Monday, June 19, 2023

ಎರಡು ಕಂಬನಿಯ ಕಥೆಗಳು.


ನನ್ನ ಸ್ನೇಹಿತರೊಬ್ಬರು ಹೇಳಿದ ಸಂಗತಿ. ಅವರ ಮನೆ ಬೆಂಗಳೂರಿನ ಬನಶಂಕರಿ ಬಳಿಯಲ್ಲಿ ಏಲ್ಲೋ ಇದೆ. ಅವರ ಮನೆ ಬಳಿಯಲ್ಲಿ ಒಂದು ಚಿಕ್ಕ ಕಿರಾಣಿ ಅಂಗಡಿ ಇದೆ. ಸ್ನೇಹಿತರು ಅಲ್ಲಿಂದಲೇ ನಿತ್ಯ  ಬೇಕಾದ ಸಾಮಾಗ್ರಿಗಳನ್ನು  ತರುತ್ತಿದ್ದರು. ದೊಡ್ಡ ಶಾಪಿಂಗ್ ಸೆಂಟರ್ ಗೆ ಹೋಗುವಷ್ಟು ಸಮಯವೂ ಇರುವುದಿಲ್ಲ, ಈ ಅಂಗಡಿಯವನ ಬಗ್ಗೆ ಒಂದು ವಿಧದ ಸಹಾನುಭೂತಿ ಅಷ್ಟಾದರೂ ಆತನಿಗೆ ನೆರವು ಸಿಗಲಿ ಎಂಬ ಉದ್ದೇಶ ಮಾತ್ರವಲ್ಲ, ದೊಡ್ಡ ದೊಡ್ಡ ಶಾಪಿಂಗ್ ಸೆಂಟರ್ ನಲ್ಲಿ ಒಂದು ಕಿಲೋ ತೆಗೆದು ಕೊಂಡರೆ 990 ಗ್ರಾಂ ಮಾತ್ರ ನಿಖರವಾಗಿ ಇರುತ್ತದೆ. ಈತನಲ್ಲಿ ತೆಗೆದುಕೊಂಡರೆ ಒಂದಷ್ಟು ಹೆಚ್ಚೇ ಹಾಕಿಬಿಡುತ್ತಾನೆ. ಕೊಡುವ ಹಣದಲ್ಲೂ ಒಂದಷ್ಟು ರಿಯಾಯಿತಿಯೂ ಸಿಗುತ್ತದೆ. ಆತನದು ಬಡ ಕುಟುಂಬ. ಎರಡು ಚಿಕ್ಕ ಮಕ್ಕಳು ಹೆಂಡತಿ ವೃದ್ದ ತಾಯಿ ಹೀಗೆ ಒಂದಷ್ಟು ಸಂತೃಪ್ತ ಮಧ್ಯಮ ವರ್ಗದ  ಕುಟುಂಬ.  ಮೊದಲೆಲ್ಲ ಚೆನ್ನಾಗಿ ವ್ಯಾಪಾರವಾಗುತ್ತಿತ್ತುಆದರೆ ಜಾಗತೀಕರಣದ ಪ್ರಭಾವ ಈತನಿಗೆ ಅರಿವಿಲ್ಲದೆ ಆತನ ವ್ಯಾಪಾರದ ಮೇಲೆ ಪ್ರಭಾವ ಬೀರಿತು.  ದೊಡ್ಡ ದೊಡ್ಡ ಶಾಪಿಂಗ್ ಮಾಲ್ ಗಳು ಈತ ಇರುವ ರಸ್ತೆಯಲ್ಲೇ ತೆರೆದುಕೊಂಡಿತು.  ಮನೆಗೆ ಬೇಕಾದ ಸಾಮನುಗಳನ್ನು ಆನ್ ಲೈನ್ ಮೂಲಕ ತರಿಸುವವರೂ ಹೆಚ್ಚಾಗಿ ಹೋದರು.  ಅದು ಬೆಲೆ ಹೆಚ್ಚೆ ಆದರೂ ಜನರು ಅದರ ಬಗ್ಗೆ ಗಮನ ಹರಿಸುವುದಿಲ್ಲ.  ಸಣ್ಣ ಪುಟ್ಟ ತರಕಾರಿ ಗಾಡಿಗಳು ಬೀದಿ ಬದಿ ವ್ಯಾಪಾರ ಕಣ್ಮರೆಯಾದವು. ಈತ ಮಾತ್ರ ಆದ ವ್ಯಾಪಾರದಲ್ಲಿ ಅದು ಹೇಗೋ ಕಷ್ಟದಲ್ಲಿ ಜೀವನ ನಿರ್ವಹಿಸುತ್ತಿದ್ದ. ಕೋವಿಡ್ ಸಮಯದಲ್ಲು ಕಷ್ಟವಾದರೂ ಒಂದಷ್ಟು ಜೀವನ ನಿರ್ವಹಣೆ ಸಾಧ್ಯವಾಗಿತ್ತು.  ಅಂಗಡಿಯ ಬಾಡಿಗೆ ಕರೆಂಟ್ ಬಿಲ್ ಇನ್ನಿತರ ಖರ್ಚು ವೆಚ್ಚಗಳು ಹೇಗೋ ನಿಭಾಯಿಸಿ ಹೋಗುತ್ತಿದ್ದರೆ, ಈಗ ಒಂದೆರಡು ವಾರದಿಂದ ಬದುಕು ದುರ್ಭರವಾಗಿದೆ. ವ್ಯಾಪಾರ ಕಡಿಮೆಯಾಗಿದೆ. ಆದ ವ್ಯಾಪಾರವೂ ಉದರಿ ಸಾಲದ ಗಿರಾಕಿಗಳು. ಇದರ ಮೇಲೆ ಬರೆ ಎಳೆವಂತೆ ಹೆಚ್ಚಾದ ವಿದ್ಯುತ್ ಬಿಲ್ ಬಾಡಿಗೆ ಎಲ್ಲವೂ ಸೇರಿ ಆತ ತನ್ನ ಕಿರಾಣಿ ಅಂಗಡಿಯನ್ನು ಮುಚ್ಚುವ ಹಂತಕ್ಕೆ ತಲುಪಿದ್ದಾನೆ. ಮಾಸಾಂತ್ಯದಲ್ಲಿ ಖರ್ಚು ವೆಚ್ಚ ಸರಿತೂಗಿಸಿಕೊಳ್ಳದ ಹಂತ ತಲುಪಿದ್ದಾನೆ. ಬ್ಯಾಂಕ್ ನಿಂದ ಸಾಲ ಪಡೆದು ವ್ಯಾಪಾರ ಅಭಿವೃದ್ಧಿ ಮಾಡಿ ವರ್ಷವಷ್ಟೇ ಕಳೆದಿದೆ. ಈಗ ಬ್ಯಾಂಕ್ ನ ಸಾಲ ನಿರ್ವಹಿಸುವುದು ಕಷ್ಟವಾಗಿದೆ.  ಆತನನ್ನು ಹೈರಾಣಾಗಿಸಿದ್ದು ವಿದ್ಯುತ್ ಬಿಲ್. ವಾಣಿಜ್ಯ ವಿದ್ಯುತ್ ಬಹಳ ದುಬಾರಿಯಾಗಿಬಿಟ್ಟಿತು. ಈಗ ಆತ ಅಂಗಡಿ ಮುಚ್ಚುವ ಹಂತ ತಲುಪಿದ್ದಾನೆ. ಬ್ಯಾಂಕ್ ಸಾಲಕೆ ಏನು ಎಂಬ ಚಿಂತೆಯಲ್ಲಿ ನಿತ್ಯವೂ ಕಣ್ಣೀರು ಮಿಡಿಯುತ್ತಾನೆ. ವೃದ್ದೆ ತಾಯಿ ಮಕ್ಕಳು  ದಿನಗಳು ಇನ್ನೂ ಘೋರವಾಗುವುದರಲ್ಲಿ ಅನುಮಾನವಿಲ್ಲ.  


ಇದೊಂದು ಕಥೆಯಾದರೆ ಇನ್ನೊಂದು , ದೂರದ ಹಳ್ಳಿಯೊಂದರ ಕಥೆ, ಇದು ಇನ್ನೂ ಕರುಣಾ ಜನಕ. ಇದೇನು ಹಳೆಯ ಕಥೆಯಲ್ಲ. ಆತ ವೃದ್ದ. ಮನೆಯಲ್ಲಿ ಮಗ ಸೊಸೆ ಮೊಮ್ಮಕ್ಕಳು ಎಲ್ಲ ಇದ್ದಾರೆ. ಈತನಿಗೆ ವಯೋ ಸಹಜವಾಗಿ ಆರೋಗ್ಯ ಹದಗೆಟ್ಟಿದೆ. ವಾರಕ್ಕೊಮ್ಮೆಯಾದರು ಆಸ್ಪತ್ರೆಗೆ ಹೋಗಬೇಕು. ನಿಯಮಿತವಾದ ಔಷಧಿ ಇಂಜೆಕ್ಷನ್ ಚಿಕಿತ್ಸೆ ಪಡೆಯಬೇಕು. ಊರಲ್ಲಿ ಆತನಿಗೆ ಇದಕ್ಕೆ ಸೌಕರ್ಯ ಇಲ್ಲ. ಮೊದಲೆ ಅನುಕೂಲ ಎಂದು ಹೇಳಲಾಗದ ಕುಟುಂಬ. ಮಗ ಯಾವುದೋ ಕಂಪೆನಿಯಲ್ಲಿ ಸಣ್ಣ ಉದ್ಯೋಗಿ. ಸೊಸೆ ಯಾವುದೋ ಸಂಸ್ಥೆಗೆ ಕೆಲಸಕ್ಕೆ ಹೋಗುತ್ತಾಳೆ. ಮಕ್ಕಳು  ಅವರ ಪಾಡಿಗೆ. ಈತ ಮನೆಯಲ್ಲಿ ಒಬ್ಬನೆ ಇರುತ್ತಾನೆ. ವಾರಕ್ಕೊಮ್ಮೆ ಹತ್ತಿರದ ಪೇಟೆಗೆ ಚಿಕಿತ್ಸೆ ಔಷಧಿಗೆ ಈತನೇ ಹೋಗುತ್ತಾನೆ. ಮನೆಯಿಂದ ಇರುವ ಏಕೈಕ ಸರಕಾರಿ  ಸಾರಿಗೆ ಬಸ್ ಈತನಿಗೆ ಹೋಗುವುದಕ್ಕೆ ಇರುವ ಏಕ ಅವಕಾಶ. ಅದೂ ಸಮಯಕ್ಕೆ ಬಂದರೆ ಬಂತು ಇಲ್ಲದಿದ್ದರೆ ಇಲ್ಲ. ಸಮಯಕ್ಕೆ ರಸ್ತೆ ಬದಿ ನಿಲ್ಲುವುದು ಬಂದರೆ ಹೋಗುವುದು. ಇಲ್ಲದಿದ್ದರೆ ಮರುದಿನ . ಆದರೆ ಇತ್ತೀಚೆಗೆ ಅದೂ ಸಾಧ್ಯವಾಗುತ್ತಿಲ್ಲ. ಕಾರಣ ಉಚಿತ ಸಾರಿಗೆ. ಆ ಬಸ್ ಬರುವಾಗಲೇ ಜನ ಜಂಗುಳಿಯಿಂದ ತುಂಬಿರುತ್ತದೆ. ನೇತಾಡಿ ನಿಂತು ಕೊಂಡು ಹೋಗುವಷ್ಟು ಸಮರ್ಥನಲ್ಲ. ರಸ್ತೆ ಬದಿ ನಿಲ್ಲುತ್ತಾನೆ. ಬಸ್ಸು ಬರುತ್ತದೆ. ಆದರೆ ತುಂಬಿದ ಜನ ನೋಡಿ ಅಸಹಾಯಕಾನಾಗಿ ರಸ್ತೆ ಬದಿಯಲ್ಲೇ ನಿಲ್ಲುತ್ತಾನೆ. ಕಣ್ಣಿಂದ ಕಂಬನಿ ಇಳಿಯುತ್ತದೆ. ಖಾಸಗೀ ವಾಹನ ಮಾಡಿಕೊಳ್ಳುವಷ್ಟು ಅನುಕೂಲ ಇಲ್ಲ. ಇದ್ದ ಒಂದು ಸರಕಾರಿ ಬಸ್ ನ ಕಥೆ ಹೀಗೆ. ಮನೆಯಲ್ಲಿ ಬೇರೆ ಯಾರೂ ಇಲ್ಲ. ಔಷಧಿ ಇಲ್ಲದೇ ಜೀವನ ಇಲ್ಲ.


ಈ ಕಥೆಗಳು ಕೇವಲ ಉದಾಹರಣೆಯಾಗಿರಬಹುದು. ಆದರೆ ಇದೇ ವಾಸ್ತವ. ಉಚಿತ ಕೊಡುಗೆಗಳು ಯಾರಿಗೆ ಎಷ್ಟು ಉಪಕಾರವೋ, ಯಾವ ಊರನ್ನು ಒಳ್ಳೆಯದು ಮಾಡುತ್ತವೊ ತಿಳಿಯದು. ಮಧ್ಯಮ ವರ್ಗ ಮಾತ್ರವಲ್ಲ ತೀರ ಬಡವರ ಬದುಕೂ ಒಂದು ವಿಧದಲ್ಲಿ ಶೋಚನೀಯವಾಗುತ್ತದೆ. ಮನುಷ್ಯ ಪ್ರಕೃತಿಯನ್ನು ತನ್ನ ಬೇಕು ಬೇಡಗಳ ನಡುವೆ ಪ್ರಕೃತಿ ಧರ್ಮವನ್ನು ಮರೆಯುತ್ತಾನೆ. ಪ್ರಕೃತಿ ಮುನಿಯುತ್ತದೆ. ಅದರ ಪರಿಣಾಮ ಬೇರೆ. ಪ್ರಕೃತಿ ಧರ್ಮವನ್ನು ನಿರ್ಲಕ್ಷಿಸುವಾಗ ಇನ್ನು ಉಳಿದ ಕಡೆಗೂ ಅದೇ ನಿರ್ಲಕ್ಷ್ಯ ಇರುತ್ತದೆ.  ಈ ನಡುವೆ  ಕಿರಾಣಿ ಅಂಗಡಿಯವನ ಮತ್ತು ವೃದ್ಧನ ಮತ್ತು ಇಂತಹವರ ಕಂಬನಿಗೆ ಮೌಲ್ಯ ಕೊಡುವ ಅವಕಾಶವು ಇರುವುದಿಲ್ಲ, ಯೋಚನೆಯೂ ಬರುವುದಿಲ್ಲ. ಸಣ್ಣ ಉದ್ದಿಮೆಗಳು  ನೆಲಕಚ್ಚಿವೆ. ಸಾಕಷ್ಟು ಭಂಡವಾಳ ಇದ್ದವನು ಮಾತ್ರವೇ ಉಳಿಯುವ ಹಂತ ಕ್ಕೆ ತಲುಪಿದೆ ಪರಿಸ್ಥಿತಿ. ಅದರ ನಡುವೆ ಈ ಉಚಿತಗಳ ಪ್ರಭಾವ ಯಾವ ರೀತಿಯಲ್ಲಿ ಆಗುತ್ತದೋ ದೇವರೆ ಬಲ್ಲ. ಯಾವುದಕ್ಕೂ ನಾವು ಮುಂದೊಮ್ಮೆ ಉತ್ತರ ಹೇಳಬೇಕಿದೆ. ಆದರೆ ಉತ್ತರಿಸುವ ಸಾಮಾರ್ಥ್ಯವನ್ನು ಅವಕಾಶವನ್ನೂ ನಾವು ಕಳೆದುಕೊಳ್ಳುತ್ತೇವೆ ಎಂಬುದರಲ್ಲಿ ಸಂಶಯವಿಲ್ಲ. 


ರಾಜಕೀಯ ಹಿತಾಸಕ್ತಿಗಳು ಆಢಳಿತ ಹೇಗೆ ಇರಲಿ. ಎಲ್ಲ ರಾಜಕೀಯ ಪಕ್ಷಗಳ ಧ್ಯೇಯ ಒಂದೇ ಬಕೆಟ್ ಹಿಡಿಯುವುದು, ಮತ್ತದನ್ನೇ ವಿತರಿಸುವುದು, ಯಾಕೆಂದರೆ ಅವುಗಳಿಗೂ ಅಸ್ತಿತ್ವದ ಪ್ರಶ್ನೆ.  ಜನ ಸಾಮಾನ್ಯ ಮಾತ್ರ ಇದೇ ಬದುಕು ಎಂದು ಅನಿವಾರ್ಯತೆಗೆ ಸಿಲುಕಿಬಿಡುತ್ತಾನೆ. 


 

No comments:

Post a Comment