Thursday, March 31, 2022

ವಿಚ್ಛೇದನೆ ಒಂದು ಮೋಚನೆಯೇ?

            ಜಯನಗರಕ್ಕೆ ಹೋಗುವುದಕ್ಕೆ ಅಪ್ಪ ಮಗನನ್ನು ಜತೆಗೆ ಕರೆದ. ಮಗ ಕಾರು ರಸ್ತೆಗೆ ಇಳಿಸಿ ಮೊಬೈಲ್ ತೆಗೆದು ಗೂಗಲ್ ನಕ್ಷೆ ಹಾಕಿ ನೋಡಿದ. ಅಪ್ಪ ವಾಡಿಕೆಯಂತೆ ಹೇಳಿದ, ಜಯನಗರ ಏನು ನಮಗೆ ತಿಳಿಯದ ಜಾಗವೇ? ಎಲ್ಲಿ ವಾಹನ ದಟ್ಟನೆಯಾವುದು ಹತ್ತಿರ ? ಎಲ್ಲವು ತಿಳಿದಿರುವಾಗ ಈ ಮ್ಯಾಪ್ ಯಾಕೆ? ಆಗ ಮಗ ಹೇಳಿದ ಈಗ ಕಾಲ ಬದಲಾಗಿದೆ. ನಾವು ತಂತ್ರಜ್ಜಾನ ಉಪಯೋಗಿಸಬೇಕು. ನಿಮ್ಮ ಕಾಲದಲ್ಲಿದ್ದ ಹಾಗೆ ರಸ್ತೆ ಈಗ ಇಲ್ಲ.  ಹೀಗೆ ಅಪ್ಪನ ಮಾತು ಕೇಳದೆ ಗೂಗಲ್ ಅಮ್ಮನ ಮಾತಿಗೆ ಮಗ ಕಿವಿಯಗಲಿಸಿದ.

         ಸಹಜವಾಗಿ ಮನೆಯಿಂದ ಹೊರಗಡೆ ಹೋಗಬೇಕಿದ್ದರೆ, ಕೈಯಲ್ಲಿದ್ದ ಮೊಬೈಲ್ ನಲ್ಲಿ ಮ್ಯಾಪ್ ಹಾಕಿ ಮ್ಯಾಪ್ ರೂಟ್ ನೋಡುತ್ತೇವೆ. ಯಾವ ದಾರಿ ಹತ್ತಿರ, ಯಾವ ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆ ಇದೆ ಹೀಗೆ ತಮಗೆ ಅನುಕೂಲಕರ ದಾರಿಯನ್ನು ನಮ್ಮ ಗಮ್ಯ ಸೇರುವುದಕ್ಕೆ ಹುಡುಕುತ್ತೇವೆ. ಭೂಮಿಯ ಯಾವುದೇ ಸ್ಥಳವನ್ನು ಸುಲಭದಲ್ಲಿ ಗುರುತಿಸಿ ದಾರಿ ತೋರಿಸಲು ಗೂಗಲ್ ಮ್ಯಾಪ್ ಇದೆ. ಆದರೆ ಬದುಕಿನ ಹಾದಿ ತೋರಿಸಲು ನಮ್ಮ ಅನುಭವದ ಜ್ಞಾನವೇ ಅತ್ಯವಶ್ಯ. ಈಗ ಅದನ್ನು ಮರೆತು ನಾವು ಬದುಕಿನ ಹಾದಿಯನ್ನು ಗುರುತಿಸುವಲ್ಲಿ ಎಡವುತ್ತೇವೆ. ಬದುಕಿನ ನಕ್ಷೆಯ ರೇಖೆಗಳು ನಮಗೆ ಕಾಣದಾಗಿವೆ.

    ನಮ್ಮ ಮನೆಯ ಬೀದಿಯಲ್ಲೇ  ಒಂದು ದೊಡ್ಡ ಸಂಸಾರವಿದೆ. ಕೆಲವು ವರ್ಷದ ಕೆಳಗೆ ಹೆಣ್ಣೊಬ್ಬಳು ಆ ಮನೆಯ ಮಗನನ್ನು ಮದುವೆಯಾಗಿ ಬರುತ್ತಾಳೆ. ಸರಿ ಸುಮಾರು ನನ್ನ ಮಗನ ವಯಸ್ಸು. ಬಹಳ ಸಿರಿವಂತ ಮನೆಯ ಹೆಣ್ಣು ಮಗಳಾದರು ಆಕೆ ನೋಡುವುದಕ್ಕೆ ಬಹಳ ಸಾಧು. ಮುಂಜಾನೆ ಆಕೆ ಮನೆ ಸ್ವಚ್ಛ ಮಾಡುವುದು, ಅದು ಇದು ಕೆಲಸ ಅಂತ ಓಡಾಡುವುದು ನಮ್ಮ ಮನೆಗೆ ಕಾಣುತ್ತಿತ್ತು. ಹಲವು ಸಲ ನಮ್ಮ ಮನೆಗೆ ನೋಡಿ ಕಿರುನಗು ಬೀರುತ್ತಿದ್ದಳು. ಎಲ್ಲೋ ಮೊಳಕೆಯೊಡೆದ ಬೀಜ ಇನ್ನೊಂದೆಡೆ ಬೆಳೆದು ಗಿಡವಾಗಿ ಬದುಕು ಕಂಡಂತೆ ಆಕೆ ಅದುವರೆಗೆ ತಾನು ಬೆಳೆದ ತಾಯಿ ಮನೆಯ ಮಡಿಲನ್ನು ಬಿಟ್ಟು ಇಲ್ಲಿ ಬಂದಿದ್ದಳು. ಹೆಣ್ಣೆಂದರೆ ಹಾಗೇ ಅಲ್ಲವೇ?  ಕಂಡು ಕೇಳರಿಯದ ಜಾಗದಲ್ಲಿ ತನ್ನ ಬದುಕನ್ನು ಕಾಣುವ ಕಲೆಯನ್ನು ಹೆಣ್ಣಿಗೆ ದೇವರು ಕರುಣಿಸಿದ್ದಾನೆ. ಸದಾ ಚುರುಕಾಗಿ ಇದ್ದ  ಸುಂದರ ಹೆಣ್ಣು ಮಗಳು ಕೆಲ ಸಮಯದಲ್ಲೇ ಮಗುವನ್ನು ಹೆತ್ತು ತಾಯಿಯಾದಳು.  ಪುಟ್ಟ ಮಗು ನಮ್ಮ ಮನೆ ಎದುರೇ ಬೆಳೆಯುತ್ತಿತ್ತು. ಸ್ವಲ್ಪ ಶ್ರೀಮಂತ ಸಂಸಾರ. ಸ್ವಂತ ವ್ಯಾಪಾರ, ದೊಡ್ಡ ಮನೆಯಲ್ಲಿ ಹಲವು ಬಾಡಿಗೆ ಮನೆಗಳೂ ಇದ್ದು ತಕ್ಕ ಮಟ್ಟಿಗೆ ಶ್ರೀಮಂತ ಕುಟುಂಬ. ಹೆಣ್ಣು ಸುಖವಾಗಿದ್ದಾಳೆ ಎಂದು ಅಂದುಕೊಂಡರೆ, ಕೆಲವು ಸಮಯದಿಂದ ಆಕೆ ಕಾಣುತ್ತಿಲ್ಲ. ನಗು ಮುಖದ ತರುಣಿಗೆ ಇದ್ದಕ್ಕಿದ್ದಂತೆ ಏನಾಯಿತು? ಇಷ್ಟೇ  ಹೆತ್ತ ಮಗುವನ್ನು ಬಿಟ್ಟು ದೂರ ಹೋದ ಆಕೆ ವಿಚ್ಛೇದನದ ಹಾದಿ ಹಿಡಿದದ್ದು ಆಘಾತಕರ ಸುದ್ದಿ.

ನನ್ನ ಪರಿಚಯಸ್ಥ ಮತ್ತೊಬ್ಬಳು ತರುಣಿ, ಉತ್ತಮ ವಿದ್ಯಾವಂತೆ, ಉದ್ಯೋಗದಲ್ಲಿದ್ದವಳು, ಪ್ರೇಮಿಸಿ ಮದುವೆಯಾದಳು. ಮದುವೆಗೆ ಸರಿಸುಮಾರು ಮೂವತ್ತು ಲಕ್ಷದಷ್ಟು ಖರ್ಚಾಯಿತು. ಅದಕ್ಕೂ ಕಾರಣಗಳು ಹಲವು. ಮದುವೆಯಾಗಿ ಒಂದು ವರ್ಷಕ್ಕೇ ವಿಚ್ಚೇದನವಾಯಿತು. ಮದುವೆಗೆ ಮಾಡಿದ ಸಾಲ ಇನ್ನೂ ಸಂದಾಯ ಮಾಡುವುದಕ್ಕೆ ಬಾಕಿ ಇದೆ. ಯಾವ ಸ್ಮರಣೆಗೆ ಆ ಸಾಲ ತೀರಿಸಬೇಕು?

     ಇದು ಹೆಣ್ಣುಗಳ ಕಥೆ ಮಾತ್ರವಲ್ಲ. ನನ್ನ ಬಳಗದಲ್ಲೇ ಹಲವಾರು ಹುಡುಗರು ಇದ್ದಾರೆ. ಯಾವುದೋ ಕಾರಣಕ್ಕೆ ಬದುಕಿನಲ್ಲಿ ಏಕಾಂಗಿಯಾದವರು. ಇದರಲ್ಲಿ ಕೇವಲ ಹೆಣ್ಣನ್ನು ಮಾತ್ರ ಶೋಷಿತೆ ಎನ್ನುವ ಹಾಗಿಲ್ಲ. ವಿಚ್ಛೇದನ ಬಹುಶಃ ಕಾನೂನಾಗಿ ಮನುಷ್ಯನ ಹಕ್ಕಾಗಿ ಬದಲಾಗುವಾಗ ಅದು ಕೇವಲ ಹೆಣ್ಣಿನ ದೃಷ್ಟಿಕೋನದಲ್ಲೇ ಇತ್ತು ಅಂತ ಅನ್ನಿಸುತ್ತದೆ. ಯಾಕೆಂದರೆ, ಜೀವನಾಂಶ ಹೆಣ್ಣು ಮಾತ್ರ ಪಡೆಯುವುದಕ್ಕೆ ಅರ್ಹಳು. ಆದರೆ ಈಗ ವಾಸ್ತವ ಇದಕ್ಕಿಂತ ಭಿನ್ನ. ಗಂಡೂ ಸಹ ದೌರ್ಜನ್ಯದ ಬಲಿ ಪಶು ವಾಗುತ್ತಾನೆ. ಸಮಸ್ಯೆಗಳೇನಿದ್ದರೂ ಅದು ವೈಯಕ್ತಿಕ. ಅವರವರ ಬದುಕು.

         ವಿಚ್ಚೇದನ ಅಥವಾ ಡೈವರ್ಸ್....ಬದುಕಿನ ಹಾದಿ ಎರಡಾಗುವುದು ಎಂದರೆ ನಮ್ಮ ಬದುಕಿನ ನಕ್ಷೆಯ ರೇಖೆಆ ಹಾದಿ ತಪ್ಪಿದ್ದನ್ನು ತೋರಿಸುತ್ತದೆ.  ವಿಚ್ಛೇದನ ಎಂದಕೂಡಲೇ ಹಲವರು , ಖಾಸಗೀತನ ಕತೆಗಳನ್ನು ತಿಳಿಯಲು ಕುತೂಹಲಿಗಳಾಗುತ್ತಾರೆ. ಅನುಕಂಪದ ಲೇಪನದಲ್ಲಿ ಕಥೆಯನ್ನು ಕೇಳುವ ಇವರಿಗೆ ಕಥೆಯನ್ನು ತಿಳಿದಕೂಡಲೇ ಅದನ್ನು ಮತ್ತೊಬ್ಬರಿಗೆ ತಿಳಿಸುವ ತವಕ ಹೆಚ್ಚುತ್ತದೆ.  ಇಷ್ಟಕ್ಕೇ ವಿಚ್ಛೇದನ ಎಂಬುದು ವರ್ಣ ರಂಜಿತ ಕಥೆಯಾಗಿ ಸಮಾಜ ಕಾಣುತ್ತದೆ. ಹೀಗೆ ಖಾಸಗೀತನ ಸಾರ್ವಜನಿಕವಾಗುವುದು ಒಂದು ರೀತಿಯ ಕ್ರೌರ್ಯ.  ಇದರಲ್ಲಿ ಅಂಗವಾಗುವ ನೋವು ಅದು ಅನುಭವಿಸಿದವರಿಗೆ ಅರಿವಾಗುತ್ತದೆ.

           ಚಿನ್ನದ ಸಂಕಲೆಯಾದರೂ ಅದರಲ್ಲಿ ಬಂಧಿಸಿದರೆ ಅದು ಬಂಧನವೇ ಆಗುತ್ತದೆ. ಮನುಷ್ಯನ ಜೀವನವನ್ನು ಆಧ್ಯಾತ್ಮ ದೃಷ್ಟಿಯಲ್ಲಿ ಕಂಡವರು ಸನಾತನಿಗಳು. ಹಾಗಂತ ಗೃಹಸ್ಥ ಜೀವನ ಎಂದರೆ ಅದು ಮೋಕ್ಷಕ್ಕಿರುವ ಸುಲಭ ಮಾರ್ಗ ಎಂದು ಭಗವಂತನೇ ಹೇಳಿರುತ್ತಾನೆ. ಆದರೆ ಅದೇ ಗೃಹಸ್ಥ ಜೀವನದ ಹಾದಿ ನಕ್ಷೆಯಿಲ್ಲದೆ ಚದುರಿ ಹೋಗುವುದು ನಾವು ಜೀವನವನ್ನು ಕಾಣುವ ದೃಷ್ಟಿಕೋನವೇ ಕಾರಣ. ನಮ್ಮ ಮನಸ್ಸಿಗಂಟಿರುವ ಅತೃಪ್ತ ಪಿಶಾಚತ್ವ ಪರಿಹರಿಸಲಾಗದೆ ಅಂಟಿಕೊಂಡಿರುತ್ತದೆ.

     ದೃಷ್ಟಿ ಮಂದವಾಗುವಾಗ ಎಲ್ಲವೂ ಅಸ್ಪಷ್ಟ. ದೃಷ್ಟಿ ನಿಚ್ಚಳವಾಗುವುದಕ್ಕೆ ಕಣ್ಣಿಗೆ ದೃಷ್ಟಿ ಚಕ್ರವನ್ನು ಇಟ್ಟು ನೋಡಿದರೆ ಬೇಕಾಗಿರುವುದು ನಿಚ್ಚಳವಾಗಿ ಕಂಡಂತೆ ಬೇಡದೇ ಇರುವವುಗಳೂ ಕಣ್ಣಿಗೆ ರಾಚುತ್ತವೆ. ದೃಷ್ಟಿ ನಿಚ್ಚಳವಾದಂತೆ ಬುದ್ದಿಯೂ ಹರಿತವಾಗಬೇಕು. ಮನಸ್ಸನ್ನು ಬುದ್ಧಿ ನಿಯಂತ್ರಿಸುತ್ತದೆ. ಹಾಗಾಗಿ ಬುದ್ಧಿ ಜ್ಞಾನದ ಸಂಕೇತ  ಮೊದಲು ಮದುವೆಯಾದಾಗ ದೀರ್ಘಸುಮಂಗಲೀ ಭವ ಎಂದು ಜೀವ ಉಳಿವಂತೆ ಹರಸಿದರೆ, ಇಂದು ಬೇರೆಯಾಗದೆ ಒಂದಾಗಿ ಬದುಕು ನಡೆಸಲಿ ಎಂದು ಹರಸಬೇಕಾಗುವ ಅನಿವಾರ್ಯಾತೆ ಇದೆ.  ಯಾಕೆಂದರೆ ಜೀವ ಬದುಕು ಉಳಿದರೂ ಒಂದಾಗಿ ಇರುತ್ತಾರೆ ಎಂಬುದರ ಭರವಸೆ ಇಲ್ಲ. ವಿವಾಹವಾಗಿ ಇಪ್ಪತ್ತೈದು ಐವತ್ತು ತುಂಬಿದಾಗ ಉತ್ಸವದಂತೆ ಆಚರಿಸುತ್ತೇವೆ. ಇಂದಿನ ಪರಿಸರದಲ್ಲಿ ಇದೊಂದು ವಿಜಯೋತ್ಸವದಂತೆ ಭಾಸವಾಗುತ್ತದೆ. ಮನುಷ್ಯನಿಗೆ ಬುದ್ದಿ ಜ್ಞಾನ ಹೆಚ್ಚಾದಷ್ಟೂ ಆಕಾಂಕ್ಷೆಗಳು ಬೆಳೆಯುತ್ತವೆ. ಆಯ್ಕೆಗಳೂ ವಿಶಾಲವಾಗುತ್ತವೆ. ಇಂದಿನ ಹಲವು ಸಮಸ್ಯೆಗಳು ಹುಟ್ಟಿಕೊಳ್ಳುವುದು ಇದೇ ಕಾರಣಕ್ಕೆ.  ನಮ್ಮ ಹಿರಿಯರ ಆಯ್ಕೆ ಸೀಮಿತವಾಗಿತ್ತು. ಹಾಗಾಗಿ ಒಂದೂ ವಿಚ್ಛೇದನಗಳು ಸಂಭವಿಸದ ಕುಟುಂಬಗಳು ಹಲವಿದ್ದವು. ಈಗ ಸ್ಥಿತಿ ಬದಲಾಗಿದೆ. ವಿಚ್ಛೇದನ ಇಲ್ಲದ ಕುಟುಂಬ ಹುಡುಕಿದರೂ ಸಿಗಲಾರದು. ನಮ್ಮ ಬದುಕಿನ ದೃಷ್ಟಿಕೋನ ಯಾಕೆ ಇಷ್ಟು ಸಂಕುಚಿತವಾಗುತ್ತದೆ.  ಕೊರೋನ ಚೀನದಲ್ಲಿ ಹುಟ್ಟಿದಾಗ ಚೀನದಲ್ಲಿ ಅಲ್ವಾ.ನಾವು ಕಾಣದೇ ಇರುವ ಜಾಗ. ಆದರೆ ಅದೇ ಕರೋನ ನಮ್ಮ ಮನೆಬಾಗಿಲಿಗೆ ಬಂದು ಕದ ತಟ್ಟುವಾಗ ವಾಸ್ತವಕ್ಕೆ ಇಳಿದು ಬಿಟ್ಟಿದ್ದೇವೆ. ಮೊದಲು ವಿಚ್ಛೇದನ ಎಲ್ಲೋ ಕಾದಂಬರಿ ಸಿನಿಮಾದಲ್ಲಿ ಕಾಣುತ್ತಿದ್ದೆವು. ಬರ ಬರುತ್ತಾ ಎಲ್ಲೊ ಇದ್ದದ್ದು ಪ್ರತಿಯೊಂದು ಕುಟುಂಬಕ್ಕೂ ಅದು ಅವಕಾಶವಾಗಿ ಹೋಯಿತು.

        ಮನೆಯಲ್ಲಿ ನಮ್ಮ ಹಿರಿಯರು  ಉಪಯೋಗಿಸಿದ ಕೊಡೆ ಪೆನ್ನು ಚಪ್ಪಲಿ ಹೀಗೆ ಅಭಿಮಾನದಿಂದ ಅವರ ಸ್ಮರಣೆಗೆ ತೆಗೆದಿರುಸುತ್ತೇವೆ. ಆದರೆ ವಿಚ್ಛೇದನ ಕೊಡುವಾಗ ಮಾನಸಿಕ ಸಂಬಂಧಗಳು ಭಾವಾನಾತ್ಮಕ ತುಡಿತಗಳು ಯಾವುದೂ ವಿಚ್ಛೇದನವನ್ನು ತಡೆಯುವುದಿಲ್ಲ. ಆ ಮಧುರ ನೆನಪುಗಳಿಗೆ ಯಾವ ಗೌರವವೂ ಇಲ್ಲದಂತೆ, ಹಳೆ ಉಡುಪು ಕಿತ್ತೆಸೆದಂತೆ ಬದಲಾಯಿಸಿ ಬಿಡುತ್ತೇವೆ. ನನ್ನ ಮಾವನಿಗೆ ಎರಡೇ ಅಂಗಿ ಇತ್ತು. ಅವರಿಗೆ ಎಂದೂ ಆಯ್ಕೆ ಕಷ್ಟವಾಗುತ್ತಿರಲಿಲ್ಲ. ಅದಲ್ಲದಿದ್ದರೆ ಇದು, ಇದಲ್ಲದಿದ್ದರೆ ಅದು. ನಾವು ಆಯ್ಕೆಯ ಪ್ರಪಂಚಕ್ಕೆ ತೆರೆದುಕೊಂಡಂತೆ ನಮ್ಮ ಭಾವನಾತ್ಮಕ ವಿಚಾರಗಳು ಮೌಲ್ಯವನ್ನು ಕಳೆದುಕೊಂಡಿವೆ. ಆಯ್ಕೆಗಳು ಹಲವಾರಾಗಿ ಬದುಕು ಅತಂತ್ರವಾಗಿದೆ.  ವಿಚ್ಛೇದನಅದು ಹಕ್ಕು ಆಗಿರಬಹುದು. ಅದರ ಆಯ್ಕೆ ಸ್ವಾತಂತ್ರ್ಯ ಆಗಿರಬಹುದು. ಅದುವೇ ಒಂದು ಅಸ್ತ್ರವಾಗಿ ಪರಿಹಾರವಾಗಬೇಕಿಲ್ಲ. ನಮ್ಮ ಹಿರಿಯರು ಏನೇ ಕಷ್ಟ ನಷ್ಟ ಹತಾಶೆಗಳಿದ್ದರೂ ಜತೆಯಲ್ಲೇ ಬದುಕಿದರು. ಬದುಕು ಎಂದರೆ ಅದರಿಂದ ಭಿನ್ನವಾಗಿ ಅವರೆಂದೂ ಕಂಡಿಲ್ಲ. ಆದರೆ ನಾವು ನಮ್ಮ ಮಕ್ಕಳಿಗೆ ವಿಚ್ಛೇದನವನ್ನೇ ತೋರಿಸುತ್ತಿದ್ದೇವೆ. ಅಯ್ಕೆಯ ಮುಖಗಳನ್ನು ತೋರಿಸುತ್ತೇವೆ. ಮಕ್ಕಳು ಹಾಗೆ ವಾಹನ ತೆಗೆದುಕೊಂಡಂತೆ ಮತ್ತದನ್ನು ಬದಲಿಸಿದಂತೆ ಗಂಡ ಅಥವಾ ಹೆಂಡತಿಯನ್ನೂ ಬದಲಿಸಿಕೊಳ್ಳುತ್ತಾರೆ. ವಾಹನಕ್ಕೆ ಸವಕಳಿಯ ಲಾಭ ನಷ್ಟವಿದ್ದಂತೆ, ಬದುಕಿನ ಲಾಭ ನಷ್ಟದ ಲೆಕ್ಕಾಚಾರ ಇರುತ್ತದೆ.

        ದೀಪ ಕತ್ತಲೆಯೊಂದಿಗೆ ಹೋರಾಡುತ್ತದೆ. ಹೀಗೆ ಅನಿಸುತ್ತದೆ. ಒಂದು ಸಲ ಕತ್ತಲೆ ದೀಪದಲ್ಲಿ ಕೇಳಿತಂತೆ, ನಿನಗೆ ನನ್ನನ್ನು ಕಂಡರೆ ದ್ವೇಷ ಉಂಟಾ? ದೀಪ ಹೇಳಿತಂತೆ, ನನಗೇಕೆ ದ್ವೇಷ. ನಾನು ಬಂದಾಗ ನೀನೇ ದೂರ ಹೋಗುತ್ತಿರುವೆ. ಅಷ್ಟಕ್ಕೂ ನೀನೆ ನನ್ನ ಸ್ನೇಹಿತ. ಯಾಕೆ ಗೊತ್ತಾ? ನೀನಿದ್ದರೆ ಮಾತ್ರ ನನಗೆ ಬೆಲೆ ಬರುತ್ತದೆ. ನಮ್ಮ ಬದುಕಿನಲ್ಲಿ ಹಲವು ಋಣಾತ್ಮಕ ವಿಚಾರಗಳು ನಮಗೆ ಹೋರಾಟವನ್ನೇ ತೋರಿಸಬಹುದು. ಆದರೆ ಅದನ್ನು ಸ್ವೀಕರಿಸುವ ರೀತಿ ದೀಪ ಕತ್ತಲೆಯೊಡನೆ ತೋರಿಸಿದಂತಿರಬೇಕು.

        ಸೂರ್ಯನೊಡನೆ ಒಬ್ಬ ಹೇಳಿದನಂತೆ, ನೀನು ಹೋದ ಕೂಡಲೇ ಕತ್ತಲೆ ಬರುತ್ತದೆ, ನೀನು ಯಾಕೆ ಹೋಗುತ್ತಿರುವೆ. ನಿಂತು ಬಿಡು. ಸೂರ್ಯ ಹೇಳಿದನಂತೆ, ಕತ್ತಲೆ  !! ಹಾಗಂದರೆ ಏನು? ಹಾಗೊಂದು ಜಗತ್ತಿನಲ್ಲಿ ಇದೆಯೆ? ತೋರಿಸು ನೋಡೋಣ. ವ್ಯಕ್ತಿ ಸೂರ್ಯನನ್ನು ಕತ್ತಲೆ ಇರುವಲ್ಲಿ ಕರೆದುಕೊಂಡು ಹೋದ. ಆದರೆ ಕತ್ತಲೆ ಎಲ್ಲಿದೆ? ಸೂರ್ಯ ಹೋದಲೆಲ್ಲ ಕತ್ತಲೆ ಇದ್ದರೆ ತಾನೆ? ಪ್ರಪಂಚದಲ್ಲಿ ಕತ್ತಲನ್ನು ಕಾಣದೇ ಇದ್ದವನು ಎಂದರೆ ಸೂರ್ಯ.  ಹೀಗೆ ನಮ್ಮ ವ್ಯಕ್ತಿತ್ವದಿಂದ ನಮ್ಮ ವರ್ತನೆಯಿಂದ ನಮಗೆದುರಾಗುವ ಸಮಸ್ಯೆಗಳನ್ನು ನಾವು ನೀವಾರಿಸಿಕೊಳ್ಳಬೇಕು.  ವಿಚ್ಛೇದನ ಪರಿಹಾರವಾಗಲಿ ಆದರೆ ಅದು ಅತೃಪ್ತ ಆತ್ಮದ ಪಿಶಾಚಿಯಾಗದಿರಲಿ.

 

 

No comments:

Post a Comment