Saturday, November 4, 2023

ನಮ್ಮ ಚಿನ್ನು ಇನ್ನಿಲ್ಲ.

         ನಮ್ಮ ಚಿನ್ನು ಇನ್ನಿಲ್ಲ.  ಸುಮಾರು ಹನ್ನೆರಡು ವರ್ಷಗಳ ಹಿಂದೆ ನಮ್ಮ ಮನೆಗೆ ಬಂದ ಪುಟ್ಟ ಅತಿಥಿ.. ಚಿನ್ನು ಎಂಬ ಲಾಬ್ರಡರ್ ಹೆಣ್ಣು ನಾಯಿ. ಆದರೆ ಅದು ಕೇವಲ ನಾಯಿಯಾಗಿ ಅಲ್ಲ ಮನೆಯ ಚಿನ್ನುವಾಗಿ ಬೆಳೆಯಿತು. ಅವಳ ಚಟುವಟಿಕೆಗಳು ನಮ್ಮ ಚಟುವಟಿಕೆಗಳಾಗಿ  ಅವಳು  ನಮ್ಮೊಂದಿಗೆ ಬೆಳೆದು ಬಂದಳು.  ಆ ಚಿನ್ನು ಇನ್ನು ನೆನಪು ಮಾತ್ರ ಎನ್ನುವಾಗ ನಾವು ಗದ್ಗದರಾಗುತ್ತಿದ್ದೇವೆ. ಕಣ್ಣು ತೇವವಾಗುತ್ತದೆ. ಛೇ....ಸಂದು ಹೋಯಿತೇ? ಇನ್ನು ಬರಲಾರದೇ? 

            






    ಚಿನ್ನು  ಪುಟ್ಟ ಲಾಬ್ರಡರ್ ಮರಿಯನ್ನು ವರ್ಷಗಳ ಹಿಂದೆ ಮಗ ತಂದಾಗ ನಾವು ತಂದೆ ತಾಯಿಯರು ಸಾಕಷ್ಟು ಅಸಮಾಧಾನವನ್ನು ವ್ಯಕ್ತಪಡಿಸಿದ್ದೆವು. ಈ ನಗರದ ಸಂದಿಗೊಂದಿಯ ಮೂವತ್ತು ಚದರದಲ್ಲಿ ಅದಕ್ಕೂ ಒಂದು ಎಡೆಬೇಕಲ್ಲ? ಆದರೇನು ಮಗ ನಿಶ್ಚೈಯಿಸಿದ್ದ. ಇದು ತನ್ನೊಂದಿಗೆ ಇರುವುದೆಂದು ಸಾರಿ ಹೇಳಿದ. ನಮ್ಮ ಅಸಮಾಧಾನ ಕೇವಲ ಎರಡು ದಿನಕ್ಕೆ ಸೀಮಿತವಾಯಿತು. ಚಿನ್ನು ಮುದ್ದಾಗಿ ಬೆಳೆಯತೊಡಗಿದಳು. ಮಗನನ್ನು ಪ್ರೀತಿಸುವುದಾದರೆ ಅದನ್ನು ನಾವು ಇಷ್ಟಪಡಲೇ ಬೇಕು. ಮನೆಗೆ ಬಂದ ಸೊಸೆಯನ್ನು ಹೆತ್ತವರು ಅಂಗೀಕರಿಸುವಂತೆ  ಅವಳೊಂದು ಕುಟುಂಬದ ಸದಸ್ಯವಾಗಿ ಬದುಕು ಆರಂಭಿಸಿ ಬಿಟ್ಟಿಳು. ಪ್ರೀತಿ ಎಂಬುದರ ಪ್ರಭಾವ ಹಾಗಿರುತ್ತದೆ. ಆದರೆ ಚಿನ್ನು ಕೇವಲ ಆ ಅನಿವಾರ್ಯತೆಗೆ ಸೀಮಿತವಾಗಿಲ್ಲ. ಅದು ನಮ್ಮ ಮನಸ್ಸನ್ನೂ ಗೆದ್ದು ಬಿಟ್ಟಿತು. ಅದಕ್ಕೆ ಪಾಲಿನಂತೆ ಒಬ್ಬೂಬ್ಬರೂ ಕೈತುತ್ತು ಕೊಡುವುದಕ್ಕಾರಂಭಿಸಿದೆವು ಎನ್ನುವುದಕ್ಕಿಂತ ಅದು ತನ್ನ ಹಕ್ಕನ್ನು ಪ್ರೀತಿಯಿಂದ ಚಲಾಯಿಸತೊಡಗಿತು. ದಿನಾ ವಾಕಿಂಗ್ ಹೋಗುವಾಗ ಸಂಗಾತಿಯಾಯಿತೋ ಇಲ್ಲ ಅದನ್ನು ಕರೆದುಕೊಂಡು ಹೋಗುವುದರಲ್ಲಿ ಸಿಗುವ ಆನಂದವೋ ಅಂತೂ ಮನೆ ಮಂದಿಯ ದಿನಚರಿಯ ಒಂದು ಅವಿಭಾಜ್ಯ  ಅಂಗ ಚಿನ್ನುವಾದಳು.  ಆರಂಭದಲ್ಲಿ ಮನೆಯ ಹೊರಗಿನ ಹಜಾರದಲ್ಲಿಅವಳನ್ನು ಕಟ್ಟಿಹಾಕುತ್ತಿದ್ದರೆ ನಂತರ   ಅದು ಬಂಧನವಾಗಬಹುದು ಎಂದುಕೊಂಡಾಗ ಮನೆಯ ಒಂದು ಮಹಡಿ ಅವಳದ್ದೇ ಸಾಮ್ರಾಜ್ಯವಾಯಿತು. ಸುಸ್ತಾಗಿ ಕುಳಿತಾಗ ಅದು ಬಂದು ಉಪಚರಿಸುವಂತೆ ಮೈ ಮೇಲೆ ಹತ್ತಿ ಮುದ್ದಿಡುವಳು. ಅವಳ ಬೆಚ್ಚಗಿನ ಮೈ....ಚಳಿಗೆ ಬಿಸಿಯನ್ನು ಒದಗಿಸುತ್ತಿತ್ತು. ಸದಾ ಮಗನ ಜತೆಯಲ್ಲಿರುತ್ತಿದ್ದವಳು ಒಂದರ್ಥದಲ್ಲಿ ಅದು ಹೇಗೆ ಪ್ರೀತಿಸಬೇಕು ಎಂಬುದನ್ನು ತೋರಿಸಿಕೊಟ್ಟಿಳು. 

            ಚಿನ್ನು ನಮ್ಮೊಂದಿಗೆ ಈಗ ಇಲ್ಲ ಎಂದರೆ ಅದೊಂದು ಶೂನ್ಯತೆಯ ಅನುಭವ. ಮನೆಯ ಸಂದಿಗೊಂದಿಗಳಲ್ಲಿ ಆಕೆ ಇನ್ನೂ ಮುದುರಿ ಮಲಗಿದಂತೆ ಅನುಭವಾಗುತ್ತದೆ. ಆಕೆಯ ಬಿಸಿಯುಸಿರು ಇನ್ನೂ ಮಾರ್ದನಿಸುತ್ತದೆ. ಆಕೆಯ ಪ್ರೀತಿ ಸಲುಗೆ ಅದೊಂದು ಮರೆಯಲಾಗದ ಬಂಧನವಾಗುತ್ತದೆ. ಆಕೆಯ ಬಾಯಿಯಲ್ಲಿ ಕೈ ಇಟ್ಟರೂ ಸುಮ್ಮನಿರುತ್ತಿದ್ದ ಆಕೆಯ ಪ್ರೀತಿ ಮಮಕಾರ....ನೀ ಎನೂ ಮಾಡು ನಾನು ನಿನ್ನೊಂದಿಗೆ ಇರುತ್ತೇನೆ ಎನ್ನುವ ಅರ್ಪಣಾ ಭಾವ ಎಲ್ಲ ತಿರಸ್ಕಾರವನ್ನು ತಿರಸ್ಕರಿಸಿ ದೂರಮಾಡುವಂತೆ ಪ್ರೇರೆಪಿಸಿಬಿಡುತ್ತಿತ್ತು. ಆಕೆ ಕೈ ಬಿಟ್ಟು ಹೊದಳು ಎಂದರೆ ಹೃದಯದ ಒಂದು ಭಾಗ ಕಳಚಿಕೊಂಡಂತೆ.  ಮರೆಯಲಾಗದ ಈ ನೆನಪುಗಳನ್ನು ಹೇಗೆ ಮರೆಯಲಿ? ಆಕೆ ನಮಗಾಗಿ ಇದ್ದಳೋ ನಾವು ಆಕೆಗಾಗಿ ಇದ್ದೆವೋ ಒಂದೂ ಅರ್ಥವಾಗುವುದಿಲ್ಲ. ಆಕೆಯಿಂದ ಏನು ಪಡೆದಿದ್ದೇವೋ ಅವೆಲ್ಲವೂ ಭಾವನೆಗಳ ವ್ಯಾಪಾರ. ಲಾಭವಿಲ್ಲದ ವ್ಯಾಪಾರ. ಇಲ್ಲಿ ಪ್ರೀತಿ ಭಾವನೆಗಳೇ ಸರಕುಗಳು. ಅದಕ್ಕೆ ಮೌಲ್ಯ ತೂಕ ಯಾವುದು ನಿರ್ಧರಿಸಲಾಗುವುದಿಲ್ಲ. 

            ನನ್ನ ದೊಡ್ಡ ಮಗ ಆಗಿನ್ನು ವ್ಯಾಸಂಗ ಮಾಡುತ್ತಿದ್ದ, ಆತನ ಅತೀವ ಆಸಕ್ತಿಯ ಮುಖಾಂತರ ಈ ಅತಿಥಿ ಮನೆಯ ಸದಸ್ಯನಾಯಿತು. ಅವನೂ ಅಷ್ಟೇ ನಮ್ಮ ಮನೆಯ ಮೂರನೆ ಮಹಡಿಯಲ್ಲಿ ಅವಳಿಗಾಗಿ ಜಾಗವನ್ನು ಮೀಸಲಿರಿಸಿ ಅಲ್ಲಿ ಆತನದ್ದೇ ಸಾಮ್ರಾಜ್ಯ. ಚಿನ್ನುವಿನ ಬೆಳವಣಿಗೆ ಪ್ರತೀ ಹಂತವೂ ಆತನಿಗೆ ಒಂದು ಅಧ್ಯಯನವಾಗಿತ್ತು. ಅದು ಯಾವಾಗ ಎದ್ದು ಬರ್ತದೆ, ಅದು ಹೇಗೆ ನಿದ್ರೆ ಮಾಡುತ್ತದೆ, ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು, ಅದರ ಬಯಕೆಗಳು ಯಾವಾಗ ಯಾವರೀತಿ ಇರುತ್ತದೆ ಹೀಗೆ  ಅದರ ವರ್ತನೆಯನ್ನೆಲ್ಲಾ ಗೂಗಲ್ ಮಾಡಿ ಅಂತರ್ಜಾಲದಲ್ಲಿ ಜಾಲಾಡಿ ಅದನ್ನು ಅಳವಡಿಸಿಕೊಳ್ಳುತ್ತಿದ್ದ. ಮೊದಲ ದಿನ ಮೂರನೆ ಮಹಡಿಗೆ ಹೋದಾಗ  ಪುಟ್ಟ ಮರಿ ಚಿನ್ನು ಎಲ್ಲಾ ಕಡೆ ಉಚ್ಚೆ ಹೊಯ್ದು ಎಲ್ಲ ಕಡೆ ಅದರದ್ದೆ ವಾಸನೆ. ಆಗ ನಾವು ಹತಾಶರಾಗಿದ್ದೆವು. ಊರಲ್ಲಿಯಾದರೆ ಇಂತಹ ವಿಷಯಗಳಿಗೆ ಸಾಕಷ್ಟು ಸೌಕರ್ಯ ಇರುತ್ತದೆ. ಆದರೆ ಇಲ್ಲಿ ಮೂವತ್ತು ಚದರದಲ್ಲಿ ಇದನ್ನು ಸುಧಾರಿಸುವುದೆಂತು? ನಮ್ಮಲ್ಲಿ ಹಲವರಿಗಂತು ಚಿನ್ನುವಿನ ಆವಶ್ಯಕತೆ ಇರಲಿಲ್ಲ. ಆದರೆ ಮಗನ ಇರಾದೆ ಬೇರೆಯದೇ ಆಗಿತ್ತು. ಚಿನ್ನು ಅವನ ಕೈಯಲ್ಲಿ ಪಳಗತೊಡಗಿದಳು. ಮುದ್ದಾದ ಆಕೆ ಬುದ್ದಿ ಕಲಿಯತೊಡಗಿದಳು. ಮೊದಲೇ ಲಾಬ್ರಡಾರ್ ತಳಿ ಅದು ಮನೆಯವರಿಗೆ ಬೇಗ ಹೊಂದಿಕೊಳ್ಳುತ್ತದೆ. ಅದರಲ್ಲೂ ಮಕ್ಕಳ ಮನಸ್ಸನ್ನು ಸೆಳೆಯುವುದು ಅದರ ರಕ್ತಗತ ಗುಣ.  ಅದಕ್ಕೆ ನಿಗದಿತ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡುವುದಕ್ಕೆ ಕಲಿಸಿದ. ಅಚ್ಚುಕಟ್ಟಾಗಿ ಊಟ ತಿಂಡಿಯನ್ನು ಒದಗಿಸಿದ. ಅದಕ್ಕಾಗಿ ರಾಯಲ್ ಚಿನ್ ಬಿಸ್ಕಟ್ ತರಿಸಿದ. ಹೀಗೆ ಅದರದ್ದೇ ಒಂದಷ್ಟು ವಸ್ತುಗಳು ಮನೆಯ ಅಂಗವಾಗಿ ಹೋದವು. 

            ಮಗನ ಭಾವನೆಯ ಮೌಲ್ಯಗಳನ್ನು ತೋರಿಸಿಕೊಟ್ಟವಳು ಚಿನ್ನು. ಆತನೊಂದಿಗಿನ ಅವಳ ಸಂಭಂಧದ ಆಳ ವಿಸ್ತಾರ ಕಲ್ಪಿಸುವುದಕ್ಕೆ ಸಾಧ್ಯವಿಲ್ಲ. ಮನೆಯ ರಸ್ತೆಯತುದಿಯಲ್ಲಿ ಆತನ ಬೈಕಿನ ಸದ್ದು ಕೇಳಿಸಿದರೆ ಮನೆಯ ಯಾವುದೋ ಮೂಲೆಯಲ್ಲಿದ್ದ ಇವಳ ಕಿವಿ ನಿಗುರಿ ಬಿಡುತ್ತಿತ್ತು. ಒಂದೇ ನೆಗೆತಕ್ಕೆ ಹೊರಬಂದು ಮೂರನೇ ಮಹಡಿಯಿಂದ ಕೆಳಗೆ ನೋಡಿ ಬೊಗಳತೊಡಗುತ್ತಿದ್ದಳು. ಆತ ಬರಬೇಕಾದರೆ ಆತನ ಭುಜದೆತ್ತರಕ್ಕೆ ಹಾರಿ ಆತನ ಮುಖವನ್ನೆಲ್ಲ ಮುದ್ದಿಸಿ ತೇವ ಮಾಡುತ್ತಿದ್ದಳು. ಆತ ಎಸೆದ ಚೆಂಡನ್ನು ಓಡಿ ಹೋಗಿ ಕಚ್ಚಿ ತಂದುಕೊಡುತ್ತಿದ್ದಳು. ಹಿಂದೆ ಅಲುಗಾಡುವ ಬಾಲ ಎಲ್ಲಿ ಕಳಚಿ ಬೀಳುವುದೋ ಎಂದನಿಸುತ್ತಿತ್ತು. 

                ಪ್ರಾಣಿಗಳಲ್ಲಿ ನಾಯಿ ಎಂಬುದು ಒಂದು ವಿಚಿತ್ರ ಸ್ವಭಾವದ ಪ್ರಾಣಿ. ಬಹುಶಃ ಭಾವನೆಗಳನ್ನು ಇದರಂತೆ ವ್ಯಕ್ತ ಪಡಿಸುವ ಪ್ರಾಣಿ ಬೇರೆ ಇಲ್ಲ. ನೋವು ನಲಿವು ಎಲ್ಲವನ್ನೂ ಬಹಿರಂಗ ಪಡಿಸುವ ನಾಯಿಗೆ ಮಾತು ಒಂದು ಬರುವುದಿಲ್ಲ....ಆದರೆ ಅದು ವ್ಯಕ್ತ ಪಡಿಸುವ ಭಾಷೆಗೆ ಮಾತಿನ ಅಗತ್ಯವೇ ಇರುವುದಿಲ್ಲ. ಕಣ್ಣು ಅಗಲಿಸಿ ಕಿವಿನಿಮಿರಿಸಿ ಬೇಕಾದಲ್ಲಿ ಬಾಲ ಅಲ್ಲಡಿಸಿ ಶರೀರವನ್ನು ಕುಣಿಸಿ...ಯಾವ ನಟ ಸಾರ್ವಭೌಮನಿಗೂ ಕಡಿಮೆ ಇಲ್ಲ ಜನ್ಮ ಜಾತ ಪ್ರತಿಭೆ. ಸ್ವಭಾವತಃ ನಾಯಿ ಅತ್ಯಂತ ಹೆದರಿಕೆಯ ಸ್ವಭಾವದ ಪ್ರಾಣಿ. ಪ್ರತೀಕ್ಷಣವೂ ಅದಕ್ಕೆ ಏನೋ ಆಗಿಬಿಡುತ್ತದೆ ಎಂಬ ಆತಂಕವಿರುತ್ತದೆ. ಹಾಗಾಗಿ ಹೊಸದು ಕಂಡಕೂಡಲೇ ಅದು ಜಾಗೃತವಾಗುತ್ತದೆ. ಬೊಗಳುತ್ತದೆ. ಆದರೆ ಅದು ತನ್ನದೂ ಎಂಬ ಭಾವನೆ ಬಂತೋ ಅದಕ್ಕಾಗಿ ಪ್ರಾಣ ಕೊಡಲೂ ಹಿಂಜರಿಯುವುದಿಲ್ಲ.  ಈ ಎಲ್ಲ ಸ್ವರೂಪಗಳು ಚಿನ್ನುವಿನಲ್ಲಿತ್ತು. ಈಕೆಯ ವಿಚಾರಗಳು ಹೇಳುವುದಕ್ಕೆ ತೊಡಗಿದರೆ ಸ್ವರ ಕಂಪಿಸುತ್ತದೆ. ಬೆರೆಯುವುದಕ್ಕೆ ತೊಡಗಿದರೆ ಕೈ ನಡುಗುತ್ತದೆ. ಭಾವನೆಗಳ ಮಹಾಪೂರ ಪುಟ್ಟ ಹೃದಯದಲ್ಲಿ ನಿಲ್ಲಲಾಗದೆ ಹೊರ ಚಿಮ್ಮುತ್ತದೆ. ಅದರಲ್ಲಿನ ಭಾವನೆಗಳನ್ನು ಹೆಕ್ಕಿ ತೆಗೆಯುವುದೇ ಒಂದು ಸಾಹಸ. 

            ವಾರಗಳ ಹಿಂದೆ ವಯೋ ಸಹಜವಾಗಿ ಆಕೆಯ ದೇಹ ಕೃಶವಾಗತೊಡಗಿದವು. ಮೊದಲಿನಂತೆ ಆಕೆ ಓಡಾಡುವುದನ್ನು ನಿಲ್ಲಿಸಿ ಬಹಳ ಸಮಯಗಳು ಕಳೆಯಿತು. ಹೆಚ್ಚಾಗಿ ಮಲಗಿಕೊಂಡೇ ಇರುತ್ತಿದ್ದಳು. ಮಗ ಬಿಟ್ಟರೆ ಪತ್ನಿ ಆಕೆ ಅತ್ಯಂತ ಹತ್ತಿರದ ಜೀವಗಳು. ಆಕೆಯಂತೂ ಅದರ ಚಾಕರಿಯಲ್ಲಿ ತನ್ನನ್ನೇ ತಾನು ತೇದುಕೊಂಡಳು. ಕೊನೆಯ ಉಸಿರಿನ ತನಕವೂ ಅದನ್ನು ಪ್ರೀತಿಯಿಂದ ಕಾಣಬೇಕು. ಸಾಧ್ಯವಾದಷ್ಟು ಉಪಚರಿಸಬೇಕು ಇದೊಂದೇ ನಿರ್ಧಾರ. ಒಂದು ತುತ್ತು ಆಹಾರ ತಿಂದರೂ ತೊಟ್ಟು ನೀರು ಕುಡಿದರೂ ತನ್ನ ದೇಹಕ್ಕೆ ಸೇರಿಬಿಟ್ಟಿತೋ ಎನ್ನುವ ತೃಪ್ತಿ ಅವಳದು. ದಿನಾ ಆಸ್ಪತ್ರೆಯ ಅಲೆದಾಟದಲ್ಲಿ ಬಸವಳಿದರೂ ಚಿನ್ನುಗಾಗಿ ಎಂಬ ಭಾವನೆ ದೃಢವಾಗಿರುತ್ತಿತ್ತು. ಅಲ್ಲಿ ದಣಿವೆಂಬುದು ಅರಿವಿಗೆ ಬರುತ್ತಿರಲಿಲ್ಲ. ಮೊನ್ನೆ ರಾತ್ರಿ ಹೋದಾಗಲೇ ವೈದ್ಯರು ಒಂದು ರಾತ್ರಿ ನಿಗಾವಹಿಸೋಣ ನಾಳೆ ಬೆಳಗ್ಗೆ ತೀರ್ಮಾನಿಸಿದರಾಯಿತು ಎಂದರು. 

            ನಿನ್ನೆ ವೈದ್ಯರು ಬೆಳಗ್ಗೆಯೇ ಹೇಳಿದ್ದರು ಇನ್ನು ಇದರ ಬಗ್ಗೆ ನಿರೀಕ್ಷೆ ಇಲ್ಲ.  ಯಾಕೆ ಅದಕ್ಕೆ ನರಕ ಯಾತನೆ , ಇಂಜಕ್ಷನ್ ಕೊಟ್ಟು ಮುಗಿಸಿ ಬಿಡೋಣ ಎಂದರು. ನಮಗಂತೂ ಹೃದಯವನ್ನೇ ಚುಚ್ಚಿದ ಅನುಭವ.  ಚುಚ್ಚಿ ಮುಗಿಸುವುದೆಂದರೆ ನಾವು ಚಿನ್ನುವನ್ನು ಬೇಡ ಎಂದಂತೇ ಅಲ್ಲವೇ? ಅದು ಹೇಗೆ ಸಾಧ್ಯ.  

            ಕೊನೆಗೆ ಸಮ್ಮತಿಸಬೇಕು. ಇನ್ನು ಆಕೆಗೆ ನರಕ ಯಾತನೆ ಯಾಕೆ. ಎಲ್ಲರೂ ನೀರು ಕುಡಿಸಿದೆವು. ಎಲ್ಲರೂ ಕೊಟ್ಟ ನೀರನ್ನು ಪ್ರಜ್ಞೆ ಇಲ್ಲದೇ ಇದ್ದರು ಆಕೆ ಕುಡಿದಳು.  ಅದು ವರೆಗೆ ಇದ್ದ ಮಗ ಮನೆಗೆ ಹೋಗಿದ್ದ. ನಾವೆಲ್ಲ ವೈದ್ಯರ ಬರುವುಕೆಯನ್ನು ಕಾಯುತ್ತಿದ್ದೆವು. ಚಿನ್ನು ಪ್ರಜ್ಞಾಹೀನಳಾಗಿ ಕೇವಲ ಏದುಸಿರುಬಿಡುತ್ತಾ ಮಲಗಿದ್ದಳು. ಮೊದಲಾದರೆ ನಾವು ಬಂದಾಗ ಏನಿಲ್ಲ ಎಂದರೂ ಬಾಲ ಅಲ್ಲಾಡಿಸಿಬಿಡುತ್ತಿದ್ದಳು. ಈಗ ಸಂವೇದನೆಯೇ ಇಲ್ಲ. ತಾಸು ಕಳೆದು ಮಗ ಹೆಂಡತಿ ಜತೆಗೆ ಬಂದ. ಆತ ಬಂದಾಗ ಹೊಸತೊಂದು ಚೆಂಡನ್ನು ಕೊನೆಯ ಕೊಡುಗೆಯಾಗಿ ಚಿನ್ನುವಿಗಾಗಿ ತಂದಿದ್ದ.  ಅದನ್ನು ಕೊಟ್ಟು ಮೈತಡವಿದ ಅದೊಮ್ಮೆ ಕಣ್ಣು ಬಿಟ್ಟಳು.  ಮಗನ ಜತೆಗಿನ ಬಾಂಧವ್ಯ ಅದನ್ನು ಎಚ್ಚರಿಸಿತ್ತು. ಆತ ನೀರು ಕುಡಿಸಿದ. ಕುಡಿದಳು. ಹಾಗೆ ಎತ್ತಿದ ಕೊರಳು ಬಾಗಿತು ಒಂದೆರಡು ನಿಡಿದಾದ ಉಸಿರು ಹೊರಹಾಕಿದಳು. ಕಣ್ಣು ಸುತ್ತಲೂ ತಿರುಗಿಸಿ ಕೊನೆಯ ಯಾತ್ರೆಯನ್ನು ಮುಗಿಸಿದಳು.   ಒಂದು ವಾರದ ನರಕ ಯಾತನೆ ಅನುಭವಿಸಿದಳು. ಆಸ್ಪತ್ರೆ ಬೆಡ್ ಮೇಲೆ ತನ್ನ ಉಸಿರನ್ನು ಚೆಲ್ಲಿ ಬಿಟ್ಟು ನಿಶ್ಚಲಳಾದಳು. ತಬ್ಬಿಕೊಂಡಾಗ ಬಿಸಿಯನ್ನು ಉಣಿಸುತ್ತಿದ್ದ ಆ ಮೈ ತಣ್ಣಗಾಯಿತು. ಚಿನ್ನು ಬಾರದ ಲೋಕಕ್ಕೆ ಸರಿದು ಹೋದಳು.  ಇನ್ನು ಚಿನ್ನು ನೆನಪು ಮಾತ್ರ ಎಂದುಕೊಂಡಾಗ ಹೃದಯ ಭಾರವಾಗುತ್ತದೆ. ಕಣ್ಣು ಮಂಜಾಗುತ್ತದೆ. ಆಕೆಯ ಪ್ರೀತಿ ಇನ್ನೆಲ್ಲಿ ಸಿಗಬಹುದು. ನಮಗೆಲ್ಲ ವಿದಾಯ ಹೇಳಿ ಸುಖವಾಗಿರಿ.....ನನ್ನನ್ನು ಅಗಾಗ ನೆನಪಿಸುತ್ತಾ ಇರಿ. ಮರೆಯಬೇಡಿ ಎಂದಂತೆ ಭಾಸವಾಗುತ್ತದೆ. ಆಕೆ ಕೊಟ್ಟ ಪ್ರೀತಿಗೆ ನಾವು ಅಷ್ಟಾದರೂ ಮಾಡಲೇಬೇಕು. ಚಿನ್ನು...ಮತ್ತೊಮ್ಮೆ ಹುಟ್ಟಿ ಬಂದರೆ.......ಈ ಹೃದಯಗಳಲ್ಲಿ ತುಂಬಿಕೊಳ್ಳುವುದಕ್ಕೆ  ಇನ್ನೂ ಜಾಗವಿದೆ. 





1 comment: