ಒಂದಿಷ್ಟು ದೇಹ
ಅಡ್ಡಾಗುವುದಕ್ಕೆ ಜಾಗ ಸಿಕ್ಕಿದಾಗ ಆತನಿಗೆ ಹಾಯೆನಿಸಿತು. ಹೆಗಲಲ್ಲಿದ್ದಒಂದು ವರ್ಷದ ಪುಟ್ಟ ಕಂದಮ್ಮ ಅದಾಗಲೇ ನಿದ್ದೆಗೆ ಜಾರಿದ್ದ.
ದಿನವಿಡೀ ಸುತ್ತಾಡಿದ ಸುಸ್ತು ನಿದ್ದೆಗೆ ಜಾರುವಂತೆ ಮಾಡಿತ್ತು. ಹಾಸಿದ್ದ ಜಮಖಾನೆ ಮೇಲೆ ಹೊದಿಕೆ ಹೊದ್ದು ತಾನೂ ಮಲಗಿದ.
ಪುಟ್ಟನ ಮೇಲೆ ಒಂದು ಕೈಯಿರಿಸಿ ಹಾಗೇ ನಿದ್ದೆಗೆ ಜಾರಿದ. ಅದು ಮದುವೆ ಮನೆ.
ಹಾಗಾಗಿ ಮನೆತುಂಬ ಅತಿಥಿಗಳು, ಸಡಗರ ಓಡಾಟ ಇದರಲ್ಲೇ ದಿನಕಳೆದು ಇದೀಗ ವಿಶ್ರಾಂತಿಯ ಸಮಯ
ಬೇಡವೆಂದರೂ ನಿದ್ದೆ ಕಣ್ಣಿಗೆ ಒತ್ತಿಬರುತ್ತದೆ. ಕೆಲವರಂತೂ ಅಪರೂಪಕ್ಕೆ ಸಿಕ್ಕಿದ ನೆಂಟರು
ಗೆಳೆಯರು ಇವರ ಜತೆಗಿನ ಘಳಿಗೆಗಳನ್ನು ಹಾಗೇ ನಿದ್ದೆಯಲ್ಲಿ ಕಳೆಯುವುದಕ್ಕೆ ಇಷ್ಟವಿಲ್ಲದೇ
ಎಚ್ಚರದಲ್ಲೇ ಇದ್ದರು. ಒಟ್ಟು ಸೇರಿದ ಸಡಗರದಲ್ಲಿ ಮಾತು ಆಟ ಗಲಾಟೆ ಅಂತೂ ಮದುವೆ ಮನೆ ಎಂದರೆ
ವಿವಿಧ ಸಂವೇದನೆಯ ಸಮಾಗಮ. ಕೆಲಸವಿದೆಯೋ ಇಲ್ಲವೋ ಸುಮ್ಮನೇ ಇದ್ದರೂ ಭಾವನೆಗಳ ತಾಕಲಾಟಗಳಲ್ಲೇ ದೇಹ
ಮನಸ್ಸು ದಣಿದಿತ್ತು.
ಇಂದಿನ ದಿನ ಇಲ್ಲಿಗೆ ಮುಗಿಸಿ ಇಷ್ಟು ಸಾಕು ಮಾಡಿ ಆತ ಮನೆಯ ಮೇಲೆ
ತಾರಸಿಯ ಮೂಲೆಯೊಂದರಲ್ಲಿ ಮಲಗಿದ್ದ. ತಾರಸಿ ಮೇಲೆ ಶಾಮಿಯಾನ ಹಾಕಿದ್ದರು. ದೀಪ ಆರಿಸಿ ಕೆಲವರಂತು ನಿದ್ದೆಗೆ ಹೋಗಿದ್ದರು.
ಆತನಿಗಂತೂ ದೇಹ ಮಾತ್ರವಲ್ಲದೆ ಮನಸ್ಸು ಬಹಳಷ್ಟು ದಣಿದಿದ್ದು ಮನೆಯ ಮಲಗು ಕೋಣೆ ಪದೇ ಪದೇ
ನೆನಪಿಗೆ ಬರುತ್ತಿತ್ತು. ಹಾಗೇ ಜೊಂಪು ಹತ್ತಿದಂತೆ ಬೆಳಗಿನಿಂದ ಓಡಾಡಿದ ಮಾತನಾಡಿದ ಗುಂಗು ನಿದ್ದೆಯಲ್ಲೂ ಕಾಡುತ್ತಿತ್ತು. ಪುಟ್ಟ
ಮಗ್ಗುಲಿಗೆ ಹೊರಳುತ್ತಿದ್ದಂತೆ ಎಚ್ಚರವಾಗುತ್ತಿತ್ತು.
ಮದುವೆ ಮನೆಗೆ
ಹೆಂಡತಿ ಮಗುವಿನ ಜತೆಗೆ ಇಂದು ಮುಂಜಾನೆಯೇ ಬಂದಿದ್ದ. ಹೆಂಡತಿಯ ತವರು ಮನೆಯದು. ಒಂದೆರಡು
ದಿನ ಮೊದಲೇ ಎಂದರೂ ಆತ ಬರುವುದಕ್ಕೆ
ಸಾಧ್ಯವಾಗಿದ್ದು ಮದುವೆಯ ಮೊದಲ ದಿನ. ಮನೆ ಹೊಕ್ಕ ಕೂಡಲೆ ಆಕೆ ಮಗುವನ್ನು ಈತನ ತೋಳಿಗೆ ಸೇರಿಸಿ ಮನೆಯೊಳಗೆ
ಅದೆಲ್ಲಿ ಮಾಯವಾಗಿಬಿಟ್ಟಳೋ? ತಿಳಿಯದಾಯಿತು.
ಅಕ್ಕಂದಿರು ನಾದಿನಿಯರು ಅಮ್ಮ ಚಿಕ್ಕಮ್ಮ ದೊಡ್ಡಮ್ಮ ಇನ್ನೂ ಹಿನ್ನೆಲೆಯಲ್ಲಿದ್ದ ಪಾತ್ರಗಳೆಷ್ಟೋ? ಪರಿಚಯವೂ ಇಲ್ಲ, ಅವುಗಳ ನಡುವೆಯೆ ತನ್ನಾಕೆ ರಂಗವೇರಿ
ಪಾತ್ರವಾಗಿಬಿಟ್ಟಳು. ಎಲ್ಲಾ ಹೊಸ ಮುಖಗಳನ್ನು
ಕಂಡ ಈ ಪುಟ್ಟ ಹೆಗಲು ಬಿಟ್ಟು ಇಳಿಯಲಾರ. ಒಂದೇ
ಸವನೆ ಹಟಮಾಡುವುದಕ್ಕೆ ತೊಡಗಿದ. ಮಗುವನ್ನು
ಕಂಡವರೆಲ್ಲಾ ಒಂದಷ್ಟು ರಮಿಸುವುದಕ್ಕೆ
ಯತ್ನಿಸಿದರೂ ಪುಟ್ಟ ಕೇಳಬೇಕಲ್ಲ?
ಮೆನೆಯೊಳಗಿನಿಂದ ಹೊರ ಬಂದು ರಸ್ತೆಗಿಳಿದ. ಮನೆಯೊಳಗಿನ ಬಿಸಿ ಉಸಿರ ತಾಪ ಕಡಿಮೆಯಾಗಿ, ಒಂದಷ್ಟು ಹಾಯೆನಿಸಿತು. ಪುಟ್ಟನೂ ಒಂದಷ್ಟು ಹೊರಗಿನ
ದೃಶ್ಯ ನೋಡಿ ಅಳು ನಿಲ್ಲಿಸಿದ. ಹಾಗೆ ಅತ್ತಿತ್ತ ಹೆಜ್ಜೆ ಇಕ್ಕಿದ. ಅದು ತುಸು ಹೊತ್ತು ಅಷ್ಟೇ ಪುಟ್ಟನನ್ನು ಎತ್ತಿದ ಕೈ ಸುಸ್ತಾಗತೊಡಗಿತು. ಮೈ
ಬೆವರಲಾರಂಭಿಸಿತು. ಎಲ್ಲಿ ಇಳಿಸಿದರೂ ಪುಟ್ಟ ಮಗು ಕೈಬಿಟ್ಟು ಇಳಿಯಲಿಲ್ಲ. ಬದಲಿಗೆ ಅಮ್ಮ ಎಲ್ಲಿ? ಎಂದು ರಾಗ ಎಳೆಯುವುದಕ್ಕೆ
ತೊಡಗಿದ. ಇನ್ನು ಸಾಕಾಯಿತು ಎಂದುಕೊಂಡು ಆಕೆಯನ್ನು ಅರಸುತ್ತಾ ಮನೆಯೊಳಗೆ ಬಂದ. ಮನೆಯೊಳಗೆ
ಬಹುತೇಕ ಲಲನೆಯರ ಗಡಣವೇ ತುಂಬಿತ್ತು. ಆ ಕೋಣೆ ಈ ಕೋಣೆ ಎಲ್ಲ ಹುಡುಕಿದ. ಆಕೆಯ ಮುಖವನ್ನು ಕಾಣದೇ
ಹೋದ. ಅವರಲ್ಲಿ ಇವರಲ್ಲಿ ಕೇಳಿದ. ಊಹೂಂ, ಆಕೆಯನ್ನು ಕಾಣುವುದು ಸಾಧ್ಯವಾಗದೇ ಹೋಯಿತು. ಹೋಗಲಿ
ಇದೀಗ ಬೆಳಗಿನ ಉಪಾಹಾರ ಆಗಬೇಕಿದೆ. ಆಗ ಆಕೆ ಖಂಡಿತಾ ಸಿಗಬಹುದು ಎಂದು ಕೊಂಡು ಪುನಃ ಮನೆಯಂಗಳಕ್ಕೆ
ಇಳಿದ.
ಅಲ್ಲೆ ಇದ್ದ
ಸಂಭಂಧಿಗಳು ಮಾತಿಗಿಳಿದರೂ ಮಾತನಾಡುವಷ್ಟು ಉತ್ಸಾಹವಾಗಲೀ ಚೈತನ್ಯವಾಗಲಿ ಇರಲಿಲ್ಲ. ಯಥಾ ಪ್ರಕಾರ
ಕಾಗೆ ಗುಬ್ಬಚ್ಚಿಯನ್ನು ಪುಟ್ಟನಿಗೆ ತೋರಿಸಿ ಸಾಂತ್ವನ ಪಡಿಸುವ ಯತ್ನಮಾಡಿದರೂ ಪುಟ್ಟ
ಮತ್ತೂ ಬುದ್ದಿವಂತನಾದ. ಅತ್ತಿತ್ತ ಸುಳಿಯುವಾಗ
ಉಪಾಹಾರಕ್ಕೆ ಕರೆಬಂದು ಎಲ್ಲರೂ ಅತ್ತಕಡೆಗೆ ಹೋದರು. ಮದುವೆ ಮನೆಯ ಉಪಾಹಾರ ಎಲ್ಲರು ಅದೂ ಇದು
ಹರಟೆ ಹೊಡೆಯುತ್ತಿರಬೇಕಾದರೆ, ಈತ ಆಕೆಯನ್ನು
ಅರಸಿದ. ಇಲ್ಲ, ಆಕೆ ಎಲ್ಲೂ ಕಣ್ಣಿಗೆಬೀಳಲಿಲ್ಲ. ತುಂಡು
ಬಾಳೆ ಎಲೆಯ ಮುಂದೆ ಕುಳಿತುಕೊಂಡು ಪುಟ್ಟನಿಗೂ ತಿನ್ನಿಸುವ ಪ್ರಯತ್ನ ಮಾಡಿದ. ಒಂದೆರಡು ತುತ್ತು
ತಿಂದ ಪುಟ್ಟ ಅಮ್ಮ ಎಲ್ಲಿ? ಅಂತ ಅದೇ ಶ್ರುತಿಯನ್ನು ಹಿಡಿದೆಳೆದ. ಈಗ ತನ್ನಿಂತಾನೆ ಅಸಮಾಧಾನ ಬೇಡವೆಂದರೂ
ಸುಳಿಯಲಾರಂಬಿಸಿತು. ಎಲ್ಲಿ ಹೋದಳಪ್ಪ ಈಕೆ. ಮಗುವಿನ ಹಸಿವಾದರೂ ನೆನಪಿಗೆ ಬರಬೇಕಲ್ಲ.? ಆಕೆಯಿಲ್ಲದೇ ಉಪಾಹಾರ ಶಾಸ್ತ್ರವಾಯಿತು.
ಯಥಾ ಪ್ರಕಾರ
ಪುಟ್ಟನನ್ನು ಎತ್ತಿಕೊಂಡು ರಸ್ತೆಯ ತುದಿಯವರೆಗೂ ನಡೆದು ನಿಧಾನಕ್ಕೆ ನಡೆದ. ರಸ್ಥೆಯಂಚಿನ
ಅಂಗಡಿಗೆ ತೆರಳಿದ. ಅಲ್ಲೇನೋ ಕಂಡ ಪುಟ್ಟ ಬೇಕೆಂದಾಗ ಅದನ್ನು ತೆಗೆಸಿಕೊಟ್ಟ. ಹಾಗೂ ಹೀಗೂ
ಒಂದಷ್ಟು ಹೊತ್ತು ಕಳೆಯಿತು. ಊಟದ ಹೊತ್ತಾಗುತ್ತಿದ್ದಂತೆ ಮತ್ತೆ ಬಂದ. ಒಂದಷ್ಟು ಜನ ಅಮ್ಮಂದಿರು ತಟ್ಟೆಯಲ್ಲಿ ಅನ್ನ ಪಾಯಸ ಹಾಕಿ ಮಕ್ಕಳಿಗೆ
ತಿನ್ನಿಸುವುದನ್ನು ಕಂಡ. ಈಗ ಎಲ್ಲಾದರೂ ಸಿಕ್ಕಿಯಾಳು ಎಂದು ಮನೆಯೆಲ್ಲ ಹುಡುಕಿದ. ಕೊನೆಗೆ
ಕೋಣೆಯೊಂದರಲ್ಲಿ ಆಕೆಯ ಸ್ವರ ಕೇಳಿ ಅತ್ತ ಹೋದರೆ,
ಅಕ್ಕೆಯ ಸುತ್ತ ಒಂದಷ್ಟು ಹೆಂಗಳೆಯರು. ಹತ್ತಿರ ಹೋಗುವುದಾಅರೂ ಹೇಗೆ. ಕೊನೆಗೆ ಕಣ್ಣಲ್ಲೇ
ಕರೆದ. ಕಣ್ಣಿನ ಕರೆಗಾಗುವಷ್ಟು ಅವಳ ಗಮನ ತನ್ನೆಡೆ ಬಿತ್ತಲ್ಲ ಎಂಬ ಸಮಾಧಾನ ಆತನದ್ದು. ಹತ್ತಿರಬಂದವಳೆ...ಒಬ್ಬಿಬ್ಬರಿಗೆ
ತನ್ನ ಮನೆಯವರು ಎಂದು ಪರಿಚಯಿಸುವಷ್ಟರಲ್ಲೇ ಆತನೊಡನಿರುವ ಆಕೆಯ ಮಾತು ಕತೆ ಮುಗಿಯಿತು. ಮಗುವಿನ ಕೊಳೆಯಾದ ಬಟ್ಟೆಯನ್ನು
ಬೇರೆ ಬದಲಿಸಿ ಮಗುವನ್ನು ಸ್ವಲ್ಪ ನೋಡಿಕೊಳ್ಳೀ ಎಂದು ರಾಗದ ಬೇಡಿಕೆ ಸಲ್ಲಿಸಿ...ಅ ಕೆಲಸ ಈ ಕೆಲಸ
ಅಂತ ಅಲ್ಲಿಂದ ಸಾಗ ಹಾಕಿದಾಗ ಬೇಡವೆಂದರೂ ಪುಟ್ಟನನ್ನು ಹೆಗಲಿಗೇರಿಸಿ ಅಲ್ಲಿಂದ ಕದಲಿದ.
ಮಧ್ಯಾಹ್ನದ ಊಟದ
ಹೊತ್ತಾದರೂ ಊಹೂಂ ಆಕೆ ಮತ್ತೆ ಕಣ್ಣಿಗೆ ಬೀಳಲಿಲ್ಲ. ಪುಟ್ಟನಿಗೆ ಊಟ ಕೊಡುವಷ್ಟರಲ್ಲಿ ಸುಸ್ತಾಗಿ ಹೋಯಿತು. ಬಹಳಷ್ಟು
ದಂಪತಿಗಳು ಜತೆಯಲ್ಲೇ ಊಟಕ್ಕೆ ಕುಳಿತದ್ದನ್ನು ಕಂಡು ಒಂದಷ್ಟು ದೂರಕ್ಕೆ ಕಣ್ಣಾಡಿಸಿದ. ಇಲ್ಲ ಆಕೆ
ಕಾಣಲಿಲ್ಲ. ಮನಸ್ಸು ಸ್ವಲ್ಪ ತಳಮಳಿಸಿತು. ಸ್ವಲ್ಪ ಅಸಮಾಧಾನ ಆವರಿಸಿಕೊಂಡಿತು. ನಂತರ ಆಕೆಯನ್ನರಸುವುದನ್ನು ಬಿಟ್ಟು ಬಿಟ್ಟ. ಪುಟ್ಟನನ್ನು ಎತ್ತಿಕೊಂಡು
ಒಂದು ಸುತ್ತು ಪೇಟೆಗೆ ಹೋಗಿಬಂದ. ಐಸ್ಕ್ರೀಂ ಚಾಕಲೇಟ್ ಗೆ ಪುಟ್ಟನ ಅಳು ನಿಂತಿತು. ಸಿಟ್ಟಿನ ಜಾಗದಲ್ಲಿ ಮೊಂಡುತನ ಆವರಿಸಿತು.
ಹಾಗೇ ದಿನ ಕಳೆಯಿತು.
ಆದಿನ ಕಳೆದ ಬಗೆಯಲ್ಲಿ ತಳಮಳಿಸಿದ ಮನಸ್ಸು ನಿದ್ದೆಯನ್ನು ಬೇಗನೇ
ಸ್ವೀಕರಿಸಲಿಲ್ಲ. ಮನಸ್ಸು ಸುಪ್ತ ಕನಸಲ್ಲಿ
ಎಚ್ಚರವಾಗುತ್ತದೆ. ಮತ್ತದೇ ದಿನದ ಗದ್ದಲದಲ್ಲಿ
ಕಳೆದ ಹೊತ್ತು, ಕೇಕೆ ನಗು ಅಳು ಅದೂ ಇದು ಮತ್ತೂ ಮತ್ತೂ ಧಾಳಿ ಇಡುತ್ತ ಮಂಪರು ನಿದ್ದೆಯ ಕನಸಲ್ಲಿ ಪುನಃ ಶ್
ವಕ್ಕರಿಸತೊಡಗಿತು. ಅದೆಷ್ಟು ಹೊತ್ತಾಗಿತ್ತೋ ತಿಳಿಯದು ಮದುವೆ ಮನೆಯ ಗದ್ದಲ ಕಡಿಮೆಯಾಗುತ್ತಾ
ಕೊನೆಯಲ್ಲಿ ಪಿಸುಮಾತಿಗೆ ಇಳಿದು ಬಿಟ್ಟು ಇನ್ನೇನು ನೀರವ ಮೌನವೇ ಆವರಿಸಿತು. ಮನೆಯ ಸುತ್ತ ಹಾಕಿದ
ಮಿಣುಕು ದೀಪಗಳ ಮಾಲೆ ಮಿನುಗುತ್ತಾ ಆರುತ್ತಾ ಜೀವಂತಿಕೆಯ ಅಸ್ತಿತ್ವವನ್ನು ಸಾರುತ್ತಿದ್ದಂತೇ ಮನೆಯಿಡೀ ನಿದ್ದೆಗೆ ಜಾರಿತು.
ಶಾಮಿಯಾನದ ಕೆಳಗೆ ಬಹಳಷ್ಟು ಜನ್ನ ನಿದ್ದೆಗೆ ಜಾರಿದ್ದರು. ಕೆಲವು
ಗೊರಕೆಯ ಸದ್ದು ಬಿಟ್ಟರೆ ಮತ್ತೆ ನೀರವ ಮೌನ. ಆಗ ಘಲ್ ಘಲ್
ಅಂತ ಬಳೆಯ ಸದ್ದು ಅಲ್ಲಿನ ಮೌನವನ್ನು
ಭೇದಿಸುವಂತೆ ಕೇಳಿಸುತ್ತಿತ್ತು. ಯಾರೋ ಚಪ್ಪರದ ಅಂಚಿನಲ್ಲಿ ಮೆತ್ತಗೆ ಓಡಾಡಿದಂತೆ ಭಾಸವಾಗಿ
ಹೆಜ್ಜೆ ಸದ್ದು ಗಾಢವಾಗುತ್ತಾ ಹತ್ತಿರ ಬಂದದ್ದೇ ಅರಿವಿಗೆ ಬಾರಲಿಲ್ಲ. ನಿದ್ದೆಯಲ್ಲೇ ಹೆಜ್ಜೆಯ
ಸದ್ದು ಬಳೆಯ ಸದ್ದು ಕನಸಿನಂತೆ ಭಾಸವಾಗುತ್ತಿದ್ದರೆ, ಮೆತ್ತಗೆ ಕೈ ತಲೆಯನ್ನು ತಡವಿ ಪುಟ್ಟನ ಮೇಲಿನ ಕೈಯ್ಯನ್ನು ಸರಿಸಿದಾಗ ಎಚ್ಚರವಾಯಿತು. ಆ ಕತ್ತಲೆಯಲ್ಲೂ
ಶರೀರದ ಗಂಧ ಹೇಳಿತು, ಇದು ಆಕೆಯೇ....! ಆಕೆ
ಹುಡುಕುತ್ತಾ ಹತ್ತಿರ ಬಂದಿದ್ದಳು. ಬಂದಾಕೆ ಕತ್ತಲಿನಲ್ಲಿ
ಕತ್ತಿನ ಬಳಿ ಪಿಸುಗುಟ್ಟಿದಾಗ ಈತನದ್ದು ಮೌನವೇ ಉತ್ತರ. ಪಿಸುಗುಟ್ಟುತ್ತಾ ಹೇಳೀದಳು....” ನೀವು ಇಲ್ಲಿ
ಮಲಗಿದ್ದೀರಾ ? ಎಷ್ಟೊಂದು ಹುಡುಕಿದೆ?” ಇಲ್ಲ ಆತ
ಮಗುವಿನ ಮೇಲಿನ ತೋಳನ್ನು ಮತ್ತಷ್ಟು ಒತ್ತಿ ಹಿಡಿದು ಮೊಂಡನಾಗಿ ಹೋದ. ದಿನದ ತಾಪ ಕುದಿಯುವ ಬಿಂದು ದಾಟಿತ್ತು. ಇನ್ನು ಬರೀ ಹೆಬೆ
ಮಾತ್ರ ಉಳಿದಿತ್ತು.
ಆಕೆಯಲ್ಲಿ ಸಾಂತ್ವನದ
ಮಾತಿರಲಿಲ್ಲ. ಕೇವಲ ಮಗುವಿನ ಮೇಲಿನ ಕೈ ಸರಿಸಿ ಮುಖವನ್ನು ಹತ್ತಿರ ತಂದಳು. ಆತ ಮುಖವನ್ನು
ಅತ್ತ ತಳ್ಳಿ ಮಗ್ಗುಲು ಬದಲಿಸಿದ. ಆಕೆಗೆ
ಅರಿವಾಯಿತು. ರಾಯರ ಸಿಟ್ಟು. ಯಥಾ ಪ್ರಾಕಾರ ಆತನ
ಕೂದಲಲ್ಲಿ ಬೆರಳಾಡಿಸಿ ಸಿಟ್ಟನ್ನು ತಣಿಸುವ ಯುತ್ನ ಮಾಡಿದಳು. ಪಿಸುಮಾತಿನಲ್ಲಿ ಮೆತ್ತಗೆ
ಹೇಳಿದಳು ...”ತುಂಬ ಕೆಲಸ ಇತ್ತು. ಅಮ್ಮ ಅವರು ಇವರು ಬಿಡೋದೇ ಇಲ್ಲ.....ಇವತ್ತೊಂದು ದಿನ
ಅಲ್ವಾ?” ಕೂದಲಲ್ಲಿ ಬೆರಳಾಡಿಸುತ್ತ ಪುಟ್ಟನನ್ನು
ತಡವರಿಸಿದಳು. ಮಗುವನ್ನು ಆಚೆ ಸರಿಸಿ
ಮಗ್ಗುಲಲ್ಲೇ ಮಲಗಿದಾಗ ಈತ ಮೊಂಡು ತನ ಕರಗಿತು. ಸಿಟ್ಟು ನಿದ್ದೆ ಎರಡೂ ಹಾರಿ ಹೋಯಿತು. ಹಾಗೆ ಆಕೆಯನ್ನು ತನ್ನತ್ತ ಸೆಳೆದ. ಆಕೆ
ಪ್ರೀತಿಯಿಂದಲೇ ಆತನನ್ನು ದೂರ ತಳ್ಳಿ ಪುಟ್ಟನನ್ನು ತಬ್ಬಿ ಮಲಗಿದಳು.
ಇಂತಹ ಘಟನೆಗಳು ಗಂಡ ಹೆಂಡಿರ ನಡುವೆ ಸಾಮಾನ್ಯ. ಸರಸ ವಿರಸಗಳು
ಕೌಟುಂಬಿಕ ಜೀವನ ಮಾಲೆಯ ನಡುವಿನ ಗಂಟುಗಳಂತೆ ಒಂದರ ನಂತರ ಇನ್ನೊಂದು ಬಂದೇ ಬರುತ್ತವೆ. ಮನಸ್ಸು
ಸುಸ್ಥಿರವಾಗಿದ್ದಾಗ ಯಾವುದೇ ಅಹಿತಕರ ನಡವಳಿಕೆಯೂ ಗಂಭೀರವೆನಿಸುವುದಿಲ್ಲ. ಮನಸ್ಸು ಅಸಂತುಲನೆಗೆ
ಒಳಗಾಗುವಾಗ ಇನ್ನೊಬ್ಬರ ನಡವಳಿಕೆಗಳು ವರ್ತನೆಗಳು ನಮ್ಮ ಮನಸ್ಸಿನ ಭಾವನೆಗಳನ್ನು ನಿಯಂತ್ರಿಸುತ್ತವೆ. ಅಥವಾ ನಮ್ಮ ಮನಸ್ಸಿನ ಭಾವನೆಗಳು ಇನ್ನೊಬ್ಬರ
ನಿಯಂತ್ರಣದಲ್ಲಿರುತ್ತವೆ.
ಗಂಡ ಬಯಸುತ್ತಾನೆ ಆಕೆ ತನಗೆ ಬೇಕಾದಂತೆ ತನ್ನಿಷ್ಟದಂತೆ ನಡೆಯಬೇಕು .
ಹೆಂಡತಿಯೂ ಸಹ ಇದನ್ನೇ ಬಯಸುವುದಿಲ್ಲ ಎನ್ನುವ ಹಾಗಿಲ್ಲ. ಆಕೆಯದ್ದೂ ಅಷ್ಟೇ. ತನ್ನಿಷ್ಟಕ್ಕೆ
ಬೇಕಾದಂತೆ ಆತನ ವರ್ತನೆ ಇರಬೇಕು. ನಡೆಯಬೇಕು. ಹೀಗೆ,
ಗಂಡಾಗಲೀ ಹೆಣ್ಣಾಗಲೀ, ಆತ ಅಥವಾ ಆಕೆ ತನಗೆ ಬೇಕಾದಂತೆ ನಡೆದುಕೊಳ್ಳಬೇಕು ಎಂದು
ತಿಳಿಯುವುದರಲ್ಲೇ ಒಂದು ದಾಸ್ಯ ಅಥವಾ ಗುಲಾಮೀತನದ ಸುಪ್ತವಾಸನೆ ಇರುತ್ತದೆ. ಅದಕ್ಕೆ ಹೊರ
ಭಾವದಲ್ಲಿ ಹಲವು ಬಣ್ನಗಳಿರಬಹುದು. ಅದು ಪ್ರೀತಿ ಮಣ್ಣು ಮಸಿ ಅಂತ. ಏನಿದ್ದರೂ ಅದು ಸೂಕ್ಷ್ಮ ಮನದ
ಸ್ವಾರ್ಥ. ಪರಸ್ಪರ ಮನಸ್ಸಿನ ಸುಪ್ತ
ಭಾವನೆಗಳೇನೇ ಇರಲಿ ಆಕೆ ಅಥವಾ ಆತ, ತನಗೆ ತೃಪ್ತಿಯಾಗುವಂತೆ
ನಡೆದುಕೊಳ್ಳಬೇಕು. ಇದೊಂದು ಮಾನಸಿಕ ದಾಸ್ಯದ
ಹೇರಿಕೆಯನ್ನು ತೋರಿಸುತ್ತದೆ. ಇದರಿಂದ ತುಸು ಸರಿದು ಅತ್ತ ನೋಡಿದರೆ ಮಾನಸಿಕ ದಾಸ್ಯ ಏನು ಎಂಬುದು
ಅರಿವಾಗುತ್ತದೆ.
ಹೆಂಡತಿ ಆಕೆಗೆ ಮನಸ್ಸಿಲ್ಲದೇ ಇದ್ದರೂ ಪರವಾಗಿಲ್ಲ ಆಕೆ ತನ್ನಾಶೆ
ಬಯಕೆಗಳಂತೆ ನಡೆಯಬೇಕು ಇದನ್ನು ಗಂಡ ಬಯಸಿದರೆ ಹೆಂಡತಿಯೂ ಇದೇ ತರಹದ ಬಯಕೆಗಳನ್ನು
ಹೊಂದಿರುತ್ತಾಳೆ. ಮನವೊಪ್ಪದೇ ಇದ್ದರೂ ತನ್ನನ್ನು ತೃಪ್ತಿ ಪಡಿಸುವುದಕ್ಕೋಸ್ಕರವಾದರೂ
ನಡೆದುಕೊಳ್ಳಬೇಕು ಎಂದು ಬಯಸುವುದು ಇನ್ನೊಂದು ಮನಸ್ಸನ್ನು ದಾಸ್ಯಕ್ಕೆ ಎಳೆಯುವುದಕ್ಕೆ ಸಮಾನ. ಅದನ್ನೇ ,
ಆಕೆ ಅಥವಾ ಆತ ಒಪ್ಪಿಕೊಂಡು ಮನಸಾರೆ
ತೃಪ್ತಿ ಪಡಿಸುವುದಕ್ಕೆ ನಡೆದುಕೊಂಡರೆ ಅಲ್ಲಿ ದಾಸ್ಯವಿರುವುದಿಲ್ಲ, ಸಹಕಾರ ಇರುತ್ತದೆ. ಅದು
ಕೇವಲ ಸಹಕಾರವಾಗಿರುವುದಿಲ್ಲ ಅದರಿಂದ ಆಚೆಗಿನ ಮಾನಸಿಕ ಸಂಭಂಧಗಳನ್ನು ಹೇಳುತ್ತದೆ. ಸಹಾಕಾರ
ಮತ್ತು ದಾಸ್ಯದಲ್ಲಿ ಕ್ರಿಯೆಗಳು ಒಂದೇ ಆದರು ಭಾವವೆತ್ಯಾಸವಿರುತ್ತದೆ.
ಮತ್ತೊಬ್ಬರು ನಮಗೆ ಬೇಕಾದಂತೆ ನಡೆದುಕೊಂಡರೆ ಚೆನ್ನ. ಆಗ ನಾನೂ
ನಡೆದುಕೊಳ್ಳಬಹುದು. ಇದು ಸದ್ಭಾವನೆಯ ಸಹಜ ಕಲ್ಪನೆಯೇ ಆಗಿದ್ದರೂ, ಅಲ್ಲಿ ಸೂಕ್ಷ್ಮವಾದ ಬಲವಂತದ ಬಂಧನವಿರುತ್ತದೆ.
ತಾಯಿಯಾದವಳು ಮಗುವನ್ನು ಪ್ರೀತಿಯಿಂದ ಸಾಕುತ್ತಾಳೆ. ತನ್ನದೇ ಎದೆಹಾಲನ್ನು ನೀಡಿ ಬೆಳೆಸುತ್ತಾಳೆ.
ತನಗೇನೂ ಕೊಡದೇ ಇದ್ದರೂ ಪರವಾಗಿಲ್ಲ ಮಗು ಸುಖದಲ್ಲಿರಬೇಕೆಂದು ಬಯಸುತ್ತಾಳೆ. ಇದರಲ್ಲಿ ಯಾವ
ದಾಸ್ಯದ ಕಟ್ಟು ಪಾಡು ಇಲ್ಲ. ಅದೇ ಮಗ ತನಗೆ ಬೇಕಾದಂತೆ ನಡೆದುಕೊಳ್ಳಬೇಕು ಎನ್ನುವಹಾಗಿದ್ದರೆ
ಅಲ್ಲಿ ಸೂಕ್ಷ್ಮ ದಾಸ್ಯ ಇದ್ದೇ ಇರುತ್ತದೆ. ಅದನ್ನು ಬೇರೆ ಯಾವ ಕಲ್ಪನೆಯಲ್ಲೇ ಕರೆದುಕೊಂಡರೂ ಅದರ
ಮೂಲ ಭಾವ ಅದೇ ಆಗಿರುತ್ತದೆ. ಇದು ಕೇವಲ ಗಂಡ ಹೆಂಡತಿ ಮಾತ್ರವಲ್ಲ ಅಣ್ಣ ತಮ್ಮ ಅಪ್ಪ ಮಗ..ಹೀಗೆ
ಸಂಭಂಧವನ್ನು ಮೀರಿ ಮನುಷ್ಯ ಮನುಷ್ಯರ ನಡುವಿನ ಭಾವನೆಗಳಿಗೂ ಅನ್ವಯವಾಗುತ್ತದೆ.
ಮತ್ತೊಬ್ಬರು ತನಗೆ ಬೇಕಾದಂತೆ ನಡೆದುಕೊಳ್ಳಬೇಕು, ಎಂಬ ಭಾವನೆ
ಪ್ರತಿಯೊಂದು ಸಂಬಂಧಗಳ ನಡುವೆ ಇದ್ದೆ ಇರುತ್ತದೆ. ಆದರೆ ತನಗೆ ಬೇಕಾದಂತೆ ನಡೆದುಕೊಳ್ಳಬೇಕು ಎಂಬುದು
ಹೆಚ್ಚಾಗಿರುವುದು ಗಂಡ ಹೆಂಡತಿಯರ ನಡುವೆ ಮಾತ್ರ ಇದು ಅಪ್ಪಟ ಸತ್ಯ. ಮನಸ್ಸಿಲ್ಲದೇ ಮಾಡಿದ
ಸೇವೆಯಿಂದ ಗಂಡಾಗಲೀ ಹೆಣ್ಣಾಗಲೀ ಯಾವ ತೃಪ್ತಿಯನ್ನು ಅನುಭವಿಸುವುದಕ್ಕೆ ಸಾಧ್ಯವಿರುತ್ತದೆ? ಯಾವುದೂ ಇಲ್ಲ. ಆದರೂ ಅನುಭವಿಸಬೇಕು. ಅದನ್ನೇ ದಾಸ್ಯದ
ಹೇರಿಕೆ ಎನ್ನುವುದು. ಅದು ಸೂಕ್ಷ್ಮ ವಾಗಿರಬಹುದು.
ಆದರೆ ಮನಸ್ಸಿಲ್ಲದೆಯೋ ಅಥವ ಅರೆ ಮನಸ್ಸಿನಿಂದಲೋ ಇಲ್ಲ ಕೇವಲ ಒಲಿಸಿಕೊಳ್ಳಬೇಕೆಂಬ ಸ್ವಾರ್ಥದಿಂದಲೋ
ಮಾಡಿದಂತಹ ಸೇವೆಯನ್ನು ಮುಕ್ತ ಮನಸ್ಸಿನಿಂದ ನಮಗೆ ಅನುಭವಿಸುವುದಕ್ಕೆ ಸಾಧ್ಯವಿದೆಯೇ? ಓಂದು ಸನ್ಮನಸ್ಸಿಗೆ
ಸಾಧ್ಯ ಇಲ್ಲ ಎನ್ನಬೇಕು. ಅದನ್ನು ಅನುಭವಿಸುವಾಗ ಮನಸ್ಸಿನ ಮೂಲೆಯೊಂದರಲ್ಲಿ
ಸೂಕ್ಷ್ಮವಾದ ಒಂದು ಅತೃಪ್ತಿ ಇದ್ದೇ ಇರುತ್ತದೆ .
ಹಾಗಾಗಿ ಸ್ವಲ್ಪವೂ ಅತೃಪ್ತಿಯಿಲ್ಲದೇ ಗಂಡನಾಗಲೀ ಹೆಂಡತಿಯಾಗಲೀ ಮಾಡಿದಂತಹ ಸೇವೆಯನ್ನು
ಪರಸ್ಪರ ಅನುಭವಿಸುವುದು ಒಂದು ಪರಮ ಸುಖ. ಯಾವುದೇ ಹಂಗಿಲ್ಲದೇ ಅನುಭವಿಸುವ ನಿರಾಳ ಸುಖವದು. ಇದನ್ನೆ
ಸರಸ ಎನ್ನುವುದು. ಸರಸ ಎಂದರೆ ಸಮ ಭಾವದ ಸಮ ಭಾರದ ಸಮ ರುಚಿಯ೦ ಸಮ ಕಲ್ಪನೆಯ ಸಮ ಆಸ್ವಾದನೆಯ ಸಮ ಜೀವನದ ರಸ. ಇಲ್ಲಿ ಎಲ್ಲವು
ಸಮವಾಗಿರುತ್ತದೆ. ಹಾಗಿದ್ದರೆ ಮಾತ್ರ ಅದು ಸರಸವಾಗಿರುತ್ತದೆ.
Nice
ReplyDelete