವುಗಳು ಎಲ್ಲೋ ತಪ್ಪಿದ್ದೇವೆ ಎಂದನಿಸುತ್ತದೆ. ತಿಂಗಳು ಗಟ್ಟಲೆ ಮಳೆಗೆ ಎದೆಯಗಲಿಸಿ ನಿಮಿರಿ ನಿಲ್ಲುತ್ತಿದ್ದ ಮಂಗಳೂರು ಕರಾವಳಿ ಈ ಒಂದು ದಿನದ ಮಳೆಗೆ ಮುಳುಗಬೇಕಿದ್ದರೆ ಇದು ಮಳೆಯ ಅವಾಂತರ ಖಂಡಿತಾ ಅಲ್ಲ. ಮಿತಿ ಮಿರೀದ ಪೂರ್ವ ಯೋಚನೆ ಇಲ್ಲದ ಯೋಜನೆಗಳೇ ಕಾರಣ. ಕೇವಲ ಮಂಗಳೂರು ನಗರ ಪ್ರದೇಶಗಳು ಮುಳುಗುವುದೆಂದರೆ ಇದರ ಹಿಂದೆ ಇರುವ ಅಧಿಕಾರ ದಾಹ ಯಾವ ಬಗೆಯದ್ದು? ಅರ್ಥವಾಗದೇ ಇರುವುದಲ್ಲ? ಜನ ಪ್ರತಿನಿಧಿಗಳಿಗೆ ಒಮ್ಮೆ ಆಯ್ಕೆಯಾದರೆ ಸಾಕು, ಆಯ್ಕೆಯಾದ ಮೇಲೆ ಐದು ವರ್ಷ ನಿಭಾಯಿಸಿ ಒಂದಷ್ಟು ದುಡ್ದು ಮಾಡಿ ಅಧಿಕಾರ ಚಲಾಯಿಸಿದರೆ ಸಾಕು. ಅಧಿಕಾರದಲ್ಲಿರುವಾಗ ತಮ್ಮ ಸಂಬಂಧಿಕರನ್ನು, ಬಳಗವನ್ನು ಕಂಟ್ರಾಕ್ಟರ್ ಗಳನ್ನಾಗಿ ಮಾಡಿ ಒಂದಷ್ಟು ಟೆಂಡರ್ ಗಳನ್ನು ಪಾಸ್ ಮಾಡಿಸಿ ಆ ಕೆಲಸವನ್ನು ತಾವೂ ಮಾಡದೆ ಉಪ ಕಂಟ್ರಾಕ್ಟರ್ ಗಳಿಗೆ ಕಮೀಷನ್ ಗೆ ವರ್ಗಾಯಿಸಿ...ಅಂತೂ ನಗರದ ಬಹುತೇಕ ಭಾಗದ ಎಲ್ಲಾ ಕೆಲಸಗಳೂ ಸಹ ಕಳಪೆ, ಹಾಗಾಗಿ ಪ್ರಕೃತಿ ಈಗ ಈ ರೂಪದಲ್ಲಿ ತೋರಿಸಿಕೊಟ್ಟಿದೆ. ಹಿಂದಿನ ದುಡ್ಡು ತಿಂದ ಪ್ರತಿನಿಧಿಗಳು ಎಲ್ಲಿದ್ದಾರೋ. ಈಗಿನವರು ಏನು ಮಾಡುತ್ತಾರೋ ಒಂದೂ ಸಹ ಜನ ಸಾಮಾನ್ಯನಿಗೆ ಗೊತ್ತಿಲ್ಲ. ಗೊತ್ತಿದ್ದರೂ ಏನೂ ಮಾಡದ ಅಸಹಾಯಕ ಪಾತ್ರ. ಬೆಂಗಳೂರಲ್ಲಿ ಎಂದೋ ಆರಂಭವಾಗಿದ್ದ ಸಮಸ್ಯೆ ಈಗ ಮಂಗಳೂರಿಗೂ ಕಾಲಿಟ್ಟಿದೆ. ಇನ್ನು ಮತ್ತೊಂದು ನಗರ ಮಾತ್ರವಲ್ಲ ಸಣ್ಣ ಊರುಗಳಿಗೂ ಕಾಲಿಡಬಹುದು. ದುಡ್ಡು ತಿಂದು ತೇಗುವ ಕಂಟ್ರಾಕ್ಟರ್ ಗಳು ದೊಡ್ಡ ಅಪಾರ್ಟ್ ಮೆಂಟ್ ಕಟ್ಟಿ ತಮ್ಮ ಮಕ್ಕಳೊಂದಿಗೆ ಐಷಾರಾಮಿ ಜೀವನ ನಡೆಸುತ್ತಿರಬಹುದು. ಎಲ್ಲವೂ ಚಕ್ರದೊಳಗಿನ ಬಡಿಗೆಗಳಂತೆ ತಿರುಗುವಾಗ ಒಂದರ ನಂತರ ಇನ್ನೊಂದು ಬರುತ್ತಾ ಇರುತ್ತದೆ. ಆದರೂ ಅದರೂ ವ್ಯವಸ್ಥೆ ಬದಲಾಗುವುದಿಲ್ಲ. ಅದು ಹೀಗೆ ಮುಂದುವರೆಯುತ್ತದೆ.
Tuesday, May 29, 2018
Thursday, May 17, 2018
ರಾಜಕಾರಣಗಳು....
ಒಂದು ಸಭ್ಯ ಕುಟುಂಬ, ಅಥವಾ ಸಭ್ಯ ಅಪ್ಪ ಅಮ್ಮ ತಮ್ಮ
ಮನೆಯ ಮಕ್ಕಳು ತಾವು ಹೆತ್ತ ಮಗು ಏನು ಆಗ ಬೇಕು ಎಂದು ಕನಸು ಕಟ್ಟಿ ನಿರೀಕ್ಷೆ
ಇಟ್ಟುಕೊಳ್ಳುವುದನ್ನು ಗ್ರಹಿಸುವುದು ಕಷ್ಟ. ಒಬ್ಬೊಬ್ಬರದೂ ಒಂದೊಂದು ನಿರೀಕ್ಷೆಗಳು ಇರುತ್ತವೆ.
ಅದನ್ನು ಕಲ್ಪಿಸುಕೊಳ್ಳುವುದು ಕಷ್ಟ. ಆದರೆ ತಮ್ಮ ಮಕ್ಕಳು ಏನು ಆಗಬಾರದು ಎಂದು ಬಯಸುತ್ತಾರೋ
ಅದಕ್ಕೆ ಒಂದನ್ನಂತೂ ಖಂಡಿತವಾಗಿ ಹೇಳಬಹುದು.
ಏನದು? ನಮ್ಮ ಮಕ್ಕಳು ಏನಾಗಬಾರದು ಎಂಬುದನ್ನು
ಸಭ್ಯರಾದ ಅಪ್ಪ ಅಮ್ಮ ಸುಲಭದಲ್ಲಿ ಹೇಳಬಹುದು. ಅಥವಾ ಒಪ್ಪಿಕೊಳ್ಳಬಹುದು. ಅದೆಂದರೆ ಭಾರತದ “ರಾಜಕಾರಿಣಿ”. ಹೌದು ನಮ್ಮ ಮಕ್ಕಳು ರಾಜಕಾರಿಣಿಯಾಗಬೇಕೆಂದು ಯಾವೊಬ್ಬ
ಅಪ್ಪ ಅಮ್ಮನೂ ಬಯಸಲಾರರು. ಇದು ಒಂದು ಸಭ್ಯ ಸಮಾಜದಲ್ಲಿ ರಾಜ ಕಾರಿಣಿಗೆ ಹಿಡಿದಿರುವ ಕನ್ನಡಿ.
ಇದಕ್ಕೆ ಹಲವು ಆಕ್ಷೇಪಗಳು ಸಮಜಾಯಿಷಿಗಳು ಸ್ಪಷ್ಟೀಕರಣಗಳು ಇರಬಹುದು. ಏನಿದ್ದರೂ
ರಾಜಕಾರಿಣಿಯಾಗಬಬೇಕೆಂದು ಸ್ವತಹ ಮಗ ಮಗಳು ಬಯಸಬಹುದು. ಆದರೆ ಅಪ್ಪ ಅಮ್ಮ ಬಯಸಲಾರರು. ಇದು ಕಠೋರ
ಸತ್ಯ.
ಯಾಕೆ ಹೀಗೆ ಯೋಚಿಸಿದರೆ ಹಲವು ಕಾರಣಗಳು ಸಿಗಬಹುದು.
ಅದರೂ ಯಾರೂ ಈ ಕಾರಣದ ಬಗ್ಗೆ ಯೋಚಿಸುವುದಿಲ್ಲ. ಒಮ್ಮೆ ರಾಜಕಾರಿಣಿಯಾದರೆ ಬದಲಾಗುವ ಜೀವನ
ಶೈಲಿಯಲ್ಲಿ ಎಲ್ಲ ಕಾರಣಗಳು ಕೆಲವೊಮ್ಮೆ ಮುಚ್ಚಿಹೋಗುತ್ತವೆ. ಸಮಾಜ ಸೇವೆ ಪರೋಪಕಾರ ಹೀಗೆ
ತೊಡಗುವುದು ಬಹುತೇಕ ಅಂತ್ಯವಾಗುವುದು ಅಥವಾ ಗುರಿ
ಸೇರುವುದು ಪವಿತ್ರ ಕಡಲಿಗಲ್ಲ, ರಾಜಕೀಯವೆಂಬ
ಕೊಚ್ಚೆಗುಂಡಿಗೆ . ಇದಕ್ಕೆ ಬಹಳಷ್ಟು ನಿದರ್ಶನಗಳು ಸಿಗಬಹುದು. ಒಂದೆರಡು ಅಪವಾದಗಳಿದ್ದರೂ ಅದು
ಬಹಳ ಕ್ಷೀಣ.
ಜಗವೇ ನಾಟಕರಂಗ ಅಂತ ಕವಿಯೊಬ್ಬ ಹಾಡಿದರೆ, ನಾಟಕದ ಒಳಗೆ
ನಾಟಕವನ್ನು ಆಡುವುದು ರಾಜಕೀಯದಲ್ಲಿ. ಯಾವ ಕೆಟ್ಟ
ದೂರಾಲೋಚನೆ ಇದ್ದರೆ ಅದಕ್ಕೆ ಅಡ್ಡ ಹೆಸರೇ ರಾಜಕೀಯ, ರಾಜ ಕಾರಣ. ಯಾಕೇ ಹೀಗೆ? ಒಂದು ಪವಿತ್ರವಾದ ಆದರ್ಶಮಯವಾದ ಸಮಾಜ ಮುಖವನ್ನು
ಕಲುಷಿತಗೊಳಿಸುವ ಪ್ರಮೇಯ ಯಾಕೆ ಬಂತು? ಊಹಿಸುವುದು ಕಷ್ಟ. ಸ್ವಾತಂತ್ರ್ಯ ಪೂರ್ವದಲ್ಲಿ
ರಾಜಕಾರಣವೆಂದರೆ ಅದಕ್ಕೆ ಬಹಳಷ್ಟು ಗೌರವವಿರುತ್ತಿತ್ತು. ಯಾರು ತನ್ನ ನೆಲದ ಬಗ್ಗೆ ದೇಶದ ಬಗ್ಗೆ
ಅಭಿಮಾನವಿರುಸುತ್ತಾನೋ ಅಂತಹವನು ಮಾತ್ರವೇ ಪವಿತ್ರವಾದ ರಾಜಕಾರಣಕ್ಕೆ ಅರ್ಹನಾಗಿಬಿಡುತ್ತಿದ್ದ.
ವಿದ್ಯಾವಂತನಾದವನು ಮಾತ್ರವೇ ರಾಜಕೀಯಕ್ಕೆ ಇಳಿದು ಬಿಡುತ್ತಿದ್ದ. ಆದರೆ ಇಂದು ವಿದ್ಯಾಭ್ಯಾಸದ ಅಗತ್ಯವೇ
ಇರುವುದಿಲ್ಲ. ಸ್ವಾತಂತ್ರ್ಯ ನಂತರ ಭಾರತದ ಉದ್ದಗಲಕ್ಕೂ ಹರಿಯುವ
ಗಂಗೆಯಾಗಲೀ ಕಾವೇರಿಯಾಗಲಿ ಕಲುಷಿತ ಗೊಂಡಿತು. ಅದನ್ನಾದರೂ ಶುದ್ಧೀಕರಿಸಿ ಮನುಷ್ಯ ಜೀವದ
ತೃಷೆಯನ್ನು ನೀಗಿಸಬಹುದು. ಆದರೆ ಈ ರಾಜಕಾರಣ ಶುದ್ದವಾಗುವುದು ಕನಸಿನಲ್ಲೂ ಸಾಧ್ಯವಾಗದ ಮಾತು.
ಈಗ ಹಳ್ಳಿಯ ಸರಕಾರಿ ಶಾಲೆಗಳಿಗೆ ಮಕ್ಕಳೇ ಹೋಗುವುದಿಲ್ಲ.
ಮಕ್ಕಳಿಲ್ಲದೆ ಶಾಲೆಯ ದೊಡ್ಡ ಕಟ್ಟಡ ಭಿಕೋ ಎನ್ನುತ್ತಿರಬಹುದು. ಆದರೆ ಚುನಾವಣೆ ಬಂತೆಂದರೆ ಆ
ಒಂದು ದಿನವಾದರೂ ಊರವರೆಲ್ಲ ಅಲ್ಲಿಗೆ ಹೋಗುತ್ತಾರೆ. ಬಹುಶಃ ಶಾಲೆಯ ಮೆಟ್ಟಲು ತುಳಿಯದ
ರಾಜಕಾರಿಣಿಗಳೂ ಸಹ ಇದಕ್ಕಾಗಿಯಾದರೂ ಆ ಒಂದು ದಿನ ಶಾಲೆಯ ಮೆಟ್ಟಲು ತುಳಿಯುತ್ತಾರೆ. ಉಳಿದಂತೆ ಈ ಶಾಲೆ ಯಾಕಾಗಿ
ಇದೆ ಎಂಬುದೇ ಮರೆತು ಹೋಗುತ್ತದೆ. ಇಲ್ಲಿ ವಾಹನ ಪರವಾನಿಗೆ ತೆಗೆದುಕೊಳ್ಳುವುದಕ್ಕೂ....ಎಲ್ಲಾದರೂ
ಚಪ್ರಾಸಿ ಕೆಲಸ ಮಾಡುವುದಕ್ಕೂ ಹೋಗಲಿ ಯಾವುದೋ ಕಛೇರಿಯಲ್ಲಿ ಚಹಾ ಕಾಪಿ ತಂದುಕೊಟ್ಟು ಪರಿಚಾರಕನ ಕೆಲಸ ಮಾಡುವುದಕ್ಕೂ ಕೊಂಚ ವಿದ್ಯಾಭ್ಯಾಸದ ಅರ್ಹತೆ ಇರಲೇ ಬೇಕು. ಆದರೆ
ರಾಜಕಾರಿಣಿಯಾಗುವುದಕ್ಕೆ? ಸಮಾಜಕ್ಕೆ ತೀರ
ಅನಿವಾರ್ಯವಾಗುವುದಕ್ಕೆ ಯಾವ ಅರ್ಹತೆಯೂ ಬೇಡ. ಕೈಯಲ್ಲಿ ದಮ್ಮಡಿ ಇದ್ದರೆ ಸಾಕು.
ಚುನಾವಣೆ ಬಂದಾಗ ರಾಜಕಾರಣಿಗಳು ಪರಮ ಭಕ್ತರಂತೆ ಉದ್ದ
ನಾಮ ಬಳೆದು ದೇವಸ್ಥಾನಕ್ಕೆ ಹೋಗುತ್ತಾರೆ. ದೇವರ ಮುಂದೆ ಭಕ್ತಿಯಿಂದ ಕೈ ಮುಗಿಯುತ್ತಾರೆ .
ಇದನ್ನು ನೋಡಿದರೆ ರಾತ್ರಿ ಕದಿಯುವುದಕ್ಕೆ ಹೋಗುವ
ಕಳ್ಳನೂ ಸಹ ಊರ ಗುಡಿಯ ಬಾಗಿಲಿಗೆ ಬಂದು ಕೈ ಮುಗಿಯುವ ನೆನಪಾಗುತ್ತದೆ. ಯಾಕೆಂದರೆ ಹೆಚ್ಚು ಕಮ್ಮಿ
ಎರಡು ಕಡೆಯ ಪ್ರಾರ್ಥನೆ ಒಂದೇ ಆಗಿರುತ್ತದೆ. ತಾನು
ಮಾಡುವ ಕೆಲಸದಲ್ಲಿ ಜಯ ಸಿಗಲಿ ಎಂದು ಪರಮ ಚೋರನೂ ದೇವರಲ್ಲಿ ಪ್ರಾರ್ಥಿಸಿ ಹರಕೆ
ಹೊರುತ್ತಾನೆ. ರಾಜಕಾರಿಣಿಯ
ಪ್ರಾರ್ಥನೆ ದೇವರಿಗೂ ಅರ್ಥವಾಗದು.
ಮೈಕ್ ನಲ್ಲಿ ನಿಮ್ಮ ಅಮೂಲ್ಯವಾದ ಮತ, ಮುತ್ತಿನಂತಹ
ನವರತ್ನದಂತಹ ಮತ.....ಮತದಾರನ ಬೆರಳ ತುದಿಯ ಕೆಲಸಕ್ಕೆ ಪವಿತ್ರವಾದ ಮೌಲ್ಯವನ್ನು ಕಟ್ಟುವ
ರಾಜಕಾರಿಣಿ ಹಿಂಬಾಗಿಲ ಮೂಲಕ ಯಾವುದೇ ನಾಚಿಕೆ ಇಲ್ಲದೇ
ಅದೇ ಮತಕ್ಕೆ ಐನೂರು ಸಾವಿರ ಬೆಲೆ ನಿಗದಿ ಮಾಡುತ್ತಾನೆ. ಒಬ್ಬ ಸಭ್ಯ ಮನುಷ್ಯ ತನ್ನನ್ನು ಇನ್ನೊಬ್ಬರಿಗೆ ಆಗದೇ
ಇದ್ದರೆ ಅವರ ಹತ್ತಿರ ಸುಳಿಯುವುದಿಲ್ಲ. ಅವರ
ಸಹವಾಸಕ್ಕೆ ಹೋಗುವುದಿಲ್ಲ. ತನ್ನ ಪಾಡಿಗೆ ತಾನಿರುತ್ತಾ ತನ್ನನ್ನು ಯಾರು ಒಪ್ಪಿಕೊಳ್ಳುತ್ತಾರೋ
ಅವರ ಜತೆಯಲ್ಲಿ ಇರುತ್ತಾನೆ. ಆದರೆ ರಾಜಕಾರಿಣಿ? ತನ್ನನ್ನು ಯಾರೂ
ಒಪ್ಪದೇ ಇದ್ದರೂ ಪರವಾಗಿಲ್ಲ ಸ್ವಾರ್ಥ ಒಂದೇ ಪರಮ
ಗುರಿಯಾಗುತ್ತದೆ.
ಒಬ್ಬ ರಾಜಕಾರಣಿ ಇಂದು
ಒಂದು ಮಾತು ಘಂಟಾ ಘೋಷವಾಗಿ ಸಾರುತ್ತಾನೆ. ಆದರೆ ಆತನಿಗೆ ಅರಿವಿದೆ, ತನ್ನ ಮಾತು ಯಾರೂ ನಂಬುವುದಿಲ್ಲ ಎಂದು. ಆದರೂ ಹೇಳಿಬಿಡುತ್ತಾನೆ. ವರ್ತಮಾನದಲ್ಲಿ ಹೇಳಿದ ಮಾತು ಮತ್ತೊಂದು
ಕ್ಷಣಕ್ಕೆ ಬದಲಾಗಬಹುದು. ಸುಳ್ಳು ಸತ್ಯಗಳ ವೆತ್ಯಾಸದ ಗೆರೆಯನ್ನೇ ಇಲ್ಲಿ
ಅಳಿಸಲಾಗುತ್ತದೆ. ತನ್ನಲ್ಲೊಬ್ಬನಲ್ಲಿ ಬಿಟ್ಟು ಮಿಕ್ಕುಳಿದವರಲ್ಲಿ
ಅರಸುವುದೇ ನೈತಿಕತೆ.
ಎಂತಹ ವಂಚಕನಾದರೂ
ತನ್ನ ವಂಚನೆ ಬಯಲಾದಾಗ ಮುಖ ಮರೆಸಿಕೊಳ್ಳುತ್ತಾನೆ. ಪೋಲೀಸರು ಖೈದಿಗಳನ್ನು ಕರೆದುಕೊಂಡು ಹೋಗುವಾಗ ಗಮನಿಸಬಹುದು.
ಆದರೆ ರಾಜ ಕಾರಣದಲ್ಲಿ ವಂಚನೆ ಬಯಲಾದರೂ ಅಳುಕಿಲ್ಲದೆ ಮುಖ ತೋರಿಸಿಬಿಡುತ್ತಾರೆ. ಮುಖವೆಲ್ಲಿಂದ ಬಂತು ಕ್ಷಣ ಕ್ಷಣಕ್ಕೂ ಆಕಾರ ಬದಲಿಸುವ ಅಮೀಬದ ಶರೀರದಲ್ಲಿ? ಆತ್ಮ ಕಥೆಯಲ್ಲಿ ಆತ್ಮದ ಬಗ್ಗೆ ಹೇಗೆ
ಇರುವುದಿಲ್ಲವೋ ಹಾಗೆ ಎಲ್ಲವೂ ಇಲ್ಲಿ ದ್ವಂದ್ವಗಳು. ಅಸಲಿಯತ್ತು ತಿಳಿದೋ ತಿಳಿಯದೆಯೋ ಹೇಗೆ ನಡೆಯಬೇಕೆಂಬ
ಅನಧಿಕೃತ ನಿಯತಿಯೊಂದು ಇರುತ್ತದೆ. ಅದೇ ರೀತಿಯಲ್ಲಿ ನಡೆದು ಹೋಗುತ್ತದೆ. ಸಿನಿಮಾ ನೋಡುವಾಗ ನೈಜವೋ ಏನೋ ಎಂದು ಭ್ರಮಾಧೀನನಾಗುವ
ಪ್ರೇಕ್ಷಕ ಚಿತ್ರಮಂದಿರದಿಂದ ಹೊರಗೆ ಬರುತ್ತಿದ್ದಂತೆ ಇದು ನಿಜವಲ್ಲ ಎಂದು ಒಪ್ಪಿಕೊಳ್ಳುತ್ತಾನೆ.
ನಿಜವಲ್ಲ ಎಂದು ತಿಳಿದಿದ್ದರೂ ಮತ್ತೂ ಮತ್ತೂ ಸಿನಿಮಾ ಮಂದಿರದಲ್ಲಿ ಹೋಗಿ ಕುಳಿತುಕೊಳ್ಳುವಂತೆ ಮತದಾರ
ತಿಳಿದೂ ತಿಳಿದೂ ಮತ್ತೂ ಮತದಾನಿಯಾಗುತ್ತಾನೆ. ಆ ಏಕ್ ದಿನ್ ಕಾ ಬಾದ್ ಷಾ ಆಗುವುದರಲ್ಲೇ ಎನೋ
ಸುಖವನ್ನು ಕಾಣುತ್ತಾನೆ.
Saturday, May 12, 2018
“ಜನ ಮರುಳೋ ಜಾತ್ರೆ ಮರುಳೋ...”
“ಜನ
ಮರುಳೋ ಜಾತ್ರೆ ಮರುಳೋ...” ಇದೊಂದು ನಾಣ್ಣುಡಿ ಸಾಮಾನ್ಯವಾಗಿ ಹೇಳುವುದುಂಟು. ಲೋಕಾಭಿರಾಮವಾಗಿ ಹಾಗೆ
ಬಂದು ಹೀಗೆ ಹೋಗುವ ಮಾತು ಇದು. ಇದರ ಬಗ್ಗೆ ಯೋಚಿಸುವಾಗ ಗಹನವಾದ ವಿಚಾರಗಳು ಯೋಚನೆಗೆ ಬರುತ್ತವೆ.
ಮುಖ್ಯವಾಗಿ
ಮನುಷ್ಯನಿಗೆ ತನ್ನ ಮೇಲೆ ವಿಶ್ವಾಸ ಇಲ್ಲದಿರುವುದೇ ಇದಕ್ಕೆ ಕಾರಣ. ಬೇರೆ ಊರಿಗೆ ಪ್ರಯಾಣಿಸುವುದಕ್ಕೆ ಬಸ್ಸು ನಿಲ್ದಾಣದಲ್ಲಿ
ಬಂದು ನಿಲ್ಲುತ್ತೇವೆ. ಆ ಊರಿಗೆ ಹೋಗುವ ಹಲವಾರು ಬಸ್ಸುಗಳು
ಬಂದು ನಿಲ್ಲುತ್ತವೆ. ಆದರೆ ಅದರಲ್ಲಿ ಏರುವುದಕ್ಕೆ ಮನಸ್ಸಾಗುವುದಿಲ್ಲ. ಕಾರಣ, ಜನಜಂಗುಳಿ
ಕುಳಿತುಕೊಳ್ಳುವುದಕ್ಕೆ ಬಿಡಿ ನಿಲ್ಲುವುದಕ್ಕೂ ಜಾಗವಿಲ್ಲ ಎಂದುಕೊಂಡು ನಂತರದ ಬಸ್ಸಿಗೆ
ಕೊರಳುದ್ದ ಮಾಡುತ್ತೇವೆ. ಎಲ್ಲೋ ಒಂದು
ದೇವಸ್ಥಾನವಿದೆ. ಊರು ಪರ ಊರಿನಿಂದ ಹಲವಾರು ಜನರು ಬಂದು ಸೇರುತ್ತಾರೆ. ನಿತ್ಯವೂ ಅಲ್ಲಿ ಜಾತ್ರೆ.
ದೇವರ ದರ್ಶನಕ್ಕೆ ಸರತಿಯಲ್ಲಿ ನಿಲ್ಲಬೇಕಾಗುತ್ತದೆ. ಹಾಗಿದ್ದರೂ ಅಲ್ಲಿ ಹೋಗುವ ಕುತೂಹಲ
ಮೂಡುತ್ತದೆ. ದೇವರ ದರ್ಶನ ಮಾಡಿಯೇ ತೀರುವ ಎಂದು ಸರದಿಯಲ್ಲಿ ನಿಂತುಬಿಡುತ್ತೇವೆ.
ಎಲ್ಲೋ
ಒಂದು ಮೂಲೆಯ ಅಥವಾ ನಮ್ಮ ಪಕ್ಕದ ಪುಟ್ಟ ಗುಡಿ ಅಥವಾ ದೇವಾಲಯಕ್ಕೆ ಹೋಗುವುದಕ್ಕೆ ಮನಸ್ಸಾಗುವುದಿಲ್ಲ. ಸರದಿ ಸಾಲಿನಲ್ಲಿ
ನಿಲ್ಲುವ ದೇವಾಲಯವೇ ಪ್ರಿಯವಾಗುತ್ತದೆ. ಒಂದೇ ಊರಿಗೆ ಹೋಗುತ್ತಿರುವ ಬಸ್ಸನ್ನು ಜನಜಂಗುಳಿ ಎಂದು
ಬಿಟ್ಟು ಬಿಡುತ್ತೇವೆ. ಜನ ಜಂಗುಳಿ ಹೆಚ್ಚಿದೆ ಎಂದು ದೇವಾಲಯದ ಸರದಿಯಲ್ಲಿ ನಿಂತುಬಿಡುತ್ತೇವೆ. ಎಲ್ಲಾ ಬಸ್ಸುಗಳೂ ಒಂದೇ ಗುರಿಯತ್ತ ನಮ್ಮನ್ನು
ಕರೆದೊಯ್ಯುತ್ತವೆ. ಎಲ್ಲಾ ದೇವಾಲಯದ ಮೂಲ ತತ್ವ ಒಂದೇ. ಎಲ್ಲವೂ ನಮ್ಮನ್ನು ಮೋಕ್ಷದೆಡೆಗೆ
ಕರೆದೊಯ್ಯುವ ಮಾಧ್ಯಮಗಳು. ಕಾರಣವಿಷ್ಟೇ ನಮ್ಮಲ್ಲಿನ ವಿಶ್ವಾಸದ ಕೊರತೆ. ನಮ್ಮೊಳಗಿನ ಆತ್ಮಕ್ಕೆ
ಎಸಗುವ ವಂಚನೆ ಇದು. ಭಕ್ತರು ಸೇರದ ನಮ್ಮ ಪಕ್ಕದ ದೇವಾಲಯದ ದೇವರಲ್ಲಿ ಇರದ ವಿಶ್ವಾಸ ದೂರದ
ಎಲ್ಲೋ ಜನಜಂಗುಳಿಯ ನಡುವೆ ಇರುವ ದೇವರಲ್ಲಿ ಮೂಡುತ್ತದೆ. ಅದರಂತೆ ನಮ್ಮೊಳಗಿನ ಆತ್ಮದಲ್ಲಿ ಸ್ಥಿರವಾಗಿ ನಿಂತಿರುವ ಪರಮಾತ್ಮನನ್ನು
ಕಾಣುವುದಿಲ್ಲ. ಕಾರಣವಿಷ್ಟೇ ನಮ್ಮ ಸ್ವಾರ್ಥ.
ದೇವರೆಂದರೆ ವರವನ್ನು ಕೊಡುವುದಕ್ಕಾಗಿಯೇ ಇರುವವನು. ದೂರದ ದೇವಸ್ಥಾನಕ್ಕೆ ಹೋದರೆ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸ.
ಏನನ್ನೋ ಪಡೆದುಕೊಳ್ಳುವ ಹಂಬಲ. ನಮ್ಮಲ್ಲಿ ಇಲ್ಲದೇ ಇರುವುದನ್ನು ಹೊರಗೆ ಹುಡುಕುವುದು ಸಹಜ.
ನಮ್ಮಲ್ಲಿ ಇರದೇ ಇರುವ ಅಗತ್ಯದ ವಸ್ತುಗಳನ್ನು ನಾವು ಹೊರಗೆ ಅರಸುತ್ತೇವೆ.
ಅದಕ್ಕಾಗಿ ಅಲೆಯುತ್ತೇವೆ. ನಮ್ಮಲ್ಲಿ ಇಲ್ಲವಲ್ಲಾ ಎಂದು ಹಪ ಹಪಿಸುತ್ತೇವೆ. ಹಾಗಾಗಿ ಸದ್ಗುಣ
ಸನ್ಮಸ್ಸು ಸದ್ಬಾವನೆ ಇವುಗಳನ್ನೇಲ್ಲ ನಾವು ಹೊರಗೆ ಪರರಲ್ಲಿ ಅರಸುವುದು. ನಮ್ಮಲ್ಲಿ ಅದು ಇಲ್ಲ.
ನಮಗೆ ಅದರ ಆವಶ್ಯಕತೆ ಇರುವಾಗ ಹೊರಗೆ ಸಿಗಬೇಕೆಂಬ ಹಂಬಲ. ಒಂದು ವೇಳೆ ನಮ್ಮಲ್ಲಿ ಇವುಗಳೆಲ್ಲ
ಇದ್ದರೂ , ನಮ್ಮಲ್ಲಿರುವ ಒಳ್ಳೆಯ ಗುಣದಿಂದ ಇನ್ನೊಬ್ಬರಿಗೆ
ಒಳಿತಾಗುತ್ತದೆ ಎಂದಾಗ ಕೆಲವೊಮ್ಮೆ ಅದನ್ನು ಪ್ರಕಟ ಪಡಿಸಲೂ ಸ್ವಾರ್ಥ ಬಿಡುವುದಿಲ್ಲ.
ಊರೂರು ಸುತ್ತುವ
ಭಕ್ತನೊಬ್ಬ ಮನೆಗೆ ಬಂದಾಗ ಮನೆಯ ಹಿರಿಯ ಅಜ್ಜಿಯೊಬ್ಬಳು ಅಂಗಳದಲ್ಲಿ ಏನನ್ನೋ
ಹುಡುಕುತ್ತಿರುತ್ತಾಳೆ. ಬಂದ ಭಕ್ತ ಅಜ್ಜಿಯಲ್ಲಿ ಕೇಳುತ್ತಾನೆ. “ ಏನನ್ನು ಹುಡುಕುತ್ತಿರುವೆ?” ಅಜ್ಜಿ ಹೇಳುತ್ತಾಳೆ,
“ಚಿನ್ನದ ಮೂಗುತಿ ಕಳೆದು ಹೋಗಿದೆ ಹುಡುಕುತ್ತಿರುವೆ.”
ಭಕ್ತ ಕೇಳುತ್ತಾನೆ...” ಎಲ್ಲಿ ಕಳೆದುಹೋಯಿತು?”
“ ಅಡಿಗೆ ಮನೆಯಲ್ಲಿ ಏನೋ ಕೆಲಸ ಮಾಡುತ್ತಿರಬೇಕಾದರೆ
ಬಿದ್ದು ಹೋಯಿತು. ಅದನ್ನು ಹುಡುಕುತ್ತಾ ಇದ್ದೇನೆ ಅಲ್ಲಿ ಕತ್ತಲೆ ಏನೂ ಕಾಣಿಸುವುದಿಲ್ಲ ಅದಕ್ಕೆ
ಇಲ್ಲಿ ಹುಡುಕುತ್ತಿದ್ದೇನೆ. ”
ಅಜ್ಜಿಯ ಮೂರ್ಖತನಕ್ಕೆ ಭಕ್ತನಿಗೆ ನಗು ಬರುತ್ತದೆ. ಆತ ಅಜ್ಜಿಯಲ್ಲಿ ಹೇಳುತ್ತಾನೆ.
“ ಒಳಗೆ ಕಳೆದು ಹೋದ ಮೂಗುತಿಯನ್ನು ಇಲ್ಲಿ ಹೊರಗೆ
ಬಂದು ಹುಡುಕುವೆಯಲ್ಲ. ಒಳಗೆ ಬೆಳಕು ಉರಿಸಿ ಹುಡುಕ ಬಹುದಲ್ಲಾ?”
ಆಗ ಅಜ್ಜಿ ಹೇಳುತ್ತಾಳೆ, “ ನೀನಾದರೂ ಅಷ್ಟೇ
ನಿನ್ನೊಳಗಿನ ದೇವರನ್ನು ಕಾಣುವುದಿಲ್ಲ. ಎಲ್ಲೋ ಊರೂರು ಸುತ್ತಿ ಅಲ್ಲಿ ದೇವರನ್ನು ಹುಡುಕುತ್ತಿರುವೆ.
ನಿನ್ನೊಳಗಿನ ದೇವರನ್ನು ನೋಡುವುದಕ್ಕೆ ನಿನಗೆ ಸಾಧ್ಯವಾಗುವುದಿಲ್ಲ. ಅದನ್ನು ನೋಡುವುದಕ್ಕೆ ಬೆಳಕು
ಇರಬೇಕು.” ಇಲ್ಲಿ ಬೆಳಕು ಅಂದರೆ ಜ್ಞಾನ. ಆದರೆ ಈ
ಜ್ಜಾನ ಮೂಡಬೇಕಾದರೆ ನಮ್ಮಲ್ಲಿ ಸನ್ಮಸ್ಸು ಸದ್ಭಾವನೆ ಮೂಡಬೇಕು. ಅದನ್ನೆಲ್ಲ ಮೂಡಿಸುವ ವಿಶ್ವಾಸವೂ
ಜಾಗ್ರತವಾಗಬೇಕು.
Subscribe to:
Posts (Atom)