Monday, September 18, 2023

ಆವಳ ಮಠದ ಸುತ್ತ

        ಬಹಳ ಸಮಯದ ನಂತರ ಮೊನ್ನೆ ಊರಿಗೆ ಹೋಗಿದ್ದೆ. ಊರಿಗೆ ಹೋದಾಗ ಯಾವುದಾದರೂ  ಒಂದು ದೇವಾಲಯಕ್ಕೆ ಒಂದು ದಿನ ಹೋಗುವುದು ರೂಢಿ. ಆದರೂ ಹೆಚ್ಚಾಗಿ ನಾನು ಹೋಗುವುದು ನಮ್ಮೂರಿನ ಆವಳ ಮಠಕ್ಕೆ. ಇಲ್ಲ ಮಧೂರು ಮಹಾಗಣಪತಿ ದೇವಸ್ಥಾನಕ್ಕೆ ಹೋಗಿಬಿಡುತ್ತೇನೆ. ಅದರಲ್ಲು ಆವಳ ಮಠಕ್ಕೆ ಹೋಗುವಾಗ ಭಾವನಾತ್ಮಕವಾಗಿ ನನ್ನ ಮನಸ್ಸು ತುಡಿಯುತ್ತದೆ. ಅಲ್ಲಿನ ಪರಿಸರ, ಬಾಲ್ಯದಲ್ಲಿ ಓಡಿಯಾಡಿದ ನೆನಪುಗಳು ನಮ್ಮ ಹಿರಿಯರು ಈ ಎಲ್ಲ ನೆನಪುಗಳು ನನ್ನ ವಯಸ್ಸನ್ನು ಮರೆಯುವಂತೆ ಮಾಡುತ್ತದೆ. ನಾನಿನ್ನೂ ಅದೇ ಬಾಲ್ಯದಲ್ಲಿ ಇದ್ದೇನೆ ಎಂಬ ಭಾವವನ್ನು ತುಂಬಿ ಕೊಡುತ್ತದೆ.


 

        ಆವಳ ಮಠ ನಮ್ಮ ಬಾಲ್ಯದ ಕಾಲಕ್ಕೆ ಹೋಲಿಸಿದರೆ ಸಾಕಷ್ಟು ಬದಲಾಗಿದೆ. ಅಧುನಿಕ ಲೋಕಕ್ಕೆ ಸಾಕಷ್ಟು ತೆರೆದುಕೊಂಡಿದೆ. ಇಲ್ಲಿನ ಪರಿಸರ ಸಾಕಷ್ಟು ಬದಲಾದರೂ ಇಲ್ಲಿನ ಸಂದಿಗೊಂದಿಗಳು ಅಂಚು ಇಂಚಿನಲ್ಲಿ ಬಾಲ್ಯದ ನೆನಪಿನ ಕುರುಹು ಇನ್ನೂ ಜೀವಂತವಾಗಿದೆ. ದೇವಸ್ಥಾನದ ಎದುರಿನಲ್ಲಿ ದೊಡ್ಡ ಕಲ್ಯಾಣ ಮಂಟಪವಿದೆ. ಆ ಜಾಗದಲ್ಲಿ ವಿಶಾಲವಾದ ಗದ್ದೆ ಇತ್ತು. ಈಗ ದೇವಾಲಯಕ್ಕೆ  ವಾಹನ ಇಳಿದು ಬರುವ ಜಾಗದಲ್ಲಿಯೂ ವಿಶಾಲವಾದ ಗದ್ದೆ ಇತ್ತು. ದೇವಸ್ಥಾನಕ್ಕೆ ಬರುವವರಿಗೆ ಹಸಿರಿನ ಹಾಸನ್ನು ಹಾಸಿ ಸ್ವಾಗತಿಸಿದಂತೆ  ಮಳೆಗಾಲದಲ್ಲಿ ಈ ಗದ್ದೆ ಹಸಿರಿನ ಸಿಂಗಾರದಲ್ಲಿ ಕಂಗೊಳಿಸುತ್ತಿತ್ತು.  ಮೊದಲು ದೇವಸ್ಥಾನಕ್ಕೆ ನಡೆದೇ ಹೋಗುತ್ತಿದ್ದೆವು. ಬಸ್ಸು ಬರುವುದು ಬಿಡಿ, ವಾಹನದ ಸದ್ದು ಕೇಳಬೇಕಾದರೆ ಮೈಲಿ ದೂರದ ಬಾಯಾರು ಪದವಿಗೆ ಇಲ್ಲ ಕಾಯರ್ ಕಟ್ಟೆಗೆ ನಡೆದು ಹೋಗಬೇಕಿತ್ತು. ಅದೂ ಸಹ ಅಲ್ಲಿನ ಜನರಿಗೆ ಅಪರೂಪವಾಗಿತ್ತು.  ಇದು ಕಣ್ಣಾರೆ ಕಂಡ ಜೀವನ ಶೈಲಿಯಾದರೆ, ಈಗ  ದೇವಾಲಯದ ಸುತ್ತಮುತ್ತ ಏನಿಲ್ಲವೆಂದರೂ ಐದಾರು ಕಾರುಗಳು ಕಾಣಬಹುದು. ಬಾಲ್ಯದಲ್ಲಿ ಈ ಗದ್ದೆಯಬದುಗಳಲ್ಲಿ ಓಡುತ್ತಾ ಹೋಗುವಾಗ ಅದೊಂದು ಮಜವಾದ ಸಂಗತಿಯಾಗಿತ್ತು.  ನೇತ್ರಾವತಿ ಸಂಕದ ಮೇಲೆ ರೈಲು ಹೋದಂತೆ ಸಾಲಾಗಿ ನಾವು ಓಡುತ್ತಿದ್ದ ನೆನಪು ಗದ್ದೆಯ ಹಸಿರು ಮಾಸಿದರು ನೆನಪಿನ ಹಸಿರು ಇನ್ನೂ ಮಾಸಿಲ್ಲ.  ಮುಂಜಾನೆ ನಸುಕಿನಲ್ಲಿ ಈ ಗದ್ದೆಯ ಮೇಲೆ ಹಾಲು ತರುವುದಕ್ಕೆ   ಪಾತ್ರೆ  ಹಿಡಿದುಕೊಂಡು ಹೋಗುತ್ತಿದ್ದೆವು.    ತುಂಡು ಬೈರಾಸು  ಸೊಂಟಕ್ಕೆ ಸುತ್ತಿ ಓಡಿ ಹೊಗುತ್ತಿದ್ದರೆ, ಅದೂ ಸಡಿಲವಾದರೆ ಅದನ್ನೂ ಹೆಗಲ ಮೇಲೆ ಹಾಕಿ ಬರೀ ಲಂಗೋಟಿಯಲ್ಲೇ ಸುತ್ತಾಡಿದ್ದು ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ.   ಬೆಳೆದ ಪೈರು ಗದ್ದೆಯ ಬದುವಿನಲ್ಲಿ ಬಿದ್ದಿದ್ದರೆ ಅದನ್ನು ಸರಿಸಿ ಕೈಯಲ್ಲಿ ಹಾಲಿನ ಪಾತ್ರೆ ಹಿಡಿದು ಸಂತುಲನೆ ಕಾಯ್ದುಕೊಳ್ಳುತ್ತಾ ಹೋಗುವ ಅನುಭವ ಈಗ ನೆನಪಿಸಿದರೆ ಆ ಬಾಲ್ಯವೇ ಸುಂದರ ಅನ್ನಿಸಿಬಿಡುತ್ತದೆ. ಇಂತಹ ಮಧುರ ನೆನಪುಗಳು ಆವಳ ಮಠದ ಸುತ್ತ ಮುತ್ತಲಿನ ಪರಿಸರದಲ್ಲಿ ಕಡಲ ಅಲೆಯಂತೆ ತುಂಬಿ ತುಂಬಿ ಬರುತ್ತವೆ. 


ವಿಶಾಲವಾದ ದೇವಸ್ಥಾನದ ತೆಂಕು ಗೋಪುರದಲ್ಲಿ ಹತ್ತು ವರ್ಷದ ಬಾಲಕ  ನಾನು ರಾತ್ರಿ ಒಬ್ಬನೇ ಕಳೆದಿದ್ದ ನೆನಪು ಬಹಳ ಗಾಢವಾಗಿದೆ. ಆದಿನ ಬಹಳ ಭಯವಾಗಿತ್ತು. ಈಗ ದೇವಸ್ಥಾನದ ಸಂದಿಗೊಂದಿಗಳಲ್ಲಿ ವಿದ್ಯುದ್ದೀಪ ಬೆಳಗುತ್ತಿದ್ದರೆ ಅಂದು ಗೋಪುರದಲ್ಲಿ ಹಚ್ಚಿಡುತ್ತಿದ್ದ ನಂದಾ ದೀಪ ಮಾತ್ರ ಬೆಳಕಿನ ಆಧಾರವಾಗಿತ್ತು. ಅತ್ತ ಇತ್ತ ಹೋಗುವುದಿದ್ದರೆ ಸಾಕಷ್ಟು ಅಂದಾಜಲ್ಲೇ ಓಡಾಡುತ್ತಿದ್ದೆವು.  ಗರ್ಭಗುಡಿಯಲ್ಲಿದ್ದ ದೇವರ ಅಭಯದಲ್ಲಿ ಅಪಾರವಾದ ನಂಬಿಕೆ. 

ಬಾಲ್ಯದ ಒಂದಷ್ಟು ದಿನಗಳು ಈ ದೇವಸ್ಥಾನದಲ್ಲಿ ಹಗಲು ಇರುಳಾಗಿ ಕಳೆದದ್ದು ಈಗಿನ ದಿನಗಳಿಗೆ ಹೋಲಿಸಿದರೆ ಅದ್ಭುತ ದಿನಗಳು.  ರಾತ್ರಿ ಗೋಪುರದಲ್ಲೇ ಮಲಗುತ್ತಿದ್ದೆವು. ಹೆಚ್ಚಾಗಿ ಹಿರಿಯರು ಯಾರಾದರೂ ಇರುತ್ತಿದ್ದರೂ ಅಪರೂಪಕ್ಕೆ ನಾವು ಏಕಾಂಗಿಯಾಗಿದ್ದ ರಾತ್ರಿಗಳೂ ಇರುತ್ತಿತ್ತು. ಮುಂಜಾನೆ ಆಗ ಪೂಜೆ ಮಾಡುತ್ತಿದ್ದ ಗೋಪಣ್ಣ ಮೇಲಿನ ಮನೆಯಿಂದ ಇಳಿದು ಬರುತ್ತಿದ್ದರು. ಬಂದವರೇ ಮಲಗಿದ್ದ ನನ್ನನ್ನು ಕರೆದು ಎಚ್ಚರಿಸುತ್ತಿದ್ದರು. ಆಗ ಎದ್ದು ಅವರ ಜತೆಗೆ ಅಲ್ಲಿ ದಂಬೆಯಲ್ಲಿ (ಆಡಿಕೆ ಮರದ ಕಾಂಡ) ದಲ್ಲಿ ಗುಡ್ಡದ ಮೇಲಿನಿಂದ ನಿತ್ಯ ಹರಿದು ಬರುತ್ತಿದ್ದ ನೀರಿಗೆ ತಲೆ ಕೊಡುತ್ತಿದ್ದೆ. ಹೀಗೆ ಬಾಲ್ಯದಲ್ಲೇ  ನನಗೆ ತಣ್ಣೀರಿನ ಸ್ನಾನ ಅಭ್ಯಾಸವಾಯಿತು. ಅಲ್ಲಿ ಬಿಸಿನೀರು ಕಾಯಿಸಿ ಕೊಡುವುದಕ್ಕೆ ಯಾರಿದ್ದರು? ಅದಕ್ಕೆ ತಕ್ಕ ವ್ಯವಸ್ಥೆಯೂ ಇರಲಿಲ್ಲ. ಹಾಗಾಗಿ ತಣ್ಣೀರ ಸ್ನಾನ ಅನಿವಾರ್ಯ. ಆನಂತರ ಸಂಧ್ಯಾವಂದನೆ, ಒಳಗೆ ನಮಸ್ಕಾರ ಮಂಟಪದಲ್ಲಿ ಕುಳಿತು ರುದ್ರ ಪಾರಾಯಣ...ಆಗ ಅದರ ಪಾವಿತ್ರ್ಯತೆ ಗೌರವದ ಅರಿವಿರಲಿಲ್ಲ. ಈಗ ಯೋಚಿಸಿದರೆ ಅದೊಂದು ದಿವ್ಯಾನುಭವದ ಸ್ಮರಣೆ.  

ಗೋಪಣ್ಣ, ಅದೊಂದು ಬದುಕಿನಲ್ಲಿ ಎಂದೂ ಮರೆಯದ ಒಂದು ವ್ಯಕ್ತಿತ್ವ. ನನ್ನವರು ಅಂತ ಇದ್ದದ್ದು ಮಠದಲ್ಲಿ ಇವರೊಬ್ಬರೆ. ಅದೇನು ನನ್ನ ಮೇಲೆ ಅಕ್ಕರೆಯೋ ತಿಳಿಯದು. ನನ್ನಿಂದ ಹಲವಾರು ಕೆಲಸಗಳನ್ನು ಮಾಡಿಸಿದ ಶ್ರೇಯಸ್ಸು ಅವರಿಗೆ ಸಲ್ಲಬೇಕು. ಅವರು ಒಳಗೆ ಪೂಜೆ ಮಾಡುತ್ತಿದ್ದರೆ ಅವರಿಗೆ ಬೇಕಾದ ಸಲಕರಣೆಗಳನ್ನು ಒದಗಿಸಿಕೊಡುವುದು, ಒಲೆಯಲ್ಲಿದ್ದ ನೈವೇದ್ಯದ ಉರಿಯನ್ನು ನೋಡಿಕೊಳ್ಳುವುದು, ಅವಲಕ್ಕಿ ಪಂಜಕಜ್ಜಾಯ ಬೆರಸುವುದು, ಈಗಿನ ಬಾಲಕರು ಕಲ್ಪಿಸಲಾಗದ ಕೆಲಸಗಳು.   ತೆಂಗಿನ ಕಾಯಿ ಕೆರೆಯುವುದಕ್ಕೆ ನಾನು ಕಲಿತದ್ದೇ ಗೋಪಣ್ಣನಿಂದ. ಹಾಗೆ ಹಲವು ಕೆಲಸಗಳನ್ನು ಗುರುವಿನಂತೆ ಹೇಳಿಕೊಟ್ಟವರು ಗೋಪಣ್ಣ.  ಅವರ ಸ್ನೇಹದ ಪ್ರೀತಿಯ ಬಾಂಧವ್ಯ ಮೊನ್ನೆ ಮೊನ್ನೆವರೆಗೂ ಅವರು ನಮ್ಮನ್ನು ಅಗಲುವ ತನಕವು ಜೀವಂತವಾಗಿತ್ತು.  ಗೋಪಣ್ಣ ಸಂಭಂಧದಲ್ಲಿ ನನ್ನ ತಾಯಿಯ ಅಣ್ಣ,(ದೊಡ್ಡಪ್ಪನ ಮಗ)  ಹಾಗಾಗಿ ಮಾವನ ಸ್ಥಾನ. ದೇವಸ್ಥಾನಕ್ಕೆ ನಿತ್ಯದಲ್ಲಿ ಯಾರೂ ಬರುತ್ತಿರಲಿಲ್ಲ. ಇಡೀ ದಿನ ನಾವಿಬ್ಬರೇ ಇರುತ್ತಿದ್ದ ದಿನಗಳು ಹಲವು. ಬೆಳಗಿನ ಪೂಜೆ ಆದ ಮೇಲೆ ಅವರು ಎದ್ದು ತೋಟದ ಕೆಲಸಕ್ಕೆ ಹೋದರೆ ಮತ್ತೆ ನಮ್ಮದು ಸಾಮ್ರಾಜ್ಯ. ಏನಾದರೂ ವಿಶೇಷ ದಿನಗಳಲ್ಲಿ ಮಾತ್ರವೇ ಸಾರ್ವಜನಿಕರ ಮುಖ ನೋಡಬಹುದಿತ್ತು. ಮಿಕ್ಕ ದಿನಗಳು ನಮಗೆ ನಾವೇ ಜತೆಗಾರರು.  ಈಗ ಗೋಪಣ್ಣ ಇಲ್ಲ. ಆದರೆ ಈಗಲೂ ಅಲ್ಲಿಗೆ ಹೋದರೆ ಅವರ ಧ್ವನಿ ಕೇಳಿಸುತ್ತದೆ. ರಾಜಾ ಅಂತ ಕರೆಯುವ ಧ್ವನಿಯ ತರಂಗಗಳೂ ಈಗಲು ಮಾರ್ದನಿಸುವಂತೆ ಭಾಸವಾಗುತ್ತದೆ.  

ಬೆಳಗ್ಗಿನ ಪೂಜೆ ಕಳೆದು ಮಧ್ಯಾಹ್ನ ಪೂಜೆಗೆ ನೈವೇದ್ಯ ಸಿದ್ದ ಮಾಡುವುದು. ಮಧ್ಯಾಹ್ನ ಅರಿಕೊಟ್ಲುವಿನಲ್ಲಿ ನೈವೇದ್ಯ ಬೆಯುತ್ತಿದ್ದರೆ ಅದರ ಘಮ್ಮನೆ ಪರಿಮಳ ಅಬ್ಬಾ  ಅದನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಮಧ್ಯಾಹ್ನದ ಪೂಜೆ ಮುಗಿಸಿ ತೆಂಕು ಗೋಪುರದ ಅಗ್ರ ಸಾಲೆಯಲ್ಲಿ ಮಧ್ಯಾಹ್ನದ ಊಟಕ್ಕೆ ಏನಾದರೂ ತಯಾರಿಸಬೇಕು. ಹೆಚ್ಚಾಗಿ ಚಟ್ನಿ ತಂಬುಳಿಯೇ ಇರುತ್ತಿದ್ದು, ಕೆಲವು ದಿನ ತಿಳಿ ಸಾರು ಪಲ್ಯ ಇರುತ್ತಿತ್ತು. ಅಂಗಡಿಯಿಂದ ತರುತ್ತಿದ್ದ ಬೇಳೆ ಕಾಳುಗಳನ್ನು  ವಿಶೇಷ ದಿನಗಳಲ್ಲಷ್ಟೇ ನೋಡುತ್ತಿದ್ದೆವು.  ತೊಟದಲ್ಲಿ ಬೆಳೆದ ಸೊಪ್ಪು ಗೆಡ್ಡೆಗಳು ತರಕಾರಿಗಳಾಗಿತ್ತು. ಹಾಗಾಗಿ ಮಧ್ಯಾಹ್ನ ಕೆರಳುವ ಹಸಿವಿಗೆ ನಾವೇ ಏನಾದರು ಗಡಿಬಿಡಿಯಲ್ಲಿ ಸಿದ್ದಪಡಿಸುತ್ತಿದ್ದ ಸರಳ ಅಡುಗೆಗಳು ನಿಜಕ್ಕೂ ನಳಪಾಕಗಳೇ ಆಗಿ ಹೋಗುತ್ತಿದ್ದವು. ಬಹುಶಃ ಈಗ ಮನೆಯೊಳಗಿ ಅಡುಗೆ ಕೆಲಸದ ಅಭಿರುಚಿ ಹುಟ್ಟಿಕೊಂಡದ್ದೇ ಈ ಬಾಲ್ಯದ ಜೀವನದಲ್ಲಿ . ಹಸಿವಾದಾಗ ತಿನ್ನುವ ಅಡುಗೆಯ ಊಟದ ಬಗ್ಗೆ ಯೋಚಿಸುತ್ತೇನೆ. ನಂತರ ಮಾಡಿ ತಿನ್ನುವುದನ್ನು ಕಲಿಸಿಕೊಟ್ಟದ್ದೇ ಈ ಮಠದ ಜೀವನ. ಈಗಲೂ ತರಕಾರಿ ಸಾಮಾನು ಇಲ್ಲದೇ ವರ್ಷವಿಡೀ ಹಸಿವು ನೀಗಬಲ್ಲ ಚತುರ ಉಪಾಯಗಳು ಕೈವಶವಾಗಿದೆ. ಬಿಸಿ ಬಿಸಿ ನೈವೇದ್ಯಕ್ಕೆ ಮೆಣಸು ತೆಂಗಿನ ಕಾಯಿ ಗುದ್ದಿ ಮಾಡಿದ ಚಟ್ನಿಯ ರುಚಿ ಎಂದಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ. ಈಗಲೂ ಈ ಅಭ್ಯಾಸ ಬದುಕಿನ ಜೀವನ ಶೈಲಿಯಾಗಿ ಹೋಗಿದೆ. ಹಾಗಾಗಿ ಈಗಲೂ ನಾನು ಮಠದಲ್ಲಿನ ನಿತ್ಯ ಸರಳ ಊಟಕ್ಕೆ ಹಾತೊರೆಯುತ್ತೇನೆ. ಈಗ ಅದೇ ಗೋಪುರದಲ್ಲಿ ಊಟಕ್ಕೆ ಕುಳಿತು ಬಿಸಿ ಬಿಸಿ ನೈವೇದ್ಯ ಸೇವಿಸುವಾಗ ಕಣ್ಣು ತೇವವಾಗಿ ಭಾವುಕನಾಗಿ ಬಿಡುತ್ತೇನೆ. ನೈವೇದ್ಯದೊಂದಿಗಿನ ನನ್ನ ಭಾವನಾತ್ಮಕ  ಸಂಭಂಧ , ಆ ದೇವಿಯ ಅನುಗ್ರಹ ಎಲ್ಲವೂ ದಿವ್ಯ ಅನುಭವಗಳು. ಎಂತಹ ಭೂರಿ ಭೋಜನವಾದರೂ ಆವಳ ಮಠದ ಸರಳ ಚಟ್ನಿ ಕರ್ಮಣೆಯ ಊಟಕ್ಕೆ ಸಮಾನಾಗಿರುವುದಕ್ಕೆ ಸಾಧ್ಯವಿಲ್ಲ. ಆ ಸಂತೃಪ್ತಿ ಯಾವುದರಲ್ಲೂ ಸಿಗುವುದಕ್ಕೆ ಸಾಧ್ಯವಿಲ್ಲ. ನನಗೆ ಆಡುಗೆಯನ್ನು ಮತ್ತು ಊಟಮಾಡುವುದನ್ನು ಕಲಿಸಿಕೊಟ್ಟ ಮಠದ ಆ ಪಾಠ ಜೀವನದಲ್ಲಿ ಸ್ವಾಭಿಮಾನವನ್ನೂ  ಸ್ವಾವಲಂಬನೆಯನ್ನೂ ಕಲಿಸಿಕೊಟ್ಟಿದೆ.   ತನಗೆ ಬೇಕಾದ ಆಹಾರವನ್ನಾದರೂ ತಾನು ಮಾಡಿ ಉಣ್ಣುವ ಸ್ವಾವಲಂಬನೆ ನಮ್ಮಲ್ಲಿರಬೇಕು. ಅದಕ್ಕೆ ನಾವು ಇನ್ನೊಬ್ಬರನ್ನು ಅವಲಂಬಿಸುವಂತಿರಬಾರದು. ಈ ಭಾವನೆಯನ್ನು ಗುಣಗಳನ್ನು ಮೈಗೂಡಿಸಿಕೊಂಡಿದ್ದರೆ ಅದಕ್ಕೆ ಮುಖ್ಯ ಕಾರಣ ಈ ಮಠದಲ್ಲಿನ ಜೀವನ. ಅದು ಬಾಲ್ಯದಲ್ಲೇ ಸಿಕ್ಕಿಬಿಟ್ಟದ್ದು ಬದುಕಿನ ಗಮನಾರ್ಹ ಅಧ್ಯಾಯವಾಗಿದೆ. 

        ಇನ್ನು ವಿಶೇಷದಿನಗಳಲ್ಲಿ ದೇವಸ್ಥಾನದಲ್ಲಿ ದುರ್ಗಾ ನಮಸ್ಕಾರ, ದೀಪಾರಾಧನೆ, ಲಲಿತಾರ್ಚನೆಗಳಿಗೆ ಹೂ ತುಳಸಿಯನ್ನು ಸಂಗ್ರಹಿಸುವ ಕೆಲಸ ನಮ್ಮ ಮೇಲೆಯೇ ಇರುತ್ತಿತ್ತು. ಈಗ ದುಡ್ಡುಕೊಟ್ಟರೆ ಸೇವಂತಿಗೆ ಮಲ್ಲಿಗೆ ಹೂಗಳು ಬುಟ್ಟಿ ತುಂಬ ಸಿಗುತ್ತವೆ. ಆಗ ಇವುಗಳನ್ನು ಕಲ್ಪಿಸುವುದಕ್ಕೇ ಸಾಧ್ಯವಿಲ್ಲ. ಹಾಗಾಗಿ ಹತ್ತಿರದ ಮನೆಯಂಗಳಕ್ಕೆ ತೋಟಕ್ಕೆ ಹೋಗಿ ಕೊಯ್ದುಕೊಂಡು ಬರಬೇಕಿತ್ತು. ಮಠದ ಮೇಲಿನ ಗುಂಪೆಗುಡ್ಡೆಯಲ್ಲಿ ಸುತ್ತಾಡಿ ಕೇಪುಳ ಹೂ , ಇದು ಸಹಸ್ರಾರ್ಚನೆಗೆ ಅತ್ಯಂತ ಅವಶ್ಯ, ಅದನ್ನು ಕೊಯ್ದು ಕೊಂಡು ಬರಬೇಕಿತ್ತು. ಅರ್ಚನೆಗೆ ಹೂವನ್ನು ಸಂಗ್ರಹಿಸುವುದು ದೊಡ್ಡ ಸಾಹಸದ ಕೆಲಸವಾಗಿತ್ತು. 

        ಬಾಲ್ಯದ ದಿನಗಳೆಂದರೆ ಅದೊಂದು ಪಾಠ ಶಾಲೆ. ತಿಳಿದೋ ತಿಳಿಯದೆಯೋ ಬದುಕಿಗೆ ಪಾಠವನ್ನು ಕಲಿಯುತ್ತೇವೆ. ಹಾಗಾಗಿ ಇಲ್ಲಿ ಕಲಿತ ಮಂತ್ರಪಾಠದಂತೆ ಜೀವನ ಪಾಠವೂ ನನ್ನ ಜೀವನದಲ್ಲಿ ಅಮೂಲ್ಯವಾಗಿದೆ. ಮಠದ ಸುತ್ತಮುತ್ತಲಿನ ಮನೆಗಳು ತೋಟಗಳು ನನ್ನದೇ  ಎಂಬ ಪ್ರಕೃತಿಧರ್ಮದ  ಭಾವವನ್ನು ತುಂಬಿಕೊಟ್ಟಿದೆ. ಯಾರ ಮನೆಗೆ ಹೋದರೂ ಒಂದು ಹೊತ್ತಿನ ಊಟ ಪಾನೀಯ ಸಿಗುವ ಭರವಸೆ ಇತ್ತು. ಹಲವರ ತೋಟದಲ್ಲಿ ಕೆಲಸ ಮಾಡಿದ್ದೇನೆ. ಅದು ತುಂಬಿದ ಜೀವನಾನುಭವ ಒಂದು ವಿಧದಲ್ಲಿ ಬದುಕಿನ ಪೀಠಿಕೆಯಾಗಿದೆ. ಇಲ್ಲಿ ನಡೆದ ಹಲವು ಘಟನೆಗಳು ಅಷ್ಟು ಗಾಢವಾದ ಪರಿಣಾಮವನ್ನು ಬೀರಿದ ಕಾರಣಕ್ಕೆ ಅವು ಇಂದೂ ನೆನಪಿನಲ್ಲಿ ಹಾಗೇ ಉಳಿದುಕೊಂಡಿದೆ. 

        ಬದುಕಿನಲ್ಲಿ ಏನೋ ಸಾಧಿಸಿದಂತೆ ಎಲ್ಲೋ ಹೋಗುತ್ತೇವೆ. ಏನೋ ಮಾಡಿ ಯಾವುದೋ ವಿಧದಲ್ಲಿ ಜೀವನ ಸಾಗಿಸುತ್ತೇವೆ. ನಾವು ಸುಖೀ ಜೀವನ ಸಿಗಬೇಕು ಎಂದು ಬಯಸುತ್ತೇವೆ. ಆ ಕನಸಿನಲ್ಲೇ ಜೀವನ ಕಳೆದುಬಿಡುತ್ತದೆ. ಕಳೆದು ಹೋದ ಜೀವನದಲ್ಲೇ ಆ ಸುಖ ಅಡಗಿತ್ತು ಎಂದು ಅನುಭವವಾಗುವುದು ಆನಂತರ ಎಂಬುದು ವಿಪರ್ಯಾಸ.  ಜೀವನದಲ್ಲಿ ಭೂತ, ಭವಿಷ್ಯದ ನೆನಪು ಕನಸಿನ ನಡುವೆ ಕಳೆದು ಹೋಗುವ ವರ್ತಮಾನವೇ ಪ್ರಧಾನ. ನಾವು ಅದನ್ನು ಅನುಭವಿಸುವುದರಲ್ಲಿ ಬದುಕಿನ ಯಶಸ್ಸು ಅವಿತುಕೊಂಡಿದೆ.   

        ಈಗ ಆವಳ ಮಠಕ್ಕೆ ಹೋಗುತ್ತೇನೆ. ಕಳೆದ ದಿನಗಳ ನೆನಪುಗಳು ಇನ್ನಿಲ್ಲದಂತೆ ಕಾಡುತ್ತವೆ. ಕಣ್ಣಿಗೆ ಸಾಮಾರ್ಥ್ಯವಿದ್ದಷ್ಟೇ ಕಾಣುವುದಕ್ಕೆ ಸಾಧ್ಯವಾಗುತ್ತದೆ. ಆದರೆ ನೆನಪುಗಳು ಬತ್ತಿ ಹೋಗುವುದಿಲ್ಲ. ಮನಸ್ಸು ಇನ್ನೆಲ್ಲೆಲ್ಲೋ ಕಾಣದ ಕಡೆಗಳಲ್ಲಿ ಸಂಚರಿಸುತ್ತದೆ. ಏನನ್ನೋ ಹುಡುಕುತ್ತಾ ಇರುತ್ತದೆ. ಕಳೆದ ನೆನಪುಗಳು ವರ್ತಮಾನವನ್ನು ಮರೆಯುವಂತೆ ಮಾಡುತ್ತದೆ. ವಯಸ್ಸು ಐವತ್ತಾದರೂ ಆವಳ ಮಠಕ್ಕೆ ಕಾಲಿಡುವಾಗ ಬಾಲ್ಯ ನೆನಪಾಗುತ್ತದೆ. ಮತ್ತೆ ನಾನು ವಯಸ್ಸು ಮರೆತು ಬಾಲಕನಾಗಿಬಿಡುತ್ತೇನೆ. ಇನ್ನೂ ಅದೇ ಗುಂಗಿನಲ್ಲಿ ಜಾರಿಕೊಳ್ಳುವ ಪ್ರಯತ್ನ ಮಾಡುತ್ತೇನೆ.  ಒಂದರ್ಥದಲ್ಲಿ ನಾವೆಷ್ಟು ಎತ್ತರ ಏರಿದರು ಆ ಎತ್ತರ ಏನೂ ಅಲ್ಲ ಎಂಬ ಭಾವವನ್ನು ಪ್ರಚೋದಿಸುವ ಇಲ್ಲಿನ ಪರಿಸರ ನನ್ನ ಬದುಕಿನಲ್ಲಿ ನಿತ್ಯ ನೂತನ ಪಾಠದ ಅಧ್ಯಾಯಗಳಾಗಿ ಕಣ್ಣೆದುರಿಗೆ ನಿತ್ಯ ದರ್ಶನವನ್ನು ಕೊಡುತ್ತವೆ.  ನಿಜಕ್ಕೂ ಆ ಬಾಲ್ಯ ಹೇಗೆ ಕಳೆದು ಹೋಯಿತು. ಎಲ್ಲಿ ಕಳೆದು ಹೋಯಿತು?  ಯಾಕೆ ಅದನ್ನು ಹಿಡಿದಿಡಲು ಸಾಧ್ಯವಾಗಿಲ್ಲ?  ಬಾಲ್ಯ ಕಳೆದರೂ ಕಳೆದುಕೊಳ್ಳಲಾಗದ ನೆನಪುಗಳೇ ಸರ್ವಸ್ವ. ಅದೇ ವಾಸ್ತವ. 

ಪುಟ್ಟ ಬಾಲ್ಯವನ್ನು ನೆನಪಿಸಿ ಪುಟ್ಟ ಬಾಲಕನಂತೆ ದೇವರ ದರ್ಶನ ಮಾಡಿ , ಗೋಪುರದಲ್ಲಿ ಕುಳಿತು ಹೊಟ್ಟೆ ಮಾತ್ರ ತುಂಬಿಸಿಕೊಳ್ಳುವುದಲ್ಲ, ಮನಸ್ಸನ್ನೂ ತೃಪ್ತಿ ಪಡಿಸಿ ನೈವೇದ್ಯ ಉಂಡು, ಕೊನೆಗೊಮ್ಮೆ ಅಮ್ಮನಿಗೆ ಮನಸಾ ವಂದಿಸಿ ಮಠದಿಂದ ಹೊರಡುತ್ತೇನೆ. ಹಾಗೆ ಮೇಲೆ ಬಂದು ಒಂದು ಸಲ ತಿರುಗಿ ನೋಡುತ್ತೇನೆ. ಮೊನ್ನೆ ಮೊನ್ನೆಯಂತೆ ಕಳೆದ ಬಾಲ್ಯ ನೆನಪಾಗುತ್ತದೆ. ಆವಳ ಮಠದ ಸುತ್ತಲಿನ ನನ್ನ ಬಾಲ್ಯದ ನೆನಪುಗಳು ಮತ್ತೆ ಮನಸ್ಸಿನಾಳಕ್ಕೆ ಇಳಿದು ಬಿಡುತ್ತವೆ. ಭಾರವಾದ ಮನಸ್ಸಿನಿಂದ ಅಲ್ಲಿಂದ ಬರುವಾಗ ಅನಿಸುವುದೊಂದೆ ಆ  ಯಾವುದೂ ಇಲ್ಲದ ಆ ಬಾಲ್ಯ  ಮತ್ತೆ ಬರಬಾರದೇ? 


 

No comments:

Post a Comment