Tuesday, June 11, 2019

ಆರೋಗ್ಯದ ಅಪಸವ್ಯಗಳು




ವ್ಯಾವಹಾರಿಕ ಪ್ರಪಂಚ ತೀರಾ ವ್ಯಾವಹಾರಿಕವಾಗುವಾಗ ಭಾವನಾತ್ಮಕ ಮನಸ್ಸು ಅದಕ್ಕೆ ಹೊಂದಿಕೊಳ್ಳುವುದಕ್ಕೆ ಶ್ರಮ ಪಡಬೇಕಾಗುತ್ತದೆ.


ಯಾವುದೋ ಗಡಿಬಿಡಿಯಲ್ಲಿದ್ದಾಗ ಕೈಯಲ್ಲಿದ್ದ ಮೊಬೈಲ್ ಕಂಪಿಸಿತು.  ತೆರೆದು ನೋಡಿದೆ.  ಊರಿನಿಂದ ಮಿತ್ರನೊಬ್ಬನ ಸಂದೇಶ ನಾಳೆ   ಬರುತ್ತಿದ್ದೇನೆ ಎಂದು.  ಆಗಲಿ ಎನ್ನುತ್ತಾ ನನ್ನ ಕೆಲಸದಲ್ಲಿ ಮಗ್ನನಾದೆ. ಹೆಚ್ಚಾಗಿ ಊರಿನಿಂದ ಮಿತ್ರರು ಕರೆ ಮಾಡುವುದು, ಮತ್ತವರು  ಮುಂಜಾನೆ ನಸುಕಿನಲ್ಲಿ ನವರಂಗ್ ಸರ್ಕಲ್ ನಲ್ಲಿ ಇಳಿಯುತ್ತಿದ್ದಂತೆ ಹೋಗಿ ಕರೆದುಕೊಂಡು ಬರುವುದು ಸಾಮಾನ್ಯವಾಗಿತ್ತು. ಆದರೆ ಈ ಸಲ ಎಲ್ಲವೂ ಮರೆತು ಹೋಗಿ ಮರುದಿನ ಮಧ್ಯಾಹ್ನ ಆ ಮಿತ್ರ ಪುನಃ  ಕರೆ ಮಾಡಿದಾಗ ನಾನು ಮರೆತು ಹೋದದ್ದು ನೆನಪಿಗೆ ಬಂತು. ಕ್ಷಮೆ ಕೇಳುವುದಕ್ಕೂ ಆಸ್ಪದ ಕೊಡದೆ ಮಿತ್ರ “ ಈಗ ನಿಮ್ಮಲ್ಲಿಗೆ ಬರುತ್ತಿದ್ದೇನೆ ಮನೆಯಲ್ಲಿ ಇದ್ದೀರಾ ?”  ಅಂತ ಕೇಳಿದ.

ಒಂದು ಸಲ ಆಶ್ಚರ್ಯವಾಯಿತು. ಯಾವಾಗಲೂ ನವರಂಗಲ್ಲಿ ಬಸ್ಸಿಳಿದು ಕರೆ ಮಾಡುತ್ತಿದ್ದ ಮಿತ್ರ ಅದಾಗಲೇ ಬೆಂಗಳೂರಿಗೆ ಬಂದು ಮಧ್ಯಾಹ್ನವಾಗಿತ್ತು. ಈ ಸಲ ನನ್ನ ಸಹಾಯ ಪಡೆಯದೇ ಇದ್ದದ್ದು ನಿಜಕ್ಕೂ ಆಶ್ಚರ್ಯವನ್ನು ಉಂಟುಮಾಡಿತ್ತು.  ಹೋಗಲಿ ಒಂದು ಕೆಲಸ ಉಳಿಯುತು ಅಂದುಕೊಂಡೆ.  ಮಾತ್ರವಲ್ಲ ಆತನೇ ನಾನಿದ್ದಲ್ಲಿಗೆ ಬರುತ್ತಿದ್ದಾನಲ್ಲ ಇದು ಮತ್ತೊಂದು ಆಶ್ಚರ್ಯ.

ಹೇಳಿದಂತೆ ಮತ್ತೆ ಸ್ವಲ್ಪ ಹೊತ್ತಿನಲ್ಲಿ ಮಿತ್ರ ಬಂದದ್ದು ಮಾತ್ರವಲ್ಲ ಜತೆಯಲ್ಲಿ ಮತ್ತೊಬ್ವರು ಯಾರೋ ಅಪರಿಚಿತರು ಇದ್ದರು. ಸಹಜವಾಗಿ ಔಪಚಾರಿಕ ಮಾತುಗಳಾದ ಮೇಲೆ ಅಪರಿಚಿತ ವ್ಯಕ್ತಿಯ ಆಗಮನದ ಕಾರಣ ತಿಳಿದುಬಿಟ್ಟಿತು.  ನಾವು ಇನ್ನೊಬ್ಬರಿಗೆ ಗಿರಾಕಿಗಳಾಗುವಷ್ಟು ಇನ್ನೊಬ್ಬರು ನಮಗೆ ಗ್ರಾಹಕರಾಗುವ ಸಂದರ್ಭವೇ ಬರುವುದಿಲ್ಲ. ಹಾಗೆ ಒಂದು ವೇಳೆ ಬಂದರೆ ಅವರು ವ್ಯವಹಾರ ಕುಶಲಿಗಳು ಎಂಬುದರಲ್ಲಿ ಅನುಮಾನವಿಲ್ಲ.ಆದರೆ  ನನ್ನ ಮಿತ್ರ ವ್ಯವಹಾರ ಕುಶಲಿಯಾದದ್ದು ವಿಪರ್ಯಾಸ.

ಅದೊಂದು ಆರೋಗ್ಯವರ್ಧಕ. ದಪ್ಪ ಕಾಗದದ ಒಂದು ಸುಂದರವಾದ ಪುಸ್ತಕ ನನ್ನೆದುರು ತೆರೆದು ಒಂದೊಂದೇ ವಿಷಯ ಪ್ರಸ್ತಾಪಿಸುತ್ತಾ ಹೋದರು. ಅದರಲ್ಲಿ ಸುಂದರವಾದ ಚಿತ್ರಗಳು.  ಮೊದಲು ಆರೋಗ್ಯದ ಬಗ್ಗೆ , ಕೆಡುತ್ತಿರುವ ವಾತಾವರಣದ ಬಗ್ಗೆ ಒಂದಷ್ಟು ವಿವರಣೆಯಾದ ಮೇಲೆ , ಇಂದಿನ ಕೆಲಸದ ಒತ್ತಡಗಳಲ್ಲಿ ಆರೋಗ್ಯವನ್ನು ಉಳಿಸಿಕೊಳ್ಳುವುದು ಹೇಗೆ ಶ್ರಮದಾಯಕವಾಗುತ್ತಿದೆ ಎಂದು ವಿವರಿಸಿದರು. ಅವರ ವಿವರಣೆ ಬಹಳ ಆಕರ್ಷಕವಾಗಿತ್ತು. ಒಬ್ಬ ಮಾರಾಟ ಪ್ರತಿನಿಧಿ ಹೇಗೆ ಮಾತಿನ ಜಾಣತನವನ್ನು, ಕುಶಲತೆಯನ್ನು  ತೋರಬೇಕೋ ಅದೇ ರೀತಿಯ ಸರಸವಾದ ಮಾತುಗಳು.

ಆದರೆ ನನ್ನ ಆತಂಕ ಬೇರೆಯದೇ ಆಗಿತ್ತು. ಊರಿನ ಒಬ್ಬ ಆತ್ಮೀಯ ಮಿತ್ರ  ಈ ಕಾರಣವನ್ನು ಹಿಡಿದು ಬರುತ್ತಿದ್ದಾನೆ ಎಂದು ಮೊದಲೇ ತಿಳಿದಿದ್ದರೆ......ಹೀಗೆ ಮನಸ್ಸು ಯೋಚಿಸತೊಡಗಿತ್ತು. ಊರ ಮಂದಿಯ ನಿಸ್ವಾರ್ಥ ಸ್ನೇಹದ ಉಪಯೋಗ ಹೀಗೆ ವಿನಿಯೋಗವಾಗುತ್ತಿದೆಯಲ್ಲಾ......! ಆದರೂ ಊರಿನವರು ಅಂತಾದಕೂಡಲೆ ಒಂದಷ್ಟು ಸೌಜನ್ಯ ಅತೀ ಅನಿವಾರ್ಯ. ಹಾಗಾಗಿ ಮಿತ್ರನ ಮುಖನೋಡಿ ಅವರ ವಿವರಣೆಗಳನ್ನೆಲ್ಲ ಶ್ರದ್ಧೆಯಿಂದಲೇ ಆಲಿಸಿದೆ.  ಬೆಂಗಳೂರಿನಲ್ಲಿ ಇಂತಹ ಮಾರಾಟ ತಂತ್ರಗಾರಿಕೆಯ ವ್ಯವಹಾರ ಕುಶಲಿಗಳು ಸಾಕಷ್ಟು ಇದ್ದಾರೆ. ನಿತ್ಯ ಒಂದೆರಡು ಕಿರುನಗೆಗಷ್ಟೇ ಸೀಮಿತವಾದರೂ ....ಇವರು ನನ್ನ ಪ್ರೇಂಡ್ ಅಂತ ವಕ್ಕರಿಸುವವರು, ಅವರಿಂದ ಆದಷ್ಟೂ ಅಂತರ ಕಾಯುವ ನಾನು ಈ ಮಿತ್ರನನ್ನು ಸೌಜನ್ಯಕ್ಕಾಗಿ ಸಹಿಸಿಕೊಂಡಿದ್ದೆ. ಮಿತ್ರನು ಸಹಜವಾಗಿ ಊರಿನವರಂತೆ ಇರುಸು ಮುರುಸನ್ನು ಅನುಭವಿಸುವರಂತೆ ತೋರಿಸಿಕೊಂಡರೂ ಸಹ  ಬಂದಾತನೊಂದಿಗೆ ಸಾಧ್ಯವಾದಷ್ಟು ಸೇರಿಕೊಂಡು ನನ್ನ ಸ್ನೇಹವನ್ನು ಜಾಣತನದಲ್ಲೇ  ತನ್ನ ಸ್ವಾರ್ಥಕ್ಕೆ ಬಳಸಿಕೊಂಡ.  ಅದನ್ನು ಬುದ್ಧಿವಂತಿಕೆ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ.ಯಾಕೆಂದರೆ ಬುದ್ದಿವಂತಿಕೆಗೆ ದಾಕ್ಶಿಣ್ಯ ಆಡ್ಡಗೋಡೆಯಾಗದೇ ಇದ್ದರೆ ಎಲ್ಲರೂ ಬುದ್ಧಿವಂತಿಕೆಯನ್ನು ತೋರಿಸುತ್ತಾರೆ.

ಆ ವ್ಯಕ್ತಿ ತೋರಿಸಿದ ಆರೋಗ್ಯವರ್ಧಕದ ವಿವರಣೆ ಕೇಳಿದೆ. ಅದಕ್ಕೆ ಹರ್ಬಲ್ ಅಂತ ಸೇರಿಸಿಕೊಂಡ  ವಿಚಿತ್ರವಾದ ಹೆಸರು. ಜತೆಯಲ್ಲಿ  ‘ಹರ್ಬಲ್ ನ್ಯೂಟ್ರಿಶಿಯನ್‘   ಅಂತ ಸೇರಿಸಿಕೊಂಡರೆ ಇದು ಸಂಪೂರ್ಣ ಭಾರತೀಯ ಪರಂಪರೆಯ ಶೈಲಿ ಅಂತ ಮಂಗ ಮಾಡುವ ಎಲ್ಲಾ ತಂತ್ರಗಾರಿಕೆಯೂ ಅದರಲ್ಲಿತ್ತು. ಇಂದು ಹೆಚ್ಚಿನವರಲ್ಲಿ ಒಂದು ಭ್ರಮೆ ಆವರಿಸಿದೆ. ಅದು ಆರೋಗ್ಯದ ಬಗ್ಗೆ ಇರುವ ಚಂಚಲತೆಯ ಕಾಳಜಿ. ಸಿಕ್ಕ ಸಿಕ್ಕಲ್ಲೆಲ್ಲ ಸಲಹೆಯನ್ನು ಕೇಳುವುದು ಒಂದನ್ನು ಬಿಟ್ಟು ಇನ್ನೊಂದನ್ನು ಅನುಸರಿಸುವುದು, ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಎಂದರೆ ಒಂದು ರೀತಿಯ ಫ್ಯಾಷನ್ ಎಂಬಂತೆ ಬದಲಾಗಿದೆ.  ವ್ಯಾಯಾಮ ಸ್ವತಃ ಮಾಡಿದರೆ ಸಾಲದು ಅದನ್ನು ಇನ್ನೊಬ್ಬರಿಗೆ ಪ್ರದರ್ಶಿಸುವ ಚಟ, ಅಥವಾ ತಾವು ಅನುಸರಿಸುವುದನ್ನು ಇನ್ನೊಬ್ಬರು ಅನುಸರಿಸುವಂತೆ ಮಾಡುವ ಚಪಲ. ಆದರೆ ಆರೋಗ್ಯ ಚಿಂತನೆ ಅದು ತೀರಾ ಖಾಸಗಿಯಾಗಿದ್ದಷ್ಟು ಅದರಲ್ಲಿ ಸಂತೃಪ್ತಿ ಸಿಗುತ್ತದೆ.

ಸಹಜವಾಗಿ ಇಲ್ಲಿ ಬಂದವರು ತಮಗೆ ತೀರಾ ಅಗತ್ಯ ಎಂದು ಬಿಂಬಿಸುವಂತೆ ಕೆಲವು ಯೋಜನೆಗಳನ್ನು (ಸ್ಕೀಂ) ಮುಂದಿಡುತ್ತಾರೆ. ಅವರ ವಿವರಣೆಗೆ ಎಳ್ಳಿನಷ್ಟು ಸ್ಪಂದನೆ ನಮ್ಮಿಂದ ಸಿಕ್ಕರೂ ಸಾಕು ಆ ಎಳೆಯನ್ನು ಹಿಡಿದು ಮಂಗ ಮಾಡುವುದು ಮಾತ್ರವಲ್ಲ ತಮ್ಮ ಖೆಡ್ಡಾದಲ್ಲಿ ಬಂಧಿಸಿಬಿಡುತ್ತಾರೆ. ಒಂದು ವೇಳೆ ನಾವು ತೀರಾ ವ್ಯತಿರಿಕ್ತವಾಗಿ ಪ್ರತಿಕ್ರಿಯೆ ನೀಡಿದರೆ ನಮ್ಮನ್ನು ಮಾರಕ ರೋಗ ಗ್ರಸ್ಥರೆಂಬಂತೆ ಕಾಣುತ್ತಾರೆ.  ಹಾಗೇ ಇಲ್ಲಿ ಸ್ನೇಹಿತನೊಂದಿಗೆ ಬಂದ ವ್ಯಕ್ತಿಯೂ ತನ್ನ ಗಾಳದ ಕೊಕ್ಕೆಯನ್ನು ಬೀಸುತ್ತಾ ಹೋದ. ಒಂದೆರಡು ಜನ ಸ್ಕೀಂ ನಲ್ಲಿ ಸೇರಿಸಿದರೆ ನನಗಾಗುವ ಲಾಭದ ಅಮಿಷವನ್ನು ತೋರಿಸಿದ. ಅಂತು ಅವನ ಪ್ರಕಾರ ಜಗತ್ತಿನಲ್ಲಿ ಇದು ಅತ್ಯಂತ ಶ್ರೇಷ್ಠವಾದ ಆರೋಗ್ಯವಿಧಾನ. ಜತೆಯಲ್ಲಿ ದುಡ್ಡು ಮಾಡುವ ವಿಧಾನ.  ಇದೇ ರೀತಿಯ ಅನುಭವ ಹಲವು ವಿಚಾರದಲ್ಲೂ ನನಗೆ ಸಂಭವಿಸಿದೆ, ಬಂಧುಗಳು ಮಿತ್ರರು ಅಂತ ದಾಕ್ಷಿಣ್ಯದಿಂದ ಬಲಿಪಶುವಾಗಿ ಒಂದಷ್ಟು ದುಡ್ಡು ಮತ್ತೆ ಮನಸ್ಸಿನ ಶಾಂತಿ ಕಳೆದುಕೊಂಡದ್ದೂ ಇದೆ. ಹಾಗಾಗಿ ಇಲ್ಲಿ ನನಗೆ ಯಾವ ದಾಕ್ಷಿಣ್ಯ ಹಂಗು ಇರಲಿಲ್ಲ.

ಅವರು ಹೇಳಿದಂತೆ, ಈ ಉತ್ಪನ್ನ ಉಪಯೋಗಿಸುವುದು ಸುಲಭ. ಬೆಳಗ್ಗಿನ ಉಪಾಹಾರ ಬಿಟ್ಟು  ಅವರ ಆ ಹರ್ಬಲ್ ಸಾಧನವನ್ನು ಅವರು ಹೇಳಿದಂತೆ ಸೇವಿಸುವುದು. ಬೆಳಗ್ಗಿನ ಉಪಾಹಾರದ ಬದಲು ಇವರು ಕೊಡುವ ಆರೋಗ್ಯ ವರ್ಧಕವೇ ಆಹಾರ.  ಮತ್ತೆ ನಿರಾಳವಾಗಿ ಇದ್ದು ಬಿಡುವುದು. ವ್ಯಾಯಾಮ ವಾಕಿಂಗ್ ಮಾಡುವ ಅಗತ್ಯವಿಲ್ಲ. ದೇಹದ ತೂಕ ಕಡಿಮೆಯಾಗುತ್ತದೆ.  ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಇನ್ನಿತರ ಖಾಯಿಲೆಗಳು ಹತ್ತಿರ ಸುಳಿಯುವುದಿಲ್ಲ. ಇನ್ನು ಅವರು ಹೇಳುವುದಕ್ಕೆ ಬಿಟ್ಟು ಹೋದ ರೋಗದ ಬಗ್ಗೆ ನಾವು ಪ್ರಸ್ತಾಪಿಸಿದರೆ ಅದಕ್ಕೂ ಇದು ಆಗುತ್ತದೆ ಎಂದು ಉದಾರ ನೀತಿಯನ್ನು ತೋರಿಸುತ್ತಾರೆ. ಯಾವುದೇ ಪರಿಶ್ರಮವಿಲ್ಲದೆ ಸುಲಭದಲ್ಲಿ ಆರೋಗ್ಯ ಸಿಕ್ಕಿಬಿಡುತ್ತದೆ ಎಂದಾದರೆ ಮರುಳಾಗದೇ ಇರುವುದಕ್ಕೆ ಸಾಧ್ಯವೇ? ಆ ಹರ್ಬಲ್ ಸೇವಿಸುವುದಕ್ಕೆ ಒಂದು ನಿಬಂಧನೆ ಇರುತ್ತದೆ. ಅದು ಜೀವನ ಪರ್ಯಂತ ಸೇವಿಸಬೇಕು. ಅಲ್ಲಿಗೆ ಅವರಿಗೆ ಲೈಫ್ ಟೈಮ್ ಒಂದು ಗಿರಾಕಿ ಸಿದ್ಧವಾಗಿಬಿಡುತ್ತದೆ. ಒಂದು ವೇಳೆ ಅದನ್ನು ಉಪಯೋಗಿಸುವುದನ್ನು ನಿಲ್ಲಿಸಿದರೆ ಅದರ ಪರಿಣಾಮ ಗಂಭೀರವಾಗಿರುತ್ತದೆ!!

ಎಲ್ಲಾ ವಿವರಣೆ ಮುಗಿದ ನಂತರ ಅವರ ಸ್ವಂತ ಅನುಭವ ಮುಂದಿಡುತ್ತಾರೆ.  ತಾನು ಇಷ್ಟು ದಪ್ಪಗಿದ್ದೆ, ಇಷ್ಟು ತೂಕ ಕಡಿಮೆಯಾಯಿತು, ಅಥವಾ ಸಣಕಲಾಗಿದ್ದರೆ ಇಷ್ಟು ದಪ್ಪಗಾದೆ, ಅದಕ್ಕೆ ತಮ್ಮ ಮೊದಲಿನ ಫೋಟೋ ಕೂಡ ತೋರಿಸಿ ಪ್ರಭಾವ ಬೀರುತ್ತಾರೆ.

ಅಷ್ಟರವರೆಗೆ ಮೌನವಾಗಿ ಪ್ರತಿಕ್ರಿಯೆ ಇಲ್ಲದೇ ಕೇಳುತ್ತಿದ್ದ ನಾನು ಕೊನೆಯಲ್ಲಿ ಒಂದು ಪ್ರಶ್ನೆ ಕೇಳಿದೆ. “ಹೀಗೆ ಏಕಾ ಏಕಿ ಸಪುರ ಆಗುವುದು, ದಪ್ಪ ಆಗುವುದು  ಪ್ರಕೃತಿ ನಿಯಮಕ್ಕೆ ವಿರುದ್ಧ ಅಲ್ಲವೇ?”  ಪ್ರಕೃತಿ ತನ್ನದೇ ಆದ ಒಂದು ನಿಯಮವನ್ನು ಹೊಂದಿರುತ್ತದೆ. ಅದಕ್ಕೆ ವ್ಯತಿರಿಕ್ತವಾಗಿ ನಾವು ನಡೆದುಕೊಂಡರೆ ಉತ್ಪಾತ ತಪ್ಪಿದ್ದಲ್ಲ. ಇದು ಪ್ರಕೃತಿಯೇ ಕಲಿಸಿದ ಪಾಠ. ಅದಕ್ಕೆ ಅವರು ಕೊಟ್ಟ ಸಮಜಾಯಿಷಿ ಇದು ಪ್ರತಿಶತ ಹರ್ಬಲ್ ಉತ್ಮನ್ನ!!!   ಇಲ್ಲಿ ಹರ್ಬಲ್ ಎಂಬ ಹೆಸರು ಪ್ರಕೃತಿನಿಯಮವನ್ನು ಪಾಲನೆ ಮಾಡಿಬಿಡುತ್ತದೆ.

ಕೊನೆಯಲ್ಲಿ ನಾನು ಹೇಳಿದೆ. “ನನಗೆ ಇದಾವುದರಲ್ಲೂ ವಿಶ್ವಾಸವಿಲ್ಲ. ಇದೆಲ್ಲ ಹಿಂಬಾಗಿಲ ಪ್ರವೇಶದ ಅಪಸವ್ಯಗಳು.  ಮೊದಲೇ ನೀವು ಹೇಳಿದ್ದರೆ  ನಿಮಗೆ  ಇಲ್ಲಿ ತನಕ ಬರುವ ಕಷ್ಟವೂ ಇರುತ್ತಿರಲಿಲ್ಲ. ನಾನು ಕಳೆದ ಹತ್ತು ಹನ್ನೆರಡು ವರ್ಷದಿಂದ ಯೋಗಾಭ್ಯಾಸ ಮಾಡುತ್ತಿದ್ದೇನೆ. ಅಂದಿನಿಂದ ಇಂದಿನವರೆಗೂ ಯಾವುದೇ ಔಷಧಿ ಅಥವಾ ಚಿಕಿತ್ಸೆ ತೆಗೆದುಕೊಳ್ಳುವ ಪ್ರಮೇಯ ಬರಲಿಲ್ಲ. ಮಾನಸಿಕವಾಗಿ ಸಂತೃಪ್ತಿ ಸಮಾಧಾನ ಅನುಭವಿಸುವುದರಿಂದ ಯಾವುದರಲ್ಲೂ ಅತಿಯಾಶೆ ಆಗುವುದಿಲ್ಲ.

ನಾನು ಯೋಗ ಮಾಡುತ್ತಿದ್ದೇನೆ ಎಂದಾಕ್ಷಣವೇ ಅವರ ಮಾತುಗಳೆಲ್ಲ ನಿಂತುಬಿಟ್ಟಿತು. ಆದರೂ ಮತ್ತೂ ಒಂದು ಆತಂಕ ಮುಂದಿಟ್ಟರು, ಎಲ್ಲರಿಗೆ ನಿತ್ಯ ಯೋಗ ಮಾಡುವುದಕ್ಕೆ ಸಮಯ ಎಲ್ಲಿ ಸಿಗುತ್ತದೆ?  ನಾನು ಹೇಳಿದೆ ಊಟ ನಿದ್ದೆಗೆ ನಾವು ಸಮಯ ಹೊಂದಿಸುವಾಗ ಒಂದಿಷ್ಟು ಯೋಗಾಭ್ಯಾಸಕ್ಕೆ ಸಮಯ ಹೊಂದಿಸುವುದು ಕಷ್ಟವೇ?  

ಇದನ್ನು ಉಪಯೋಗಿಸಿ ನೀವು ಮೊದಲಿನಂತೆ ಯೋಗ ಕೂಡ ಮಾಡಬಹುದು.  ನನ್ನ ಆರೋಗ್ಯದ ಬಗ್ಗೆ ಇರುವ ಕಾಳಜಿಗಿಂತಲೂ ಅವರ ಗಿರಾಕಿ ನಾನಾಗಬೇಕು. ಕೊನೆಯಲ್ಲಿ ಮತ್ತೂ ಒಂದು ಗಾಳ ಹಾಕಿದ. ಎಲ್ಲರಿಗೂ ನಿಮ್ಮ ಹಾಗೆ ಯೋಗ ಮಾಡುವುದಕ್ಕೆ ಸಮಯ ಸಿಗುವುದಿಲ್ಲ. ನೀವು ಉಪಯೋಗಿಸದೇ ಇದ್ದರೂ ಯಾರಿಗಾದರೂ ಮಾರಾಟ ಮಾಡಬಹುದು.  ಇದಂತೂ  ಬಹಳ ವಿಚಿತ್ರವಾಗಿ ಕಂಡಿತು. ಅಲ್ಲಿಗೆ ಅವರು ಬಂದಿರುವ ಉದ್ದೇಶ ಸುಸ್ಪಷ್ಟವಾಯಿತು. ಹೇಗಾದರೂ ಅವರ ಹಾದಿಗೆ ನಾನು ಸೇರಿಕೊಳ್ಳಬೇಕು.  ಈಗ ವ್ಯವಹಾರ ವಾಸ್ತವಕ್ಕೆ ಹತ್ತಿರವಾಗಿತ್ತು. ನಾನೆಂದೆ ಹಣದ ಅಮಿಷದಲ್ಲಿ ನಾನು ನನ್ನ ನಿಷ್ಠೆಯನ್ನು ಬದಲಿಸುವುದಿಲ್ಲ. ಹಣ ಮಾಡುವ ಆಶೆಯೂ ನನಗಿಲ್ಲ.  ಇದನ್ನು ಮಾರಾಟ ಮಾಡಬೇಕಾದರೆ ನಾನು ಸದಾ ಆತ್ಮವಂಚನೆ ಮಾಡಬೇಕಾಗುತ್ತದೆ.  ನನ್ನಿಂದ ಸಾಧ್ಯವಿಲ್ಲದ ಮಾತು. ನಾನು ಉಪಯೋಗಿಸದೇ ಇರುವ ವಸ್ತುವನ್ನು ಮಾರಾಟ ಮಾಡಿ ನನ್ನ ಮಿತ್ರರನ್ನು ಮೂರ್ಖರನ್ನಾಗಿಸುವುದು ಸಂಬಂಧದ ವಿಶ್ವಾಸಕ್ಕೆ ಗೈಯುವ ದ್ರೋಹವಾಗುತದೆ.  ಅವರ ಯಾವ ಮಾತುಗಳೂ ನನಗೆ ಹಿತವಾಗಲಿಲ್ಲ. ಮಿತ್ರತ್ವ ಎಂದರೆ ಕೇವಲ ವ್ಯಾವಹಾರಿಕ ಲಾಭಕ್ಕೆ ಇರುವ ಸಂಬಂಧ ಎಂದು ತಿಳಿಯುವವರಿಗೆ ಅವರ ಮಾತಿಗೆ ಸ್ಪಂದನೆ ಸಿಗುವುದಿಲ್ಲ ಎಂದಾಗುವಾಗ ನಂತರ ನನ್ನಲ್ಲಿ ಕೆಲಸವಿರುವುದಿಲ್ಲ.

ಕೊನೆಯಲ್ಲಿ ಒಂದೆರಡು ಮಾತು ಹೇಳದೇ ಇರುವುದಕ್ಕೆ ಸಾಧ್ಯವಾಗಲಿಲ್ಲ. ಅವರು ಹೇಗೆ ಅವರ ಚಿಂತನೆಗಳನ್ನು ನನ್ನಲ್ಲಿ ಹೇರುವುದಕ್ಕೆ ಬಂದರೋ ನಾನು ಒಂದಿಷ್ಟಾದರೂ ಹೇಳದೇ ಇರುವುದು ಸರಿಕಾಣಲಿಲ್ಲ.  ಒಂದು ವೆತ್ಯಾಸವೆಂದರೆ  ಅವರು ಹೇರಿದ್ದರಲ್ಲಿ  ಲಾಭದ ಸ್ವಾರ್ಥವಿದ್ದರೆ, ನಾನು ಹೇರುವುದರಲ್ಲಿ ನನಗೇನೂ ಲಾಭವಿಲ್ಲ.  ಇದರಲ್ಲಿ ಅವರಂತೇ ನಾನು ವಿಫಲತೆಯನ್ನು ಅನುಭವಿಸಿದರೂ ಚಿಂತೆ ಇಲ್ಲ. ಹಾಗಾಗಿ ಹೇಳಿದೆ-

“ತಕ್ಕಡಿಯ ಒಂದು ತಟ್ಟೆಯಲ್ಲಿ ಹೃದಯವನ್ನೂ    (ಅಂದರೆ ತಮ್ಮೊಳಗಿನ ಭಾವನೆಗಳನ್ನು)  ಮತ್ತೊಂದು ತಟ್ಟೆಯಲ್ಲಿ ತಾವು ( ಸಂಪೂರ್ಣ ದೇಹವನ್ನೂ) ಇರಿಸಿದರೆ ತಕ್ಕಡಿಯ ಮುಳ್ಳಿಗೆ  ಹೃದಯದ ತಟ್ಟೆಯೇ ಹತ್ತಿರವಾಗಿಬಿಡುತ್ತದೆ.  ದೇಹ ಭಾರಕ್ಕಿಂತ ಮನಸ್ಸಿನ ಭಾವನೆಗಳ ಭಾರವೇ ಹೆಚ್ಚು. ಮನುಷ್ಯ ಈ ಭಾರವನ್ನು ಯಾವಾಗ ಕೆಳಗಿಳಿಸಿ ವಿರಮಿಸುತ್ತಾನೋ ಆವಾಗಲೇ ನಿರಾಳನಾಗುತ್ತಾನೆ. ನಿರಾಳವಾದ ಜೀವನ ಅನುಭವಿಸಬೇಕಿದ್ದರೆ  ಬದಲಾಗಬೇಕು ನಮ್ಮ ಜೀವನ ಶೈಲಿ.  ಜಗತ್ತಿನಲ್ಲಿ ಮನುಷ್ಯನಿಗಿರುವಷ್ಟು ಚಿಂತೆಯ ಭಾರ ಯಾವುದೇ ಪ್ರಾಣಿಗೆ ಇರುವುದಿಲ್ಲ.  ಚಿಂತೆ ಎಂಬ ರೋಗಕ್ಕೆ ಯಾವ ಔಷಧವೂ ಪ್ರಪಂಚದಲ್ಲಿ ಕಂಡುಹಿಡಿದಿಲ್ಲ.”

“ನಾನು ಯೋಗಾಭ್ಯಾಸ ಆರಂಭಿಸಿದ ನಂತರ ನನಗೆ ಆ ಹಾದಿಯ ಸ್ಪಷ್ಟ ಅರಿವಾಗಿದೆ. ಅದರಲ್ಲಿ ಏನು ಪಡೆಯಬಹುದು ಎನ್ನುವುದಕ್ಕಿಂತಲೂ ಏನು ಪಡೆಯುತ್ತಿದ್ದೇನೆ ಎಂಬುದು ಮುಖ್ಯ. ನನ್ನ ಇಹ ಪರಗಳನ್ನು ಮರೆಸುವ ನಾಡೀ ಶೋಧನದ ಸುಖ,  ಚಿತ್ತ ಶುದ್ದಿಯಾಗಿಸುವ ಕಪಾಲಭಾತಿಯ ಅನುಭವ, ಕೊನೆಯಲ್ಲಿ ಪ್ರತೀ ದಿನವೂ ಆಧ್ಯಾತ್ಮ ಲೋಕದ ಕದ ತಟ್ಟುವ ಶವಾಸನ ಈ ಅನುಭವಗಳು  ನಿಮ್ಮ ಹರ್ಬಲ್ ಉತ್ಮನ್ನಗಳು ಖಂಡಿತಾ ಒದಗಿಸಲಾರವು. ನಾನು ಪಡೆಯುವ ಅನುಭವಕ್ಕೆ ನಾನು ಯಾವುದೇ ಭಂಡವಾಳ ಹೂಡುವ ಆವಶ್ಯವಿಲ್ಲ. ಅದು ಸಂಪೂರ್ಣ ಉಚಿತ. ಅದು ವ್ಯವಾಹಿರಿಕ ಪ್ರಪಂಚದ ಲಾಭನಷ್ಟದ ವ್ಯಾಪಾರವಲ್ಲ. ಸಾಧ್ಯವಿದ್ದರೆ  ನಿಮ್ಮ ದಿನದ ಒಂದರ್ಧ ತಾಸು ಶ್ರದ್ದೆಯಿಂದ  ಯೋಗಾಭ್ಯಾಸಕ್ಕೆ ಉಪಯೋಗಿಸಿ. ಯೋಗಾಭ್ಯಾಸಕ್ಕೆ ಸಮಯವಲ್ಲ ಪ್ರಧಾನ. ಶ್ರದ್ದೆ- ಅದನ್ನು ಅನುಸರಿಸಲೇ ಬೇಕೆಂಬ ತುಡಿತ. ಇಷ್ಟಿದ್ದರೆ ಸಮಯದಂತೆ ಮಿಕ್ಕೆಲ್ಲವೂ ನಿಮ್ಮದಾಗುತ್ತದೆ. “

ದಪ್ಪಗಿದ್ದವರಿಗೆ ತೆಳುವಾಗುವ ಹಂಬಲ, ತೆಳ್ಳಗಿನವರಿಗೆ ದಪ್ಪವಾಗುವ ಹಂಬಲ ಯಾರಿಗೂ ತಾವು ಸರಿ ಇದ್ದೇವೆ ಎನ್ನುವ ಆತ್ಮವಿಶ್ವಾಸವಿಲ್ಲ. ಯೋಗಾಭ್ಯಾಸ ಈ ಆತ್ಮವಿಶ್ವಾಸವನ್ನು ತುಂಬಿಸುತ್ತದೆ. ದಪ್ಪ ಇದ್ದಿರೋ ಸಪುರ ಇದ್ದಿರೋ ಎಂಬ ತುಡಿತವಿರುವುದಿಲ್ಲ.

 ಮಿತ್ರ ಧನ್ಯವಾದ ಹೇಳಿ ವಿದಾಯ ಹಾಡಿದ. ನಾನು ನಮಸ್ಕಾರ ಎಂದೆ. ಪ್ರತಿ ನಮಸ್ಕಾರ ಇದ್ದರೂ ಅದರಲ್ಲಿ ಎಂದಿನ ಸ್ವಾರಸ್ಯವಿರಲಿಲ್ಲ. ಈಗೀಗ ಹೀಗಿರುವ ವ್ಯಾವಹಾರಿಕ ಮಿತ್ರರ ಇಂತಹ ಕರೆಗಳಿಗೆ ನನ್ನ ಮೊಬೈಲ್ ಸೈಲೆಂಟ್ ಮೋಡ್ ಗೆ ಹೋಗುತ್ತದೆ.

No comments:

Post a Comment