ಇಂದು ಹೆಣ್ಣು ಗಂಡು ಸಮಾನತೆಗಾಗಿ ಹೋರಾಡುವ ಸನ್ನಿವೇಶಗಳನ್ನು ದಿನ
ನಿತ್ಯವೆಂಬಂತೆ ಕಾಣುತ್ತೇವೆ. ಯಾವುದೇ ಮನುಷ್ಯರಿಗಾಗಲೀ ಪ್ರಾಣಿಗಾಗಲೀ ಭೂಮಿಯಲ್ಲಿ ಹುಟ್ಟಿದ
ಮೇಲೆ ಬದುಕಿಗಾಗಿ ಹೋರಾಟ ಅನಿವಾರ್ಯ. ಅದು ಕಾಡಿನಲ್ಲಾಗಲೀ ಊರಲ್ಲಾಗಲೀ ಹೋರಾಟ ಇಲ್ಲದ ಬದುಕು
ಇಂದು ಕಲ್ಪಿಸುವುದು ಅಸಾಧ್ಯ. ಹಾಗಿರುವಲ್ಲಿ ಗಂಡು ಹೆಣ್ಣು ಮಾಡುವ ಹೋರಾಟ ಇದು ಬದುಕಿಗಾಗಿ
ಅಲ್ಲ. ಸಮಾನತೆಗಾಗಿ. ಇದು ಎಷ್ಟು ಅನಿವಾರ್ಯವೋ
ಅದು ವಿಷಯವಲ್ಲ. ಆದರೆ ಕೆಲವು ಅನುಭವಗಳು ಈ ಹೋರಾಟದ ಹಾದಿಯನ್ನು ವಿಸ್ಮಯದಿಂದ ಗಮನಿಸುವಂತೆ
ಮಾಡುತ್ತವೆ. ಸಮಾನತೆ ಅದು ಮನುಷ್ಯನಿಗೆ
ಮಾತ್ರವಲ್ಲ, ಭೂಮಿಯಲ್ಲಿ ಹುಟ್ಟುವ ಪ್ರತಿಯೊಂದು ಜೀವಿಗೂ ಅವಶ್ಯಕ. ಯಾಕೆಂದರೆ ಯಾವುದೇ ಜೀವಿಯಾಗಲೀ
ಭೂಮಿಯಲ್ಲಿ ಹುಟ್ಟುವುದು ಬದುಕುವುದಕ್ಕಾಗಿಯೇ ಹೊರತು ಸಾಯುವುದಕ್ಕಾಗಿ ಅಲ್ಲ.
ಅಂದು ಬೆಳಗ್ಗೆ ಪೀಣ್ಯದಲ್ಲಿರುವ ಚಾಲನಾ ಪರವಾನಗಿ ಪರೀಕ್ಷಾ ( driving license test) ಮೈದಾನಿಗೆ
ಹೋಗಿದ್ದೆ. ನನ್ನ ಪತ್ನಿಗೆ ಅಂದು ಚಾಲನ ಪರವಾನಗೀ
ಪರೀಕ್ಷೆ ಇತ್ತು. ಒಂದು ಬದಿಯಲ್ಲಿ ಒಂದಷ್ಟು ಬೆಂಚುಗಳನ್ನು ಸಾಲಾಗಿರಿಸಿ ಬಂದವರಿಗೆ
ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದ್ದರು. ಸರಿ ನಮ್ಮ ಸರದಿಗಾಗಿ ಅಲ್ಲಿ ನಾವು ಕುಳಿತಿದ್ದೆವು. ಯಾವುದೋ ಪತ್ರಿಕೆ ಹಿಡಿದು
ಓದುತ್ತಿದ್ದೆ. ಅದರಲ್ಲೇ ತಲ್ಲೀನನಾಗಿದ್ದ ನನಗೆ ಒಮ್ಮೇಲೆ ಗಾಬರಿಯಾಗುವ ಸ್ಥಿತಿ ಬಂದು.
ತರುಣಿಯೊಬ್ಬಳು ಅದೇ ಬೆಂಚ್ ನಲ್ಲಿ ನನ್ನ ಪಕ್ಕವೇ
ಕುಳಿತು ತನ್ನ ಚೂಡಿಯ ಶಾಲನ್ನು ಹಾರಿಸಿದಾಗ ಅದು ರಪ್ಪನೇ ನನ್ನ ಮುಖವನ್ನೂ ಮುಚ್ಚಿತ್ತು.
ಗಾಬಾರಿಯಾಗಿ ಒಂದರೆಕ್ಷಣ ಅವಾಕ್ಕಾದೆ.. ಆಕೆಯ ಶಾಲನ್ನು ಆತ್ತ ಸರಿಸಿ ನಾನು ಮತ್ತಷ್ಟು ಸರಿದು
ಕುಳಿತೆ. ತುಸು ಹೊತ್ತಿನಲ್ಲೇ ಆಕೆಯ ಜಡೆ ನನ್ನ ಹೆಗಲ ಮೇಲೆ ರಾಚಿತ್ತು. ಒಂದಷ್ಟು ಅಸಹನೆಗೊಂಡರೂ ಮೌನವಾಗಿಯೇ ಇದ್ದೆ. ಆ ತರುಣಿ
ಬೇರೆ ಯಾರೂ ಅಲ್ಲ. ಪ್ರಸಿದ್ದ ಟೀವಿ ಸೀರಿಯಲ್ ನಟಿ. ಇಂದಿಗೂ ಆಕೆಯ ಹೆಸರು ಗೊತ್ತಿಲ್ಲ.
ಟೀವಿಯಲ್ಲಿ ಆಕೆಯ ಮುಖವನ್ನು ಅಷ್ಟೊ ಇಷ್ಟೋ ಕಂಡ ನೆನಪು. ಸಾಮಾನ್ಯವಾಗಿ ಸೀರಿಯಲ್ ನಲ್ಲಿ
ತಲೆತುಂಬ ಹೂ ಮುಡಿದು ಅಪ್ಪಟ ಗರತಿಯಂತೇ ಕಂಡು ಬರುವ ಈಕೆ ಇಲ್ಲಿ ಅದಕ್ಕೆ ತೀರ
ತದ್ವಿರುದ್ದವಾಗಿದ್ದಳು. ಸಾರ್ವಜನಿಕವಾಗಿ ಹೀಗೆ
ವ್ಯಕ್ತಿ ಭೇದವಿಲ್ಲದೇ ತಮ್ಮ ಮೈ ಮೇಲೆ ಬಿದ್ದಂತೆ ವ್ಯವಹರಿಸುವುದು ನನಗಂತೂ ಸಹ್ಯವಾಗಲಿಲ್ಲ
ಇನ್ನೊಂದು ಘಟನೆ,
ವ್ಯಕ್ತಿಯೊಬ್ಬರ ಆದಾಯ ತೆರಿಗೆ ಸಲ್ಲಿಸುವ ಕೆಲಸದಲ್ಲಿ ಅವರನ್ನು ಭೇಟಿಯಾಗುವುದಕ್ಕೆ ಬೆಂಗಳೂರಿನ
ಜಯನಗರದ ಮನೆಗೆ ಹೋಗಿದ್ದೆ. ವಿಳಾಸ ದಾರಿ ಹೇಳಿ ಅವರು ಅಲ್ಲಿಗೆ ಬರುವಂತೆ ಹೇಳಿದ್ದರು. ಒಂದಷ್ಟು
ದಾಖಲಾತಿಗಳನ್ನು ತರುವ ಉದ್ದೇಶದಿಂದ ಅಲ್ಲಿಗೆ ವಿಳಾಸ ಹುಡುಕಿಕೊಂಡು ಅವರ ಮನೆಗೆ ಹೋಗಿದ್ದೆ. ಆ
ವ್ಯಕ್ತಿ ಟೀವಿ ಸಿನಿಮಾ ಕ್ಷೇತ್ರದಲ್ಲಿ ದುಡಿಯುವ ಯಾವುದೋ ತಂತ್ರಜ್ಞರಾಗಿದ್ದರು. ಉತ್ತಮ ಸಂಭಾವಿತ ವ್ಯಕ್ತಿ. ಈ ಮೊದಲೇ ಹಲವು ಸಲ
ಭೇಟಿಯಾಗಿದ್ದೆ. ಅವರ ಮನೆ ಹುಡುಕುತ್ತಾ ಮನೆಯ ಒಳ
ಹೊಕ್ಕ ಮೇಲೆ ತಿಳಿದದ್ದು , ಅದು ಅವರ ಮನೆಯಲ್ಲ. ಅಲ್ಲಿ ಯಾವುದೋ ಸೀರಿಯಲ್ ಅಥವಾ ಸಿನಿಮಾ ಶೂಟಿಂಗ್
ನಡೆಯುತ್ತಿತ್ತು. ಆ ವ್ಯಕ್ತಿ ಶೂಟಿಂಗ್
ಕೆಲಸದ ಗಡಿಬಿಡಿಯಲ್ಲಿ ನಿರತರಾಗಿದ್ದರು. ನನಗೆ ತುಸು ಹೊತ್ತು ಕಾಯುವಂತೆ ಹೇಳಿ ತನ್ನ ಕೆಲಸದತ್ತ ಹೋದರು.
ಶೂಟಿಂಗ್, ನನಗೆ ಅದು ತೀರ ಹೊಸದು. ಹಾಗಾಗಿ
ಸ್ವಲ್ಪ ಕುತೂಹಲದಿಂದಲೆ ಮನೆಯೊಳಗೆ ಒಂದು ಹಾಲ್ ನಲ್ಲಿ ನಡೆಯುತ್ತಿದ್ದ ಶೂಟಿಂಗ್ ನ್ನು ತನ್ಮಯನಾಗಿ ನೋಡುತ್ತಿದ್ದೆ. ಅಲ್ಲಿ ಸುತ್ತಲೂ ನನ್ನಂತೆ ಬಹಳ ಮಂದಿ ನಿಂತಿದ್ದರು.
ನಾನೂ ಅವರ ಜತೆಯಲ್ಲೇ ನಿಂತು ಶೂಟಿಂಗ್ ನೋಡುತ್ತಿದ್ದರೆ, ಆ ಜನಗಳ ಎಡೆಯಲ್ಲಿ ನನ್ನ ಹೆಗಲ ಮೇಲೆ
ಮೃದುವಾದ ಕೈಯೊಂದು ಬಂದು ಬಿತ್ತು. ಗಾಬರಿಯಾಗಿ ತಿರುಗಿ ನೋಡಿದೆ ಒಬ್ಬಳು ತರುಣಿ, ಆಕೆಯೂ ಯಾವುದೋ
ನಟೀ ಮಣಿ ಇರಬೇಕು. ಮುಖ ನೋಡಿದೆ. ಪರಿಚಯವೇ ಇಲ್ಲ.
ಅಕೆ ಕಿರುನಗು ಬೀರಿ ಮತ್ತೂ ಶೂಟಿಂಗ್ ನೋಡುತ್ತಾ ಅದರಲ್ಲೆ ಮಗ್ನಳಾಗಿ ಹೋದಳು. ನಾನು
ತುಸು ಹಿಂದೆ ಸರಿದು ಆಕೆಗೆ ಮುಂದೆ ಹೋಗುವುದಕ್ಕೆ ಅನುವಾಗುವಂತೆ ಸ್ಥಳ ಬಿಟ್ಟು ಕದಲಿದೆ. ನಂತರ ಆಕೆ ಅಲ್ಲಿಯ ಕೆಲಸ ಕಾರ್ಯಗಳಲ್ಲಿ ನಿರತಳಾದಳು,
. ಈ ಎರಡು ಘಟನೆ
ವಿಚಿತ್ರ ಅನುಭವವನ್ನು ನೀಡಿದ್ದು ಬೇರೆ ವಿಚಾರ. ಆದರೆ ಆ ಸಿನಿಮಾ ಸೀರಿಯಲ್ ಕ್ಷೇತ್ರವನ್ನೇ
ಅನುಮಾನದಿಂದ ನೋಡುವಂತೆ ಮಾಡಿದ್ದು ಸುಳ್ಳಲ್ಲ. ಹಾಗೆಂದು ಇಡೀ ಕ್ಷೇತ್ರವನ್ನೇ ಹೇಳುವುದಲ್ಲ. ಇದು
ಕೇವಲ ನನಗಾದ ಅನುಭವ. ಈ ಎರಡು ಘಟನೆಯಲ್ಲಿ ಆ ಎರಡು ಹೆಣ್ಣುಗಳಂತೆ ಈ ಅಪರಿಚಿತರಲ್ಲಿ, ನಾನು
ನಡೆದುಕೊಂಡಿದ್ದರೆ, ಇಂದು ಮೀಟೂ ವಿನ ಒಬ್ಬ ಆರೋಪಿ ನಾನಾಗಿ ಹೋಗುತ್ತಿದ್ದೇನೋ ಎಂದು ಅನ್ನಿಸುತ್ತದೆ. ಇಂದು ಮೀಟು ಎಂಬ
ಅಭಿಯಾನದಲ್ಲಿ ಮೀಟುತ್ತಾ ಮೀಟುತ್ತಾ ಹೊರಡುವ ಅಪಸ್ವರ ಮನುಷ್ಯ ವಿಕಾರಗಳನ್ನು ತೋರಿಸುತ್ತದೆ. ಯಾವತ್ತೋ ದೇಹದಲ್ಲಿ ಆದ ಗಾಯ ವಾಸಿಯಾದಂತೆ ಇದ್ದು ಬಹಳ ಸಮಯದ
ನಂತರ ಕೀವು ತುಂಬಿ ವೃಣವಾಗುವಂತೆ ಮೀಟು ವಿನಲ್ಲಿನ ಪ್ರಕರಣಗಳು ಮನುಷ್ಯ ಸ್ವಾರ್ಥವನ್ನು
ಬಿಂಬಿಸುತ್ತವೆ. ಅರೋಪದ ಸತ್ಯಾಸತ್ಯದ ಬಗೆಗಿನ
ಮಾತಲ್ಲ. ಈ ಅಭಿಯಾನದ ಬಗ್ಗೆಯೂ ಅಲ್ಲ. ಆದರೆ ಗಂಡು ಹೆಣ್ಣು ಎಂಬ ವೆತ್ಯಾಸದ ಬಗೆಗಿನ ಒಂದೆರಡು
ವಿಚಾರಗಳು.
ಸಮಾನತೆ ಸ್ವಾತಂತ್ರ್ಯ ಪ್ರತಿಯೊಬ್ಬರೀಗೂ ಅತ್ಯವಶ್ಯ. ಇದರಲ್ಲಿ
ಗಂಡು ಹೆಣ್ಣೆಂಬ ಭೇದವಿಲ್ಲ. ಯಾಕೆಂದರೆ ಶೋಷಣೆ ದೌರ್ಜನ್ಯ ಎಂಬುದು ಎರಡೂ ವರ್ಗದಲ್ಲಿ ಸರ್ವೇ
ಸಾಮಾನ್ಯ. ಬೆಳ್ಳಗಿದ್ದವರ ದೇಹದಲ್ಲಿ ಆದ ಗಾಯ ಕಣ್ಣಿಗೆ ರಾಚುವಂತೆ ಗೋಚರಿಸಿದರೆ ಕರಿ ದೇಹದ
ಮೇಲಿನ ಗಾಯ ಹುಣ್ಣಾಗಿ ರಕ್ತ ಒಸರಿದರೂ ಕಾಣುವುದಿಲ್ಲ. ಇಷ್ಟೇ ವೆತ್ಯಾಸ. ದೌರ್ಜನ್ಯ ಶೋಷಣೆಯನ್ನು ಸಹಿಸಿಕೊಂಡು ಏನೂ
ಆಗಿಲ್ಲವೆಂಬಂತೆ ಬದುಕುವ ಹಲವರನ್ನು ಕಾಣಬಹುದು. ಇದಕ್ಕೆ ಗಂಡು ಹೆಣ್ಣಿನ ವೆತ್ಯಾಸವಿಲ್ಲ.
ದೌರ್ಜನ್ಯದ ರೂಪಗಳು ಬೇರೆ ಬೇರೆ ಇರಬಹುದು. ಆದರೆ ಪರಿಣಾಮ ಮಾತ್ರ ಒಂದೇ, ಸುಖ ಶಾಂತಿಯಿಂದ
ಕಳೆಯುವ ಸರ್ವ ಹಕ್ಕನ್ನೂ ಗಳಿಸಿರುವ ಮನುಷ್ಯ
ಅದಿಲ್ಲದೇ ದಿನಗಳ ಬಹುಪಾಲನ್ನೂ ಕಳೆಯುತ್ತಾನೆ. ಡೋಲು ಅಥವಾ ಚೆಂಡೆಗೆ ಕೋಲಿನಿಂದ ಬಡಿಯುವಾಗ
ಎಲ್ಲರಿಗೂ ಕಾಣುತ್ತದೆ, ಸ್ವರವೂ ಕೇಳಿಸುತ್ತದೆ. ಮೃದಂಗ ತಬಲೆಗೆ ಬಾರಿಸಿದ ಪೆಟ್ಟು ಕಾಣುವುದೇ
ಇಲ್ಲ...ಸ್ವರವೂ ಕೇಳಿಸುವುದಿಲ್ಲ. ಗಮನ ಹರಿಸಿ
ನೋಡಬೇಕಾಗುತ್ತದೆ. ಇಂದು ಸಮಾನತೆಗಿಂತ ಮನುಷ್ಯನಿಗೆ ಬೇಕಾಗಿರುವುದು ಪ್ರೇಮ
ಸೌಹಾರ್ದತೆ ಮಾತ್ರ. ಪ್ರೀತಿ ವಿಶ್ವಾಸ ಸೌಹಾರ್ದತೆ ಇಲ್ಲದ ಜೀವನದಲ್ಲಿ ಯಾವ ಸುಖ ಶಾಂತಿ ನೆಮ್ಮದಿ
ಸಿಗಲಾರದು. ಮತ್ತು ಸಿಗುವ ಸಮಾನತೆ ಅದು ಬದುಕಿನ ಸಮಾನತೆಯಾಗಿರುವುದೂ ಇಲ್ಲ.
ಇಷ್ಟಕ್ಕೂ ಸಮಾನತೆ
ಎಂಬುದು ಏನು? ಅದರ ಬಗ್ಗೆ ಖಚಿತವಾದ ನಿರ್ದಿಷ್ಟವಾದ ನಿಲುವು ಇರುವುದಿಲ್ಲ. ಅಸಮತೋಲನವೇ
ಪ್ರಕೃತಿಯ ವೈಶಿಷ್ಟ್ಯತೆ. ಈ ಅಸಮತೋಲನವನ್ನು
ಸಮಾನವಾಗಿ ಸ್ವೀಕರಿಸುವುದೇ ಸಮಾನತೆ. ಆದರೆ ಇಂದು
ಎಲ್ಲೆಲ್ಲಿ ಹೇಗೆ ಬೇಕಾದರೆ ಹಾಗೆ ತಮಗೆ
ಅನುಕೂಲವಾಗುವಂತೆ ಚಿಂತಿಸುವ ಆಧುನಿಕ ತತ್ವವೇ
ಸಮಾನತೆ. ಪ್ರತಿಶತ ನೂರರಷ್ಟು ಸಂಪೂರ್ಣ
ಒಬ್ಬರ ಹಾಗೆ ಇನ್ನೊಬ್ಬರು ಇರುವುದಕ್ಕೆ ಸಾಧ್ಯವೇ ಇಲ್ಲ. ಹುಟ್ಟಿಸಿದ ಮಗುವಿಗೆ ಹೆತ್ತ ತಾಯಿ
ರಕ್ತವನ್ನೇ ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಇದು ಅಸಮಾನತೆಯಲ್ಲವೇ ? ಹುಟ್ಟಿಸಿದ ಪರಮಾತ್ಮನಿಗೂ ಸಮಾನತೆ ಸಾಧ್ಯವಾಗಿಲ್ಲ
ಎಂದಾದರೆ ಮನುಷ್ಯ ಅದಕ್ಕೆ ಹೋರಾಡುವುದರಲ್ಲಿ ಅರ್ಥವೇನಿದೆ? ಒಬ್ಬಾತ ಬುದ್ದಿವಂತನೂ ವಿದ್ಯಾವಂತನೂ
ಆಗಿ ಬೆಳೆಯುತ್ತಾನೆ. ಆತ ಸಣಕಲ ದೇಹದವನಾಗಿರುತ್ತಾನೆ.
ಇನ್ನೊಬ್ಬ ದೈಹಿಕವಾಗಿ ಗಟ್ಟಿ ಮುಟ್ಟಾಗಿ ಕುಸ್ತಿ ಪಟುವಾಗಿ ಬೆಳೆಯುತ್ತಾನೆ. ಇಬ್ಬರೂ
ಸಮಾನರಾಗಿರುವುದಕ್ಕೆ ಸಾಧ್ಯವಿಲ್ಲ. ಗಂಡು
ಗಂಡಿನಲ್ಲಿ ಹೆಣ್ಣು ಹೆಣ್ಣಿನಲ್ಲೇ ಸಮಾನತೆ ಇಲ್ಲ. ಮತ್ತೆ ಗಂಡು ಹೆಣ್ಣಿನ ನಡುವಿನ ಸಮಾನತೆಯ ಹೋರಾಟ ಯಾವುದಕ್ಕೆ? ಹಾಗಾಗದರೆ
ಸಮಾನತೆ ಬೇಡವೇ? ಅದನ್ನು ವಿವೇಚನೆಯಿಂದ
ಗಳಿಸಬೇಕು.
ಸಮಾನತೆ ಎಂದರೆ
ಧರಿಸುವ ಬಟ್ಟೆಯಿಂದ ಬರುವುದಿಲ್ಲ. ಗಂಡಿನಂತೆ ಹೆಣ್ಣು ಉಡುಗೆ ತೊಟ್ಟರೆ ಸಮಾನತೆ
ಸಾಧ್ಯವಾಗುವುದಿಲ್ಲ. ಅಥವಾ ಹೆಣ್ಣಿನಂತೆ ಗಂಡೂ ಆಗುವುದಕ್ಕೆ ಸಾಧ್ಯವಿಲ್ಲ. ಅದೇ ರೀತಿ ಮಾಡುವ
ಉದ್ಯೋಗದಲ್ಲಿ ಬರುವುದಿಲ್ಲ. ಹೀಗೆ ಒಬ್ಬರಿಗೆ ಇನ್ನೊಬ್ಬರು ಸಮಾನವಾಗುವುದಕ್ಕೆ ಸಾಧ್ಯವೇ ಇಲ್ಲ.
ಪ್ರತಿಯೊಬ್ಬನೂ ತಿಳಿದುಕೊಳ್ಳಬೇಕಾದ ವಿಚಾರವೆಂದರೆ ನನ್ನ ಹಾಗೆ ನಾನೊಬ್ಬನೇ. ಬೇರೆ ಇರುವುದಕ್ಕೆ
ಸಾಧ್ಯವಿಲ್ಲ. ರೂಪದಿಂದಲೋ ಭಾವದಿಂದಲೋ ಇನ್ನಾವುದೇ ಗುಣಗಳಿಂದಲೋ ಒಂದೇ ರೀತಿ ಇದ್ದರೆ ಅದು
ಸಂಪೂರ್ಣ ಸಮಾನತೆಯಾಗುವುದಿಲ್ಲ. ಗಂಡು ಅಡುಗೇ
ಕೋಣೆ ಹೊಕ್ಕರೆ ಅದು ಸಮಾನತೆಯ ಸಾಧನೆಯೂ ಅಲ್ಲ. ಹೆಣ್ಣು ಉದ್ಯೋಗಿಯಾಗಿ ಮನೆಯಿಂದ ಹೊರ ನಡೆದರೂ
ಸಮಾನಾತೆಯಾಗುವುದಿಲ್ಲ. ಬದಲಿಗೆ ಪರಸ್ಪರ ಸಹಕಾರವಿದ್ದಲ್ಲಿ ಯಾವುದೇ ಮಾಡಿದರೂ ಅದು
ಸಮಾನತೆಯಾಗುತ್ತದೆ. ಹೆಣ್ಣು ಗಂಡಿನ ಅರ್ಹತೆಗಳೇ ಬೇರೆ. ಇಲ್ಲಿ. ಹಾಗಿರುವಾಗ ಅರ್ಹತೆಯ ಸಮಾನತೆ
ಹೇಗೆ ಸಾಧ್ಯವಾಗುತ್ತದೆ.?
ಬುದ್ದಿವಂತನಿಂದ
ಬುದ್ದಿಯನ್ನು ಕುಸ್ತಿಪಟು ಪಡೆದುಕೊಂಡು, ಕುಸ್ತಿ ಪಟುವಿನಿಂದ ದೈಹಿಕ ಸಾಮಾರ್ಥ್ಯವನ್ನು
ಬುದ್ದಿವಂತನು ಪಡೆದುಕೊಳ್ಳಬೇಕು. ಅದರ ಅರ್ಥ ತನ್ನ ಕೊರತೆಯನ್ನು ಒಪ್ಪಿಕೊಂಡು ಇನ್ನೊಬ್ಬನ
ಅರ್ಹತೆಯನ್ನು ಗೌರವಿಸುವುದೇ ಆಗಿದೆ. ಇದನ್ನೇ ಸಮಾನತೆ ಎನ್ನುವುದು. ಗಂಡು ತನ್ನ ಕೊರತೆಯನ್ನು ಒಪ್ಪಿಕೊಳ್ಳಬೇಕು ಹೆಣ್ಣು
ತನ್ನ ಕೊರತೆಯನ್ನು ಒಪ್ಪಿಕೊಳ್ಳಬೇಕು. ತನ್ನಲ್ಲಿರುವ ಯೋಗ್ಯತೆಯನ್ನು ವಿನಿಯೋಗ ಮಾಡಬೇಕು.
ಇದನ್ನೆ ಸೌಹಾರ್ದತೆ ಎನ್ನುವುದು. ಸೌಹಾರ್ದವಾಗಿ ಇದ್ದುದನ್ನು ಉಪಯೋಗಿಸುವಾಗ ಪ್ರಕೃತಿಯ ಧರ್ಮ
ಪಾಲಿಸಿದಂತಾಗುತ್ತದೆ. ಇಬ್ಬರಲ್ಲಿಯೂ ಹೊಂದಾಣಿಕೆಯ ಸಂತುಲನೆ ಇರುವಾಗ ಸಮಾನತೆಯ ಪ್ರಶ್ನೆಯೇ
ಉದ್ಭವಿಸುವುದಿಲ್ಲ.
ಗಂಡು ಹೆಣ್ಣು
ಎಂಬುದು ಭೇದವಿಲ್ಲ. ಗಂಡಾದರೂ ಹೆಣ್ಣಾದರೂ ಅದು
ಮನುಷ್ಯ ಜೀವಿ. ಮನುಷ್ಯ ಜೀವಿಗೆ ಮನುಷ್ಯತ್ವ ಅಂದರೆ ಮಾನವೀಯತೆ ಇರಬೇಕಾಗಿರುವುದು ಅತ್ಯಂತ
ಅವಶ್ಯ. ಮಾನವೀಯತೆ ಇಲ್ಲದವರು ಮನುಷ್ಯ ಅಂತ ಆನ್ನಿಸಿಕೊಳ್ಳುವುದಾದರೂ ಹೇಗೆ? ಮಾನವೀಯತೆಯನ್ನು ತಳ್ಳಿ ಹಾಕಿ ಸಿಗುವ ಸಮಾನತೆ ಅದು
ಮನುಷ್ಯನಾದವನಿಗೆ ಬೇಕಾಗಿರುವುದಿಲ್ಲ. ತನ್ನಲ್ಲೇನೋ ಊನವಾಗಿದೆ. ತಾನು ವಂಚಿತನಾಗಿದ್ದೇನೆ
ಕಳೆದುಕೊಂಡಿದ್ದೇನೆ ಎಂಬ ಭಾವನೆಗಳೇ ಹಲವು ಸಲ ಮನಸ್ಸಿನಲ್ಲಿ ಅತೃಪ್ತಿಯನ್ನು ಹುಟ್ಟಿಸಿ ಶಾಂತಿಯನ್ನು ಕದಡಿಸುತ್ತದೆ. ಧನಾತ್ಮಕ
ಚಿಂತನೆ ಇರುವಲ್ಲಿ ಕಳೆದುಕೊಂಡದ್ದರ ಬಗ್ಗೆ ವಂಚಿಸಲ್ಪಟ್ಟ ಬಗ್ಗೆ ಯೋಚನೆ ಇರುವುದಿಲ್ಲ.
ಕಿಂಚಿತ್ತಾದರೂ ಸಿಕ್ಕಿದ ಲಾಭದ ಬಗ್ಗೆ ಮನಸ್ಸು ಯೋಚಿಸುತ್ತದೆ. ಒಂದಿಷ್ಟು ಸುಖ ಸಂತೋಷಕ್ಕೆ ಮನುಷ್ಯ ಬಹಳಷ್ಟು ಕಷ್ಟಗಳನ್ನೂ
ನಷ್ಟಗಳನ್ನೂ ಸಹಿಸಿಕೊಳ್ಳುತ್ತಾನೆ.
ಅಸಮಾನತೆ ಎಂಬುದು
ಪ್ರಕೃತಿಯ ಒಂದು ಅಂಗ. ಮಾರ್ಜಾಲ ವ್ಯಾಘ್ರದ ವೆತ್ಯಾಸದಂತೆ ಸಹಜತೆಯಿಂದ ಬದುಕುವುದರಲ್ಲಿ ಪ್ರಕೃತಿ
ಧರ್ಮವಿರುತ್ತದೆ. . ಸಹಜವಾಗಿ ಸೌಹಾರ್ದತೆ
ಪ್ರೀತಿಯಿಂದ ಆದನ್ನು ಅನುಭವಿಸುವ ಮನೋಭಾವ ಇರಬೇಕು. ಇಲ್ಲವಾದರೆ ಅದು ಕೇವಲ ಸಮಾನತೆಯಾಗಬಹುದೇ
ಹೊರತು ಅದು ಪರಿಪೂರ್ಣ ಬದುಕಾಗುವುದಿಲ್ಲ. ಸಮಾನತೆ ಎಂದರೆ ಸ್ವಚ್ಛಂದ ಮನಸ್ಸಿನ ಭಾವನೆಯ ಮತ್ತೊಂದು
ರೂಪ. ಆ ನಿಟ್ಟಿನಲ್ಲಿ ಒಂದು ಬದುಕನ್ನು ಸ್ವಚ್ಛಂದವಾಗಿ ನಿರಾಳವಾಗಿ ಅನುಭವಿಸಬೇಕಾದರೆ ಸಿಗಬೇಕಾದ
ಸಮಾನತೆಯಲ್ಲೂ ಸೌಹಾರ್ದತೆ ಅತ್ಯವಶ್ಯ.
ಬಲ ಇದ್ದವನೇ
ದೊಡ್ಡವನು. ಇದು ಅರಣ್ಯ ನ್ಯಾಯ. ಇದು ನಾಗರೀಕ
ಸಮಾಜದಲ್ಲೂ ಈ ನ್ಯಾಯ ಅನ್ವಯವಾಗುವುದು
ವಿಪರ್ಯಾಸ. ಅಸಮಾನತೆಯ ಅನುಭವಕ್ಕೆ ಇದು ಪೂರಕ. ಹಾಗಾಗಿ ಮಹಿಳೆ ಅಬಲೆಯಾಗಿ, ಶೋಷಿತೆಯಾಗಿ
ಸಮಾಜದಲ್ಲಿ ಗುರುತಿಸಲ್ಪಡುತ್ತಾಳೆ. ನಾಗರೀಕತೆ
ಬೆಳೆದರೂ ಸಹ ದೌರ್ಜನ್ಯ ಸುಸಂಸ್ಕೃತ ಸಮಾಜಕ್ಕೆ
ಸವಾಲಾಗಿರುತ್ತದೆ. ದೌರ್ಜನ್ಯದ ರೂಪಗಳು ಹಲವಾರಿದ್ದರೂ ಸಹ ಇಲ್ಲಿ ಬದುಕಿನ ಸ್ವಾತಂತ್ರ್ಯವೆಂಬುದು ಪ್ರಶ್ನಾರ್ಹವೇ
ಆಗಿರುತ್ತದೆ. ಶೋಷಣೆ ಎಂಬ ಧ್ವನಿಯಲ್ಲಿ ಮೊದಲು ಕಾಣುವ ಮುಖ ಮಹಿಳೆಯದ್ದೇ ಆಗಿರುತ್ತದೆ. ಶೋಷಣೆಯ
ಕೂಗಿಗೆ ಮಹಿಳೆಯೇ ಮುಖವಾಣಿಯಾಗಿ ಬಿಂಬಿಸಲ್ಪಡುತ್ತದೆ. ಆದರೆ ಇಂದು ದೌರ್ಜನ್ಯ ಎಂಬುದು ಕೇವಲ
ಮಹಿಳೆಯರ ಮೇಲೆ ಮಾತ್ರ ನಡೆಯುವುದಲ್ಲ. ದೈಹಿಕವಾಗಿ ಅಬಲೆಯಾಗಿರುವ ಕಾರಣ ಶೋಷಣೆ ಎಂದರೆ ಅದು
ಮಹಿಳೆಯರೆ ಮೇಲೆ ಮಾತ್ರ ಆಗುವುದಕ್ಕೆ ಸಾಧ್ಯ ಎಂಬ ಪ್ರತೀತಿ ಇರುತ್ತದೆ. ಆದರೆ ಬಲ ಹೀನತೆ ಎಂಬುದು
ಕೇವಲ ದೈಹಿಕ ಸ್ಥಿತಿಗೆ ಸೀಮಿತವಾಗಿರುವುದಲ್ಲ. ಮಾನಸಿಕ ಸ್ಥಿತಿಗೂ ಅನ್ವಯವಾಗುತ್ತದೆ.
ಭಾವನಾತ್ಮಕ ಮನಸ್ಸು ದೌರ್ಜನ್ಯಕ್ಕೆ ಮೊದಲ ಎರೆಯಾಗಿಬಿಡುತ್ತದೆ. ಅದಕ್ಕೆ ಗಂಡು ಹೆಣ್ಣಿನ
ಭೇದವಿಲ್ಲ. ಇಂದು ಗಂಡೂ ಸಹ ದೌರ್ಜನ್ಯಕ್ಕೆ
ಒಳಗಾಗುವುದು ಸರ್ವೇಸಾಮಾನ್ಯ ಎಂಬಂತಾಗಿದೆ. ದೌರ್ಜನ್ಯ ಎಸಗುವ ನಿಟ್ಟಿನಲ್ಲಿಯೂ ಗಂಡು ಹೆಣ್ಣು ಒಂದು ಸಮಾನತೆಯನ್ನು
ಸ್ಥಾಪಿಸಿರುವುದು ವಿಪರ್ಯಾಸವೇ ಸರಿ. ಈ ಕೌಟುಂಬಿಕ
ಸಂಭಂಧಗಳ ಅಳಿವು ಉಳಿವಿನ ಸಂಘರ್ಷದಲ್ಲಿ ಹಲವು ಹೃದಯಗಳು ಮೌನವಾಗಿವೆ.
ಇಂದು ಗಂಡು
ಹೆಣ್ಣಿನ ಸಮಾನತೆ ಎಂಬುದು ಸಾಮಾಜಿಕ ಬದ್ದತೆಯಾಗಬಹುದು. ಹೆಣ್ಣಿನಲ್ಲಿ ಸಮಾನತೆಗೆ ಬಯಸುವ ತುಡಿತವೂ ಅಧಿಕವಾಗಿರುತ್ತದೆ.
ದೈಹಿಕವಾಗಿ ಮಾನಸಿಕವಾಗಿ ಹೆಣ್ಣು ಸರ್ವಶಕ್ತಳು ಎಂದು ಸಮಾಜಕ್ಕೆ ಹಲವು ಸಂದರ್ಭಗಳಲ್ಲಿ ತೋರಿಸಿ
ಆಗಿ ಹೋಗಿದೆ. ಹೆಣ್ಣು ಸರ್ವಶಕ್ತಳು ಅನುಮಾನವಿಲ್ಲ. ಭಾರತೀಯ ಸನಾತನ ಸಂಸ್ಕೃತಿಯೇ ಇದನ್ನು
ತೋರಿಸಿಕೊಟ್ಟಿರುತ್ತದೆ. ಆದರೂ ಸಮಾನತೆಯ ಸಮರವೆಂಬುದು ನಿರಂತರವಾಗಿ ಹೋರಾಟವನ್ನು
ಮುಂದುವರೆಸುತ್ತದೆ. ಅದರ ಅನಿವಾರ್ಯತೆಯೂ ಇರಬಹುದು. ಆದರೆ ತಮಗೆ ಸಿಗುವ ಹಕ್ಕಿಗೆ ಮತ್ತೊಬ್ಬರ
ದೌರ್ಜನ್ಯದ ಬೆಲೆಯನ್ನು ಕೊಡುವುದು ನ್ಯಾಯವಲ್ಲ. ಹೆಣ್ಣಿಗಾಗಲೀ ಗಂಡಿಗಾಗಲೀ ದಮನದಿಂದ ಸಿಗುವುವ ಹಕ್ಕು ಸಾರ್ಥಕತೆಯನ್ನು ತರಲಾರದು.
ಪ್ರಕೃತಿಯೇ ವಿಧಿಸಿದ ನಿಯಮಗಳಿಗೆ ಸಮಾನತೆಯ ತೇಪೆ ಹಾಕುವುದು
ಸಾಧ್ಯವಾಗದು. ಹುಲಿ ಹುಲಿಯಾಗಿಯೇ ಬದುಕುತ್ತದೆ. ಹಸು ಹಸುವಾಗಿಯೇ ಬದುಕುತ್ತದೆ. ಸಮಾನತೆಯ
ಹಕ್ಕು ಬದುಕುವ ಹಕ್ಕು ಪ್ರತಿಯೊಬ್ಬರಿಗೂ
ಇರುತ್ತದೆ. ಮನುಷ್ಯ ತನ್ನ ಮಾನಸಿಕ ಸಂಬಂಧವನ್ನು ಬಲಪಡಿಸಿಕೊಳ್ಳಬೇಕು. ಮಾನಸಿಕ ಸಂಬಂಧ
ಬಲಿಷ್ಠವಾದಾಗ ಯಾವ ಸಮಾನತೆಯೂ ಸಹ ಅನಿವಾರ್ಯವಾಗುವುದಿಲ್ಲ. ಕೊಡುಕೊಳ್ಳುವ ವ್ಯವಹಾರವೇ ಪ್ರಪಂಚದ
ನಿಯಮ. ತನ್ನಲ್ಲಿಲ್ಲದೇ ಇರುವುದನ್ನು
ಕೊಂಡುಕೊಂಡು ತನ್ನಲ್ಲಿ ಇಲ್ಲದನ್ನು ಕೊಡುವುದೇ ಜೀವನ. ಅದಕ್ಕಾಗಿಯೇ ಇಹಲೋಕ ಜೀವನವನ್ನು ಒಂದು
ವ್ಯಾಪಾರವಾಗಿಯೇ ಕಂಡು ಗತಿಸಿದಾಗ ಅವರು ಇಹಲೋಕ ವ್ಯಾಪಾರ ಮುಗಿಸಿದರು ಎನ್ನುವುದು. ಸಂತುಲನೆಯ ವ್ಯವಹಾರವೇ ಜೀವನ ಸಾರ್ಥಕತೆಯ ಸಂಕೇತ.
No comments:
Post a Comment