Saturday, March 28, 2020

ವೈರಸ್…..ಅರಸು…


ಜಿಮ್ ಇಲ್ಲ ಪಾರ್ಕ್ ಇಲ್ಲರಸ್ತೆಯಲ್ಲಿ ವಾಕಿಂಗ್ ಮಾಡುವ ಹಾಗಿಲ್ಲ…..ಆದರೆ ಮನೆಯಲ್ಲೇ ಯೋಗಾಭ್ಯಾಸಕ್ಕೆ ಇದಾವುದೂ ಅಡ್ಡಿಯಾಗುವುದಿಲ್ಲ. ನಾವು ಮಲಗಿದಷ್ಟು ಜಾಗವಿದ್ದರೂ ಸಹ ಯೋಗಾಭ್ಯಾಸ ಮಾಡಿಕೊಳ್ಳಬಹುದು.  ಮತ್ತೊಂದು  ಯೋಗಾಭ್ಯಾಸ ಮಾಡಿದರೆ ಯಾವ ವೈರಸ್ ಭಯವೂ ಇರುವುದಿಲ್ಲ. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತಲೂ ರೋಗ ಬಾರದಂತೆ ತಡೆಗಟ್ಟುವುದು ಮನುಷ್ಯನಾದವನು ಮಾಡಬಹುದಾದ ಪ್ರಾಣಿಗಳು ಮಾಡಲಾಗದಂತಹ ಕೆಲಸ. ಆದರೂ  ರೋಗಬಾಧೆಗೆ ಮನುಷ್ಯ ತುತ್ತಾಗುತ್ತಾನೆ ಎಂದಾದರೆ ಅದು ಮನುಷ್ಯನ ಜೀವನ ಶೈಲಿಯೇ ಕಾರಣ.
ದಾರಿಯಲ್ಲಿ ಹೋಗುವಾಗ ಯಾವುದೋ ಒಂದು ವಿಚಿತ್ರ ವಸ್ತು ಕಣ್ಣಿಗೆ ಬೀಳುತ್ತದೆ. ಅದನ್ನು ಕೈಗೆತ್ತಿ ಅದಕ್ಕೊಂದು ಹೆಸರು ಕೊಟ್ಟುಬಿಡುತ್ತೇವೆ. ಯಾವಾಗ ಕಣ್ಣಿಗೆ ಬಿತ್ತೋ ಆಗಿನಿಂದ ಅದರ ಅಸ್ತಿತ್ವ ಎಂದು ತಿಳಿದುಕೊಳ್ಳುತ್ತೇವೆ. ಎಷ್ಟೋ ಸಲ ಅದೇ  ಹಾದಿಯಲ್ಲಿ ಹೋಗುವಾಗ ಅದು ನಮ್ಮ ಕಾಲಿಗೆ ತಾಗಿರುತ್ತದೆ. ನಮಗೆ ನೋವಾದರೂ ನಮ್ಮ ಗಮನ ಅದರತ್ತ ಹೋಗುವುದಿಲ್ಲ. ಆದರೆ ಒಂದು ಸಲ ಜೋರಾಗಿ ತಾಗಿ ನೋವು ಸಹಿಸದೆ ಇದ್ದಾಗ ಅದನ್ನು ಗಮನವಿಟ್ಟು ನೋಡುತ್ತೇವೆ. ಹಿಂದೇ ಅದೆಷ್ಟು ಸಲವಾದರೂ ಆಗ ಪರಿಣಾಮ ಇಲ್ಲದೇ ಇದ್ದುದರ ಬಗ್ಗೆ ಯೋಚಿಸುವುದಿಲ್ಲ.
ಈ ಜಗತ್ತಿನಲ್ಲಿ ಮನುಷ್ಯ ಸೃಷ್ಟಿಸಿದ ವಸ್ತು ಯಾವುದೂ ಇಲ್ಲ ಅಂತ ಜ್ಞಾನಿಗಳು ಹೇಳುತ್ತಾರೆ. ಯಾಕೆ? ಜಗತ್ತಿನ ಆರಂಭ ಯಾವಾಗ ಆಯಿತೋ ಆವಾಗಿನಿಂದಲೇ ವಸ್ತುಗಳು ಇದ್ದವು. ಮನುಷ್ಯ ಅದನ್ನು ಗುರುತಿಸುವಾಗಲೇ ಅದರ ಅಸ್ತಿತ್ವದಿಂದ ಹುಟ್ಟಿಕೊಂಡಿತು.
ಸದ್ಗುರು ಪ್ರವಚನದಲ್ಲಿ ಒಂದು ಮಾತು ಹೇಳಿದ್ದು ಅತ್ಯಂತ ಇಷ್ಟವಾಗುತ್ತದೆ. ಯಾವುದೇ ವೈರಸ್ ಆಗಲಿ ಮನುಷ್ಯ ಪ್ರಾಣಿಗಳು ಹುಟ್ಟುವಾಗ ಅವುಗಳೂ ಹುಟ್ಟಿತ್ತು. ಅವುಗಳ ಅಸ್ತಿತ್ವ ಪ್ರಕಟವಾಗುತ್ತದೆ ಎಂದರೆ ಅದು ಮನುಷ್ಯನ ಕೊರತೆ. ಮೊದಲು ಈ ವೈರಸ್ ಗಳು ಇದ್ದರೂ ಋಷಿ ಮುನಿಗಳು, ನಮ್ಮ ಹಿರಿಯರು ಬದುಕುತ್ತಿದ್ದರು. ಅವರ ದೇಹದಲ್ಲಿ ಆ ಚೈತನ್ಯವಿತ್ತು. ಆ ಜೀವನ ಶೈಲಿಯೇ  ವೈರಸ್ ಗಳನ್ನು ದೂರವಿಡುತ್ತದೆ. ದೇಹ ರೋಗನಿರೋಧಕ ಶಕ್ತಿ ಎಲ್ಲವನ್ನು ದೂರವಿಡುತ್ತದೆ. ಕಾಲ ಬದಲಾದಂತೆ ಮನುಷ್ಯ ಬದಲಾದ. ತನ್ನ ಜೀವನ ಶೈಲಿಯನ್ನು ಬದಲಾಯಿಸಿದ. ನಿದ್ರೆ , ಆಹಾರ  ಕುಟುಂಬ ಜೀವನ ಎಲ್ಲವು ಬದಲಾಗಿಬಿಟ್ಟಿತು. ಅದುವರೆಗೂ ಸುಪ್ತವಾಗಿದ್ದ ವೈರಸ್ ಗಳು ಪ್ರಕಟವಾದವು.
ಈ ಚಿಂತನೆಗಳಲ್ಲಿ ಬಹಳಷ್ಟು ಅರ್ಥವಿದೆ. ನಮ್ಮ ಚಿಂತನೆಗಳು ಬದಲಾಗಬೇಕಿದೆ. ಪ್ರಪಂಚ ಬದಲಾಗಿದೆ ಅಂತ ಸಮಾಧಾನ ಪಟ್ಟುಕೊಂಡು ನಮ್ಮ ತಪ್ಪುಗಳನ್ನು ಪ್ರಪಂಚದ ಮೇಲೆ ಹಾಕುತ್ತೇವೆ. ಆದರೂ ನಮ್ಮ ಜೀವನ ಬದಲಾವಣೆಯಾಗುವುದಿಲ್ಲ.
            ಇದೀಗ ಪ್ರಪಂಚ ಎಂದೂ ಕಂಡರಿಯದ ವೈರಸ್ ಬಾಧೆಗೆ ತುತ್ತಾಗಿದೆ. ಸರಕಾರ ನಿಷೇಧಾಜ್ಞೆ ಹೇರಿ ವೈರಸ್ ಬಾಧೆಯನ್ನು ಎದುರಿಸುವುದಕ್ಕೆ ಪ್ರಯತ್ನಿಸುತ್ತದೆ. ವಿಚಿತ್ರವೆಂದರೆ ಈ ಪ್ರಯತ್ನಕ್ಕೆ ವೈರಿಯಾಗುವುದು ಯಾವುದೇ ವೈರಸ್ ಅಲ್ಲ. ಮನುಷ್ಯನೇ ಪ್ರಥಮ ವೈರಿ!! ಇದನ್ನು ಮೀರಿ ಹೊರಬರುತ್ತಾರಲ್ಲ ಅವರು ಖಂಡಿತವಾಗಿಯೂ ಕೊರೋನಾದಂತೆ ಜನಜೀವನಕ್ಕೆ ವೈರಿಗಳು. ಭೂಮಿಯಲ್ಲಿ ಬದುಕುವುದಕ್ಕೆ ಹಕ್ಕು ಕಳೆದುಕೊಂಡಬರು.  ಅಚ್ಚರಿಯಾಗುತ್ತದೆ.  ರಸ್ತೆಗೆ ಇಳಿಯುವುದು ಬೇಡ. ತೀರ  ಅವಶ್ಯ ಇದ್ದರೆ ಮನೆಯಿಂದ ಒಬ್ಬ, ಅದೂ ಯುವಕರು ಮಾತ್ರ ರಸ್ತೆಗೆ ಇಳಿಯಬೇಕು. ನಮ್ಮ ಆವಶ್ಯಕತೆಗಳೂ ಅಷ್ಟೇ, ಆಡಂಬರದ ವಸ್ತುಗಳ ಬೇಡಿಕೆಯಾಗಬಾರದು. ಮನೆಯಲ್ಲಿ ತೀರಾ ಅವಶ್ಯವಿರುವ  ಅಕ್ಕಿ ಗೋಧಿ ಹಣ್ಣು ಹೀಗೆ ಜೀವ ಉಳಿಸುವ ವಸ್ತುಗಳಾಗಬೇಕು. ಜಂಕ್ ಪುಡ್ ಕಾಪಿ ಚಹ ಇಲ್ಲದಿದ್ದರೂ ಬದುಕಬಹುದು..  ಮಿತವಾದ ಆಹಾರ ಸಾತ್ವಿಕ ಆಹಾರ ಬದಲಾದ ನಮ್ಮ ಜೀವನ ಶೈಲಿಯನ್ನು ಪುನಃ ಹಳಿಗೆ ತಂದು ನಿಲ್ಲಿಸಬಹುದು. ಯೋಗಿಕ್ ಶರೀರ ನಮ್ಮದಾಗಬಹುದು. ಸಿಗರೇಟು ಮದ್ಯ ಇವುಗಳಿಂದ ದೂರವಿದ್ದು ಮನೆಯವರೊಂದಿಗೆ ಬೆರೆಯುವುದಕ್ಕೆ ದೈವ ಒದಗಿಸಿಕೊಟ್ಟ ಸನ್ನಿವೇಶ ಇದು. ಮನುಷ್ಯ ಹೌದು ಅಂತಾದರೆ ಇದನ್ನೆಲ್ಲ ಉಪಯೋಗಿಸಿಕೊಳ್ಳಬೇಕು.
            ಇಷ್ಟೆಲ್ಲಾ ಆದರೂ ಕೆಲವರು ರಸ್ತೆಯಲ್ಲಿ ಅಡ್ಡಾತ್ತಿದ್ದಾರೆ. ಮನೆಯಲ್ಲಿ ಕಾಲ ಕಳೆಯುವುದು ಅವರಿಗೆ ದುಸ್ತರ. ಇವರು ಸಮಾಜಕ್ಕೆ ಭಾರವಾಗಬೇಕಾದವರು. ಇವರಿಗೆ ಸಮಯ ಉಪಯೋಗಿಸಿಕೊಳ್ಳುವ ಹವ್ಯಾಸಗಳು, ಪುಸ್ತಕ ಓದು, ಲೇಖನ, ಒಳ್ಳೆಯ ಸಿನಿಮಾ ನಾಟಕ (ಮನೆಯಲ್ಲೇ ಸಿಗುವ) ಸಂಗೀತ ಆಸ್ವಾದನೆ ಇಂತಹ ಹವ್ಯಾಸಗಳು ಇವರಿಗಿಲ್ಲ. ಹಾಗಾದುದರಿಂದಲೇ ಮನೆಯಲ್ಲಿ ಕಾಲ ಹರಣ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಮದ್ಯ, ಸಿಗರೇಟು ತಾಸಿಗೊಂದು ಕಾಪಿ ಚಹ ಹೀಗೆ ಬೇರೆ ಪ್ರಪಂಚವೇ ತಿಳಿಯದವರು ಸಮಾಜಕ್ಕೆ ಇವರು ಭಾರ. ವೈರಸ್ ನಂತೆ.....ಸಮಾಜ ಇವರನ್ನು ದೂರವಿಡಬೇಕು.
            ಹವ್ಯಾಸಗಳೂ ಹಾಗೆ ಅದು ಮಿತಿಯಲ್ಲಿ ಇರಬೇಕು. ಹಾಗೆ ನೋಡಿದರೆ ಜೀವನದಲ್ಲಿ ಎಲ್ಲವೂ ಮಿತವಾಗಿರಬೇಕು. ಮಿತಿ ಮೀರಿದ್ದು ಯಾವುದಾದರೂ ಅದು ರೋಗವಾಗುತ್ತದೆ. ವ್ಯಾಧಿಯಾಗಿ ನಮ್ಮನ್ನೂ ಮನಸ್ಸನ್ನು ಕಾಡುತ್ತದೆ. ದೇಹಾರೋಗ್ಯಕ್ಕೆ ವ್ಯಾಯಾಮ ಮುಖ್ಯ ಅಂದುಕೊಂಡು ಅದನ್ನೆ ದಿನ ಪೂರ್ತಿ ಮಾಡಿದರೆ...? ಅದು ವ್ಯಾಧಿಯೇ. ಯೋಗಾಭ್ಯಾಸದಲ್ಲಿ ಶವಾಸನ ಮಾಡುವಾಗ ಅದಕ್ಕೂ ಸಮಯ ನಿಗದಿ ಇದೆ. ಅದನ್ನು ಮೀರಿ ಮಾಡಿದರೆ ಅದು ಮಾನಸಿಕ ವ್ಯಾಧಿಯಾಗುತ್ತದೆ.  ಹೀಗೆ ಮನುಷ್ಯ ತನ್ನ ಮಿತಿಯನ್ನು ಮರೆತಿದ್ದಾನೆ. ಪ್ರತಿಯೊಂದರಲ್ಲೂ ಅತ್ಯಾಗ್ರಹ, ಅತೃಪ್ತಿ. ಹೊಸತರ ಅನ್ವೇಷಣೆಯಲ್ಲಿ ಹಳೆಯದರ ಅಸಡ್ಡೆ. ಜೀವನ ಬದಲಾಗುತ್ತದೆ. ಪ್ರಕೃತಿ ಪಾಠ ಕಲಿಸುವುದಕ್ಕೆ ಸಿದ್ಧವಾಗುತ್ತದೆ. ಆದರೂ ನಾವುಗಳು ಸಿದ್ಧವಿಲ್ಲದಂತೆ ಪಿಶಾಚ ಪ್ರವೃತ್ತಿಯನ್ನು ತೋರುತ್ತೇವೆ.  ಸಮಾಜಕ್ಕೆ ವೈರಸ್ ಗಳು ನಾವಾಗುತ್ತೇವೆ. ಆವಾಗ ಮನುಷ್ಯತ್ವವೇ ಒಂದು ರೋಗವಾಗಬಹುದು.
           




No comments:

Post a Comment