Sunday, November 12, 2023

ನಂಬಿಕೆಗಳು ಸಂಸ್ಕೃತಿಯೂ

ಮೊನ್ನೆ ನವರಾತ್ರಿ ಸಮಯದಲ್ಲಿ ಊರಿಗೆ ಹೋಗಿದ್ದೆ. ನಮ್ಮೂರು ತಲುಪಿದಂತೆ ಅಲ್ಲಲ್ಲಿ ಸಾರ್ವಜನಿಕ ಶಾರದೋತ್ಸವ ನಡೆಯುತ್ತಿರುವುದನ್ನು ನೋಡಿದೆ. ಬಹುಶಃ ಸಾರ್ವಜನಿಕ ಶಾರದೋತ್ಸವ ಆಚರಿಸುವ ಪರಿಪಾಠವಿರುವುದು ನಾನು ಕಂಡ ಹಾಗೆ ನಮ್ಮೂರಲ್ಲಿ ಮಾತ್ರ. ಎಲ್ಲದಕ್ಕೂ ಮಹತ್ವ ಕೊಡುವಾಗ ಇಲ್ಲಿವಿದ್ಯೆ ಜ್ಞಾನಕ್ಕೂ ಮಹತ್ವ ಕೊಡುವ ಬಗೆ ಇದು.  ಅದು ಗಣೇಶೋತ್ಸವ ಆಗಿರಲಿ ಶಾರದೋತ್ಸವ ಆಗಿರಲಿ ಇಲ್ಲಾ ಸಾರ್ವಜನಿಕ ಸಾಮೂಹಿಕ ಸತ್ಯನಾರಾಯಣ ಪೂಜೆಯೇ ಆಗಲಿ ಇಲ್ಲಿ  ಉತ್ಸವದ ಆಚರಣೆಯ ವೈಶಿಷ್ಟ್ಯಗಳು ಹಲವು. ಹಲವು ಕಡೆಯಲ್ಲಿ ಅತ್ಯಂತ ಶಿಸ್ತುಬದ್ಧವಾಗಿರುತ್ತದೆ.   ಡಿ ಜೆ ಯಂತಹ ಪಾಶ್ಯಾತ್ಯ ಸಂಸ್ಕೃತಿಯ ಪ್ರಭಾವ ಇರುವುದಿಲ್ಲ. ಶಾಸ್ತ್ರೀಯ ಸಂಗೀತ ಭಜನೆ ಯಕ್ಷಗಾನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಇದಕ್ಕೆ ಪ್ರತೀಕ. ಹಲವು ಕಡೆಯಲ್ಲಿ ಒಂದು ಕಾರ್ಯಕ್ರಮ ಹೇಗೆ ಸಂಸ್ಕೃತಿಯನ್ನು ಪ್ರತಿನಿಧಿಸಬೇಕೋ ಆ ರೀತಿಯಲ್ಲೇ ಇರುತ್ತದೆ. ಪೂಜೆ ಪುನಸ್ಕಾರಗಳು ಜನರಲ್ಲಿ ಭಕ್ತಿಯನ್ನು ಜಾಗೃತಗೊಳಿಸಬೇಕು. ನಿಸ್ವಾರ್ಥ ಪ್ರೀತಿಯ ಸಂದೇಶವನ್ನು ಸಾರಬೇಕು. ಮುಖ್ಯವಾಗಿ ಹಿನ್ನೆಲೆಯ ಭಾವ ಉದಾತ್ತವಾಗಿರಬೇಕು. ಪೂಜೆ ಪುನಸ್ಕಾರ ಉತ್ಸವಾದಿಗಳು ಭಕ್ತರನ್ನು ಮೆಚ್ಚಿಸುವ ಬದಲಾಗಿ ಪರಮಾತ್ಮನನ್ನು ಮೆಚ್ಚಿಸುವ ಉದ್ದೇಶದಲ್ಲಿರಬೇಕು. ಆದರೆ ಇಂದು ಸಾರ್ವಜಿನಿಕ ಆಚರಣೆಗಳು ಭಕ್ತಿ, ಶ್ರದ್ಧೆಯ ಉದ್ದೇಶದಿಂದ ಬಹಳ ದೂರದಲ್ಲಿರುತ್ತದೆ ಎಂಬುದು ಅಷ್ಟೇ ಸತ್ಯ. 

ಇತ್ತೀಚೆಗೆ ಗಣೇಶೋತ್ಸವದ ಬಗ್ಗೆ ಸ್ವಾಮೀಜಿಯೊಬ್ಬರು ಹೇಳಿದ ಮಾತು, ಅವರು ಯಾಕೆ ಹಾಗೆ ಹೇಳಿದರು? ಅದರ ತಪ್ಪು ಒಪ್ಪುಗಳು ಏನು ಎಂಬುದರ ಬಗ್ಗೆಯಲ್ಲ. ಅವರ ಚಿಂತನೆಯ ಬಗ್ಗೆ ಅದನ್ನು ವಿಮರ್ಶಿಸುವುದರ ಬಗ್ಗೆ ನನಗೆ ಆಸಕ್ತಿ ಇಲ್ಲ. ಆದರೆ ಇದೇ ಬಗೆಯ ಸಾಧ್ಯತೆಗಳು ದಟ್ಟವಾಗಿದೆ. ನಮ್ಮಲ್ಲಿ ಮೌಢ್ಯಕ್ಕೂ ಸಂಸ್ಕೃತಿಗೂ ಪರಿಧಿ ಅತ್ಯಂತ ಸೂಕ್ಷ್ಮವಾಗಿದೆ. ಒಂದು ಕಾಲದಲ್ಲಿ ಸತೀ ಪದ್ದತಿ ಎಂಬುದು ಸಂಸ್ಕೃತಿಯಾಗಿತ್ತು .  ಅದು ಮೌಢ್ಯ ಎಂದು ಅರಿತಾಗ ಅದು ಸಮಾಜದಿಂದ ದೂರವಾಗಬೇಕಾಯಿತು.  ನಾವು ಜೀವನದ ಮೌಲ್ಯಗಳನ್ನು ನಂಬಿಕೆಗಳನ್ನು ಈ ದೃಷ್ಟಿಕೋನದಿಂದಲೇ ಗಮನಿಸಬೇಕು. ಜಾತಕ ನೋಡಿ ಮದುವೆಯಾಗಬೇಕು ಸತ್ಯ. ವಿಪರ್ಯಾಸ ಎಂದರೆ ಜಾತಕ ಹೊಂದಿಕೆಯಾಗದೇ ಬ್ರಹ್ಮಚಾರಿಗಳಾಗಿ ಉಳಿದವರ ದೊಡ್ಡ ಪಟ್ಟಿಯೇ ಸಿಕ್ಕಿಬಿಡುತ್ತದೆ. ಹಾಗಂತ ಜಾತಕನೋಡುವುದು ತಪ್ಪು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ವಾಸ್ತವ ಎಂಬುದು ಇದೆಲ್ಲದಕ್ಕಿಂತ ಮೀರಿ ನಿಲ್ಲುತ್ತದೆ.  ಮುಖ್ಯವಾಗಿ ನಮ್ಮ ನಂಬಿಕೆಗಳು ಮೌಢ್ಯವನ್ನು ಆಶ್ರಯಿಸುವಂತಾಗಬಾರದು. ಸತ್ಯ ಧರ್ಮ ನ್ಯಾಯ ಪ್ರಾಮಾಣಿಕತೆಯನ್ನು ಬದಿಗಿಟ್ಟು ವ್ಯವಹರಿಸಿದಾಗ ಅದು ಮೌಢ್ಯವಾಗುತ್ತದೆ. ಕಳ್ಳನೋ ಕೊಲೆಗಾರನೋ ಅಪರಾಧವನ್ನು ಮಾಡುವುದಕ್ಕೆ ಹೊರಟಾಗ ದೇವರಿಗೆ ಹರಕೆ ಹಾಕಿ ಪ್ರಾರ್ಥನೆ ಮಾಡಿ ಹೋದರೆ ಮಾಡುವ ದುಷ್ಕೃತ್ಯ ಸಮ್ಮತವಾಗುವುದಿಲ್ಲ. ನಿಜವಾದ ಸತ್ಯ ಏನು ಎಂದು ಆತನಿಗೆ ತಿಳಿಯುವುದಿಲ್ಲ. ದೇವರ ಬಗ್ಗೆ ಆತನಿಗೆ ಮೌಢ್ಯವೇ ಆವರಿಸಿರುತ್ತದೆ. ನಮ್ಮ ಅನ್ಯಾಯ ಅಪ್ರಾಮಾಣಿಕತೆ ವಂಚನೆ ಅಪರಾಧಗಳಿಗೆ ದೇವರು ಅನುಗ್ರಹಿಸಬೇಕು ಎಂಬುದು ಮೌಢ್ಯವಲ್ಲದೇ ಬೇರೆನೂ ಅಲ್ಲ. ದೇವರಲ್ಲಿನ ದೈವತ್ವವನ್ನು ಗೇಲಿ ಮಾಡುವ ಪ್ರವೃತ್ತಿ ಇದು. ಇದು ಪರಿಶುದ್ದ ಭಕ್ತಿಯಲ್ಲ. ಯಾವುದೆ ಪಾಪ ಕರ್ಮಗಳಿಗೆ ಅಪರಾಧಗಳಿಗೆ ಕ್ಷಮೆ ಎಂಬುದು ಇರುವುದಿಲ್ಲ. ಆಗಿ ಹೋದ ಅಪರಾಧಕ್ಕೆ ಪಶ್ಚಾತ್ತಾಪ ಪರಿಹಾರ ಎಂಬುದು ಕೇವಲ ನಮ್ಮ ನಂಬಿಕೆ. ಆದರೆ ಸತ್ಯ ಅದಲ್ಲ. ಅಪರಾಧ ಆದ ನಂತರ ಅದು ಅಪರಾಧವೇ. ಅದು ಸತ್ಕಾರ್ಯವಾಗುವುದಕ್ಕೆ ಅದನ್ನು ನಾಶ ಮಾಡುವುದಕ್ಕೆ ಸಾಧ್ಯವಿಲ್ಲ. 

ಈಗ ಗಣೇಶ ಎಂದ ತಕ್ಷಣ ಅದು ದೇವರಲ್ಲದೇ ಆಗುವುದಿಲ್ಲ. ಅಥವಾ ದೇವರು ಎಂಬುವುದು ಗಣೇಶ  ಎನ್ನುವುದಕ್ಕೆ ಅಷ್ಟೇ ಸೀಮಿತವಾಗುವುದಿಲ್ಲ. ರಾಮ ಶಿವ ಸುಬ್ರಹ್ಮಣ್ಯ ಕೃಷ್ಣ ಹೆಚ್ಚೇಕೆ ಅಲ್ಲಾ ಅಥವಾ ಏಸು ಎಲ್ಲವೂ ಒಂದೇ ಎನ್ನುವ ತತ್ವದಲ್ಲಿ ಹೆಸರಿಗೆ ಮಹತ್ವವೇ ಇರುವುದಿಲ್ಲ. ಹಾಗಿರುವಾಗ ಗಣೇಶ ಎನ್ನುವುದು ದೇವರಲ್ಲ ಎನ್ನುವುದು ಹೇಗೆ ಸಾಧ್ಯ?  ಅಕ್ಕಿಯನ್ನು ಅನ್ಯ ಭಾಷೆಯಲ್ಲಿ  ಚಾವಲ್ ರೈಸ್ ಎನ್ನುವ ಹಾಗೆ ಗಣೇಶ. ಅದೊಂದು ಹೆಸರಿನ ರೂಪ. ದೇವರನ್ನು ನಂಬುವಾಗ ಅಲ್ಲಿ ಆಸ್ತಿಕ ನಾಸ್ತಿಕ ಎನ್ನುವುದಷ್ಟೇ ಮುಖ್ಯವಾಗುತ್ತದೆ. 

ಹಿಂದೂ ಸಂಸ್ಕೃತಿಯಲ್ಲಿ ದೇವರು ಆರಾಧನೆ ಎಂಬುದರ ವ್ಯಾಪ್ತಿ ಅದರ ರೂಪ ಬಹಳ ವಿಶಾಲವಾಗಿದೆ. ಅತ್ಯಂತ ಸರಳವಾಗಿಯೂ ಅತ್ಯಂತ ಆಡಂಬರದಲ್ಲಿಯೂ ಇಲ್ಲಿ ಆರಾಧನೆ ಇರುತ್ತದೆ.  ಇಲ್ಲಿ ಭಾವನೆಗಳಿಗೆ ಮಾತ್ರ ಮಹತ್ವ. ದೇವರ ಪೂಜೆ ಎಂಬುದರಲ್ಲಿ ಕ್ರಿಯೆಯೂ ವಿಭಿನ್ನವಾಗಿ ಇರುವಾಗ ಹೆಸರು ಎಂಬುದು ಗೌಣವಾಗಿರುತ್ತದೆ. ಹಲವು ಕಡೆ ದೇವರು ಎಂದು ಅರಿತಾಗ ಅಲ್ಲಿ ಒಳಗೆ ಯಾವ ದೇವರು ಎಂದು ಯೋಚಿಸುವುದಿಲ್ಲ. ಅದಕ್ಕೆ ನಮಸ್ಕರಿಸುವುದು ಮಾತ್ರ ಮಹತ್ವವಾಗಿರುತ್ತದೆ. ದೇವರ ರೂಪ ಭಾವ ಹೆಸರು ಎಲ್ಲವೂ ಮನುಷ್ಯ ಕಲ್ಪನೆಗೆ ಸೀಮಿತ. ಕಾಂತಾರ ಸಿನಿಮಾದಲ್ಲಿ ದೈವವನ್ನು ನೋಡುವಾಗ ಅದು ಕೇವಲ ದೈವ ಬೂತವಾಗಿ ಕಾಣುತ್ತದೆ ಹೊರತು ಅಲ್ಲಿ ಹೆಸರಿನ ಬಗ್ಗೆ ಯೋಚಿಸುವುದಿಲ್ಲ.  ಆದರೆ ದೇವರು ಹೆಸರಿಗೆ  ಅಷ್ಟಕ್ಕೇ ಸೀಮಿತವಾದರೆ ಅದು ದೇವರಾಗುವುದಿಲ್ಲ. ಕಲ್ಪನಾತೀತ ಭಾವನಾತೀತ ಎಂಬುದು ದೇವರು. ಹಾಗಿರುವಾಗ ಇಲ್ಲಿ ಹೆಸರು ಎಂಬುದು ಗೌಣವಾಗಿರುತ್ತದೆ. ಯಾವುದೂ ಇಲ್ಲದೆಯೂ ದೇವರನ್ನು ಪೂಜಿಸುವುದಕ್ಕೆ ಭಜಿಸುವುದಕ್ಕೆ ಅವಕಾಶ ನಮ್ಮ ಸಂಸ್ಕೃತಿಯಲ್ಲಿದೆ. ಕೇವಲ ಬೆರಳ ತುದಿಯಲ್ಲಿ ಹಿಡಿದ ಅಕ್ಷತೆಯನ್ನು ಸಮರ್ಪಿಸಿ ಸರ್ವ ಸಮರ್ಪಣಾ ಭಾವದಿಂದ ಆರಾಧಿಸಿ ತೃಪ್ತರಾಗುವ ಅವಕಾಶವಿದೆ. ಒಂದು ತುಳಸೀ ದಳ ಅರ್ಪಿಸಿ ಶ್ರೀಕೃಷ್ಣನನ್ನು ಒಲಿಸಿಕೊಂಡ ಕಥೆ ಪುರಾಣದಲ್ಲಿದೆ. ನಾವು ಹೊರಾವರಣದಲ್ಲಿ ಏನು ಮುಖ್ಯ ಎಂದು ತಿಳಿದಿರುತ್ತೇವೆಯೋ   ದೇವರಿಗೆ ಅದು ಯಾವುದೂ ಮುಖ್ಯವಲ್ಲ. ಅದು ನಮ್ಮ ಭಾವನೆಗಳಿ ಮಾತ್ರ ಅವಶ್ಯಕವಾಗಿರುತ್ತದೆ.  ನಾವು ಹೆಸರಿಲ್ಲದೇ ಕೇವಲ ಓಂ ಕಾರದಿಂದ ದೇವರನ್ನು ಕಾಣುವಾಗ ಯಾವ ದೇವರನ್ನೂ ಕಲ್ಪಿಸಬಹುದು. ಓಂಕಾರದಲ್ಲೇ ಎಲ್ಲವನ್ನು ಕಾಣುವಾಗ ಗಣೇಶ ಕೃಷ್ಣ ದುರ್ಗೆ ಎಲ್ಲವು ಒಂದೇ ಆಗಿ. ದೇವರು ಹೆಣ್ಣೂ ಅಗಬಹುದು ಗಂಡು ಅಗಬಹುದು. ಅದು ಕೇವಲ ಮಾನಸಿಕ ತೃಪ್ತಿ. 

ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಗಮನಿಸಬೇಕು. ಋಷಿಗಳು ತಪಸ್ಸು ಮಾಡುವುದಕ್ಕೆ ಯಾಕೆ ಕಾಡನ್ನು ಆಯ್ಕೆ ಮಾಡುತ್ತಿದ್ದರು?  ಕೇವಲ ಅವರ ಏಕಾಗ್ರತೆಗಾಗಿ ಅಲ್ಲ. ಎಲ್ಲವನ್ನೂ ಬಿಟ್ಟು ಕೇವಲ ಮನಸ್ಸನ್ನು ಅರ್ಪಿಸುವುದಕ್ಕೆ ಕಾಡು ಪ್ರಶಸ್ತ. ಅವರ ತಪಸ್ಸಿನಿಂದ ಉಳಿದವರಿಗೆ ತೊಂದರೆಯಾಗುವುದಿಲ್ಲ. ಎಲ್ಲೋ ಒಂದು ಕಾಡಿನ ಭಾಗದಲ್ಲಿ ಅಲ್ಲಿರುವ ಪ್ರಾಣಿ ಪಕ್ಷಿ ಗಿಡ ಮರಗಳಿಗೂ ತೊಂದರೆಯಾಗದಂತೆ ಅವರು ತಪಸ್ಸು ಮಾಡುವ ಉದ್ದೇಶ ಸ್ಪಷ್ಟ ಯಾರಿಗೂ ತೊಂದರೆ ಕೊಡುವುದರಿಂದ ದೈವಾರಾಧನೆ ಸಾಧ್ಯವಾಗುವುದಿಲ್ಲ. ಯಾರಿಗೋ ತೊಂದರೆ ಕೊಟ್ಟು ಅವನ ಸಂಪತ್ತನ್ನು ಸೂರೆ ಮಾಡಿ ನಾವು ದೇವರನ್ನು ಪೂಜಿಸುತ್ತೇವೆ ಎಂದರೆ ಅದು ಮೌಢ್ಯದ ಭಕ್ತಿಯಾಗುತ್ತದೆ. ಸರ್ವೇಷಾಮ ಅವಿರೋಧೇನ ಎಂದು ಸಂಕಲ್ಪ ಮಾಡುವಾಗ ಪ್ರತಿಯೊಬ್ಬರ ಕ್ಷೇಮ ಸಮ್ಮತಿ ಅದಕ್ಕೆ ಸಂಪೂರ್ಣ ವಿನಿಯೋಗವಾಗಬೇಕು. ಅದಿಲ್ಲವಾದರೆ ಅದು ದೈವಾರಾಧನೆಯಾಗುವುದಿಲ್ಲ. 

ನಮ್ಮ ಮನಸ್ಸಿನ ಅಹಂಕಾರಗಳ ವಿಕಾರವನ್ನು ನಿಯಂತ್ರಿಸುವಾಗ  ಪರಿಪೂರ್ಣ ಪರಮಾತ್ಮ ಸ್ವರೂಪ ಅರಿವಿಗೆ ಬರುತ್ತದೆ. ಹಾಗಾಗಿ ಯಾರೋ ಒಬ್ಬರು ಗಣೇಶ ಕಾಲ್ಪನಿಕ ಎಂದು ಹೇಳುವಾಗ ಪರಮಾತ್ಮ ಸ್ವರೂಪ ಅರಿವಿದ್ದವನಿಗೆ ಏನೂ ಅನಿಸುವುದಿಲ್ಲ. ಯಾಕೆಂದರೆ ಅವನ ಮನಸ್ಸಿನಲ್ಲಿ ಗಣೇಶ ಎಂಬುದು ಕೇವಲ ಹೆಸರು ಮಾತ್ರ ಅದರಿಂದ ಆಚೆಗೆ ಪರಮಾತ್ಮ ಸ್ವರೂಪವಿದೆ. ಆತನಲ್ಲಿದ್ದ ಭಕ್ತಿ ಅದನ್ನು ತೋರಿಸುತ್ತಾ ಇರುತ್ತದೆ.  ದೇವರು ಪ್ರಸನ್ನನಾಗುವುದು, ಅಥವಾ ದೇವರು ದೇವರಾಗಿ ಉಳಿಯುವುದು ಭಕ್ತಿ  ಇದ್ದರೆ ಮಾತ್ರ. ಹಾಗಾಗಿ ಇಲ್ಲಿ ಎಲ್ಲದಕ್ಕೂ ಮೂಲವಾಗುವುದು ದೇವರನ್ನು ಏನು ಕರೆಯುವುದು ಎನ್ನುವುದಕ್ಕಿಂತಲೂ ಭಕ್ತಿಯೇ ಮುಖ್ಯವಾಗುತ್ತದೆ. ಭಕ್ತಿ ಇಲ್ಲದೇ ಇದ್ದರೆ ಉಳಿದವುಗಳಿಗೆ ಯಾವ ಪ್ರಾಶಸ್ತ್ಯವೂ ಇರುವುದಿಲ್ಲ. ಪುರಾಣದ ಬಗ್ಗೆ ಅರಿವಿಲ್ಲದವನಿಗೆ ಪುರಾಣದ ವ್ಯಕ್ತಿ ಪಾತ್ರಗಳು ಕೇವಲ ಹೆಸರಿಗಷ್ಟೇ ಸೀಮಿತವಾಗುತ್ತದೆ. ಹೆಸರು ಎಂಬುದು ಭಕ್ತಿಯ ಮುಂದು ಗೌಣವಾಗುತ್ತದೆ. 

ಗಣೇಶೋತ್ಸವವನ್ನು ಸಂಸ್ಕೃತಿಗೆ ತಳುಕು ಹಾಕಲಾಗುತ್ತದೆ. ಆದರೆ ಗಣೇಶೋತ್ಸವ ಹುಟ್ಟಿಕೊಂಡಿರುವುದು ಸಂಸ್ಕೃತಿಯಿಂದಲೇ ಹೊರತು ಅದುವೇ ಸಂಸ್ಕೃತಿಯಾಗುವುದಕ್ಕೆ ಸಾಧ್ಯವಿಲ್ಲ. ಅದಲ್ಲದೇ ಇದ್ದ ಸಂಸ್ಕೃತಿಗಳು ಬೇಕಾದಷ್ಟು ಇವೆ ಅದು ಎಷ್ಟು ಗೌರವಿಸಲ್ಪಟ್ಟಿದೆ ಎಂಬುದು ಮುಖ್ಯವಾಗುತ್ತದೆ. ಅದರಂತೆ ದೀಪಾವಳಿಗೆ ಪಟಾಕಿಯ ಆವಶ್ಯಕತೆ ಎಷ್ಟು ಎಂಬುದು ಕೂಡ ಪ್ರಶ್ನೆಯಾಗುತ್ತದೆ. ಅದನ್ನು ಬೇಡ ಎಂದರೆ ಸಂಸ್ಕೃತಿಗೆ ವಿರೋಧವಾಗುತ್ತದೆ ಎಂಬುದು ಸರಿಯಲ್ಲ. ದೀಪಾವಳಿಯಲ್ಲೇ ಇರುವ ಸಂಸ್ಕೃತಿ ನಮಗೆ ಬೇಡವಾಗಿ ಕೇವಲ ಪಟಾಕಿಯಷ್ಟೇ ದೀಪಾವಳಿಯಾದರೆ ಅದು ಸಂಸ್ಕೃತಿ ಹೇಗಾಗುತ್ತದೆ?  ನಮ್ಮ ರಸ್ತೆಯಲ್ಲಿ ಸುಮಾರು ಐವತ್ತು ಮನೆಗಳಿವೆ. ಅದರಲ್ಲಿ ಹೆಚ್ಚಿನ ಎಲ್ಲ ಮನೆಗಳು ಪಟಾಕಿ ಉರಿಸಿದರೆ, ಮನೆ ಎದುರು ದೀಪ ಹಚ್ಚಿಡುವ ಮನೆಗಳು ಒಂದೋ ಎರಡೋ  ಮನೆಗಳ ಮುಂದೆ ದೀಪ ಹಚ್ಚಿಡುತ್ತಾರೆ. ದೀಪಾವಳಿಯಲ್ಲಿ ಮುಖ್ಯವಾಗಿ ಹಚ್ಚಿಡಬೇಕಾದ ದೀಪಗಳು ಬೇಡ. ಪರಮಾತ್ಮನ ಭಜನೆ ಸ್ಮರಣೆಗಳು ಬೇಡ. ಇವುಗಳೆಲ್ಲ ಸಂಸ್ಕೃತಿಯ ಅಂಗಗಳು. ಅದು ಬೇಡದೆ ಕೇವಲ ಪಟಾಕಿ ಬೇಕು ಎನ್ನುವಾಗ ಅದರಿಂದಾಗುವ ದುಷ್ಪರಿಣಾಮದ ಬಗ್ಗೆ ಯೋಚಿಸುವುದಿಲ್ಲ. ಪಟಾಕಿ ಬೇಡವೇ ಬೇಡ ಎಂದುಕೊಂಡು ಮನೆಯೊಳಗೆ ಕುಳಿತ ಅಮಾಯಕನ ಕಣ್ಣು ತೆಗೆದ ಪಟಾಕಿ ಬೇಕು ಎಂದರೆ ಶೋಚನೀಯ ಎನ್ನಬೇಕು. ಪಟಾಕಿಯ ಬಗ್ಗೆ ಪುಂಗಿ ಊದುವಾಗ ಕಣ್ಣು ಕಾಣುವುದಿದ್ದರೆ ಒಂದು ಸಲ ಕಣ್ಣಿನ ಆಸ್ಪತ್ರೆಗಳಿಗೆ ಭೇಟಿ ಕೊಡಿ. ಪಟಾಕಿಯಿಂದ ಕಣ್ಣು ಕಳೆದ ಮನೆಯಯವರನ್ನು ನೋಡಬೇಕು.  ಗಣೇಶೋತ್ಸವದಲ್ಲು ಹೀಗೆ ಬೇಡದೇ ಇರುವ ಅಂಶಗಳು ಸಾಕಷ್ಟು ಇವೆ. ಹಣ ಸಂಗ್ರಹಿಸುವಾಗ ದರೋಡೆ ಮಾಡಿದಂತೆ ಕಿತ್ತುಕೊಳ್ಳುವುದನ್ನೂ ಕಾಣಬಹುದು. ಇನ್ನು ಅಲ್ಲಿ ಉತ್ಸವದ ಹೆಸರಲ್ಲಿ ಆಗುವ ಅಪಸವ್ಯಗಳನ್ನು ನೋಡುತ್ತಾ ಹೋದರೆ ಅದು ಬೇಡವೇ ಬೇಡ ಎಂಬಂತಹ ಸನ್ನಿವೇಶವನ್ನು ಕಾಣಬಹುದು. ದೇವರ ಯಾವುದೇ ಕ್ರಿಯೆಗಳು ಯಾರಿಗೂ ತೊಂದರೆ ಕೊಡದೇ ಆಚರಿಸಲ್ಪಡಬೇಕು. ಹಾಗಿದ್ದರೆ ಮಾತ್ರ ಅದು ದೇವರ ಪೂಜೆಯಾಗುತ್ತದೆ.  

ನಮ್ಮ ರಸ್ತೆಯಲ್ಲಿ ಈಬಾರಿ ಮೂರು ಸಲ ಗಣೇಶ ಇಟ್ಟು ಐದಾರು ದಿನ ಪೂಜೆ ಮಾಡಿದ್ದಾರೆ. ಇನ್ನು ಪೂಜೆಯ ಪವಿತ್ರತೆ ನೋಡಿದರೆ ಗಣೇಶ ಇಷ್ಟು ಅಗ್ಗವಾಗಿ ಹೋದನೇ ಎಂದನಿಸುತ್ತದೆ. ನಮ್ಮದು ಒಂದು ಕಡೆ ಮಾತ್ರ ತೆರೆದುಕೊಂಡ ಏಕ ಮುಖ ರಸ್ತೆ. ನಡುವಿನಲ್ಲಿ ಚಪ್ಪರ ಹಾಕಿ ರಸ್ತೆ ತಡೆ ಮಾಡಿ ಪೂಜೆ ಮಾಡುವಾಗ ಒಂದು ಬದಿಯ ಒಂದಷ್ಟು ಮನೆಮಂದಿಗಳು ಪಡುವ ಕಷ್ಟ ಬೇರೆಯೇ ಆಗಿರುತ್ತದೆ. ಮನೆಯ ಯಾರೋ ಒಬ್ಬನಿಗೆ ಹೃದಯಾ ಘಾತವೋ ಮತ್ತೊಂದೋ ಆಗಿ ತುರ್ತು ಚಿಕಿತ್ಸೆ ಬೇಕು ಎನ್ನುವಾಗ ಮನೆ ಬಾಗಿಲಿಗೆ ವಾಹನವೇ ಬಾರದಂತಹ ಸ್ಥಿತಿ ಬಂದರೆ ಗಣೇಶನೇ ಕಾಪಾಡುತ್ತಾನೆ ಎಂದು ಕುಳಿತರೆ ಅದು ಮೌಢ್ಯವಾಗುತ್ತದೆ. 

    ಹಲವು ಕಡೆಯಲ್ಲಿ ಗಣೇಶೋತ್ಸವ ಮಾಡಿ ಗಣೇಶನ ಮೌಲ್ಯವನ್ನು ನಾವು ಕಳೆಯುತ್ತಿದ್ದೇವೆ ಎಂದನಿಸುತ್ತದೆ. ಭಕ್ತಿ ಇದ್ದರೆ ಮಾತ್ರ ಸಾಲದು ಭಕ್ತಿಯ ಸ್ವರೂಪವೂ ಅತೀ ಮುಖ್ಯ.  ಗರ್ಭದ ಗುಡಿಯ ಒಳಗೆ ಸರ್ಪ ಬಂದು ಕುಳಿತರೆ ಜೀವ ಭಯವೇ ಪ್ರಧಾನವಾಗುತ್ತದೆ. ಅಲ್ಲಿ ಸಂಸ್ಕೃತಿಗೆ ಯಾವ ಬೆಲೆಯೂ ಇರುವುದಿಲ್ಲ. ಸಂಸ್ಕೃತಿ ಎಂಬುದು ಉತ್ತಮ ಜೀವನವನ್ನು ಬಿಂಬಿಸುತ್ತದೆ. ಸತ್ಯ ಪ್ರಾಮಾಣಿಕತೆ ಮತ್ತು ಪಾವಿತ್ರ್ಯತೆ ಇದು ಇಲ್ಲದೇ ಇದ್ದರೆ ಯಾವ ಸಂಸ್ಕೃತಿಯೂ ಗೌರವಿಸಲ್ಪಡುವುದಿಲ್ಲ.

Monday, November 6, 2023

ಹೊಟ್ಟೆ ತುಂಬಿದರೂ ಇಂಗದ ಹಸಿವು

  ಪ್ರತೀ ಸಲ ನನಗೆ ಊಟ ಮಾಡಿ ಏಳುವಾಗ ಬೇಡವೆಂದರೂ ನಮ್ಮ ನಾರಾಯಣ ಎಂಬ ವೃದ್ದರ ನೆನಪಾಗುತ್ತದೆ.   ಈ ವೃದ್ದ ಹಣ್ಣು ಹಣ್ಣು ಮುದುಕ ಅಲ್ಲದೇ ಇದ್ದರೂ ಒಂದಷ್ಟು  ಪ್ರಾಯ ಸಂದು ಹೋಗಿತ್ತು.  ಅವರ ಊಟ ನನಗೆ ಹಲವಾರು ಅರ್ಥಗರ್ಭಿತ ವಿಷಯಗಳು ಅಡಕವಾಗಿದ್ದಂತೆ ಭಾಸವಾಗುತ್ತದೆ. ಇಂದು ಈ ಊಟವೆಂಬ  ಕ್ರಿಯೆ ಅದರ ಉದ್ದೇಶ ಕೇವಲ ಹಸಿವನ್ನು ನೀಗಿಸುವುದಕ್ಕೆ ಎಂದು ಅನಿಸುವುದಿಲ್ಲ. 


ಹಿಂದೆ ಮಂಗಳೂರಲ್ಲಿರುವಾಗ ಈ ವಯೋ ವೃದ್ಧರು ಊಟಕ್ಕೆ ಕುಳಿತರೆ ಅವರ ತನ್ಮಯತೆ ನಮಗೆ ಅಚ್ಚರಿಯನ್ನು ತರುತ್ತಿತ್ತು. ಆ ತನ್ಮಯತೆ  ಊಟದ ಮೇಲಿನ ಅತ್ಯಾಗ್ರಹವಾಗಿರಲಿಲ್ಲ.  ಬದಲಿಗೆ ಹಸಿವೆಯನ್ನು ತಣಿಸುವ ಒಂದು ಪವಿತ್ರ ಕಾರ್ಯವಾಗಿತ್ತು. ನಾರಾಯಣ ಕೂದಲು ನೆರೆಗಟ್ಟಿದ ಕೃಶ ಶರೀರದ ವ್ಯಕ್ತಿಯಾಗಿದ್ದರು. ಅವರು ನಮ್ಮಲ್ಲಿ ಅನಧಿಕೃತವಾಗಿ ಕೆಲಸಕ್ಕಿದ್ದರು. ಅವರು ಇದ್ದಾರೆ ಎಂದರೆ ನಮಗೆ ಕೆಲವೆಲ್ಲ ಕೆಲಸದಿಂದ ಮುಕ್ತಿಯಾಗುತ್ತಿತ್ತು. ಅದು ಯಾವ ಕೆಲಸವಾದರೂ ಸಮಯದ ಮಿತಿ ಇಲ್ಲದೆ ಮಾಡುತ್ತಿದ್ದರು. ನೀಳಕಾಯದ ವ್ಯಕ್ತಿಯಾಗಿದ್ದರು. ಅವರಿಗೆ ಕೌಟುಂಬಿಕವಾಗಿ ಮಗಳು ಮಗ ಸೊಸೆ ಎಲ್ಲರೂ ಅನುಕೂಲ ಸ್ಥಿತಿಯಲ್ಲಿದ್ದರೂ ಅವರು ನಮ್ಮ ಮನೆಯಲ್ಲಿ ಕೆಲಸಕ್ಕಿದ್ದರು. ಕಾರಣ ಸ್ವಾಭಿಮಾನ ಒಂದೆಡೆಯಾದರೆ ಕೌಟುಂಬಿಕ ಅಸಮಾಧಾನ ಇನ್ನೊಂದು. ಒಂದು ರೀತಿಯಲ್ಲಿ ವಿರಕ್ತಿಯಾಗಿ ಸನ್ಯಾಸಿಯಂತೇ ಬದುಕುತ್ತಿದ್ದರು. ನಮ್ಮ ಮನೆಯಲ್ಲಿ ಅದೂ ಇದೂ ಚಾಕರಿ ಮಾಡುತ್ತಾ ತನ್ನ ಹಸಿವನ್ನು ನೀಗುವ ದುಡಿಮೆ ಅವರದ್ದು. ಹಾಗೆ ನೋಡಿದರೆ ಒಂದು ಕಾಲದಲ್ಲಿ ಬಹಳ ಅನುಕೂಲವಂತರಾಗಿ ತುಂಬು ಕುಟುಂಬದೊಂದಿಗೆ ಇದ್ದರು.  ಅದು ಎಪ್ಪತ್ತರ ದಶಕ,  ಮಂಗಳೂರಿನ ರಥಬೀದಿ  (ಕಾರ್ ಸ್ಟ್ರೀಟ್) ಯಲ್ಲಿ  ಸ್ವಂತವಾದ ಒಂದು ಉದ್ಯಮದಲ್ಲಿ  ಚಕ್ಕುಲಿ ಮುಂತಾದ ತಿಂಡಿ ವ್ಯಾಪಾರವನ್ನು ಮಾಡುತ್ತಿದ್ದರು. ನಮ್ಮ ಮಾವಂದಿರು ಅವರ ಕೆಳಗೆ ಕೆಲಸಕ್ಕಿದ್ದರು. ಅದೇನು ಸಂಭವಿಸಿತೋ ಸರಿಯಾಗಿ ಗೊತ್ತಿಲ್ಲ , ನಂತರ ಎಲ್ಲವನ್ನು ಕಳೆದುಕೊಂಡ ಸನ್ಯಾಸ ಸ್ಥಿತಿಗೆ ತಲುಪಿದರು. ಅತ್ತ ಮನೆಯವರಿಂದ ದೂರಾಗಿ ಒಂದು ರೀತಿಯ ಅನಾಥತ್ವ.

ನಾರಾಯಣ ಅವರ ಮತ್ತೊಂದು ಗುಣವೆಂದರೆ ಎಲ್ಲೂ ಶಾಶ್ವತವಾಗಿ ನಿಲ್ಲುವ ವ್ಯಕ್ತಿಯಲ್ಲ. ಸದಾ ತಿರುಗಾಡುತ್ತಾ ಇರುವವರು. ಅದು ಯಾರದೋ ಮನೆಗಲ್ಲ, ಬದಲಿಗೆ ಪ್ರಸಿದ್ದ ತೀರ್ಥ ಕ್ಷೇತ್ರ ಪರ್ಯಟನೆ. ಭಾರತದಲ್ಲಿ ಅವರು ಹೋಗದ ಪ್ರಸಿದ್ಧ ಕ್ಷೇತ್ರಗಳೇ ಇಲ್ಲ . ಒಂದು ಜೋಳಿಗೆಯಂತಹ ಚೀಲ ಅದರಲ್ಲಿ ಒಂದೆರಡು ಅತ್ಯಾವಶ್ಯ ಪಂಚೆ ಅಂಗಿ  ಅದೂ ಕಾವಿ ಬಣ್ಣದ ವಸ್ತ್ರ ಇಷ್ಟೇ ಇರುತ್ತಿತ್ತು. ಅಗೀಗ ಬೀಡಿ ಎಳೆಯುವುದು ಬಿಟ್ಟರೆ ಅವರಿಗೆ ಬೇರೆ ದುಶ್ಚಟಗಳಿರಲಿಲ್ಲ. ಬಹುಶಃ ಕೈಯಲ್ಲಿ ಕಾಸಿಲ್ಲದೆಯೂ ರೈಲಿನ ಸಾಮಾನ್ಯ ಭೋಗಿಯ ಪ್ರಯಾಣ ಮಾಡುತ್ತಿದ್ದರು ಎಂದು ನನಗೆ ಅನುಮಾನ.  ಅತ್ತ ಉತ್ತರ ಭಾರತದ ಬದರಿನಾಥ ಕೇದಾರನಾಥ ಹರಿದ್ವಾರ ವಾರಣಾಸಿ ಗಯಾ ಪ್ರಯಾಗ ಪಂಡರಾಪುರ ರಾಮೆಶ್ವರ ಅಯೋಧ್ಯೆ  ಹೀಗೆ ಸುತ್ತಾಡುತ್ತಿದ್ದ ಪರಮ ದೈವ ಭಕ್ತ. ಸದಾ ಪರಮಾತ್ಮನ ನಾಮ ಸ್ಮರಣೆಯಲ್ಲಿ ತನ್ನ ಹೆಸರನ್ನೆ ಉಚ್ಚರಿಸುತ್ತಿದ್ದರು. ಮುಂಜಾನೆ ನಾಲ್ಕುಗಂಟೆಗೆ ಎಚ್ಚರವಾದರೆ ಇವರು ನಾರಾಯಣ ನಾರಾಯಣ ಹರೇ ರಾಮ ಎನ್ನುವ ನಾಮೋಚ್ಚಾರಣೆ ಕೇಳುತ್ತಿತ್ತು.  ಪಂಡರಾಪುರದ ಪಾಂಡುರಂಗನ ಅನನ್ಯ ಭಕ್ತ. ಸಾಯಂಕಾಲ ಪುರಂದರದಾಸರ ಭಜನೆಯನ್ನು ಹೇಳುವುದಲ್ಲದೆ ವರ್ಷಕ್ಕೆ ಒಂದು  ಬಾರಿಯಾದರೂ ಪಂಡರಾಪುರ ಹೋಗಿ ಬರುತ್ತಿದ್ದರು. ಹಾಗೆ ಹೋಗಿ ಬಂದಾಗ ತಂದ ಪುಂಡರಿಕಾಕ್ಷನ ಶಿಲಾ ವಿಗ್ರಹ ತಂದು ನಮ್ಮ ಮನೆಯಲ್ಲಿಟ್ಟಿದ್ದರು.  ಅಂತಹ ದೈವ ಭಕ್ತನ  ಊಟ ಪ್ರತಿ ಬಾರಿಯೂ ನೆನಪಿಗೆ ಬರುವುದಕ್ಕೆ ಒಂದು ವಿಶೇಷತೆ ಇದೆ. 

ನಾರಾಯಣ ಅಜ್ಜ....ನಾವು ಅವರನ್ನು ಕರೆಯುತ್ತಿದ್ದ ಹೆಸರು, ಅವರು ಯಾವ ಜಾತಿಯೋ ಗೊತ್ತಿಲ್ಲ. ಅವರು ನಮ್ಮ ಮನೆಯ ಜಗಲಿಯ ಒಂದು ಮೂಲೆಯಲ್ಲಿ ಊಟಕ್ಕೆ ಕುಳಿತುಕೊಳ್ಳುತ್ತಿದ್ದರು.  ಅವರ ತನ್ಮಯತೆಯನ್ನು ನಾನು ಈಗ ನೆನಪಿಸಿಕೊಳ್ಳುತ್ತೇನೆ. ತಿನ್ನುವ ಪ್ರತಿಯೊಂದು ತುತ್ತೂ ಅವರಿಗೆ ಪರಮಾತ್ಮನ ಪ್ರಸಾದದಂತೆ ಭಾಸವಾಗುತ್ತಿತ್ತು. ಆ ಭಕ್ತಿ ಅವರ ಕಣ್ಣಿನ ನೋಟದಲ್ಲಿ ಮುಖದ ಭಾವನೆಯಲ್ಲಿ ವ್ಯಕ್ತವಾಗುತ್ತಿತ್ತು. ಊಟದ ಮೊದಲು ಕಣ್ಣು ಮುಚ್ಚಿ ದೇವರನ್ನು ಪ್ರಾರ್ಥಿಸುತ್ತಿದ್ದರು. ಆನಂತರ ಒಂದು ತುತ್ತು ಅಂಗಳದಲ್ಲಿ ಕಾಗೆಗೆ ಇಡುತ್ತಿದ್ದರು. ಆನಂತರ ಏನು ಬಳಸಿದರೂ ಅದನ್ನು ಹಸಿವಾಗಿ ಊಟಮಾಡುತ್ತಿದ್ದರು. ಇಷ್ಟೇ ಅದರೆ ಅದರಲ್ಲಿ ವಿಚಿತ್ರವಿಲ್ಲ, ಊಟದ ಕೊನೆಯಲ್ಲಿ ತಟ್ಟೆಗೆ ಒಂದಷ್ಟು ನೀರನ್ನು ಸುರಿದು ಆ ತಟ್ಟೆಯನ್ನುಚೆನ್ನಾಗಿ ತೊಳೆದು ಅದನ್ನು ಕುಡಿದು ಬಿಡುತ್ತಿದ್ದರು. ಆಗ ನಮಗೆ ಇದೊಂದು ಅತಿಯಾಶೆಯಂತೆ ಹಾಸ್ಯವಾಗಿ ಕಂಡಿತ್ತು.ಆದರೆ ಈಗ ಅದರ ಮೌಲ್ಯ ಅನುಭವಕ್ಕೆ ಬರುತ್ತದೆ.  ಒಂದಿಷ್ಟನ್ನೂ ವ್ಯರ್ಥ ಮಾಡದ  ಆಹಾರದ ಮೇಲಿನ ಅವರ ಭಕ್ತಿ ನಿಜಕ್ಕೂ ಶ್ರೇಷ್ಠ. 

ಊಟ ಎಂದರೆ ಈ ವಯೋವೃದ್ಧನ ನೆನಪಾಗುವುದು ಇದಕ್ಕೆ. ನಾವು ಕೊನೆಯಲ್ಲಿ ಎಂಜಲು  ಮಾಡಿ ಎಸೆಯುವುದನ್ನು ಅವರು ತನ್ಮಯತೆಯಲ್ಲಿ ಸೇವಿಸುತ್ತಿದ್ದರು. 

ಮಧ್ಯಾಹ್ನ ದೇವಸ್ಥಾನಕ್ಕೆ ಹೋದರೆ  ಹಲವು ಸಲ ದರ್ಶನಕ್ಕಿರುವ ಮಹತ್ವಕ್ಕಿಂತಲೂ ಭೋಜನ ಪ್ರಸಾದಕ್ಕೆ ಆದ್ಯತೆ ನಮಗರಿವಿಲ್ಲದೇ ಒದಗಿಬರುತ್ತದೆ. ಯಾವಾಗ ದರ್ಶನ ಆಗಿಬಿಡುತ್ತದೋ, ಯಾವಾಗ ಭೋಜನ ಶಾಲೆಗೆ ಹೋಗಿಬಿಡುತ್ತೇವೆ ಎಂಬ ತವಕ ಉಂಟಾಗುತ್ತದೆ. ಭೋಜನ ಕೇವಲ ದೇವಸ್ಥಾನದಲ್ಲಿ ಮಾತ್ರ ಆದ್ಯತೆಯನ್ನು ಕಾಣುವುದಲ್ಲ....ಅದು ಎಲ್ಲ ಸಮಾರಂಭಗಳಲ್ಲೂ ಅತಿಥಿ ಸತ್ಕಾರದ ಬಹಳ ಮುಖ್ಯ ಅಂಗ. ಭೋಜನ ಸತ್ಕಾರ ಅತ್ಯಂತ ಗೌರವಯುತ ಸತ್ಕಾರ. ಯಾವ ಸಮಾರಂಭದಲ್ಲೂ ಊಟಕ್ಕೆ ಕೊಡುವ ಪ್ರಾಮುಖ್ಯತೆ ಹೆಚ್ಚು. ಊಟದ ಹೊತ್ತು ಸನಿಹವಾಗುವಾಗ ಅವಸರ ಅಸಹನೆ ತನ್ನಿಂತಾನೆ ಹುಟ್ಟಿಕೊಳ್ಳುತ್ತದೆ.  

ಇತ್ತೀಚೆಗೆ  ಕ್ಷೇತ್ರವೊಂದಕ್ಕೆ ಹೋಗಿದ್ದೆ. ಮಧ್ಯಾಹ್ನ ಊಟದ ಹೊತ್ತು. ಊಟಕ್ಕೆ ಕುಳಿತಾಗ ನನ್ನೆದುರು ಪುರೋಹಿತರೊಬ್ಬರು ಕುಳಿತಿದ್ದರು. ಅವರ ಉಡುಗೆ ತೊಡುಗೆ ನೋಡುವಾಗ ಹಾಗೇ ಅನಿಸಿತ್ತು.  ಮೊದಲಿನಿಂದಲೂ ನಾನು ಅವರನ್ನು ಗಮನಿಸುತ್ತಿದ್ದೆ. ದೇವರ ದರ್ಶನದಿಂದ ತೊಡಗಿ ಅವರ ಅವಸರ ಪ್ರವೃತ್ತಿ. ಊಟಕ್ಕೆ ಕುಳಿತಾಗಲೂ ಮುಂದುವರೆದಿತ್ತು. ಕೊನೆಗೆ ಬಂದ ಅನ್ನಾಹಾರವನ್ನು ಅವಸರದಲ್ಲೇ  ಊಟ ಮಾಡಿದರು.  ಊಟದ ನಡುವೆ ಸಾಂಬಾರ್ ಬಂತು. ಬಡಿಸುವವರು ಅವಸರವಸರದಿಂದ ಬಡಿಸಿ ಮುಂದೆ ಹೋದರು. ಇವರು ಮುಂದೆ ಹೋದ ಅವರನ್ನು ಹಿಂದೆ ಕರೆದು ಸಾಂಬಾರ್ ನ ಹೋಳು ಬಡಿಸುವಂತೆ ಬೇಡಿ ಹಾಕಿಸಿಕೊಂಡರು. ಆದರೆ ಆರಂಭದಲ್ಲಿ ಇದ್ದ ಆತ್ಯಾಗ್ರಹ ಕೊನೆಯಲ್ಲಿ ಇರಲಿಲ್ಲ. ಬಡಿಸಿದ ಅಷ್ಟೂ ಹೋಳುಗಳು ಮಾತ್ರವಲ್ಲದೆ ಒಂದಷ್ಟು ಅನ್ನ ಪಲ್ಯ ಪಾಯಸ ಬಿಟ್ಟು  ಊಟಮುಗಿಸಿ ಎದ್ದರು. ಅವರ ವರ್ತನೆ ಬಹಳ ಅಸಹನೆಯನ್ನು ಉಂಟು ಮಾಡಿತು. ನಾನೆಂದೆ ಏನು ಸ್ವಾಮಿ ಕೇಳಿ ಹಾಕಿದ್ದನ್ನೂ ಬಿಟ್ಟು ಎದ್ದಿರಲ್ಲ. ಅವರು ಕೇವಲ ನಕ್ಕರು.  ಇಂತಹ ವ್ಯಕ್ತಿಗಳಿಗೆ ಏನು ಹೇಳಬೇಕು. ನಾನು ಅಷ್ಟು ಕೇಳಿದ್ದೇ ಹೆಚ್ಚು ಅನಿಸಿತು.  ವಯಸ್ಸಾಗಿ ಹೋದರೂ ತಮ್ಮ ತಮ್ಮ ಹೊಟ್ಟೆಯ ಸಾಮಾರ್ಥ್ಯ ಅರಿವಾಗುವುದಿಲ್ಲ. ಹಸಿವಿನ ಪ್ರಮಾಣ ಗೊತ್ತಾಗುವುದಿಲ್ಲ. ಇವರೆಲ್ಲ ಊಟಕ್ಕೆ ಕುಳಿತರೆ ಸಾಕು ಬೇಕು ಎನ್ನುವುದಕ್ಕೆ ಅರ್ಥವೇ ಇರುವುದಿಲ್ಲ. ಸಾಕು ಎಂದು ಹೇಳುವುದಕ್ಕು ಬೇಕು ಎಂದು ಬೇಡುವುದಕ್ಕೂ ಅರ್ಹತೆಯೇ ಇಲ್ಲ. 

ಸಾಮಾನ್ಯವಾಗಿ ಸಮಾರಂಭಗಳಲ್ಲಿ  ನಾನು ಊಟಕ್ಕೆ ಕುಳಿತಾಗ ಗಮನಿಸುತ್ತೇನೆ. ಊಟದ ಆರಂಭದಲ್ಲಿ ಹಲವು ಭಕ್ಷ್ಯ ಆಹಾರಗಳನ್ನು ಬಡಿಸಿ ಎಲೆಯನ್ನು ಅಲಂಕರಿಸುತ್ತಾರೆ. ಎಲೆಯ ಅಲಂಕಾರಕ್ಕೆಂದೇ ಹಲವಾರು ತಿಂಡಿಗಳನ್ನು ಮಾಡುತ್ತಾರೆ. ಊಟದ ಆರಂಭದಲ್ಲಿ ಇವುಗಳಿಗೆಲ್ಲ ಎಷ್ಟು ಆಸಕ್ತಿ ವಹಿಸುತ್ತೇವೋ ಊಟದ ನಂತರ ಇವುಗಳು ಅದಕ್ಕಿಂತ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗುತವೆ. ನಾವು ಊಟಮಾಡಿದ ಬಾಳೆ ಎಲೆಯಾದರೂ ನಾವು  ಊಟ ಮಾಡಿ ಕುಳಿತಲ್ಲಿಂದ ಎದ್ದನಂತರ ಅದು ಹೇಸಿಗೆ ಎನಿಸುತ್ತದೆ. ಊಟದ ಆರಂಭದಲ್ಲಿ ಇದ್ದ ಆಗ್ರಹ ಊಟವಾದನಂತರ ಇರುವುದಿಲ್ಲ.  ತಿನ್ನುವ ಆಹಾರದಲ್ಲಿ ನಿರ್ಲಕ್ಷ್ಯ. ಕುಳಿತ ನೂರು ಮಂದಿಯಲ್ಲಿ ಎಲೆಯಲ್ಲಿ ಒಂದಗುಳೂ ಇಲ್ಲದಂತೆ , ಯಾವ ತಿಂಡಿ ಪದಾರ್ಥಗಳನ್ನೂ ಉಳಿಸದೆ ಊಟಮಾಡುವವರು ಕೇವಲ ಐದಾರು ಮಂದಿ. ಪ್ರತಿಯೊಬ್ಬರ ಎಲೆಯಲ್ಲೂ ಒಂದಲ್ಲ ಒಂದು ಆಹಾರ ಉಳಿಸಿ ಏಳುವಾಗ ಹಸಿವು ಮರೆತು ಹೋಗಿರುತ್ತದೆ.  ದಾನೆ ದಾನೆಪೆ ಲಿಖಾಹೈ ಖಾನೆವಾಲಾ ಕಾ ನಾಮ್  ಎಂದು ಹೇಳುತ್ತಾರೆ. ಪ್ರತಿಯೊಂದು ಧಾನ್ಯದಲ್ಲೂ ಭಗವಂತ ತಿನ್ನುವವರ ಹೆಸರನ್ನು ಬರೆದಿರುತ್ತಾನೆ. ಆದರೆ ಭಗವಂತನ ಕಲ್ಪನೆಯನ್ನು ಹುಸಿ ಮಾಡುವ ನಮ್ಮ ಪ್ರವೃತ್ತಿ ಇದೆಯಲ್ಲ,  ಭಗವಂತನ ಮೇಲಿನ ನಂಬಿಕೆಯನ್ನು ಹುಸಿಗೊಳಿಸುತ್ತದೆ. 

ವರ್ಷ ಸಂದು ಇಷ್ಟು ದೊಡ್ಡವರಾಗುತ್ತೇವೆ. ನಮ್ಮ ಹೊಟ್ಟೆಯ ಪ್ರಮಾಣ ನಮಗೆ ಅರಿವಿಲ್ಲ ಎಂದರೆ ವಿಚಿತ್ರಎನಿಸುತ್ತದೆ. ಆಹಾರವಿಲ್ಲದೇ ಸಾಯುವುದಕ್ಕಿಂತಲೂ ತಿಂದು ಸಾಯುವವರು ಹೆಚ್ಚಂತೆ. ನಮ್ಮ ನಡುವೆ ಇಂದು ತಿನ್ನುವುದಕ್ಕೆ ಹಲವು ಅರ್ಥಗಳು ಇರುತ್ತವೆ. ಪ್ರಾಣಿಗಳು ಕೇವಲ ಹಸಿವಿಗಾಗಿ ತಿನ್ನುತ್ತವೆ. ನಮಗದರೆ ಪರಿವೆ ಇಲ್ಲ. ಚಪಲಕ್ಕಾಗಿ ಹೊಟ್ಟೆ ತುಂಬಿದರೂ ಇಳಿಸಿಕೊಳ್ಳುತ್ತೇವೆ. ಕೆಲವೊಮ್ಮೆ ಆಹಾರ ಉಳಿತದೆ ಎಂದು ಕಸದ ಬುಟ್ಟಿಗೆ ಎಸೆಯುವುದನ್ನು ತಿಂದು ತೇಗುತ್ತೇವೆ. ಅರ್ಥಾತ್ ಕಸದ ಬುಟ್ಟಿ ನಮ್ಮ ಹೊಟ್ಟೆ.  ಹಲವು ಸಲ ನಾಗರಿಕ ಜೀವನ ಶೈಲಿಯಲ್ಲಿ ಹಿರಿಮೆಗಾಗಿ ತಿನ್ನುತ್ತೇವೆ. ಯಾರೋ ಒತ್ತಾಯ ಮಾಡಿ ಬಡಿಸಿದರೂ ಎಂದು ಬೇಡದೇ ಇದ್ದರೂ ಯಾರಿಗಾಗಿಯೋ ತಿಂದುಬಿಡುತ್ತೇವೆ. ಯಾರೋ ತಿನ್ನಬೇಕಾದ ಆಹಾರ ಬೇಡದೇ ಇದ್ದರೂ ನಮ್ಮ ಹೊಟ್ಟೆ ಸೇರುತ್ತದೆ. ಭೂಮಿ ಮೇಲೆ ಉಚಿತವಾಗಿ ಗಾಳಿ ಇದೆ. ನಮಗೆ ಎದೆ ತುಂಬ ಉಸಿರಾಡಬೇಕು ಎಂದನಿಸುವುದಿಲ್ಲ. ಆದರೆ ಆಹಾರ ಯಾಕೆ ತಿನ್ನಬೇಕು ಎಂದು ಅರ್ಥವಿಲ್ಲದೆ ತಿಂದು ತೇಗಿಬಿಡುತ್ತೇವೆ. 

ನಾನಂತೂ ಊಟಕ್ಕೆ ಕುಳಿತರೆ ಒಂದಗುಳೂ ಉಳಿಯದೇ ಊಟಮಾಡುತ್ತೇನೆ.  ಊಟದಲ್ಲಿ ಕೈ ನೀರು ತೆಗೆಯುವಾಗ ಚಿತ್ರಾವತಿ ಇಟ್ಟ ಒಂದೆರಡು ಕಾಳು ಬಿಟ್ಟರೆ ನಾನು ಯಾವುದೇ ಆಹಾರವನ್ನು ಉಳಿಸುವುದಿಲ್ಲ. ಎಷ್ಟು ಬೇಕೋ ಅಷ್ಟನ್ನೇ ಹಾಕಿಸಿಕೊಳ್ಳುತ್ತೇನೆ.  ಊಟದಲ್ಲಿ ಒತ್ತಾಯದ ಮೇಲೆ ಒತ್ತಾಯ ಮಾಡಿ ಬಡಿಸುವುದನ್ನು ಕಂಡರೆ ನನಗೆ ಸಿಟ್ಟು ಬರುತ್ತದೆ. ಎಷ್ಟು ಆತ್ಮೀಯರಾದರೂ ನನಗೆ ಅದು ಅಸಹನೆಯನ್ನು ತರುತ್ತದೆ. ನನಗೆ ಬೇಕೋ ಯಾವುದೇ ಸಂಕೋಚವಿಲ್ಲದೆ ಕೇಳಿ ತಿನ್ನುತ್ತೇನೆ. ಆದರೆ ಹೊಟ್ಟೆ ತುಂಬಿದರೂ ಸ್ವಲ್ಪ ಸ್ವಲ್ಪ ಎಂದು ಒತ್ತಾಯ ಮಾಡಿದರೆ ಬಹಳ ಅಸಹನೆಯಾಗುತ್ತದೆ. ಹಲವುಕಡೆ ನಾನು ಎಲೆ ಸ್ವಚ್ಛ ಮಾಡಿ ಏಳುವಾಗ ನನಗೆ ಬಡಿಸಿದ್ದು ಸಾಕಾಗಲಿಲ್ಲವೋ ಏನೋ ಎಂದು ಅನುಮಾನಿಸಿ ಎಲೆ ಖಾಲಿಯಾದ ತಕ್ಷಣ ಒತ್ತಾಯ ಮಾಡಿ ಪುನಃ ಬಡಿಸುವುದಕ್ಕೆ ಬರುತ್ತಾರೆ. ಎಲ್ಲವನ್ನೂ ತಿಂದರೂ ಕಷ್ಟ. ಎಲೆಯಲ್ಲಿ ಒಂದಷ್ಟು ಉಳಿಸಿಯೇ ಹೋದರೆ ಅದು ತೃಪ್ತಿಯ ಸಂಕೇತವಾಗುತ್ತದೆ.  ವಾಸ್ತವದಲ್ಲಿ ಹಾಗಲ್ಲ ಎಲೆ ಸ್ವಚ್ಛ ಮಾಡಿ ಊಟ ಮಾಡಿದರೆ ಅವರು ರುಚಿಯಿಂದಲೂ ಹಸಿವಿನಿಂದಲೂ ತೃಪ್ತರಾಗಿದ್ದಾರೆ ಎಂದರ್ಥ.  ಆಹಾರ ತಿನ್ನಬೇಕು. ಅದು ಆರೋಗ್ಯದ ಸಂಕೇತ. ಆಹಾರ ಸೇವಿಸಲು ಸಾಧ್ಯವಾಗದೇ ಇದ್ದರೆ ಅದು ರೋಗ ಲಕ್ಷಣ. ಹಾಗಿದ್ದು ಬೇಡದೇ ಇರುವುದನ್ನು ತಿನ್ನುವುದು ರೋಗಿಯಾಗುವ ಲಕ್ಷಣ. ಯಾರೇ ಆಗಲಿ ಅತಿಯಾಗಿ ಒತ್ತಾಯ ಮಾಡಿ ಬಡಿಸುವುದು ನನಗೆ ಸರಿಬರುವುದಿಲ್ಲ. ಒಂದು ತಪ್ಪಿದರೆ ಎರಡು ಸಲ ಕೇಳಬಹುದು.   ಆದರೆ ಬೇಡದೇ ಇದ್ದರೂ ಹಿಡಿಯದ ಚೀಲದಲ್ಲಿ ಸಾಮಾನು ತುಂಬಿಸಿದಂತೆ ಆಹಾರ ಇಕ್ಕುವುದು ಭಗವಂತನನ್ನು ಅಗೌರವಿಸಿದಂತೆ. ಅನ್ನ ಎಂದರೆ ಬ್ರಹ್ಮ. ಅದನ್ನುಬೇಡ ಎಂದು ಎಲೆಯಲ್ಲಿ ಬಿಟ್ಟು ಏಳುವುದು ಭಗವಂತನನ್ನು ತಿರಸ್ಕರಿಸಿದಂತೆ. ಊಟದ ಕೊನೆಯಲ್ಲಿ ಶ್ಲೋಕ ಹೇಳಿ ಭಗವಂತನನ್ನು ಸ್ಮರಿಸಿ ಮಾದೇವ ಎನ್ನುವುದಕ್ಕೆ ಅರ್ಥವಿಲ್ಲ. 

ಊಟದಿಂದ ಏಳುವಾಗ ಎಲ್ಲರ ಎಲೆಯನ್ನು ಗಮನಿಸುತ್ತೇನೆ. ಎಲ್ಲವನ್ನು ತಿಂದು ಏಳುವವರು ಬಹಳ ಕಡಿಮೆ. ಊಟಕ್ಕೆ ಕುಳಿತುಕೊಳ್ಳುವಾಗ ಇರುವ ಆಗ್ರಹ ಊಟದ ಕೊನೆಯಲ್ಲಿ ಇರುವುದಿಲ್ಲ. ಯಾರೂ ತಿನ್ನದ ಎಂಜಲನ್ನು ಸೃಷ್ಟಿ ಮಾಡಿ ಆಹಾರದ ಮೌಲ್ಯವನ್ನು ಮರೆತವರನ್ನು ಕಾಣುತ್ತೇನೆ. ಹೊಟ್ಟೆ ತುಂಬಿದರೂ ಇಂಗದ ಹಸಿವನ್ನು ಕಾಣುತ್ತೇನೆ. ಎಲ್ಲೆಂದರಲ್ಲಿ ಚಪಲಕ್ಕೋ ಇನ್ನಾವುದೋ ಕಾರಣಕ್ಕೋ ತಿನ್ನುವವರನ್ನು ಕಾಣುತ್ತೇನೆ.    ಆಗ ನನಗೆ ನಾರಾಯಣ ಎಂಬ ವೃದ್ದನ ನೆನಪಾಗುತ್ತದೆ. ಒಂದಗುಳು ಅನ್ನಕ್ಕೆ ಆ ಮುದುಕ ಕೊಟ್ಟ ಮೌಲ್ಯ ನೆನಪಾಗುತ್ತದೆ. ತಟ್ಟೆ ತೊಳೆದು ಆ ನೀರನ್ನು ಕುಡಿದು ತೃಪ್ತಿಯಿಂದ ತೇಗುವ ಅವರ ಸಂತೃಪ್ತ ಮುಖ ಕಣ್ಣೆದುರು ಬರುತ್ತದೆ. 





Saturday, November 4, 2023

ನಮ್ಮ ಚಿನ್ನು ಇನ್ನಿಲ್ಲ.

         ನಮ್ಮ ಚಿನ್ನು ಇನ್ನಿಲ್ಲ.  ಸುಮಾರು ಹನ್ನೆರಡು ವರ್ಷಗಳ ಹಿಂದೆ ನಮ್ಮ ಮನೆಗೆ ಬಂದ ಪುಟ್ಟ ಅತಿಥಿ.. ಚಿನ್ನು ಎಂಬ ಲಾಬ್ರಡರ್ ಹೆಣ್ಣು ನಾಯಿ. ಆದರೆ ಅದು ಕೇವಲ ನಾಯಿಯಾಗಿ ಅಲ್ಲ ಮನೆಯ ಚಿನ್ನುವಾಗಿ ಬೆಳೆಯಿತು. ಅವಳ ಚಟುವಟಿಕೆಗಳು ನಮ್ಮ ಚಟುವಟಿಕೆಗಳಾಗಿ  ಅವಳು  ನಮ್ಮೊಂದಿಗೆ ಬೆಳೆದು ಬಂದಳು.  ಆ ಚಿನ್ನು ಇನ್ನು ನೆನಪು ಮಾತ್ರ ಎನ್ನುವಾಗ ನಾವು ಗದ್ಗದರಾಗುತ್ತಿದ್ದೇವೆ. ಕಣ್ಣು ತೇವವಾಗುತ್ತದೆ. ಛೇ....ಸಂದು ಹೋಯಿತೇ? ಇನ್ನು ಬರಲಾರದೇ? 

            






    ಚಿನ್ನು  ಪುಟ್ಟ ಲಾಬ್ರಡರ್ ಮರಿಯನ್ನು ವರ್ಷಗಳ ಹಿಂದೆ ಮಗ ತಂದಾಗ ನಾವು ತಂದೆ ತಾಯಿಯರು ಸಾಕಷ್ಟು ಅಸಮಾಧಾನವನ್ನು ವ್ಯಕ್ತಪಡಿಸಿದ್ದೆವು. ಈ ನಗರದ ಸಂದಿಗೊಂದಿಯ ಮೂವತ್ತು ಚದರದಲ್ಲಿ ಅದಕ್ಕೂ ಒಂದು ಎಡೆಬೇಕಲ್ಲ? ಆದರೇನು ಮಗ ನಿಶ್ಚೈಯಿಸಿದ್ದ. ಇದು ತನ್ನೊಂದಿಗೆ ಇರುವುದೆಂದು ಸಾರಿ ಹೇಳಿದ. ನಮ್ಮ ಅಸಮಾಧಾನ ಕೇವಲ ಎರಡು ದಿನಕ್ಕೆ ಸೀಮಿತವಾಯಿತು. ಚಿನ್ನು ಮುದ್ದಾಗಿ ಬೆಳೆಯತೊಡಗಿದಳು. ಮಗನನ್ನು ಪ್ರೀತಿಸುವುದಾದರೆ ಅದನ್ನು ನಾವು ಇಷ್ಟಪಡಲೇ ಬೇಕು. ಮನೆಗೆ ಬಂದ ಸೊಸೆಯನ್ನು ಹೆತ್ತವರು ಅಂಗೀಕರಿಸುವಂತೆ  ಅವಳೊಂದು ಕುಟುಂಬದ ಸದಸ್ಯವಾಗಿ ಬದುಕು ಆರಂಭಿಸಿ ಬಿಟ್ಟಿಳು. ಪ್ರೀತಿ ಎಂಬುದರ ಪ್ರಭಾವ ಹಾಗಿರುತ್ತದೆ. ಆದರೆ ಚಿನ್ನು ಕೇವಲ ಆ ಅನಿವಾರ್ಯತೆಗೆ ಸೀಮಿತವಾಗಿಲ್ಲ. ಅದು ನಮ್ಮ ಮನಸ್ಸನ್ನೂ ಗೆದ್ದು ಬಿಟ್ಟಿತು. ಅದಕ್ಕೆ ಪಾಲಿನಂತೆ ಒಬ್ಬೂಬ್ಬರೂ ಕೈತುತ್ತು ಕೊಡುವುದಕ್ಕಾರಂಭಿಸಿದೆವು ಎನ್ನುವುದಕ್ಕಿಂತ ಅದು ತನ್ನ ಹಕ್ಕನ್ನು ಪ್ರೀತಿಯಿಂದ ಚಲಾಯಿಸತೊಡಗಿತು. ದಿನಾ ವಾಕಿಂಗ್ ಹೋಗುವಾಗ ಸಂಗಾತಿಯಾಯಿತೋ ಇಲ್ಲ ಅದನ್ನು ಕರೆದುಕೊಂಡು ಹೋಗುವುದರಲ್ಲಿ ಸಿಗುವ ಆನಂದವೋ ಅಂತೂ ಮನೆ ಮಂದಿಯ ದಿನಚರಿಯ ಒಂದು ಅವಿಭಾಜ್ಯ  ಅಂಗ ಚಿನ್ನುವಾದಳು.  ಆರಂಭದಲ್ಲಿ ಮನೆಯ ಹೊರಗಿನ ಹಜಾರದಲ್ಲಿಅವಳನ್ನು ಕಟ್ಟಿಹಾಕುತ್ತಿದ್ದರೆ ನಂತರ   ಅದು ಬಂಧನವಾಗಬಹುದು ಎಂದುಕೊಂಡಾಗ ಮನೆಯ ಒಂದು ಮಹಡಿ ಅವಳದ್ದೇ ಸಾಮ್ರಾಜ್ಯವಾಯಿತು. ಸುಸ್ತಾಗಿ ಕುಳಿತಾಗ ಅದು ಬಂದು ಉಪಚರಿಸುವಂತೆ ಮೈ ಮೇಲೆ ಹತ್ತಿ ಮುದ್ದಿಡುವಳು. ಅವಳ ಬೆಚ್ಚಗಿನ ಮೈ....ಚಳಿಗೆ ಬಿಸಿಯನ್ನು ಒದಗಿಸುತ್ತಿತ್ತು. ಸದಾ ಮಗನ ಜತೆಯಲ್ಲಿರುತ್ತಿದ್ದವಳು ಒಂದರ್ಥದಲ್ಲಿ ಅದು ಹೇಗೆ ಪ್ರೀತಿಸಬೇಕು ಎಂಬುದನ್ನು ತೋರಿಸಿಕೊಟ್ಟಿಳು. 

            ಚಿನ್ನು ನಮ್ಮೊಂದಿಗೆ ಈಗ ಇಲ್ಲ ಎಂದರೆ ಅದೊಂದು ಶೂನ್ಯತೆಯ ಅನುಭವ. ಮನೆಯ ಸಂದಿಗೊಂದಿಗಳಲ್ಲಿ ಆಕೆ ಇನ್ನೂ ಮುದುರಿ ಮಲಗಿದಂತೆ ಅನುಭವಾಗುತ್ತದೆ. ಆಕೆಯ ಬಿಸಿಯುಸಿರು ಇನ್ನೂ ಮಾರ್ದನಿಸುತ್ತದೆ. ಆಕೆಯ ಪ್ರೀತಿ ಸಲುಗೆ ಅದೊಂದು ಮರೆಯಲಾಗದ ಬಂಧನವಾಗುತ್ತದೆ. ಆಕೆಯ ಬಾಯಿಯಲ್ಲಿ ಕೈ ಇಟ್ಟರೂ ಸುಮ್ಮನಿರುತ್ತಿದ್ದ ಆಕೆಯ ಪ್ರೀತಿ ಮಮಕಾರ....ನೀ ಎನೂ ಮಾಡು ನಾನು ನಿನ್ನೊಂದಿಗೆ ಇರುತ್ತೇನೆ ಎನ್ನುವ ಅರ್ಪಣಾ ಭಾವ ಎಲ್ಲ ತಿರಸ್ಕಾರವನ್ನು ತಿರಸ್ಕರಿಸಿ ದೂರಮಾಡುವಂತೆ ಪ್ರೇರೆಪಿಸಿಬಿಡುತ್ತಿತ್ತು. ಆಕೆ ಕೈ ಬಿಟ್ಟು ಹೊದಳು ಎಂದರೆ ಹೃದಯದ ಒಂದು ಭಾಗ ಕಳಚಿಕೊಂಡಂತೆ.  ಮರೆಯಲಾಗದ ಈ ನೆನಪುಗಳನ್ನು ಹೇಗೆ ಮರೆಯಲಿ? ಆಕೆ ನಮಗಾಗಿ ಇದ್ದಳೋ ನಾವು ಆಕೆಗಾಗಿ ಇದ್ದೆವೋ ಒಂದೂ ಅರ್ಥವಾಗುವುದಿಲ್ಲ. ಆಕೆಯಿಂದ ಏನು ಪಡೆದಿದ್ದೇವೋ ಅವೆಲ್ಲವೂ ಭಾವನೆಗಳ ವ್ಯಾಪಾರ. ಲಾಭವಿಲ್ಲದ ವ್ಯಾಪಾರ. ಇಲ್ಲಿ ಪ್ರೀತಿ ಭಾವನೆಗಳೇ ಸರಕುಗಳು. ಅದಕ್ಕೆ ಮೌಲ್ಯ ತೂಕ ಯಾವುದು ನಿರ್ಧರಿಸಲಾಗುವುದಿಲ್ಲ. 

            ನನ್ನ ದೊಡ್ಡ ಮಗ ಆಗಿನ್ನು ವ್ಯಾಸಂಗ ಮಾಡುತ್ತಿದ್ದ, ಆತನ ಅತೀವ ಆಸಕ್ತಿಯ ಮುಖಾಂತರ ಈ ಅತಿಥಿ ಮನೆಯ ಸದಸ್ಯನಾಯಿತು. ಅವನೂ ಅಷ್ಟೇ ನಮ್ಮ ಮನೆಯ ಮೂರನೆ ಮಹಡಿಯಲ್ಲಿ ಅವಳಿಗಾಗಿ ಜಾಗವನ್ನು ಮೀಸಲಿರಿಸಿ ಅಲ್ಲಿ ಆತನದ್ದೇ ಸಾಮ್ರಾಜ್ಯ. ಚಿನ್ನುವಿನ ಬೆಳವಣಿಗೆ ಪ್ರತೀ ಹಂತವೂ ಆತನಿಗೆ ಒಂದು ಅಧ್ಯಯನವಾಗಿತ್ತು. ಅದು ಯಾವಾಗ ಎದ್ದು ಬರ್ತದೆ, ಅದು ಹೇಗೆ ನಿದ್ರೆ ಮಾಡುತ್ತದೆ, ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು, ಅದರ ಬಯಕೆಗಳು ಯಾವಾಗ ಯಾವರೀತಿ ಇರುತ್ತದೆ ಹೀಗೆ  ಅದರ ವರ್ತನೆಯನ್ನೆಲ್ಲಾ ಗೂಗಲ್ ಮಾಡಿ ಅಂತರ್ಜಾಲದಲ್ಲಿ ಜಾಲಾಡಿ ಅದನ್ನು ಅಳವಡಿಸಿಕೊಳ್ಳುತ್ತಿದ್ದ. ಮೊದಲ ದಿನ ಮೂರನೆ ಮಹಡಿಗೆ ಹೋದಾಗ  ಪುಟ್ಟ ಮರಿ ಚಿನ್ನು ಎಲ್ಲಾ ಕಡೆ ಉಚ್ಚೆ ಹೊಯ್ದು ಎಲ್ಲ ಕಡೆ ಅದರದ್ದೆ ವಾಸನೆ. ಆಗ ನಾವು ಹತಾಶರಾಗಿದ್ದೆವು. ಊರಲ್ಲಿಯಾದರೆ ಇಂತಹ ವಿಷಯಗಳಿಗೆ ಸಾಕಷ್ಟು ಸೌಕರ್ಯ ಇರುತ್ತದೆ. ಆದರೆ ಇಲ್ಲಿ ಮೂವತ್ತು ಚದರದಲ್ಲಿ ಇದನ್ನು ಸುಧಾರಿಸುವುದೆಂತು? ನಮ್ಮಲ್ಲಿ ಹಲವರಿಗಂತು ಚಿನ್ನುವಿನ ಆವಶ್ಯಕತೆ ಇರಲಿಲ್ಲ. ಆದರೆ ಮಗನ ಇರಾದೆ ಬೇರೆಯದೇ ಆಗಿತ್ತು. ಚಿನ್ನು ಅವನ ಕೈಯಲ್ಲಿ ಪಳಗತೊಡಗಿದಳು. ಮುದ್ದಾದ ಆಕೆ ಬುದ್ದಿ ಕಲಿಯತೊಡಗಿದಳು. ಮೊದಲೇ ಲಾಬ್ರಡಾರ್ ತಳಿ ಅದು ಮನೆಯವರಿಗೆ ಬೇಗ ಹೊಂದಿಕೊಳ್ಳುತ್ತದೆ. ಅದರಲ್ಲೂ ಮಕ್ಕಳ ಮನಸ್ಸನ್ನು ಸೆಳೆಯುವುದು ಅದರ ರಕ್ತಗತ ಗುಣ.  ಅದಕ್ಕೆ ನಿಗದಿತ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡುವುದಕ್ಕೆ ಕಲಿಸಿದ. ಅಚ್ಚುಕಟ್ಟಾಗಿ ಊಟ ತಿಂಡಿಯನ್ನು ಒದಗಿಸಿದ. ಅದಕ್ಕಾಗಿ ರಾಯಲ್ ಚಿನ್ ಬಿಸ್ಕಟ್ ತರಿಸಿದ. ಹೀಗೆ ಅದರದ್ದೇ ಒಂದಷ್ಟು ವಸ್ತುಗಳು ಮನೆಯ ಅಂಗವಾಗಿ ಹೋದವು. 

            ಮಗನ ಭಾವನೆಯ ಮೌಲ್ಯಗಳನ್ನು ತೋರಿಸಿಕೊಟ್ಟವಳು ಚಿನ್ನು. ಆತನೊಂದಿಗಿನ ಅವಳ ಸಂಭಂಧದ ಆಳ ವಿಸ್ತಾರ ಕಲ್ಪಿಸುವುದಕ್ಕೆ ಸಾಧ್ಯವಿಲ್ಲ. ಮನೆಯ ರಸ್ತೆಯತುದಿಯಲ್ಲಿ ಆತನ ಬೈಕಿನ ಸದ್ದು ಕೇಳಿಸಿದರೆ ಮನೆಯ ಯಾವುದೋ ಮೂಲೆಯಲ್ಲಿದ್ದ ಇವಳ ಕಿವಿ ನಿಗುರಿ ಬಿಡುತ್ತಿತ್ತು. ಒಂದೇ ನೆಗೆತಕ್ಕೆ ಹೊರಬಂದು ಮೂರನೇ ಮಹಡಿಯಿಂದ ಕೆಳಗೆ ನೋಡಿ ಬೊಗಳತೊಡಗುತ್ತಿದ್ದಳು. ಆತ ಬರಬೇಕಾದರೆ ಆತನ ಭುಜದೆತ್ತರಕ್ಕೆ ಹಾರಿ ಆತನ ಮುಖವನ್ನೆಲ್ಲ ಮುದ್ದಿಸಿ ತೇವ ಮಾಡುತ್ತಿದ್ದಳು. ಆತ ಎಸೆದ ಚೆಂಡನ್ನು ಓಡಿ ಹೋಗಿ ಕಚ್ಚಿ ತಂದುಕೊಡುತ್ತಿದ್ದಳು. ಹಿಂದೆ ಅಲುಗಾಡುವ ಬಾಲ ಎಲ್ಲಿ ಕಳಚಿ ಬೀಳುವುದೋ ಎಂದನಿಸುತ್ತಿತ್ತು. 

                ಪ್ರಾಣಿಗಳಲ್ಲಿ ನಾಯಿ ಎಂಬುದು ಒಂದು ವಿಚಿತ್ರ ಸ್ವಭಾವದ ಪ್ರಾಣಿ. ಬಹುಶಃ ಭಾವನೆಗಳನ್ನು ಇದರಂತೆ ವ್ಯಕ್ತ ಪಡಿಸುವ ಪ್ರಾಣಿ ಬೇರೆ ಇಲ್ಲ. ನೋವು ನಲಿವು ಎಲ್ಲವನ್ನೂ ಬಹಿರಂಗ ಪಡಿಸುವ ನಾಯಿಗೆ ಮಾತು ಒಂದು ಬರುವುದಿಲ್ಲ....ಆದರೆ ಅದು ವ್ಯಕ್ತ ಪಡಿಸುವ ಭಾಷೆಗೆ ಮಾತಿನ ಅಗತ್ಯವೇ ಇರುವುದಿಲ್ಲ. ಕಣ್ಣು ಅಗಲಿಸಿ ಕಿವಿನಿಮಿರಿಸಿ ಬೇಕಾದಲ್ಲಿ ಬಾಲ ಅಲ್ಲಡಿಸಿ ಶರೀರವನ್ನು ಕುಣಿಸಿ...ಯಾವ ನಟ ಸಾರ್ವಭೌಮನಿಗೂ ಕಡಿಮೆ ಇಲ್ಲ ಜನ್ಮ ಜಾತ ಪ್ರತಿಭೆ. ಸ್ವಭಾವತಃ ನಾಯಿ ಅತ್ಯಂತ ಹೆದರಿಕೆಯ ಸ್ವಭಾವದ ಪ್ರಾಣಿ. ಪ್ರತೀಕ್ಷಣವೂ ಅದಕ್ಕೆ ಏನೋ ಆಗಿಬಿಡುತ್ತದೆ ಎಂಬ ಆತಂಕವಿರುತ್ತದೆ. ಹಾಗಾಗಿ ಹೊಸದು ಕಂಡಕೂಡಲೇ ಅದು ಜಾಗೃತವಾಗುತ್ತದೆ. ಬೊಗಳುತ್ತದೆ. ಆದರೆ ಅದು ತನ್ನದೂ ಎಂಬ ಭಾವನೆ ಬಂತೋ ಅದಕ್ಕಾಗಿ ಪ್ರಾಣ ಕೊಡಲೂ ಹಿಂಜರಿಯುವುದಿಲ್ಲ.  ಈ ಎಲ್ಲ ಸ್ವರೂಪಗಳು ಚಿನ್ನುವಿನಲ್ಲಿತ್ತು. ಈಕೆಯ ವಿಚಾರಗಳು ಹೇಳುವುದಕ್ಕೆ ತೊಡಗಿದರೆ ಸ್ವರ ಕಂಪಿಸುತ್ತದೆ. ಬೆರೆಯುವುದಕ್ಕೆ ತೊಡಗಿದರೆ ಕೈ ನಡುಗುತ್ತದೆ. ಭಾವನೆಗಳ ಮಹಾಪೂರ ಪುಟ್ಟ ಹೃದಯದಲ್ಲಿ ನಿಲ್ಲಲಾಗದೆ ಹೊರ ಚಿಮ್ಮುತ್ತದೆ. ಅದರಲ್ಲಿನ ಭಾವನೆಗಳನ್ನು ಹೆಕ್ಕಿ ತೆಗೆಯುವುದೇ ಒಂದು ಸಾಹಸ. 

            ವಾರಗಳ ಹಿಂದೆ ವಯೋ ಸಹಜವಾಗಿ ಆಕೆಯ ದೇಹ ಕೃಶವಾಗತೊಡಗಿದವು. ಮೊದಲಿನಂತೆ ಆಕೆ ಓಡಾಡುವುದನ್ನು ನಿಲ್ಲಿಸಿ ಬಹಳ ಸಮಯಗಳು ಕಳೆಯಿತು. ಹೆಚ್ಚಾಗಿ ಮಲಗಿಕೊಂಡೇ ಇರುತ್ತಿದ್ದಳು. ಮಗ ಬಿಟ್ಟರೆ ಪತ್ನಿ ಆಕೆ ಅತ್ಯಂತ ಹತ್ತಿರದ ಜೀವಗಳು. ಆಕೆಯಂತೂ ಅದರ ಚಾಕರಿಯಲ್ಲಿ ತನ್ನನ್ನೇ ತಾನು ತೇದುಕೊಂಡಳು. ಕೊನೆಯ ಉಸಿರಿನ ತನಕವೂ ಅದನ್ನು ಪ್ರೀತಿಯಿಂದ ಕಾಣಬೇಕು. ಸಾಧ್ಯವಾದಷ್ಟು ಉಪಚರಿಸಬೇಕು ಇದೊಂದೇ ನಿರ್ಧಾರ. ಒಂದು ತುತ್ತು ಆಹಾರ ತಿಂದರೂ ತೊಟ್ಟು ನೀರು ಕುಡಿದರೂ ತನ್ನ ದೇಹಕ್ಕೆ ಸೇರಿಬಿಟ್ಟಿತೋ ಎನ್ನುವ ತೃಪ್ತಿ ಅವಳದು. ದಿನಾ ಆಸ್ಪತ್ರೆಯ ಅಲೆದಾಟದಲ್ಲಿ ಬಸವಳಿದರೂ ಚಿನ್ನುಗಾಗಿ ಎಂಬ ಭಾವನೆ ದೃಢವಾಗಿರುತ್ತಿತ್ತು. ಅಲ್ಲಿ ದಣಿವೆಂಬುದು ಅರಿವಿಗೆ ಬರುತ್ತಿರಲಿಲ್ಲ. ಮೊನ್ನೆ ರಾತ್ರಿ ಹೋದಾಗಲೇ ವೈದ್ಯರು ಒಂದು ರಾತ್ರಿ ನಿಗಾವಹಿಸೋಣ ನಾಳೆ ಬೆಳಗ್ಗೆ ತೀರ್ಮಾನಿಸಿದರಾಯಿತು ಎಂದರು. 

            ನಿನ್ನೆ ವೈದ್ಯರು ಬೆಳಗ್ಗೆಯೇ ಹೇಳಿದ್ದರು ಇನ್ನು ಇದರ ಬಗ್ಗೆ ನಿರೀಕ್ಷೆ ಇಲ್ಲ.  ಯಾಕೆ ಅದಕ್ಕೆ ನರಕ ಯಾತನೆ , ಇಂಜಕ್ಷನ್ ಕೊಟ್ಟು ಮುಗಿಸಿ ಬಿಡೋಣ ಎಂದರು. ನಮಗಂತೂ ಹೃದಯವನ್ನೇ ಚುಚ್ಚಿದ ಅನುಭವ.  ಚುಚ್ಚಿ ಮುಗಿಸುವುದೆಂದರೆ ನಾವು ಚಿನ್ನುವನ್ನು ಬೇಡ ಎಂದಂತೇ ಅಲ್ಲವೇ? ಅದು ಹೇಗೆ ಸಾಧ್ಯ.  

            ಕೊನೆಗೆ ಸಮ್ಮತಿಸಬೇಕು. ಇನ್ನು ಆಕೆಗೆ ನರಕ ಯಾತನೆ ಯಾಕೆ. ಎಲ್ಲರೂ ನೀರು ಕುಡಿಸಿದೆವು. ಎಲ್ಲರೂ ಕೊಟ್ಟ ನೀರನ್ನು ಪ್ರಜ್ಞೆ ಇಲ್ಲದೇ ಇದ್ದರು ಆಕೆ ಕುಡಿದಳು.  ಅದು ವರೆಗೆ ಇದ್ದ ಮಗ ಮನೆಗೆ ಹೋಗಿದ್ದ. ನಾವೆಲ್ಲ ವೈದ್ಯರ ಬರುವುಕೆಯನ್ನು ಕಾಯುತ್ತಿದ್ದೆವು. ಚಿನ್ನು ಪ್ರಜ್ಞಾಹೀನಳಾಗಿ ಕೇವಲ ಏದುಸಿರುಬಿಡುತ್ತಾ ಮಲಗಿದ್ದಳು. ಮೊದಲಾದರೆ ನಾವು ಬಂದಾಗ ಏನಿಲ್ಲ ಎಂದರೂ ಬಾಲ ಅಲ್ಲಾಡಿಸಿಬಿಡುತ್ತಿದ್ದಳು. ಈಗ ಸಂವೇದನೆಯೇ ಇಲ್ಲ. ತಾಸು ಕಳೆದು ಮಗ ಹೆಂಡತಿ ಜತೆಗೆ ಬಂದ. ಆತ ಬಂದಾಗ ಹೊಸತೊಂದು ಚೆಂಡನ್ನು ಕೊನೆಯ ಕೊಡುಗೆಯಾಗಿ ಚಿನ್ನುವಿಗಾಗಿ ತಂದಿದ್ದ.  ಅದನ್ನು ಕೊಟ್ಟು ಮೈತಡವಿದ ಅದೊಮ್ಮೆ ಕಣ್ಣು ಬಿಟ್ಟಳು.  ಮಗನ ಜತೆಗಿನ ಬಾಂಧವ್ಯ ಅದನ್ನು ಎಚ್ಚರಿಸಿತ್ತು. ಆತ ನೀರು ಕುಡಿಸಿದ. ಕುಡಿದಳು. ಹಾಗೆ ಎತ್ತಿದ ಕೊರಳು ಬಾಗಿತು ಒಂದೆರಡು ನಿಡಿದಾದ ಉಸಿರು ಹೊರಹಾಕಿದಳು. ಕಣ್ಣು ಸುತ್ತಲೂ ತಿರುಗಿಸಿ ಕೊನೆಯ ಯಾತ್ರೆಯನ್ನು ಮುಗಿಸಿದಳು.   ಒಂದು ವಾರದ ನರಕ ಯಾತನೆ ಅನುಭವಿಸಿದಳು. ಆಸ್ಪತ್ರೆ ಬೆಡ್ ಮೇಲೆ ತನ್ನ ಉಸಿರನ್ನು ಚೆಲ್ಲಿ ಬಿಟ್ಟು ನಿಶ್ಚಲಳಾದಳು. ತಬ್ಬಿಕೊಂಡಾಗ ಬಿಸಿಯನ್ನು ಉಣಿಸುತ್ತಿದ್ದ ಆ ಮೈ ತಣ್ಣಗಾಯಿತು. ಚಿನ್ನು ಬಾರದ ಲೋಕಕ್ಕೆ ಸರಿದು ಹೋದಳು.  ಇನ್ನು ಚಿನ್ನು ನೆನಪು ಮಾತ್ರ ಎಂದುಕೊಂಡಾಗ ಹೃದಯ ಭಾರವಾಗುತ್ತದೆ. ಕಣ್ಣು ಮಂಜಾಗುತ್ತದೆ. ಆಕೆಯ ಪ್ರೀತಿ ಇನ್ನೆಲ್ಲಿ ಸಿಗಬಹುದು. ನಮಗೆಲ್ಲ ವಿದಾಯ ಹೇಳಿ ಸುಖವಾಗಿರಿ.....ನನ್ನನ್ನು ಅಗಾಗ ನೆನಪಿಸುತ್ತಾ ಇರಿ. ಮರೆಯಬೇಡಿ ಎಂದಂತೆ ಭಾಸವಾಗುತ್ತದೆ. ಆಕೆ ಕೊಟ್ಟ ಪ್ರೀತಿಗೆ ನಾವು ಅಷ್ಟಾದರೂ ಮಾಡಲೇಬೇಕು. ಚಿನ್ನು...ಮತ್ತೊಮ್ಮೆ ಹುಟ್ಟಿ ಬಂದರೆ.......ಈ ಹೃದಯಗಳಲ್ಲಿ ತುಂಬಿಕೊಳ್ಳುವುದಕ್ಕೆ  ಇನ್ನೂ ಜಾಗವಿದೆ.