Saturday, December 25, 2021

ಪ್ರತ್ಯೇಕತೆಯ ದಳ್ಳುರಿ

             ಅಮೇರಿಕದಲ್ಲಿ ಅಥವಾ ಲಂಡನ್ ನಲ್ಲಿ ಹೋಗಿ ನಾವು ವ್ಯಾಪಾರ ವಹಿವಾಟು ಮಾಡಬಹುದೇನೋ ಆದರೆ ಮಹಾರಾಷ್ಟ್ರಕ್ಕೆ ಹೋಗಿ ಕ್ಷೇಮವಾಗಿ ಭಯವಿಲ್ಲದೆ ಅಲ್ಲಿ ವ್ಯಾಪಾರ ಮಾಡಬಹುದೇ? ಇನ್ನು ಅನುಮಾನ.  ಮಹಾರಾಷ್ಟ್ರ ಭಾರತದಲ್ಲಿದೇಯೋ ನಾವು ಭಾರತೀಯರೋ ಎಂದು ಮುಟ್ಟಿ ಮುಟ್ಟಿ ನೋಡಬೇಕಾದ ದಿನಗಳು ಹತ್ತಿರವಾಗುತ್ತಿದೆ.  ಬೆಳ್ಳಂ ಬೆಳಿಗ್ಗೆ ಹೊತ್ತಿ ಉರಿಯುವ ಬೆಳಗಾವಿಯ ಸೀಮೆ ನೋಡಿದಾಗ ಅನಿಸುವುದಿದು. ಸದಾ ಕೆಂಡದಂತೆ ಆರದ ಬೆಂಕಿ ಇದು. ಎಂ ಇ ಎಸ್ ಪುಂಡಾಟಿಕೆ ಅಂತಲೇ ಮಾಧ್ಯಮದಲ್ಲಿ ಬರುತ್ತದೆ. ಅವರು ಕನ್ನಡ ಧ್ವಜವನ್ನು ಸುಟ್ಟು ಹಾಕುತ್ತಾರೆ, ಯಾವುದೋ ಪ್ರತಿಮೆಗೆ  ಮಸಿ ಬಳಿಯುತ್ತಾರೆ, ಕನ್ನಡ ಫಲಕಗಳನ್ನು ಒಡೆದು ಹಾಕುತ್ತಾರೆ, ಸಾರಿಗೆ ಬಸ್ಸಿಗೆ ಕಲ್ಲು ಎಸೆಯುತ್ತಾರೆ, ಅದಕ್ಕೆ ಪ್ರತಿಕಾರವಾಗಿ  ಕೂಗು ಏಳುತ್ತದೆ ಬೆಳಗಾವಿ ಗಡಿ ಮುಚ್ಚಿ ಬಿಡಿ. ಸಂಘಟನೆ ನಿಷೇಧ ಮಾಡಿ.  ಯಾಕೆ ಬೆಳಗಾವಿ ಗಡಿ ಪಾಕಿಸ್ತಾನದ ಗಡಿಯಂತಾಗುತ್ತದೆ. ದೂರದ ಪಾಕಿಸ್ತಾನದ ಗಡಿಯಾದರೂ ತೆರೆದಿಡಬಹುದು, ನಮ್ಮ ಬೆಳಗಾವಿ ಗಡಿ ಮುಚ್ಚಬೇಕು. ಅರೇ ನಾವು ಎಲ್ಲಿದ್ದೇವೆ ಭಾರತದಲ್ಲೇ? ಅನುಮಾನ ಹುಟ್ಟುವುದಿಲ್ಲವೇ? ನಮ್ಮಲ್ಲಿರುವುದು ಕಾರಕ್ಕೆ ಪ್ರತಿಕಾರ.  ಇದರ ಪರಿಣಾಮ ಏನೋ ಕಲ್ಪಿಸುವುದಕ್ಕೆ ಅಸಾಧ್ಯ. 

    ಯಾರೋ ಕಿಡಿಗೇಡಿಗಳು ಪುಂಡರು. ಧ್ವಜವನ್ನು ಸುಟ್ಟು ಹಾಕಿದ್ದಾರೆ, ರಾಯಣ್ಣ ಪ್ರತಿಮೆ ಧ್ವಂಸ ಮಾಡಿದ್ದಾರೆ,  ಸರಿ ಪ್ರತಿಯಾಗಿ ಇಲ್ಲಿ ಶಿವಾಜಿ ಪ್ರತಿಮೆ ಭಗ್ನವಾಗುತ್ತದೆ. ಯಾವುದು ಇವುಗಳೆಲ್ಲ. ನಮ್ಮದೇ ದೇಹದ ಅಂಗಗಳಲ್ಲವೇ?   ಒಡ ಹುಟ್ಟಿದ ದಾಯಾದಿಗಳು ಕೈ ಕೈ ಮಿಲಾಯಿಸಿದಾಗ ಹೆತ್ತ ಅಮ್ಮನನ್ನು ನೆನೆಯುವುದಿಲ್ಲ ನಾವು.  ಹೆಚ್ಚು ತಪ್ಪು ಯಾರದ್ದು ಅಂತ ವಿಮರ್ಶಿಸುವ ಹಂತಕ್ಕೆ ಬಂದು ಬಿಟ್ಟಿದ್ದೇವೆ. ಯಾಕೆ ನಮ್ಮಲ್ಲಿ ಸೌಹಾರ್ದತೆ ಇಲ್ಲ. ಮಾತೆತ್ತಿದರೆ ನಾವು ಭಾರತೀಯರು  ಒಂದು. ಆದರೆ ಭಾಷಾ ವಿಷಯಕ್ಕೆ ಬಂದಾಗ ಎಲ್ಲವು ಮರೆತು ಹೋಗುತ್ತದೆ. ಭಾಷೆ ಎಂದರೆ ಅಷ್ಟೊಂದು ಕಠಿಣ ಯಾಕಾಗುತ್ತದೆ? 

        ಇದೀಗ ಕೂಗು ಎಂ ಇ ಎಸ್ ಬ್ಯಾನ್ ಮಾಡಿ. ಹೌದು, ಸಮಾಜ ಘಾತುಕವಾದವುಗಳನ್ನು ಕಿತ್ತೊಗೆಯಬೇಕು. ಆದರೆ ಅದೊಂದೇ ಪರಿಹಾರವೇ? ಯಾವುದೋ ಸಂಘಟನೆಯನ್ನು ನಿಷೇಧಿಸಿದಾಗ ಕೇವಲ ಹೆಸರನ್ನಷ್ಟೇ ನಾವು ನಿಷೇಧಿಸುವುದು. ಅದರಲ್ಲಿರುವ ಮಂದಿ ಹಾಗೇ ಅದೇ ಮನೋಭಾವದಲ್ಲಿರುತ್ತಾರೆ. ನಾವು ಅಪರಾಧಿಯನ್ನು ನಾಶ ಮಾಡುತ್ತೇವೆ. ಅಪರಾಧವನ್ನಲ್ಲ. ನಿಜವಾಗಿ ಆಗಬೇಕಾಗಿರುವುದು ಏನು? ನಮ್ಮ ಮಕ್ಕಳು ತಪ್ಪು ಮಾಡುತ್ತಾರೆ, ಅವರನ್ನು ಏನು ಮಾಡುವುದಕ್ಕೆ ಪ್ರಯತ್ನಿಸುತ್ತೇವೆ? ಅವರ ಅಪರಾಧವನ್ನು ತಿದ್ದುವುದಕ್ಕೆ ಪ್ರಯತ್ನಿಸುತ್ತೇವೆ. ಕುಡುಕನಾದ ತಂದೆ ರಸ್ತೆಯ ಬದಿಗೆ ಬಿದ್ಧಿರುತ್ತಾನೆ. ಆತನ ದುರಭ್ಯಾಸ ಅಂತ ಹಾಗೆ ಬಿಟ್ಟು ಬಂದರೆ ಏನಾಗುತ್ತದೆ? ಹಾಗಾದರೆ ಇಲ್ಲಿ ಬದಲಾಗಬೇಕಾಗಿರುವುದು ಮನೋಭಾವ.  ಮನಸ್ಸು ಬದಲಾಗದೆ ಸೌಹಾರ್ದ ಮೂಡದೆ ಇದ್ದರೆ,  ಸಂಘಟನೆಯನ್ನು ನಿಷೇಧ ಮಾಡಿದಾಗ ಸಮಸ್ಯೆ ಪರಿಹಾರವೇ? ಖಂಡಿತಾ ಇಲ್ಲ. ಸಂಘಟನೆಯ ನಿಷೇಧದ ಪ್ರತಿಕಾರಕ್ಕೆ ಮತ್ತೆ ಇನ್ನೇನೋ ಪ್ರತಿಭಟನೆ ವ್ಯಕ್ತವಾಗುತ್ತದೆ.  ದ್ವೇಷ ವೈಷಮ್ಯ ಮತ್ತಷ್ಟು ಹೆಚ್ಚಾಗುತ್ತದೆ. ಶತ್ರುತ್ವದ ಕಿಡಿ ಯಾವಾಗ ಉರಿದು ಬೀಳುತ್ತದೋ ಎಂಬ ಆತಂಕ ಇದ್ದೇ ಇರುತ್ತದೆ. ನಿಷೇಧ ಮಾಡಿ ನಾವು ಚಪ್ಪಾಳೆ ತಟ್ಟಿ ಜಯಕಾರ ಹಾಕಬಹುದು. ಆದರೆ ಅದು ಶಾಶ್ವತ ಎಂದು ಭ್ರಮಿಸಿ ಖುಷಿ ಪಡುತ್ತೇವೆ.  ಒಂದು ಊರಲ್ಲಿ ಕಳ್ಳರು ಇಲ್ಲದೇ ಇದ್ದರೆ ಏನಾಗಬಹುದು. ಊರಿನ ಮನೆಗೆ ಬೀಗ ಬಾಗಿಲಿನ ಅವಶ್ಯಕತೆಯೇ ಇರುವುದಿಲ್ಲ. ಇಲ್ಲಿ ಮನುಷ್ಯರ ಕಳ್ಳತನದ ಮನೋಭಾವ ತಿದ್ದುವಂತಾಗಬೇಕು. ಕಳ್ಳನನ್ನು ಹಿಡಿದು ಹಾಕಿದರೆ ಮತ್ತೊಂದು ಕಳ್ಳತನಕ್ಕೆ ಪ್ರೇರೆಪಣೆ ಪಡೆಯುತ್ತಾನೆ. ಶಿಕ್ಷೆ ಅನುಭವಿಸಿ ಬದಲಾದ ಅಪರಾಧಿಗಳು ಎಷ್ಟಿರಬಹುದು? 

    ಸಂಘಟನೆಗಳು ನಿಯಮ ಬಾಹಿರವಾಗಿ ಸಮಾಜ ಘಾತುಕವಾದಾಗ, ಸಮಾಜದ ಐಕ್ಯತೆಗೆ ಭಂಗ ತರುವಾಗ ನಿಷೇಧ ಮಾಡಲೇಬೇಕು. ಆದರೆ ಒಂದು ಸಲ ಯೋಚಿಸುವ ಈ ದೇಶದಲ್ಲಿ ಅದೆಷ್ಟು ಭಯೋತ್ಪಾದಕ ಸಂಘಟನೆಯನ್ನು ನಿಷೇಧ ಮಾಡಿಲ್ಲ?  ಆದರೆ  ಭಯೋತ್ಪಾದನೆ ಮತ್ತಷ್ಟೂ ಕ್ರೂರವಾಗಿ ಕಾಡುತ್ತಾ ಇದೆ.  ನಾವು ಒಂದು ಸಲವೋ ಅಥವಾ ಶಾಶ್ವತವಾಗಿ ಜಯ ಗಳಿಸಬಹುದು ಎಂದಿಟ್ಟುಕೊಂಡರೂ   ನಾಶವಾದ ಸೌಹರ್ದತೆ ನೆನಪಾಗುವುದಿಲ್ಲ. ಹಗೆ ಮತ್ತಷ್ಟು ರೊಚ್ಚಿಗೇಳುತ್ತದೆ. 

    ಹೀಗೆಲ್ಲ ಯೋಚಿಸಿದರೆ ವಾಸ್ತವದಲ್ಲಿ ಕನ್ನಡ ವಿರೋಧಿಗಳಾಗಬಹುದು. ನೆಲ ಜಲ ಭಾಷೆ ಎಲ್ಲವೂ ಅಭಿಮಾನ ಗೌರವದ ವಿಷಯಗಳು. ಆದರೆ ಇದೆಲ್ಲ ಪರಸ್ಪರ ಬೆಸೆಯುವ ವಿಷಯಗಳಾಗಬೇಕು. ಯಾರೋ ವಿದೇಶಿಗ ಹುಟ್ಟಿಸಿದ ಆಂಗ್ಲವನ್ನು ದಿನಾ ಅಲ್ಲಿ ಇಲ್ಲಿ ಬಳಸುವ ನಮಗೆ ಭಾಷಾಪ್ರೇಮದ ಬಗ್ಗೆ ಯಾವ ನಿಲುವಿನಲ್ಲಿ ಇರಬೇಕು ಎನ್ನುವುದೇ ಅರಿವಾಗುವುದಿಲ್ಲ. ಹೇಳಿಕೇಳಿ ನಾನು ಕೇರಳದ ಕಾಸರಗೋಡಿನವನು. ನನ್ನೂರು ಕಾಸರಗೋಡು ಎಂದಾಕ್ಷಣ ಇಲ್ಲೆಲ್ಲ ಹೇಳುತ್ತಾರೆ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು. ನಾನು ಹೇಳುವುದುಂಟು, ಅದು ಭಾರತದೊಳಗೆ ಇದೆಯಲ್ಲ ಸದ್ಯ ಅಷ್ಟು ಸಮಾಧಾನ ಸಾಕು. ಮನೆಯಲ್ಲಿ ಎಲ್ಲರೂ ಅಚ್ಚುಕಟ್ಟಾಗಿ ಕನ್ನಡ ಮಾತನಾಡುತ್ತೇವೆ. ಕನ್ನಡದಲ್ಲಿ ವ್ಯವಹರಿಸುತ್ತೇವೆ. ಕನ್ನಡ ಕಥೆ ಕಾವ್ಯಗಳನ್ನು ಓದಿ ಆನಂದಿಸುತ್ತೇವೆ.  ಆದರೆ ಈಗ ಬೆಳಗಾವಿಯಲ್ಲಿ ಹಚ್ಚಿದ ಕಿಚ್ಚು ಅತ್ತ ಕಾಸರಗೋಡಿಗೂ ಹಬ್ಬಿದರೆ ಬಹುಶಃ ನಾವು ನಮ್ಮೂರಿನ ಬಾಗಿಲು ಮುಚ್ಚಿ ಬಿಡಬೇಕು. ನಮ್ಮ ಒಡಹುಟ್ಟಿದವರು ಹೆಚ್ಚೇಕೆ ನಮ್ಮ ಅಪ್ಪ ಅಮ್ಮನನ್ನೂ ಮುಂದೊಂದು ದಿನ ಮರೆಯಬೇಕಾದೀತು. ಬೆಳಗಾವಿ ಗಡಿಯ ಬಿಸಿಯಲ್ಲಿ ನಮ್ಮ ಕಾಸರಗೋಡಿನ ಕನ್ನಡಿಗರು  ಹಾಗೇಯೇ ಕರ್ನಾಟಕ ಕೇರಳದ ಗಡಿ  ಕಣ್ಣಿಗೆ ಕಾಣುವುದಿಲ್ಲ. ಭಾಷಾಭಿಮಾನದಲ್ಲೂ  ತಾರತಮ್ಯ.  ಅತ್ತ ಗೋವಾದಲ್ಲೂ ನಮ್ಮ ಒಡ ಹುಟ್ಟಿದವರಿದ್ದಾರೆ, ಸಂಬಂಧಿಗಳು ಮಿತ್ರರೂ ಇದ್ದಾರೆ ಅವರನ್ನೇಲ್ಲಾ ನಾವು ಮರೆಯಬೇಕೆ? ಮುಂಬಯಿ ಮಹಾನಗರವನ್ನು ಅವಲಂಬಿಸಿ  ನಮ್ಮ ಮಂಗಳೂರು ಕಾಸರಗೋಡು ಜನಗಳು ಜೀವನ ಕಟ್ಟಿಕೊಂಡವರಿದ್ದಾರೆ . ಇನ್ನೂ ಒಂದಷ್ಟು ಬದುಕು ಸಾಗಿಸುತ್ತಿದ್ದರೆ ಅದಕ್ಕೆ ಮುಂಬಯಿಯ  ದುಡಿಮೆಯೇ ಕಾರಣ. ಯೋಚಿಸಿ ಇದನ್ನೆಲ್ಲ ಕಳಚಿಕೊಂಡು ಬದುಕುವುದು ಸುಲಭ ಸಾಧ್ಯವೇ? ಊರಲ್ಲಿ ಒಂದು ಹೊತ್ತೂ ಗಂಜಿಗೂ ತತ್ವಾರವಾದಾಗ ದುಡಿವ ಕೈಗಳಿಗೆ ದುಡಿಮೆಯನ್ನು ಮುಂಬಯಿ ನಗರ ಕೊಟ್ಟಿದೆ.  ಪುಂಡರನ್ನು ತಿದ್ದುವುದು ಕಷ್ಟ. ಕ್ಷಮಿಸುವುದು ಸಾಧ್ಯವಿಲ್ಲ. ಹಾಗಾದರೆ ಈ ದುರಂತಗಳಿಗೆ ಪರಿಹಾರ ಹೇಗೆ. ಹೋರಾಟಕ್ಕೆ ಹೋರಾಟ. 

    ಬ್ರಿಟೀಷರು   ಭಾರತಕ್ಕೆ ಬಂದಾಗ ನಮ್ಮೊಳಗಿನ ದ್ವೇಷ ವೈಷಮ್ಯವನ್ನೇ ಉಪಯೋಗಿಸಿ ತಮ್ಮ ಸಾಮ್ರಾಜ್ಯವನ್ನು ಭಾರತದಲ್ಲಿ ವಿಸ್ತರಿಸಿಕೊಂಡರು. ನಮ್ಮೊಳಗಿನ ಗುಂಪುಗಾರಿಕೆಯ ದೌರ್ಬಲ್ಯ ಬಳಸಿಕೊಂಡರು.  ಅದೊಂದು ದುರಂತ ಇತಿಹಾಸ.  ಈ ಅನುಭವದಲ್ಲೂ ನಾವು ಪಾಠ ಕಲಿಯಬೇಕು.  ಈ ಎಲ್ಲ ಮಾತುಗಳು ಮಹಾರಾಷ್ಟ್ರವನ್ನು ಪುರಸ್ಕರಿಸುವುದೋ ಮತ್ತೊಂದೋ ಅಲ್ಲ.  ಮೊದಲು ಈ ಎಲ್ಲ ಸಮಸ್ಯೆಗಳಿಗೆ ಸೌಹಾರ್ದದ ಉತ್ತರ ಕಂಡುಕೊಳ್ಳಬೇಕು. ಬೆಳಗಾವಿ ಕರ್ನಾಟಕಕ್ಕೆ ಸೇರಬೇಕೋ ಮಹಾರಾಷ್ಟ್ರಕ್ಕೋ ಎಂಬುದನ್ನು ದೇಶದ ಉಚ್ಚ ನ್ಯಾಯಾಲಯವೂ ಸುಲಭದಲ್ಲಿ ತೀರ್ಮಾನಿಸುವುದಕ್ಕೆ ಸಾಧ್ಯವಾಗುವುದಿಲ್ಲ. 

    ಈ ಸಂಘರ್ಷದಲ್ಲಿ ನಾವು ಕಳೆದುಕೊಳ್ಳುವ ಅಮೂಲ್ಯ ವಿಷಯಗಳ ನೆನಪನ್ನಷ್ಟೇ ಹೇಳುವುದು. ಹೋರಾಟ ಬೇಕು. ನೆಲ ಜಲ ಭಾಷೆ ಎಲ್ಲವೂ ಅಭಿಮಾನಿಸುವಂತಹ ವಿಚಾರಗಳು. ಆದರೆ ಅದು ದ್ವೇಷ ವೈಷಮ್ಯವನ್ನು ಬೆಳೆಸಿ ಸೌಹಾರ್ದತೆಯನ್ನು ನಾಶ ಮಾಡಿದರೆ ಮಾನವೀಯತೆ ಎಂಬ ಪ್ರಶ್ನೆಗೆ ಉತ್ತರ ಎಲ್ಲಿ ಹುಡುಕಬೇಕು?   ಈ ಎಲ್ಲ ಸಮಸ್ಯೆಗಳನ್ನು ನಿಭಾಯಿಸುವ ಮಹಾ ಪುರುಷ ಇನ್ನೂ ಹುಟ್ಟದೇ ಇರುವುದು ನಮ್ಮ ದುರ್ದೈವ ಎನ್ನಬೇಕು.  ಈ ಸಂಘರ್ಷ ಕೊನೆಯಾಗಲಿ ಎಂದು ಭಗವಂತನಲ್ಲಿ ಮೊರೆಯಿಡುವುದಷ್ಟೇ ಉಳಿದಿದೆ. ಅಪರಾಧದ ನಾಶವಾಗಲಿ. ಅಪರಾಧಿಗಳು ಬದಲಾಗಲಿ. 


No comments:

Post a Comment