Friday, May 17, 2019

ಪುನರಪಿ ಜನನಂ.... (ಒಂದು ಸಣ್ಣ ಕಥೆ)


ಆಕೆ,  ತನ್ನ ತವರು ಮನೆಗೆ ಹೋಗಿ ಬಂದ ನಂತರ ಒಂದಿಷ್ಟು ಹೊತ್ತು ಸುಮ್ಮನೇ  ಕುಳಿತು ಬಿಟ್ಟಳು. ಹೊರಗೆ ಇನ್ನೂ ಮಳೆ ಜೋರಾಗಿ ಸುರಿಯುತ್ತಿತ್ತು.  ತಾನು ಸಂಪೂರ್ಣ ತೊಯ್ದು ಒದ್ದೆ ಆಗಿದ್ದೇನೆ ಅಂತ ಅರಿವಿಗೆ ಬಂದದ್ದು ಮನೆಯ ಒಳಗೆ ಬಂದ ಮೇಲೆ.  ಆದರೂ ಮನಸ್ಸು ಸ್ಥಿಮಿತಕ್ಕೆ ಬರಲಿಲ್ಲ. ಕೇವಲ ತನ್ನ ಸರ್ವ ತಂತ್ರ  ಸ್ವತಂತ್ರ ನಿರ್ಧಾರದಿಂದ ಜನ್ಮಾಂತರದ ಸಂಬಂಧ ಕಳಚಿ ಹೋಗಬಹುದೇ? ಬದುಕಿನಲ್ಲಿ ಅದೆಷ್ಟೋ ನಿರ್ಧಾರಗಳನ್ನು ಬದುಕಿನಲ್ಲಿ ಸ್ವತಂತ್ರವಾಗಿ ತೆಗೆದುಕೊಳ್ಳುತ್ತೇವೆ. ಉಂಡು ತಿನ್ನುವ ಆಹಾರದಲ್ಲಿ, ತೊಡುವ ಬಟ್ಟೆಯಲ್ಲಿ ತಮ್ಮ ಸ್ವಂತಿಕೆಯನ್ನೇ ಕಾಣುವಾಗ ತನ್ನ ಬದುಕಿನ ಭವಿಷ್ಯತ್ ಬಗ್ಗೆ ಸ್ವತಂತ್ರಳಾದೆ. ಅದು ಸಂಬಂಧ ಕಳಚುವಷ್ಟು ಅಪರಾಧವಾಗಿ ಪರಿಗಣಿಸುವುದೇ? ಅಪ್ಪ...ಹೇಳಿಬಿಟ್ಟರಲ್ಲ?

“ ಎಳು ವರ್ಷಗಳ ಕೆಳಗೆ ಯಾವಾಗ ನೀನಾಗೆ ಸಂಬಂಧ ಕಳಚಿಕೊಂಡಿಯೋ ಅಲ್ಲಿಗೆ ಮುಗಿದು ಹೋಗಿ ಬಿಟ್ಟಿತು.”   ಹೀಗೆ ಹೇಳಿ ತಿರುಗಿಸಿದ ಮುಖ ಮತ್ತೆ ತನ್ನೆಡೆಗೆ ನೋಡಲಿಲ್ಲ. 

ಹೀಗೆ ಹೇಳಿದಾಗ ಅಪ್ಪನ ಮುಖ ದಿಟ್ಟಿಸಿ ನೋಡಿದಳು. ಅಪ್ಪ ಮುಖ ತಿರುಗಿಸಿ ಬೆನ್ನು ಹಾಕಿದ್ದರು. ಸೊರಗಿ ಹೋದ ಇಳಿ ಬಿದ್ದ ಕೃಶವಾದ ಹೆಗಲನ್ನು ನೊಡಿದಳು. ಅಪ್ಪನ ಆ ತೋಳು...., ಅಮ್ಮನ ಗರ್ಭದಲ್ಲಿ ಕಳೆದುದಕ್ಕಿಂತಲೂ ಹೆಚ್ಚು ಸಮಯ ಆ ತೋಳಿನ ಮೇಲೆ ಕುಳಿತಿದ್ದೆ. ಕುಣಿದು ಕುಪ್ಪಳಿಸಿದ್ದೆ. ತುಂಡು ಕಚ್ಚೆಯಿಂದ ತೊಡಗಿ ಲಂಗದಾವಣಿಯವರೆಗೂ ಅಪ್ಪನ ಆ ಹೆಗಲು ನನಗಾಸರೆಯಾಗಿತ್ತು. ಆ ಅಮ್ಮ ಬೆತ್ತ ಹಿಡಿದು ಆಟ್ಟಿಸಿಕೊಂಡು ಬಂದಾಗ ಅಮ್ಮನ ಏಟು ತಪ್ಪಿಸುವ ಏಕೈಕ ಜಾಗ ಅ ಅಪ್ಪನ ಭುಜಗಳು, ಇಷ್ಟು ಬೇಗ ಆ ಭುಜಗಳ ಸಂಬಂಧಗಳು ಕೇವಲ ನೆನಪಾಗಿಬಿಟ್ಟಿತೇ? ಇಳಿಸಿ ಹೋದ ಬಂಡಿಯಂತೆ ಅಪ್ಪನ ಹೆಗಲು ವಿದಾಯ ಹೇಳುತ್ತಿತ್ತು.  ಹೆಣ್ಣಾದರೆ ಏನು? ಈ ಮಮತೆಯ ಪಾತ್ರೆ ಪಾಲು ಮಾಡುವುದು ಬೇಡ,  ಒಬ್ಬಳೇ ಒಬ್ಬಳು ಮಗಳು ಸಾಕು ಎಂದು ಅಕ್ಕರೆ ಎಲ್ಲವನ್ನೂ ಸಹ ತನಗಾಗಿ ಮೀಸಲಿಟ್ಟ ಅಪ್ಪ ಹೀಗೆ ವಿಮುಖರಾಗುತ್ತಾರೆ. ಒಂದು ಪಾತ್ರೆಯು ಬರಿದಾದ ಅನುಭವ.

“ಅಪ್ಪ, .....................” ಜಗತ್ತಿನಲ್ಲಿ ತಾನು ಕಂಡ ಅದ್ಭುತ ವ್ಯಕ್ತಿಗಳಲ್ಲಿ ನನ್ನಪ್ಪ ಮೊದಲಿಗ. ಬಾಲ್ಯದಲ್ಲೇ  ಅಪ್ಪ ನನ್ನ ಮಿತ್ರನಾಗಿ ಸಹಚರನಾಗಿ ಲೋಕದಲ್ಲಿ ಕಂಡುಕೊಂಡ ಯಾವುದೇ ಕಥೆಯ ಅಪೂರ್ವ ನಾಯಕ. ನನ್ನ ಬಯಕೆ ಏನಿದ್ದರೂ ಅಪ್ಪ ಅದನ್ನು ಒದಗಿಸಿಕೊಡುತ್ತಿದ್ದ ರೀತಿ ತನ್ನ ಬದುಕಿನ ರೋಚಕ ಸನ್ನಿವೇಶಗಳು. ಅದೊಂದು ದಿನ ಇನ್ನೂ ನೆನಪಿದೆ, ಮಧ್ಯಾಹ್ನ ಶಾಲೆಯ ಬಿಡುವಿನ ಸಮಯದಲ್ಲಿ ಐ ಸ್ಕ್ರೀಂ ಕೊಳ್ಳಲು ಅಮ್ಮನಲ್ಲಿ ಇಪ್ಪತ್ತು ರೂಪಾಯಿ ಕೇಳಿದ್ದೆ. ಅಮ್ಮನ ಅರ್ಧ ತಾಸು ಭಾಷಣ, ಕೊನೆಯಲ್ಲಿ ಗದರಿಸಿ ಶಾಲೆಗೆ ಕಳುಹಿಸಿದ್ದಳು. ಜತೆಯಲ್ಲಿರುವವರೆಲ್ಲ ಒಂದಲ್ಲ ಒಂದು ಕೊಂಡು ತಿನ್ನುವಾಗ ನಾನು ಬಯಸಿದ್ದು ತಪ್ಪು ಎಂದೆಣಿಸಲಿಲ್ಲ. ಸಾಕಷ್ಟು ಅತ್ತು ಕರೆದರೂ ಸಿಗಲಿಲ್ಲ. ನಿಜಕ್ಕೂ ದುಡ್ಡು ಹೊಂದಿಸುವುದಕ್ಕೆ ಅಪ್ಪ ಅಮ್ಮ ಬಹಳಷ್ಟು ಕಷ್ಟ ಪಡುತ್ತಿದ್ದರು. ಅಪ್ಪನಲ್ಲಿ ಕೇಳಿದೆ ಅಪ್ಪ ಅಮ್ಮನ ಮುಖ ನೋಡಿ ಸುಮ್ಮನೇ ಕುಳಿತ.  ಅಂದು ಶಾಲೆಗೆ ಹೋದನಂತರ ಪುಸ್ತಕ ತೆರೆದು ನೋಡುತ್ತೇನೆ...ಇಪ್ಪತ್ತು ರೂಪಾಯಿಯ ಕೆಂಪು ನೋಟು....! ಅಪ್ಪ ಅದಾವ ಮಾಯದಲ್ಲಿ ಇಟ್ಟಿದ್ದನೊ ತಿಳಿಯದು. ಮಧ್ಯಾಹ್ನ ಬಿಡುವಾದಾಗ ಅಂಗಡಿಗೆ ಹೋಗಿ ಐ ಸ್ಕ್ರೀಂ ಕೊಳ್ಳಬೇಕು ಎನ್ನುವಾಗ ಆ ಇಪ್ಪತ್ತು ರೂಪಾಯಿಯಲ್ಲಿ ಗಾಂಧೀಜಿ ಮುಖದ ಬದಲು ಅಪ್ಪನದ್ದೇ ಮುಖ ಕಂಡಿತು. ಐಸ್ಕ್ರೀಂ ಕೊಳ್ಳುವ ಮನಸ್ಸಾಗಲಿಲ್ಲ. ಅದನ್ನು ಪುನಃ ಜೇಬಿಗೆ ಸೇರಿಸಿ ಸಾಯಂಕಾಲ ಅಪ್ಪನ ಕೈಗೆ ಇಟ್ಟಿದ್ದೆ. ಅಪ್ಪ ನಗುತ್ತಾ ತನ್ನ ಕೈಯಲ್ಲೇ ಪುನಃ ತುರುಕಿದ್ದ. ಅ ನೋಟು ಬಹಳಷ್ಟು ಸಮಯ ತನ್ನ ಪುಸ್ತಕದ ನಡುವೇ ಹಾಗೇ ಇತ್ತು. ತನ್ನಪ್ಪ  ಅದೊಂದು ದೊಡ್ಡ ಪ್ರಸ್ಥಾನವಾಗಿ ಗೋಚರವಾಗಿದ್ದ.”


ಅಪ್ಪನೊಂದಿಗೆ ಹೊರಗೆ ಸುತ್ತುವುದೆಂದರೆ ದಿಗ್ವಿಜಯಕ್ಕೆ ಹೊರಟ ಅನುಭವ. ಮಳೆಯಾಗಲೀ ಬಿಸಿಲಾಗಲಿ ಅಪ್ಪ ಕೊಡೆ ಹಿಡಿಯುವುದನ್ನು ತಪ್ಪಿಸಿಕೊಳ್ಳುವುದಿಲ್ಲ. ಆದರೆ ತಾನಿದ್ದರೆ  ಅ ಕೊಡೆ ತನ್ನ ಕೈಯಲ್ಲೇ ಇರುತ್ತಿತ್ತು. ತುಂತುರು ಮಳೆಗೆ ಅಪ್ಪ ಮಳೆಗೆ ನೆನೆಯುತ್ತಿದ್ದರೆ ತಾನು ಪುಟ್ಟ ಕೈಗಳಲ್ಲಿ ಕೊಡೆಯೊಳಗೆ ಮುಳುಗಿಬಿಡುತ್ತಿದ್ದೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಮಗುವಾಗಿದ್ದ ತನ್ನನ್ನು ಎತ್ತಿಕೊಂಡು ಹೋಗುತ್ತಿದ್ದ. ಹೆಗಲ ಮೇಲೆ ತಾನು ಕೇಕೆ ಹಾಕಿ ಕುಣಿದರೆ ಆಪ್ಪನ ಮನಸ್ಸು ಮತ್ತಷ್ಟು ಕುಣಿಯುತ್ತಿತ್ತು. ತನ್ನ ಕೇಕೆಗೆ ಕುಣಿತದಿಂದ ಅಪ್ಪ ತಾಳವಾಗುತ್ತಿದ್ದ.

ಅಪ್ಪ ಎಂದಿಗೂ ವ್ಯಗ್ರರಾಗುವುದಕ್ಕೆ ಸಾಧ್ಯವಿಲ್ಲ. ಆದರೂ ಮುಖ ತಿರುವಿದ ಅಪ್ಪನ ಮುಖದಲ್ಲಿನ ಭಾವನೆಗಳು ತಿಳಿಯದಷ್ಟು ಅಮಾಯಕಳಲ್ಲ. ಆದರೆ ಆದರೆ ಹಲವು ಸಲ ಭಾವನೆಗಳಿಗೆ,  ಸನ್ನಿವೇಶಗಳಿಗೆ ಮೌನವೇ ಉತ್ತರವಾಗಿಬಿಡುತ್ತದೆ.

ಅದು ಕಾಲೇಜು ದಿನಗಳು. ಸಹಜವಾಗಿ ಮರಬಿಟ್ಟ ಹಕ್ಕಿಯಂತಹ ದಿನಗಳು.  ತನ್ನ ಭಾವನೆಗಳೆಲ್ಲವೂ ಲೋಕದ ಭಾವನೆಗಳು ಎಂದು ತಿಳಿವ ಹುಚ್ಚು ಹುಮ್ಮಸ್ಸಿನ ದಿನಗಳು.  ಅದೇಕೊ ಒಬ್ಬಾತ ಇಷ್ಟವಾದ. ಜತೆಯಲ್ಲೇ ಓಡಾಡಿದೆವು. ಅಗೆಲ್ಲ ತಪ್ಪು ಮಾಡುತ್ತಿದ್ದೇನೆ ಎಂದು ಅನಿಸಲಿಲ್ಲ. ತನ್ನಪ್ಪನಲ್ಲಿ ತೆರೆದ ಮನಸ್ಸಿನಿಂದ ಹೇಳಿಬಿಡುತ್ತೇನೆ ಅಂತಲೇ ಯೋಚಿಸಿದ್ದಳು. ಅಪ್ಪನಲ್ಲಿ ತನಗೆಷ್ಟು ವಿಶ್ವಾಸವಿದ್ದಿತೋ ಅಷ್ಟೇ ನನ್ನಲ್ಲಿ ಅಪ್ಪನಿಗೂ ಇದ್ದಿತ್ತು. ಹಾಗಾಗಿ ಅಪ್ಪನಿಗಲ್ವ ಹೇಳಿ ಬಿಡೋಣ ಅಂತ ಒಂದು ಸಲುಗೆಯಲ್ಲೇ ಕಳೆದೆ. ಆದರೆ ನಾವಿಬ್ಬರೂ ಹೊರಗೆ ಒಡಾಡುವ ಸುದ್ದಿ ಅಪ್ಪನಿಗೆ ಬೇರೆಯವರಿಂದ ತಿಳಿದಾಗ ಅಪ್ಪ ಕನಲಿದರು. ಮುಖ್ಯವಾಗಿ ಅವರಿಟ್ಟ ವಿಶ್ವಾಸಕ್ಕೆ ಬಲವಾದ ಅಘಾತವಾದಂತೆ ನೋವನುಭವಿಸಿದರು. ಕದ್ದು ಮುಚ್ಚಿ ವ್ಯವಹರಿಸಬೇಕು ಎಂದು ತಾನೆಂದೂ ಭಾವಿಸದೇ ಇದ್ದರೂ ತನ್ನ ವರ್ತನೆ ಕದ್ದು ಮುಚ್ಚಿದ ವ್ಯವಹಾರವಾಗಿ ಹೋದದ್ದು ದೌರ್ಭಾಗ್ಯ. ಅಪ್ಪ ಮತ್ತು  ನನ್ನ ನಡುವೆ ಕಂದಕ ಅಗಲವಾಗಿಬಿಟ್ಟಿತು.

ಇಷ್ಟೆಲ್ಲಾ ಆದರೂ ತನ್ನ ಛಲ ಗಟ್ಟಿಯಾಗಿತ್ತು. ಬರಿದೇ ಜಾಳು ಪ್ರೇಮಕಥೆಯಂತಹ ಪ್ರೇಮ ತನ್ನದಾಗ ಕೂಡದು. ಹಾಗೆ ಆಗಲಾರದು ಎಂಬ ಅಚಲ ವಿಶ್ವಾಸ ನಮ್ಮ ಪ್ರೇಮದ ಮೇಲಿತ್ತು. ಅಪ್ಪನಿಗೆ ಆಗಬೇಕಾದದ್ದೇನು?   ನನ್ನ ಬದುಕು ಹಾಳಾಗಬಾರದು. ನಾನು ನನ್ನ ಬದುಕನ್ನು ಉತ್ತಮವಾಗಿ ರೂಪಿಸಿ ಮತ್ತೆ ಅಪ್ಪನ ಬಳಿಗೆ ಹೋಗಬೇಕು ಎಂದು ಗಟ್ಟಿ ನಿರ್ಧಾರ ಮಾಡಿಕೊಂಡು ತನಗೆ ತಾನೆ ಸಮಾಧಾನ ಪಟ್ಟುಕೊಂಡಳು.  ಪ್ರತಿಯೊಂದು ಮಕ್ಕಳ ನಿರ್ಧಾರ ಇದೇ ಆಗಿರುತ್ತದೆ, ಆದರೆ ಅದು ಸಫಲವಾಗುವುದು ಮಾತ್ರ ಅತ್ಯಂತ ವಿರಳ. ಉರಿಯುವ ದೀಪಕ್ಕೆ ಕತ್ತಲೆಯ ಬಗ್ಗೆ ಅರಿವಿರುವುದೇ ಇಲ್ಲ.   ತಾನು ಉರಿದಾಗ ಬೆಳಕಾಗಿದೆ ಅಷ್ಟೇ.  ಇದು ಅರಿವಿಗೆ ಬಂದದ್ದು ಅಪ್ಪ ಅಮ್ಮ ಬಂಧು ಬಳಗವನ್ನು ಬಿಟ್ಟು ಮದುವೆಯಾದ ಮೇಲೆ.  ಎಲ್ಲ ಕಥೆಯಂತೆ ಮೊದಲಿನ ಹುಮ್ಮಸ್ಸು ಕೇವಲ ಎರಡು ತಿಂಗಳಿಗೆ. ಮದುವೆಯಾದ ಮೇಲೂ ನಿನ್ನನ್ನು ಓದಿಸುತ್ತೇನೆ ಎಂದು ಹೂವಿನ ಹಾಸಿಗೆ ಹಾಸಿದವನಿಗೆ ಹೂವೇ ಸಿಗಲಿಲ್ಲ! ದುಡಿಮೆ ಆತನಿಗೆ ಒದಗಲಿಲ್ಲವೋ , ಅಲ್ಲ ದುಡಿಯುವುದು ಆತನಿಗೆ ಬೇಡವಾಯ್ತೋ ಎಲ್ಲವೂ ದುಸ್ತರವಾಗಿಬಿಟ್ತಿತು.   ನಿರೀಕ್ಷೆಯಂತೆ ಯಾವುದೂ ನೆರವೇರಲಿಲ್ಲ.............ನಂತರದ  ಮಗುವಿನ ಜನನವೂ !! .

ಜೀವನ ಏನು ಎಂದು ಅರಿವಾಗುವಲ್ಲಿ ಹೊರಬರಲಾಗದ ಸುಳಿಯಲ್ಲಿ ಸಿಲುಕಿಯಾಗಿತ್ತು. ಇನ್ನೂ ಉಸಿರಾಡುತ್ತಿದ್ದೇನೆ... ಇನ್ನುಳಿದ ಪ್ರಯತ್ನ ಇನ್ನೂ ಉಸಿರಾಡುವುದಕ್ಕಿದ್ದೇನೆ ಎಂಬ ಅಸ್ತಿತ್ವ ತೋರಿಸುವುದು.  ಅಲ್ಲಿ ಇಲ್ಲಿ ಅದೂ ಇದು ಖಚಿತವಿಲ್ಲದ ಗೊತ್ತುಗುರಿ ಇಲ್ಲದ ಕೆಲಸ.

ಈ ನಡುವೆ ಅಪ್ಪನ ಒಡನಾಡಿ ಮಿತ್ರರೊಬ್ಬರು ಸಿಕ್ಕಿದ್ದರು.  ಅವರು ಹೇಳಿದ ವಿಚಾರ ಮತ್ತಷ್ಟು ಆಘಾತವನ್ನು ತಂದಿತು. ಅಪ್ಪ ಇರುವ ಪುಟ್ಟ ಮನೆ ಜಾಗ ಮಾರಿ ಯಾವುದೋ ಆಶ್ರಮಕ್ಕೆ ಸೇರುತ್ತಾರೆ ಎಂಬುದು. ಯಾರೂ ಇಲ್ಲದಂತೆ ಇರುವಾಗ ಮನೆ ಎಲ್ಲ ಯಾರಿಗಾಗಿ?  ಹಾಗೇ ಅವರೊಂದು ಸಲಹೆ ಕೊಟ್ಟರು. ಅಪ್ಪ ಹೇಗಿದ್ದರೂ ಮಾರುತ್ತಾರೆ. ಮಗಳಲ್ವ ಒಂದಿಷ್ಟಾದರೂ ಕೊಡದೇ ಇರಲಾರರು. ಮಗಳು ಬರಲೇ ಇಲ್ಲ, ಕೇಳಲೇ ಇಲ್ಲ ಎಂದಾಗುವುದಕ್ಕಿಂತ ಒಂದಿಷ್ಟು ತಗ್ಗಿದರೆ ತತ್ಕಾಲದ ಜೀವನದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಬಹುದು. ಹಾಗೇ ಹಾಗೇ ಆ ಮಿತ್ರನೇ ಅಪ್ಪನಲ್ಲಿಗೆ ಹೋಗುವುದಕ್ಕೆ ಜತೆಯಾದರು.

ಮನೆಯಲ್ಲಿ ಪಾಲು ಕೇಳಲು ಬಂದಳಲ್ಲಾ?  ಅಪ್ಪ ಅಷ್ಟು ವ್ಯಗ್ರರಾದದ್ದು ನೋಡೇ ಇಲ್ಲ. ಸಿಟ್ಟಿನಿಂದ ಹಾರಾಡಿದರು. ಅಮ್ಮ ಆಗೀಗ ಸಾಂತ್ವನಕ್ಕೆ ಬಂದರೂ ಸಹ ಅಪ್ಪ ಅಮ್ಮನಲ್ಲೂ ರೇಗಾಡಿದರು. ಹುಟ್ಟಿದ ನಂತರ ಅಮ್ಮನಲ್ಲಿ ರೇಗಾಡುವುದು ಹೋಗಲಿ, ಕ್ಷಣಿಕ ಅಸಮಾಧಾನವನ್ನೂ ತೋರಿಸದ ಅಪ್ಪ ಅಕ್ಷರಶಃ ಸಿಟ್ಟಿನಿಂದ ಕುದಿದು ಹೋದರು.

ಕೊನೆಯಲ್ಲಿ, ಹೇಳಿದೆ, ’ಅಪ್ಪ, ತನಗೆ ದುಡ್ದು ಬೇಡ , ನಿನ್ನ ಸಂಪಾದನೆ ಬೇಡ. ತನ್ನ ಕಾಲೇಜ್ ಸರ್ಟಿಫಿಕೇಟ್ ಇದೆ, ಅದನ್ನಾದರೂ ತೆಗೆದುಕೊಳ್ಳುತ್ತೇನೆ. ಇನ್ನೂ ನನ್ನ ವಿದ್ಯಾಭ್ಯಾಸ ಮುಂದುವರೆಸುತ್ತೇನೆ.’  ಹಾಗೆ ಹೇಳುವುದಕ್ಕೆ ಮಾತ್ರವೇ ಸಾಧ್ಯವಾಯಿತು. ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ತಾನು ಓಡಾಡಿದ ಮನೆಯ ಒಳಗೇ ಹೋಗುವುದಕ್ಕೆ ಮನಸ್ಸು ಹಿಂಜರಿಯುತ್ತದೆ. ಯಾಕೆ ತನಗೆ ತಾನೆ ಪರಕೀಯಳಾಗಿ ಬಿಟ್ಟೆ? ಮತ್ತೆ ಇನ್ನು ಅಪ್ಪ ಅಮ್ಮನಿಗೆ ಪರಕೀಯಳಾದುದರಲ್ಲಿ ಅಚ್ಚರಿಯಿಲ್ಲ.
 
ತನ್ನ ದೌರ್ಭ್ಯಾಗ್ಯವನ್ನು ಹಳಿಯುತ್ತಾ ಕ್ರೋಧದಿಂದಲೇ ಮನೆಯಿಂದ ದುರ್ದಾನ ತೆಗೆದು ಕೊಂಡಂತೆ ಈ ಕಡೆ ಬಂದೆ. ಅಮ್ಮ ಅಂಗಳದ ತುದಿಯ ವರೆಗೆ ಬಂದಳು. ಆದರೆ ಯಾವುದನ್ನೂ ಯೋಚಿಸುವ ಪರಿಸ್ಥಿತಿ ಒದಗಿ ಬರಲೇ ಇಲ್ಲ.  ತನ್ನನ್ನು ತಾನು ಮರೆತಂತೆ ಸುರಿಯುತ್ತಿದ್ದ ಮಳೆಯಲ್ಲಿ ತೋಯುತ್ತಲೇ ಮನೆಗೆ ಬಂದು ಕುಳಿತೆ.

ಹಾಗೇ ಎಷ್ಟು ಹೊತ್ತು ಕುಳಿತಿದ್ದೆನೋ  ತಿಳಿಯದು ಹೊರಗೆ ಮಳೆ ಕಡಿಮೆಯಾದಂತೆನಿಸಿತು. ಹೊರಗೆ  ಏನೋ ಸಪ್ಪಳವಾದಂತೆ ತಲೆ ಎತ್ತಿ ಆಕಡೆ ನೋಡಿದೆ. ಮೆಟ್ಟಿಲ ಬಳಿಯಲ್ಲೇ  ಸುರಿಯುವ ಮಳೆಯಲ್ಲಿ ಕೊಡೆ ಹಿಡಿದುಕೊಂಡು ನಿಂತ ಆಕೃತಿ ಕಂಡೆ. ಬಾಗಿಲು ದಾಟಿ ಮುಂದೆ ಬಂದು ನೋಡಿದರೆ ಕೊಡೆ ಎತ್ತರಿಸಿ ಹಿಡಿದ ಅಪ್ಪ...!!! ....ಅಪ್ಪ ಎನ್ನುವ ಉದ್ಗಾರ ಗಂಟಲೊಳಗೇ ಬಾಕಿಯಾಯಿತು.

ಬಿಟ್ಟ ಕಣ್ಣಿಂದ ನೋಡಿದೆ.  ಅಲ್ಲಿಗೆ ಆ ಮಂದ ಬೆಳಕಿನಲ್ಲೂ  ಅಪ್ಪನ ಕಣ್ಣುಗಳನ್ನು  ಕಾಣಬಲ್ಲೆ.  ಅಪ್ಪ ಬಟ್ಟೆಯಲ್ಲಿ ಸುತ್ತಿದ ಕವರನ್ನು ಆಕೆಯ ಕೈಯಲ್ಲಿಟ್ಟರು. ಅದು ಅಲ್ಲಲ್ಲಿ ಹನಿ ನೀರು ಬಿದ್ದು ಒದ್ದೆಯಾಗಿತ್ತು. ಅದು ಕೇವಲ ಮಳೆ ನೀರಾಗಿರಲಾರದು. ಕಣ್ಣ ನೀರೂ ಇದ್ದಿರಬಹುದೇ ಎಂಬ ಅನುಮಾನ.      
      
            ಮೆತ್ತಗಿನ ಸ್ವರದಲ್ಲಿ ಅಪ್ಪ ಹೇಳಿದರು “ ನೋಡು ಸರ್ಟಿಫಿಕೇಟ್ ಬೇಕು ಅಂತ ಹೇಳಿದಿಯಲ್ಲ ತಂದಿದ್ದೇನೆ. ಯಾವುದೂ ಬೇಡದ ನನಗೆ ಇದು ಯಾಕೆ ಹೇಳು.?”

ತಾನು ಮತ್ತೆ ಬೇರೆ ಏನೂ ಹೇಳದೇ  ಅಪ್ಪನ ಕೊಡೆಯ ಕೆಳಗೆ ಬಂದು ಜೋರಾಗಿ ಅಪ್ಪನನ್ನು ತಬ್ಬಿ ಹಿಡಿದೆ.  ತುಸು ಹೊತ್ತು ಹಾಗೆ ಮೌನ. ಮಳೆಯ ಸದ್ದು ಅಲ್ಲದೇ ಬೇರೇನೂ ಇಲ್ಲ.  ಅಪ್ಪನ ಭಾರವಾದ ಕೈ ತಲೆಯನ್ನು ನೇವರಿಸಿದಾಗ ಅಳು ತಡೆಯುವುದಕ್ಕೆ ಸಾಧ್ಯವಾಗಲಿಲ್ಲ.

ಅಪ್ಪನ ತೋಳಲ್ಲಿ ಇದ್ದುಕೊಂಡೆ ಪಿಸುಗುಟ್ಟಿದೆ....” ಅಪ್ಪ ಒಳ್ಳೆ ಕೆಲಸ ಹಿಡೀಬೇಕು. ನನ್ನ ಮಗುವಿಗೆ ಒಳ್ಳೆ ವಿದ್ಯೆ ಕೊಡಬೇಕು. ಅದರ ಬದುಕನ್ನು ಇನ್ನು ನೋಡಬೇಕು ಅಷ್ಟೇ ಅಪ್ಪ. ನನ್ನದು ತಪ್ಪಾ? “

ಅಪ್ಪನೂ ಅಷ್ಟೇ..
ಇಪ್ಪತ್ತು ವರ್ಷದ ಕೆಳಗೆ ನಮಗೂ ಇದೇ ಆಶೆ ಇತ್ತಮ್ಮ. ನೀನು ಒಳ್ಳೆ ಓದಬೇಕು.  ನನ್ನ ಮಗಳು ಒಳ್ಳೆ ಹೆಣ್ಣಾಗಬೇಕು.   ಆದರೆ.....“

ತುಸು ಹೊತ್ತಾದ ಮೇಲೆ..ಅಪ್ಪ ಸೊಂಟದಿಂದ ಇನ್ನೊಂದು ಕಟ್ಟು ತೆಗೆದು ಆಕೆಯ ಕೈಗಿಡುತ್ತಾನೆ.” ತಗೋ ಇದರಲ್ಲಿ ಸ್ವಲ್ಪ ಹಣ ಇದೆ. ನಿನ್ನ ಪರಿಸ್ಥಿತಿ ಗೊತ್ತಾಗಿದೆ. ಇದನ್ನು ಇಟ್ಟುಕೋ. ಎಲ್ಲವೂ ಒಳ್ಳೆದಾಗ್ತದೆ.  ಬರ್ತೇನೆ”  ಎಂದು ಹೇಳುತಾ ಅಪ್ಪ ಅ ಮಳೆಯಲ್ಲೇ ನಿಧಾನವಾಗಿ ಹೆಚ್ಚೆ ಇಡುತ್ತಾ ಕತ್ತಲೆಯಲ್ಲೇ ಕರಗಿ ಹೋದರು. ಕೈಯಲ್ಲಿ ದ್ದ ಕಟ್ಟಿನ ಮೇಲೆ ಒಂದೆರಡು ಹನಿಗಳು ಬಿತ್ತು. ಅದರಲ್ಲಿ ಕಣ್ಣಿನ ಹನಿಯೂ ಇತ್ತು. ನಾನು ಬಹಳ ಹೊತ್ತು ಕಲ್ಲಾಗಿ ನಿಂತೇ ಇದ್ದೆ.  

-೦೦೦೦-

No comments:

Post a Comment