ಕೆಸರಿದ್ದಲ್ಲಿ ತುಳಿದು ನೀರು ಸಿಕ್ಕಲ್ಲಿ ತೊಳಿಯುವುದು ಎಂಬ ಗಾದೆ ಮಾತಿದೆ. ತಿಳಿದೋ ತಿಳಿಯದೆಯೋ ಕೆಸರಿದ್ದಲ್ಲಿ ತುಳಿದು ಬಿಡಬಹುದು. ಆದರೆ ನೀರು ಸಿಕ್ಕಾಗ ತೊಳಿಯಬೇಕು ಎಂಬ ಪ್ರಜ್ಞೆ ಬರುತ್ತದಲ್ಲಾ....ಅದೇ ಸ್ವಚ್ಛತೆ. ಕೆಸರಿದ್ದಲ್ಲಿ ತುಳಿದರೂ ಏನೂ ಅಗದಂತೆ ಕೆಸರನ್ನು ಮೆತ್ತಿಕೊಂಡೇ ಇದ್ದರೆ, ಮಾಲಿನ್ಯ ಎಂಬ ಅರಿವೇ ಬರುವುದಿಲ್ಲ. ಮನುಷ್ಯ ಜೀವನವೇ ಈ ಪ್ರಜ್ಞೆಯ ಸಂಕೇತ. ತಾನು ಪರಿಶುದ್ದನಾಗಬೇಕು ಎಂಬ ಪ್ರಜ್ಮೆ ಜಾಗೃತವಾದರೆ ಮನುಷ್ಯ ಜೀವನಕ್ಕೆ ಅರ್ಥ ಕಲ್ಪಿಸಿದಂತೆ.
ಮನುಷ್ಯ ಜನ್ಮ ತಳೆಯುವುದು ಪರಿಶುದ್ದನಾಗಿ ಅಲ್ಲ ಎಂಬುದು ಸನಾತನ ಧರ್ಮದಲ್ಲಿ ಆಧ್ಯಾತ್ಮಿಕವಾಗಿ ತಿಳಿಯಬೇಕಾದ ವಿಷಯ. ಜನ್ಮಾಂತರದ ಪಾಪ ಕರ್ಮಗಳು ಅಂಟಿಕೊಂಡು ಪ್ರಾರಬ್ಧ ಕರ್ಮದಿಂದ ಭೂಮಿಯಲ್ಲಿ ಹುಟ್ಟಿ ಬರುತ್ತಾನೆ. ದೇಹ ಆತ್ಮ ಒಂದಾಗಿ ಇಲ್ಲಿ ಅನುಭವಿಸುವ ಪ್ರತಿಯೊಂದು ದುರಿತಗಳು ಪೂರ್ವ ಜನ್ಮದ ಸುಕೃತ ಫಲವಾಗಿ ಜನ್ಮಕ್ಕಂಟಿದ ಪಾಪ ಎಂಬ ಪ್ರಜ್ಞೆಯನ್ನು ತಿಳಿಯುವುದೇ ಮನುಷ್ಯ ಜನ್ಮದ ತಾತ್ಪರ್ಯ. ಮನುಷ್ಯ ತಾನು ಪರಿಶುದ್ದನಲ್ಲ ಎಂಬ ಅರಿವು ಇರುವಲ್ಲಿ ಅಸ್ಪೃಶ್ಯತೆ ಎಂಬುದು ಇದೆ ಎಂದರೆ ಅದು ವಿಪರೀತವಾಗುತ್ತದೆ. ಸನಾತನ ಧರ್ಮ ಎಂದರೆ ಅಲ್ಲಿ ಅಸ್ಪೃಶ್ಯತೆ ಇದೆ ಎಂಬ ನಮ್ಮಲ್ಲಿರುವ ತಿಳುವಳಿಕೆಯನ್ನು ಸ್ವಲ್ಪ ಪ್ರಾಮಾಣಿಕವಾಗಿ ವಿಶ್ಲೇಶಿಸಿದರೆ ಸತ್ಯಾಸತ್ಯತೆ ಅರಿವಾದದೀತು. ತಾನೊಬ್ಬ ಪರಿಶುದ್ದ ಎಂದು ತಿಳಿದುಕೊಂಡು ಮತ್ತೊಬ್ಬರಲ್ಲಿ ಅಸ್ಪೃಶ್ಯತೆಯನ್ನು ಆರೋಪಿಸಿ ದೂರ ಉಳಿಯುವುದು ವಿಪರ್ಯಾಸ. ತಾನು ಮುಟ್ಟಲಾರೆ ಎಂಬುದು ಸ್ವಾತಂತ್ರ್ಯವಾದರೂ ಆ ಮುಟ್ಟಲಾರೆ ಎಂಬ ಭಾವ ತಿದ್ದುಪಡಿಯಾಗಬೇಕು.
ಮನುಷ್ಯ ತಾನು ಪರಿಶುದ್ದನಾಗಬೇಕಾದರೆ ತನ್ನ ಕರ್ಮದಿಂದ ಪರಿಶುದ್ದನಾಗಬೇಕು. ಕರ್ಮದಿಂದ ಅಂಟಿಕೊಂಡ ಪಾಪವನ್ನು ಕರ್ಮದಿಂದಲೇ ತೊಳೆಯಬೇಕು. ತಾನು ಅಶೌಚನೆಂದು ತಿಳಿದು ಅದನ್ನು ಪರಿಮಾರ್ಜನೆಗೊಳಿಸುವುದು ಭವ ಜೀವನದ ಗುರಿಯಾಗಬೇಕು. ಯಾವುದೇ ಒಂದು ಕರ್ಮಾಂಗವನ್ನು ನಿರ್ವಹಿಸುವಾಗ ಕರ್ತೃವಾದ ಮನುಷ್ಯ ಸ್ನಾನ ಮಾಡಿ ಪರಿಶುದ್ದನಾಗಿ ಎಲ್ಲರಿಂದಲೂ ಪ್ರತ್ಯೇಕವಾಗಿದ್ದುಕೊಂಡು ಧ್ಯಾನ ಮಾಡುವಾಗ ತನ್ನ ಪರಿಧಿಯನ್ನು ಸ್ವಚ್ಛವಾಗಿ ಶುದ್ದವಾಗಿಟ್ಟುಕೊಳ್ಳುವುದು ತನ್ನಲ್ಲಿ ಇನ್ನೂ ಅಶೌಚ ಉಳಿದಿದೆ, ಮತ್ತು ಅದು ತಾನು ಮಾಡುವ ಪವಿತ್ರ ಕಾರ್ಯವನ್ನು ಅಪವಿತ್ರಗೊಳಿಸಬಾರದು ಎನ್ನುವ ಭಾವನೆಯಲ್ಲಿ ತಾನು ಅಪವಿತ್ರ ಎಂಬ ಭಾವ ಅಂತರಂಗದೊಳಗೆ ಸೂಕ್ಷ್ಮವಾಗಿ ಇರುತ್ತದೆ. ತಾನು ಪವಿತ್ರನಾಗದ ಹೊರತು ತಾನು ಭಗವಂತನ ಸ್ಥಾನವನ್ನು ಸೇರುವುದಕ್ಕೆ ಸಾಧ್ಯವಿಲ್ಲ.
ಕೆಸರಿದ್ದಲ್ಲಿ ತುಳಿದು ಬಿಡುವುದು ಸಹಜ, ಆದರೆ ತಾನು ಕೆಸರನ್ನು ತುಳಿದಿದ್ದೇನೆ ಎಂಬ ಪ್ರಜ್ಜೆ ಎಂಬು ಪಾಪ ಭೀತಿಯ ಸಂಕೇತ. ತಾನು ಪವಿತ್ರನಾಗಬೇಕು ಎಂಬ ಅರಿವು ಇದ್ದವನಿಗೆ ಮಾತ್ರವೇ ತೊಳೆದುಕೊಳ್ಳುವ ಪ್ರಚೋದನೆಯಾಗುತ್ತದೆ. ಸನಾತನ ಧರ್ಮದ ಒಂದು ಪ್ರಧಾನ ಅಂಗವಾದ ಯೋಗಜೀವನ ಮತ್ತು ಧ್ಯಾನ ಇದನ್ನೆ ತೋರಿಸುತ್ತದೆ. ಧ್ಯಾನದಲ್ಲಿ ಯೋಗಾಭ್ಯಾಸದಿಂದ ದೇಹ ಶುದ್ದಿಯಾದರೆ ಧ್ಯಾನದಿಂದ ಅಂತರಂಗ ಶುದ್ಧಿಯಾಗುತ್ತದೆ. ತಾನು ದೇಹದಿಂದ ಆತ್ಮದಿಂದ ಪರಿಶುದ್ದನಾಗಬೇಕು ಎಂಬ ಅರಿವು ಇದ್ದವನಿಗೆ ಈ ಯೋಗ ಮತ್ತು ಧ್ಯಾನದಲ್ಲಿ ತಲ್ಲೀನನಾಗುವುದಕ್ಕೆ ಸಾಧ್ಯವಾಗುತ್ತದೆ. ಸನಾತನ ಧರ್ಮದಲ್ಲಿ ಅಸ್ಪೃಶ್ಯತೆ ಇದೆ ಎನ್ನುವುದಕ್ಕೆ ಸಾಧ್ಯವಿಲ್ಲ. ಮನುಷ್ಯ ಜೀವನದಿಂದ ಪರಿಶುದ್ಧನಾಗಿ ಭಗವಂತನಲ್ಲಿ ಐಕ್ಯವಾಗಬೇಕು ಎಂಬ ತತ್ವ ಸಿದ್ಧಾಂತದಲ್ಲಿ ಅಸ್ಪೃಶ್ಯತೆ ಎಂಬುದು ಮನುಷ್ಯ ನಿರ್ಮಿತವಾಗಿರುತ್ತದೆ.
ಲೌಕಿಕ ಜೀವನದಲ್ಲಿ ಆಸ್ತಿಕನಾಗಿ ದೇವರನ್ನು ಸ್ತುತಿಸುವಾಗ ತನಗೆ ಒಳ್ಳೆಯದನ್ನು ಮಾಡು ದೇವರೆ ಎನ್ನುವಾಗ ಯಾವುದು ಒಳ್ಳೆಯದು ಎಂಬುದು ಮೊದಲು ನಿರ್ಧರಿಸಬೇಕು. ಯಾವ ದೇವರೂ ಒಳ್ಳೆಯದನ್ನು ಮಾಡುವುದಿಲ್ಲ. ಬದಲಿಗೆ ನಮ್ಮಲ್ಲಿರುವ ಒಳ್ಳೆಯದನ್ನು ರಕ್ಷಿಸುತ್ತಾನೆ. ನಮ್ಮಲ್ಲಿರುವ ಸತ್ವವನ್ನು ನಾವು ಉಳಿಸಿಕೊಳ್ಳಬೇಕು.
No comments:
Post a Comment