ಎರಡು ಸಾವಿರ ರೂಪಾಯಿಯ ನೋಟಿನ
ಕಂತೆಯನ್ನು ಹಸುವಿನ ಮುಂದೆ ಹಿಡಿದು ನೋಡೋಣ, ಅದು
ಬೈ ಹುಲ್ಲು ತಿಂದಷ್ಟೆ ತತ್ಪರತೆಯಲ್ಲಿ ಲಕ್ಷವೋ ಕೋಟಿಯೋ ಬೆಲೆಬಾಳುವ ನೋಟಿನ ಕಂತೆಯನ್ನು ತಿಂದು
ಬಿಡುತ್ತದೆ. ಅದಕ್ಕೇ ನೋಟಾದರೇನು ಹುಲ್ಲಾದರೇನು ಅದಕ್ಕದು ತಿನ್ನುವ ಸಾಧನ. ನಮ್ಮ ಕೈಯ್ಯಲ್ಲಿರುವ ಹಣ ನನ್ನದು ಎಂದು ನಾವು
ಹಿಗ್ಗಬಹುದು. ನೆಟ್ ಬ್ಯಾಂಕ್ ತೆರೆದು ನಮ್ಮ ಬ್ಯಾಂಕ್ ಬ್ಯಾಲೆನ್ಸ್, ಪಿಕ್ಸೆಡ್ ಡಿಪಾಸಿಟ್ ನ್ನು ನೋಡಿ ಆನಂದ ಪಡಬಹುದು. ನಮ್ಮ
ಕೈಯಲ್ಲಿರುವ ಇದೇ ನೋಟಿಗೆ ಬೆಲೆ ಇರುವುದು ಕೇಂದ್ರದಲ್ಲಿ ಭದ್ರವಾದ ಸರಕಾರವಿರುವಾಗ ಮಾತ್ರ. ಆ ಸರಕಾರ ಭದ್ರವಾಗಿ ಇರುವುದು ಭಾರತ ಅಂಚಿನಲ್ಲಿ ಬಲಶಾಲಿ
ಮತ್ತು ಭದ್ರವಾದ ಸೇನೆ ಇರುವಾಗ. ಇದು ಅಪ್ಪಟ ಸತ್ಯ. ನಮ್ಮ ಆರ್ಥಿಕ ಭದ್ರತೆಯಾಗಲಿ ಮಾನಸಿಕ ಭದ್ರತೆಯಾಗಲಿ
ಒದಗಿಬರುವುದು ಅದು ಸೂಕ್ತ ವಾತಾವರಣ ದೊರಕಿದಲ್ಲಿ ಮಾತ್ರ. ಆದರೆ ವಾಸ್ತವವನ್ನು ಮರೆತು ಕೇವಲ
ಪೂರ್ವಾಗ್ರಹದಿಂದ ಈ ಎರಡನ್ನೂ ಹೀಯಾಳಿಸಿಬಿಡುತ್ತೇವೆ. ನಮ್ಮ ನೆಲೆಯ ಅರಿವು ನಮಗೇ
ಅರಿತಿರುವುದಿಲ್ಲ.
ಇಂದು
ಭಾರತೀಯರು ಸರ್ವ ಸ್ವತಂತ್ರರು. ತೋಚಿದ್ದನ್ನು ಬರೆಯಬಹುದು, ತೋಚಿದ್ದನ್ನು ಹೇಳಬಹುದು, ವಾಕ್
ಸ್ವಾತಂತ್ರ್ಯದ ಪರಿಧಿ ಏನು ಎಂದು ಮಾತನಾಡುವವನಿಗೇ ಅರಿವಿಲ್ಲ. ಇದೆಲ್ಲ ದೊರೆಯ ಬೇಕಾದರೆ ಭಾರತದ
ಸರಕಾರ ಭದ್ರವಾಗಿರಬೇಕು. ನಮ್ಮ ಪ್ರಜಾಪ್ರಭುತ್ವಕ್ಕೆ ನಮ್ಮ ಸಂವಿಧಾನಕ್ಕೆ ಗೌರವ ದೊರೆಯಬೇಕು.
ಆದರೆ ಇದೆಲ್ಲವನ್ನು ಮರೆತು ಸ್ವಾತಂತ್ರ್ಯ ಎಂಬುದು ತೋಚಿದಂತೆ ಬರೆಯುವುದಕ್ಕೆ ಹೇಳುವುದಕ್ಕೆ
ತೊಡಗಿದರೆ ನಮ್ಮ ಹಳ್ಳವನ್ನು ನಾವೇ ತೋಡಿಕೊಂಡಂತೆ. ನಮ್ಮ ಸ್ವಾತಂತ್ರ್ಯ ಮುಂದೆ ಹಗಲು
ಕನಸಾಗಬಹುದು.
ಮೊನ್ನೆ
ನಮ್ಮಸೇನೆಯ ಕಟ್ಟಾಳು ವಿಂಗ್ ಕಮಾಂಡರ್ ಅಭಿನಂದನ್ ವಿರೋಧಿಗಳ ಕೈಗೆ ಸೆರೆ ಸಿಕ್ಕಾಗ ಅನುಭವಿಸಿದ
ತಳಮಳವೆಷ್ಟು? ಸೃಷ್ಟಿಸಿದ ಆತಂಕವೆಷ್ಟು? ರಾತ್ರಿ
ಹವಾನಿಯಂತ್ರಿತ ಕೊಠಡಿಯಲ್ಲಿ ಮೆತ್ತನೆಯ ಪಲ್ಲಂಗದಲ್ಲಿ ಸುತ್ತುವ ಫ್ಯಾನ್ ಗಾಳಿ ಸದ್ದಿಗೆ ಹಾಯಾಗಿ
ಮಲಗುವ ನಾವು ಒಂದು ಘಳಿಗೆ ಹೀಗೆ ವಿರೋಧಿ ಸೇನೆಯ ವಶವಾದರೆ ಹೇಗೆ? ಕಲ್ಪನೆಯೇ
ಆತಂಕವನ್ನು ಸೃಷ್ಟಿಸುತ್ತದೆ. ಹಾಗಾದರೆ ತಾನು ಜೀವಂತ ಮರಳುವ ವಿಶ್ವಾಸ ಇಲ್ಲದೇ ಇದ್ದರೂ
ಆತ್ಮವಿಶ್ವಾಸವನ್ನು ತೋರಿದ ನಮ್ಮ ಸೈನಿಕ ಕಟ್ಟಾಳುವಿನ ಆತ್ಮ ಸ್ಥೈರ್ಯ ಅದೆಂತಹುದು? ನಾವು ಅಹಂಕಾರದಿಂದ ಅಭಿಮಾನದಿಂದ ನಮ್ಮದೆಂದು
ಹೇಳಿಕೊಳ್ಳುವ ನಮ್ಮ ಈ ಸುಖ ಸಂತೋಷಗಳು
ನಮ್ಮದಲ್ಲ. ಅದು ಔದಾರ್ಯದ ಕೊಡುಗೆಗಳು. ನಾವು ನಮ್ಮದೆಂದು ಬಗೆದ ಹಣವಾಗಲೀ ಸಂಪತ್ತಾಗಲೀ ಹೀಗೆ
ಬೇಕಾದ್ದನ್ನು ಗೀಚಬಲ್ಲ ಸ್ವಾತಂತ್ರ್ಯವಾಗಲೀ ಉಳಿಯಬಹುದೇ?
ಆದು ಉಳಿಯಬಹುದೆಂಬ ವಿಶ್ವಾಸವನ್ನು ಬಲ ಪಡಿಸಿದ್ದು ನಮ್ಮ ಸೇನೆ ನಮ್ಮ ಸರಕಾರ ನಮ್ಮ
ಪ್ರಜಾಪ್ರಭುತ್ವ ಇದನ್ನು ನಾವು ಮರೆಯಬಾರದು.
ಮನುಷ್ಯ ಹೊರಗಿನ ಶತ್ರುವಿಗಿಂತಲೂ
ತನ್ನೊಳಗಿನ ಶತ್ರುವನ್ನು ಮೊದಲು ಅರಿತುಕೊಳ್ಳಬೇಕು. ಇದನ್ನೇ ತಿಳಿದವರು ಜ್ಞಾನ ಎಂದಿರುವುದು.
ತನ್ನೊಳಗಿನ ಶತ್ರುವನ್ನು ಒಬ್ಬಾತ ತಿಳಿದಿದ್ದಾನೆ ಎಂದರೆ ಆತ ಪರಮಾತ್ಮನಿಗೆ ಹತ್ತಿವಾಗುತ್ತಾನೆ.
ಆತನಿಗೆ ಹೊರಗೆ ಶತ್ರುಗಳಿರುವುದಿಲ್ಲ. ಶತ್ರುಗಳೇ ಇಲ್ಲದವನಿಗೆ ಭಯ ಎಲ್ಲಿಯದು? ಒಂದು ವೇಳೆ ಶತ್ರುವನ್ನು ಕಂಡರೂ ತನ್ನೊಳಗಿನ
ವೈರಿಯನ್ನು ಜಯಿಸಿದವನಿಗೆ ಹೊರಗೆ ಎದುರಾದ ಶತ್ರು
ಶತ್ರುವೇ ಅಲ್ಲ. ಅವನನ್ನು ಜಯಿಸುವುದು ಕಷ್ಟವೂ ಅಲ್ಲ. ಹಾಗೇನೆ. ನಮ್ಮ ದೇಶದ ಆಂತರಿಕ
ಶತ್ರುಗಳಾಗಿ ನಾವು ದೇಶದ ವಿರುದ್ದ ಹೋರಾಟ ನಡೆಸುವಂತಾಗಬಾರದು. ಇಂದು ನಮ್ಮ ದೇಶದ ನಮ್ಮ ಸರಾಕಾರದ ಅತ್ಯಂತ ದೊಡ್ಡ
ಶತ್ರು , ಈ ಒಳಗಿನ ಶತ್ರುಗಳು. ಯಾಕೆಂದರೆ ದೇಹದ ಒಳಗಿನ ಹಾನಿಯನ್ನು ನಾವು ಕಾಣುವುದಿಲ್ಲ. ಕೇವಲ
ಅನುಭವಿಸುತ್ತೇವೆ. ಅದರಂತೆ ಈ ಆಂತರಿಕ ಶತ್ರುಗಳು. ಅವುಗಳು ಕ್ರೂರವಾದ ಅನುಭವವನ್ನೇ ತಂದು
ಕೊಡುತ್ತದೆ.
ಈ
ಬರಹ ಯಾವುದೇ ಇಸಂಗೋ ತತ್ವಗಳಿಗೋ ಸಂಬಂಧಿಸಿರುವುದಲ್ಲ. ಯಾವುದೇ
ರಾಜಕೀಯ ಪ್ರೇರಿತವಲ್ಲ. ರಾಜಕೀಯವೆಂದರೆ ಅದು
ಕೇವಲ ಓಟ ನ್ನು ಮಾತ್ರವೇ ನೋಡುತ್ತದೆ. ಸ್ವಂತ ಅಪ್ಪ ಅಮ್ಮ ಬಂಧು ಬಳಗ ಹೀಗೆ ಯಾವುದೂ ಅದಕ್ಕೆ
ಗಣ್ಯವಿಲ್ಲ. ಕೇವಲ ಓಟಿನ ಸ್ವಾರ್ಥ ಮಾತ್ರ ಅಲ್ಲಿರುತ್ತದೆ. ಓಟು ಅಧಿಕಾರ ಇದರ ಹೊರತಾದ ರಾಜಕೀಯವಿಲ್ಲ. ಜಾತ್ಯಾತೀತ
ಎಂದರೂ ಅಲ್ಲಿ ಜಾತಿಯ ಸ್ವಾರ್ಥ ಇರುತ್ತದೆ.
ಬಡವರು ಎಂದರೂ ಶ್ರೀಮಂತಿಕೆಯ ಮೇಲೆ ದೃಷ್ಟಿ ಇರುತ್ತದೆ. ಹೆಜ್ಜೆ ಹೆಜ್ಜೆಯಲ್ಲೂ
ಅವಿಶ್ವಾಸ. ತಮ್ಮನ್ನು ತಾವೇ ನಂಬಿಕೊಳ್ಳಲಾಗದ ಸ್ಥಿತಿ. ಎಲ್ಲಿ ಆ ಅವಿಶ್ವಾಸವನ್ನು ನಾವು ನಮ್ಮ ಸೇನೆಯ ಮೇಲೆ ಸರಕಾರದ
ಮೇಲೆ ತೋರದಿರೋಣ, ನಮ್ಮ ಶತ್ರುಗಳು ನಾವಾಗದೇ ಇರೋಣ.
: ವಂದೇ ಮಾತರಂ:
No comments:
Post a Comment