Wednesday, September 27, 2023

ಉಪವಾಸ ಶಾಂತಿ

ನಿನ್ನೆ ದಿನ ನಾನು ಸಂಪೂರ್ಣ ಉಪವಾಸವನ್ನು ಅನುಭವಿಸಿದೆ. ಇದೊಂದು ವಿಸ್ಮಯ ಅನುಭವ.  ಸಾಮಾನ್ಯವಗಿ ನಾನು ಮಧ್ಯಂತರ ಉಪವಾಸ (ntermittent fasting) ಕಳೆದ ಎರಡು ವರ್ಷದಿಂದ ಮಾಡುತ್ತಿದ್ದರೂ ಒಂದು ಪೂರ್ಣ ಪ್ರಮಾಣದ ಉಪವಾಸ ಮಾಡುವ ಆಸಕ್ತಿ ಉಂಟಾಯಿತು. ನೋಡಿಯೇ ಬಿಡೋಣ ಎಂದು ಕೊಂಡು, ಯಾವಾಗಲೂ ಸಾಯಂಕಾಲ ಐದು ಘಂಟೆಗೆ ಲಘು ಆಹಾರ ತಿಂದು ರಾತ್ರಿಯ ಊಟ ಮುಗಿಸುವ ನಾನು ಮೊನ್ನೆ ಸಾಯಂಕಾಲ ಆಹಾರ ಸೇವಿಸಿ ಆ ಘಳಿಗೆಯಿಂದ ಉಪವಾಸ ಆರಂಭಿಸಿದೆ. ರಾತ್ರಿ ಕಳೆದು ಬೆಳಗ್ಗೆ ಆದಾಗ ಯಾವಾಗಲೂ ಹೊಟ್ಟೆ ಖಾಲಿಯಾಗಿರುತ್ತದೆ. ಆದರೆ ನಿನ್ನೆ ಖಾಲಿಯ ಜತೆಗೆ ಇವತ್ತು ಉಪವಾಸ ಎನ್ನುವ ನಿರ್ಧಾರದಿಂದಲೇ ಹೊಸ ಅನುಭವ ಎದುರಾಯಿತು. ಎಂದಿನಂತೆ ಯೋಗಾಭ್ಯಾಸ ಉಳಿದೆಲ್ಲ ನಿತ್ಯಕಾರ್ಯಗಳು ಇದ್ದರೂ ಬೆಳಗ್ಗಿನ ಉಪಾಹಾರ ಸೇವಿಸದೇ ಇರುವುದು ಬೆಳಗ್ಗಿನ ಒಂದು ಘಂಟೆ ಮುಕ್ತವಾಗಿ ಒದಗಿತು. ಆಹಾರ ಸೇವಿಸುವುದಿಲ್ಲ ಎಂಬ ಯೋಚನೆ ಮೊದಲು ಮನಸ್ಸಿನಿಂದ ಹೊರ ಹಾಕಿದೆ. ಪದೇ ಪದೇ ಆಹಾರ ಸೇವಿಸಲಿಲ್ಲ ಎಂಬ ಯೋಚನೆ ಇದ್ದರೆ ಹಸಿವಿನ ಬಗ್ಗೆ ಹೆಚ್ಚು ಗಮನ ಹೋಗುತ್ತದೆ. ಅದು ಇನ್ನೂ ಪರೀಕ್ಷೆಗೆ ಒಡ್ಡುತ್ತದೆ. ಹಾಗಾಗಿ ದೈನಂದಿನ ಇತರ ಕಾರ್ಯಗಳಲ್ಲಿ ಗಮನ ಹರಿಸಿದೆ. ಒಂದು ಘಂಟೆ ಕುಳಿತು ಓದಿದೆ. ನಂತರ ಕಛೇರಿ ಕೆಲಸಗಳು, ಹೆಚ್ಚಿನ ಕೆಲಸ ನಾನು ಮನೆಯಿಂದಲೇ ಮಾಡುವ ಕಾರಣ ಬಾಕಿ ಉಳಿದ, ಮಾಡಬೇಕಾದ ಎಲ್ಲಾ ಕೆಲಸಗಳ ಪಟ್ಟಿ ಮಾಡಿ ಅದನ್ನು ಮುಗಿಸುವತ್ತ ಗಮನ ಹರಿಸಿದೆ. ಅಲ್ಲಿಂದ ತಿನ್ನುವ ಯೋಚನೆ ಹಸಿವಿನ ಯೋಚನೆ ದೂರವಾಯಿತು. ಕೇವಲ ನೀರು ಮಾತ್ರ ಆಹಾರವಾಗಿ ಪದೇ ಪದೇ ನೀರು ಕುಡಿಯುತ್ತಾ ದೇಹ ಕ್ಷೀಣವನ್ನು ದೂರ ಮಾಡಿದೆ. 

ಹಸಿವು ಮನುಷ್ಯನ ದೈಹಿಕ ಚಟುವಟಿಕೆಯಲ್ಲಿ ಅತೀ ಮುಖ್ಯ. ಬಹುಶಃ ಇವತ್ತು ಪ್ರಪಂಚದ ಚಟುವಟಿಕೆಗಳಿಗೆ ಮುಖ್ಯ ಕಾರಣ ಈ ಹಸಿವು. ಅದೊಂದು ಬಾಧೆ ಎಂದು ಪರಿಗಣಿಸಿದರೆ ಅದಕ್ಕೆ ಬೇರೆ ಔಷಧಿ ಇಲ್ಲ. ಕೇವಲ ಆಹಾರ.   ಮನುಷ್ಯನಿಗೆ ಹಸಿವು ಮತ್ತು ವಿಸರ್ಜನೆ ಇವೆರಡೂ ಆರೋಗ್ಯದ ಸಂಕೇತವಾಗಿದೆ. ರೋಗ ಇಲ್ಲದೇ ಇರುವುದೇ ಆರೋಗ್ಯ.  ಅನ್ನಂ ಬ್ರಹ್ಮಾ ರಸೋ ವಿಷ್ಣು ಹೇಳಿದಂತೆ ಅನ್ನ ಎಂಬುದು ಬ್ರಹ್ಮ ರೂಪವಾಗಿ ಬೃಹದಾಕಾರವಾಗುತ್ತದೆ. ನಾವೆಷ್ಟು ಭಾಗ್ಯವಂತರು?  ಅನ್ನದಲ್ಲೂ ಬ್ರಹ್ಮನನ್ನು ಕಾಣುವ ನಮ್ಮ ಸಂಸ್ಕಾರ ಅತ್ಯಂತ ಶ್ರೇಷ್ಠ.  ಆಹಾರದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಹೀಗೆ ತ್ರಿಮೂರ್ತಿಗಳು ಆವಾಹನೆಯಾಗಿರುತ್ತಾರೆ. ತ್ರಿಮೂರ್ತಿಗಳನ್ನು ದೇಹದಲ್ಲಿ ಐಕ್ಯಮಾಡುವುದಾದರೆ ದೇಹ ಶುದ್ದಿ ಜತೆಯಲ್ಲಿ ಹೃದಯ ಶುದ್ದಿಯಾಗಬೇಕು. ಹೀಗಾಗಿ ಒಂದಷ್ಟು ಉಪವಾಸ ವಿಧಿಗಳು ಎಲ್ಲಾ ಧರ್ಮಗಳಲ್ಲೂ ಇದೆ. ಒಂದು ರೀತಿಯಲ್ಲಿ ಉಪವಾಸ ಎಂದರೆ ನಾವು ಇದ್ದ ಹಾಗೆ ಇರದೇ ಬೇರೊಂದು ರೀತಿಯಲ್ಲಿರುವುದು. ಇದು ಮತ್ತೊಂದು ಜನ್ಮ ಎತ್ತಿದಂತೆ. ದೇಹ ಎಲ್ಲ ಬರಿದಾಗಿ ಅಲ್ಲಿ ತ್ರಿಮೂರ್ತಿ ದರ್ಶನವಾಗುವುದು ಹೀಗೆ ಪವಿತ್ರವಾದ ಭಾವನೆಗಳು ಒಂದಾದರೆ ದೇಹದ ಆರೋಗ್ಯಕ್ಕೆ ಸಂಭಂದಿಸಿ ಇನ್ನೂ ಏನೋನೋ  ಗುಣಗಳು ಲಭ್ಯವಾಗುತ್ತವೆ. 

ಮಧ್ಯಾಹ್ನದ ತನಕ ಒಂದಷ್ಟು ಹಸಿವು ಬಾಧೆಕೊಟ್ಟಿತು ನಿಜ. ಆದರೆ ನೋಡೋಣ ಎಂಬ ಕುತೂಹಲವೂ ಇದೆ. ಬಡತನದಲ್ಲಿ ಅನಿವಾರ್ಯವಾಗಿ ಅನುಭವಿಸಿದ ಹಸಿವಿನ ನೆನಪು ಹೇಗೂ ಇದೆ. ಎನೂ ಇಲ್ಲದಾಗ ಅನುಭವಿಸುವ ಹಸಿವಿಗೂ ಎಲ್ಲವೂ ಒದಗಿ ಬಂದರೂ ಅದನ್ನು ದೂರವಿಡುವ ಅನುಭವ ಒಂದು ಸುಖಾನುಭವವನ್ನು ಒದಗಿಸುತ್ತದೆ.  ಗಂಡ ಹೆಂಡತಿ ಪರಸ್ಪರ ಜಗಳಾಡಿ  ಊಟ ಬಿಟ್ಟು ಕುಳಿತುಕೊಳ್ಳುವುದು ಸಾಮಾನ್ಯ. ಯಾವುದೋ ಸಾಧನೆಗೆ ಗಾಂಧೀ ಮಾರ್ಗದಂತೆ ಉಪವಾಸ ಸತ್ಯಾಗ್ರಹ ಮಾಡುವುದನ್ನೂ ಕಾಣಬಹುದು. ಉಪವಾಸವೂ ಒಂದು ಸತ್ಯದ ಆಗ್ರಹವಾಗುತ್ತದೆ. ಅಲ್ಲೆಲ್ಲಾ ಮನಸ್ಸಿನಲ್ಲಿ ಒಂದು ಬಗೆಯ ಅತೃಪ್ತಿ ಅಸಹನೆ ರೋಷಾಗ್ನಿ ಇರುತ್ತದೆ.  ಯಾರದೋ ಮೇಲಿನ ಸಿಟ್ಟಿನಲ್ಲಿ ನಮ್ಮನ್ನು ನಾವೇ ಶಿಕ್ಷಿಸಿಕೊಳ್ಳುವುದು ಮನಸ್ಸಿನ ತೃಪ್ತಿ ಎಂದು ಕಂಡು ಕೊಂಡರೂ ಅದು ಮನಸ್ಸಿನ ಸ್ಥಿಮಿತವನ್ನು ನಾಶಮಾಡುತ್ತದೆ. 

        ಇದು ಮನಸ್ಸಿನಲ್ಲಿ ತುಮುಲವನ್ನು ಹೆಚ್ಚಿಸಿ ಮನಸ್ಸಿನ ಶಾಂತಿಯನ್ನು ಕದಡಿ ಬಿಡುತ್ತದೆ. ಪರಿಣಾಮ ದೇಹದ ಆರೋಗ್ಯವೂ ಬಿಗಡಾಯಿಸಬಹುದು. ಅದೇ ಉಪವಾಸ ನಿರ್ಮಲ ಮನಸ್ಸಿನಿಂದ ಆಚರಿಸಿದಾಗ ಒದಗಿ ಬರುವ ಶಾಂತಿ ಇದೆಯಲ್ಲ ಅದು ನಿನ್ನೆಯ ದಿನದ ಅನುಭವಗಳಲ್ಲಿ ಅತ್ಯಂತ ವಿಶಿಷ್ಟವಾಗಿ ಕಂಡಿತು. ಇಡೀ ದಿನ ನಾನು ಒಂದು ವಿಸ್ಮಯಕರವಾದ ಶಾಂತಿಯನ್ನು ಅನುಭವಿಸಿದೆ. ನಿಜಕ್ಕೂ ಅದೊಂದು ಶ್ರೇಷ್ಠ ಅನುಭವ. ದೈವಾರಾಧನೆಯಲ್ಲಿ ಉಪವಾಸ ಯಾಕಿರಬೇಕು ಎಂಬುದಕ್ಕೆ ಇದು ನಿದರ್ಶನ. ಮನಸ್ಸು ಶಾಂತವಾಗಿರುತ್ತದೆ. ಮಾಡುವ ಕೆಲಸದಲ್ಲಿ ಹೆಚ್ಚು ಗಮನ ಹರಿಯುತ್ತದೆ, ಏಕಾಗ್ರತೆ ಆಸಕ್ತಿ ಎರಡೂ ಮಾಡುವ ಕೆಲಸದಲ್ಲಿ ವಿಶಿಷ್ಟ ಫಲಗಳನ್ನು ಒದಗಿಸುತ್ತದೆ. ಇಡೀ ದಿನ ನಾನು ಅನುಭವಿಸಿದ ಈ ಶಾಂತಿ ಮತ್ತೊಮ್ಮೆ ನನಗೆ ಉಪವಾಸವನ್ನು ಆಚರಿಸುವ ಪ್ರೇರಣೆಯನ್ನು ಒದಗಿಸಿದೆ. 

ಉಪವಾಸ ಹಲವು ರೀತಿಯಲ್ಲಿದೆ. ದಿನ ಇಪ್ಪತ್ತನಾಲ್ಕು ಘಂಟೆಗಳಲ್ಲಿ ಕಡಿಮೆ ಅವಧಿಯಲ್ಲಿ ಆಹಾರ ಸೇವಿಸಿ ಉಳಿದ ಅಧಿಕ ಸಮಯದಲ್ಲಿ ಉಪವಾಸ ಇರುವ ಆರೋಗ್ಯ ಪದ್ಧತಿ ಆಚರಣೆಯಲ್ಲಿದೆ. ಅದೇ ಯೋಗಾಭ್ಯಾಸದ ನಿಯಮದಲ್ಲಿ ಇದು ಸಹಜವಾಗಿ ಆಚರಿಸಲ್ಪಡುತ್ತದೆ. ರಾತ್ರಿ ಸೂರ್ಯಾಸ್ತದ ಮೊದಲು ಆಹಾರ ಸೇವಿಸಿ ಮರುದಿನ ಉಪಾಹಾರದ ತನಕ ಸುಮಾರು ಹದಿನಾರು ಘಂಟೆ ಉಪವಾಸ ಇರುವ ಮಧ್ಯಂತರ ಉಪವಾಸದ ಕ್ರಮ ಒಂದು ರೀತಿ. ಇನ್ನು ಪೂಜಾವಿಧಾನಗಳಲ್ಲಿ ಕಟ್ಟುನಿಟ್ಟಿನ ಉಪವಾಸ ಇದ್ದುಕೊಂಡು ಒಂದು ಬಗೆಯಾದರೆ, ಕೇವಲ ಅನ್ನಾಹಾರವನ್ನು ದೂರವಿಟ್ಟು ಫಲಾಹಾರವನ್ನು ಸೇವಿಸುವ ಒಂದು ಕ್ರಮ ಇನ್ನೊಂದು ಬಗೆ. ಆದರೆ ಆಹಾರ ಸೇವಿಸದೇ ಕೇವಲ ನೀರನ್ನು ಮಾತ್ರ ಸೇವಿಸುವುದು ಬಹಳ ಕಠಿಣ ಉಪವಾಸ ಕ್ರಮ. ಇನ್ನು ಮುಸ್ಲಿಂ ರಲ್ಲಿ ರಂಜಾನ್ ಮಾಸದಲ್ಲಿ ಹಗಲೂ ನೀರನ್ನೂ ಸೇವಿಸದೆ ಉಪವಾಸ ಆಚರಿಸುವ ಕ್ರಮವೂ ಇದೆ. ಹೀಗೆ ಉಪವಾಸದ ಬಗೆಗಳು ಅದರ ಅನುಷ್ಠಾನಗಳು ಬೇರೆ ಬೇರೆ ಬೇರೆಯಾಗಿರುತ್ತದೆ. 

ಹೌದು ಮನುಷ್ಯ ಸದಾ ಅಹಾರವನ್ನು ಹಿಂಸಿಸಿ ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಾನೆ. ಹಾಗಾಗಿ ಒಂದಷ್ಟು ಸಮಯ ಈ ಹಿಂಸೆಯಿಂದ ದೂರವಿದ್ದರೆ ಅದೊಂದು ವಿಶಿಷ್ಟ ಶಾಂತಿ ಲಭ್ಯವಾಗುತ್ತದೆ. ಅದೇ ಧ್ಯಾನದಲ್ಲಿ ನಾನು ಹಸಿವನ್ನು ದೂರ ಮಾಡಿದೆ. ಕೇವಲ ನೀರನ್ನು ಮಾತ್ರ ಸೇವಿಸಿದೆ. ಅದೂ ನಿನ್ನೆಯ ದಿನ ಸುಮಾರು ಎಳು ಲೀಟರ್ ಗಿಂತಲೂ ಅಧಿಕ  ನೀರು ಸೇವಿಸುವ ಪ್ರೇರಣೆಯಾಗಿ ಹೋದದ್ದು ನನಗೆ ವಿಚಿತ್ರ ಅನುಭವ.  ಬರೀ ನೀರನ್ನೇ ಸೇವಿಸಿ ದಿನ ಕಳೆಯಬಹುದು ಎಂಬ ಅನುಭವವೂ ಸಾಧ್ಯವಾಯಿತು. 

ನಿಯಮಿತವಾಗಿ ಉಪವಾಸ ಆಚರಿಸಬೇಕು. ಆದರೆ ಅದಕ್ಕೆ ದೇಹದ ಕ್ಷಮತೆ ಕೂಡ ಅನಿವಾರ್ಯ. ನಿಯಮಿತವಾಗಿ ಔಷಧಗಳನ್ನು ಸೇವಿಸುವವರಿಗೆ ಇದು ಸಾಧ್ಯವಾಗುವುದಿಲ್ಲ. ವಾಯು ಸಮಸ್ಯೆ ಇರುವವರು ನೀರನ್ನು ಸೇವಿಸುವಾಗ ಆದಷ್ಟು ಬಿಸಿ ನೀರನ್ನು ಸೇವಿಸಿದರೆ ಉತ್ತಮ. ಮೊನ್ನೆ ಐದು ಘಂಟೆಗೆ ಆರಂಭವಾದ ಉಪವಾಸ ಇಂದು ಬೆಳಗ್ಗೆ ಎಂಟು ಘಂಟೆಗೆ ಕಷಾಯ ಕುಡಿಯುವುದರೊಂದಿಗೆ ಮುಕ್ತಾಯಗೊಳಿಸಿದೆ. ಹೀಗೆ ಉಪವಾಸ ಒಂದು ದಿವ್ಯ ಅನುಭವ ಒದಗಿಸಿದ್ದು ಸುಳ್ಳಲ್ಲ. ಇದರ ನಡುವೆ ತೀರಾ ಖಾಲಿ ಹೊಟ್ಟೆಯಲ್ಲಿ  ಮುಂಜಾನೆಯ  ಯೋಗಾಭ್ಯಾಸ ಹೇಗಿರಬಹುದು ಎಂದು ತೀವ್ರವಾದ ಕುತೂಹಲವಿತ್ತು. ಕುತೂಹಲದಂತೆ ಅದೂ ಒಂದು ವಿಚಿತ್ರ ಅನುಭವವನ್ನು ಒದಗಿಸಿಕೊಟ್ಟಿದೆ. ಈ ಹೊಸ ಅನುಭವ ಹೊಸ ಉಪವಾಸಕ್ಕೆ ನಾಂದಿ ಹಾಡಿದೆ. 






No comments:

Post a Comment