Saturday, June 17, 2023

ಪಿತೃದೇವೋಭವ...

 

            ಅಪ್ಪ......ಎಂದರೆ ಹೌದು ಎಂಬರ್ಥವೂ ಇದೆ.  ಒಡೆಯ ಎಂಬರ್ಥವೂ ಇದೆ. ಎಲ್ಲವೂ ಧನಾತ್ಮಕ ಚಿಂತನೆಯ ಅರ್ಥಗಳು. ಅಪ್ಪ ಎಂಬುದು ಎಂದಿಗೂ ಧನಾತ್ಮಕವಾಗಿ ಕಾಣುತ್ತದೆ. ಮಗು ಹುಟ್ಟಿದ ಕೂಡಲೇ ಅಮ್ಮನನ್ನು ಕಂಡರೂ ಮಗುವಿಗೆ ಆದರ್ಶ ಕಥಾನಾಯಕನಾಗುವುದು ಅಪ್ಪ. ಆ ಅಪ್ಪನ ಸ್ಥಾನ ಅದೆಂದಿಗೂ ಶ್ರೇಷ್ಠ.  ಹುಟ್ಟಿ ಬೆಳೆದು ಬಾಲ್ಯ ಕಳೆದು ಯೌವ್ವನದಲ್ಲಿ ಅಪ್ಪನ ಸ್ಥಾನ ಅಲಂಕರಿಸಿದಾಗ  ಸಮಾಜದ ಒಂದು ಮುಖ್ಯ ಜವಾಬ್ದಾರಿಯನ್ನು ಹೆಗಲಿಗೇರಿಸಿದಂತೆ. ಬದುಕಿನ ಬಹು ಮುಖ್ಯ ಪದವಿ, ಅದೂ ಮಧ್ಯಮ ನೆಲೆಯ ಪದವಿ ಯಾಕೆಂದರೆ, ಬದುಕು ಬೆಳೆದು ಬೆಳೆದು ಉತ್ತುಂಗಕ್ಕೆ ಏರಿ  ಆನಂತರ ಅಸ್ತಂಗತದತ್ತ ಇಳಿಯುತ್ತ ಸರಿಯುವ  ಹಂತ ಇದು. ಅಪ್ಪನಾಗುವುದು ಅದೂ ಒಬ್ಬ ಆದರ್ಶಮಯ ಅಪ್ಪನಾಗುವುದು ಎಂದರೆ ಅದು ಕೇವಲ ಒಂದು ಬದುಕಿಗೆ ಮಾತ್ರವಲ್ಲ ಸಮಗ್ರ ಸಮಾಜಕ್ಕೆ ಹಿಡಿದ ಕನ್ನಡಿಯಂತೆ. ಅಪ್ಪನ ಸ್ಥಾನದ ಗಂಭೀರತೆ ಮತ್ತದರ ಪ್ರಾಮುಖ್ಯತೆ ಅಪ್ಪನಾದಾಗಲೇ ಅರಿವಾಗುತ್ತದೆ. ತಾನು ನಡೆದ ಹಾದಿಯ ನೆನಪಲ್ಲಿ ತಮ್ಮ ನಂತರದ ರೇಖೆಯನ್ನು ಎಳೆಯುವ ಪರಿ ನಿಜಕ್ಕೂ ಅದ್ಭುತ ರಮ್ಯ ಅನುಭವ. ಅದುವರೆಗೆ ಮಗನಾಗಿ ಬದುಕಿದ, ಮರವನ್ನು ಆಶ್ರಯಿಸಿದ ಬಳ್ಳಿ ಆನಂತರ ಸರ್ವ ಸ್ವತಂತ್ರವಾಗುವುದು ಮಾತ್ರವಲ್ಲ ಪಕ್ಕದ ಮತ್ತೊಂದನ್ನು ಹೆಗಲಿಗೇರಿಸಿ ಆಧಾರವಾಗುವ ಅಪ್ಪನ ಜವಾಬ್ದಾರಿ ಬಹಳ ಗುರುತರವಾದದ್ದು. ಹುಟ್ಟಿದ ಮಗುವಿಗೆ ಅಮ್ಮನ ಮಮತೆ ಪ್ರೀತಿ ಅತ್ಯಂತ ಶ್ರೇಷ್ಠವಾದರೂ ಅಪ್ಪನ ವಾತ್ಸಲ್ಯ ಅದೊಂದು ದಿವ್ಯ ಔಷಧಿಯಂತೆ. ಅದು ತುಂಬುವ ಚೈತನ್ಯ ಮುಂದೆ ಅಪ್ಪನಾಗುವ ತನಕವೂ ಜೀವ ಸೆಲೆಯನ್ನು ಒದಗಿಸುತ್ತದೆ. 

            ಅದರೂ  ಕೆಟ್ಟ ಅಪ್ಪ ಇರಬಹುದು ಕೆಟ್ಟ ಅಮ್ಮ ಇರಲಾರಳು ಎಂಬ ಮಾತು ಇರಬಹುದು. ಆದರೂ ಅಪ್ಪ ಅಪ್ಪನೇ. ಅದೊಂದು ದಿವ್ಯ ಸ್ಥಾನ. ಬದುಕಿನ ದರ್ಶನವನ್ನು ಒದಗಿಸುವ ಮಾರ್ಗದರ್ಶಿತ್ವ ಇಲ್ಲಿಂದಲೇ ಒದಗಬೇಕು. ಕೆಟ್ಟ ಅಮ್ಮ ಇರಲಾರಳು. ಆದರೆ ಅಪ್ಪ ಎಂಬುದು ಇಲ್ಲದಿದ್ದರೆ ಅದೊಂದು ಅಪೂರ್ಣ ಬದುಕಾಗಿಯೇ ಇರುತ್ತದೆ. ನರ ನರದಲ್ಲಿ ಬೇಕಾಗಿಯೋ ಬೇಡವಾಗಿಯೋ ಇಷ್ಟವಿದ್ದು ಇಲ್ಲದೇ ಅಪ್ಪನ ಅಂಶಗಳನ್ನು ತುಂಬಿಕೊಳ್ಳುತ್ತಾ ಅಪ್ಪನ ಪ್ರತಿನಿಧಿಯಾಗಿ ತೋರಿಕೊಳ್ಳುತ್ತಾ ಬದುಕು ಸವಿಸುವುದು ಬದುಕಿನಲ್ಲಿ ಅಪ್ಪನ ಪ್ರಾಧಾನ್ಯತೆಯನ್ನು ತೋರಿಸುತ್ತದೆ.  ಹಾಗಾಗಿಯೆ ಪಿತೃಕಾರ್ಯವೆಂದರೆ ಅಲ್ಲಿ   ಬದುಕಿನ ಪರಿಪೂರ್ಣತೆ ಇರುತ್ತದೆ. ಅಪ್ಪನಾಗುವುದು ಅಪ್ಪನಾಗಿ ಉಳಿಯುವುದು ಎಲ್ಲವೂ ಜೀವನ ಚಕ್ರದ ಕೇಂದ್ರ ಬಿಂದುವಿನಂತೆ. ಬದುಕು ಇಲ್ಲಿಂದಲೇ ಆರಂಭವಾಗುತ್ತದೆ. ಮತ್ತದು ಇಲ್ಲೇ ಪೂರ್ಣವಾಗುತ್ತದೆ. 

        
ಅಪ್ಪ ಎಂದರೆ ನನಗೆ ಇಷ್ಟವಾಗುವ ವ್ಯಕ್ತಿತ್ವ. ಹುಟ್ಟಿಸಿ ಬೆಳೆಸಿ ತನ್ನದೆಲ್ಲವನ್ನೂ ಧಾರೆ ಎರೆದು ತನ್ನ ಪ್ರತಿಬಿಂಬವನ್ನು ರೂಪಿಸುವ ಸ್ಥಾನ. ಬಾಲ್ಯದಿಂದಲೇ ಇದರಿಂದ ವಂಚಿತನಾಗಿ ಆ ಪದವಿಯ ಮೌಲ್ಯ ಅದರ ನಷ್ಟ ಅದೆಲ್ಲವನ್ನು ಗಮನಿಸಿದ್ದೇನೆ. ಯಾವುದೇ ಒಂದು ವಸ್ತುವಿನ ಮೌಲ್ಯ ಪೂರ್ಣವಾಗಿ ಅರಿವಾಗುವುದು ಅದು ಇಲ್ಲದಾಗ. ಹಾಗಾಗಿ ಮೌಲ್ಯ ಕಟ್ಟಲಾಗದ ಆ ವಸ್ತುವನ್ನು ಬದುಕಿನಾದ್ಯಂತ ಸ್ಮರಿಸಿ ಆ ಅಪ್ಪನಿಗಾಗಿ ಏನಾದರೊಂದು ಮಾಡುವುದು ಸಾಧ್ಯವಾಗಿದ್ದರೆ ಅದು ಕೇವಲ ಸ್ಮರಣೆ ಮಾತ್ರಕ್ಕೆ ಸೀಮಿತವಾಗಿ ಉಳಿಯುತ್ತದೆ. ಹೃದಯದಲ್ಲಿ ಅಳಿಯದೇ ಉಳಿದ ಆ ಅಪ್ಪನ ಚಿತ್ರಣವನ್ನು ಮತ್ತೊಮ್ಮೆ ಸ್ಮರಿಸುತ್ತಾ ಎಲ್ಲರಿಗೂ ಅಪ್ಪಂದಿರ ದಿನದ ಶುಭಾಶಯಗಳು. ಓ ಪಿತನೇ ನಿನಗೆ ಅನಂತ ಪ್ರಣಾಮಗಳು. 


No comments:

Post a Comment