ಬಣ್ಣ ಬಣ್ಣದ ಇಸ್ಪೀಟ್ ಎಲೆಗಳೆಂದರೆ ಬಾಲ್ಯದಲ್ಲಿ ಬಹಳ ಇಷ್ಟ. ಆದರೆ ಕೈಯಿಂದ ಮುಟ್ಟುವುದಕ್ಕೆ ಭಯ. ನಮ್ಮ ಕೈಯಲ್ಲಿ ಅದನ್ನು ಕಂಡರೆ ಹಿರಿಯರು ಬೈಯುತ್ತಿದ್ದರು. ಇಸ್ಪೀಟ್ ಎಲೆಗಳ ಮೇಲಿನ ರಾಜಾ ರಾಣಿ ಗುಲಾಮ ಬಣ್ಣದ ಚಿತ್ರಗಳು ಅದೆಷ್ಟು ಸುಂದರವಾಗಿ ಕಾಣುತ್ತಿದ್ದುವೆಂದರೆ, ದೊಡ್ಡವರೆಲ್ಲ ತೋಟದ ಮನೆಯಲ್ಲಿ ಸುತ್ತಾಗಿ ಕುಳಿತು ಮಧ್ಯದಲ್ಲಿ ದೊಡ್ಡದಾಗಿ ಚಿಮಿಣಿ ದೀಪವೋ, ಪೆಟ್ರೋ ಮೇಕ್ಸ್ ಉರಿಸಿ ಇಸ್ಪೀಟ್ ಆಡುತ್ತಿದ್ದರೆ ನಾವುಗಳು ಅವರ ಹಿಂದೆ ಕದ್ದು ಕುಳಿತು ಹೆದರಿ ಹೆದರಿ ಇಣುಕಿ ನೋಡುತ್ತಿದ್ದೆವು. ಹಲವು ಸಲ ಆಟೀನ್ ಗುಲಾಮ ಅಂತ ಕ್ರಿರುಚಿ ನಮ್ಮ ಜ್ಞಾನವನ್ನು ತೋರಿಸಿ ಪೆಟ್ಟು ತಿಂದದ್ದೂ ಇದೆ. ಕತ್ತಲೆಯಲ್ಲಿ ಅವಿತು ನೋಡುವ ನಮ್ಮ ಬಗ್ಗೆ ದೊಡ್ಡವರಿಗೆ ಅರಿವೇ ಇಲ್ಲವೇನೋ ಅಂತ ನಾವು ತಿಳಿದಿದ್ದರೆ ಸ್ವಲ್ಪ ಹೊತ್ತಿನಲ್ಲೇ ಚಹ, ಬೀಡಿ ಇನ್ನೆಂತದೋ ತಾ ಅಂತ ನಮ್ಮತ್ತ ತಿರುಗಿ ಹೇಳಿದಾಗ ಆಶ್ಚರ್ಯವಾದರೂ ಎದುರಿಗೆ ಕುಳಿತು ನೋಡುವುದಕ್ಕೆ ಪರವಾನಿಗೆ ಅಂತ ತಿಳಿದು ಕತ್ತಲೆಯಲ್ಲಿ ಬುರ್ ಬುರ್ ಅಂತ ಬಸ್ಸು ಬಿಟ್ಟುಕೊಂಡು ಓಡಿ ಹೋಗಿ ಹೇಳಿದ ಸಾಮಾನು ಕ್ಷಣದಲ್ಲೇ ತಂದುಕೊಟ್ಟು ಎದುರೇ ಕುಳಿತು ಬಿಡುತ್ತಿದ್ದೆವು. ಸೋತು ಸುಣ್ಣುವಾಗಿ ಹ್ಯಾಪ್ ಮೋರೆ ಹಾಕಿ ಯಾರಾದರೂ ಎದ್ದು ಹೋದರೆ ಅಲ್ಲಿ ಕುಳಿತು ಕೆಳಗೆ ಬಿದ್ದ ಎಲೆಗಳು ಚೆನ್ನಾಗಿ ಅಟ್ಟಿ ಇಡುವುದಕ್ಕೆ ಸಹಕರಿಸುತ್ತಿದ್ದೆವು. ಹಲವು ಸಲ ಮನೆಯೊಳಗಿದ್ದ ಹೆಂಗಸರು ಮಾತ್ರ ಬೈಯುತ್ತಿದ್ದರು. ಆದರೂ ಇಸ್ಪೀಟ್ ನ ಸುಂದರ ಜುಗಾರಿ ರಂಗ ನಮಗಂತೂ ಮಜವನ್ನು ಕೊಡುತ್ತಿತ್ತು.
ಅಂದು ಜುಗಾರಿಗೆ ಹಲವರು ಎಲ್ಲವನ್ನು ಕಳೆದುಕೊಂಡು ಸ್ವಂತ ಅಂಗಡಿಯೋ ಹಸುವೋ ಮಾರಾಟ ಮಾಡಿ ಸಾಲದಲ್ಲಿ ಮುಳುಗಿದ್ದನ್ನು ಕಣ್ಣಾರೆ ಕಂಡಿದ್ದೆವು. ಇದು ಅರಿವಿಗೆ ಬರಬೇಕಿದ್ದರೆ ಸ್ವಲ್ಪ ವಯಸ್ಸು ಬೆಳೆಯಬೇಕಾಗಿತ್ತು. ಆಗ ಜುಗಾರಿ ಎಂಬುದು ಎಷ್ಟು ಕೆಟ್ಟದ್ದು ಎಂಬುದು ಅರಿವಿಗೆ ಬಂದರೂ ದುಡ್ಡು ಹಾಕದೇ ಆಡಬಹುದಲ್ವೇ ಅಂತ ಯೋಚಿಸುತ್ತಿದ್ದೆವು. ಹೊಗೆ ಸೊಪ್ಪು ಇಲ್ಲದ ತಾಂಬೂಲದಂತೆ ನಮ್ಮವರಿಗೆ ಅದು ರುಚಿಸುವುದೇ ಇಲ್ಲ. ಆದರೂ ಜುಗಾರಿ ಅಂತ ತಿಳಿಯದೇ ಇದ್ದರೆ ಇಸ್ಪೀಟ್ ಆಟದ ಆಕರ್ಷಣೆ ಅದ್ಭುತ. ಕೇವಲ ಎಲೆಗಳಲ್ಲಿ ಆಡಬಹುದಾದ ಬುದ್ದಿ ಮತ್ತು ಅದೃಷ್ಟವನ್ನು ಜತೆಯಾಗಿಸಿ ಆಡುವ ಈ ಆಟ ಇಂದಿಗೂ ಒಂದು ಸೋಜಿಗದ ವಿಷಯ. ಆದರೂ ಜುಗಾರಿಗೆ ಮಾನ್ಯತೆ ಇಲ್ಲ ಬಿಡಿ. ಆಗಲೂ ಎಲ್ಲಿಯೋ ಗುಡ್ಡಗಾಡಿನ ತೋಟದ ಮನೆಯಲ್ಲಿ ಆಡುತ್ತಿದ್ದರೂ ಸಹ ಪೋಲೀಸರ ಭಯ ಇದ್ದೇ ಇರುತ್ತಿತ್ತು. ಜುಗಾರಿ ಎಂದಿಗೂ ಕೆಟ್ಟದೇ. ಆದರೆ,
ಆಧುನಿಕ ಜಗತ್ತು ಹೇಗಿದೆ ನೋಡಿ. ಕೊರೋನ ಬಂತು , ಯಾವುದೋ ಬ್ಯಾಂಕ್ ಅಥವಾ ಕಂಪೆನಿ ಪಲ್ಟಿ ಹೊಡೆಯಿತು ಅಂತ ದೇಶದ ಅಥವಾ ಜಗತ್ತಿನ ಶೇರ್ ಮಾರ್ಕೇಟ್ ಅಲ್ಲೋಲ ಕಲ್ಲೋಲವಾಗುತ್ತದೆ. ಮಿರಿ ಮಿರಿ ಮಿರುಗುವ ಕಂಪ್ಯೂಟರ್ ಮುಂದೆ ತಲೆಗೆ ಕೈ ಇಟ್ಟು ಕುಳಿತುಕೊಳ್ಳುವ ಹೂಡಿಕೆದಾರರು ಮುಳುಗಿದ ಜಗತ್ತಿನಲ್ಲಿ ಈಜಲು ಪ್ರಯತ್ನ ಮಾಡುತ್ತಾರೆ. ಇಷ್ಟು ಸಮಯವಾದರೂ ಇಲ್ಲಿ ಗೆದ್ದವರನ್ನು ನಾನು ಇದುವರೆಗೂ ನೋಡಿಲ್ಲ. ಕಾರಣವೆಂದರೆ ಇದು ಪಕ್ಕಾ ಅದೃಷ್ಟದ ವ್ಯವಹಾರ. ಇದು ಮಾನ್ಯತೆಯ ಛತ್ರಿ ಹಿಡಿದುಕೊಂಡು ಹೇಳುವುದಾದರೂ ಬುದ್ಧಿವಂತರು ಹೇಳುವಂತೆ ಇದು ಪಕ್ಕಾ ಜುಗಾರಿ ಸ್ವಾಮಿ. ಅಂದಿನ ಇಸ್ಪೀಟ್ ಆಟಕ್ಕೂ ಇದಕ್ಕೂ ಏನು ವೆತ್ಯಾಸ ಉಂಟೋ ಅಂತ ಅಚ್ಚರಿಯಾಗುವುದುಂಟು. ಇಲ್ಲಿನ ಸೋಲು ಗೆಲುವು ಲಾಭ ನಷ್ಟಕ್ಕೆ ಪಕ್ಕಾ ಲೆಕ್ಖ ಉಂಟು, ಅಲ್ಲದಿದ್ದರೆ ಇದು ಪಕ್ಕಾ ಬೀದಿ ಬದಿಯ ಜುಗಾರಿ. ಆದರೂ ವಿಚಿತ್ರ ಎಂದರೆ, ದೇಶ ದೇಶಗಳ ಮಾನದಂಡ ಈ ಶೇರು ಮಾರುಕಟ್ಟೆಯ ವ್ಯವಹಾರ. ಎಂತಹ ಮುಂದುವರಿದ ಪ್ರಜ್ಞಾವಂತ ದೇಶವಾದರು ಬಲಿಷ್ಠವಾದ ಆರ್ಥಿಕತೆಗೆ ಅವಲಂಬಿಸಿರುವುದು ಇದೇ ಈ ಜುಗಾರಿ ಕಟ್ಟೆಯನ್ನು ಹೇಳಿದರೆ ಅಚ್ಚರಿಯಿಲ್ಲ. ಅಂದು ಸೊಂಟಕ್ಕೆ ಬೈರಾಸು ಸುತ್ತಿ ತಲೆಗೆ ಮುಂಡಾಸು ಸುತ್ತಿ , ಬಾಯಿಯಲ್ಲಿ ಬೀಡಿ ಇಟ್ಟು ಆಡುತ್ತಿದ್ದ ಇಸ್ಪೀಟ್ ಇಂದು ದೇಶದದ ಬಲಿಷ್ಠ ಕಂಪೆನಿಗಳೇ ಆಡುತ್ತಿವೆ. ಹಾಗೊಂದು ವೇಳೆ ಆಡದೇ ಇದ್ದರೆ ದೇಶದ ಆರ್ಥಿಕತೆ, ಜೆಡಿಪಿ ಕುಸಿದು ಬಿತ್ತು ಅಂತನೇ ಅರ್ಥ. ಏನು ಅಚ್ಚರಿಯಲ್ಲವೇ
No comments:
Post a Comment