ನಮ್ಮ ಬೀದಿಯ ಬದಿ ಒಂದು ತೆಂಗಿನ ಮರವಿದೆ. ನಾವು ಬೆಂಗಳೂರಿಗೆ ಬರುವಾಗ ಇದು ಚಿಕ್ಕದಾದ ಗಿಡವಾಗಿತ್ತು. ಅದರ ಬಳಿಯಲ್ಲಿ ಅದರ ಮಾಲಿಕನ ಒಂದು ಪುಟ್ಟ ಶೀಟ್ ಮನೆ ಇತ್ತು. ಮರ ಬೆಳೆಯುತ್ತಿದ್ದಂತೆ ಮಾಲಿಕ ಹಳೆಯ ಮನೆ ಕೆಡವಿ ಹೊಸ ಮಹಡಿ ಮನೆ ಕಟ್ಟಿದ. ಅದಕ್ಕಿಂತಲೂ ದೊಡ್ಡದಾಗಿ ಕೆಲವು ಮಹಡಿಗಳ ಮನೆ ಕಟ್ಟಿದ. ಮರ ಏನೂ ಹಿಂದುಳಿಯಲಿಲ್ಲ. ಅದೂ ಮತ್ತೂ ಬೆಳೆಯಿತು ಈಗ ಬಳಿಯ ಮನೆಗಿಂತಲೂ ದೊಡ್ಡದಾಗಿ ಬೆಳೆದಿದೆ. ಇನ್ನು ಮಾಲಿಕ ಅದನ್ನೂ ಹಿಂದಿಕ್ಕುತ್ತಾನೋ ಗೊತ್ತಿಲ್ಲ. ಆದರೂ ಮರ ನಾವು ಬಂದಾಗಿನಿಂದಲೂ ಬೆಳೆಯುತ್ತಾ ಇದೆ. ಬೀದಿಯ ಹಲವರಿಗೆ ಇದು ದೈವಾಂಶ ಸಂಭೂತ. ಹಲವರು ಇದಕ್ಕೆ ನಮಸ್ಕರಿಸಿ ಆದಿನದ ಕೆಲಸಕ್ಕೆ ಹೊರಡುತ್ತಾರೆ. ಕೆಲವರು ಅದಕ್ಕೆ ದಿನಾ ಹೂವು ತಂದು ಅಲಂಕರಿಸುತ್ತಾರೆ. ನಿತ್ಯ ಮುಂಜಾನೆ ಐದು ಘಂಟೆಗೆ ಒಬ್ಬಾತ ಅಲ್ಲೇ ತನ್ನ ದ್ವಿಚಕ್ರವಾಹನ ನಿಲ್ಲಿಸುತ್ತಾನೆ. ಅದನ್ನು ಚಲಾಯಿಸುವ ಮೊದಲು ಮರದ ಬಳಿಗೆ ಬರುತ್ತಾನೆ. ಒಂದು ಸಲ ಮೇಲೆ ನೋಡುತ್ತಾನೆ. ಕಾಣದ ದೇವರನ್ನು ಅದರ ತುದಿಯಲ್ಲಿ ಕಂಡು ಭಕ್ತಿಯಿಂದ ಕೈ ಮುಗಿದು ಮರಕ್ಕೆ ತಲೆಯನ್ನು ಸ್ಪರ್ಶಿಸಿ ತುಸು ಹೊತ್ತು ಹಾಗೇ ನಿಂತು ಬಿಡುತ್ತಾನೆ. ನಿತ್ಯ ಬಿಡದೆ ಆತನ ದಿನಚರಿ ಆರಂಭವಾಗುವುದೇ ಇಲ್ಲಿಂದ. ರಸ್ತೆಯ ಎಲ್ಲಾ ಮನೆಯವರು ಏಳುವ ಮೊದಲೇ ಈತನ ಪ್ರಾರ್ಥನೆ ಸಲ್ಲಿಕೆಯಾಗುತ್ತದೆ. ಮರದ ಒಡೆಯ ಯಾರೋ ಅದು ಲೆಕ್ಕಕ್ಕಿಲ್ಲ. ಆ ಕ್ಷಣ ಅದು ಆತನ ದೇವರಾಗುತ್ತದೆ. ಮನೆಯ ಮಾಲಿಕ ಹಲವು ಸಲ ಮನೆಯ ತಾರಸಿ ಮೇಲೆ ಹೋಗಿ ನೋಡುತ್ತಾನೆ. ಇದು ನನ್ನ ಮರ ಎಂದುಕೊಳ್ಳುತ್ತಾನೆ. ಅದರಲ್ಲಿ ಆದ ಕಾಯಿಗಳನ್ನು ಆಗಾಗ ಕಿತ್ತುಕೊಳ್ಳುತ್ತಾನೆ. ಅದನ್ನೂ ಯಾರಿಗೂ ಕೊಡಬೇಕಾಗಿಲ್ಲ. ಈತನಿಗೆ ಕಾಯಿ ಗರಿಗಳನ್ನು ಉಳಿದವರಿಗೆ ಆ ಮರ ಕೇವಲ ದೈವೀ ಭಾವನೆಯನ್ನು ಕೊಡುತ್ತ ಕಲ್ಪವೃಕ್ಷವಾದರೆ ಈತನಿಗೆ ಅದು ತೆಂಗಿನ ಮರವಾಗುತ್ತದೆ.
ಮೊದಲೆಲ್ಲ ಮಾಲಿಕನಾದರೋ ತೆಂಗಿನ ಮರದ ಒಣಗಿದ ಗರಿಗಳ ಟೊಂಗೆಗಳನ್ನು ಮೊದಲೇ ಕಿತ್ತು ಹಾಕುತ್ತಿದ್ದ. ಯಾರ ತಲೆಗಾದರೂ ಬಿದ್ದು ಬಿಟ್ಟರೆ ಎಂಬ ಆತಂಕ. ಹಾಗಾಗಿ ಬೀದಿಯ ಮಂದಿ ಆತಂಕವಿಲ್ಲದೇ ಓಡಾಡುತ್ತಿದ್ದರು. ಅಲ್ಲೆ ತಮ್ಮ ವಾಹನ ನಿಲ್ಲಿಸುತ್ತಿದ್ದರು. ಇನ್ನು ಕೆಲ ಮಹಿಳೆಯರು ನೈಟಿ ಧರಿಸಿ ಸುತ್ತಮುತ್ತಲಿನವರ ವಿಷಯ ಚರ್ಚಿಸುವುದಕ್ಕೆ ಅಲ್ಲೇ ಕುಳಿತುಕೊಳ್ಳುತ್ತಿದ್ದರು. ಹೀಗೆ ಜನರ ಬಗೆ ಬಗೆಯ ವರ್ತನೆಗಳನ್ನು ನೋಡುತ್ತಾ ಮರ ಬೆಳೆಯಿತು. ಈಗ ತೆಂಗಿನ ಮರ ಬೆಳೆದು ನಿಂತಿದೆ. ಇನ್ನೂ ಬೆಳೆಯಬಹುದು. ಈಗೀಗ ತೆಂಗಿನ ಗರಿ ಮಾಲಿಕನ ಕೈಗೆ ಸಿಗುತ್ತಿಲ್ಲ. ಮಾಲೀಕ ಒಣಗಿದ ಗರಿಯ ಗೊಡವೆಗೆ ಹೋಗುತ್ತಿಲ್ಲ. ಕಳೆದ ದಿನ ಒಬ್ಬನ ವಾಹನದ ಮೇಲೆ ಗರಿ ಬಿದ್ದು ಬಿಟ್ಟು ವಾಹನಕ್ಕೆ ಘಾಸಿಯಾಯಿತು. ಮೊನ್ನೆಯ ಗಾಳಿ ಮಳೆಗೆ ಅದರ ಗೆಲ್ಲೊಂದು ಕಿತ್ತು ಹಾರಿ ಪಕ್ಕದ ಮನೆಯವನ ನೀರಿನ ಟ್ಯಾಂಕ್ ಮೇಲೆ ಬಿದ್ದು ಬಿಟ್ಟಿತು. ಇಷ್ಟೇ ಅಲ್ಲ. ಒಂದು ದಿನ ದಾರಿಹೋಕರ ಮೇಲೆ ಒಣಗಿದ ಗರಿ ಬಿದ್ದು....ಆತ ಅಲ್ಪ ಸ್ವಲ್ಪ ಗಾಯದಿಂದ ಪಾರಾದ. ಆತನ ಪ್ರಾಣ ಕಲ್ಪವೃಕ್ಷ ಉಳಿಸಿತ್ತು.
ಈಗ ತೆಂಗಿನ ಮರದ ಬಗ್ಗೆ ಬೀದಿ ಜನ ಒಂದಷ್ಟು ಜಾಗರೂಕರಾಗಿದ್ದಾರೆ. ಅಲ್ಲಿ ಅಡ್ಡಾಡುವವರು ಜೀವ ಭಯದಿಂದ ಮೇಲೆ ನೋಡುತ್ತಾರೆ. ಮುಂಜಾನೆ ಎದ್ದು ನಮಸ್ಕರಿಸುವವನೂ ಮೊದಲಿನಂತೆ ಮೇಲೆ ನೋಡುತ್ತಾನೆ. ಅದು ಯಾವ ಭಾವನೆ ಎಂದು ಅರ್ಥವಾಗುವುದಿಲ್ಲ. ಈಗೀಕ ರಕ್ಷಿಸುವವನು ಶಿಕ್ಷಿಸುತ್ತಾನೆ ಎಂದುಕೊಳ್ಳಬಹುದು. ಕೆಲವರಂತೂ ಮಾಲಿಕನನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಅದಕ್ಕೆ ಕಾರಣ ಈ ಮರ. ವಿಚಿತ್ರವೆಂದರೆ ಆಗ ಅದನ್ನು ದೇವರಾಗಿ ನೋಡಿದ್ದನ್ನು ಮರೆಯುತ್ತಾರೆ. ತೆಂಗಿನ ಮರ ದೇವರಾಗಿ ಕೆಲವೊಮ್ಮೆ ಕೇವಲ ಮರವಾಗಿ ಭಯ ಹುಟ್ಟಿಸುತ್ತದೆ. ಭಯ ಭೀತರಾದರೂ ಕೆಲವರು ಭಯದಿಂದ ಮೇಲೆ ನೋಡಿ ಮತ್ತೆ ಪುನಃ ನಮಸ್ಕರಿಸುತ್ತಾರೆ. ನಮಸ್ಕರಿಸುವುದು ಶರಣಾಗಿ ಕರುಣೆ ತೋರಪ್ಪಾ ಎಂದು ಬೇಡಿಕೊಳ್ಳುವುದು ಇದರಲ್ಲಿ ಯಾವುದಾದರೂ ಆಗಬಹುದು. ನಮಸ್ಕರಿಸುವುದು ಧರ್ಮ. ಇದರಲ್ಲಿ ಮರದ್ದು ತಪ್ಪಿಲ್ಲ. ನಮಸ್ಕರಿಸುವವರದ್ದೂ ತಪ್ಪಿಲ್ಲ. ಪ್ರಕೃತಿ ಎಂದರೆ ಹೀಗೆ ವರವಾಗುತ್ತದೆ, ಶಪಿಸುತ್ತದೆ ದೇವರಾಗುತ್ತದೆ... ಬಿಸಿಲ ಉರಿಗೆ ಬೆಂದವರು ಮಳೆ ಬರಲಿಲ್ಲಾ ಎಂದು ಇಂದು ಅತ್ತವರು ನಾಳೆ ಅದೇ ಸುರಿವ ಮಳೆಗೆ ಮಳೆಯ ಕಾಟ ಎಂದು ಬಿಡುತ್ತಾರೆ. ಮರ ಮರವಾಗಿಯೇ ಇರುತ್ತದೆ . ಇಲ್ಲಿ ಕೇವಲ ನಂಬಿಕೆ ಮಾತ್ರ ಬದಲಾಗುತ್ತಿರುತ್ತದೆ.
ನಮ್ಮ ಭಾವನೆಗಳು ಬದಲಾದಂತೆ ಶಿಲೆ ಕಲ್ಲಾಗಿ ಕಂಡದ್ದು ಮತ್ತೆ ದೇವರಾಗುತ್ತವೆ. ನಿಜಕ್ಕಾದರೆ ದೇವರು ಎಂದರೆ ಅದು ನಮ್ಮ ಅಂತರಂಗದ ಭಾವ. ನಮ್ಮ ನಿಯಂತ್ರಣಕ್ಕೆ ಮೀರಿದ ನಮ್ಮನ್ನು ನಿಯಂತ್ರಿಸುವ ಒಂದು ಭಾವ. ಆ ಭಾವನೆ ರೂಪ ತಳೆದರೂ ಅದಕ್ಕೆ ರೂಪವಿಲ್ಲ, ಗುಣವಿಲ್ಲ..ಯಾವುದೂ ಇಲ್ಲ. ಆದರೂ ನಮ್ಮದಾಗುತ್ತದೆ. ಯಾವುದೂ ಸಹ ನಮ್ಮದಲ್ಲ ಎಂದು ತಿಳಿಯುವುದೆಂದರೆ ಅದು ದೇವರನ್ನು ತಿಳಿದಂತೆ. ಆದರೆ ದೇವರ ವಿಷಯ ಬಂದಾಗ ಯವುದೂ ನಮ್ಮದಲ್ಲದೇ ಇದ್ದರೂ ದೇವರು ಮಾತ್ರ ನಮ್ಮ ದೇವರಾಗುತ್ತಾನೆ. ದೇವರು ಒಬ್ಬನೇ ಆದರೂ ಅದು ಪ್ರತಿಯೊಬ್ಬನ ಸ್ವಂತವಾಗುತ್ತದೆ. ಆದರೆ ಮನುಷ್ಯ ನನ್ನ ದೇವರು ಎಂದುಕೊಂಡು ಇದೇ ದೇವರ ಹೆಸರಲ್ಲಿ ಹೋರಾಡುತ್ತಾನೆ, ಜಗಳವಾಡುತ್ತಾನೆ ದ್ವೇಷ ಬೆಳೆಸುತ್ತಾನೆ. ಅದರೆ ದೇವರು ಮಾತ್ರ ತೆಂಗಿನ ಮರದಂತೆ ಬೆಳೆಯುತ್ತದೆ ತುದಿಕಾಣದಂತೆ ಬೆಳೆಯುತ್ತಾನೆ. ಮನುಷ್ಯನಲ್ಲಿರುವ ದೇವರು ಎಂಬ ನಂಬಿಕೆ ದೊಡ್ಡದಾಗಿರುತ್ತದೆ. ಹಲವು ಸಲ ಇದು ದೇವರಿಗಿಂತಲೂ ದೊಡ್ಡದಾಗಿರುತ್ತದೆ. ನಾನು ನನ್ನದು ಎಂಬ ಭಾವ ಬಿಡುವಾಗ ದೇವರ ದರ್ಶನವಾಗುತ್ತದೆ. ಹೀಗಿರುವಾಗ ಈ ಎಲ್ಲ ನಂಬಿಕೆಗಳಿಗೆ ಸಾಕ್ಷಿಯಾಗಿ ಮರ ನನ್ನದಲ್ಲ ಎಂದು ತಿಳಿದಾಗ ಅದು ದೇವರಾಗಿ ಪ್ರತ್ಯಕ್ಷವಾಗುತ್ತದೆ. ನಿಜಕ್ಕೂ ಅದು ಕಲ್ಪ ವೃಕ್ಷ.
No comments:
Post a Comment