ಮೊನ್ನೆ ಬೆಂಗಳೂರಿನ ವಿಧಾನ ಸೌಧದ ಬಳಿಯ ಎಂ ಎಸ್ ಕಟ್ಟಡ ಸಂಕೀರ್ಣಕ್ಕೆ ಯಾವುದೋ ಕೆಲಸದ ನಿಮಿತ್ತ ಹೋಗಿದ್ದೆ. ದೊಡ್ಡ ದೊಡ್ಡ ಅಧಿಕಾರಿಗಳ ಸರಕಾರೀ ಇಲಾಖೆಗಳು ಇರುವ ಕರ್ನಾಟಕ ಸರಕಾರದ ಕಟ್ಟಡವಲ್ಲವೇ? ಯಾವಾಗ ನೋಡಿದರೂ ಜನ ಸಂದಣಿ. ಹಾಗೆ ಲಿಫ್ಟ್ ನಲ್ಲಿ ಹೋಗುವಾಗ ವಯಸಾದ ವ್ಯಕ್ತಿ ಸಿಕ್ಕಿದರು. ಬಹಳ ಸಾಧು ಸ್ವಭಾವದಂತೆ ಕಂಡರು. ನಾನು ಹೋಗುವ ಕಛೇರಿ ಯಾವ ಮಹಡಿಯಲ್ಲಿದೆ ಎಂದು ತಿಳಿದಿರಲಿಲ್ಲ. ಅವರೊಬ್ಬರೇ ಇರುವುದರಿಂದ ಅವರಲ್ಲಿ ಕೇಳಿದೆ. ಅವರು ಈ ಮಹಡಿಯಲ್ಲಿ ಪಕ್ಕದ ಕಟ್ಟಡದ ನಾಲ್ಕನೇ ಮಹಡಿಯಲ್ಲಿದೆ. ಇಲ್ಲಿಂದ ಒಳಗಿನಿಂದಲೇ ಹೋಗುವುದಕ್ಕೆ ಸಾಧ್ಯವಿದೆ ಅಂತ ಲಿಫ್ಟ್ ಇಳಿದ ನಂತರ ಜತೆಗೆ ಬಂದು ತೋರಿಸಿಕೊಟ್ಟರು. ಆ ಕಟ್ಟಡ ನನಗೆ ಎನೂ ಹೊಸತಲ್ಲ. ಹತ್ತು ಹಲವು ಸಲ ಹೋಗಿದ್ದರೂ ಕೆಲವು ಕಛೇರಿಗಳು ಹುಡುಕುವುದರಲ್ಲೇ ಸುಸ್ತಾಗಿ ಬಿಡುತ್ತದೆ. ಕೆಳ ಅಂತಸ್ತಿನಲ್ಲಿ ಕಣ್ಣು ಕಾಣದವರೊಬ್ಬರು ಕುಳಿತಿರುತ್ತಾರೆ. ಅವರಲ್ಲಿ ಕಛೇರಿ ಹೆಸರು ಹೇಳಿದರೆ ಅದು ಯಾವ ಮಹಡಿಯಲ್ಲಿ ಎಷ್ಟನೇ ನಂಬರ್ ಅಂತ ಹೇಳಿಬಿಡುತ್ತಾರೆ. ನಾವು ಕಣ್ಣು ಕಾಣುವವರಿಗಿಂತಲೂ ಕಣ್ಣು ಕಾಣದವರು ಉತ್ತಮ ಅಂತ ಹಲವು ಸಲ ಅಂದುಕೊಂಡಿದ್ದೆ. ಆದಿನ ಅಲ್ಲಿ ಯಾರೂ ಇರಲಿಲ್ಲ. ಹಾಗಾಗಿ ಕಛೇರಿ ಹುಡುಕುವುದು ಕಷ್ಟವಾಗಿತ್ತು.
ನನ್ನ ಕೆಲಸ ಮುಗಿಸಿ ಕಛೇರಿಯಿಂದ ಹೊರಬರುವಾಗ ಅದೇ ವ್ಯಕ್ತಿ ಸಿಕ್ಕಿದರು. ನಗುತ್ತಾ ಸಿಕ್ಕಿತಾ ಕೆಲಸ ಆಯಿತ ಅಂತ ಕುಶಲ ವಿಚಾರಿಸಿದರು. ವಾಸ್ತವದಲ್ಲಿ ಬೆಂಗಳೂರಲ್ಲಿ ಹೀಗೆ ಕೇಳುವುದು ಬಹಳ ಅಪರೂಪ. ತಾವಾಯಿತು ತಮ್ಮ ಪಾಡಾಯಿತು ಅಂತ ಇರುವವರೆ ಹೆಚ್ಚು. ಪಕ್ಕದ ಮನೆಯಲ್ಲಿ ಯಾರಿದ್ದಾರೆ? ಅಲ್ಲಿ ಏನಾಗುತ್ತಿದೆ? ಎಂದು ಈ ಮನೆಯಲ್ಲಿದ್ದವನಿಗೆ ತಿಳಿದಿರುವುದಿಲ್ಲ ಮಾತ್ರವಲ್ಲ, ಆತನಿಗೆ ಅದರ ಅವಶ್ಯಕತೆಯೇ ಇರುವುದಿಲ್ಲ. ಹಾಗಿರುವಾಗ ಈ ವ್ಯಕ್ತಿ ಬಂದು ವಿಚಾರಿಸುತ್ತಾರೆ ಎಂದರೆ ಬೆಂಗಳೂರಿನವರು ಆಗಿರಲಾರದು ಎಂದು ನನಗನಿಸಿತು. ಅವರು ನನ್ನ ಜತೆಯಲ್ಲೇ ಒಂದಷ್ಟು ದೂರ ಬಂದರು. ನಾನು ಬಂದ ಕೆಲಸದ ಬಗ್ಗೆ ವಿಚಾರಿಸಿದರು. ಹೀಗೆ ಲೋಕಾಭಿರಾಮ ಮಾತನಾಡುತ್ತಾ ಅವರ ಬಗ್ಗೆ ಕೇಳಿದೆ. ಅವರು ಭದ್ರಾವತಿಯಿಂದ ಬಂದಿದ್ದರು. ಅವರ ನಿವೃತ್ತಿ ವೇತನ (ಪೆನ್ಶನ್) ದ ಏನೋ ಸಮಸ್ಯೆ ಇತ್ತು. ನಾನು ನಿಮ್ಮ ಕೆಲಸ ಆಯಿತಾ ಎಂದು ಸಹಜವಾಗಿ ಕೇಳಿದೆ. ಆಗ ಅವರು ಅವರ ಚರಿತ್ರೆಯನ್ನೇ ಬಿಚ್ಚಿಟ್ಟರು.
ಅವರು ಲೋಕೋಪಯೋಗಿ ಇಲಾಖೆಯಲ್ಲಿ ಗುಮಾಸ್ತರಾಗಿದ್ದರು. ಇದೇ ಬೆಂಗಳೂರಲ್ಲಿ ಒಂದಷ್ಟು ಸಮಯ ವೃತ್ತಿ ಮಾಡಿದ್ದರು. ಆದರೆ ಅವರಿಗೆ ಸಿಗಬೇಕಾದ ಪೆನ್ಶನ್ ಹಲವು ಕಾರಣಗಳಿಂದ ತಡೆ ಹಿಡಿಯಲ್ಪಟ್ಟಿತ್ತು. ಹಲವಾರು ಸಲ ಬೆಂಗಳೂರಿಗೆ ಬಂದರೂ ಪ್ರಯೋಜವಾಗಲಿಲ್ಲ. ಈ ವಯಸ್ಸಿನಲ್ಲಿ ದೂರದ ಊರಿನಿಂದ ಬಂದು ಹೋಗುವುದು ಬಹಳ ಕಷ್ಟವಾಗಿತ್ತು. ಇಷ್ಟೆಲ್ಲ ಮಾತನಾಡಿದ ಮೇಲೆ ಹೇಳಿದರು..".ನಾನು ಬ್ರಾಹ್ಮಣ. ವೃತ್ತಿಯಲ್ಲಿರುವಾಗಲೇ ಪ್ರಮೋಷನ್ ಇನ್ಕ್ರಿಮೆಂಟ್ ಸಿಬಗೇಕಾದದ್ದು ಸಿಗಲಿಲ್ಲ. ನನ್ನಿಂದ ನಂತರ ಸೇರಿದವರು ಮೇಲೆ ಮೇಲೆ ಹೋಗಿ ಆಫೀಸರ್ ಕೂಡ ಆದರೂ ನಾನು ಮಾತ್ರ ಗುಮಾಸ್ತನಾಗಿಯೇ ಇದ್ದೆ. ಈಗಲು ಅಷ್ಟೇ...ಪೆನ್ಷನ್ ಗೋಸ್ಕರ ಅಲೆಯುವಂತಹ ಸ್ಥಿತಿ. ಹೇಳಿಕೊಳ್ಳುವಂತಹ ಕಾರಣ ಯಾವುದೂ ಇಲ್ಲ. ಆದರೂ ಅನ್ಯಾಯ ಆಗುತ್ತಾ ಇದೆ. ಬ್ರಾಹ್ಮಣ್ಯ ಒಂದು ಶಾಪ ಅಂತ ಅನ್ನಿಸಿ ತುಂಬ ಕಾಲ ಆಯಿತು."
ನಾನು ಬ್ರಾಹ್ಮಣ ಅಂತ ನನ್ನ ಮುಖನೋಡಿಯೇ ಅವರು ಇದನ್ನು ಹೇಳಿದರು. ಅವರ ಕೊನೆಯ ಮಾತು ನನಗೇನೂ ಹೊಸತಲ್ಲ. ಹಲವು ಕಡೆ ಇದೇ ರೀತಿಯ ಮಾತುಗಳನ್ನು ಕೇಳುತ್ತಿದ್ದೇನೆ. ಅದು ವಿಶೇಷವೇನೂ ಅಲ್ಲ. ನನ್ನ ಮಗಳು ಮೊನ್ನೆ ಮೊನ್ನೆ ಕಾಲೇಜು ಸೇರಬೇಕಾದಾಗ ಇದೇ ಮಾತನ್ನು ಹೇಳಿದ್ದಳು. ಶೇಕಡಾ ತೊಂಭತ್ತು ಅಂಕಗಳನ್ನು ಪಡೆದು ತೇರ್ಗಡೆಯಾದ ಅವಳು ಕಾಲೇಜ್ ಸೇರಬೇಕಾದರೆ, ಶೇಕಡಾ ನಲ್ವತ್ತು ಅಂಕ ಪಡೆದ ಆಕೆಯ ಸಹಪಾಠಿ ಸುಲಭದಲ್ಲೆ ಯಾವುದೇ ವೆಚ್ಚ ಇಲ್ಲದೇ ಕಾಲೇಜಿಗೆ ಸೇರಿದ್ದಳು. ಹಾಗಾಗಿ ಬ್ರಾಹ್ಮಣ ಎಂಬುದರ ಅರ್ಥ ಬೇರೆಯೇ ಆಗಿ ಹೋಗಿದೆ.
ಅವರಲ್ಲಿ ಕೇಳಿದೆ ಊಟ ಆಯಿತ ಅಂತ ವಿಚಾರಿಸಿದೆ. ಇಲ್ಲ ಇನ್ನು ಮಾಡಬೇಕು. ಬ್ರಾಹ್ಮಣರಲ್ವ...ಬನ್ನಿ ಮನೆಗೆ ಊಟ ಮಾಡೋಣ ಅಂತ ಕರೆದೆ. ಅವರು ನಯವಾಗಿ ನಿರಾಕರಿಸಿದರು. ಅವರು ಮತ್ತೆ ಮುಂದುವರೆದು ಹೇಳಿದರು, " ಕೆಲಸದಲ್ಲಿರುವವರೆಗೆ ಸಂಬಳ ಒಂದು ಬರುತ್ತದೆ, ಅದರಿಂದ ಜೀವನ ಒಂದು ಆಯಿತು ಎನ್ನುವುದು ಬಿಟ್ಟರೆ ಯಾವ ನೆಮ್ಮದಿಯೂ ಸಿಗಲಿಲ್ಲ. ಈಗ ಕೆಲಸ ಬಿಟ್ಟಮೇಲೂ ಅದೇ ಅವಸ್ಥೆ. ಬ್ರಾಹ್ಮಣ್ಯ ಒಂದು ಶಾಪ"
ನಾನು ಇನ್ನೂ ಮುಂದೆ ಹೋಗಿ ಹೇಳಿದೆ, "ಬ್ರಹ್ಮ ಎಂಬುದರ ಅರ್ಥ ತಿಳಿಯದೇ ಇರುವಲ್ಲಿ ಬ್ರಾಹ್ಮಣನಾಗಿರುವುದೇ ಅಪರಾಧ." ಮದ್ಯ ವ್ಯಸನಿಗಳ ನಡುವೆ ಮದ್ಯ ಮುಟ್ಟದವನು ಇದ್ದರೆ ಹೇಗೆ, ಹಾಗೆ. ಬಹಳ ವಿಶಾಲವಾದ ಅರ್ಥದಲ್ಲಿ ನಾನು ಹೇಳಿದ್ದೆ. ಆದರೆ ಅವರು ಅದನ್ನು ಹೇಗೆ ಸ್ವೀಕರಿಸಿಕೊಂಡರೋ ನನಗೆ ತಿಳಿಯದು. ಯಾಕೆಂದರೆ ಇಂತಹ ಗಹನ ಅರ್ಥದ ಮಾತುಗಳು ಎಲ್ಲರಿಗೂ ಅರ್ಥವಾಗುವುದಿಲ್ಲ. ಯಾಕೆಂದರೆ ಬ್ರಹ್ಮ ಶಬ್ದ ಅನರ್ಥವಾಗಿ ಯಾವುದೋ ಬಗೆಯಲ್ಲಿ ಸೀಮಿತ ವಾಗಿ ಹೋಗಿದೆ. ಬ್ರಾಹ್ಮಣರ ನಡುವೆ ಕೂಡ ನಾನು ಹೇಳಿದ ಮಾತು ಅನ್ವಯವಾಗುತ್ತದೆ ಎಂದು ಅವರಿಗೆ ಅರಿವಾಯಿತೊ ಇಲ್ಲವೋ ಗೊತ್ತಿಲ್ಲ. ನಮ್ಮಲ್ಲಿ ಒಂದು ಪ್ರವೃತ್ತಿ ಇದೆ, ಗಹನವಾದ ವಿಚಾರ ಪರೋಕ್ಷವಾಗಿ ಹೇಳೀದರೆ ನಮಗಲ್ಲ ಎಂದು ತಿಳಿಯುವ ಜಾಣರಿದ್ದಾರೆ. ಬ್ರಹ್ಮ ಇದರ ಗಂಭೀರತೆ ಅರಿವಾಗಬೇಕಾದರೆ ಅದಷ್ಟು ಸುಲಭ ಸಾಧ್ಯವಲ್ಲ. ಬ್ರಾಹ್ಮಣ ಒಂದು ಶುದ್ದ ಸಂಸ್ಕಾರ ಎಂದು ತಿಳಿಯುವಾಗ ಜೀವನವೇ ಕಳೆದು ಹೋಗಿರುತ್ತದೆ. ಈ ನಡುವೇ ನಾವು ಅದನ್ನು ತೀರ ಲೌಕಿಕವಾಗಿ ಅರ್ಥ ಮಾಡಿಕೊಳ್ಳುತ್ತಿದ್ದೇವೆ. ಪರಸ್ಪರ ಸಂಘರ್ಷಕ್ಕೆ ಇಳಿದು ಬಿಡುತ್ತೇವೆ. ಮುಂದೆ ಹೋಗುವ ಭರದಲ್ಲಿ ನಾವು ಏನನ್ನು ಹಿಂದಕ್ಕೆ ಹಾಕುತ್ತಿದ್ದೇವೆ ಎಂದು ಅರಿವಿರುವುದಿಲ್ಲ. ಬ್ರಾಹ್ಮಣ್ಯ ಆಗ ಒಂದು ಶಾಪವಾಗಿ ಕಾಣುತ್ತದೆ.
No comments:
Post a Comment