Friday, November 11, 2022

ದಶಮಗ್ರಹದ ಭ್ರಮಣ ಪಥ

             ಮೊನ್ನೆ ದೀಪಾವಳಿಯ ಮುನ್ನಾದಿನ ನಡು ಮಧ್ಯಾಹ್ನ ಕೊಪ್ಪದಲ್ಲಿರುವ ನನ್ನ ಮಾವನ ಮನೆಯ (ಹೆಂಡತಿಯ ತವರು ಮನೆಯ)  ಮೆಟ್ಟಿಲು ತುಳಿವಾಗ ಒಂದು ವೈಶಿಷ್ಟ್ಯತೆ ಇತ್ತು.  ಎಂದಿನಂತೆ ಅತ್ತೆ ನಗು ಮುಖದಿಂದಲೇ ಓಹೋ....ಹೋ ಅಂತ ಎದಿರುಗೊಂಡು ಸ್ವಾಗತಿಸಿದರು. ವೈಶಿಷ್ಟ್ಯತೆ  ಎಂದರೆ, 1990ನೇ ಇಸವಿಯಲ್ಲಿ  ನನ್ನ ಮದುವೆಯಾಗಿತ್ತು. ಅದೇ ವರ್ಷ ದೀಪಾವಳಿಗೆ ಹೊಸ ಅಳಿಯನಾಗಿ ಹೊಸ ಹಬ್ಬಕ್ಕೆ ಇದೇ ಮೆಟ್ಟಲು ಹತ್ತಿದ್ದೆ. ಅದರ ನಂತರ ಸರಿ ಸುಮಾರು ಮೂವತ್ತೆರಡು ವರ್ಷಗಳ ನಂತರ ನಾನು ದೀಪಾವಳಿಗೆ ಮಾವನ ಮನೆಗೆ ಹೋಗುತ್ತಿರುವುದು ಈ ಬಾರಿಯ ವಿಶೇಷ !  ಅತ್ತೆ ಭಾವಂದಿರು, ಮತ್ತವರ ಪತ್ನಿಯರು ಹೀಗೆ ಅವರ ಸಂಭ್ರಮ ಸಡಗರ ಕಣ್ಣು ತುಂಬಿತು.  ಎಂತಹ ಬಡತನವಿರಲಿ ಸಿರಿವಂತಿಗೆ ಇರಲಿ ಸಂಭ್ರಮ ಎಂಬುದು ಸಮಾನವಾಗಿರುತ್ತದೆ. ಆ ಮನೆಗೆ ಒಬ್ಬಳೇ ಮಗಳು, ಹಾಗಾಗಿ ನಾನು ಒಬ್ಬನೇ ಅಳಿಯ ಜಾಮಾತಾ ದಶಮಗ್ರಹ ಎನ್ನುವಂತೆ. .  ಆ ಮನೆಯ    ಹತ್ತನೆಯ ಗ್ರಹ, ಅತ್ಯಂತ ಪ್ರಭಾವೀ ಗ್ರಹ ನಾನಾಗಿದ್ದೆ. ಒಬ್ಬಳೇ ಒಬ್ಬಳು ಮಗಳ ಕೈಹಿಡಿದ ಅಳಿಯ ಎಂದ ಮೇಲೆ ಕೇಳಬೇಕೆ?  ಅಳಿಯ ಎಂದಿಗೂ ಹೊರಗುಳಿಯ. 

           ಅಪ್ಪ ಅಮ್ಮ ಮಕ್ಕಳು ಒಡಹುಟ್ಟಿದವರನ್ನು ನಾವು ಕೇಳಿ ಪಡೆಯುವುದಿಲ್ಲ. ಅದು ಜನ್ಮದಿಂದ ಜತೆಯಾಗುತ್ತದೆ. ಆದರೆ ಪತಿ ಪತ್ನಿ  ಬಂಧು ಮಿತ್ರರರ ಆಯ್ಕೆ ನಮ್ಮಲ್ಲೇ ಇರುತ್ತದೆ. ಉತ್ತಮ ಮಿತ್ರರನ್ನು  ಹಾಗೆ ಉತ್ತಮ ಜೀವನ ಸಂಗಾತಿಯನ್ನು ಪಡೆಯುವ ಆಕಾಂಕ್ಷೆ ಎಲ್ಲರಲ್ಲೂ ಇರುತ್ತದೆ. ಆದರೆ ಇದು ಹಾರ್ದಿಕವಾಗಿ ಪರಿಪೂರ್ಣವಾಗಿ ಈಡೇರುವುದು ಸುಕೃತ ಫಲದಿಂದ ಮಾತ್ರ. ಕೆಲವೊಮ್ಮೆ ಎಲ್ಲವೂ ಇದ್ದರೂ ಏನೋ ಒಂದು ಇಲ್ಲದ ಕೊರತೆ ಬಾಧಿಸುತ್ತದೆ. ಹಲವು ಸಲ ಸನ್ಮನಸ್ಸು  ಸದ್ಭಾವನೆಗಳು ಎಲ್ಲ ಇದ್ದರೂ ಏನೋ ಒಂದು ವಿಷಯ ಹೊಂದಾಣಿಕೆಗಳಿಗೆ  ಪರೀಕ್ಷೆಯನ್ನೇ ತಂದೊಡ್ಡುತ್ತದೆ. ನಾವು ಪೇಟೆಯಿಂದ ಕೊಂಡು ತರುವ ಸಾಮಾಗ್ರಿಯಂತೆ ಈ ಬಂಧು ಬಳಗ. ಎಷ್ಟೇ  ಆಯ್ದು ಹುಡುಕಿ ಪರೀಕ್ಷೆ ಮಾಡಿ ತರಕಾರಿ ತಂದರೂ ಮನೆಗೆ ತಂದನಂತರ ಅದರಲ್ಲಿ ಹುಳು, ಕೊಳೆತು ಹಾಳಾಗಿರುವುದು ಸಿಗುವುದು ಸಾಮಾನ್ಯ. ಒಂದು ವೇಳೆ ಎಲ್ಲವೂ ಒಳ್ಳೆಯದಿದ್ದರೂ ದಿನ ಕಳೆದಂತೆ ಹಾಳಾಗುತ್ತದೆ.  ಈ ಸಂಭಂಧಗಳೂ ಹಾಗೆ , ಗಂಡಾಗಲೀ ಹೆಣ್ಣಾಗಲೀ ಸಂಬಂಧಗಳನ್ನು ಆಯ್ಕೆ ಮಾಡುವಾಗ ಚೌಕಾಶಿ ಮಾಡಿ ಅರಸಿ ಅರಸಿ ಸೋಸಿ ಹೇಗೆ ಸಾಧ್ಯವೋ ಹಾಗೆ ಸಾಮಾರ್ಥ್ಯವಿದ್ದಂತೆ   ಹುಡುಕಿ ಹೊಂದಿಸಿಕೊಂಡು ಸಂಪಾದಿಸುವುದು ಸಹಜ. ಬದುಕಿನ ಪಯಣದಲ್ಲಿ  ಹೊಸ ಸಂಬಂಧಗಳ ಆಯ್ಕೆ ಅನಿವಾರ್ಯ. ತರಕಾರಿ ಅಂಗಡಿಯಿಂದ ತಂದಂತೆ, ಯೋಗವಿದ್ದರೆ ಸಂಭಂಧಗಳು ಹಳಸದೆ ನಿತ್ಯ ಹಸಿರಾಗಿರುತ್ತದೆ.  ಇದನ್ನು ಪ್ರೀತಿ ವಿಶ್ವಾಸ ಎಂಬ ಫ್ರಿಜ್ ನಲ್ಲಿ ಭದ್ರವಾಗಿರಿಸಿಕೊಳ್ಳಬೇಕು. ಆದರೆ ಅದರಲ್ಲು ಎಲ್ಲವೂ ಸರಿ ಇದ್ದು ವಿದ್ಯುತ್ ಇಲ್ಲದೇ ಕೆಡುವಂತೆ, ನಮಗೆ ಯೋಗ ಇಲ್ಲದೇ ಇದ್ದರೆ ಕೆಟ್ಟು ಹೋಗುವುದು ಇಲ್ಲದಿಲ್ಲ. 


        ಮೊದಲೆಲ್ಲ ಮನೆ ಮನೆಯಲ್ಲಿ ತರಕಾರಿ ಸ್ವತಃ ಬೆಳೆಯುತ್ತಿದ್ದುದರಿಂದ ಅದಕ್ಕೆ ಗೌರವ ಅಭಿಮಾನ ಪ್ರೀತಿ ಎಲ್ಲವೂ ಇರುತ್ತಿತ್ತು. ಅದರೆ ಯಾವಾಗ ಹೊರಗೆ ಹೋಗಿ ಅಂಗಡಿಯಿಂದ ಖರೀದಿಸಿ ತರುವಾಗ ನಕಲಿ ವಂಚನೆ ಎಲ್ಲವು ಸಂಭವನೀಯ. ಅದರ ಅರ್ಥ ನಾವು ಮನೆಯಲ್ಲೇ ಬೆಳೆಯಬಹುದಾದ ಪ್ರೀತಿ ಸೌಹಾರ್ದತೆಯ ಕೊರತೆಯಾಗಿದೆ. ಆ ಪ್ರೀತಿ  ಸಂಭಂಧಗಳು ಇಂದು ಅಪರೂಪವಾಗಿವೆ.  ಇದ್ದರೂ ಕೃತಕವಾಗಿ ಅಭಿನಯವಾಗಿದೆ.  ಮನೆಯ ಒಳಗೆ ಪರಸ್ಪರ ವಿಡಿಯೋ ಕಾಲ್ ಮಾಡುವ ಕಾಲ ಇದು. ಕಾಣುವ ನಗು ವಿಶ್ವಾಸವನ್ನು ಅರಸುವಂತಾಗುತ್ತದೆ.  ಬಂಧುಗಳು ಹತ್ತಿರವಿದ್ದಷ್ಟೂ ಮಾನಸಿಕವಾಗಿ ದೂರವಿರುತ್ತಾರೆ.  ಇದು ವಾಸ್ತವ. 

        ದೀರ್ಘ ಕಾಲದ ವೈವಾಹಿಕ ಪಯಣದಲ್ಲಿ ದೈವ ನಿಮಿತ್ತವಾದ ಏರಿಳಿತಗಳು ಹಲವಿದ್ದರೂ ಇದುವರೆಗೆ ವಿದ್ಯುತ್ ಕಡಿತದ ಯೋಗ ವಿರಲಿಲ್ಲ. ಪ್ರೀತಿ ಅಭಿಮಾನ ಗೌರವ ಎಲ್ಲವನ್ನು ಮನಸೋ ಇಚ್ಛೆ ಅನುಭವಿಸಿದವನು ನಾನು. ಅದಕ್ಕೆ ಕಾರಣ ನನ್ನ ಮಾವನ ಮನೆಯ ಸದಸ್ಯರು.   ಮೂರು ದಶಕದ ಈ ಅಳಿಯನ ಪದವಿಯ ಉನ್ನತಿಯಲ್ಲಿ ಎಂದಿಗೂ ಪ್ರೀತಿಗೆ ಕೊರತೆಯಾಗಲಿಲ್ಲ. ದಶಕದ ಹಿಂದಿನ ಅದೇ ವಿಶ್ವಾಸ. ಮೂವತ್ತು ವರ್ಷಗಳ ಹಿಂದೆ ಪತ್ನಿ ತವರು ಮನೆಯಲ್ಲಿ ಇರುವಾಗ ಸಂಭ್ರಮದಿಂದ ಕೊಪ್ಪಕ್ಕೆ ಹೋಗುವ ದಿನಗಳು ಇಂದಿಗೂ ನೆನಪಾಗುತ್ತದೆ. ಈಗ ದಿನ ಮಾತ್ರ ಬದಲಾಗಿದೆ. ಆ ಸಂಭ್ರಮ ನಿರೀಕ್ಷೆ ಈಗಲೂ ಹಸಿರಾಗಿದೆ ಮಲೆನಾಡಿನ ಹಸಿರಂತೆ.  ಹಾಕಿದ ಉಡುಪು ಎಷ್ಟೇ  ಆಕರ್ಷಕವಾಗಿ ಬೆಲೆಬಾಳಲಿ, ಅದನ್ನು ತೊಟ್ಟವನ ವ್ಯಕ್ತಿತ್ವದ ಪ್ರಭಾವ ಅದರ ಮೇಲೂ ಇರುತ್ತದೆ. ಆತ ಕೆಟ್ಟವನಾದರೆ ಆ ಸುಂದರ ಉಡುಪಿನ ಬಗ್ಗೆಯೂ ಅಭಿಮಾನ ಇರುವುದಿಲ್ಲ. ಹಾಗೆ ಈ ಊರು ಹಿತವಾಗಿ ಅದೇ ಆಕರ್ಷಣೆ ಉಳಿದುಕೊಳ್ಳಲು ಈ ಬಂಧುವರ್ಗವೇ ಕಾರಣ ಎಂದು ಬೇರೆ ಹೇಳಬೇಕಿಲ್ಲ.   ಇದನ್ನೆಲ್ಲ ನೆನಪಿಸಿಕೊಳ್ಳುವಾಗ  ನಾನು ಮೇಲೆ ಹೇಳಿದ ವಾಕ್ಯ ...ಅಪ್ಪ ಅಮ್ಮನನ್ನು ಪಡೆಯುವುದು ನಮ್ಮೆಣಿಕೆಯಲ್ಲಿಲ್ಲ, ಆದರೆ ಬಂಧುಗಳನ್ನು ಗಳಿಸಿ ಅದರ ಔಚಿತ್ಯವನ್ನು ಉಳಿಸಿಕೊಳ್ಳುವಲ್ಲಿ ನಮಗೆ ಯೋಗ ಅತ್ಯಂತ ಅವಶ್ಯ. ಸಿಗದೇ ಇರುವುದನ್ನು ಪಡೆಯುವುದೇ ಯೋಗ. ಈ ಕಾಲದಲ್ಲಿ ಇಂತಹ ಸಂಭಂಧಗಳು ಪಡೆಯುವುದೇ ಯೋಗ ಎನ್ನುವುದು ಹೆಚ್ಚು ಅರ್ಥ ಪೂರ್ಣ. 

        ಅತ್ತೆ ಮಾವ ಹೆಂಡತಿಯನ್ನು ಹೊಗಳುವುದೆಂದರೆ ವಾಡಿಕೆಯಲ್ಲಿ ಒಂದಷ್ಟು  ಮುಜುಗರ ಇರುತ್ತದೆ. ಹೊಗಳುವಷ್ಟು  ವಿಶೇಷವೇನಿರುತ್ತದೆ?   ಹಲವು ಸಲ ಇದು ಅತಿರೇಕ ಅತಿಶಯ ಎನಿಸಿದರು ಅನುಭವಿಸಿದ ಸುಖ ಸಮೃದ್ಧಿಗೆ ಯೋಗ ಕೂಡಿಬರುವುದೇ ಇಲ್ಲಿಂದ ಎಂಬುದು ಸತ್ಯ.  ಪ್ರಯಾಣದಲ್ಲೋ ಇನ್ನೆಲ್ಲೋ ನಮಗೆ ಕ್ಷಣಿಕವಾಗಿಯಾದರೂ ಒಳ್ಳೆಯದನ್ನು ಮಾಡುವ ಅಪರಿಚಿತರನ್ನು ಹೊಗಳುತ್ತೇವೆ. ಬಸ್ಸಿನಲ್ಲಿ ಸಹಪ್ರಯಾಣಿಕ ಅಪರಿಚಿತ ಹತ್ತಿರದಲ್ಲೇ ಕುಳಿತಿದ್ದರೂ ಆ ಪ್ರಯಾಣದ ಅವಧಿಯಲ್ಲಾದರೂ ಆತನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ.   ಆತನ ಕೈ ಮೇಲಿದ್ದರೆ ನಮ್ಮದು ಕೆಳಗಿರುತ್ತದೆ! ಹೀಗಿರುವಾಗ ನಮ್ಮ ಜೀವನ ಪರ್ಯಂತ ಜತೆಯಾಗುವ ಉತ್ತಮ ಬಂಧುಗಳಿದ್ದರೆ ಅವರನ್ನು ಹೊಗಳುವುದರಲ್ಲಿ ಸಂಕೋಚ ಬಿಗುಮಾನ ಯಾಕಿರಬೇಕು? ಈ   ಸ್ನೇಹ ಗೌರವದ ಬಂಧುಗಳು ಪರಮಾತ್ಮನಿಗೆ ಸಮ, ಯಾಕೆಂದರೆ ಉತ್ತಮ ಬಂಧುಗಳು ಜತೆಗಿದ್ದರೆ ಪರಮಾತ್ಮನ ಸ್ಮರಣೆ ಕೂಡ ಆಗುವುದಿಲ್ಲವಂತೆ, ಹಾಗಾಗಿ ಬಂಧುಗಳು ಎನಗಿಲ್ಲ...ಎಂದು ದಾಸ ವರೇಣ್ಯರು ಹಾಡುತ್ತಾರೆ. 

        


ಮಾವ ಈಗ ನಮ್ಮೊಡನೆ ಇಲ್ಲ.  ಕಡಿದ ಮರ ಮತ್ತೂ ಚಿಗುರಿ ನನ್ನಲ್ಲಿನ್ನೂ ಈ ಪ್ರಕೃತಿಯ ಪ್ರೀತಿ ಹುದುಗಿದೆ ಎಂದು ತೋರಿಸುತ್ತದೆ ಇಲ್ಲಿನ ವಾತ್ಸಲ್ಯ  ಆ ಪ್ರೀತಿಯ ನೆರಳಿನಲ್ಲೇ ಬಂಧುತ್ವ ಮತ್ತೂ ಗಾಢವಾಗಿದೆ. ಮಾವನ ಎದುರು ಎಂದೂ ನಾನು ಪರಕೀಯ ಅನ್ನಿಸಲಿಲ್ಲ. ಪ್ರೀತಿಯ ಚಿಗುರು ಇನ್ನೂ ಹಸಿರಾಗಿಯೇ ಉಳಿದಿದೆ. ಆ ಅನುಭವ ಮಾಸದಂತೆ ಅತ್ತೆ ಭಾವಂದಿರು ಮತ್ತವರ ಸಹವರ್ತಿಗಳು ನೀರೆರೆದು ಈ  ಹಸಿರಿನ ಹಸಿವನ್ನು ಸದಾ ಜಾಗೃತ ಗೊಳಿಸಿದ್ದಾರೆ. ಈ ಬಾರಿಯ ದೀಪಾವಳಿ ಹೊಸ ಅಳಿಯನ ಮರು ಸೃಷ್ಟಿಯನ್ನು ನೀಡಿದೆ.  ಜಾಮಾತಾ  ದಶಮಗ್ರಹ....ಹೆಣ್ಣು ಹೆತ್ತವರಿಗೆ ಅಳಿಯ ಹತ್ತನೆಯ ಗ್ರಹ. ಒಂಭತ್ತಕ್ಕೆ ಗ್ರಹ ಶಾಂತಿ ಸುಲಭವಾಗಬಹುದು, ಹತ್ತನೆಯದರ ಪ್ರಭಾವ ಬಂಧುತ್ವದ ಸಂಭಂಧಗಳ  ಬುಡವನ್ನೇ ಅಲುಗಾಡಿಸುತ್ತದೆ.  ಇಲ್ಲಿ ದಶಮ ಗ್ರಹದ ಮೇಲೆ ಬಹಳ ಗೌರವ. ಮಾವನ ಊರು ಮೇಗೂರು ಇದೆ. ಅಲ್ಲಿ ಕೇವಲ ಅತ್ತೆ ಮಾವ ಮಾತ್ರವಲ್ಲ ಅಲ್ಲಿ ಬಂಧುವರ್ಗ ಮಾತ್ರವಲ್ಲ ಪರಿಸರ ಪ್ರಕೃತಿ ಎಲ್ಲವೂ ಅಳಿಯ ಗ್ರಹನನ್ನು ಗೌರವದಿಂದ ಕಾಣುತ್ತದೆ. ಇಲ್ಲಿನ ಶುದ್ದ ಸಂಸ್ಕಾರವದು. ಅಳಿಯ ಎಂದರೆ ಸಾಕ್ಷಾತ್ ದೇವರು. ನವಗ್ರಹದ ಚಲನೆಯನ್ನಾದರು ಮರೆತು ಬಿಡಬಹುದು, ಆದರೆ ಈ ಅಳಿಯನೆಂಬ ಹತ್ತನೆಯ ಗ್ರಹದ ಚಲನೆ ಮೇಲೆ ಸದಾ ಕಣ್ಣು. ಒಬ್ಬರಲ್ಲ ಒಬ್ಬರು ಗಮನಿಸುತ್ತಾ ಇರುತ್ತಾರೆ. ಅಳಿಯ...ಕಾಫಿ ಕುಡಿದರಾ, ಅಳಿಯ ನಿದ್ದೆಗೆ ಜಾರಿದರಾ, ಅಳಿಯನ ತಲೆಗಿಟ್ಟ ದಿಂಬು ಮೆತ್ತಗೆ ಇದೆಯಾ...ಹೀಗೆ ಹತ್ತು ಹಲವು ಅಳಿಯನ ಚಟುವಟಿಕೆಗಳು ಗಾಜಿನ ಮನೆಯಲ್ಲಿಟ್ಟಂತೆ ಸದಾ ಗಮನಾರ್ಹ. ಹಲವು ಸಲ ಅನ್ನಿಸಿದ್ದಿದೆ...ನನ್ನ ಹಿಂದೆ ಯಾವುದೋ ಸಿ ಸಿ ಕ್ಯಾಮೆರ ಇದೆ ಎಂದು. ನಾನು ಏನು ಮಾಡಿದರೂ  ಯಾರದರೊಬ್ಬರ ಮನಸ್ಸಿನಲ್ಲಿ ಅದು ದಾಖಲಾಗಿರುತ್ತದೆ.  ಹೀಗಿರುವುದರಲ್ಲೇ ಒಂದು ಗಾಂಭೀರ್ಯ. ಅಳಿಯ ಎಂದರೆ ಗಂಭೀರ. ನಿಮ್ಮಲ್ಲಿ ಇಲ್ಲದೇ ಇದ್ದರು ಅದನ್ನು ತುಂಬಿಸಿಬಿಡುತ್ತಾರೆ. ಆತ್ಮೀಯತೆ ಗೌರವ ನಿಮ್ಮ ಮನಸೋ ಇಚ್ಛೇ ಅಹಮಿಕೆ ಇಲ್ಲದೆ ಅನುಭವಿಸಬಹುದು. ಎಂತೆಂತಹ ದಶಮಗ್ರಹದ ಭ್ರಮಣವನ್ನು ಸಂಬಂಧಗಳನ್ನು ಕಂಡಿದ್ದೇನೆ. ಈ ಎಲ್ಲದರ ನಡುವೆ ನನ್ನದೇ ಅತ್ಯಂತ ವೈಶಿಷ್ಟ್ಯ ಎನಿಸುತ್ತದೆ. ಅದಕ್ಕೆ ಕಾರಣ ನಾನಂತೂ ಅಲ್ಲ ಎಂಬ  ಪ್ರಜ್ಞೆ ಸದಾ ಜಾಗ್ರತವಿರುತ್ತದೆ. ಅದೇ ದಶಮಗ್ರಹದ ಅನಗ್ರಹವೋ ಆಗ್ರಹವೋ ಹೇಳುವುದು ಕಷ್ಟ. 


ಈ ಬಾರಿ ದೀಪಾವಳಿಗೆ ಹೋಗಲೇ ಬೇಕೆಂಬ ಛಲದಲ್ಲಿ ಹೋದೆ. ಕಳೆದ ದಿನಗಳನ್ನು ಪುನಃ ನವೀಕರಿಸುವ ತವಕ. ಅದೇ ಸಂಭ್ರಮ ಅದೇ ಸಡಗರ. ಮಾವ ಇಲ್ಲದೇ ಇರುವುದೊಂದೆ ಕೊರತೆಯಾದರೂ ಅಳಿಯನೆಂಬ ಗ್ರಹಗತಿಯ ಚಲನೆಗೆ ಭಂಗವಿರಲಿಲ್ಲ. ದೀಪಾವಳಿ ಬೆಳಕಿನಲ್ಲಿಹಾರ್ದಿಕವಾದ  ಸಂತಸದ ಎರಡು ದಿನ ಕಳೆದು ನಿರ್ಗಮಿಸುವಾಗ ಯಥಾ ಪ್ರಕಾರ ಹೃದಯ ಭಾರವಾಗುತ್ತದೆ. ದಶಮಗ್ರಹ ಭಾರವಾದರು ಚಲನೆಯನ್ನು ಸ್ಥಗಿತಗೊಳಿಸುವಂತಿಲ್ಲ. ಅದು ಚಲನಶೀಲವಾಗಿ ಚಲಿಸುತ್ತ ಇರಬೇಕು. ಮುಂದಿನ ದೀಪಾವಳಿ ನಿರೀಕ್ಷೆಯಲ್ಲಿ ಮತ್ತೆ ಯಾವ ಮನೆಯಲ್ಲಿ ನೆಲೆಯಾಗುವುದೋ ಕಾಣಬೇಕು.  


 








No comments:

Post a Comment