Monday, March 18, 2019

ರಾಜಕಾರಣದ ಸರಳ ಮೂರ್ತಿ..... ಈ ಪರಿಕ್ಕರ್

.


ಅದು ಗೋವಾದ ಕವಳೆಯಲ್ಲಿರುವ ಶಾಂತಾದುರ್ಗ ದೇವಾಲಯದ ಎದುರಿನ ಅಗಲ ಕಿರಿದಾದ ರಸ್ತೆ.  ನಡು ಮಧ್ಯಾಹ್ನದ ಹೊತ್ತು. ಅಲ್ಲೇ ಇದ್ದ ಚಿಕ್ಕಮ್ಮನ ಮನೆಯಲ್ಲಿದ್ದ ನನಗೆ ವಾಹನಗಳ ಸದ್ದು ಜೋರಾಗಿ ಕೇಳಿಸಿತು.   ವಾಸ್ತವದಲ್ಲಿ ಕವಳೆ ಎಂಬುದು ಗೋವಾ ರಾಜ್ಯದ ತೀರ ಹಳ್ಳಿ ಪ್ರದೇಶ. ಗೋವಾದ ಎಲ್ಲ ಹಳ್ಳಿಗಳಂತೆ ಇದೂ ಒಂದು ಸಭ್ಯ ನಾಗರಿಕರು ಇರುವ ಪ್ರದೇಶ. ಗೋವ ಎಂದರೆ ಹಸುಗಳೇ ವಾಸಿಸುವ ಪ್ರದೇಶವಾಗಿಯೋ ಏನೋ, ಇಲ್ಲಿನವರೂ ಹಸುಗಳಂತೆ ಶಾಂತ ಸ್ವಭಾವದವರು. ದೇವಾಲಯದ ಮುಂದಿನ ಮೂರು ರಸ್ತೆ ಸೇರುವ ಇಕ್ಕಟ್ಟಾದ ರಸ್ತೆಯಲ್ಲಿ ಹಲವು ಸಲ ಪ್ರವಾಸಿಗರ ಸಂಚಾರ ಒತ್ತಡ ಹೆಚ್ಚಿದಾಗ ಸಂಚಾರದಟ್ಟಣೆಯುಂಟಾಗಿ ಆ ಪರಿಸರವೆಲ್ಲ ವಾಹನಾ ಮಯವಾಗಿಬಿಡುತ್ತದೆ. ಮನೆಯ ಬಾಗಿಲಲ್ಲಿ ನಿಂತು ವಾಹನ ದಟ್ಟನೆಯನ್ನು ನೋಡುತ್ತಿದ್ದ ನನಗೆ ವಾಹನಗಳ ನಡುವೆ ತಲೆಗೆ ಒಂದು ಕ್ಯಾಪ್ ಧರಿಸಿ ವ್ಯಕ್ತಿಯೊಬ್ಬರು ಅತ್ತಿಂದ ಇತ್ತ ಇತ್ತಿಂದ ಅತ್ತ ಓಡಾಡುತ್ತಾ ವಾಹನಗಳಿಗೆ ಸರಿಯಾದ ದಾರಿ ತೋರಿಸಿ ದಟ್ಟಣೆಯನ್ನು ನಿಭಾಯಿಸುವಲ್ಲಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರು. ಇಕ್ ಡೇನ್ ಏ ಮರೆ...!!!” (ಈ ಕಡೆ ಬಾ ಮಾರಾಯ) ಎನ್ನುತ್ತಾ ವಾಹನ ಚಾಲಕರನ್ನು ಸ್ನೇಹದಿಂದ ಮಾತನಾಡುತ್ತಾ ವಾಹನ ಸರಿಯಾಗಿ ಚಲಾಯಿಸುವಂತೆ ಮಾರ್ಗ ನಿರ್ದೇಶನ ಮಾಡುತ್ತಿದ್ದರು. ಆ ವ್ಯಕ್ತಿಯನ್ನು ಗಮನಸಿದೆ. ಆಕರ್ಷಕ ಸ್ವರಭಾರದಿಂದ ಎಲ್ಲರ ಜತೆ ಮಾತನಾಡುತ್ತಾ ಓಡಾಡುತ್ತಿದ್ದ ಆ ಚಷ್ಮಾಧಾರಿ ಆಕರ್ಷಕ ವ್ಯಕ್ತಿಯಂತೆ ಕಂಡರೂ ವ್ಯಕ್ತಿಯ ಸಾಧಾ ಸೀಧ ಸರಳ ಉಡುಗೆ ವಿಶೇಷವಾಗಿ ಗಮನ ಸೆಳೆಯಿತು. ತುಸು ಹೊತ್ತಿನಲ್ಲೇ ವಾಹನ ದಟ್ಟಣೆ ಕರಗಿ ಆ ವ್ಯಕ್ತಿ ತನ್ನ ವಾಹನ ಏರಿ ಹೋರಟು ಹೋದರು.  ಅಲ್ಲೇ ಇದ್ದ ಚಿಕ್ಕಮ್ಮನ ಮಗ ನನ್ನಲ್ಲಿ ಕೇಳಿದ ಅದು ಯಾರು ಗೊತ್ತಾ ? ಎಂದು.  ಇಲ್ಲವೆಂದು ತಲೆಯಾಡಿಸಿದೆ.  ನನಗೆ ಅಂತಹ ಕುತೂಹಲ ಏನೂ ಇರಲಿಲ್ಲ. ಸಾಮಾನ್ಯವಾಗಿ ಯಾರೋ ಅದೇ ಪರಿಸರದವರು ಇರಬೇಕೆಂಬ ಔದಾಸಿನ್ಯದಲ್ಲೇ ನಾನಿರಬೇಕಾದರೆ ಚಿಕ್ಕಮ್ಮನ ಮಗ ಹೇಳಿದ ಅದು ನಮ್ಮ ಗೋವಾದ ಮುಖ್ಯ ಮಂತ್ರಿ ಪರಿಕ್ಕರ್....!!!. ಈಗ ಗಾಬರಿಯಾಗುವ ಸರದಿ ನನ್ನದು. ನಂಬುವುದಕ್ಕೇ ಸಾಧ್ಯವಿಲ್ಲ ಅಶ್ಚರ್ಯದ ಉದ್ಗಾರ ನನ್ನಿಂದ ಹೊರಟಿತು. ಅತ್ಯಂತ ಸರಳ ವ್ಯಕ್ತಿತ್ವ ಅಷ್ಟೇ ಆಕರ್ಷಕ ವ್ಯಕ್ತಿಯ ದರ್ಶನ ನನಗಾಯಿತು. ಆ ಪ್ರಭಾವದಿಂದ ಪಕ್ಕನೆ ಹೊರಬರುವುದಕ್ಕೆ ಸಾಧ್ಯವಾಗಲಿಲ್ಲ.

ಇದು ನಿನ್ನೆ ಇಹಲೋಕ ತ್ಯಜಿಸಿದ ಶ್ರೀ ಮನೋಹರ್ ಪರಿಕ್ಕರ್ ಅವರ ಸರಳತೆಗೆ ಸಾಕ್ಷಿ. ಅದನ್ನು ಕಣ್ಣಾರೆ ಕಂಡವನಿಗೆ ಇದೊಂದು ಅದ್ಭುತದಂತೆ ಭಾಸವಾಯಿತು. ಆ ಸರಳತೆಯನ್ನು ವರ್ಣಿಸುವುದು ಸಾಧ್ಯವಿಲ್ಲ. ಸಾಮಾನ್ಯವಾಗಿ ಒಂದು ಯಃಕಶ್ಚಿತ್  ಕೌನ್ಸಿಲರೋ ಜಿಲ್ಲಾ ಪರಿಷತ್ ಸದಸ್ಸರೋ ಆಗುವಾಗಲೇ ವಿಲಾಸಿ ಹವಾನಿಯಂತ್ರಿತ ಕಾರುಗಳಲ್ಲೇ ಓಡಾಡುವ ’ ಬಡವರ ಬಂಧು!!’  ಗಳು ಇರುವಾಗ, ರಾಜ್ಯದ ಮುಖ್ಯಮಂತ್ರಿಯೊಬ್ಬರು ಹೀಗೆ ಸರಳ ದರ್ಶನಕ್ಕೆ ಕಾರಣರಾಗುತ್ತಾರೆ ಎಂದಾದರೆ ಆ ಭವ್ಯ ಸರಳತೆ ಅತಿಮಾನುಷ ವ್ಯಕ್ತಿತ್ವವನ್ನು ತೋರಿಸುತ್ತದೆ.

ಶ್ರೀ ಪರಿಕ್ಕರ್ ಅವರದ್ದು ಸರಳತೆಯ ವೈಶಿಷ್ಟ್ಯವೇ ಅದು. ಓಡಾಡಬೇಕಿದ್ದರೆ ಸೈಕಲ್ ಆದರೂ ಸರಿಯೇ ದಢೀರ್ ಹೋಗಿಬಿಡುತ್ತಾರೆ. ಹೋಗುವುದಷ್ಟೇ  ಗುರಿ. ರಸ್ತೆ ಬದಿಯ ಚಿಕ್ಕ ಚಾಯ್ ವಾಲಾ ಅಂಗಡಿಯಾದರೂ ಸರಿಯೇ ಬೇಕೆಂದಾಗ ಹೋಗಿ ಅಲ್ಲಿನ ಬೆಂಚ್ ಮೇಲೆ ಕುಳಿತು ಬೆಚ್ಚಗಿನ ಚಹಾ ಹೀರಿ ಚಾಯ್ ವಾಲಾನನ್ನು ತಬ್ಬಿಬ್ಬು ಗೊಳಿಸಿಬಿಡುತ್ತಾರೆ. ಸಾಮಾನ್ಯರಲ್ಲಿ ಅತಿ ಸಾಮಾನ್ಯನಾಗಿ ಅಸಾಮಾನ್ಯ ವ್ಯಕ್ತಿತ್ವವನ್ನು ತೋರಿಸುವ ಪರಿಕ್ಕರ್ ಇಂದಿನ ರಾಜಕೀಯ ಕ್ಷೇತ್ರದದಲ್ಲಿ ದೈವಾಂಶ ಸಂಭೂತರು ಎಂದರೆ ಅತಿಶಯವಲ್ಲ.

ಎಲ್ಲಿ ಬೇಕೆಂದಲ್ಲಿ ಜುಬ್ಬಾ ಚಪ್ಪಲಿಯಲ್ಲೇ ರಸ್ತೆಯಲ್ಲಿ ಓಡಾಡುವ ಇವರು ದೇಶದ ಪ್ರತಿಷ್ಥಿತ ರಕ್ಷಣಾ ಮಂತ್ರಿಯಾದಗಲೂ ಅಷ್ಟೇ ತಮ್ಮ ಸರಳ ನಡೆಯಿಂದ ಎಲ್ಲರನ್ನೂ ದಿಗ್ಭ್ರಾಂತಗೊಳಿಸಿ ಬಿಡುತ್ತಿದ್ದರು. ಇದಕ್ಕೆ ಸ್ವಯಂ ಸಾಕ್ಷಿಯಾಗಿದ್ದದ್ದು ಜೀವನದ ಮರೆಯದ ಅನುಭವವಾಗಿ ಬಿಡುತ್ತದೆ.  ದೇಶದ ರಕ್ಷಣಾ ಮಂತ್ರಿಯದರೂ ತನಗೆ ತಾನೇ ಸ್ವಯಂ ರಕ್ಷಣೆ ಬಯಸದೇ ತಮ್ಮ ಜನರ ಮೇಲೆ ಅತೀವ ವಿಶ್ವಾಸ ಇಡುತ್ತಾರೆ.   ಚೇಲಾಗಳಿಂದ ಹಿಂಬಾಲಕರಿಂದ ರಕ್ಷಣೆಗಳಿಂದ ದೂರವಿರುವ ಇವರ ಅದ್ಭುತ ಗಾತ್ರ ವ್ಯಕ್ತಿತ್ವ ರಾಜಕೀಯದಲ್ಲಿ ಕಾಣಸಿಗುವುದು ದುರ್ಲಭ. ಸರಳ ಸಜ್ಜನ ಸೌಮ್ಯವಾದರೂ ಖಚಿತವಾದ ನಿಲುವು. ಅತ್ಯಂತ ಕಠಿಣ ಸವಾಲನ್ನೂ ದಿಟ್ಟವಾಗಿ ಎದುರಿಸುವ ಛಲ. ಹಾಗಾಗಿ ಅದುವರೆಗೆ ದೇಶ ಕಂಡು ಕೇಳರಿಯದ ಸೇನೆಯ ಸರ್ಜಿಕಲ್ ಧಾಳಿ ಇವರ ಆಳ್ವಿಕೆಯಲ್ಲೇ ಆಗಿಬಿಡುತ್ತದೆ. ನಿಜ ಬದುಕಿನಲ್ಲೂ ಒಂದು ರೀತಿಯ ಸರ್ಜಿಕಲ್ ಜೀವನವನ್ನೇ ಸವಾಲಾಗಿ ಸ್ವೀಕರಿಸಿ ಸ್ಥಿರವಾದ ವ್ಯಕ್ತಿತ್ವವನ್ನು ತೋರಿದರೂ ಇವರ ದೇಹ ಕ್ಯಾನ್ಸರ್ ಗೆ ಬಲಿಯಾಗುತ್ತದೆ. ರಕ್ಷಣಾ ಮಂತ್ರಿಯಾಗಿ ಅಭೇದ್ಯ ವ್ಯಕ್ತಿತ್ವವನ್ನು ತೋರಿಸಿದ ಇವರು ಕ್ಯಾನ್ಸರ್ ನಿಂದ ರಕ್ಷಣೆ ಪಡೆಯಲಾಗದೇ ಹೋದದ್ದು ಭಾರತೀಯರ ದೌರ್ಭಾಗ್ಯ. ಭಾರತೀಯ ರಾಜಕೀಯದಲ್ಲಿ ಯಾಕೆ ಜಗತ್ತಿನ ರಾಜಕೀಯದಲ್ಲೂ ಶ್ರೀ ಮನೋಹರ್ ಪರಿಕ್ಕರ್ ರಂತೆ ಸರಳ ಸದಾ ಸೀದಾ ಸಜ್ಜನ ವ್ಯಕ್ತಿ ಇರುವುದಕ್ಕೆ ಸಾಧ್ಯವಿಲ್ಲ. ಅವರ ಸಾವಿನ ಸುದ್ದಿ ಕೇಳಿದಾಗಲೇ ಒಂದರೆ ಕ್ಷಣ ಕಂಬನಿ ತನ್ನಿಂತಾನಾಗಿ ಹರಿಯಿತು. ಭಾವನೆಗಳು ಹಾಗೆ. ಅವು ಪ್ರಾಮಾಣಿಕವಾಗಿ ವರ್ತಿಸುತ್ತವೆ.  ಹೃದಯ ತುಂಬಿ ಹಾರೈಸಿದೆ  ಹೇ ಅದಮ್ಯ ಚೇತನವೇ ಮತ್ತೊಮ್ಮೆ ಹುಟ್ಟಿ ಬಾ.  ಇದು ಹೃದಯಾಂತರಾಳದ ಪ್ರಾರ್ಥನೆ.

ಜೈ ಹಿಂದ್......ಭಾರತ್ ಮಾತಾ ಕೀ ಜೈ.
 

No comments:

Post a Comment