ಪ್ರತೀ ಸಲ ನನಗೆ ಊಟ ಮಾಡಿ ಏಳುವಾಗ ಬೇಡವೆಂದರೂ ನಮ್ಮ ನಾರಾಯಣ ಎಂಬ ವೃದ್ದರ ನೆನಪಾಗುತ್ತದೆ. ಈ ವೃದ್ದ ಹಣ್ಣು ಹಣ್ಣು ಮುದುಕ ಅಲ್ಲದೇ ಇದ್ದರೂ ಒಂದಷ್ಟು ಪ್ರಾಯ ಸಂದು ಹೋಗಿತ್ತು. ಅವರ ಊಟ ನನಗೆ ಹಲವಾರು ಅರ್ಥಗರ್ಭಿತ ವಿಷಯಗಳು ಅಡಕವಾಗಿದ್ದಂತೆ ಭಾಸವಾಗುತ್ತದೆ. ಇಂದು ಈ ಊಟವೆಂಬ ಕ್ರಿಯೆ ಅದರ ಉದ್ದೇಶ ಕೇವಲ ಹಸಿವನ್ನು ನೀಗಿಸುವುದಕ್ಕೆ ಎಂದು ಅನಿಸುವುದಿಲ್ಲ.
ಹಿಂದೆ ಮಂಗಳೂರಲ್ಲಿರುವಾಗ ಈ ವಯೋ ವೃದ್ಧರು ಊಟಕ್ಕೆ ಕುಳಿತರೆ ಅವರ ತನ್ಮಯತೆ ನಮಗೆ ಅಚ್ಚರಿಯನ್ನು ತರುತ್ತಿತ್ತು. ಆ ತನ್ಮಯತೆ ಊಟದ ಮೇಲಿನ ಅತ್ಯಾಗ್ರಹವಾಗಿರಲಿಲ್ಲ. ಬದಲಿಗೆ ಹಸಿವೆಯನ್ನು ತಣಿಸುವ ಒಂದು ಪವಿತ್ರ ಕಾರ್ಯವಾಗಿತ್ತು. ನಾರಾಯಣ ಕೂದಲು ನೆರೆಗಟ್ಟಿದ ಕೃಶ ಶರೀರದ ವ್ಯಕ್ತಿಯಾಗಿದ್ದರು. ಅವರು ನಮ್ಮಲ್ಲಿ ಅನಧಿಕೃತವಾಗಿ ಕೆಲಸಕ್ಕಿದ್ದರು. ಅವರು ಇದ್ದಾರೆ ಎಂದರೆ ನಮಗೆ ಕೆಲವೆಲ್ಲ ಕೆಲಸದಿಂದ ಮುಕ್ತಿಯಾಗುತ್ತಿತ್ತು. ಅದು ಯಾವ ಕೆಲಸವಾದರೂ ಸಮಯದ ಮಿತಿ ಇಲ್ಲದೆ ಮಾಡುತ್ತಿದ್ದರು. ನೀಳಕಾಯದ ವ್ಯಕ್ತಿಯಾಗಿದ್ದರು. ಅವರಿಗೆ ಕೌಟುಂಬಿಕವಾಗಿ ಮಗಳು ಮಗ ಸೊಸೆ ಎಲ್ಲರೂ ಅನುಕೂಲ ಸ್ಥಿತಿಯಲ್ಲಿದ್ದರೂ ಅವರು ನಮ್ಮ ಮನೆಯಲ್ಲಿ ಕೆಲಸಕ್ಕಿದ್ದರು. ಕಾರಣ ಸ್ವಾಭಿಮಾನ ಒಂದೆಡೆಯಾದರೆ ಕೌಟುಂಬಿಕ ಅಸಮಾಧಾನ ಇನ್ನೊಂದು. ಒಂದು ರೀತಿಯಲ್ಲಿ ವಿರಕ್ತಿಯಾಗಿ ಸನ್ಯಾಸಿಯಂತೇ ಬದುಕುತ್ತಿದ್ದರು. ನಮ್ಮ ಮನೆಯಲ್ಲಿ ಅದೂ ಇದೂ ಚಾಕರಿ ಮಾಡುತ್ತಾ ತನ್ನ ಹಸಿವನ್ನು ನೀಗುವ ದುಡಿಮೆ ಅವರದ್ದು. ಹಾಗೆ ನೋಡಿದರೆ ಒಂದು ಕಾಲದಲ್ಲಿ ಬಹಳ ಅನುಕೂಲವಂತರಾಗಿ ತುಂಬು ಕುಟುಂಬದೊಂದಿಗೆ ಇದ್ದರು. ಅದು ಎಪ್ಪತ್ತರ ದಶಕ, ಮಂಗಳೂರಿನ ರಥಬೀದಿ (ಕಾರ್ ಸ್ಟ್ರೀಟ್) ಯಲ್ಲಿ ಸ್ವಂತವಾದ ಒಂದು ಉದ್ಯಮದಲ್ಲಿ ಚಕ್ಕುಲಿ ಮುಂತಾದ ತಿಂಡಿ ವ್ಯಾಪಾರವನ್ನು ಮಾಡುತ್ತಿದ್ದರು. ನಮ್ಮ ಮಾವಂದಿರು ಅವರ ಕೆಳಗೆ ಕೆಲಸಕ್ಕಿದ್ದರು. ಅದೇನು ಸಂಭವಿಸಿತೋ ಸರಿಯಾಗಿ ಗೊತ್ತಿಲ್ಲ , ನಂತರ ಎಲ್ಲವನ್ನು ಕಳೆದುಕೊಂಡ ಸನ್ಯಾಸ ಸ್ಥಿತಿಗೆ ತಲುಪಿದರು. ಅತ್ತ ಮನೆಯವರಿಂದ ದೂರಾಗಿ ಒಂದು ರೀತಿಯ ಅನಾಥತ್ವ.
ನಾರಾಯಣ ಅವರ ಮತ್ತೊಂದು ಗುಣವೆಂದರೆ ಎಲ್ಲೂ ಶಾಶ್ವತವಾಗಿ ನಿಲ್ಲುವ ವ್ಯಕ್ತಿಯಲ್ಲ. ಸದಾ ತಿರುಗಾಡುತ್ತಾ ಇರುವವರು. ಅದು ಯಾರದೋ ಮನೆಗಲ್ಲ, ಬದಲಿಗೆ ಪ್ರಸಿದ್ದ ತೀರ್ಥ ಕ್ಷೇತ್ರ ಪರ್ಯಟನೆ. ಭಾರತದಲ್ಲಿ ಅವರು ಹೋಗದ ಪ್ರಸಿದ್ಧ ಕ್ಷೇತ್ರಗಳೇ ಇಲ್ಲ . ಒಂದು ಜೋಳಿಗೆಯಂತಹ ಚೀಲ ಅದರಲ್ಲಿ ಒಂದೆರಡು ಅತ್ಯಾವಶ್ಯ ಪಂಚೆ ಅಂಗಿ ಅದೂ ಕಾವಿ ಬಣ್ಣದ ವಸ್ತ್ರ ಇಷ್ಟೇ ಇರುತ್ತಿತ್ತು. ಅಗೀಗ ಬೀಡಿ ಎಳೆಯುವುದು ಬಿಟ್ಟರೆ ಅವರಿಗೆ ಬೇರೆ ದುಶ್ಚಟಗಳಿರಲಿಲ್ಲ. ಬಹುಶಃ ಕೈಯಲ್ಲಿ ಕಾಸಿಲ್ಲದೆಯೂ ರೈಲಿನ ಸಾಮಾನ್ಯ ಭೋಗಿಯ ಪ್ರಯಾಣ ಮಾಡುತ್ತಿದ್ದರು ಎಂದು ನನಗೆ ಅನುಮಾನ. ಅತ್ತ ಉತ್ತರ ಭಾರತದ ಬದರಿನಾಥ ಕೇದಾರನಾಥ ಹರಿದ್ವಾರ ವಾರಣಾಸಿ ಗಯಾ ಪ್ರಯಾಗ ಪಂಡರಾಪುರ ರಾಮೆಶ್ವರ ಅಯೋಧ್ಯೆ ಹೀಗೆ ಸುತ್ತಾಡುತ್ತಿದ್ದ ಪರಮ ದೈವ ಭಕ್ತ. ಸದಾ ಪರಮಾತ್ಮನ ನಾಮ ಸ್ಮರಣೆಯಲ್ಲಿ ತನ್ನ ಹೆಸರನ್ನೆ ಉಚ್ಚರಿಸುತ್ತಿದ್ದರು. ಮುಂಜಾನೆ ನಾಲ್ಕುಗಂಟೆಗೆ ಎಚ್ಚರವಾದರೆ ಇವರು ನಾರಾಯಣ ನಾರಾಯಣ ಹರೇ ರಾಮ ಎನ್ನುವ ನಾಮೋಚ್ಚಾರಣೆ ಕೇಳುತ್ತಿತ್ತು. ಪಂಡರಾಪುರದ ಪಾಂಡುರಂಗನ ಅನನ್ಯ ಭಕ್ತ. ಸಾಯಂಕಾಲ ಪುರಂದರದಾಸರ ಭಜನೆಯನ್ನು ಹೇಳುವುದಲ್ಲದೆ ವರ್ಷಕ್ಕೆ ಒಂದು ಬಾರಿಯಾದರೂ ಪಂಡರಾಪುರ ಹೋಗಿ ಬರುತ್ತಿದ್ದರು. ಹಾಗೆ ಹೋಗಿ ಬಂದಾಗ ತಂದ ಪುಂಡರಿಕಾಕ್ಷನ ಶಿಲಾ ವಿಗ್ರಹ ತಂದು ನಮ್ಮ ಮನೆಯಲ್ಲಿಟ್ಟಿದ್ದರು. ಅಂತಹ ದೈವ ಭಕ್ತನ ಊಟ ಪ್ರತಿ ಬಾರಿಯೂ ನೆನಪಿಗೆ ಬರುವುದಕ್ಕೆ ಒಂದು ವಿಶೇಷತೆ ಇದೆ.
ನಾರಾಯಣ ಅಜ್ಜ....ನಾವು ಅವರನ್ನು ಕರೆಯುತ್ತಿದ್ದ ಹೆಸರು, ಅವರು ಯಾವ ಜಾತಿಯೋ ಗೊತ್ತಿಲ್ಲ. ಅವರು ನಮ್ಮ ಮನೆಯ ಜಗಲಿಯ ಒಂದು ಮೂಲೆಯಲ್ಲಿ ಊಟಕ್ಕೆ ಕುಳಿತುಕೊಳ್ಳುತ್ತಿದ್ದರು. ಅವರ ತನ್ಮಯತೆಯನ್ನು ನಾನು ಈಗ ನೆನಪಿಸಿಕೊಳ್ಳುತ್ತೇನೆ. ತಿನ್ನುವ ಪ್ರತಿಯೊಂದು ತುತ್ತೂ ಅವರಿಗೆ ಪರಮಾತ್ಮನ ಪ್ರಸಾದದಂತೆ ಭಾಸವಾಗುತ್ತಿತ್ತು. ಆ ಭಕ್ತಿ ಅವರ ಕಣ್ಣಿನ ನೋಟದಲ್ಲಿ ಮುಖದ ಭಾವನೆಯಲ್ಲಿ ವ್ಯಕ್ತವಾಗುತ್ತಿತ್ತು. ಊಟದ ಮೊದಲು ಕಣ್ಣು ಮುಚ್ಚಿ ದೇವರನ್ನು ಪ್ರಾರ್ಥಿಸುತ್ತಿದ್ದರು. ಆನಂತರ ಒಂದು ತುತ್ತು ಅಂಗಳದಲ್ಲಿ ಕಾಗೆಗೆ ಇಡುತ್ತಿದ್ದರು. ಆನಂತರ ಏನು ಬಳಸಿದರೂ ಅದನ್ನು ಹಸಿವಾಗಿ ಊಟಮಾಡುತ್ತಿದ್ದರು. ಇಷ್ಟೇ ಅದರೆ ಅದರಲ್ಲಿ ವಿಚಿತ್ರವಿಲ್ಲ, ಊಟದ ಕೊನೆಯಲ್ಲಿ ತಟ್ಟೆಗೆ ಒಂದಷ್ಟು ನೀರನ್ನು ಸುರಿದು ಆ ತಟ್ಟೆಯನ್ನುಚೆನ್ನಾಗಿ ತೊಳೆದು ಅದನ್ನು ಕುಡಿದು ಬಿಡುತ್ತಿದ್ದರು. ಆಗ ನಮಗೆ ಇದೊಂದು ಅತಿಯಾಶೆಯಂತೆ ಹಾಸ್ಯವಾಗಿ ಕಂಡಿತ್ತು.ಆದರೆ ಈಗ ಅದರ ಮೌಲ್ಯ ಅನುಭವಕ್ಕೆ ಬರುತ್ತದೆ. ಒಂದಿಷ್ಟನ್ನೂ ವ್ಯರ್ಥ ಮಾಡದ ಆಹಾರದ ಮೇಲಿನ ಅವರ ಭಕ್ತಿ ನಿಜಕ್ಕೂ ಶ್ರೇಷ್ಠ.
ಊಟ ಎಂದರೆ ಈ ವಯೋವೃದ್ಧನ ನೆನಪಾಗುವುದು ಇದಕ್ಕೆ. ನಾವು ಕೊನೆಯಲ್ಲಿ ಎಂಜಲು ಮಾಡಿ ಎಸೆಯುವುದನ್ನು ಅವರು ತನ್ಮಯತೆಯಲ್ಲಿ ಸೇವಿಸುತ್ತಿದ್ದರು.
ಮಧ್ಯಾಹ್ನ ದೇವಸ್ಥಾನಕ್ಕೆ ಹೋದರೆ ಹಲವು ಸಲ ದರ್ಶನಕ್ಕಿರುವ ಮಹತ್ವಕ್ಕಿಂತಲೂ ಭೋಜನ ಪ್ರಸಾದಕ್ಕೆ ಆದ್ಯತೆ ನಮಗರಿವಿಲ್ಲದೇ ಒದಗಿಬರುತ್ತದೆ. ಯಾವಾಗ ದರ್ಶನ ಆಗಿಬಿಡುತ್ತದೋ, ಯಾವಾಗ ಭೋಜನ ಶಾಲೆಗೆ ಹೋಗಿಬಿಡುತ್ತೇವೆ ಎಂಬ ತವಕ ಉಂಟಾಗುತ್ತದೆ. ಭೋಜನ ಕೇವಲ ದೇವಸ್ಥಾನದಲ್ಲಿ ಮಾತ್ರ ಆದ್ಯತೆಯನ್ನು ಕಾಣುವುದಲ್ಲ....ಅದು ಎಲ್ಲ ಸಮಾರಂಭಗಳಲ್ಲೂ ಅತಿಥಿ ಸತ್ಕಾರದ ಬಹಳ ಮುಖ್ಯ ಅಂಗ. ಭೋಜನ ಸತ್ಕಾರ ಅತ್ಯಂತ ಗೌರವಯುತ ಸತ್ಕಾರ. ಯಾವ ಸಮಾರಂಭದಲ್ಲೂ ಊಟಕ್ಕೆ ಕೊಡುವ ಪ್ರಾಮುಖ್ಯತೆ ಹೆಚ್ಚು. ಊಟದ ಹೊತ್ತು ಸನಿಹವಾಗುವಾಗ ಅವಸರ ಅಸಹನೆ ತನ್ನಿಂತಾನೆ ಹುಟ್ಟಿಕೊಳ್ಳುತ್ತದೆ.
ಇತ್ತೀಚೆಗೆ ಕ್ಷೇತ್ರವೊಂದಕ್ಕೆ ಹೋಗಿದ್ದೆ. ಮಧ್ಯಾಹ್ನ ಊಟದ ಹೊತ್ತು. ಊಟಕ್ಕೆ ಕುಳಿತಾಗ ನನ್ನೆದುರು ಪುರೋಹಿತರೊಬ್ಬರು ಕುಳಿತಿದ್ದರು. ಅವರ ಉಡುಗೆ ತೊಡುಗೆ ನೋಡುವಾಗ ಹಾಗೇ ಅನಿಸಿತ್ತು. ಮೊದಲಿನಿಂದಲೂ ನಾನು ಅವರನ್ನು ಗಮನಿಸುತ್ತಿದ್ದೆ. ದೇವರ ದರ್ಶನದಿಂದ ತೊಡಗಿ ಅವರ ಅವಸರ ಪ್ರವೃತ್ತಿ. ಊಟಕ್ಕೆ ಕುಳಿತಾಗಲೂ ಮುಂದುವರೆದಿತ್ತು. ಕೊನೆಗೆ ಬಂದ ಅನ್ನಾಹಾರವನ್ನು ಅವಸರದಲ್ಲೇ ಊಟ ಮಾಡಿದರು. ಊಟದ ನಡುವೆ ಸಾಂಬಾರ್ ಬಂತು. ಬಡಿಸುವವರು ಅವಸರವಸರದಿಂದ ಬಡಿಸಿ ಮುಂದೆ ಹೋದರು. ಇವರು ಮುಂದೆ ಹೋದ ಅವರನ್ನು ಹಿಂದೆ ಕರೆದು ಸಾಂಬಾರ್ ನ ಹೋಳು ಬಡಿಸುವಂತೆ ಬೇಡಿ ಹಾಕಿಸಿಕೊಂಡರು. ಆದರೆ ಆರಂಭದಲ್ಲಿ ಇದ್ದ ಆತ್ಯಾಗ್ರಹ ಕೊನೆಯಲ್ಲಿ ಇರಲಿಲ್ಲ. ಬಡಿಸಿದ ಅಷ್ಟೂ ಹೋಳುಗಳು ಮಾತ್ರವಲ್ಲದೆ ಒಂದಷ್ಟು ಅನ್ನ ಪಲ್ಯ ಪಾಯಸ ಬಿಟ್ಟು ಊಟಮುಗಿಸಿ ಎದ್ದರು. ಅವರ ವರ್ತನೆ ಬಹಳ ಅಸಹನೆಯನ್ನು ಉಂಟು ಮಾಡಿತು. ನಾನೆಂದೆ ಏನು ಸ್ವಾಮಿ ಕೇಳಿ ಹಾಕಿದ್ದನ್ನೂ ಬಿಟ್ಟು ಎದ್ದಿರಲ್ಲ. ಅವರು ಕೇವಲ ನಕ್ಕರು. ಇಂತಹ ವ್ಯಕ್ತಿಗಳಿಗೆ ಏನು ಹೇಳಬೇಕು. ನಾನು ಅಷ್ಟು ಕೇಳಿದ್ದೇ ಹೆಚ್ಚು ಅನಿಸಿತು. ವಯಸ್ಸಾಗಿ ಹೋದರೂ ತಮ್ಮ ತಮ್ಮ ಹೊಟ್ಟೆಯ ಸಾಮಾರ್ಥ್ಯ ಅರಿವಾಗುವುದಿಲ್ಲ. ಹಸಿವಿನ ಪ್ರಮಾಣ ಗೊತ್ತಾಗುವುದಿಲ್ಲ. ಇವರೆಲ್ಲ ಊಟಕ್ಕೆ ಕುಳಿತರೆ ಸಾಕು ಬೇಕು ಎನ್ನುವುದಕ್ಕೆ ಅರ್ಥವೇ ಇರುವುದಿಲ್ಲ. ಸಾಕು ಎಂದು ಹೇಳುವುದಕ್ಕು ಬೇಕು ಎಂದು ಬೇಡುವುದಕ್ಕೂ ಅರ್ಹತೆಯೇ ಇಲ್ಲ.
ಸಾಮಾನ್ಯವಾಗಿ ಸಮಾರಂಭಗಳಲ್ಲಿ ನಾನು ಊಟಕ್ಕೆ ಕುಳಿತಾಗ ಗಮನಿಸುತ್ತೇನೆ. ಊಟದ ಆರಂಭದಲ್ಲಿ ಹಲವು ಭಕ್ಷ್ಯ ಆಹಾರಗಳನ್ನು ಬಡಿಸಿ ಎಲೆಯನ್ನು ಅಲಂಕರಿಸುತ್ತಾರೆ. ಎಲೆಯ ಅಲಂಕಾರಕ್ಕೆಂದೇ ಹಲವಾರು ತಿಂಡಿಗಳನ್ನು ಮಾಡುತ್ತಾರೆ. ಊಟದ ಆರಂಭದಲ್ಲಿ ಇವುಗಳಿಗೆಲ್ಲ ಎಷ್ಟು ಆಸಕ್ತಿ ವಹಿಸುತ್ತೇವೋ ಊಟದ ನಂತರ ಇವುಗಳು ಅದಕ್ಕಿಂತ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗುತವೆ. ನಾವು ಊಟಮಾಡಿದ ಬಾಳೆ ಎಲೆಯಾದರೂ ನಾವು ಊಟ ಮಾಡಿ ಕುಳಿತಲ್ಲಿಂದ ಎದ್ದನಂತರ ಅದು ಹೇಸಿಗೆ ಎನಿಸುತ್ತದೆ. ಊಟದ ಆರಂಭದಲ್ಲಿ ಇದ್ದ ಆಗ್ರಹ ಊಟವಾದನಂತರ ಇರುವುದಿಲ್ಲ. ತಿನ್ನುವ ಆಹಾರದಲ್ಲಿ ನಿರ್ಲಕ್ಷ್ಯ. ಕುಳಿತ ನೂರು ಮಂದಿಯಲ್ಲಿ ಎಲೆಯಲ್ಲಿ ಒಂದಗುಳೂ ಇಲ್ಲದಂತೆ , ಯಾವ ತಿಂಡಿ ಪದಾರ್ಥಗಳನ್ನೂ ಉಳಿಸದೆ ಊಟಮಾಡುವವರು ಕೇವಲ ಐದಾರು ಮಂದಿ. ಪ್ರತಿಯೊಬ್ಬರ ಎಲೆಯಲ್ಲೂ ಒಂದಲ್ಲ ಒಂದು ಆಹಾರ ಉಳಿಸಿ ಏಳುವಾಗ ಹಸಿವು ಮರೆತು ಹೋಗಿರುತ್ತದೆ. ದಾನೆ ದಾನೆಪೆ ಲಿಖಾಹೈ ಖಾನೆವಾಲಾ ಕಾ ನಾಮ್ ಎಂದು ಹೇಳುತ್ತಾರೆ. ಪ್ರತಿಯೊಂದು ಧಾನ್ಯದಲ್ಲೂ ಭಗವಂತ ತಿನ್ನುವವರ ಹೆಸರನ್ನು ಬರೆದಿರುತ್ತಾನೆ. ಆದರೆ ಭಗವಂತನ ಕಲ್ಪನೆಯನ್ನು ಹುಸಿ ಮಾಡುವ ನಮ್ಮ ಪ್ರವೃತ್ತಿ ಇದೆಯಲ್ಲ, ಭಗವಂತನ ಮೇಲಿನ ನಂಬಿಕೆಯನ್ನು ಹುಸಿಗೊಳಿಸುತ್ತದೆ.
ವರ್ಷ ಸಂದು ಇಷ್ಟು ದೊಡ್ಡವರಾಗುತ್ತೇವೆ. ನಮ್ಮ ಹೊಟ್ಟೆಯ ಪ್ರಮಾಣ ನಮಗೆ ಅರಿವಿಲ್ಲ ಎಂದರೆ ವಿಚಿತ್ರಎನಿಸುತ್ತದೆ. ಆಹಾರವಿಲ್ಲದೇ ಸಾಯುವುದಕ್ಕಿಂತಲೂ ತಿಂದು ಸಾಯುವವರು ಹೆಚ್ಚಂತೆ. ನಮ್ಮ ನಡುವೆ ಇಂದು ತಿನ್ನುವುದಕ್ಕೆ ಹಲವು ಅರ್ಥಗಳು ಇರುತ್ತವೆ. ಪ್ರಾಣಿಗಳು ಕೇವಲ ಹಸಿವಿಗಾಗಿ ತಿನ್ನುತ್ತವೆ. ನಮಗದರೆ ಪರಿವೆ ಇಲ್ಲ. ಚಪಲಕ್ಕಾಗಿ ಹೊಟ್ಟೆ ತುಂಬಿದರೂ ಇಳಿಸಿಕೊಳ್ಳುತ್ತೇವೆ. ಕೆಲವೊಮ್ಮೆ ಆಹಾರ ಉಳಿತದೆ ಎಂದು ಕಸದ ಬುಟ್ಟಿಗೆ ಎಸೆಯುವುದನ್ನು ತಿಂದು ತೇಗುತ್ತೇವೆ. ಅರ್ಥಾತ್ ಕಸದ ಬುಟ್ಟಿ ನಮ್ಮ ಹೊಟ್ಟೆ. ಹಲವು ಸಲ ನಾಗರಿಕ ಜೀವನ ಶೈಲಿಯಲ್ಲಿ ಹಿರಿಮೆಗಾಗಿ ತಿನ್ನುತ್ತೇವೆ. ಯಾರೋ ಒತ್ತಾಯ ಮಾಡಿ ಬಡಿಸಿದರೂ ಎಂದು ಬೇಡದೇ ಇದ್ದರೂ ಯಾರಿಗಾಗಿಯೋ ತಿಂದುಬಿಡುತ್ತೇವೆ. ಯಾರೋ ತಿನ್ನಬೇಕಾದ ಆಹಾರ ಬೇಡದೇ ಇದ್ದರೂ ನಮ್ಮ ಹೊಟ್ಟೆ ಸೇರುತ್ತದೆ. ಭೂಮಿ ಮೇಲೆ ಉಚಿತವಾಗಿ ಗಾಳಿ ಇದೆ. ನಮಗೆ ಎದೆ ತುಂಬ ಉಸಿರಾಡಬೇಕು ಎಂದನಿಸುವುದಿಲ್ಲ. ಆದರೆ ಆಹಾರ ಯಾಕೆ ತಿನ್ನಬೇಕು ಎಂದು ಅರ್ಥವಿಲ್ಲದೆ ತಿಂದು ತೇಗಿಬಿಡುತ್ತೇವೆ.
ನಾನಂತೂ ಊಟಕ್ಕೆ ಕುಳಿತರೆ ಒಂದಗುಳೂ ಉಳಿಯದೇ ಊಟಮಾಡುತ್ತೇನೆ. ಊಟದಲ್ಲಿ ಕೈ ನೀರು ತೆಗೆಯುವಾಗ ಚಿತ್ರಾವತಿ ಇಟ್ಟ ಒಂದೆರಡು ಕಾಳು ಬಿಟ್ಟರೆ ನಾನು ಯಾವುದೇ ಆಹಾರವನ್ನು ಉಳಿಸುವುದಿಲ್ಲ. ಎಷ್ಟು ಬೇಕೋ ಅಷ್ಟನ್ನೇ ಹಾಕಿಸಿಕೊಳ್ಳುತ್ತೇನೆ. ಊಟದಲ್ಲಿ ಒತ್ತಾಯದ ಮೇಲೆ ಒತ್ತಾಯ ಮಾಡಿ ಬಡಿಸುವುದನ್ನು ಕಂಡರೆ ನನಗೆ ಸಿಟ್ಟು ಬರುತ್ತದೆ. ಎಷ್ಟು ಆತ್ಮೀಯರಾದರೂ ನನಗೆ ಅದು ಅಸಹನೆಯನ್ನು ತರುತ್ತದೆ. ನನಗೆ ಬೇಕೋ ಯಾವುದೇ ಸಂಕೋಚವಿಲ್ಲದೆ ಕೇಳಿ ತಿನ್ನುತ್ತೇನೆ. ಆದರೆ ಹೊಟ್ಟೆ ತುಂಬಿದರೂ ಸ್ವಲ್ಪ ಸ್ವಲ್ಪ ಎಂದು ಒತ್ತಾಯ ಮಾಡಿದರೆ ಬಹಳ ಅಸಹನೆಯಾಗುತ್ತದೆ. ಹಲವುಕಡೆ ನಾನು ಎಲೆ ಸ್ವಚ್ಛ ಮಾಡಿ ಏಳುವಾಗ ನನಗೆ ಬಡಿಸಿದ್ದು ಸಾಕಾಗಲಿಲ್ಲವೋ ಏನೋ ಎಂದು ಅನುಮಾನಿಸಿ ಎಲೆ ಖಾಲಿಯಾದ ತಕ್ಷಣ ಒತ್ತಾಯ ಮಾಡಿ ಪುನಃ ಬಡಿಸುವುದಕ್ಕೆ ಬರುತ್ತಾರೆ. ಎಲ್ಲವನ್ನೂ ತಿಂದರೂ ಕಷ್ಟ. ಎಲೆಯಲ್ಲಿ ಒಂದಷ್ಟು ಉಳಿಸಿಯೇ ಹೋದರೆ ಅದು ತೃಪ್ತಿಯ ಸಂಕೇತವಾಗುತ್ತದೆ. ವಾಸ್ತವದಲ್ಲಿ ಹಾಗಲ್ಲ ಎಲೆ ಸ್ವಚ್ಛ ಮಾಡಿ ಊಟ ಮಾಡಿದರೆ ಅವರು ರುಚಿಯಿಂದಲೂ ಹಸಿವಿನಿಂದಲೂ ತೃಪ್ತರಾಗಿದ್ದಾರೆ ಎಂದರ್ಥ. ಆಹಾರ ತಿನ್ನಬೇಕು. ಅದು ಆರೋಗ್ಯದ ಸಂಕೇತ. ಆಹಾರ ಸೇವಿಸಲು ಸಾಧ್ಯವಾಗದೇ ಇದ್ದರೆ ಅದು ರೋಗ ಲಕ್ಷಣ. ಹಾಗಿದ್ದು ಬೇಡದೇ ಇರುವುದನ್ನು ತಿನ್ನುವುದು ರೋಗಿಯಾಗುವ ಲಕ್ಷಣ. ಯಾರೇ ಆಗಲಿ ಅತಿಯಾಗಿ ಒತ್ತಾಯ ಮಾಡಿ ಬಡಿಸುವುದು ನನಗೆ ಸರಿಬರುವುದಿಲ್ಲ. ಒಂದು ತಪ್ಪಿದರೆ ಎರಡು ಸಲ ಕೇಳಬಹುದು. ಆದರೆ ಬೇಡದೇ ಇದ್ದರೂ ಹಿಡಿಯದ ಚೀಲದಲ್ಲಿ ಸಾಮಾನು ತುಂಬಿಸಿದಂತೆ ಆಹಾರ ಇಕ್ಕುವುದು ಭಗವಂತನನ್ನು ಅಗೌರವಿಸಿದಂತೆ. ಅನ್ನ ಎಂದರೆ ಬ್ರಹ್ಮ. ಅದನ್ನುಬೇಡ ಎಂದು ಎಲೆಯಲ್ಲಿ ಬಿಟ್ಟು ಏಳುವುದು ಭಗವಂತನನ್ನು ತಿರಸ್ಕರಿಸಿದಂತೆ. ಊಟದ ಕೊನೆಯಲ್ಲಿ ಶ್ಲೋಕ ಹೇಳಿ ಭಗವಂತನನ್ನು ಸ್ಮರಿಸಿ ಮಾದೇವ ಎನ್ನುವುದಕ್ಕೆ ಅರ್ಥವಿಲ್ಲ.
ಊಟದಿಂದ ಏಳುವಾಗ ಎಲ್ಲರ ಎಲೆಯನ್ನು ಗಮನಿಸುತ್ತೇನೆ. ಎಲ್ಲವನ್ನು ತಿಂದು ಏಳುವವರು ಬಹಳ ಕಡಿಮೆ. ಊಟಕ್ಕೆ ಕುಳಿತುಕೊಳ್ಳುವಾಗ ಇರುವ ಆಗ್ರಹ ಊಟದ ಕೊನೆಯಲ್ಲಿ ಇರುವುದಿಲ್ಲ. ಯಾರೂ ತಿನ್ನದ ಎಂಜಲನ್ನು ಸೃಷ್ಟಿ ಮಾಡಿ ಆಹಾರದ ಮೌಲ್ಯವನ್ನು ಮರೆತವರನ್ನು ಕಾಣುತ್ತೇನೆ. ಹೊಟ್ಟೆ ತುಂಬಿದರೂ ಇಂಗದ ಹಸಿವನ್ನು ಕಾಣುತ್ತೇನೆ. ಎಲ್ಲೆಂದರಲ್ಲಿ ಚಪಲಕ್ಕೋ ಇನ್ನಾವುದೋ ಕಾರಣಕ್ಕೋ ತಿನ್ನುವವರನ್ನು ಕಾಣುತ್ತೇನೆ. ಆಗ ನನಗೆ ನಾರಾಯಣ ಎಂಬ ವೃದ್ದನ ನೆನಪಾಗುತ್ತದೆ. ಒಂದಗುಳು ಅನ್ನಕ್ಕೆ ಆ ಮುದುಕ ಕೊಟ್ಟ ಮೌಲ್ಯ ನೆನಪಾಗುತ್ತದೆ. ತಟ್ಟೆ ತೊಳೆದು ಆ ನೀರನ್ನು ಕುಡಿದು ತೃಪ್ತಿಯಿಂದ ತೇಗುವ ಅವರ ಸಂತೃಪ್ತ ಮುಖ ಕಣ್ಣೆದುರು ಬರುತ್ತದೆ.
No comments:
Post a Comment