Friday, June 21, 2019

ಹೃದಯ ಎಂಬುದು ಇದ್ದರೆ



ಮನೆಯೆದುರು ಮಕ್ಕಳು ಆಟವಾಡುತ್ತಿದ್ದರು. ಅ ಮನೆ ಈ ಮನೆಯ ಪುಟ್ಟ ಪುಟ್ಟ ಮಕ್ಕಳು, ಬಾಲ ಭಾಷೆಯಲ್ಲಿ ಆಡುತ್ತ ಕೇಕೆ ಹಾಕುತ್ತಾ ಆಡುವುದನ್ನು ನೋಡುವುದೇ ಒಂದು ಆನಂದ. ನಮ್ಮ ಬಾಲ್ಯ,   ನಮ್ಮ ಮಕ್ಕಳ ಬಾಲ್ಯ  ನೋಡುತ್ತಿದ್ದಂತೆ ನೆನಪಿಗೆ ಬರುತ್ತದೆ. ಬಾಲ್ಯದ ನಮ್ಮ ಹೆಡ್ಡತನ, ನಮ್ಮಲ್ಲಿ ಕಿರು ನಗುವನ್ನು ತಂದುಬಿಡುತ್ತದೆ.  ತುಸು ಹೊತ್ತಿನಲ್ಲಿ ಆಡುತ್ತಿದ್ದ ಮಕ್ಕಳ ನಡುವೇ ಏನೋ ಕ್ಷುಲ್ಲಕ ಜಗಳವಾಗುತ್ತದೆ. ಒಂದು ಏಟು ಹೊಡೆದರೆ ಮತ್ತೊಂದು ಅಳುತ್ತಾ ಅಮ್ಮನ ಹತ್ತಿರ ಹೋಗುತ್ತದೆ. ಅಮ್ಮ, ಅಳುತ್ತಿದ್ದ ಮಗುವನ್ನು ರಮಿಸುತ್ತಾ, ಹೊರಗೆ ಬಂದು ತನ್ನ ಮಗುವಿಗೆ ಹೊಡೆದ ಮಗುವಿಗೆ ಬಯ್ಯ ತೊಡಗುತ್ತಾಳೆ. ಬೈಗುಳ ಕೇಳಿದೊಡನೆ ಆ ಮಗುವಿನ ತಾಯಿ ಹೊರಬರುತ್ತಾಳೆ. ನಂತರ ಜಗಳ ಅಮ್ಮ ಅಮ್ಮಂದಿರ ನಡುವೆ. ಅಥವಾ ಇನ್ನಾರೋ ಹಿರಿಯರ ನಡುವೆ. ತುಸು ಹೊತ್ತಿನಲ್ಲಿ ಜಗಳವಾಡಿದ ಕಂದಮ್ಮಗಳು ಪುನಃ ಜತೆಯಲ್ಲಿ ಆಡುವುದನ್ನು ಕಾಣುತ್ತೇವೆ.  ಅಮ್ಮಂದಿರ ದೇಹ ಬೆಳೆದಿರುತ್ತದೆ, ಹೃದಯ ಬೆಳೆದಿರುವುದೇ ಇಲ್ಲ.!!

ಛೇ,  ಮನುಷ್ಯ ಹುಟ್ಟುವಾಗ ಕೈ ಕಾಲು ಕಣ್ಣು ಮೂಗು ಹೊಟ್ಟೆ  ಎಲ್ಲವನ್ನೂ ಪಡೆದು ಹುಟ್ಟುತ್ತಾನೆ. ಎಲ್ಲಕ್ಕಿಂತ ಮೊದಲು ಹೃದಯ ಉಸಿರಾಡುತ್ತದೋ ಅಂತ,  ಮಗು ಅಳುವುದಿಲ್ಲ ಅಂತ ಆತಂಕ. ದಿನ ಕಳೆದಂತೆ ಕೈಕಾಲು ದೇಹ ಬೆಳೆಯುತ್ತದೆ.  ಹೃದಯ ಇದ್ದಹಾಗೆ ಲಬ ಡಬಿಸುತ್ತದೆ. ಯಾರೂ ಗಮನಿಸುವುದಿಲ್ಲ. ಕೈ ಬೆರಳ ತುದಿಗೆ ಸೂಜಿ ಚುಚ್ಚಿದರೂ ಸುರಿವ ತೊಟ್ಟು ರಕ್ತಕ್ಕೆ ಗಾಬರಿ ಬೀಳುತ್ತೇವೆ. ಹುಟ್ಟಿದಂದಿನಿಂದ ಬಡಿಯುತ್ತಿದ್ದ ಹೃದಯ ಅನಾಥವಾದಂತೆ.

ಹೃದಯ....ದೇಹದ ಕೇಂದ್ರಭಾಗ. ಹಾಗಾಗಿಯೇ ಕೇಂದ್ರವನ್ನೇ ಹೃದಯ  ಎನ್ನುವರು. ಜನನದಿಂದ ತೊಡಗಿ ದೇಹ ಬೆಳೆಯುತ್ತಾ ಹೋಗುತ್ತದೆ. ನಮ್ಮ ಚಿಂತನೆಗಳೂ ಬಲಿಯುತ್ತಾ ಹೋಗುತ್ತದೆ. ಆದರೆ ಹೃದಯ ಅದು ಇದ್ದ ಹಾಗೇ ಇದ್ದು ಬಿಡುತ್ತದೆ. ದೇಹ ಬೆಳೆದರೇನಂತೆ ಬೆಳೆಯಲಿ. ಆದರೆ ದೇಹಕ್ಕಿಂತ ವೇಗವಾಗಿ ಹೊಟ್ಟೆ ಬೆಳೆಯಲಾರಂಭಿಸಿದಾಗ ಆತಂಕ. ದಾಸ ವರೇಣ್ಯರು ಹಾಡಿದಂತೆ ಜೀವನ ಅಂದರೆ ಹೊಟ್ಟೆ ಹೊರೆದುಕೊಳ್ಳುವುದು. ಹೊಟ್ಟೆ ಹೊರೆಯುವ ಕಾಯಕದಲ್ಲಿ ಹೊಟ್ಟೆಯನ್ನು ಹೊರುವುದೇ ಜೀವನವಾಗಿಬಿಡುತ್ತದೆ. ದೇಹದಲ್ಲಿ ಹೊಟ್ಟೆ,   ಅಬ್ಬಾ  ಹೊಟ್ಟೆ ಕೆಳ ಭಾಗದಲ್ಲಿ ತೊಡೆಯನ್ನೂ ಮೇಲಕ್ಕೆ ಎದೆಯನ್ನು ಆಕ್ರಮಿಸಿ ಬೆಳೆದು ಬಿಡುತ್ತದೆ.  ಹೊಟ್ಟೆ ದೊಡ್ಡದಾದಂತೆ ದೇಹದ ಎಲ್ಲ ಭಾಗ ಚಿಕ್ಕದಾಗುತ್ತಾ ಹೊಟ್ಟೆಯ ಆಕ್ರಮಣಕ್ಕೆ ಬೆದರಿ ಬಿಡುತ್ತವೆ. ಕಣ್ಣಿಗೂ ಪಾದಕ್ಕೂ ಸಂಪರ್ಕ ಕಡಿದು ಹೋಗುತ್ತದೆ. ಸಮನ್ವಯವೇ ಇಲ್ಲ.

ಹೊಟ್ಟೆ ಗಾತ್ರದಲ್ಲಿ ದೊಡ್ಡದಾದಂತೆ ಹೃದಯ ಚಿಕ್ಕದಾಗುತ್ತಾ ಹೋಗುತ್ತದೆ. ಹೃದಯ ಚಿಕ್ಕದಾಗುವುದೆಂದರೆ ಅದು ಕೇವಲ ಗಾತ್ರದಲ್ಲಿ ಚಿಕ್ಕದಾಗುವುದಲ್ಲ. ಭಾವನೆಗಳೂ ಚಿಕ್ಕದಾಗಿಬಿಡುತ್ತವೆ. ಹೃದಯದ ವೈಶಾಲ್ಯತೆ ಕಡಿಮೆಯಾಗುತ್ತದೆ. ಎಂದರೆ ಮನುಷ್ಯತ್ವ ಕಡಿಮೆಯಾಗುತ್ತದೆ. ಹಾಗಂತೆ ಹೊಟ್ಟೆ ದೊಡ್ಡದಿದ್ದವರೆಲ್ಲ ಕೆಟ್ಟವರು ಎಂದಲ್ಲ. ಅವರಲ್ಲಿನ ಒಳ್ಳೆಯತನ ಸಂಪೂರ್ಣ ಜಾಗ್ರತವಾಗುವುದಕ್ಕೆ ಹೊಟ್ಟೆ ಅಡ್ಡಬರುತ್ತದೆ ಅಷ್ಟೆ.

ಹೊಟ್ಟೆ ಬೆಳೆದಂತೆ ಎದೆ ಚಿಕ್ಕದಾಗುತ್ತದೆ. ತುಳುವಿನಲ್ಲಿ ಸೋಮಾರಿಗಳಿಗೆ ಒಂದು ಒಂದು ಬೈಗುಳವಿದೆ. “ಸಿಗಲೆ ಕಂಡು”  ಸಿಗಲೆ ಎಂದರೆ ಎದೆ, ಕಂಡು ಎಂದರೆ ಕಳ್ಳ ಎಂದು.  ದುಡಿಮೆಯನ್ನು ಕದಿಯುವನು, ಅಂದರೆ ಬೇರೆಯವರ ದುಡಿಮೆಯನ್ನೇ ಅವಲಂಬಿಸುವವನು ಎಂದು ಅರ್ಥ. ಎದೆಯ ಮಹತ್ವ ಅದು ಸಿಗಲೆ ಕಂಡುಗಳಾಗಿದ್ದರೆ ಹೊಟ್ಟೆ ಬೆಳೆಯುತ್ತಾ ಹೋಗುತ್ತದೆ.

ವಿಶಾಲ ಮನಸ್ಸಿನ ಚಿಂತನೆಗೆ ವಿಶಾಲ ಹೃದಯದ ಚಿಂತನೆ ಅಂತ ಹೇಳುತ್ತಾರೆ. ಎಲ್ಲವನ್ನು ಸೌಹಾರ್ದವಾಗಿ ಕಾಣುವುದೇ ವಿಶಾಲ ಮನಸ್ಸಿನ ಚಿಂತನೆ. ವಿಶಾಲವಾದ ಚಿಂತನೆ ಹೃದಯವೂ ವಿಶಾಲವಾಗಿ ಸಹಕರಿಸಬೇಕು. ಇಲ್ಲದೇ ಇದ್ದರೆ ಮನಸ್ಸಿನಲ್ಲಿ ಗ್ರಹಿಸಿದ್ದು ಮಾಡುವುದಕ್ಕೆ ಹೊಟ್ಟೆ ಆಸ್ಪದ ಕೊಡುವುದಿಲ್ಲ. ಹಾಗಾಗಿ ನಮ್ಮ ಮನಸ್ಸು ಚಿಂತಿಸುವುದನ್ನೂ ಅನುಭವಿಸುವುದನ್ನೂ ಕಡಿಮೆ ಮಾಡುತ್ತದೆ.

ಒಬ್ಬ ಸಾಹಿತಿ ಬೆಟ್ಟ ಹತ್ತುವ ಅನುಭವ ಬರೆಯುತ್ತಾ ಹೋಗುತ್ತಾನೆ. ಬೆಟ್ಟದ ಬುಡಲ್ಲಿ ನಿಂತು ಬೆಟ್ಟದ ಬುಡದ ಬಗ್ಗೆ ಬರೆಯುತ್ತಾ,  ಬೆಟ್ಟವನ್ನು ಮೇಲೆ ಮೇಲೆ ಹತ್ತುತ್ತಾನೆ. ಪ್ರತೀ ಹೆಜ್ಜೆ ಹೆಜ್ಜೆಗೂ ವರ್ಣಿಸುತ್ತಾ ಬೆಟ್ಟದ ಮಧ್ಯ ಭಾಗಕ್ಕೆ ಬಂದಾಗ ಮುಂದಕ್ಕೆ ಅಡಿ ಇಡಲು ಹೊಟ್ಟೆ ಅಡ್ಡ ಬರುತ್ತದೆ. ಸಾಧ್ಯವಾಗುವುದಿಲ್ಲ. ಹಾಗೇ ಕೆಳಗೆ ಬಂದು ಬಿಡುತ್ತಾನೆ. ಬೆಟ್ಟದ ಬಗೆಗಿನ ಆತನ ಅನುಭವ ಪೂರ್ಣವಾಗುವುದಿಲ್ಲ ಬೆಟ್ಟದ ಮೇಲೆ ಹೇಗೆ ಇದೆ ಎಂಬ ಚಿಂತನೆ ಅದು ಅಪೂರ್ಣವಾಗಿಯೇ ಉಳಿಯುತ್ತದೆ.  ಮನಸ್ಸಿಗೆ ಚಿಂತಿಸಬೇಕು, ಆ ಅನುಭವ ಪಡೆಯಬೇಕು ಎಂಬ ಹಂಬಲವಿರುತ್ತದೆ. ಆದರೆ....ಇದು ಕೇವಲ ಉದಾಹರಣೆ.

ಹೊಟ್ಟೆಗಾಗಿ ಏನೂ ಮಾಡಲು ಸಾಧ್ಯವಿರುವ ಮನುಷ್ಯ ಹೃದಯಕ್ಕಾಗಿ ಏನು ಮಾಡುವುದಿಲ್ಲ. ಒಂದು ಶುದ್ದ ಉಸಿರಾಟವನ್ನಷ್ಟೇ ಹೃದಯ ಬಯಸುತ್ತದೆ. ಆದರೆ ಅದನ್ನು ಒದಗಿಸುವುದಕ್ಕೆ ಆತನಿಗೆ ಸಾಧ್ಯವಾಗುವುದಿಲ್ಲ.ಬದಲಿಗೆ ಧೂಮಪಾನ ಒದಗಿಸುತ್ತಾನೆ. ನಾಲಿಗೆ ಚಪಲಕ್ಕೊ ಹೊಟ್ಟೆ ಹಸಿವಿಗೋ ಹೃದಯ ಬೇಡ ಎಂದರೂ ತಿಂದು ಬಿಡುತ್ತಾನೆ. ಹೀಗೆ ಹೃದಯ ಶೂನ್ಯನಾಗುತ್ತಾನೆ. ಇಂದು ವಿಶ್ವ ಯೋಗ ದಿನ ಇಂದಿನ ಧ್ಯೇಯವಾಕ್ಯವೇ ಅದು ಹೃದಯಕ್ಕಾಗಿ ಯೋಗ. ಈಗಿನ ಜೀವನ ಶೈಲಿಯಲ್ಲಿ ಹೃದಯ ಬಡಿದುಕೊಳ್ಳುವುದೇ ಒಂದು ಯೋಗ. ಹಾಗಾಗಿ ನಮ್ಮ ಸ್ವಂತ ಹೃದಯಕ್ಕಾಗಿಯಾದರು ಒಂದಿಷ್ಟು ಉಸಿರಾಟವನ್ನು ಒದಗಿಸುವುದು ಆದ್ಯಕರ್ತವ್ಯವಾಗಿದೆ.

ಯೋಗ ಎಂದರೆ ಅದು ವ್ಯಾಯಾಮವಲ್ಲ, ಕೇವಲ ಉಸಿರಾಟವೂ ಅಲ್ಲ, ಆಹಾರ ನಿಬಂಧನೆಯೂ ಅಲ್ಲ. ಅದೊಂದು ಜೀವನ ಶೈಲಿ. ಅದನ್ನು ಅನುಸರಿಸುತ್ತಿದ್ದರೆ ಎಲ್ಲವೂ ಅದಾಗಿ ಹೊಸ ಚಿಂತನೆಗೆ ಅವಕಾಶವಾಗುತ್ತದೆ. ನಿಜವಾದ ಯೋಗಾಭ್ಯಾಸಿಗೆ , ಬೇಡದೆ ಇದ್ದದ್ದು ತಿನ್ನುವುದಕ್ಕೆ ಮನಸ್ಸಾಗುವುದಿಲ್ಲ. ಬೇಡದೇ ಇದ್ದದ್ದು ಮಾತನಾಡುವುದಕ್ಕೆ ಮನಸ್ಸಾಗುವುದಿಲ್ಲ. ಚಿಂತನೆ ಪರಿಶುದ್ಧವಾಗಿ ಜೀವನವನ್ನು ನೋಡುವ ರೀತಿಯೇ ಹೊಸತನದಿಂದ ಕೂಡಿರುತ್ತದೆ. ದಿನ ಕಳೆದಂತೆ ಅದು ನಮ್ಮ ಕೈಯಿಂದ ಜಾರಿ ಹೋಗುತ್ತದೆ. ಇಂದಿನ ಈ ಕ್ಷಣ ಈ ದಿನ ನಮ್ಮದು ಎಂಬ ಭಾವದಲ್ಲಿ ಈ ಕ್ಷಣ ಈ ದಿನ ಹೊಸ ಜೀವನ ಆರಂಭಿಸಬೇಕು.
 ಹತ್ತು ಹನ್ನೆರಡು ವರ್ಷದ ಹಿಂದೆ ಯೋಗಾಭ್ಯಾಸ ಆರಂಭಿಸಿದ ನನ್ನ ಅನುಭವವೂ ಅದೇ, ಇಷ್ಟುವರ್ಷ ನಾನು ಬದುಕಿದ್ದರೂ ಮನುಷ್ಯನಂತೆ ನಾನು ಬದುಕಿದ್ದು ಈ ಹನ್ನೆರಡು ವರ್ಷ ಅಂತ ಅನ್ನಿಸುತ್ತದೆ.  ಮೊನ್ನೆ ತಿರುಪತಿಯ ಬೆಟ್ಟ ಹತ್ತುವುದಕ್ಕೆ ಹೋಗಿದ್ದೆ. ಒಂದಿಷ್ಟು ಸುಸ್ತಾಗದೆ ಬೆಟ್ಟದ ತುದಿಗೆ ಏರಿದ್ದೆ. ಹತ್ತುವ ಮೊದಲು ಇದ್ದ ಆತಂಕ ಮೆಟ್ಟಲು ಏರುತ್ತಿದ್ದಂತೆ ಅದು ಕಡಿಮೆಯಾಗುತ್ತಾ ಆತ್ಮ ವಿಶ್ವಾಸ ಹೆಚ್ಚುತ್ತಾ ಹೋಯಿತು. ಮನೆಯವರೆಲ್ಲರೂ ಬರುವ ಮೊದಲೇ ನಾನು ಬೆಟ್ಟದ ಮೇಲೆ ಹತ್ತಿ ವಿಜಯದ ನಗೆಯನ್ನು ಚೆಲ್ಲಿದ್ದೆ. ನನಗಿಂತ ವೇಗವಾಗಿ ಹತ್ತುವವರು ಇದ್ದರೂ ನನ್ನ ದೇಹ ನನ್ನ ಆತ್ಮವಿಶ್ವಾಸ ಅದು ನನ್ನದೇ.

No comments:

Post a Comment