Wednesday, September 27, 2023

ಉಪವಾಸ ಶಾಂತಿ

ನಿನ್ನೆ ದಿನ ನಾನು ಸಂಪೂರ್ಣ ಉಪವಾಸವನ್ನು ಅನುಭವಿಸಿದೆ. ಇದೊಂದು ವಿಸ್ಮಯ ಅನುಭವ.  ಸಾಮಾನ್ಯವಗಿ ನಾನು ಮಧ್ಯಂತರ ಉಪವಾಸ (ntermittent fasting) ಕಳೆದ ಎರಡು ವರ್ಷದಿಂದ ಮಾಡುತ್ತಿದ್ದರೂ ಒಂದು ಪೂರ್ಣ ಪ್ರಮಾಣದ ಉಪವಾಸ ಮಾಡುವ ಆಸಕ್ತಿ ಉಂಟಾಯಿತು. ನೋಡಿಯೇ ಬಿಡೋಣ ಎಂದು ಕೊಂಡು, ಯಾವಾಗಲೂ ಸಾಯಂಕಾಲ ಐದು ಘಂಟೆಗೆ ಲಘು ಆಹಾರ ತಿಂದು ರಾತ್ರಿಯ ಊಟ ಮುಗಿಸುವ ನಾನು ಮೊನ್ನೆ ಸಾಯಂಕಾಲ ಆಹಾರ ಸೇವಿಸಿ ಆ ಘಳಿಗೆಯಿಂದ ಉಪವಾಸ ಆರಂಭಿಸಿದೆ. ರಾತ್ರಿ ಕಳೆದು ಬೆಳಗ್ಗೆ ಆದಾಗ ಯಾವಾಗಲೂ ಹೊಟ್ಟೆ ಖಾಲಿಯಾಗಿರುತ್ತದೆ. ಆದರೆ ನಿನ್ನೆ ಖಾಲಿಯ ಜತೆಗೆ ಇವತ್ತು ಉಪವಾಸ ಎನ್ನುವ ನಿರ್ಧಾರದಿಂದಲೇ ಹೊಸ ಅನುಭವ ಎದುರಾಯಿತು. ಎಂದಿನಂತೆ ಯೋಗಾಭ್ಯಾಸ ಉಳಿದೆಲ್ಲ ನಿತ್ಯಕಾರ್ಯಗಳು ಇದ್ದರೂ ಬೆಳಗ್ಗಿನ ಉಪಾಹಾರ ಸೇವಿಸದೇ ಇರುವುದು ಬೆಳಗ್ಗಿನ ಒಂದು ಘಂಟೆ ಮುಕ್ತವಾಗಿ ಒದಗಿತು. ಆಹಾರ ಸೇವಿಸುವುದಿಲ್ಲ ಎಂಬ ಯೋಚನೆ ಮೊದಲು ಮನಸ್ಸಿನಿಂದ ಹೊರ ಹಾಕಿದೆ. ಪದೇ ಪದೇ ಆಹಾರ ಸೇವಿಸಲಿಲ್ಲ ಎಂಬ ಯೋಚನೆ ಇದ್ದರೆ ಹಸಿವಿನ ಬಗ್ಗೆ ಹೆಚ್ಚು ಗಮನ ಹೋಗುತ್ತದೆ. ಅದು ಇನ್ನೂ ಪರೀಕ್ಷೆಗೆ ಒಡ್ಡುತ್ತದೆ. ಹಾಗಾಗಿ ದೈನಂದಿನ ಇತರ ಕಾರ್ಯಗಳಲ್ಲಿ ಗಮನ ಹರಿಸಿದೆ. ಒಂದು ಘಂಟೆ ಕುಳಿತು ಓದಿದೆ. ನಂತರ ಕಛೇರಿ ಕೆಲಸಗಳು, ಹೆಚ್ಚಿನ ಕೆಲಸ ನಾನು ಮನೆಯಿಂದಲೇ ಮಾಡುವ ಕಾರಣ ಬಾಕಿ ಉಳಿದ, ಮಾಡಬೇಕಾದ ಎಲ್ಲಾ ಕೆಲಸಗಳ ಪಟ್ಟಿ ಮಾಡಿ ಅದನ್ನು ಮುಗಿಸುವತ್ತ ಗಮನ ಹರಿಸಿದೆ. ಅಲ್ಲಿಂದ ತಿನ್ನುವ ಯೋಚನೆ ಹಸಿವಿನ ಯೋಚನೆ ದೂರವಾಯಿತು. ಕೇವಲ ನೀರು ಮಾತ್ರ ಆಹಾರವಾಗಿ ಪದೇ ಪದೇ ನೀರು ಕುಡಿಯುತ್ತಾ ದೇಹ ಕ್ಷೀಣವನ್ನು ದೂರ ಮಾಡಿದೆ. 

ಹಸಿವು ಮನುಷ್ಯನ ದೈಹಿಕ ಚಟುವಟಿಕೆಯಲ್ಲಿ ಅತೀ ಮುಖ್ಯ. ಬಹುಶಃ ಇವತ್ತು ಪ್ರಪಂಚದ ಚಟುವಟಿಕೆಗಳಿಗೆ ಮುಖ್ಯ ಕಾರಣ ಈ ಹಸಿವು. ಅದೊಂದು ಬಾಧೆ ಎಂದು ಪರಿಗಣಿಸಿದರೆ ಅದಕ್ಕೆ ಬೇರೆ ಔಷಧಿ ಇಲ್ಲ. ಕೇವಲ ಆಹಾರ.   ಮನುಷ್ಯನಿಗೆ ಹಸಿವು ಮತ್ತು ವಿಸರ್ಜನೆ ಇವೆರಡೂ ಆರೋಗ್ಯದ ಸಂಕೇತವಾಗಿದೆ. ರೋಗ ಇಲ್ಲದೇ ಇರುವುದೇ ಆರೋಗ್ಯ.  ಅನ್ನಂ ಬ್ರಹ್ಮಾ ರಸೋ ವಿಷ್ಣು ಹೇಳಿದಂತೆ ಅನ್ನ ಎಂಬುದು ಬ್ರಹ್ಮ ರೂಪವಾಗಿ ಬೃಹದಾಕಾರವಾಗುತ್ತದೆ. ನಾವೆಷ್ಟು ಭಾಗ್ಯವಂತರು?  ಅನ್ನದಲ್ಲೂ ಬ್ರಹ್ಮನನ್ನು ಕಾಣುವ ನಮ್ಮ ಸಂಸ್ಕಾರ ಅತ್ಯಂತ ಶ್ರೇಷ್ಠ.  ಆಹಾರದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಹೀಗೆ ತ್ರಿಮೂರ್ತಿಗಳು ಆವಾಹನೆಯಾಗಿರುತ್ತಾರೆ. ತ್ರಿಮೂರ್ತಿಗಳನ್ನು ದೇಹದಲ್ಲಿ ಐಕ್ಯಮಾಡುವುದಾದರೆ ದೇಹ ಶುದ್ದಿ ಜತೆಯಲ್ಲಿ ಹೃದಯ ಶುದ್ದಿಯಾಗಬೇಕು. ಹೀಗಾಗಿ ಒಂದಷ್ಟು ಉಪವಾಸ ವಿಧಿಗಳು ಎಲ್ಲಾ ಧರ್ಮಗಳಲ್ಲೂ ಇದೆ. ಒಂದು ರೀತಿಯಲ್ಲಿ ಉಪವಾಸ ಎಂದರೆ ನಾವು ಇದ್ದ ಹಾಗೆ ಇರದೇ ಬೇರೊಂದು ರೀತಿಯಲ್ಲಿರುವುದು. ಇದು ಮತ್ತೊಂದು ಜನ್ಮ ಎತ್ತಿದಂತೆ. ದೇಹ ಎಲ್ಲ ಬರಿದಾಗಿ ಅಲ್ಲಿ ತ್ರಿಮೂರ್ತಿ ದರ್ಶನವಾಗುವುದು ಹೀಗೆ ಪವಿತ್ರವಾದ ಭಾವನೆಗಳು ಒಂದಾದರೆ ದೇಹದ ಆರೋಗ್ಯಕ್ಕೆ ಸಂಭಂದಿಸಿ ಇನ್ನೂ ಏನೋನೋ  ಗುಣಗಳು ಲಭ್ಯವಾಗುತ್ತವೆ. 

ಮಧ್ಯಾಹ್ನದ ತನಕ ಒಂದಷ್ಟು ಹಸಿವು ಬಾಧೆಕೊಟ್ಟಿತು ನಿಜ. ಆದರೆ ನೋಡೋಣ ಎಂಬ ಕುತೂಹಲವೂ ಇದೆ. ಬಡತನದಲ್ಲಿ ಅನಿವಾರ್ಯವಾಗಿ ಅನುಭವಿಸಿದ ಹಸಿವಿನ ನೆನಪು ಹೇಗೂ ಇದೆ. ಎನೂ ಇಲ್ಲದಾಗ ಅನುಭವಿಸುವ ಹಸಿವಿಗೂ ಎಲ್ಲವೂ ಒದಗಿ ಬಂದರೂ ಅದನ್ನು ದೂರವಿಡುವ ಅನುಭವ ಒಂದು ಸುಖಾನುಭವವನ್ನು ಒದಗಿಸುತ್ತದೆ.  ಗಂಡ ಹೆಂಡತಿ ಪರಸ್ಪರ ಜಗಳಾಡಿ  ಊಟ ಬಿಟ್ಟು ಕುಳಿತುಕೊಳ್ಳುವುದು ಸಾಮಾನ್ಯ. ಯಾವುದೋ ಸಾಧನೆಗೆ ಗಾಂಧೀ ಮಾರ್ಗದಂತೆ ಉಪವಾಸ ಸತ್ಯಾಗ್ರಹ ಮಾಡುವುದನ್ನೂ ಕಾಣಬಹುದು. ಉಪವಾಸವೂ ಒಂದು ಸತ್ಯದ ಆಗ್ರಹವಾಗುತ್ತದೆ. ಅಲ್ಲೆಲ್ಲಾ ಮನಸ್ಸಿನಲ್ಲಿ ಒಂದು ಬಗೆಯ ಅತೃಪ್ತಿ ಅಸಹನೆ ರೋಷಾಗ್ನಿ ಇರುತ್ತದೆ.  ಯಾರದೋ ಮೇಲಿನ ಸಿಟ್ಟಿನಲ್ಲಿ ನಮ್ಮನ್ನು ನಾವೇ ಶಿಕ್ಷಿಸಿಕೊಳ್ಳುವುದು ಮನಸ್ಸಿನ ತೃಪ್ತಿ ಎಂದು ಕಂಡು ಕೊಂಡರೂ ಅದು ಮನಸ್ಸಿನ ಸ್ಥಿಮಿತವನ್ನು ನಾಶಮಾಡುತ್ತದೆ. 

        ಇದು ಮನಸ್ಸಿನಲ್ಲಿ ತುಮುಲವನ್ನು ಹೆಚ್ಚಿಸಿ ಮನಸ್ಸಿನ ಶಾಂತಿಯನ್ನು ಕದಡಿ ಬಿಡುತ್ತದೆ. ಪರಿಣಾಮ ದೇಹದ ಆರೋಗ್ಯವೂ ಬಿಗಡಾಯಿಸಬಹುದು. ಅದೇ ಉಪವಾಸ ನಿರ್ಮಲ ಮನಸ್ಸಿನಿಂದ ಆಚರಿಸಿದಾಗ ಒದಗಿ ಬರುವ ಶಾಂತಿ ಇದೆಯಲ್ಲ ಅದು ನಿನ್ನೆಯ ದಿನದ ಅನುಭವಗಳಲ್ಲಿ ಅತ್ಯಂತ ವಿಶಿಷ್ಟವಾಗಿ ಕಂಡಿತು. ಇಡೀ ದಿನ ನಾನು ಒಂದು ವಿಸ್ಮಯಕರವಾದ ಶಾಂತಿಯನ್ನು ಅನುಭವಿಸಿದೆ. ನಿಜಕ್ಕೂ ಅದೊಂದು ಶ್ರೇಷ್ಠ ಅನುಭವ. ದೈವಾರಾಧನೆಯಲ್ಲಿ ಉಪವಾಸ ಯಾಕಿರಬೇಕು ಎಂಬುದಕ್ಕೆ ಇದು ನಿದರ್ಶನ. ಮನಸ್ಸು ಶಾಂತವಾಗಿರುತ್ತದೆ. ಮಾಡುವ ಕೆಲಸದಲ್ಲಿ ಹೆಚ್ಚು ಗಮನ ಹರಿಯುತ್ತದೆ, ಏಕಾಗ್ರತೆ ಆಸಕ್ತಿ ಎರಡೂ ಮಾಡುವ ಕೆಲಸದಲ್ಲಿ ವಿಶಿಷ್ಟ ಫಲಗಳನ್ನು ಒದಗಿಸುತ್ತದೆ. ಇಡೀ ದಿನ ನಾನು ಅನುಭವಿಸಿದ ಈ ಶಾಂತಿ ಮತ್ತೊಮ್ಮೆ ನನಗೆ ಉಪವಾಸವನ್ನು ಆಚರಿಸುವ ಪ್ರೇರಣೆಯನ್ನು ಒದಗಿಸಿದೆ. 

ಉಪವಾಸ ಹಲವು ರೀತಿಯಲ್ಲಿದೆ. ದಿನ ಇಪ್ಪತ್ತನಾಲ್ಕು ಘಂಟೆಗಳಲ್ಲಿ ಕಡಿಮೆ ಅವಧಿಯಲ್ಲಿ ಆಹಾರ ಸೇವಿಸಿ ಉಳಿದ ಅಧಿಕ ಸಮಯದಲ್ಲಿ ಉಪವಾಸ ಇರುವ ಆರೋಗ್ಯ ಪದ್ಧತಿ ಆಚರಣೆಯಲ್ಲಿದೆ. ಅದೇ ಯೋಗಾಭ್ಯಾಸದ ನಿಯಮದಲ್ಲಿ ಇದು ಸಹಜವಾಗಿ ಆಚರಿಸಲ್ಪಡುತ್ತದೆ. ರಾತ್ರಿ ಸೂರ್ಯಾಸ್ತದ ಮೊದಲು ಆಹಾರ ಸೇವಿಸಿ ಮರುದಿನ ಉಪಾಹಾರದ ತನಕ ಸುಮಾರು ಹದಿನಾರು ಘಂಟೆ ಉಪವಾಸ ಇರುವ ಮಧ್ಯಂತರ ಉಪವಾಸದ ಕ್ರಮ ಒಂದು ರೀತಿ. ಇನ್ನು ಪೂಜಾವಿಧಾನಗಳಲ್ಲಿ ಕಟ್ಟುನಿಟ್ಟಿನ ಉಪವಾಸ ಇದ್ದುಕೊಂಡು ಒಂದು ಬಗೆಯಾದರೆ, ಕೇವಲ ಅನ್ನಾಹಾರವನ್ನು ದೂರವಿಟ್ಟು ಫಲಾಹಾರವನ್ನು ಸೇವಿಸುವ ಒಂದು ಕ್ರಮ ಇನ್ನೊಂದು ಬಗೆ. ಆದರೆ ಆಹಾರ ಸೇವಿಸದೇ ಕೇವಲ ನೀರನ್ನು ಮಾತ್ರ ಸೇವಿಸುವುದು ಬಹಳ ಕಠಿಣ ಉಪವಾಸ ಕ್ರಮ. ಇನ್ನು ಮುಸ್ಲಿಂ ರಲ್ಲಿ ರಂಜಾನ್ ಮಾಸದಲ್ಲಿ ಹಗಲೂ ನೀರನ್ನೂ ಸೇವಿಸದೆ ಉಪವಾಸ ಆಚರಿಸುವ ಕ್ರಮವೂ ಇದೆ. ಹೀಗೆ ಉಪವಾಸದ ಬಗೆಗಳು ಅದರ ಅನುಷ್ಠಾನಗಳು ಬೇರೆ ಬೇರೆ ಬೇರೆಯಾಗಿರುತ್ತದೆ. 

ಹೌದು ಮನುಷ್ಯ ಸದಾ ಅಹಾರವನ್ನು ಹಿಂಸಿಸಿ ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಾನೆ. ಹಾಗಾಗಿ ಒಂದಷ್ಟು ಸಮಯ ಈ ಹಿಂಸೆಯಿಂದ ದೂರವಿದ್ದರೆ ಅದೊಂದು ವಿಶಿಷ್ಟ ಶಾಂತಿ ಲಭ್ಯವಾಗುತ್ತದೆ. ಅದೇ ಧ್ಯಾನದಲ್ಲಿ ನಾನು ಹಸಿವನ್ನು ದೂರ ಮಾಡಿದೆ. ಕೇವಲ ನೀರನ್ನು ಮಾತ್ರ ಸೇವಿಸಿದೆ. ಅದೂ ನಿನ್ನೆಯ ದಿನ ಸುಮಾರು ಎಳು ಲೀಟರ್ ಗಿಂತಲೂ ಅಧಿಕ  ನೀರು ಸೇವಿಸುವ ಪ್ರೇರಣೆಯಾಗಿ ಹೋದದ್ದು ನನಗೆ ವಿಚಿತ್ರ ಅನುಭವ.  ಬರೀ ನೀರನ್ನೇ ಸೇವಿಸಿ ದಿನ ಕಳೆಯಬಹುದು ಎಂಬ ಅನುಭವವೂ ಸಾಧ್ಯವಾಯಿತು. 

ನಿಯಮಿತವಾಗಿ ಉಪವಾಸ ಆಚರಿಸಬೇಕು. ಆದರೆ ಅದಕ್ಕೆ ದೇಹದ ಕ್ಷಮತೆ ಕೂಡ ಅನಿವಾರ್ಯ. ನಿಯಮಿತವಾಗಿ ಔಷಧಗಳನ್ನು ಸೇವಿಸುವವರಿಗೆ ಇದು ಸಾಧ್ಯವಾಗುವುದಿಲ್ಲ. ವಾಯು ಸಮಸ್ಯೆ ಇರುವವರು ನೀರನ್ನು ಸೇವಿಸುವಾಗ ಆದಷ್ಟು ಬಿಸಿ ನೀರನ್ನು ಸೇವಿಸಿದರೆ ಉತ್ತಮ. ಮೊನ್ನೆ ಐದು ಘಂಟೆಗೆ ಆರಂಭವಾದ ಉಪವಾಸ ಇಂದು ಬೆಳಗ್ಗೆ ಎಂಟು ಘಂಟೆಗೆ ಕಷಾಯ ಕುಡಿಯುವುದರೊಂದಿಗೆ ಮುಕ್ತಾಯಗೊಳಿಸಿದೆ. ಹೀಗೆ ಉಪವಾಸ ಒಂದು ದಿವ್ಯ ಅನುಭವ ಒದಗಿಸಿದ್ದು ಸುಳ್ಳಲ್ಲ. ಇದರ ನಡುವೆ ತೀರಾ ಖಾಲಿ ಹೊಟ್ಟೆಯಲ್ಲಿ  ಮುಂಜಾನೆಯ  ಯೋಗಾಭ್ಯಾಸ ಹೇಗಿರಬಹುದು ಎಂದು ತೀವ್ರವಾದ ಕುತೂಹಲವಿತ್ತು. ಕುತೂಹಲದಂತೆ ಅದೂ ಒಂದು ವಿಚಿತ್ರ ಅನುಭವವನ್ನು ಒದಗಿಸಿಕೊಟ್ಟಿದೆ. ಈ ಹೊಸ ಅನುಭವ ಹೊಸ ಉಪವಾಸಕ್ಕೆ ನಾಂದಿ ಹಾಡಿದೆ. 






Tuesday, September 26, 2023

ಸನಾತನ ಸಲ್ಲದು ಸಣ್ಣತನ

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಂ

ಧರ್ಮ-ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ॥


ಭೂಮಿಯ ಮೇಲೆ ಗಾಳಿ ಇಲ್ಲದೇ ಇದ್ದರೆ ಏನಾಗಬಹುದು? ಹೀಗೆ ಒಂದು ಪುಟ್ಟ ಮಗುವಿನಲ್ಲಿ ಕೇಳಿದರೆ ಅದರೆ ಉತ್ತರ "ಚಿಪ್ಸ್ ಪ್ಯಾಕೆಟ್ ನಲ್ಲಿ ಗಾಳಿಯೇ ಇರುತ್ತಿರಲಿಲ್ಲ"  ಎಂದು ಹೇಳಬಹುದು.  ಸಮಸ್ಯೆಯನ್ನು ಆ ಮಗು ಕಾಣುವ ರೀತಿಯದು. 

ತಾತ್ವಿಕ ವಿಚಾರಗಳ  ಮಂಡನೆಯಲ್ಲಿ ಮೇಲೆ ಹೇಳುವ  ಒಂದು ಶ್ಲೋಕ ಸಾಮಾನ್ಯವಾಗಿರುತ್ತದೆ. ಒಂದಷ್ಟು ಸಂಸ್ಕೃತ ಪದಗಳು ಸೇರಿಕೊಂಡರೆ ತಾತ್ವಿಕ ವಿಚಾರಗಳು ಗಂಭೀರವಾಗಿಬಿಡುತ್ತವೆ. ಅದು ಸಂಸ್ಕೃತದ ಶಕ್ತಿ . ಇಷ್ಟಿದ್ದರೂ ಸಂಸ್ಕೃತ ಎಂದೊಡನೆ ಒಂದು ಮಡಿವಂತಿಗೆ, ಹಳದಿ ದೃಷ್ಟಿ ಇದ್ದೇ ಇರುತ್ತದೆ. ಮೇಲೆ ಹೇಳಿದ ಭಗವದ್ಗೀತೆಯಲ್ಲಿ ಭಗವಂತ ಉಲ್ಲೇಖಿಸುವ ಧರ್ಮ ಯಾವುದು? ಹಾಗೆ ವಿಶ್ಲೇಷಣೆ ಮಾಡುತ್ತಿದ್ದರೆ, ಸಮಗ್ರ ಭಗವದ್ಗೀತೆಗೆ ಹಲವಾರು ಅರ್ಥಗಳು ಹುಟ್ಟಿಕೊಳ್ಳುತ್ತವೆ. ನೋಡುವ ದೃಷ್ಟಿಕೋನದಲ್ಲಿ ನಮ್ಮ ದೃಷ್ಟಿ ಸಾಮಾರ್ಥ್ಯ ಎಷ್ಟಿದೆಯೋ ಅದನ್ನು ಅವಲಂಬಿಸಿ ಅದು ವಿಶಾಲವಾಗುತ್ತಾ ಹೋಗುತ್ತದೆ. ಹಾಗೆ ಕಾಣಿಸಿಕೊಳ್ಳದೇ ಇದ್ದರೆ ಅದು ಭಗವದ್ಗೀತೆ ಎಂದಾಗುವುದಾದರೂ ಹೇಗೆ? ಆದರೂ ಧರ್ಮ ಎಂದು ಭಗವಂತ ಯಾವುದನ್ನು ಹೇಳಿರಬಹುದು. ಸಾಮಾನ್ಯ ತರ್ಕಕ್ಕೆ ಒಡ್ಡಿಕೊಳ್ಳುತ್ತಾ ಹೋದರೆ ಮಹಾಭಾರತದಲ್ಲಿ ಭಗವಂತನ ಅವತಾರ ಯಾವ ಧರ್ಮ ಉದ್ದರಿಸುವುದಕ್ಕೆ ಆಗಿರಬಹುದು? ಮಹಾ ಭಾರತದಲ್ಲಿ ಯಾವ ಧರ್ಮ ನಿರ್ದಿಷ್ಟವಾಗಿ ಸ್ಥಾಪನೆಯಾಯಿತು?  ಆ ಧರ್ಮ ನಾವು ಈಗ ಯಾವುದನ್ನು ಧರ್ಮ ಎಂದು ಕಾಣುತ್ತೇವೆಯೋ ಆ ಧರ್ಮ ಖಂಡಿತ ಆಗಿರಲಿಕ್ಕಿಲ್ಲ. ಮಹಾಭಾರತದಲ್ಲಿ ಭಗವಂತ ಉದ್ದರಿಸಿದ ಧರ್ಮ ಯಾವುದು? ಬ್ರಾಹ್ಮಣ ಧರ್ಮವೇ? ಕ್ಷಾತ್ರ ಧರ್ಮವೇ? ಅಥವಾ ಇನ್ನಿತರ ವರ್ಣರೂಪದ ಧರ್ಮಗಳೇ? ಯಾವ ಬ್ರಾಹ್ಮಣನನ್ನೂ ಭಗವಂತ ನಿರ್ದಿಷ್ಟವಾಗಿ ಉದ್ದರಿಸಲಿಲ್ಲ. ಒಂದು ವೇಳೆ ಭಗವಂತ ಬ್ರಾಹ್ಮಣಧರ್ಮವನ್ನು ಉದ್ದರಿಸುತ್ತೇನೆ ಎಂದಿದ್ದರೆ  ಈಗಿನ ವಿರೋಧಿ ಮನಸ್ಸುಗಳ ಪ್ರತಿಕ್ರಿಯೆಗಳು ಹೇಗಿರುತ್ತಿದ್ದವು?  ಅದರೂ ನಾವು ಒಂದು ಪೂರ್ವಾಗ್ರಹದ ಧರ್ಮದ ದೃಷ್ಟಿಕೋನದದಿಂದಲೇ ಭಗವದ್ಗೀತೆಯನ್ನು ಕಾಣುವಾಗ ಈ ಉತ್ತರ ಕೊಡಲಾಗದ ಪ್ರಶ್ನೆಗಳು ಎದುರಾಗುತ್ತವೆ. 

ಭಗವಂತ ಹೇಳಿದ ಧರ್ಮ ಯಾವುದು? ಅಥವ ಧರ್ಮ ಎಂಬುದರ ಅರ್ಥವೇನು? ಅದನ್ನು ಯೋಚಿಸದೇ ನಾವು ಧರ್ಮವನ್ನು ಯಾವ ದೃಷ್ಟಿಕೋನದಿಂದ ಕಾಣುತ್ತೇವೆಯೋ ಅದೇ ದೃಷ್ಟಿಯಲ್ಲಿ ನಂಬಿಬಿಡುತ್ತೇವೆ. ಮುಖ್ಯವಾಗಿ ನಮ್ಮ ಕಣ್ಣಿಗೆ ಬಣ್ಣದ ಪರೆಯನ್ನು ಹಿಡಿದು ಅದೇ ಬಣ್ಣದ ಬೆಳಕಿನಲ್ಲಿ ಧರ್ಮವನ್ನು ಕಂಡು ಅದೇ ಬಣ್ಣ ಎಂದು ಹೇಳುವ ಒಂದು ಬಗೆಯ ಪಾಮರ ಸ್ವಭಾವವನ್ನು ಪ್ರದರ್ಶಿಸುತ್ತೇವೆ.  ಭೂಮಿ ಮೇಲೆ ಗಾಳಿ ಎಂಬುದು ಇಲ್ಲದಿದ್ದರೆ ಏನಾಗಬಹುದು ಎಂದು ಈಗಿನ ಮಗುವಿನಲ್ಲಿ ಕೇಳಿದರೆ ಆ ಮಗು ಉತರಿಸುತ್ತದೆ, " ಗಾಳಿ ಇಲ್ಲದೇ ಇದ್ದರೆ ಚಿಪ್ಸ್ ಪ್ಯಾಕೆಟ್ ನಲ್ಲಿ ಗಾಳಿಯೇ ಇರುತ್ತಿರಲಿಲ್ಲ"  ಬಹಳ ವಿಡಂಬನೆಯಾಗಿರಬಹುದು ಈ ಉತ್ತರ. ಆ ಮಗುವಿನ ಅರಿವಿನ ಪ್ರಪಂಚದ ವಿಸ್ತಾರ ಅದು. ಹಾಗೆಂದು ಭೂಮಿಯ ಮೇಲಿನ ಗಾಳಿಯ ಅಸ್ತಿತ್ವದ ಬಗೆಗಿನ ಜ್ಞಾನ ಶೂನ್ಯವಾಗುವುದಿಲ್ಲ. ಆ ಮಗುವಿನ ದೃಷ್ಟಿ ಕೋನ ದೃಷ್ಟಿ ಸಾಮಾರ್ಥ್ಯ ಅಷ್ಟಕ್ಕೆ ಸೀಮಿತ. ಹಾಗಾಗಿ ಈಗ ಧರ್ಮ ಎಂಬುದು ಅನರ್ಥವನ್ನು ಕಲ್ಪಿಸಿಕೊಂಡಲ್ಲಿ ಧರ್ಮದ ಸ್ಥಾನ ಭ್ರಷ್ಟವಾಗುವುದಿಲ್ಲ, ಬದಲಿಗೆ ಮನುಷ್ಯನ ಬುದ್ಧಿ ಭ್ರಷ್ಟವಾಗುತ್ತದೆ. 

ಬೀಜ ಮೊಳಕೆಯೊಡೆಯುತ್ತದೆ, ಗಿಡವಾಗುತ್ತದೆ,ಮರವಾಗುತ್ತದೆ, ಹೂ ಅರಳುತ್ತದೆ, ಕಾಯಿ ಹಣ್ಣಾಗುತ್ತದೆ. ಇದು ಪ್ರಕೃತಿ ಧರ್ಮ.  ಈ ಜೀವರಾಶಿಗಳು ಚರಾಚರವಸ್ತುಗಳು ಸಹಜವಾದ ಒಂದು ಧರ್ಮದ ಅಸ್ತಿತ್ವವನ್ನು ಹೊಂದಿದೆ. ಆ ಆವರಣದ ಒಳಗೆ ಇರುವುದೇ ಜಗತ್ತು. ಈ ಸಹಜ ಧರ್ಮಗಳನ್ನು ಮೀರುವುದೇ ಧರ್ಮಗ್ಲಾನಿ ಎನಿಸಲ್ಪಡುತ್ತದೆ. ಪುರಾಣದಲ್ಲಿ ಶ್ರೀಕೃಷ್ಣ ಕಾಳಿಂಗ ಮರ್ದನ ಮಾಡುವ ಕಥೆ ಇದೆ. ಕಾಳಿಂಗ ಮರ್ದನ ಆತ ಮಾಡಿದ್ದಾನೆ ಎಂದರೆ ಇದ್ದ ಎಲ್ಲ ಸರ್ಪಗಳನ್ನು ಕೊಂದು ನಾಶ ಮಾಡಬೇಕೆಂದು ಅರ್ಥವಲ್ಲ. ಉಳಿದ ಜೀವಸಂಕುಲಗಳನ್ನು ಭಗವಂತ ಹೇಗೆ ಕಾಣುತ್ತಾನೋ  ಅದನ್ನೆ ಸರ್ಪದಲ್ಲು ಕಾಣುತ್ತಾನೆ. ಹಾಗಾದರೆ ಕಾಳಿಂಗ ಮರ್ದನ ಯಾಕಾಯಿತು? ಇದರ ಆಳವನ್ನು ತಿಳಿದರೆ ಧರ್ಮಾಧರ್ಮದ ಅರಿವು ಸಾಧ್ಯವಾಗುತ್ತದೆ. ಅಧರ್ಮ ಎಷ್ಟು ಆಳದಲ್ಲಿದ್ದರೂ ಭಗವಂತ ಅದರ ಅಸ್ತಿತ್ವವನ್ನು ಬಯಸುವುದಿಲ್ಲ. ಹಾಗಾಗಿ ಆಳದಲ್ಲಿದ್ದ ಸರ್ಪದ ಮರ್ದನವಾಗುತ್ತದೆ. 

ಧರ್ಮ ಎಂದರೆ ಏನು? ಸಕಲ ಜೀವರ ರಾಶಿಗಳಲ್ಲಿ ಶ್ರೇಷ್ಠ ಮನುಷ್ಯ. ಆತ ನಗುತ್ತಾನೆ, ಅಳುತ್ತಾನೆ, ಮಾತನಾಡುತ್ತಾನೆ. ಹೀಗೆ ಉಳಿದೆಲ್ಲ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ. ಅದು ಧರ್ಮ.  ನಾಯಿ ನಿಕೃಷ್ಟವಾಗಿ ಹೇಳಿದರೂ, ಒಂದು ಬೀದಿ ನಾಯಿಕೂಡ ವ್ಯಕ್ತ ಪಡಿಸುವ ಭಾವನೆಯನ್ನು ಬೇರೆ ಪ್ರಾಣಿಗಳು ವ್ಯಕ್ತ ಪಡಿಸುವುದಿಲ್ಲ. ಸಂತಸವಾಗುವಾಗ ಬಾಲ ಅಲ್ಲಾಡಿಸುತ್ತದೆ. ಅದು ಅನುಭವಿಸುವ ಭಾವನೆಗಳನ್ನು ತನ್ನ ಕಣ್ಣು ಕಿವಿಯಿಂದ ಅದು ವ್ಯಕ್ತ ಪಡಿಸುವ ರೀತಿ ಬೇರೆ ಪ್ರಾಣಿಗಳಿಗೆ ಇರುವುದಿಲ್ಲ. ಹುಲಿ ಸಿಂಹ ಎಂದಾದರೂ ನಗುವುದನ್ನು ನೋಡುವುದಕ್ಕೆ ಸಾಧ್ಯವೇ? ಎಂತಹ ರುಚಿಕರ ಮಾಂಸಾಹರ ಸಿಕ್ಕರೂ ಅವುಗಳು ವ್ಯಗ್ರತೆಯಿಂದಲೇ ನೋಡುತ್ತದೆ. ಅದಕ್ಕೆ ಸಂತೋಷವಾದರೂ ಮುಖ ವ್ಯಗ್ರವಾಗಿಯೇ ಇರುತ್ತದೆ. ಅದು ಅದರ ಸಹಜ ಧರ್ಮ. ಒಂದು ವೇಳೆ ಅದು ನಗುವುದಕ್ಕೆ ತೊಡಗಿದರೆ ವಿಚಿತ್ರ ಎನಿಸಬಹುದು.   ಇದನ್ನೇ ಪ್ರಕೃತಿ ಧರ್ಮ ಎನ್ನುವುದು. ಈ ಪ್ರಕೃತಿ ಸಾರುವ ಧರ್ಮಕ್ಕೆ ಗ್ಲಾನಿಯಾಗುವಾಗ ಮೇಲೆ ಹೇಳಿದಂತೆ ಸಂಭವಾಮಿ ಯುಗೇ ಯುಗೇ ಎಂದಾಗುತ್ತದೆ. ನಾವು ಇವತ್ತು ಹುಲಿ ಸಿಂಹಗಳನ್ನು ನಗಿಸುವುದಕ್ಕೆ ಪ್ರಯತ್ನಿಸುತ್ತೇವೆ. ಪ್ರಕೃತಿಯ ಧರ್ಮಗಳನ್ನು ಮೀರಿ ಬದುಕುತ್ತೇವೆ. ಇಂತಹ ಜೀವನ ಕ್ರಮದಲ್ಲಿ ಸನಾತನ ಎಂಬುದು ರೋಗಗ್ರಸ್ಥವಾಗಿ ಕಾಣುತ್ತದೆ. ಅದು ಸನಾತನದ ದೋಷವಲ್ಲ. 

ಈ ಪ್ರಪಂಚದ ಉಗಮ ಅಸ್ತಿತ್ವ ಯಾವಾಗಿನಿಂದ ಆರಂಭವಾಯಿತು. ಈ ಭೂಮಿ ಈ ಬಾಹ್ಯಾಕಾಶ ಈ ಸೂರ್ಯನಂತೆ ಮತ್ತೊಂದು ಸೂರ್ಯ ಇದೆಯೋ ಇಲ್ಲವೋ ಎಂಬಷ್ಟರ ಮಟ್ಟಿಗೆ ತೆರೆದುಕೊಂಡ ಆ ಜ್ಞಾನದ ಹರಿವಿನ ಮೂಲದಲ್ಲೇ ಇದೆ ಸನಾತನ. ಅದು ಈಗ ತಿಳಿಯುವಂತೆ ಒಂದು ಧರ್ಮಕ್ಕೆ ಸೀಮಿತವಾಗಿ ಉಳಿದಿದೆ ಎಂದನಿಸುವುದಿಲ್ಲ. ಉಳಿದೆಲ್ಲ ಧರ್ಮಗಳಿಗೆ ಉಗಮದ ಕಲ್ಪನೆ ಇರಬಹುದು. ಆದರೆ ಈ ಸನಾತನ  ಇನ್ನೂ ನಿಗೂಢವಾಗಿರುವುದೇ ಅದರ ವೈಶಿಷ್ಟ್ಯ.  ಆ ಸನಾತನವನ್ನು ನಮ್ಮ ಅಳತೆಗೋಲಲ್ಲಿ ಅಳೆಯುವ ಪ್ರಯತ್ನ ಅದು ಮೂರ್ಖತನವಾಗುತ್ತದೆ.  ಜೇಸುದಾಸ್, ಬಾಲ ಮುರಳಿ ಕೃಷ್ಣ ಭೀಮಸೇನ ಜೋಷಿ ಹೀಗೆ ಸಂಗೀತರತ್ನಗಳ ಬಗ್ಗೆ ಹೇಳುವಾಗ ಅವರು "ಗಾಯಕ"  ಎಂದಷ್ಟೇ ಹೇಳಿದರೆ ಅದು ನಾವು ಕಂಡ ಅಳತೆ ಗೋಲಾಗುತ್ತದೆ. ಹೊರತು ನಿಜವಾದ ಮಾನದಂಡವಾಗುವುದಿಲ್ಲ. ಹಾಡುವವರೆಲ್ಲ ಗಾಯಕರು. ಆದರೆ ಈ ಪ್ರತಿಭೆಗಳು ಅಷ್ಟಕ್ಕೇ ಸೀಮಿತವಲ್ಲ. ಯಾವುದು ಹೇಗೆ ಹಾಡಿದರೂ ಆತ ಗಾಯಕ. ಹಾಗಿದ್ದರೆ ಇವರ ಸಾಧನೆ ಪ್ರತಿಭೆಗೆ  ಕೇವಲ ಗಾಯಕ ಎಂದರೆ ಸಾಕೇ?   ಸನಾತನ ಅರಿವು ಇರುವುದೇ ಇಂತಹ ಜ್ಞಾನದಲ್ಲಿ. ಅದನ್ನು ಅರಿಯಬೇಕಾದರೆ ಅದರ ಆಳವನ್ನು ಇಳಿಯಬೇಕು. 

ಭೋರ್ಗರೆಯುವ ಸಾಗರದ ಬದಿಯಲ್ಲಿ  ನಿಂತು ನೋಡಿದರೆ ಕೇವಲ ಕೆಲವು ಅಲೆಗಳನ್ನಷ್ಟೇ ನಾವು ಕಾಣಬಹುದು.  ದೂರದಿಂದ ಕಂಡವರು ಹೇಳಬಹುದು ಸಮುದ್ರ ಅದು . ಇಳಿಯಬೇಡ? ನಾಶವಾಗುತ್ತಿ. ಸಮುದ್ರ ಅದು ಮರಣ ಸದೃಶ.  ಹೀಗೆ ಭಯ ಹುಟ್ಟಿಸುವವರು ಇರಬಹುದು. ಆದರೆ ಸಾಧಕ ಸಾಗರದ ಆಳವನ್ನು ಅರಿಯುವ ಪ್ರಯತ್ನ ಮಾಡುತ್ತಾನೆ. ಆಳದ ಮುತ್ತು ರತ್ನಗಳನ್ನು ಗುರುತಿಸುತ್ತಾನೆ. ಸಾಗರ ಗರ್ಭದ ಪ್ರಪಂಚವನ್ನು ಕಾಣುತ್ತಾನೆ. ಮೇಲೆ ನಿಂತವನು ಅದು ಮರಣ ಸದೃಶ ಎಂದು ಹೇಳಿ ತನ್ನ ರೋಗ ಗ್ರಸ್ಥ ಮನಸ್ಸನ್ನು ಅಲ್ಲಿ ಆರೋಪಿಸುತ್ತಾನೆ.  ಸನಾತನ ಎಂದರೆ ಅದು ಸಾಗರದಂತೆ. ಅಳತೆ ಕಣ್ಣಿಗೆ ಕಾಣಬಹುದು. ಆದರೆ ಅದು ಸತ್ಯವಾಗುವುದಿಲ್ಲ. ಅದು ಅಂತಿಮವಾಗುವುದಿಲ್ಲ. ಇನ್ನೂ ಇದೆ ಭಾವವನ್ನು ಕೆರಳಿಸುತ್ತ ಪ್ರಚೋದಿಸುತ್ತಾ ಸಾಗುತ್ತದೆ. ಇದರ ಬಗ್ಗೆ ತಿಳಿಯದವರು ಅದನ್ನು ಢೆಂಗ್ಯೂ ಕೊರೋನಕ್ಕೆ ಹೋಲಿಸುತ್ತಾರೆ. ಆದರೆ ಸನಾತನ ತೋರಿಸಿಕೊಡುತ್ತದೆ ಈ ಸಾಂಕ್ರಾಮಿಕಗಳು ಕೇವಲ ದೇಹವನ್ನು ಬಾಧಿಸುತ್ತದೆ, ಅದಕ್ಕೆ ಮಿಕ್ಕಿದ ಭವರೋಗಗಳು ಇದೆ. ಆ ಭವರ ರೋಗವನ್ನು ಕಳೆಯುವ ಮಂತ್ರ ಇದ್ದರೆ ಅದು ಸನಾತನದಲ್ಲಿ.ಅಲ್ಲಿ ಕೇವಲ ಈ ಮಾರಕ ರೋಗಗಳಿಗೆ ಸೀಮಿತವಲ್ಲ. ಅದಕ್ಕೂ ಮಿಕ್ಕಿದ ಭವರೋಗದ ಅರಿವಾಗುವಾಗ ಸನಾತನ ಎಂಬುದು ರೋಗಗ್ರಸ್ಥ ಎಂದನಿಸುವುದಿಲ್ಲ. ದೇಹದ ಮೇಲೆ ಪ್ರೀತಿ ಇದ್ದವನಿಗೆ ಹಸಿವು ಎಂಬುದು ಬ್ರಹ್ಮಾಂಡ ಸಮಸ್ಯೆಯಾಗುತ್ತದೆ. ಆದರೆ ಅದನ್ನು ಮೀರಿದವನಿಗೆ ಹೊಟ್ಟೆಯ ಹಸಿವು ಹಸಿವಾಗಿ ಕಾಣುವುದಿಲ್ಲ. ಅದು ಪರೀಕ್ಷೆಯಾಗಿ ಕಾಣುತ್ತದೆ. ಕೇವಲ ಲೌಕಿಕ ಜ್ಞಾನದ ಪರಿಧಿಯಲ್ಲಿ ಹೊರಳಾಡುವವನು ಈ ಹಸಿವು ಮುಕ್ತವಾಗಬೇಕು ಎಂದು ಕನವರಿಸುತ್ತಾನೆ. ಇದೆಲ್ಲವನ್ನು ಮೀರಿದ ಹಸಿವು ಇದೆ ಎಂದು ತೋರಿಸುವುದೇ ಸನಾತನ. ಜಗತ್ತು ಇಂದು ಈ ಸನಾತನದ ಹಿಂದೆ ಓಡಿ ಬರುತ್ತದೆ. ಹಿಂದೂ ಸಂಸ್ಕೃತಿ ಇದನ್ನೇ  ಜಗತ್ತಿಗೆ ತೋರಿಸಿ ಕೊಡುತ್ತಿರುವುದು.  ಇದನ್ನು ರೋಗ ಗ್ರಸ್ಥ ಎಂದರೆ ಅದು ಕಾಣುವ ದೃಷ್ಟಿ ರೋಗಿಷ್ಠವಾಗಿರುತ್ತದೆ. 

ಕೇವಲ ಸನಾತನ ಎಂಬ ಶಬ್ದದ ಅರ್ಥ  ವಿವರಿಸಿದರೆ ಅದು ಅಷ್ಟಕ್ಕೇ ಸೀಮಿತವಾಗುವುದಿಲ್ಲ. ಸನಾತನ ಅದು ಮತ್ತೂ ವಿಶಾಲವಾಗಿದೆ. ಅದು ಎಷ್ಟು ಕಾಣಲು ಸಾಧ್ಯವಾಯಿತೋ ಅದು ನಮ್ಮ ದೃಷ್ಟಿಯ ಪರಿಧಿ. ಆದರೆ ಸನಾತನ ಅದು ಇನ್ನೂ ವಿಶಾಲವಾಗಿದೆ. ಸನಾತನದಲ್ಲಿ  ಜಾತಿ ಭೇದ, ಅಸ್ಪೃಶ್ಯತೆ ಕಂದಾಚಾರ ಮೂಢನಂಬಿಕೆ ಇಷ್ಟನ್ನು ಮಾತ್ರ ಕಾಣುವುದು ಅದು ಸಣ್ಣಮನಸ್ಸು. ಸನಾತನ ತೋರಿಸುವ ಆಧ್ಯಾತ್ಮ ಜಗತ್ತನ್ನು ಕಾಣಬೇಕಾದರೆ ಅದಕ್ಕೆ ನಿರಂತರ ಸಾಧನೆ ಅವಶ್ಯ. ಅದನ್ನು ಕಾಣುವುದಕ್ಕೆ ಕೈಲಾಗದವರು ಆಡುವ ಮಾತು ಅಲ್ಲಿ ಮೌಢ್ಯವಿದೆ, ವರ್ಣ ಭೇದವಿದೆ. ಆದರೆ ಆಧ್ಯಾತ್ಮದ ಹಾದಿಯಲ್ಲಿ ನಡೆದು ಹೋಗಬೇಕು ಆಗ ಅರಿವಿಗೆ ಬರುತ್ತದೆ ಅಲ್ಲಿ ಯಾವುದೇ ಧರ್ಮವಿಲ್ಲ. ಬ್ರಾಹ್ಮಣ, ಶೂದ್ರ ಈ ವೈಪರೀತ್ಯಗಳಿಲ್ಲ. ಪ್ರಪಂಚವೇ ಇಂದು ಈ ಆಧ್ಯಾತ್ಮಿಕ ಜ್ಞಾನಕ್ಕೆ ಬೆರಗಾಗಿ ಹೋಗಿದೆ. ಇಲ್ಲವಾದರೆ ಇಲ್ಲಿಯ ಯೋಗ ಧ್ಯಾನ ಈ ಜೀವನ ಯಾಕೆ ಜಗತ್ತು ಅಂಗೀಕರಿಸುತ್ತದೆ? ಪುರಾಣದ ಋಷಿಗಳ ತಪ್ಪಸ್ಸು ಗಮನಿಸಿದರೆ ಅರಿವಾಗುತ್ತದೆ. ಅವರು ಯಾಕಾಗಿ ತಪಸ್ಸು ಮಾಡುತ್ತಾರೆ? ಅದರ ಘನ ಉದ್ದೇಶ ಏನು? ಯಾವ ಮೂರ್ತಿಯನ್ನು ಇಟ್ಟು ಪೂಜೆ ಮಾಡುತ್ತಾರೆ? ಇದಕ್ಕೆಲ್ಲ ಉತ್ತರ ಕಾಣುತ್ತಾ ಹೋದರೆ ಈ ಜ್ಞಾನದ ಅರಿವಿನ ವಿಸ್ತಾರ ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಒಬ್ಬ ಋಷಿ ಅಥವಾ ಸನ್ಯಾಸಿ ತನಗಾಗಿ ಏನನ್ನು ಕೇಳುವುದಿಲ್ಲ. ಯಾಕೆಂದರೆ ಲೌಕಿಕವಾದ ಯಾವ ವಸ್ತು ಅವನು ಬಯಸಿದರೂ ಆತ ಸನ್ಯಾಸಿಯಾಗಲಾರ. ಯಾವುದೇ ಧರ್ಮಕ್ಕೆ ಸೀಮಿತವಾದರೂ ಆತ ಸನ್ಯಾಸಿಯಾಗಲಾರ. ಕೇವಲ ಕೃಪಣನಾಗುತ್ತಾನೆ. ಸನ್ಯಾಸಿ ಎಂಬ ಪದವಿಯ ಅರ್ಹತೆಯದು. ಕ್ಷತ್ರಿಯನಾಗಿ  ಬ್ರಹ್ಮ ತೇಜಸ್ಸನ್ನು ಗಳಿಸಿದ  ವಿಶ್ವಾಮಿತ್ರ, ನಿಕೃಷ್ಟನಾದರೂ  ರಾಮನಾಮದ ಹಿಂದೆ ಹೋದ ವಾಲ್ಮೀಕಿ...ಇಲ್ಲೆಲ್ಲೂ ವರ್ಣ ಭೇದದ ಸೋಂಕಿಲ್ಲ.  ಅವರೆಲ್ಲ  ಕಂಡ ಆಧ್ಯಾತ್ಮಿಕ ಲೋಕ ಎಂಬುದು ಕೇವಲ ಕಥೆಯಲ್ಲ. 

ಹಿಂದೂ ಅಂದರೆ ಮೂರ್ತಿ ಪೂಜೆ, ಅಸಂಖ್ಯ ದೇವರುಗಳು ರಾಮ ಕೃಷ್ಣ ಈಶ್ವರ ಗಣಪತಿ....ಮೂಢನಂಬಿಕೆಗಳು. ಆದರೆ ಇದಕ್ಕೆಲ್ಲ ಮೂಲವಾದ ಧ್ಯಾನ ಅಥವಾ ತಪಸ್ಸಿನಲ್ಲಿ ಯಾವ ಮೂರ್ತಿಯನ್ನು ಪೂಜಿಸುವುದಿಲ್ಲ. ಯಾವ ದೇವರನ್ನೂ ಆರಾಧಿಸುವುದಿಲ್ಲ. ಕೇವಲ ಅಂತರಂಗದಲ್ಲಿರುವ ಪರಮಾತ್ಮ ದರ್ಶನ. ಈ ಪರಮಾತ್ಮ ಎಂಬ ಕಲ್ಪನೆಯನ್ನು ಕೊಟ್ಟದ್ದೇ ಸನಾತನ ಧರ್ಮ. ಮೂರ್ತಿ ಎಂಬುದು ಕೇವಲ ಸಂಕೇತ. ಅದರಾಚೆಗಿರುವ ಭಾವನೆಗೆ ಮಿತಿ ಇರುವುದಿಲ್ಲ. ಇಲ್ಲಿ ಕೇವಲ ಮೂರ್ತಿಯಲ್ಲಿ ಮಾತ್ರ ದೇವರನ್ನು ಕಾಣುವುದಿಲ್ಲ. ಗಿಡ ಮರ ಪ್ರಾಣಿ ನದಿ ಸಮುದ್ರ ಭೂಮಿ ಹೀಗೆ ಪ್ರಕೃತಿಯನ್ನೇ ದೇವರಾಗಿ ಕಾಣುವ ಭಾವನೆ ಇದೆ. ಬೇರೆ ಯಾವ ಧರ್ಮದಲ್ಲಿ ಈ ಭಾವನೆ ಇರುವುದಕ್ಕೆ ಸಾಧ್ಯ.? ಹೀಗೆ ಅಂತರಂಗದ ದೈವಸ್ವರೂಪವನ್ನು ತೋರಿಸಿಕೊಟ್ಟದ್ದೇ ಸನಾತನ ಧರ್ಮ. ಅದು ಪರಮಾತ್ಮ ಹೇಳುವ ಪ್ರಕೃತಿ ಧರ್ಮ. ಅದು ಒಂದು ಜಾತಿಯಲ್ಲ. ನಿರ್ಧಿಷ್ಟವಾಗಿ ಹೇಳಿ ಅಷ್ಟಕ್ಕೆ ಸೀಮಿತವಾಗಿಸುವ ವಿಷಯವೂ ಇದಲ್ಲ. ಇದರ ಬಗ್ಗೆ ತಿಳಿಯಬೇಕಾದರೆ ಅದರಲ್ಲಿ ಇಳಿದು ನೋಡಬೇಕು. ಇಲ್ಲವಾದರೆ ಸಮುದ್ರದ ಬದಿಯಲ್ಲಿ ನಿಂತು ಕೊಂಡು ಅದನ್ನು ಅಳತೆ ಮಾಡಿದಂತೆ, ಅದು ಮೂರ್ಖತನವಾಗುತ್ತದೆ. 

ಹಿಂದೆ ಮುಂದೆ ನೋಡದೆ ಬ್ರಾಹ್ಮಣ್ಯವನ್ನು ಜರಿಯುವುದನ್ನು ಕಾಣುತ್ತೇವೆ. ವಾಸ್ತವದಲ್ಲಿ ಬ್ರಹ್ಮ ಎಂದರೆ ಏನು? ಅದು ಅರ್ಥವಿಲ್ಲದ ಪದವಲ್ಲ. ಆ ಅರ್ಥಕ್ಕಿರುವ ವಿಶಾಲತೆ ತಿಳಿದರೆ ಬ್ರಾಹ್ಮಣ್ಯದ ಪವಿತ್ರತೆ ಅರಿವಾಗುತ್ತದೆ. ಯಾವುದು ಜಗತ್ತಿನಲ್ಲಿ ಅತ್ಯಂತ ದೊಡ್ಡದು ಅದೇ ಬ್ರಹ್ಮ. ಹಾಗಾಗಿ ಜಗತ್ತನ್ನು ಬ್ರಹ್ಮಾಂಡಕ್ಕೆ ಹೋಲಿಸುವುದು. ಅದೇ ಮುಂದು ವರೆದು ಬ್ರಾಹ್ಮಣನಾದವನು ಮುಂಜಾನೆ ಎದ್ದು ಸಂಧ್ಯಾ ಕರ್ಮವನ್ನು ಆಚರಿಸುತ್ತಾನೆ. ಇಲ್ಲಿ ಯಾವ ಮೂರ್ತಿಯೂ ಇಲ್ಲ. ಯಾವ ಸಂಕಲ್ಪವೂ ಇರುವುದಿಲ್ಲ. ಕೇವಲ ತನ್ನ ಪಾಪಕ್ಷಯ, ದುರಿತ ಪರಿಹಾರಕ್ಕೆ ಆತ ಆಚರಿಸುವ ಕರ್ಮ. ಪಾಪ ಏನು?  ದುರಿತ ಏನು? ಅದು ಮನುಷ್ಯನ ಹುಟ್ಟಿನಲ್ಲೇ ಇರುತ್ತದೆ. ಈ ಜ್ಞಾನ ಲಭ್ಯವಾಗಬೇಕಾದರೆ ಅದರ ಆಳಕ್ಕೆ ಇಳಿಯಬೇಕು. ಅದು ತಿಳಿಯದೇ ಸನಾತನ ಎಂಬುದುನ್ನು ತುಚ್ಛವಾಗಿ ಕಂಡರೆ ಅದು ಸನಾತನ ಧರ್ಮದ ರೂಪವೂ ಅಲ್ಲ, ವಿಸ್ತಾರವೂ ಅಲ್ಲ. ಸನಾತನ ಧರ್ಮ ಯಾವ ಜಾತಿಭೇದ ವರ್ಣಭೇದವನ್ನು ಬೋಧಿಸುವುದಿಲ್ಲ. ಅವುಗಳೆಲ್ಲವೂ ನಂತರ ಅದರ ಮೇಲೆ ಬಳಿದ ಬಣ್ಣಗಳು. ಹಿಂದೂ ಧರ್ಮ ಇದೆಲ್ಲವನ್ನು ಕಳೆದುಕೊಂಡು ಕಾಲ ಕಾಲಕ್ಕೆ ಬದಲಾಗುತ್ತಾ ಪ್ರಕೃತಿ ಧರ್ಮಕ್ಕೆ ಸ್ಪಂದಿಸುತ್ತಾ ಎಲ್ಲ ಧರ್ಮಗಳನ್ನು ತನ್ನಲ್ಲಿ ಸೇರಿಸುತ್ತಾ ಬಂದಿದೆ. ಜಗತ್ತಿನ ಬೇರೆ ಯಾವ ಧರ್ಮವೂ ಬದಲಾಗದಂತೆ ಇದು ಬದಲಾಗಿದೆ. ಯಾಕೆಂದರೆ ಇದರ ಮೂಲದಲ್ಲಿ ಯಾವುದು ಇದೆಯೋ ಅದು ಬಣ್ಣ ಕಳಚಿ ಮತ್ತೆ ಮುನ್ನೆಲೆಗೆ ಬಂದಿದೆ. ಜಗತ್ತಿನಲ್ಲಿ ಬೇರೆ ಯಾವ ಧರ್ಮವೂ ತೋರಿಸದೇ ಇರುವ ನಾಗಾರೀಕತೆಯೆನ್ನು ಹಿಂದು ಧರ್ಮ ತೋರಿಸುತ್ತದೆ.  ಅದಕ್ಕೆ ನಿದರ್ಶನವೇ ಯೋಗ ಜೀವನ ಮತ್ತು  ಅಧ್ಯಾತ್ಮ ಲೋಕ ದರ್ಶನ. 

ಕೊನೆಯಲ್ಲಿ ಧರ್ಮೋ ರಕ್ಷತಿ ಎನ್ನುವ ಹಾಗೆ ಸನಾತನದ ವಾದ ಬರುವಾಗ, ಅದರ ಬಗ್ಗೆ ಏನು ಪ್ರತಿಕ್ರಿಯೇ ಕೊಡದೇ ಇರುವುದರಲ್ಲೇ ಅದಕ್ಕೆ ಉತ್ತರವಿರುತ್ತದೆ. ಯಾಕೆಂದರೆ ಅದು ಯಾರಿಂದಲೂ ನಾಶವಾಗುವುದಿಲ್ಲ. ಸರೋವರ ಸುಂದರವಾಗಿದೆ ಅದರ ಒಳಗೆ ಇಳಿದು ನೋಡಿ ಅನುಭವಿಸುವವರು ಕಡಿಮೆ. ಸನಾತನ ಸುಂದರವಾಗಿದೆ , ಅದನ್ನು ತಿಳಿಯಬೇಕಾದರೆ ಅದರ ಆಳಕ್ಕೆ ಇಳಿಯಬೇಕು. ಸನಾತನದ ರಕ್ಷಣೆ ಯಾರೂ ಮಾಡಬೇಕಾದ ಅವಶ್ಯಕತೆ ಇಲ್ಲ. ಅದು ಅಂದಿನಿಂದ ಇಂದಿನವರೆಗೂ ತನ್ನನ್ನು ತಾನು ರಕ್ಷಿಸುತ್ತಾ ಬಂದಿದೆ. ಅದು ಈವರೆಗೆ ಉಳಿದಿರುವುದೇ ಇದಕ್ಕೆ ನಿದರ್ಶನ.  ನಾವು ಯಾವುದೇ ಮತವನ್ನು ಮತಾಂತರ ಮಾಡಿ ಅಂಗೀಕರಿಸಬಹುದು, ಆದರೆ ಅಂತರಾತ್ಮ ಅದನ್ನು ಬದಲಿಸುವುದಕ್ಕೆ ಸಾಧ್ಯವಿಲ್ಲ. ಅದೆಂದು ಬದಲಾಗುವುದೂ ಇಲ್ಲ. ಬಹಿರಂಗದಲ್ಲಿ ಯಾವುದನ್ನೋ ಹೇಳಬಹುದು, ಆದರೆ ಅಂತರಂಗದಲ್ಲಿ ಅದು ಶಿವನೋ ರಾಮನೋ ಅದೇ ಮೂಲ ಸ್ವರೂಪದಲ್ಲಿರುತ್ತದೆ.  


ಮಂಗಲಂ ಭಗವಾನ್ ವಿಷ್ಣು ಮಂಗಲಂ ಮಧು ಸೂದನ 

ಮಂಗಲಂ ದೇವಕೀ ಪುತ್ರೋ ಮಂಗಲಂ ಗರುಡ ಧ್ವಜ

ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರ

ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಚತಿ.

ಪ್ರತಿ ಬಿಂದು ನೀರು ಸಾಗರದ ಕಡೆಗೆ ಸಂಚರಿಸುವಂತೆ ಯಾವ ದೇವರನ್ನು ನಮಸ್ಕರಿಸಿದರೂ ಅದು ಸೇರುವುದು ಒಂದೇ ಪರಮಾತ್ಮನಲ್ಲಿಗೆ. 




Monday, September 18, 2023

ಆವಳ ಮಠದ ಸುತ್ತ

        ಬಹಳ ಸಮಯದ ನಂತರ ಮೊನ್ನೆ ಊರಿಗೆ ಹೋಗಿದ್ದೆ. ಊರಿಗೆ ಹೋದಾಗ ಯಾವುದಾದರೂ  ಒಂದು ದೇವಾಲಯಕ್ಕೆ ಒಂದು ದಿನ ಹೋಗುವುದು ರೂಢಿ. ಆದರೂ ಹೆಚ್ಚಾಗಿ ನಾನು ಹೋಗುವುದು ನಮ್ಮೂರಿನ ಆವಳ ಮಠಕ್ಕೆ. ಇಲ್ಲ ಮಧೂರು ಮಹಾಗಣಪತಿ ದೇವಸ್ಥಾನಕ್ಕೆ ಹೋಗಿಬಿಡುತ್ತೇನೆ. ಅದರಲ್ಲು ಆವಳ ಮಠಕ್ಕೆ ಹೋಗುವಾಗ ಭಾವನಾತ್ಮಕವಾಗಿ ನನ್ನ ಮನಸ್ಸು ತುಡಿಯುತ್ತದೆ. ಅಲ್ಲಿನ ಪರಿಸರ, ಬಾಲ್ಯದಲ್ಲಿ ಓಡಿಯಾಡಿದ ನೆನಪುಗಳು ನಮ್ಮ ಹಿರಿಯರು ಈ ಎಲ್ಲ ನೆನಪುಗಳು ನನ್ನ ವಯಸ್ಸನ್ನು ಮರೆಯುವಂತೆ ಮಾಡುತ್ತದೆ. ನಾನಿನ್ನೂ ಅದೇ ಬಾಲ್ಯದಲ್ಲಿ ಇದ್ದೇನೆ ಎಂಬ ಭಾವವನ್ನು ತುಂಬಿ ಕೊಡುತ್ತದೆ.


 

        ಆವಳ ಮಠ ನಮ್ಮ ಬಾಲ್ಯದ ಕಾಲಕ್ಕೆ ಹೋಲಿಸಿದರೆ ಸಾಕಷ್ಟು ಬದಲಾಗಿದೆ. ಅಧುನಿಕ ಲೋಕಕ್ಕೆ ಸಾಕಷ್ಟು ತೆರೆದುಕೊಂಡಿದೆ. ಇಲ್ಲಿನ ಪರಿಸರ ಸಾಕಷ್ಟು ಬದಲಾದರೂ ಇಲ್ಲಿನ ಸಂದಿಗೊಂದಿಗಳು ಅಂಚು ಇಂಚಿನಲ್ಲಿ ಬಾಲ್ಯದ ನೆನಪಿನ ಕುರುಹು ಇನ್ನೂ ಜೀವಂತವಾಗಿದೆ. ದೇವಸ್ಥಾನದ ಎದುರಿನಲ್ಲಿ ದೊಡ್ಡ ಕಲ್ಯಾಣ ಮಂಟಪವಿದೆ. ಆ ಜಾಗದಲ್ಲಿ ವಿಶಾಲವಾದ ಗದ್ದೆ ಇತ್ತು. ಈಗ ದೇವಾಲಯಕ್ಕೆ  ವಾಹನ ಇಳಿದು ಬರುವ ಜಾಗದಲ್ಲಿಯೂ ವಿಶಾಲವಾದ ಗದ್ದೆ ಇತ್ತು. ದೇವಸ್ಥಾನಕ್ಕೆ ಬರುವವರಿಗೆ ಹಸಿರಿನ ಹಾಸನ್ನು ಹಾಸಿ ಸ್ವಾಗತಿಸಿದಂತೆ  ಮಳೆಗಾಲದಲ್ಲಿ ಈ ಗದ್ದೆ ಹಸಿರಿನ ಸಿಂಗಾರದಲ್ಲಿ ಕಂಗೊಳಿಸುತ್ತಿತ್ತು.  ಮೊದಲು ದೇವಸ್ಥಾನಕ್ಕೆ ನಡೆದೇ ಹೋಗುತ್ತಿದ್ದೆವು. ಬಸ್ಸು ಬರುವುದು ಬಿಡಿ, ವಾಹನದ ಸದ್ದು ಕೇಳಬೇಕಾದರೆ ಮೈಲಿ ದೂರದ ಬಾಯಾರು ಪದವಿಗೆ ಇಲ್ಲ ಕಾಯರ್ ಕಟ್ಟೆಗೆ ನಡೆದು ಹೋಗಬೇಕಿತ್ತು. ಅದೂ ಸಹ ಅಲ್ಲಿನ ಜನರಿಗೆ ಅಪರೂಪವಾಗಿತ್ತು.  ಇದು ಕಣ್ಣಾರೆ ಕಂಡ ಜೀವನ ಶೈಲಿಯಾದರೆ, ಈಗ  ದೇವಾಲಯದ ಸುತ್ತಮುತ್ತ ಏನಿಲ್ಲವೆಂದರೂ ಐದಾರು ಕಾರುಗಳು ಕಾಣಬಹುದು. ಬಾಲ್ಯದಲ್ಲಿ ಈ ಗದ್ದೆಯಬದುಗಳಲ್ಲಿ ಓಡುತ್ತಾ ಹೋಗುವಾಗ ಅದೊಂದು ಮಜವಾದ ಸಂಗತಿಯಾಗಿತ್ತು.  ನೇತ್ರಾವತಿ ಸಂಕದ ಮೇಲೆ ರೈಲು ಹೋದಂತೆ ಸಾಲಾಗಿ ನಾವು ಓಡುತ್ತಿದ್ದ ನೆನಪು ಗದ್ದೆಯ ಹಸಿರು ಮಾಸಿದರು ನೆನಪಿನ ಹಸಿರು ಇನ್ನೂ ಮಾಸಿಲ್ಲ.  ಮುಂಜಾನೆ ನಸುಕಿನಲ್ಲಿ ಈ ಗದ್ದೆಯ ಮೇಲೆ ಹಾಲು ತರುವುದಕ್ಕೆ   ಪಾತ್ರೆ  ಹಿಡಿದುಕೊಂಡು ಹೋಗುತ್ತಿದ್ದೆವು.    ತುಂಡು ಬೈರಾಸು  ಸೊಂಟಕ್ಕೆ ಸುತ್ತಿ ಓಡಿ ಹೊಗುತ್ತಿದ್ದರೆ, ಅದೂ ಸಡಿಲವಾದರೆ ಅದನ್ನೂ ಹೆಗಲ ಮೇಲೆ ಹಾಕಿ ಬರೀ ಲಂಗೋಟಿಯಲ್ಲೇ ಸುತ್ತಾಡಿದ್ದು ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ.   ಬೆಳೆದ ಪೈರು ಗದ್ದೆಯ ಬದುವಿನಲ್ಲಿ ಬಿದ್ದಿದ್ದರೆ ಅದನ್ನು ಸರಿಸಿ ಕೈಯಲ್ಲಿ ಹಾಲಿನ ಪಾತ್ರೆ ಹಿಡಿದು ಸಂತುಲನೆ ಕಾಯ್ದುಕೊಳ್ಳುತ್ತಾ ಹೋಗುವ ಅನುಭವ ಈಗ ನೆನಪಿಸಿದರೆ ಆ ಬಾಲ್ಯವೇ ಸುಂದರ ಅನ್ನಿಸಿಬಿಡುತ್ತದೆ. ಇಂತಹ ಮಧುರ ನೆನಪುಗಳು ಆವಳ ಮಠದ ಸುತ್ತ ಮುತ್ತಲಿನ ಪರಿಸರದಲ್ಲಿ ಕಡಲ ಅಲೆಯಂತೆ ತುಂಬಿ ತುಂಬಿ ಬರುತ್ತವೆ. 


ವಿಶಾಲವಾದ ದೇವಸ್ಥಾನದ ತೆಂಕು ಗೋಪುರದಲ್ಲಿ ಹತ್ತು ವರ್ಷದ ಬಾಲಕ  ನಾನು ರಾತ್ರಿ ಒಬ್ಬನೇ ಕಳೆದಿದ್ದ ನೆನಪು ಬಹಳ ಗಾಢವಾಗಿದೆ. ಆದಿನ ಬಹಳ ಭಯವಾಗಿತ್ತು. ಈಗ ದೇವಸ್ಥಾನದ ಸಂದಿಗೊಂದಿಗಳಲ್ಲಿ ವಿದ್ಯುದ್ದೀಪ ಬೆಳಗುತ್ತಿದ್ದರೆ ಅಂದು ಗೋಪುರದಲ್ಲಿ ಹಚ್ಚಿಡುತ್ತಿದ್ದ ನಂದಾ ದೀಪ ಮಾತ್ರ ಬೆಳಕಿನ ಆಧಾರವಾಗಿತ್ತು. ಅತ್ತ ಇತ್ತ ಹೋಗುವುದಿದ್ದರೆ ಸಾಕಷ್ಟು ಅಂದಾಜಲ್ಲೇ ಓಡಾಡುತ್ತಿದ್ದೆವು.  ಗರ್ಭಗುಡಿಯಲ್ಲಿದ್ದ ದೇವರ ಅಭಯದಲ್ಲಿ ಅಪಾರವಾದ ನಂಬಿಕೆ. 

ಬಾಲ್ಯದ ಒಂದಷ್ಟು ದಿನಗಳು ಈ ದೇವಸ್ಥಾನದಲ್ಲಿ ಹಗಲು ಇರುಳಾಗಿ ಕಳೆದದ್ದು ಈಗಿನ ದಿನಗಳಿಗೆ ಹೋಲಿಸಿದರೆ ಅದ್ಭುತ ದಿನಗಳು.  ರಾತ್ರಿ ಗೋಪುರದಲ್ಲೇ ಮಲಗುತ್ತಿದ್ದೆವು. ಹೆಚ್ಚಾಗಿ ಹಿರಿಯರು ಯಾರಾದರೂ ಇರುತ್ತಿದ್ದರೂ ಅಪರೂಪಕ್ಕೆ ನಾವು ಏಕಾಂಗಿಯಾಗಿದ್ದ ರಾತ್ರಿಗಳೂ ಇರುತ್ತಿತ್ತು. ಮುಂಜಾನೆ ಆಗ ಪೂಜೆ ಮಾಡುತ್ತಿದ್ದ ಗೋಪಣ್ಣ ಮೇಲಿನ ಮನೆಯಿಂದ ಇಳಿದು ಬರುತ್ತಿದ್ದರು. ಬಂದವರೇ ಮಲಗಿದ್ದ ನನ್ನನ್ನು ಕರೆದು ಎಚ್ಚರಿಸುತ್ತಿದ್ದರು. ಆಗ ಎದ್ದು ಅವರ ಜತೆಗೆ ಅಲ್ಲಿ ದಂಬೆಯಲ್ಲಿ (ಆಡಿಕೆ ಮರದ ಕಾಂಡ) ದಲ್ಲಿ ಗುಡ್ಡದ ಮೇಲಿನಿಂದ ನಿತ್ಯ ಹರಿದು ಬರುತ್ತಿದ್ದ ನೀರಿಗೆ ತಲೆ ಕೊಡುತ್ತಿದ್ದೆ. ಹೀಗೆ ಬಾಲ್ಯದಲ್ಲೇ  ನನಗೆ ತಣ್ಣೀರಿನ ಸ್ನಾನ ಅಭ್ಯಾಸವಾಯಿತು. ಅಲ್ಲಿ ಬಿಸಿನೀರು ಕಾಯಿಸಿ ಕೊಡುವುದಕ್ಕೆ ಯಾರಿದ್ದರು? ಅದಕ್ಕೆ ತಕ್ಕ ವ್ಯವಸ್ಥೆಯೂ ಇರಲಿಲ್ಲ. ಹಾಗಾಗಿ ತಣ್ಣೀರ ಸ್ನಾನ ಅನಿವಾರ್ಯ. ಆನಂತರ ಸಂಧ್ಯಾವಂದನೆ, ಒಳಗೆ ನಮಸ್ಕಾರ ಮಂಟಪದಲ್ಲಿ ಕುಳಿತು ರುದ್ರ ಪಾರಾಯಣ...ಆಗ ಅದರ ಪಾವಿತ್ರ್ಯತೆ ಗೌರವದ ಅರಿವಿರಲಿಲ್ಲ. ಈಗ ಯೋಚಿಸಿದರೆ ಅದೊಂದು ದಿವ್ಯಾನುಭವದ ಸ್ಮರಣೆ.  

ಗೋಪಣ್ಣ, ಅದೊಂದು ಬದುಕಿನಲ್ಲಿ ಎಂದೂ ಮರೆಯದ ಒಂದು ವ್ಯಕ್ತಿತ್ವ. ನನ್ನವರು ಅಂತ ಇದ್ದದ್ದು ಮಠದಲ್ಲಿ ಇವರೊಬ್ಬರೆ. ಅದೇನು ನನ್ನ ಮೇಲೆ ಅಕ್ಕರೆಯೋ ತಿಳಿಯದು. ನನ್ನಿಂದ ಹಲವಾರು ಕೆಲಸಗಳನ್ನು ಮಾಡಿಸಿದ ಶ್ರೇಯಸ್ಸು ಅವರಿಗೆ ಸಲ್ಲಬೇಕು. ಅವರು ಒಳಗೆ ಪೂಜೆ ಮಾಡುತ್ತಿದ್ದರೆ ಅವರಿಗೆ ಬೇಕಾದ ಸಲಕರಣೆಗಳನ್ನು ಒದಗಿಸಿಕೊಡುವುದು, ಒಲೆಯಲ್ಲಿದ್ದ ನೈವೇದ್ಯದ ಉರಿಯನ್ನು ನೋಡಿಕೊಳ್ಳುವುದು, ಅವಲಕ್ಕಿ ಪಂಜಕಜ್ಜಾಯ ಬೆರಸುವುದು, ಈಗಿನ ಬಾಲಕರು ಕಲ್ಪಿಸಲಾಗದ ಕೆಲಸಗಳು.   ತೆಂಗಿನ ಕಾಯಿ ಕೆರೆಯುವುದಕ್ಕೆ ನಾನು ಕಲಿತದ್ದೇ ಗೋಪಣ್ಣನಿಂದ. ಹಾಗೆ ಹಲವು ಕೆಲಸಗಳನ್ನು ಗುರುವಿನಂತೆ ಹೇಳಿಕೊಟ್ಟವರು ಗೋಪಣ್ಣ.  ಅವರ ಸ್ನೇಹದ ಪ್ರೀತಿಯ ಬಾಂಧವ್ಯ ಮೊನ್ನೆ ಮೊನ್ನೆವರೆಗೂ ಅವರು ನಮ್ಮನ್ನು ಅಗಲುವ ತನಕವು ಜೀವಂತವಾಗಿತ್ತು.  ಗೋಪಣ್ಣ ಸಂಭಂಧದಲ್ಲಿ ನನ್ನ ತಾಯಿಯ ಅಣ್ಣ,(ದೊಡ್ಡಪ್ಪನ ಮಗ)  ಹಾಗಾಗಿ ಮಾವನ ಸ್ಥಾನ. ದೇವಸ್ಥಾನಕ್ಕೆ ನಿತ್ಯದಲ್ಲಿ ಯಾರೂ ಬರುತ್ತಿರಲಿಲ್ಲ. ಇಡೀ ದಿನ ನಾವಿಬ್ಬರೇ ಇರುತ್ತಿದ್ದ ದಿನಗಳು ಹಲವು. ಬೆಳಗಿನ ಪೂಜೆ ಆದ ಮೇಲೆ ಅವರು ಎದ್ದು ತೋಟದ ಕೆಲಸಕ್ಕೆ ಹೋದರೆ ಮತ್ತೆ ನಮ್ಮದು ಸಾಮ್ರಾಜ್ಯ. ಏನಾದರೂ ವಿಶೇಷ ದಿನಗಳಲ್ಲಿ ಮಾತ್ರವೇ ಸಾರ್ವಜನಿಕರ ಮುಖ ನೋಡಬಹುದಿತ್ತು. ಮಿಕ್ಕ ದಿನಗಳು ನಮಗೆ ನಾವೇ ಜತೆಗಾರರು.  ಈಗ ಗೋಪಣ್ಣ ಇಲ್ಲ. ಆದರೆ ಈಗಲೂ ಅಲ್ಲಿಗೆ ಹೋದರೆ ಅವರ ಧ್ವನಿ ಕೇಳಿಸುತ್ತದೆ. ರಾಜಾ ಅಂತ ಕರೆಯುವ ಧ್ವನಿಯ ತರಂಗಗಳೂ ಈಗಲು ಮಾರ್ದನಿಸುವಂತೆ ಭಾಸವಾಗುತ್ತದೆ.  

ಬೆಳಗ್ಗಿನ ಪೂಜೆ ಕಳೆದು ಮಧ್ಯಾಹ್ನ ಪೂಜೆಗೆ ನೈವೇದ್ಯ ಸಿದ್ದ ಮಾಡುವುದು. ಮಧ್ಯಾಹ್ನ ಅರಿಕೊಟ್ಲುವಿನಲ್ಲಿ ನೈವೇದ್ಯ ಬೆಯುತ್ತಿದ್ದರೆ ಅದರ ಘಮ್ಮನೆ ಪರಿಮಳ ಅಬ್ಬಾ  ಅದನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಮಧ್ಯಾಹ್ನದ ಪೂಜೆ ಮುಗಿಸಿ ತೆಂಕು ಗೋಪುರದ ಅಗ್ರ ಸಾಲೆಯಲ್ಲಿ ಮಧ್ಯಾಹ್ನದ ಊಟಕ್ಕೆ ಏನಾದರೂ ತಯಾರಿಸಬೇಕು. ಹೆಚ್ಚಾಗಿ ಚಟ್ನಿ ತಂಬುಳಿಯೇ ಇರುತ್ತಿದ್ದು, ಕೆಲವು ದಿನ ತಿಳಿ ಸಾರು ಪಲ್ಯ ಇರುತ್ತಿತ್ತು. ಅಂಗಡಿಯಿಂದ ತರುತ್ತಿದ್ದ ಬೇಳೆ ಕಾಳುಗಳನ್ನು  ವಿಶೇಷ ದಿನಗಳಲ್ಲಷ್ಟೇ ನೋಡುತ್ತಿದ್ದೆವು.  ತೊಟದಲ್ಲಿ ಬೆಳೆದ ಸೊಪ್ಪು ಗೆಡ್ಡೆಗಳು ತರಕಾರಿಗಳಾಗಿತ್ತು. ಹಾಗಾಗಿ ಮಧ್ಯಾಹ್ನ ಕೆರಳುವ ಹಸಿವಿಗೆ ನಾವೇ ಏನಾದರು ಗಡಿಬಿಡಿಯಲ್ಲಿ ಸಿದ್ದಪಡಿಸುತ್ತಿದ್ದ ಸರಳ ಅಡುಗೆಗಳು ನಿಜಕ್ಕೂ ನಳಪಾಕಗಳೇ ಆಗಿ ಹೋಗುತ್ತಿದ್ದವು. ಬಹುಶಃ ಈಗ ಮನೆಯೊಳಗಿ ಅಡುಗೆ ಕೆಲಸದ ಅಭಿರುಚಿ ಹುಟ್ಟಿಕೊಂಡದ್ದೇ ಈ ಬಾಲ್ಯದ ಜೀವನದಲ್ಲಿ . ಹಸಿವಾದಾಗ ತಿನ್ನುವ ಅಡುಗೆಯ ಊಟದ ಬಗ್ಗೆ ಯೋಚಿಸುತ್ತೇನೆ. ನಂತರ ಮಾಡಿ ತಿನ್ನುವುದನ್ನು ಕಲಿಸಿಕೊಟ್ಟದ್ದೇ ಈ ಮಠದ ಜೀವನ. ಈಗಲೂ ತರಕಾರಿ ಸಾಮಾನು ಇಲ್ಲದೇ ವರ್ಷವಿಡೀ ಹಸಿವು ನೀಗಬಲ್ಲ ಚತುರ ಉಪಾಯಗಳು ಕೈವಶವಾಗಿದೆ. ಬಿಸಿ ಬಿಸಿ ನೈವೇದ್ಯಕ್ಕೆ ಮೆಣಸು ತೆಂಗಿನ ಕಾಯಿ ಗುದ್ದಿ ಮಾಡಿದ ಚಟ್ನಿಯ ರುಚಿ ಎಂದಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ. ಈಗಲೂ ಈ ಅಭ್ಯಾಸ ಬದುಕಿನ ಜೀವನ ಶೈಲಿಯಾಗಿ ಹೋಗಿದೆ. ಹಾಗಾಗಿ ಈಗಲೂ ನಾನು ಮಠದಲ್ಲಿನ ನಿತ್ಯ ಸರಳ ಊಟಕ್ಕೆ ಹಾತೊರೆಯುತ್ತೇನೆ. ಈಗ ಅದೇ ಗೋಪುರದಲ್ಲಿ ಊಟಕ್ಕೆ ಕುಳಿತು ಬಿಸಿ ಬಿಸಿ ನೈವೇದ್ಯ ಸೇವಿಸುವಾಗ ಕಣ್ಣು ತೇವವಾಗಿ ಭಾವುಕನಾಗಿ ಬಿಡುತ್ತೇನೆ. ನೈವೇದ್ಯದೊಂದಿಗಿನ ನನ್ನ ಭಾವನಾತ್ಮಕ  ಸಂಭಂಧ , ಆ ದೇವಿಯ ಅನುಗ್ರಹ ಎಲ್ಲವೂ ದಿವ್ಯ ಅನುಭವಗಳು. ಎಂತಹ ಭೂರಿ ಭೋಜನವಾದರೂ ಆವಳ ಮಠದ ಸರಳ ಚಟ್ನಿ ಕರ್ಮಣೆಯ ಊಟಕ್ಕೆ ಸಮಾನಾಗಿರುವುದಕ್ಕೆ ಸಾಧ್ಯವಿಲ್ಲ. ಆ ಸಂತೃಪ್ತಿ ಯಾವುದರಲ್ಲೂ ಸಿಗುವುದಕ್ಕೆ ಸಾಧ್ಯವಿಲ್ಲ. ನನಗೆ ಆಡುಗೆಯನ್ನು ಮತ್ತು ಊಟಮಾಡುವುದನ್ನು ಕಲಿಸಿಕೊಟ್ಟ ಮಠದ ಆ ಪಾಠ ಜೀವನದಲ್ಲಿ ಸ್ವಾಭಿಮಾನವನ್ನೂ  ಸ್ವಾವಲಂಬನೆಯನ್ನೂ ಕಲಿಸಿಕೊಟ್ಟಿದೆ.   ತನಗೆ ಬೇಕಾದ ಆಹಾರವನ್ನಾದರೂ ತಾನು ಮಾಡಿ ಉಣ್ಣುವ ಸ್ವಾವಲಂಬನೆ ನಮ್ಮಲ್ಲಿರಬೇಕು. ಅದಕ್ಕೆ ನಾವು ಇನ್ನೊಬ್ಬರನ್ನು ಅವಲಂಬಿಸುವಂತಿರಬಾರದು. ಈ ಭಾವನೆಯನ್ನು ಗುಣಗಳನ್ನು ಮೈಗೂಡಿಸಿಕೊಂಡಿದ್ದರೆ ಅದಕ್ಕೆ ಮುಖ್ಯ ಕಾರಣ ಈ ಮಠದಲ್ಲಿನ ಜೀವನ. ಅದು ಬಾಲ್ಯದಲ್ಲೇ ಸಿಕ್ಕಿಬಿಟ್ಟದ್ದು ಬದುಕಿನ ಗಮನಾರ್ಹ ಅಧ್ಯಾಯವಾಗಿದೆ. 

        ಇನ್ನು ವಿಶೇಷದಿನಗಳಲ್ಲಿ ದೇವಸ್ಥಾನದಲ್ಲಿ ದುರ್ಗಾ ನಮಸ್ಕಾರ, ದೀಪಾರಾಧನೆ, ಲಲಿತಾರ್ಚನೆಗಳಿಗೆ ಹೂ ತುಳಸಿಯನ್ನು ಸಂಗ್ರಹಿಸುವ ಕೆಲಸ ನಮ್ಮ ಮೇಲೆಯೇ ಇರುತ್ತಿತ್ತು. ಈಗ ದುಡ್ಡುಕೊಟ್ಟರೆ ಸೇವಂತಿಗೆ ಮಲ್ಲಿಗೆ ಹೂಗಳು ಬುಟ್ಟಿ ತುಂಬ ಸಿಗುತ್ತವೆ. ಆಗ ಇವುಗಳನ್ನು ಕಲ್ಪಿಸುವುದಕ್ಕೇ ಸಾಧ್ಯವಿಲ್ಲ. ಹಾಗಾಗಿ ಹತ್ತಿರದ ಮನೆಯಂಗಳಕ್ಕೆ ತೋಟಕ್ಕೆ ಹೋಗಿ ಕೊಯ್ದುಕೊಂಡು ಬರಬೇಕಿತ್ತು. ಮಠದ ಮೇಲಿನ ಗುಂಪೆಗುಡ್ಡೆಯಲ್ಲಿ ಸುತ್ತಾಡಿ ಕೇಪುಳ ಹೂ , ಇದು ಸಹಸ್ರಾರ್ಚನೆಗೆ ಅತ್ಯಂತ ಅವಶ್ಯ, ಅದನ್ನು ಕೊಯ್ದು ಕೊಂಡು ಬರಬೇಕಿತ್ತು. ಅರ್ಚನೆಗೆ ಹೂವನ್ನು ಸಂಗ್ರಹಿಸುವುದು ದೊಡ್ಡ ಸಾಹಸದ ಕೆಲಸವಾಗಿತ್ತು. 

        ಬಾಲ್ಯದ ದಿನಗಳೆಂದರೆ ಅದೊಂದು ಪಾಠ ಶಾಲೆ. ತಿಳಿದೋ ತಿಳಿಯದೆಯೋ ಬದುಕಿಗೆ ಪಾಠವನ್ನು ಕಲಿಯುತ್ತೇವೆ. ಹಾಗಾಗಿ ಇಲ್ಲಿ ಕಲಿತ ಮಂತ್ರಪಾಠದಂತೆ ಜೀವನ ಪಾಠವೂ ನನ್ನ ಜೀವನದಲ್ಲಿ ಅಮೂಲ್ಯವಾಗಿದೆ. ಮಠದ ಸುತ್ತಮುತ್ತಲಿನ ಮನೆಗಳು ತೋಟಗಳು ನನ್ನದೇ  ಎಂಬ ಪ್ರಕೃತಿಧರ್ಮದ  ಭಾವವನ್ನು ತುಂಬಿಕೊಟ್ಟಿದೆ. ಯಾರ ಮನೆಗೆ ಹೋದರೂ ಒಂದು ಹೊತ್ತಿನ ಊಟ ಪಾನೀಯ ಸಿಗುವ ಭರವಸೆ ಇತ್ತು. ಹಲವರ ತೋಟದಲ್ಲಿ ಕೆಲಸ ಮಾಡಿದ್ದೇನೆ. ಅದು ತುಂಬಿದ ಜೀವನಾನುಭವ ಒಂದು ವಿಧದಲ್ಲಿ ಬದುಕಿನ ಪೀಠಿಕೆಯಾಗಿದೆ. ಇಲ್ಲಿ ನಡೆದ ಹಲವು ಘಟನೆಗಳು ಅಷ್ಟು ಗಾಢವಾದ ಪರಿಣಾಮವನ್ನು ಬೀರಿದ ಕಾರಣಕ್ಕೆ ಅವು ಇಂದೂ ನೆನಪಿನಲ್ಲಿ ಹಾಗೇ ಉಳಿದುಕೊಂಡಿದೆ. 

        ಬದುಕಿನಲ್ಲಿ ಏನೋ ಸಾಧಿಸಿದಂತೆ ಎಲ್ಲೋ ಹೋಗುತ್ತೇವೆ. ಏನೋ ಮಾಡಿ ಯಾವುದೋ ವಿಧದಲ್ಲಿ ಜೀವನ ಸಾಗಿಸುತ್ತೇವೆ. ನಾವು ಸುಖೀ ಜೀವನ ಸಿಗಬೇಕು ಎಂದು ಬಯಸುತ್ತೇವೆ. ಆ ಕನಸಿನಲ್ಲೇ ಜೀವನ ಕಳೆದುಬಿಡುತ್ತದೆ. ಕಳೆದು ಹೋದ ಜೀವನದಲ್ಲೇ ಆ ಸುಖ ಅಡಗಿತ್ತು ಎಂದು ಅನುಭವವಾಗುವುದು ಆನಂತರ ಎಂಬುದು ವಿಪರ್ಯಾಸ.  ಜೀವನದಲ್ಲಿ ಭೂತ, ಭವಿಷ್ಯದ ನೆನಪು ಕನಸಿನ ನಡುವೆ ಕಳೆದು ಹೋಗುವ ವರ್ತಮಾನವೇ ಪ್ರಧಾನ. ನಾವು ಅದನ್ನು ಅನುಭವಿಸುವುದರಲ್ಲಿ ಬದುಕಿನ ಯಶಸ್ಸು ಅವಿತುಕೊಂಡಿದೆ.   

        ಈಗ ಆವಳ ಮಠಕ್ಕೆ ಹೋಗುತ್ತೇನೆ. ಕಳೆದ ದಿನಗಳ ನೆನಪುಗಳು ಇನ್ನಿಲ್ಲದಂತೆ ಕಾಡುತ್ತವೆ. ಕಣ್ಣಿಗೆ ಸಾಮಾರ್ಥ್ಯವಿದ್ದಷ್ಟೇ ಕಾಣುವುದಕ್ಕೆ ಸಾಧ್ಯವಾಗುತ್ತದೆ. ಆದರೆ ನೆನಪುಗಳು ಬತ್ತಿ ಹೋಗುವುದಿಲ್ಲ. ಮನಸ್ಸು ಇನ್ನೆಲ್ಲೆಲ್ಲೋ ಕಾಣದ ಕಡೆಗಳಲ್ಲಿ ಸಂಚರಿಸುತ್ತದೆ. ಏನನ್ನೋ ಹುಡುಕುತ್ತಾ ಇರುತ್ತದೆ. ಕಳೆದ ನೆನಪುಗಳು ವರ್ತಮಾನವನ್ನು ಮರೆಯುವಂತೆ ಮಾಡುತ್ತದೆ. ವಯಸ್ಸು ಐವತ್ತಾದರೂ ಆವಳ ಮಠಕ್ಕೆ ಕಾಲಿಡುವಾಗ ಬಾಲ್ಯ ನೆನಪಾಗುತ್ತದೆ. ಮತ್ತೆ ನಾನು ವಯಸ್ಸು ಮರೆತು ಬಾಲಕನಾಗಿಬಿಡುತ್ತೇನೆ. ಇನ್ನೂ ಅದೇ ಗುಂಗಿನಲ್ಲಿ ಜಾರಿಕೊಳ್ಳುವ ಪ್ರಯತ್ನ ಮಾಡುತ್ತೇನೆ.  ಒಂದರ್ಥದಲ್ಲಿ ನಾವೆಷ್ಟು ಎತ್ತರ ಏರಿದರು ಆ ಎತ್ತರ ಏನೂ ಅಲ್ಲ ಎಂಬ ಭಾವವನ್ನು ಪ್ರಚೋದಿಸುವ ಇಲ್ಲಿನ ಪರಿಸರ ನನ್ನ ಬದುಕಿನಲ್ಲಿ ನಿತ್ಯ ನೂತನ ಪಾಠದ ಅಧ್ಯಾಯಗಳಾಗಿ ಕಣ್ಣೆದುರಿಗೆ ನಿತ್ಯ ದರ್ಶನವನ್ನು ಕೊಡುತ್ತವೆ.  ನಿಜಕ್ಕೂ ಆ ಬಾಲ್ಯ ಹೇಗೆ ಕಳೆದು ಹೋಯಿತು. ಎಲ್ಲಿ ಕಳೆದು ಹೋಯಿತು?  ಯಾಕೆ ಅದನ್ನು ಹಿಡಿದಿಡಲು ಸಾಧ್ಯವಾಗಿಲ್ಲ?  ಬಾಲ್ಯ ಕಳೆದರೂ ಕಳೆದುಕೊಳ್ಳಲಾಗದ ನೆನಪುಗಳೇ ಸರ್ವಸ್ವ. ಅದೇ ವಾಸ್ತವ. 

ಪುಟ್ಟ ಬಾಲ್ಯವನ್ನು ನೆನಪಿಸಿ ಪುಟ್ಟ ಬಾಲಕನಂತೆ ದೇವರ ದರ್ಶನ ಮಾಡಿ , ಗೋಪುರದಲ್ಲಿ ಕುಳಿತು ಹೊಟ್ಟೆ ಮಾತ್ರ ತುಂಬಿಸಿಕೊಳ್ಳುವುದಲ್ಲ, ಮನಸ್ಸನ್ನೂ ತೃಪ್ತಿ ಪಡಿಸಿ ನೈವೇದ್ಯ ಉಂಡು, ಕೊನೆಗೊಮ್ಮೆ ಅಮ್ಮನಿಗೆ ಮನಸಾ ವಂದಿಸಿ ಮಠದಿಂದ ಹೊರಡುತ್ತೇನೆ. ಹಾಗೆ ಮೇಲೆ ಬಂದು ಒಂದು ಸಲ ತಿರುಗಿ ನೋಡುತ್ತೇನೆ. ಮೊನ್ನೆ ಮೊನ್ನೆಯಂತೆ ಕಳೆದ ಬಾಲ್ಯ ನೆನಪಾಗುತ್ತದೆ. ಆವಳ ಮಠದ ಸುತ್ತಲಿನ ನನ್ನ ಬಾಲ್ಯದ ನೆನಪುಗಳು ಮತ್ತೆ ಮನಸ್ಸಿನಾಳಕ್ಕೆ ಇಳಿದು ಬಿಡುತ್ತವೆ. ಭಾರವಾದ ಮನಸ್ಸಿನಿಂದ ಅಲ್ಲಿಂದ ಬರುವಾಗ ಅನಿಸುವುದೊಂದೆ ಆ  ಯಾವುದೂ ಇಲ್ಲದ ಆ ಬಾಲ್ಯ  ಮತ್ತೆ ಬರಬಾರದೇ?