ನಾವು ಚಿಕ್ಕವರಿರುವಾಗ ಮಳೆ ಬಂದರೆ, ಜೂನ್ ತಿಂಗಳಿಂದ ತೊಡಗಿ ಸಪ್ಟಂಬರ್ ವರೆಗೂ ಬಿಡದೇ ಸುರಿಯುತ್ತಿತ್ತು. ಶುಕ್ರವಾರ ಮಳೆ ಶುರುವಾದರೆ ಅದು ಮುಂದಿನ ಶುಕ್ರವಾರವೆ ನಿಲ್ಲುವುದು ಎಂಬ ಮಾತು ಇತ್ತು. ಆಟಿ ತಿಂಗಳ ಮಳೆಗೆ ಸಾಮಾನ್ಯ ಎಲ್ಲರೂ ಆಘೋಷಿತ ರಜೆ ಆಚರಿಸುತ್ತಿದ್ದರು. ಹಾಗಾಗಿ ಆಟಿ ತಿಂಗಳ ಸಮಯದಲ್ಲಿ ದುರ್ಗಾನಮಸ್ಕಾರದಂತಹ ಪೂಜಾ ಕಾರ್ಯಕ್ರಮಗಳು ಮನೆಯಲ್ಲಿ ಆಗುತ್ತಿತ್ತು. ಅದು ಸಂಪ್ರದಾಯವೂ ಆಗಿತ್ತು. ನಾನು ಚಿಕ್ಕವನಿರುವಾಗ ಯಾವಗಲೋ ಒಂದೆರಡು ಸಲ ನೆರೆ ಬರುತ್ತಿತ್ತು. ಅದೂ ಹೊಳೆ ಹರಿಯುವಲ್ಲಿ ಮಾತ್ರ. ಒಂದು ಸಲ 1975ನೇ ಇಸವಿಯಲ್ಲಿರಬೇಕು, ನೇತ್ರಾವತಿ ಉಕ್ಕಿ ಹರಿದು ಜಪ್ಪಿನ ಮೊಗರು ಸುತ್ತ ಮುತ್ತ ಮುಳುಗಡೆಯಾಗಿ ತೆಂಗಿನ ಮರದ ತುದಿ ಮಾತ್ರ ಕಂಡದ್ದು ನೆನಪಿದೆ. ಜನ ದೋಣಿಯಲ್ಲೇ ಸಂಚರಿಸುತ್ತಿದ್ದದ್ದು ನೋಡಿದ ನೆನಪು. ಆನಂತರ ಅಂತಹ ನೆರೆ ಬಂದ ನೆನಪಿಲ್ಲ. ಮತ್ತೊಂದು ತುದಿಯ ಕೂಳೂರು ದೇರೆಬೈಲು ಮುಂತಾದ ಕಡೆಗಳಲ್ಲೂ ಅಷ್ಟೇ ಕೆಲವೊಮ್ಮೆ ನೆರೆ ಬಂದು ಶಾಲೆಗೆ ಬರುವ ಮಕ್ಕಳು " ಬೊಳ್ಳ ಬಂದು ಶಾಲೆಗೆ ರಜೆ" ಅಂತ ಹೇಳುತ್ತಿದ್ದರು. ಆದರೆ ನಂತರ ಮಳೆಯ ಪ್ರಮಾಣ ಕಡಿಮೆಯಾಗಿ ವಾರಗಟ್ಟಲೆ ತಿಂಗಳು ಗಟ್ಟಲೆ ಸುರಿಯುತ್ತಿದ್ದ ಮಳೆ ಕೆಲವೇ ಗಂಟೆಗೆ ಸೀಮಿತವಾಗಿ ಬಿಟ್ಟಿತು. ಇದೀಗ ಮಂಗಳೂರು ನಗರವೇ ಜಲಾವೃತವಾಗಿರುವುದನ್ನು ನೋಡಿದರೆ ನಾವುಗಳು ಎಲ್ಲೋ ತಪ್ಪಿದ್ದೇವೆ ಎಂದನಿಸುತ್ತದೆ. ತಿಂಗಳು ಗಟ್ಟಲೆ ಮಳೆಗೆ ಎದೆಯಗಲಿಸಿ ನಿಮಿರಿ ನಿಲ್ಲುತ್ತಿದ್ದ ಮಂಗಳೂರು ಕರಾವಳಿ ಈ ಒಂದು ದಿನದ ಮಳೆಗೆ ಮುಳುಗಬೇಕಿದ್ದರೆ ಇದು ಮಳೆಯ ಅವಾಂತರ ಖಂಡಿತಾ ಅಲ್ಲ. ಮಿತಿ ಮಿರೀದ ಪೂರ್ವ ಯೋಚನೆ ಇಲ್ಲದ ಯೋಜನೆಗಳೇ ಕಾರಣ. ಕೇವಲ ಮಂಗಳೂರು ನಗರ ಪ್ರದೇಶಗಳು ಮುಳುಗುವುದೆಂದರೆ ಇದರ ಹಿಂದೆ ಇರುವ ಅಧಿಕಾರ ದಾಹ ಯಾವ ಬಗೆಯದ್ದು? ಅರ್ಥವಾಗದೇ ಇರುವುದಲ್ಲ? ಜನ ಪ್ರತಿನಿಧಿಗಳಿಗೆ ಒಮ್ಮೆ ಆಯ್ಕೆಯಾದರೆ ಸಾಕು, ಆಯ್ಕೆಯಾದ ಮೇಲೆ ಐದು ವರ್ಷ ನಿಭಾಯಿಸಿ ಒಂದಷ್ಟು ದುಡ್ದು ಮಾಡಿ ಅಧಿಕಾರ ಚಲಾಯಿಸಿದರೆ ಸಾಕು. ಅಧಿಕಾರದಲ್ಲಿರುವಾಗ ತಮ್ಮ ಸಂಬಂಧಿಕರನ್ನು, ಬಳಗವನ್ನು ಕಂಟ್ರಾಕ್ಟರ್ ಗಳನ್ನಾಗಿ ಮಾಡಿ ಒಂದಷ್ಟು ಟೆಂಡರ್ ಗಳನ್ನು ಪಾಸ್ ಮಾಡಿಸಿ ಆ ಕೆಲಸವನ್ನು ತಾವೂ ಮಾಡದೆ ಉಪ ಕಂಟ್ರಾಕ್ಟರ್ ಗಳಿಗೆ ಕಮೀಷನ್ ಗೆ ವರ್ಗಾಯಿಸಿ...ಅಂತೂ ನಗರದ ಬಹುತೇಕ ಭಾಗದ ಎಲ್ಲಾ ಕೆಲಸಗಳೂ ಸಹ ಕಳಪೆ, ಹಾಗಾಗಿ ಪ್ರಕೃತಿ ಈಗ ಈ ರೂಪದಲ್ಲಿ ತೋರಿಸಿಕೊಟ್ಟಿದೆ. ಹಿಂದಿನ ದುಡ್ಡು ತಿಂದ ಪ್ರತಿನಿಧಿಗಳು ಎಲ್ಲಿದ್ದಾರೋ. ಈಗಿನವರು ಏನು ಮಾಡುತ್ತಾರೋ ಒಂದೂ ಸಹ ಜನ ಸಾಮಾನ್ಯನಿಗೆ ಗೊತ್ತಿಲ್ಲ. ಗೊತ್ತಿದ್ದರೂ ಏನೂ ಮಾಡದ ಅಸಹಾಯಕ ಪಾತ್ರ. ಬೆಂಗಳೂರಲ್ಲಿ ಎಂದೋ ಆರಂಭವಾಗಿದ್ದ ಸಮಸ್ಯೆ ಈಗ ಮಂಗಳೂರಿಗೂ ಕಾಲಿಟ್ಟಿದೆ. ಇನ್ನು ಮತ್ತೊಂದು ನಗರ ಮಾತ್ರವಲ್ಲ ಸಣ್ಣ ಊರುಗಳಿಗೂ ಕಾಲಿಡಬಹುದು. ದುಡ್ಡು ತಿಂದು ತೇಗುವ ಕಂಟ್ರಾಕ್ಟರ್ ಗಳು ದೊಡ್ಡ ಅಪಾರ್ಟ್ ಮೆಂಟ್ ಕಟ್ಟಿ ತಮ್ಮ ಮಕ್ಕಳೊಂದಿಗೆ ಐಷಾರಾಮಿ ಜೀವನ ನಡೆಸುತ್ತಿರಬಹುದು. ಎಲ್ಲವೂ ಚಕ್ರದೊಳಗಿನ ಬಡಿಗೆಗಳಂತೆ ತಿರುಗುವಾಗ ಒಂದರ ನಂತರ ಇನ್ನೊಂದು ಬರುತ್ತಾ ಇರುತ್ತದೆ. ಆದರೂ ಅದರೂ ವ್ಯವಸ್ಥೆ ಬದಲಾಗುವುದಿಲ್ಲ. ಅದು ಹೀಗೆ ಮುಂದುವರೆಯುತ್ತದೆ.
No comments:
Post a Comment