Wednesday, June 5, 2019

ರಂಜಾನ್ ಎಂಬ ನನಪು



ಬಾಲ್ಯದಲ್ಲಿ ಯಾವ ಹಬ್ಬವಾದರು   ಬಾಲಕರಾದ ನಮಗೆ ಒಂದು ಸಂಭ್ರಮವಿರುತ್ತಿತ್ತು.  ಕೈಯ್ಯಲ್ಲಿ ದುಡ್ಡು ಮನೆಯಲ್ಲಿ  ಧಾನ್ಯ ಇವೆರಡೂ ಇಲ್ಲದೇ ಇದ್ದರೂ ನಮ್ಮಮ್ಮ ಪುಟ್ಟ ಮಡಿಕೆಯಲ್ಲಿ ಒಂದಿಷ್ಟು ಪಾಯಸ ಮಾಡದೇ ಇರುತ್ತಿರಲಿಲ್ಲ. ಪಾತ್ರೆಯ ತಳ ಎದ್ದು ಸೌಟಿನಲ್ಲಿ ಬರುವ ತನಕವೂ ಪಾಯಸ ತಿಂದು ಖಾಲಿ ಮಾಡಿ ನಂತರ ಕೈಬೆರಳು ಚೀಪುತ್ತಿದ್ದೆವು. ಅದು ಅಷ್ಟಮಿ ಚೌತಿ ಮುಂತಾದ ಹಬ್ಬವಾದರೆ....,   ನಮ್ಮದಲ್ಲದ  “ ರಂಜಾನ್” ಹಬ್ಬದಲ್ಲೂ ಹಾಗೆ, ಈ ಹಬ್ಬ ಊರು ಆಚರಿಸುತ್ತಿದ್ದರೆ ನಾವು ಮತ್ತೊಂದು ಸಂಭ್ರಮ ಆಚರಿಸುತ್ತಿದ್ದೆವು.!! ಈಗೀಗ ರಂಜಾನ್ ಬಂದಾಗಲೂ ಅದೇ ನೆನಪುಗಳು ಮತ್ತೆ ಮತ್ತೆ ಮರುಕಳಿಸುತ್ತದೆ. ಯಾಕೆ,  ಎಂದು ಆಶ್ಚರ್ಯವಾಗುವುದಿಲ್ಲವೇ?

ನಮ್ಮ ಬಾಲ್ಯದಲ್ಲಿ ಮನೆಯ ಪುಟ್ಟ ಬಾಂಡಲಿಯಲ್ಲಿ ಕರಿದ ಚಕ್ಕುಲಿಯ ಮಾರಾಟವೇ ನಮ್ಮ ಹೊಟ್ಟೆಯ ಕರುಳನ್ನು ತುಂಬಿಸುತ್ತಿತ್ತು. ಅಮ್ಮ ಮಾಡುತ್ತಿದ್ದ ಒಂದೆರಡು ಸೇರು ಅಕ್ಕಿಯ ಚಕ್ಕುಲಿ ಮಾರಿ ಹೋದರೆ ನಮ್ಮ ಮನೆಯಲ್ಲಿ ಗಂಜಿ ಬೇಯುತ್ತಿತ್ತು. ನಾವು ಬಾಲ್ಯದಲ್ಲಿ ಅನುಭವಿಸಿದ ಕಷ್ಟದಿಂದಲೂ ನಮ್ಮಮ್ಮ ಏಕಾಂಗಿಯಾಗಿ ಅನುಭವಿಸುತ್ತಿದ್ದ ಕಷ್ಟವನ್ನು ಈಗ ಕಲ್ಪಿಸಿದರೆ ಎದೆಯ ಗರ್ಭದಲ್ಲೂ ಕಂಪನದ ಅನುಭವವಾಗುತ್ತದೆ.  ಅದೆಂತಹ ಶ್ರಮ ಜೀವಿ ನಮ್ಮಮ್ಮ? ಈಗಲೂ ಪರಮಾತ್ಮ ಅದೇ ಚಟುವಟಿಕೆಯನ್ನು ಅಮ್ಮನಲ್ಲಿ ತುಂಬಿದ್ದಾನೆ ಎಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಸುತ್ತಿದ ಚಕ್ಕುಲಿಯ ಒಂದೊಂದು ಮುಳ್ಳಿಗೂ ನಮ್ಮ ಹಸಿವನ್ನು ತಣಿಸುವ ಶಕ್ತಿ ಇರುತ್ತಿತ್ತು.

ಚಕ್ಕುಲಿ ವ್ಯಾಪಾರ’ ಹೇಳುವುದಕ್ಕೆ ಯಃಕಶ್ಚಿತ್ ವಿಷಯ. ದಿನವಿಡೀ ಬೆಂಕಿಯ ಬಳಿಯಲ್ಲೇ ಕಳೆಯಬೇಕು. ಈಗಿನಂತೆ  ಕಿಡಿ ಹಚ್ಚಿ ಉರಿಸುವ ಗ್ಯಾಸ್ ಒಲೆಯಲ್ಲ. ಸೌದೆ ಒಲೆ. ಮಳೆಗಾಲದಲ್ಲಿ ಒಣಗಿದ ಸೌದೆಯೇ ಇರುವುದಿಲ್ಲ. ಬೆಳಗ್ಗೆ ಉರಿಸುವುದಕ್ಕೆ ತೊಡಗಿದರೆ ಮಧ್ಯಾಹ್ನದ ಹೊತ್ತಿಗೆ ಕಟ್ಟಿಗೆ ಉರಿಯುತ್ತದೆ. ನಂತರ ಒಂದು ಪುಟ್ಟ ಚೀಲದಲ್ಲಿ ಚಕ್ಕುಲಿ ತುಂಬಿಸಿ ಅಂಗಡಿ ಅಂಗಡಿ ಸುತ್ತಬೇಕು. ಈಗಿನಂತೆ ಹೆಜ್ಜೆಗೊಂದರಂತೆ ಅಂಗಡಿಗಳಿಲ್ಲ ದೂರ ದೂರ ಊರಿಗೊಂದರಂತೆ ಅಂಗಡಿಗಳು. ಎಲ್ಲಾ ಅಂಗಡಿಯಲ್ಲಿ ಚಕ್ಕುಲ್ಲಿ ಕೊಳ್ಳಬಹುದು ಎಂಬ ಭರವಸೆ ಇಲ್ಲ. .   ಈಗಿನಂತೆ ಪ್ಲಾಸ್ಟಿಕ್ ಕವರ್ ಗಳು ಇಲ್ಲ.  ಇದ್ದ ಚೀಲದಲ್ಲಿ ಹಾಗೆ ಬಿಡಿ ಬಿಡಿಯಾಗಿ ತುಂಬಿಸಿ ಪ್ರತಿ ಅಂಗಡಿಯಲ್ಲಿ ಒಂದೊಂದಾಗಿ ಎಣಿಸಿ ಕೊಡುತ್ತಿದ್ದೆವು ಕೆಲವು ಕಡೆ ಕೊಂಡುಕೊಂಡರೂ ಸಹ ಸಿಗುವ ಚಿಲ್ಲರೆ ದುಡ್ಡಿಗೆ  ದಿನವಿಡೀ ಕಾಯಬೇಕಾದ ಪರಿಸ್ಥಿತಿ ಇರುತ್ತಿತ್ತು.  ಒಂದು ಕಡೆಯಲ್ಲಿ ಸಾಯಂಕಾಲ ಚಕ್ಕುಲಿ ಕೊಂಡೊಯ್ದರೆ ನಮ್ಮ ಪೈವಳಿಕೆಗೆ ಬರುವ ಲಾಸ್ಟ್ ಬಸ್ ಬರುವಾಗಲೇ ದುಡ್ಡು ಕೈಗೆ ಕೊಡುತ್ತಿದ್ದರು. ಗಂಟೆಗೊಂದರಂತೆ ಬರುವ ಶಂಕರ್ ವಿಟ್ಟಲ್ ಬಸ್ಸುಗಳು ತಪ್ಪಿದರೆ ಊರಿಂದ ಊರಿಗೆ ಕಾಲ್ನಡಿಗೆಯೇ ಗತಿ.

ಅತ್ಯಂತ ಪರಿಶ್ರಮದ ವ್ಯಾಪಾರ.  ಒಂದು ದಿನ ದುಡಿಯದೇ ಇದ್ದರೆ ಮುಂದಿನ ದಿನ ಉಪವಾಸ ಇರಬೇಕು. ರಂಜಾನ್ ತಿಂಗಳು...ನಿಜಕ್ಕೂ ಅದು ಕಠಿಣವಾದ ದಿನಗಳು. ಯಾಕೆಂದರೆ, ಆವಾಗ ಚಕ್ಕುಲಿ ಕೊಳ್ಳುವ ಮುಖ್ಯ ಗ್ರಾಹಕರೇ ಮುಸಲ್ಮಾನರು.  ಉಳಿದವರು ಕೊಂಡುಕೊಳ್ಳುವುದಿದ್ದರೂ  ಬಹಳಷ್ಟು ಜನ ದುಡ್ಡುಕೊಟ್ಟು ಅಂಗಡಿಯಿಂದ ತಿಂಡಿ ಕೊಳ್ಳುವ ಸ್ಥಿತಿಯಲ್ಲಿರುತ್ತಿರಲಿಲ್ಲ.  ಕೆಲವರು ಕೊಂಡುಕೊಂಡರು ಅವರ ಸಂಖ್ಯೆ ಗಣನೀಯವಾಗಿ ಕಡಿಮೆ. ಅದರಲ್ಲೂ ಸಂಪ್ರದಾಯಸ್ಥ ಮನೆಯವರಂತೂ ಹೊರಗಿನ ತಿಂಡಿ ತಿನ್ನುವಂತೆ ಇರಲಿಲ್ಲ. ಆದರೆ ನಮ್ಮ ಕಾಲಕ್ಕಾಗುವಾಗ ಬಹಳಷ್ಟು ಬದಲಾಗಿ ಪಿತೃಕಾರ್ಯಕ್ಕೂ ನಮ್ಮ ಮನೆಯ ಚಕ್ಕುಲಿ ಕೊಂಡುಕೊಳ್ಳುತ್ತಿದ್ದರು.

ಹೀಗಿರುವಾಗ ರಂಜಾನ್ ತಿಂಗಳ ಉಪವಾಸದ ದಿನಗಳಲ್ಲಿ ಚಕ್ಕುಲಿ ವ್ಯಾಪಾರ ಕಡಿಮೆ ಮಾತ್ರವಲ್ಲ ಇಲ್ಲವೇ ಇಲ್ಲ ಎಂಬಾಂತಾಗುತ್ತಿತ್ತು.  ಮಾರಾಟಕ್ಕೆಂದು ಕೊಂಡು ಹೋದದ್ದನ್ನು ಹಾಗೇ ಸಪ್ಪೆ ಮೋರೆ ಹಾಕಿ ಪುನಃ ಮನೆಗೆ ತರಬೇಕಾಗುತ್ತಿತ್ತು.  ಉಪವಾಸದ ಒಂದು ತಿಂಗಳು ವ್ಯಾಪಾರವೇ ಕಡಿಮೆಯಾಗಿ ಉಪವಾಸವೇ ಗತಿಯಾಗುತ್ತಿತ್ತು. ಅವರು ವೃತವೆಂದು ಉಪವಾಸ ಮಾಡಿದರೆ ನಾವು ಏನಿಲ್ಲ ಎಂದು ಉಪವಾಸ ಆಚರಿಸಬೇಕಿತ್ತು. ಹೀಗಾಗಿ ಆ ಒಂದು ತಿಂಗಳು ಕಳೆದು ರಂಜಾನ್ ಬಂತೆಂದರೆ ಅವರಂತೆ ನಮಗೂ ಒಂದು ರೀತಿಯ ಸಂಭ್ರಮ ಇರುತ್ತಿತ್ತು. ಕಾಲ ಕಳೆದಂತೆ ಬದಲಾಗಿ ಹೋಯಿತು.  

ಈದೀಗ ಪ್ರತಿ ವರ್ಷವೂ ರಂಜಾನ್ ತಿಂಗಳು ಮತ್ತದರ ಉಪವಾಸ ಬಂದಾಗ ಬಾಲ್ಯದ ಅರೆ ಹೊಟ್ಟೆಯ ದಿನಗಳು ನೆನಪಿಗೆ ಬರುತ್ತವೆ. “ಕಚ್ಚೋಡ ಇಲ್ಲಾ” ಎಂದು ವಾಪಾಸು ಬರುವಾಗ ನಮ್ಮ ಮುಖ ನೋಡಿ ಕೆಲವು ಮುಸ್ಲಿಂ ವ್ಯಕ್ತಿಗಳು ಕೊಂಡುಕೊಳ್ಳುತ್ತಿದ್ದರು.  ಆದಿನದ ಕಷ್ಟದ ದಿನಗಳ ನೆನಪಿನಲ್ಲಿ ಇಂದಿಗೂ ನನ್ನ ಹಲವು ಮುಸ್ಲಿಂ ಮಿತ್ರರಿಗೆ ರಂಜಾನ್ ದಿನ ಶುಭಾಶಯ ಹೇಳುತ್ತಿದ್ದೇನೆ. ಹಲವರು ನನ್ನ ಚೌತಿ ಅಷ್ಟಮಿ ಗೆ ಪುನಃ ಶುಭಾಶಯ ಸಲ್ಲಿಸುತ್ತಾರೆ. ಪರಮಾತ್ಮ ಯಾವ ರೂಪದಲ್ಲಿರುತ್ತಾನೊ ಕಲ್ಪಿಸುವುದು ಕಷ್ಟ. ಆದರೆ ಹಸಿವಿನ ಹೊಟ್ಟೆಗೆ ಸಿಗುವ ಆಹಾರವೇ ಪರಮಾತ್ಮನಾಗಿ ಕಾಣುವಾಗ ಎಲ್ಲರಿಗೂ ದೇವರು ಒಬ್ಬನೇ ಎಂಬ ಭಾವನೆ ಬರುತ್ತದೆ. ಹಾಗಾಗಿ  ಮುಂಜಾನೆ ಬಾಂಗ್ ಆಗಲಿ ಭಜನೆಯಾಗಲಿ ವೆತ್ಯಾಸ ಗುರುತಿಸುವುದು ಕಠಿಣವಾಗುತ್ತದೆ. ಆಕ್ಷೇಪಗಳು ವಿಮರ್ಶೆಗಳು ಏನಿದ್ದರೂ  ಇದು ಕೇವಲ ಸ್ವಕೀಯವಾದ ಅನುಭವಗಳು. ಮನಸ್ಸಿನ ಆಂತರಾಳದ ಭಾವನೆಗಳು. ಭಗವಂತನ ಪ್ರಾರ್ಥನೆ ಪ್ರತಿಯೊಬ್ಬ ಮನುಷ್ಯನಿಗೂ ಇರುವ ಅನಿವಾರ್ಯ ಕರ್ಮ. ಅದರಿಂದ ಯಾರಿಗೇ ಆಗಲಿ ತೊಂದರೆಯಾಗಬಾರದು. ಪರರರಿಗೆ ತೊಂದರೆ ಉಂಟು ಮಾಡಿದ ಪ್ರಾರ್ಥನೆಯಲ್ಲಿ ಭಗವಂತ ಒಲಿಯುವುದಿಲ್ಲ. ಅದನ್ನೆ  ನಮ್ಮ ಆರಾಧನೆಯಲ್ಲೂ “ ಸರ್ವೇಷಾಮ ಅವಿರೋಧೇನ” ಅಂತ ಹೇಳಿರುವುದು.


No comments:

Post a Comment