Sunday, November 12, 2023

ನಂಬಿಕೆಗಳು ಸಂಸ್ಕೃತಿಯೂ

ಮೊನ್ನೆ ನವರಾತ್ರಿ ಸಮಯದಲ್ಲಿ ಊರಿಗೆ ಹೋಗಿದ್ದೆ. ನಮ್ಮೂರು ತಲುಪಿದಂತೆ ಅಲ್ಲಲ್ಲಿ ಸಾರ್ವಜನಿಕ ಶಾರದೋತ್ಸವ ನಡೆಯುತ್ತಿರುವುದನ್ನು ನೋಡಿದೆ. ಬಹುಶಃ ಸಾರ್ವಜನಿಕ ಶಾರದೋತ್ಸವ ಆಚರಿಸುವ ಪರಿಪಾಠವಿರುವುದು ನಾನು ಕಂಡ ಹಾಗೆ ನಮ್ಮೂರಲ್ಲಿ ಮಾತ್ರ. ಎಲ್ಲದಕ್ಕೂ ಮಹತ್ವ ಕೊಡುವಾಗ ಇಲ್ಲಿವಿದ್ಯೆ ಜ್ಞಾನಕ್ಕೂ ಮಹತ್ವ ಕೊಡುವ ಬಗೆ ಇದು.  ಅದು ಗಣೇಶೋತ್ಸವ ಆಗಿರಲಿ ಶಾರದೋತ್ಸವ ಆಗಿರಲಿ ಇಲ್ಲಾ ಸಾರ್ವಜನಿಕ ಸಾಮೂಹಿಕ ಸತ್ಯನಾರಾಯಣ ಪೂಜೆಯೇ ಆಗಲಿ ಇಲ್ಲಿ  ಉತ್ಸವದ ಆಚರಣೆಯ ವೈಶಿಷ್ಟ್ಯಗಳು ಹಲವು. ಹಲವು ಕಡೆಯಲ್ಲಿ ಅತ್ಯಂತ ಶಿಸ್ತುಬದ್ಧವಾಗಿರುತ್ತದೆ.   ಡಿ ಜೆ ಯಂತಹ ಪಾಶ್ಯಾತ್ಯ ಸಂಸ್ಕೃತಿಯ ಪ್ರಭಾವ ಇರುವುದಿಲ್ಲ. ಶಾಸ್ತ್ರೀಯ ಸಂಗೀತ ಭಜನೆ ಯಕ್ಷಗಾನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಇದಕ್ಕೆ ಪ್ರತೀಕ. ಹಲವು ಕಡೆಯಲ್ಲಿ ಒಂದು ಕಾರ್ಯಕ್ರಮ ಹೇಗೆ ಸಂಸ್ಕೃತಿಯನ್ನು ಪ್ರತಿನಿಧಿಸಬೇಕೋ ಆ ರೀತಿಯಲ್ಲೇ ಇರುತ್ತದೆ. ಪೂಜೆ ಪುನಸ್ಕಾರಗಳು ಜನರಲ್ಲಿ ಭಕ್ತಿಯನ್ನು ಜಾಗೃತಗೊಳಿಸಬೇಕು. ನಿಸ್ವಾರ್ಥ ಪ್ರೀತಿಯ ಸಂದೇಶವನ್ನು ಸಾರಬೇಕು. ಮುಖ್ಯವಾಗಿ ಹಿನ್ನೆಲೆಯ ಭಾವ ಉದಾತ್ತವಾಗಿರಬೇಕು. ಪೂಜೆ ಪುನಸ್ಕಾರ ಉತ್ಸವಾದಿಗಳು ಭಕ್ತರನ್ನು ಮೆಚ್ಚಿಸುವ ಬದಲಾಗಿ ಪರಮಾತ್ಮನನ್ನು ಮೆಚ್ಚಿಸುವ ಉದ್ದೇಶದಲ್ಲಿರಬೇಕು. ಆದರೆ ಇಂದು ಸಾರ್ವಜಿನಿಕ ಆಚರಣೆಗಳು ಭಕ್ತಿ, ಶ್ರದ್ಧೆಯ ಉದ್ದೇಶದಿಂದ ಬಹಳ ದೂರದಲ್ಲಿರುತ್ತದೆ ಎಂಬುದು ಅಷ್ಟೇ ಸತ್ಯ. 

ಇತ್ತೀಚೆಗೆ ಗಣೇಶೋತ್ಸವದ ಬಗ್ಗೆ ಸ್ವಾಮೀಜಿಯೊಬ್ಬರು ಹೇಳಿದ ಮಾತು, ಅವರು ಯಾಕೆ ಹಾಗೆ ಹೇಳಿದರು? ಅದರ ತಪ್ಪು ಒಪ್ಪುಗಳು ಏನು ಎಂಬುದರ ಬಗ್ಗೆಯಲ್ಲ. ಅವರ ಚಿಂತನೆಯ ಬಗ್ಗೆ ಅದನ್ನು ವಿಮರ್ಶಿಸುವುದರ ಬಗ್ಗೆ ನನಗೆ ಆಸಕ್ತಿ ಇಲ್ಲ. ಆದರೆ ಇದೇ ಬಗೆಯ ಸಾಧ್ಯತೆಗಳು ದಟ್ಟವಾಗಿದೆ. ನಮ್ಮಲ್ಲಿ ಮೌಢ್ಯಕ್ಕೂ ಸಂಸ್ಕೃತಿಗೂ ಪರಿಧಿ ಅತ್ಯಂತ ಸೂಕ್ಷ್ಮವಾಗಿದೆ. ಒಂದು ಕಾಲದಲ್ಲಿ ಸತೀ ಪದ್ದತಿ ಎಂಬುದು ಸಂಸ್ಕೃತಿಯಾಗಿತ್ತು .  ಅದು ಮೌಢ್ಯ ಎಂದು ಅರಿತಾಗ ಅದು ಸಮಾಜದಿಂದ ದೂರವಾಗಬೇಕಾಯಿತು.  ನಾವು ಜೀವನದ ಮೌಲ್ಯಗಳನ್ನು ನಂಬಿಕೆಗಳನ್ನು ಈ ದೃಷ್ಟಿಕೋನದಿಂದಲೇ ಗಮನಿಸಬೇಕು. ಜಾತಕ ನೋಡಿ ಮದುವೆಯಾಗಬೇಕು ಸತ್ಯ. ವಿಪರ್ಯಾಸ ಎಂದರೆ ಜಾತಕ ಹೊಂದಿಕೆಯಾಗದೇ ಬ್ರಹ್ಮಚಾರಿಗಳಾಗಿ ಉಳಿದವರ ದೊಡ್ಡ ಪಟ್ಟಿಯೇ ಸಿಕ್ಕಿಬಿಡುತ್ತದೆ. ಹಾಗಂತ ಜಾತಕನೋಡುವುದು ತಪ್ಪು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ವಾಸ್ತವ ಎಂಬುದು ಇದೆಲ್ಲದಕ್ಕಿಂತ ಮೀರಿ ನಿಲ್ಲುತ್ತದೆ.  ಮುಖ್ಯವಾಗಿ ನಮ್ಮ ನಂಬಿಕೆಗಳು ಮೌಢ್ಯವನ್ನು ಆಶ್ರಯಿಸುವಂತಾಗಬಾರದು. ಸತ್ಯ ಧರ್ಮ ನ್ಯಾಯ ಪ್ರಾಮಾಣಿಕತೆಯನ್ನು ಬದಿಗಿಟ್ಟು ವ್ಯವಹರಿಸಿದಾಗ ಅದು ಮೌಢ್ಯವಾಗುತ್ತದೆ. ಕಳ್ಳನೋ ಕೊಲೆಗಾರನೋ ಅಪರಾಧವನ್ನು ಮಾಡುವುದಕ್ಕೆ ಹೊರಟಾಗ ದೇವರಿಗೆ ಹರಕೆ ಹಾಕಿ ಪ್ರಾರ್ಥನೆ ಮಾಡಿ ಹೋದರೆ ಮಾಡುವ ದುಷ್ಕೃತ್ಯ ಸಮ್ಮತವಾಗುವುದಿಲ್ಲ. ನಿಜವಾದ ಸತ್ಯ ಏನು ಎಂದು ಆತನಿಗೆ ತಿಳಿಯುವುದಿಲ್ಲ. ದೇವರ ಬಗ್ಗೆ ಆತನಿಗೆ ಮೌಢ್ಯವೇ ಆವರಿಸಿರುತ್ತದೆ. ನಮ್ಮ ಅನ್ಯಾಯ ಅಪ್ರಾಮಾಣಿಕತೆ ವಂಚನೆ ಅಪರಾಧಗಳಿಗೆ ದೇವರು ಅನುಗ್ರಹಿಸಬೇಕು ಎಂಬುದು ಮೌಢ್ಯವಲ್ಲದೇ ಬೇರೆನೂ ಅಲ್ಲ. ದೇವರಲ್ಲಿನ ದೈವತ್ವವನ್ನು ಗೇಲಿ ಮಾಡುವ ಪ್ರವೃತ್ತಿ ಇದು. ಇದು ಪರಿಶುದ್ದ ಭಕ್ತಿಯಲ್ಲ. ಯಾವುದೆ ಪಾಪ ಕರ್ಮಗಳಿಗೆ ಅಪರಾಧಗಳಿಗೆ ಕ್ಷಮೆ ಎಂಬುದು ಇರುವುದಿಲ್ಲ. ಆಗಿ ಹೋದ ಅಪರಾಧಕ್ಕೆ ಪಶ್ಚಾತ್ತಾಪ ಪರಿಹಾರ ಎಂಬುದು ಕೇವಲ ನಮ್ಮ ನಂಬಿಕೆ. ಆದರೆ ಸತ್ಯ ಅದಲ್ಲ. ಅಪರಾಧ ಆದ ನಂತರ ಅದು ಅಪರಾಧವೇ. ಅದು ಸತ್ಕಾರ್ಯವಾಗುವುದಕ್ಕೆ ಅದನ್ನು ನಾಶ ಮಾಡುವುದಕ್ಕೆ ಸಾಧ್ಯವಿಲ್ಲ. 

ಈಗ ಗಣೇಶ ಎಂದ ತಕ್ಷಣ ಅದು ದೇವರಲ್ಲದೇ ಆಗುವುದಿಲ್ಲ. ಅಥವಾ ದೇವರು ಎಂಬುವುದು ಗಣೇಶ  ಎನ್ನುವುದಕ್ಕೆ ಅಷ್ಟೇ ಸೀಮಿತವಾಗುವುದಿಲ್ಲ. ರಾಮ ಶಿವ ಸುಬ್ರಹ್ಮಣ್ಯ ಕೃಷ್ಣ ಹೆಚ್ಚೇಕೆ ಅಲ್ಲಾ ಅಥವಾ ಏಸು ಎಲ್ಲವೂ ಒಂದೇ ಎನ್ನುವ ತತ್ವದಲ್ಲಿ ಹೆಸರಿಗೆ ಮಹತ್ವವೇ ಇರುವುದಿಲ್ಲ. ಹಾಗಿರುವಾಗ ಗಣೇಶ ಎನ್ನುವುದು ದೇವರಲ್ಲ ಎನ್ನುವುದು ಹೇಗೆ ಸಾಧ್ಯ?  ಅಕ್ಕಿಯನ್ನು ಅನ್ಯ ಭಾಷೆಯಲ್ಲಿ  ಚಾವಲ್ ರೈಸ್ ಎನ್ನುವ ಹಾಗೆ ಗಣೇಶ. ಅದೊಂದು ಹೆಸರಿನ ರೂಪ. ದೇವರನ್ನು ನಂಬುವಾಗ ಅಲ್ಲಿ ಆಸ್ತಿಕ ನಾಸ್ತಿಕ ಎನ್ನುವುದಷ್ಟೇ ಮುಖ್ಯವಾಗುತ್ತದೆ. 

ಹಿಂದೂ ಸಂಸ್ಕೃತಿಯಲ್ಲಿ ದೇವರು ಆರಾಧನೆ ಎಂಬುದರ ವ್ಯಾಪ್ತಿ ಅದರ ರೂಪ ಬಹಳ ವಿಶಾಲವಾಗಿದೆ. ಅತ್ಯಂತ ಸರಳವಾಗಿಯೂ ಅತ್ಯಂತ ಆಡಂಬರದಲ್ಲಿಯೂ ಇಲ್ಲಿ ಆರಾಧನೆ ಇರುತ್ತದೆ.  ಇಲ್ಲಿ ಭಾವನೆಗಳಿಗೆ ಮಾತ್ರ ಮಹತ್ವ. ದೇವರ ಪೂಜೆ ಎಂಬುದರಲ್ಲಿ ಕ್ರಿಯೆಯೂ ವಿಭಿನ್ನವಾಗಿ ಇರುವಾಗ ಹೆಸರು ಎಂಬುದು ಗೌಣವಾಗಿರುತ್ತದೆ. ಹಲವು ಕಡೆ ದೇವರು ಎಂದು ಅರಿತಾಗ ಅಲ್ಲಿ ಒಳಗೆ ಯಾವ ದೇವರು ಎಂದು ಯೋಚಿಸುವುದಿಲ್ಲ. ಅದಕ್ಕೆ ನಮಸ್ಕರಿಸುವುದು ಮಾತ್ರ ಮಹತ್ವವಾಗಿರುತ್ತದೆ. ದೇವರ ರೂಪ ಭಾವ ಹೆಸರು ಎಲ್ಲವೂ ಮನುಷ್ಯ ಕಲ್ಪನೆಗೆ ಸೀಮಿತ. ಕಾಂತಾರ ಸಿನಿಮಾದಲ್ಲಿ ದೈವವನ್ನು ನೋಡುವಾಗ ಅದು ಕೇವಲ ದೈವ ಬೂತವಾಗಿ ಕಾಣುತ್ತದೆ ಹೊರತು ಅಲ್ಲಿ ಹೆಸರಿನ ಬಗ್ಗೆ ಯೋಚಿಸುವುದಿಲ್ಲ.  ಆದರೆ ದೇವರು ಹೆಸರಿಗೆ  ಅಷ್ಟಕ್ಕೇ ಸೀಮಿತವಾದರೆ ಅದು ದೇವರಾಗುವುದಿಲ್ಲ. ಕಲ್ಪನಾತೀತ ಭಾವನಾತೀತ ಎಂಬುದು ದೇವರು. ಹಾಗಿರುವಾಗ ಇಲ್ಲಿ ಹೆಸರು ಎಂಬುದು ಗೌಣವಾಗಿರುತ್ತದೆ. ಯಾವುದೂ ಇಲ್ಲದೆಯೂ ದೇವರನ್ನು ಪೂಜಿಸುವುದಕ್ಕೆ ಭಜಿಸುವುದಕ್ಕೆ ಅವಕಾಶ ನಮ್ಮ ಸಂಸ್ಕೃತಿಯಲ್ಲಿದೆ. ಕೇವಲ ಬೆರಳ ತುದಿಯಲ್ಲಿ ಹಿಡಿದ ಅಕ್ಷತೆಯನ್ನು ಸಮರ್ಪಿಸಿ ಸರ್ವ ಸಮರ್ಪಣಾ ಭಾವದಿಂದ ಆರಾಧಿಸಿ ತೃಪ್ತರಾಗುವ ಅವಕಾಶವಿದೆ. ಒಂದು ತುಳಸೀ ದಳ ಅರ್ಪಿಸಿ ಶ್ರೀಕೃಷ್ಣನನ್ನು ಒಲಿಸಿಕೊಂಡ ಕಥೆ ಪುರಾಣದಲ್ಲಿದೆ. ನಾವು ಹೊರಾವರಣದಲ್ಲಿ ಏನು ಮುಖ್ಯ ಎಂದು ತಿಳಿದಿರುತ್ತೇವೆಯೋ   ದೇವರಿಗೆ ಅದು ಯಾವುದೂ ಮುಖ್ಯವಲ್ಲ. ಅದು ನಮ್ಮ ಭಾವನೆಗಳಿ ಮಾತ್ರ ಅವಶ್ಯಕವಾಗಿರುತ್ತದೆ.  ನಾವು ಹೆಸರಿಲ್ಲದೇ ಕೇವಲ ಓಂ ಕಾರದಿಂದ ದೇವರನ್ನು ಕಾಣುವಾಗ ಯಾವ ದೇವರನ್ನೂ ಕಲ್ಪಿಸಬಹುದು. ಓಂಕಾರದಲ್ಲೇ ಎಲ್ಲವನ್ನು ಕಾಣುವಾಗ ಗಣೇಶ ಕೃಷ್ಣ ದುರ್ಗೆ ಎಲ್ಲವು ಒಂದೇ ಆಗಿ. ದೇವರು ಹೆಣ್ಣೂ ಅಗಬಹುದು ಗಂಡು ಅಗಬಹುದು. ಅದು ಕೇವಲ ಮಾನಸಿಕ ತೃಪ್ತಿ. 

ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಗಮನಿಸಬೇಕು. ಋಷಿಗಳು ತಪಸ್ಸು ಮಾಡುವುದಕ್ಕೆ ಯಾಕೆ ಕಾಡನ್ನು ಆಯ್ಕೆ ಮಾಡುತ್ತಿದ್ದರು?  ಕೇವಲ ಅವರ ಏಕಾಗ್ರತೆಗಾಗಿ ಅಲ್ಲ. ಎಲ್ಲವನ್ನೂ ಬಿಟ್ಟು ಕೇವಲ ಮನಸ್ಸನ್ನು ಅರ್ಪಿಸುವುದಕ್ಕೆ ಕಾಡು ಪ್ರಶಸ್ತ. ಅವರ ತಪಸ್ಸಿನಿಂದ ಉಳಿದವರಿಗೆ ತೊಂದರೆಯಾಗುವುದಿಲ್ಲ. ಎಲ್ಲೋ ಒಂದು ಕಾಡಿನ ಭಾಗದಲ್ಲಿ ಅಲ್ಲಿರುವ ಪ್ರಾಣಿ ಪಕ್ಷಿ ಗಿಡ ಮರಗಳಿಗೂ ತೊಂದರೆಯಾಗದಂತೆ ಅವರು ತಪಸ್ಸು ಮಾಡುವ ಉದ್ದೇಶ ಸ್ಪಷ್ಟ ಯಾರಿಗೂ ತೊಂದರೆ ಕೊಡುವುದರಿಂದ ದೈವಾರಾಧನೆ ಸಾಧ್ಯವಾಗುವುದಿಲ್ಲ. ಯಾರಿಗೋ ತೊಂದರೆ ಕೊಟ್ಟು ಅವನ ಸಂಪತ್ತನ್ನು ಸೂರೆ ಮಾಡಿ ನಾವು ದೇವರನ್ನು ಪೂಜಿಸುತ್ತೇವೆ ಎಂದರೆ ಅದು ಮೌಢ್ಯದ ಭಕ್ತಿಯಾಗುತ್ತದೆ. ಸರ್ವೇಷಾಮ ಅವಿರೋಧೇನ ಎಂದು ಸಂಕಲ್ಪ ಮಾಡುವಾಗ ಪ್ರತಿಯೊಬ್ಬರ ಕ್ಷೇಮ ಸಮ್ಮತಿ ಅದಕ್ಕೆ ಸಂಪೂರ್ಣ ವಿನಿಯೋಗವಾಗಬೇಕು. ಅದಿಲ್ಲವಾದರೆ ಅದು ದೈವಾರಾಧನೆಯಾಗುವುದಿಲ್ಲ. 

ನಮ್ಮ ಮನಸ್ಸಿನ ಅಹಂಕಾರಗಳ ವಿಕಾರವನ್ನು ನಿಯಂತ್ರಿಸುವಾಗ  ಪರಿಪೂರ್ಣ ಪರಮಾತ್ಮ ಸ್ವರೂಪ ಅರಿವಿಗೆ ಬರುತ್ತದೆ. ಹಾಗಾಗಿ ಯಾರೋ ಒಬ್ಬರು ಗಣೇಶ ಕಾಲ್ಪನಿಕ ಎಂದು ಹೇಳುವಾಗ ಪರಮಾತ್ಮ ಸ್ವರೂಪ ಅರಿವಿದ್ದವನಿಗೆ ಏನೂ ಅನಿಸುವುದಿಲ್ಲ. ಯಾಕೆಂದರೆ ಅವನ ಮನಸ್ಸಿನಲ್ಲಿ ಗಣೇಶ ಎಂಬುದು ಕೇವಲ ಹೆಸರು ಮಾತ್ರ ಅದರಿಂದ ಆಚೆಗೆ ಪರಮಾತ್ಮ ಸ್ವರೂಪವಿದೆ. ಆತನಲ್ಲಿದ್ದ ಭಕ್ತಿ ಅದನ್ನು ತೋರಿಸುತ್ತಾ ಇರುತ್ತದೆ.  ದೇವರು ಪ್ರಸನ್ನನಾಗುವುದು, ಅಥವಾ ದೇವರು ದೇವರಾಗಿ ಉಳಿಯುವುದು ಭಕ್ತಿ  ಇದ್ದರೆ ಮಾತ್ರ. ಹಾಗಾಗಿ ಇಲ್ಲಿ ಎಲ್ಲದಕ್ಕೂ ಮೂಲವಾಗುವುದು ದೇವರನ್ನು ಏನು ಕರೆಯುವುದು ಎನ್ನುವುದಕ್ಕಿಂತಲೂ ಭಕ್ತಿಯೇ ಮುಖ್ಯವಾಗುತ್ತದೆ. ಭಕ್ತಿ ಇಲ್ಲದೇ ಇದ್ದರೆ ಉಳಿದವುಗಳಿಗೆ ಯಾವ ಪ್ರಾಶಸ್ತ್ಯವೂ ಇರುವುದಿಲ್ಲ. ಪುರಾಣದ ಬಗ್ಗೆ ಅರಿವಿಲ್ಲದವನಿಗೆ ಪುರಾಣದ ವ್ಯಕ್ತಿ ಪಾತ್ರಗಳು ಕೇವಲ ಹೆಸರಿಗಷ್ಟೇ ಸೀಮಿತವಾಗುತ್ತದೆ. ಹೆಸರು ಎಂಬುದು ಭಕ್ತಿಯ ಮುಂದು ಗೌಣವಾಗುತ್ತದೆ. 

ಗಣೇಶೋತ್ಸವವನ್ನು ಸಂಸ್ಕೃತಿಗೆ ತಳುಕು ಹಾಕಲಾಗುತ್ತದೆ. ಆದರೆ ಗಣೇಶೋತ್ಸವ ಹುಟ್ಟಿಕೊಂಡಿರುವುದು ಸಂಸ್ಕೃತಿಯಿಂದಲೇ ಹೊರತು ಅದುವೇ ಸಂಸ್ಕೃತಿಯಾಗುವುದಕ್ಕೆ ಸಾಧ್ಯವಿಲ್ಲ. ಅದಲ್ಲದೇ ಇದ್ದ ಸಂಸ್ಕೃತಿಗಳು ಬೇಕಾದಷ್ಟು ಇವೆ ಅದು ಎಷ್ಟು ಗೌರವಿಸಲ್ಪಟ್ಟಿದೆ ಎಂಬುದು ಮುಖ್ಯವಾಗುತ್ತದೆ. ಅದರಂತೆ ದೀಪಾವಳಿಗೆ ಪಟಾಕಿಯ ಆವಶ್ಯಕತೆ ಎಷ್ಟು ಎಂಬುದು ಕೂಡ ಪ್ರಶ್ನೆಯಾಗುತ್ತದೆ. ಅದನ್ನು ಬೇಡ ಎಂದರೆ ಸಂಸ್ಕೃತಿಗೆ ವಿರೋಧವಾಗುತ್ತದೆ ಎಂಬುದು ಸರಿಯಲ್ಲ. ದೀಪಾವಳಿಯಲ್ಲೇ ಇರುವ ಸಂಸ್ಕೃತಿ ನಮಗೆ ಬೇಡವಾಗಿ ಕೇವಲ ಪಟಾಕಿಯಷ್ಟೇ ದೀಪಾವಳಿಯಾದರೆ ಅದು ಸಂಸ್ಕೃತಿ ಹೇಗಾಗುತ್ತದೆ?  ನಮ್ಮ ರಸ್ತೆಯಲ್ಲಿ ಸುಮಾರು ಐವತ್ತು ಮನೆಗಳಿವೆ. ಅದರಲ್ಲಿ ಹೆಚ್ಚಿನ ಎಲ್ಲ ಮನೆಗಳು ಪಟಾಕಿ ಉರಿಸಿದರೆ, ಮನೆ ಎದುರು ದೀಪ ಹಚ್ಚಿಡುವ ಮನೆಗಳು ಒಂದೋ ಎರಡೋ  ಮನೆಗಳ ಮುಂದೆ ದೀಪ ಹಚ್ಚಿಡುತ್ತಾರೆ. ದೀಪಾವಳಿಯಲ್ಲಿ ಮುಖ್ಯವಾಗಿ ಹಚ್ಚಿಡಬೇಕಾದ ದೀಪಗಳು ಬೇಡ. ಪರಮಾತ್ಮನ ಭಜನೆ ಸ್ಮರಣೆಗಳು ಬೇಡ. ಇವುಗಳೆಲ್ಲ ಸಂಸ್ಕೃತಿಯ ಅಂಗಗಳು. ಅದು ಬೇಡದೆ ಕೇವಲ ಪಟಾಕಿ ಬೇಕು ಎನ್ನುವಾಗ ಅದರಿಂದಾಗುವ ದುಷ್ಪರಿಣಾಮದ ಬಗ್ಗೆ ಯೋಚಿಸುವುದಿಲ್ಲ. ಪಟಾಕಿ ಬೇಡವೇ ಬೇಡ ಎಂದುಕೊಂಡು ಮನೆಯೊಳಗೆ ಕುಳಿತ ಅಮಾಯಕನ ಕಣ್ಣು ತೆಗೆದ ಪಟಾಕಿ ಬೇಕು ಎಂದರೆ ಶೋಚನೀಯ ಎನ್ನಬೇಕು. ಪಟಾಕಿಯ ಬಗ್ಗೆ ಪುಂಗಿ ಊದುವಾಗ ಕಣ್ಣು ಕಾಣುವುದಿದ್ದರೆ ಒಂದು ಸಲ ಕಣ್ಣಿನ ಆಸ್ಪತ್ರೆಗಳಿಗೆ ಭೇಟಿ ಕೊಡಿ. ಪಟಾಕಿಯಿಂದ ಕಣ್ಣು ಕಳೆದ ಮನೆಯಯವರನ್ನು ನೋಡಬೇಕು.  ಗಣೇಶೋತ್ಸವದಲ್ಲು ಹೀಗೆ ಬೇಡದೇ ಇರುವ ಅಂಶಗಳು ಸಾಕಷ್ಟು ಇವೆ. ಹಣ ಸಂಗ್ರಹಿಸುವಾಗ ದರೋಡೆ ಮಾಡಿದಂತೆ ಕಿತ್ತುಕೊಳ್ಳುವುದನ್ನೂ ಕಾಣಬಹುದು. ಇನ್ನು ಅಲ್ಲಿ ಉತ್ಸವದ ಹೆಸರಲ್ಲಿ ಆಗುವ ಅಪಸವ್ಯಗಳನ್ನು ನೋಡುತ್ತಾ ಹೋದರೆ ಅದು ಬೇಡವೇ ಬೇಡ ಎಂಬಂತಹ ಸನ್ನಿವೇಶವನ್ನು ಕಾಣಬಹುದು. ದೇವರ ಯಾವುದೇ ಕ್ರಿಯೆಗಳು ಯಾರಿಗೂ ತೊಂದರೆ ಕೊಡದೇ ಆಚರಿಸಲ್ಪಡಬೇಕು. ಹಾಗಿದ್ದರೆ ಮಾತ್ರ ಅದು ದೇವರ ಪೂಜೆಯಾಗುತ್ತದೆ.  

ನಮ್ಮ ರಸ್ತೆಯಲ್ಲಿ ಈಬಾರಿ ಮೂರು ಸಲ ಗಣೇಶ ಇಟ್ಟು ಐದಾರು ದಿನ ಪೂಜೆ ಮಾಡಿದ್ದಾರೆ. ಇನ್ನು ಪೂಜೆಯ ಪವಿತ್ರತೆ ನೋಡಿದರೆ ಗಣೇಶ ಇಷ್ಟು ಅಗ್ಗವಾಗಿ ಹೋದನೇ ಎಂದನಿಸುತ್ತದೆ. ನಮ್ಮದು ಒಂದು ಕಡೆ ಮಾತ್ರ ತೆರೆದುಕೊಂಡ ಏಕ ಮುಖ ರಸ್ತೆ. ನಡುವಿನಲ್ಲಿ ಚಪ್ಪರ ಹಾಕಿ ರಸ್ತೆ ತಡೆ ಮಾಡಿ ಪೂಜೆ ಮಾಡುವಾಗ ಒಂದು ಬದಿಯ ಒಂದಷ್ಟು ಮನೆಮಂದಿಗಳು ಪಡುವ ಕಷ್ಟ ಬೇರೆಯೇ ಆಗಿರುತ್ತದೆ. ಮನೆಯ ಯಾರೋ ಒಬ್ಬನಿಗೆ ಹೃದಯಾ ಘಾತವೋ ಮತ್ತೊಂದೋ ಆಗಿ ತುರ್ತು ಚಿಕಿತ್ಸೆ ಬೇಕು ಎನ್ನುವಾಗ ಮನೆ ಬಾಗಿಲಿಗೆ ವಾಹನವೇ ಬಾರದಂತಹ ಸ್ಥಿತಿ ಬಂದರೆ ಗಣೇಶನೇ ಕಾಪಾಡುತ್ತಾನೆ ಎಂದು ಕುಳಿತರೆ ಅದು ಮೌಢ್ಯವಾಗುತ್ತದೆ. 

    ಹಲವು ಕಡೆಯಲ್ಲಿ ಗಣೇಶೋತ್ಸವ ಮಾಡಿ ಗಣೇಶನ ಮೌಲ್ಯವನ್ನು ನಾವು ಕಳೆಯುತ್ತಿದ್ದೇವೆ ಎಂದನಿಸುತ್ತದೆ. ಭಕ್ತಿ ಇದ್ದರೆ ಮಾತ್ರ ಸಾಲದು ಭಕ್ತಿಯ ಸ್ವರೂಪವೂ ಅತೀ ಮುಖ್ಯ.  ಗರ್ಭದ ಗುಡಿಯ ಒಳಗೆ ಸರ್ಪ ಬಂದು ಕುಳಿತರೆ ಜೀವ ಭಯವೇ ಪ್ರಧಾನವಾಗುತ್ತದೆ. ಅಲ್ಲಿ ಸಂಸ್ಕೃತಿಗೆ ಯಾವ ಬೆಲೆಯೂ ಇರುವುದಿಲ್ಲ. ಸಂಸ್ಕೃತಿ ಎಂಬುದು ಉತ್ತಮ ಜೀವನವನ್ನು ಬಿಂಬಿಸುತ್ತದೆ. ಸತ್ಯ ಪ್ರಾಮಾಣಿಕತೆ ಮತ್ತು ಪಾವಿತ್ರ್ಯತೆ ಇದು ಇಲ್ಲದೇ ಇದ್ದರೆ ಯಾವ ಸಂಸ್ಕೃತಿಯೂ ಗೌರವಿಸಲ್ಪಡುವುದಿಲ್ಲ.

No comments:

Post a Comment