Thursday, November 29, 2018

ಅಮ್ಮಾ ಎಂದರೆ...




ಬಾಲ್ಯದಲ್ಲಿನ  ಒಂದು ಘಟನೆ ನೆನಪಾಗುತ್ತದೆ.  ನಾವಾಗ ಪೈವಳಿಕೆ ಲಾಲ್ ಭಾಗ್ ನ ಬಾಡಿಗೆ ಮನೆಯಲ್ಲಿದ್ದೆವು. ಬಾಡಿಗೆ  ಮೆನೆ ಎಂದರೆ ಒಂದೇ ಕೊಣೆಯ ಮನೆ. ಅದಕ್ಕೆ ಹೊಂದಿಕೊಂಡು ಶಿಥಿಲವಾದ ಜೋಪಡಿಯಂತೆ ಇನ್ನೊಂದು ಮಾಡು ಇತ್ತು. ಅದನ್ನು ಮನೆ ಎಂದು ಕರೆಯುವುದು ಕಷ್ಟ. ಮನೆ ಎಂದು ಅಂದುಕೊಂಡರೆ ಸುಖ.  ನಮ್ಮ ಮನೆಯ ಒಂದಷ್ಟು ದೂರ ಶಾನುಭೋಗರ ಮನೆ. ಅವರ ಹೆಸರೇನು ಎಂದು ನೆನಪಿಲ್ಲ. ಹೆಸರಿಗಿಂತಲೂ ಶ್ಯಾನು ಭೋಗರ ಮನೆ ಎಂದೇ ಚಿರ ಪರಿಚಿತ.  ರಸ್ತೆಯ ಪಕ್ಕದಲ್ಲೇ ಇರುವ ಮನೆ ನಮ್ಮ ಮನೆಯಿಂದ ಒಂದಷ್ಟು ದೂರವೇ ಇತ್ತು. ಇಂದು ಆ ಮನೆಯ  ಪಕ್ಕದಲ್ಲಿ ಸಾಗುವಾಗ ಆ ವಯೋ ವೃದ್ಧ ಶ್ಯಾನುಭೋಗರ ನೆನಪಾಗುತ್ತದೆ.  ಅಲ್ಲಿಯ ಹಟ್ಟಿ(ಕೊಟ್ಟಿಗೆ)ಯಲ್ಲಿ ಬಹಳಷ್ಟು ದನಗಳಿದ್ದುವು.  ಅಲ್ಲಿಂದ ನಮ್ಮಮ್ಮ ಒಂದು ಕರುವನ್ನು ಕೊಂಡು ತಂದರು.   ಆಗ ಮನೆಯಲ್ಲಿ ಚಕ್ಕುಲಿ ವ್ಯಾಪಾರವಿತ್ತು. ಚಕ್ಕುಲಿಗೆ ಹಾಕುವ ಅಕ್ಕಿ ತೊಳೆದ ಕಲಗಚ್ಚು ನಾವು ಎಸೆಯುತ್ತಿದ್ದೆವು. ಆ ಕಲಗಚ್ಚನ್ನು ಕೊಡುವುದಕ್ಕಾಗಿಯೇ ಹಸು ಕರುವನ್ನು ತಂದಿದ್ದೆವು. ತಂದ ಕರುವನ್ನು ಕಟ್ಟುವುದಕ್ಕೆ ಹಟ್ಟಿ ಇಲ್ಲ. ಮನೆಯಲ್ಲಿ ಜಾಗವೂ ಇರಲಿಲ್ಲ. ಎದುರು ಇದ್ದ ಪುಟ್ಟ ಜಗಲಿಯಲ್ಲಿ ಕಟ್ಟುತ್ತಿದ್ದೆವು. ಅದೆಷ್ಟು ಸಂಭ್ರಮ? ಆಗೆಲ್ಲ  ಪುಟ್ಟ ಕರುವಿನ ಜತೆಯೇ ಮಲಗುತ್ತಿದ್ದೆವು.  ಆ ಕರುವನ್ನು ಬೆಳಗ್ಗೆ ಮೇಯುವುದಕ್ಕಾಗಿ ಹೊರಗೆ ಬಿಟ್ಟು ಬಿಡುತ್ತಿದ್ದೆವು. ಅಲ್ಲಿ ಸುತ್ತ ಮುತ್ತಲಿನವರೆಲ್ಲ ಹೀಗೆ ತಮ್ಮ ಹಸುಗಳನ್ನು ಬಿಟ್ಟು ಬಿಡುತ್ತಿದ್ದರು. . ಹತ್ತಿರದಲ್ಲೇ ಇದ್ದ ಬೋಳಂಗಳ ಮೈದಾನಿನ ಹುಲ್ಲುಗಾವಲಿಗೆ ಈ ದನಗಳೆಲ್ಲ ಹಿಂಡು ಹಿಂಡಾಗಿ ಹೋಗುತ್ತಿದ್ದವು.  ಬೋಳಂಗಳ ಹುಲ್ಲುಗಾವಲು ಹಸುಗಳ ಡೈನಿಂಗ್ ಟೇಬಲ್ ಇದ್ದಂತೆ.  ಸಾಯಂಕಾಲವಾಗುತ್ತಿದ್ದಂತೇ ಹೊಟ್ಟೆ ತುಂಬಿಸಿಕೊಂಡ ದನಗಳು ಮನೆಗೆ ವಾಪಾಸಾಗುತ್ತಿದ್ದವು.  ಅದೆಲ್ಲ ಭಾವನಾತ್ಮಕ ಸುಂದರ ದೃಶ್ಯಗಳು.

ನಮ್ಮ ಪುಟ್ಟ ಕರು, ಕೊಂಡು ತಂದ ಆರಂಭದ ಒಂದೆರಡು ವಾರ ಮನೆಗೆ ಬರುತ್ತಿರಲಿಲ್ಲ. ಆಗ ನಾವು ಅದನ್ನು ಹುಡುಕಿಕೊಂಡು ಹೋಗಿ ತರಬೇಕಾಗುತ್ತಿತ್ತು. ಒಂದು ದಿನ ಸಾಯಂಕಾಲ ನಾವು ಹೋದಾಗ ತಡವಾಗಿಬಿಟ್ಟಿತು. ಸಂಜೆ ಕತ್ತಲಾವರಿಸಿತ್ತು.  ಒಂದು ರೀತಿಯ ಆತಂಕ. ಆ ಪುಟ್ಟ ಕರು ಎಲ್ಲಿ ಹೋಗಿರಬಹುದು? ಯಾರಾದರೂ ಕದ್ದು ಒಯ್ದಿರಬಹುದೇ? ಈಗಿನಂತೆ ಅಂದು ದನಗಳ್ಳರ ಹಾವಳಿ ಇರಲಿಲ್ಲ. ಆದರೂ ನಮ್ಮ ಕರು ಎಲ್ಲಿ ಹೋಯಿತು?  ಬೋಳಂಗಳದ ಮೈದಾನು ಶಾಲಾ ಮೈದಾನು ಹೀಗೆ ಎಲ್ಲ ಕಡೆ ಹುಡುಕಿದೆ. ಕರು ಸಿಗಲಿಲ್ಲ. ಕೊನೆಯಲ್ಲಿ ಶಾನುಭೋಗರ ಮನೆಗೆ ಹೋದೆ. ಕೊನೆಯ ಪ್ರಯತ್ನವದು.  ಅಲ್ಲಿ ಮನೆಯ ಅಮ್ಮ ಹಟ್ಟಿಯ ಬಾಗಿಲು ತೆಗೆದು ತೋರಿಸಿದರು. ನಮ್ಮ ಪುಟ್ಟ ಗಂಗಮ್ಮ ತಾಯಿಯ ಜತೆಯಲ್ಲಿ ನಿಂತಿತ್ತು. ತಾಯಿ ಕರುವಿನ ಮೈ ನೆಕ್ಕುತ್ತಿತ್ತು.   ಛೇ...ಎಂತಹ ಸುಂದರ ದೃಶ್ಯವದು?   ಬೆಳಗ್ಗೆ ಕರುವನ್ನು  ಬಿಟ್ಟರೆ  ಅಲ್ಲಿ ಬರುತ್ತಿದ್ದ ದನದ ಹಿಂಡಿನ ಜತೆ ಅದು ತನ್ನ ತಾಯಿಯನ್ನು ಅರಸಿಕೊಳ್ಳುತ್ತಿತ್ತು. ಕಾಣುವುದಕ್ಕೆಲ್ಲ ಒಂದೇ ರೀತಿ ಇರುತ್ತಿದ್ದ ಕಪ್ಪು ಬಣ್ಣದ ದನಗಳ ನಡುವೆ ಅದಕ್ಕೆ ಅದರ ತಾಯಿ ಸಿಗುತ್ತಿತ್ತು. ಅದೆಷ್ಟೋ ಕರುಗಳನ್ನು ಹಾಕಿದ್ದ ಅ ಮಹಾ ಹಸು ತನ್ನ ಕಂದನನ್ನು ನೆಕ್ಕುತ್ತಾ ಇತ್ತು.  ನಿಜಕ್ಕೂ ಅದು ನಮ ಆಶ್ಚರ್ಯದ ಸಂಗತಿಯಾಗಿತ್ತು. ಹುಲ್ಲು ಮೇಯಲು ಹೋದ ಕರು ತಾಯಿಯನ್ನು ಹುಡುಕಿ  ಮತ್ತೆ ಪುನಃ ಸಾಯಂಕಾಲ ತಾಯಿ ಜತೆಯಲ್ಲೇ ಪೂರ್ವಾಶ್ರಮಕ್ಕೆ ಬರುತ್ತಿತ್ತು.  ತಾಯಿಯ ಜತೆ ಇದ್ದ ಹಸುಕರುವನ್ನು ತರುವುದಕ್ಕೆ ಮನಸ್ಸಾಗುತ್ತಿರಲಿಲ್ಲ. ಆದರೆ ತರದೇ ಬೇರೆ ವಿಧಿ ಇರಲಿಲ್ಲ. ಕೈಯಲ್ಲಿದ್ದ ಹಗ್ಗವನ್ನು ಹಸುವಿನ ಕೊರಳಿಗೆ ಬಿಗಿಯುತ್ತಿದ್ದಂತೆ ಅದು ವಿಧಿ ಇಲ್ಲದೆ ನಮ್ಮನ್ನು ಅನುಸರಿಸುತ್ತಿತ್ತು.  ಆ ಕರು ದೊಡ್ಡದಾಗಿ  ಹಸುವಾಗಿ ಹಲವು ಸಲ ಕರು ಹಾಕುವ ವರೆಗೂ ನಮ್ಮ ಜತೆಯಲ್ಲೇ ಇತ್ತು.  ಬಾಲ್ಯದ ನಮ್ಮ ಶರೀರ ಒಂದಷ್ಟು ದಿನ ಆ ಹಾಲನ್ನೇ ಹೀರಿ ಬೆಳೆದಿತ್ತು. 

ಆಗತಾನೇ ಹುಟ್ಟಿದ ಮಗು ತಾಯಿಯನ್ನು ಕಳೆದುಕೊಳ್ಳುತ್ತದೆ. ಆ ಮಗು ಒಂದೇ ಸವನೆ ಅಳುತ್ತದೆ. ಮನೆಯವರು ಎಷ್ಟೇ ದುಡ್ಡು ಕೊಟ್ಟು ಹಾಲು ತಂದು ಬಾಟಲಿಗೆ ಹಾಕಿ ಕೊಟ್ಟರೂ ಮಗು ಕುಡಿಯುವುದಿಲ್ಲ. ಅಳು ನಿಲ್ಲಿಸುವುದಿಲ್ಲ. ಪಕ್ಕದ ಮನೆಯ   ಹೆಂಗಸು ಮನೆಯೊಳಗಿನ  ಸಮಸ್ಯೆ ತಿಳಿದು ಬರುತ್ತಾಳೆ. ಪುಟ್ಟ ಶಿಶುವಿಗೆ ತನ್ನ ಎದೆ ಹಾಲನ್ನು ಕುಡಿಸುತ್ತಾಳೆ ಮಗು ಅಳು ನಿಲ್ಲಿಸುತ್ತದೆ. ಆ ತೊಟ್ಟು ಹಾಲಿನ ಮೌಲ್ಯ ಮಗುವಿಗೂ ತಿಳಿಯುವುದಿಲ್ಲ. ಕೊಟ್ಟ ಹೆಂಗಸೂ ಲೆಕ್ಕ ಹಾಕುವುದಿಲ್ಲ. ಲೆಕ್ಕವಿಲ್ಲದೇ ಇದ್ದರೆ ಎನಂತೆ?   ಅದಕ್ಕೆ ಮೌಲ್ಯವೂ ಇಲ್ಲವೇ?  ವಾಸ್ತವದಲ್ಲಿ ಮೌಲ್ಯ ನೋಡದೇ ಇದ್ದರೂ ಮೌಲ್ಯವನ್ನು ತಿಳಿಯುವ ಆವಶ್ಯಕತೆಯೂ  ಇರುವುದಿಲ್ಲ.  ಆ ಅವಶ್ಯಕತೆ ಒದಗಿ ಬಂದರೆ ಅದು ಆತ್ಮ ಸಾಕ್ಷಿ.  ಈ ಘಟನೆ ಮಿತ್ರನ ಮನೆಯಲ್ಲಿ ಕಣ್ಣಾರೆ ಕಂಡಿದ್ದೆ. ತಾಯಿ ಮಗು ಈ ಪ್ರಪಂಚ ಕಂಡ ಅತ್ಯಂತ ನಿಗೂಢ ಸಂಬಂಧ.

ಮಂಗಳೂರಿನ ಮಿಲಾಗ್ರಿಸ್ ಹತ್ತಿರದ ಬಸ್ ಸ್ಟಾಪ್ ನಲ್ಲಿ ತಲಪಾಡಿಗೆ ಹೋಗುವ  ನಲ್ವತ್ತೆರಡು ನಂಬರ್ ಬಸ್ ಕಾಯುತ್ತಾ   ನಿಂತಿದ್ದೆ.  ಅದು ಎಪ್ಪತ್ತರ ದಶಕದ ಸಮಯ.  ಊರಿಗೆ ಅಂದರೆ ಪೈವಳಿಕೆಗೆ ಹೋಗಬೇಕೆಂದರೆ ತಲಪಾಡಿಗೆ ಹೋಗಿ ಅಲ್ಲಿಂದ ಬೇರೆ ಬಸ್ಸು ಹಿಡಿದು ಹೋಗಬೇಕಿತ್ತು.  ಆಗ ತಲಪಾಡಿಗೆ ಹೋಗುವ ಬಸ್ ಗಳು ಈಗಿನಂತೆ ಲೈಟ್ ಹೌಸ್ ಹಿಲ್ ಗುಡ್ಡ ಹತ್ತಿ ಹೋಗುತ್ತಿರಲಿಲ್ಲ. ಬದಲಿಗೆ ಕೆಳಗಿನಿಂದ ಅರವಿಂದ್ ಮೋಟಾರ್ಸ್ ಪಕ್ಕದಲ್ಲೇ ಹೋಗಿ ಜ್ಯೋತಿ ವೃತ್ತ ಸೇರುತ್ತಿತ್ತು.  ಸಾಮಾನ್ಯವಾಗಿ ಸ್ಟೇಟ್ ಬ್ಯಾಂಕ್ ಹೋಗಿ ಅಲ್ಲಿಂದಲೇ ಬಸ್ ಹಿಡಿಯುವ ನಾನು ಅಂದು ಮಿಲಾಗ್ರಿಸ್ ಬಳಿ ನಿಂತಿದ್ದೆ. ನಾವು ಸಣ್ಣ ಮಕ್ಕಳು ಮನೆಯಿಂದ ಹೊರಡುವಾಗಲೇ ಬಸ್ ಹೊರಡುವಲ್ಲಿಂದ ಅಂದರೆ ಸ್ಟೇಟ್ ಬ್ಯಾಂಕ್ ನಿಂದ ಬಸ್ಸು ಹಿಡಿಯುವಂತೆ ಹೇಳುತ್ತಿದ್ದರು. ಅದೇ ನಾವು ಹಿರಿಯವರೊಂದಿಗೆ ಬಂದರೆ ಅವರು ಎಲ್ಲೆಂದರಲ್ಲಿ ಹತ್ತಿಕೊಂಡು ಹೋಗುವುದನ್ನು ಕಂಡು ನಾನೂ ದೊಡ್ಡವನಾಗಿದ್ದೇನೆ ಎಂಬ ಭ್ರಮೆಯಲ್ಲಿ ಸ್ಟೇಟ್ ಬ್ಯಾಂಕ್ ಹೋಗದೇ ಇಲ್ಲಿ ಕಾದು ಕುಳಿತಿದ್ದೆ. ತುಸು ಹೊತ್ತಿನಲ್ಲೇ ನಲ್ವತ್ತೆರಡು ನಂಬರ್ ನ ಸಿಟಿ ಬಸ್ ಬಂತು.  ಬಸ್ ಬಹಳಷ್ಟು ಖಾಲಿ ಇದ್ದದ್ದು ನೋಡಿ ಸಂತೋಷವಾಯಿತು. ಕಿಟಿಕಿ ಪಕ್ಕದ ಸೀಟ್ ನಲ್ಲಿ ಕುಳಿತೆ. ಬಸ್ ನಗರ ಬಿಟ್ಟು  ನೇತ್ರಾವತಿ ಹೊಳೆ ದಾಟಿದರೂ ಬಸ್ ಬಹಳಷ್ಟು ಖಾಲಿಯಾಗಿಯೇ ಇತ್ತು. ಆಗ ಬಸ್ ನಲ್ಲಿ ಕೆಲವರು, ಕೇರಳ ಬಂದ್  ನ ಬಗ್ಗೆ ಮಾತನಾಡುತ್ತಿದ್ದರು. ಹೌದು,  ಅಂದು ಕೇರಳ ಬಂದ್, ಮತ್ತು  ಬಸ್ ಸ್ಟ್ರೈಕು. ತಲಪಾಡಿಯಿಂದ ಆಕಡೆ ಹೋಗುವುದಕ್ಕೆ  ಬಸ್ಸುಗಳು ವಾಹನಗಳು ಇರಲಿಲ್ಲ. ಅಷ್ಟರವೆರೆಗೂ ಖುಷಿಯಲ್ಲಿದ್ದ ನನಗೆ ಗಾಬರಿ ಶುರುವಾಯಿತು. ಅರೇ ತಲಪಾಡಿಯಿಂದ ಮುಂದೆ ಹೇಗೆ? ಕೋಟೇ ಕಾರು ಬೀರಿ ಕಳೆದು ತಲಪಾಡಿ ಹತ್ತಿರವಾಗುತ್ತಿದ್ದಂತೆ ಬಸ್  ಇರಲಪ್ಪಾ ಅಂತ ಬೇಡಿಕೊಂಡೆ. 

ಬಸ್ ತಲಪಾಡಿಗೆ ಬಂದು ತಲಪಿದಾಗ ಆಕಾಶವೇ ಕಳಚಿ ಬಿದ್ದಂತಾಯಿತು. ಊಹಿಸಿದಂತೆ ಅತ್ತ ಕೇರಳಕ್ಕೆ ಹೋಗುವ ಬಸ್ಸು ಇರಲಿಲ್ಲ. ಬಸ್ಸು ಇಳಿದು ಸುತ್ತ ಮುತ್ತ ನೋಡಿದೆ. ಅದಾಗಲೇ ಬಿಸಿಲು ಪ್ರಖರವಾಗಿತ್ತು. ಏನು ಮಾಡುವ? ನಡೆಯದೆ ಬೇರೆ ವಿಧಿ ಇರಲಿಲ್ಲ. ಯೋಚಿಸಿದಷ್ಟು ಮತ್ತೂ ಹೊತ್ತು ತಡವಾಗುವುದೇ ವಿನಾ ಸಮಸ್ಯೆ ಪರಿಹಾರವಾಗುವುದಿಲ್ಲ. ತಲಪಾಡಿಯಿಂದ ಪೈವಳಿಕೆ ಕಡೆಗೆ ನಡೆಯುವುದಕ್ಕೆ ಶುರು ಮಾಡಿದೆ.  ಅದು ದೂರ ಸರಿ ಸುಮಾರು ಇಪ್ಪತ್ತು ಕಿಲೋಮೀಟರ್. ಚಿಕ್ಕ ಬಾಲಕ ನಾನು. ರಸ್ತೆಯಲ್ಲಿ ವಾಹನ ಸಂಚಾರವೇ ಇಲ್ಲ. ಅಕ್ಕ ಪಕ್ಕದಲ್ಲಿ ಅಂಗಡಿಗಳೂ ಇರಲಿಲ್ಲ. ರಸ್ತೆಯಲ್ಲಿ ಅಲ್ಲಲ್ಲಿ ಕಲ್ಲು ಮರ ಅಡ್ಡವಿರಿಸಿದ್ದರು.   ತುಸು ದೂರ ನಡೆಯುವಷ್ಟರಲ್ಲಿ ಬಾಯಾರಿಕೆಯಾಗುವುದಕ್ಕೆ ಆರಂಭಿಸಿತು.   ಅಂಗಡಿ ಹೋಟೇಲು ಇಲ್ಲವಾದರೆ ನೀರು ಎಲ್ಲಿಂದ? ಈಗಿನಂತೆ ನೀರಿನ ಬಾಟಲ್ ಜಮಾನವಲ್ಲ.  ಒಂದು ತಾಸು ನಡೆದಾದ ಮೇಲೆ ರಸ್ತೆಯಿಂದ ಬಹುದೂರ ಒಂದು ಗೂಡಂಗಡಿ ಕಂಡು ಅತ್ತ ಹೋದರೆ ಅದು ಮುಸ್ಲಿಂ ಬ್ಯಾರಿಯ ಅಂಗಡಿ. ಸಣ್ಣ ಬಾಗಿಲು ತೆರೆದು ವ್ಯಾಪಾರ ಮಾಡುತ್ತಿದ್ದ. ನಾನು ಬಾಳೆ ಹಣ್ಣು ತೆಗೆದುಕೊಂಡು, ನೀರು ಇದೆಯಾ ಅಂತ ಕೇಳಿದರೆ ಆತ ಹಿಂದೆ ಮನೆಯ ಕಡೆ ಕೈ ತೋರಿಸಿದ.  ಅಂಗಡಿಯ ಹಿಂದೆ ಅವನದ್ದೇ ಮನೆ ಇತ್ತು. ಅಲ್ಲಿ ನೀರು ಕೇಳಿದೆ. ಮನೆಯಾಕೆ ವೃದ್ದೆ ತಂಬಿಗೆಯಲ್ಲಿ ನೀರು ತಂದಿಟ್ಟಳು ಒಂದೆರಡು ಲೋಟ ನೀರು ಕುಡಿದು ಬಾಳೆಹಣ್ಣು ತಿನ್ನುತ್ತಿದ್ದಂತೆ ದಣಿವಾರಿಸಿತು. ಈಗ ಆ ಅಂಗಡಿಯೂ ಇಲ್ಲ. ಆ ಮನೆಯೂ ಇಲ್ಲ. ಆದರೂ ಆ ಹಾದಿಯಲ್ಲಿ ಹೋಗುತ್ತಿರಬೇಕಾದರೆ ಆ ಘಟನೆ ನೆನಪಾಗುತ್ತದೆ. ಆ ಉರಿ ಬಿಸಿಲಲ್ಲಿ ಕುಡಿದ ತಂಬಿಗೆ ನೀರು ಅದು ಇಂದೂ ಹೃದಯದಲ್ಲಿ ತೇವವನ್ನು ಉಳಿಸಿಕೊಂಡಿದೆ.  ಈ ಘಟನೆಗೂ ಉಳಿದ ಘಟನೆಗೂ ಏನೂ ಹೊಂದಿಕೆ ಇಲ್ಲ. ಆದರೂ ಬಿಸಿಲ  ಝಳಕ್ಕೆ ತಂಪೆರೆದ ಆ ಹೆಣ್ಣನ್ನು ನಾನು ಮರೆಯಲಾರೆ.

ಅಂದು ಬಾಯಾರಿಕೆಗೆ ನೀರು ಎಲ್ಲಿಂದ ಬಂತು? ಹೇಗೆ ಸಿಕ್ಕಿತು ? ನೀರಿನ ಮೂಲದ ಬಗ್ಗೆ ಮನಸ್ಸು ಯೋಚಿಸಲಿಲ್ಲ. ಒಣಗಿದ ಗಂಟಲಿಗೆ ಸುರಿದ ನೀರು ಜಗತ್ತಿನ ಎಲ್ಲ ಸುಖವನ್ನೂ ನೀಡಿತ್ತು. ಈಗ ಅಲ್ಲೇನಿಂತು,   ಮಿನರಲ್ ವಾಟರ್,  ಎಳನೀರೋ ದುಡ್ಡು ಕೊಟ್ಟು ಕುಡಿಯಬಹುದು. ಅದರೂ ಅಂದು ಸಿಕ್ಕಿದುದರ ಮೌಲ್ಯ ಅದನ್ನು ಸ್ವಯಂ ನಾನೇ ನಿರ್ಧರಿಸಬೇಕು. ಇದನ್ನೇ ಆತ್ಮ ಸಾಕ್ಷಿ ಎನ್ನುವುದು.  ಇದು ಕೇವಲ ನನ್ನ ಅನುಭವಕ್ಕೆ ಸೀಮಿತ.

ರಾಮಾಯಣ ಬರೆದ ವಾಲ್ಮೀಕಿಯ ಕಥೆ ಯಾರಿಗೆ ಗೊತ್ತಿಲ್ಲ?  ರಾಮ ನಾಮ ಸಾಕ್ಷಾತ್ಕಾರದಲ್ಲಿ ಆತ್ಮ ಸಾಕ್ಷಿಯನ್ನು ಕಂಡ ಪುಣ್ಯಾತ್ಮ.  ಕಾಡಿನಲ್ಲಿ ಅತ್ತಿತ್ತ ಹೋಗುವವರನ್ನು ಹಿಂಸಿಸಿ ಸಂಪತ್ತನ್ನು ಸೂರೆ ಹೊಡೆದು ಮನೆಯಲ್ಲಿ ಹೆಂಡತಿ ಮಕ್ಕಳಿಗೆ ತಂದು ಕೊಡುತ್ತಿದ್ದ.  ಗಂಡ ಎಲ್ಲಿಂದ ಹೇಗೆ ತಂದೆ?  ಎಂದು ಹೆಂಡತಿ ಕೇಳಲಿಲ್ಲ. ಮಕ್ಕಳು ಅಪ್ಪ ಏನು ಮಾಡುತ್ತಾನೆ ಎಂದೂ ನೋಡಲಿಲ್ಲ. ಬಂದದ್ದನ್ನು ಉಂಡು ಸುಖವಾಗಿದ್ದರು. ಕೊನೆಯಲ್ಲಿ ನಾರದ ಮುನಿಗಳು ಬರುತ್ತಾರೆ. ಮತ್ತೆ ಗೊತ್ತೇ ಇದೆ. ತಾನು ತನ್ನ ಹೆಂಡತಿ ಮಕ್ಕಳಿಗಾಗಿ ದರೋಡೆ ಮಾಡಿದ್ದರೂ ಸಿಕ್ಕಿದ ಸಂಪತ್ತಿನಲ್ಲಿ ಪಾಲು ಪಡೆಯುವ ಹೆಂಡತಿ ಗಳಿಸಿದ ಪಾಪಕ್ಕೆ ಕೇವಲ ತನ್ನೇನ್ನೇ ಹೊಣೆಯಾಗಿಸುತ್ತಾಳೆ. ಪಾಪದ ಉರುಳು ತನ್ನ ಕೊರಳನ್ನು ಮಾತ್ರ ಬಿಗಿಯುತ್ತದೆ. ಅದನ್ನು ಕಟ್ಟಿದ ಮರವೋ ಗೆಲ್ಲೋ ಯಾವುದಕ್ಕೂ ಪಾಪಾಭೀತಿ ಇರುವುದಿಲ್ಲ.  ನಾರದನಿಂದ ಜ್ಞಾನೋದಯವಾಗುತ್ತದೆ.  ಆತ್ಮ ಸಾಕ್ಷಿ ಜಾಗೃತವಾಗುತ್ತದೆ. ವ್ಯಾವಹಾರಿಕ ಪ್ರಪಂಚದ ಸತ್ಯ ಇದು. ಎಲ್ಲ ಸಂಭಂಧಗಳಲ್ಲಿ  ವ್ಯವಹಾರ ನೈಪುಣ್ಯತೆ ಮಾತ್ರವೇ ಇರುತ್ತದೆ.  ಎಲ್ಲ ಸಂಬಂಧಗಳೂ ಈ  ಒಂದು ಪರಿಧಿಯೊಳಗೇ ವ್ಯವಹರಿಸುತ್ತದೆ. ಆದರೂ ತಾಯಿ ಮಗುವಿನ ಸಂಬಂಧ ಈ ವ್ಯವಹಾರಗಳನ್ನೆಲ್ಲ ಮೀರಿ ನಿಲ್ಲುವಂತೆ ಭಾಸವಾಗುತ್ತದೆ.  ಅಲ್ಲಿ ವ್ಯಾವಹಾರಿಕ ಮೌಲ್ಯವಿರುವುದಿಲ್ಲ. ಮಲಗಿದಲ್ಲೇ ಮಲ ವಿಸರ್ಜಿಸಿದ ಮಗುವನ್ನಾಗಲೀ ಮನುಷ್ಯನನ್ನೇ ಆಗಲಿ ತಾಯಿಯಾದವಳು ಹೇಸಿಗೆ ಪಟ್ಟುಕೊಳ್ಳುವುದಿಲ್ಲ. ಸಾಯೋವರೆಗೂ ತನ್ನ ಜೀವ ಭಾವದ ಭಾಗವಾಗಿ ಆ ಮಗುವನ್ನು ಕಾಣುತ್ತಾಳೆ.  ಹಾಗಾಗಿ ಏನೇ ಆದರೂ ಪ್ರತಿಯೊಬ್ಬನಿಗೂ ತಾಯಿ ಮುಂದೆ ನಿಂತಾಗ “ಆತ್ಮಸಾಕ್ಷಿ” ಜಾಗ್ರತವಾಗುತ್ತದೆ.  ಅಮ್ಮನ್ನ ಕಣ್ಣೀರನ್ನು ಕಂಡೇ  ಆಟದ ಕಡು ದುರುಳ ಮಹಿಷಾಸುರ ಸ್ವರ್ಗಲೋಕಕ್ಕೆ ಧಾಳಿ ಇಡುತ್ತಾನೆ. ಅಮ್ಮ ಎಂದರೆ ಅದು ತುಲನೆ ಮಾಡಲಾಗದ ವಸ್ತು, ಕಲ್ಪಿಸಲಾಗದ ಕಲ್ಪನೆ. ನಿಲುಕಲಾರದ ಭಾವ.


No comments:

Post a Comment