Monday, September 23, 2024

ಬರಿದಾದ ಬಯಲು

    ಮೊನ್ನೆ ಮಿತ್ರ ಮುರಳಿ ಚೆಂಬರ್ಪು ಕರೆ ಮಾಡಿದ.  ಬಹಳ ಹಳೆಯ ಸ್ನೇಹ ನಮ್ಮದು. ಯಾವುದೋ ಕಂಪೆನಿಯಲ್ಲಿ ಇಂಜಿನಿಯರಿಂಗ್ ವೃತ್ತಿಯಲ್ಲಿರುವ ಈತನ  ಕರೆ ನನ್ನನ್ನು ಹಿಂದಕ್ಕೆ ಕರೆದೊಯ್ದು ಕೂರಿಸಿತು. ನಮ್ಮ ರಾಜಾಜಿನಗರದ ಕಡೆಯಲ್ಲಿ ಆತನಿಗೆ ಯಾವುದೋ ಕಾರ್ಯಕ್ರಮಕ್ಕೆ ಬರುವುದಿತ್ತು. ನಮ್ಮ ಮನೆಗೂ ಅಲ್ಲಿಗೂ ಮೂರು ನಾಲ್ಕು ಕಿಲೋ ಮೀಟರ್ ದೂರ. ಬೆಂಗರಲ್ಲಿ ಎರಡು ಮೂರು ಗಲ್ಲಿಗಳ ಅಂತರ ಅಷ್ಟೇ.

ಭಾನುವಾರ ಅದು. ನನ್ನನ್ನು ಕಾಣಲು ಬರುತ್ತೇನೆ ಅಂತ ಹೇಳಿದ.‌ಸರಿ, ಜತೆಗೆಊಟ ಮಾಡೋಣ ಅಂತ ಯೋಚನೆ ಮಾಡಿದರೆ ಆತ ಊಟ ಎಲ್ಲ ಆಯ್ತು, ಕೇವಲ ಹರಟೆಗೆ ರಾಜಣ್ಣ ಅಂತ ಹೇಳಿ ಬರುತ್ತೇನೆ ಎಂದ. ನಮ್ಮ ಸ್ನೇಹದ ರೀತಿ ಅದು. ಅಲ್ಲಿ ಉಪಚಾರ ಎಂದರೆ ಹರಟೆ ಬಿಟ್ಟು ಮತ್ತೇನೂ ಇರುವುದಿಲ್ಲ. ಸಹಕಾರಿ ನಗರದ ಕಡೆಗೆ ನಾನು ಹೋದರೂ ಹೀಗೆ ಅವನ ಮನೆಗೆ ಹೋಗುತ್ತೇನೆ. ಹಾಗೆ ಭೇಟಿಯಾಗದೇ ಬಹಳ ದಿನಗಳು ಕಳೆದಿತ್ತು. ವಿಚಿತ್ರವೆಂದರೆ ಈ ಬಾರಿ ಮೂರು ಕಿಲೋಮೀಟರ್ ‌ದೂರ ಕಾರ್ಯಕ್ರಮದ ಬಳಿ ತಂದ ಕಾರು ಇಟ್ಟು ಹೆಂಡತಿ ಮಗಳನ್ನು‌ ಅಲ್ಲೇ ಬಿಟ್ಟು ನನ್ನನ್ನು ‌ಕಾಣುವುದಕ್ಕೆ ಅಷ್ಟು ದೂರ ನಡೆದೇ ಬಂದಿದ್ದ!  ನಮ್ಮ‌ ನಡುವಿನ‌‌ ಸ್ನೇಹದ ಬಗೆ ಅದು. ಅಲ್ಲಿ ಆಡಂಬರ ಕೇವಲ ಸ್ನೇಹ‌ಕ್ಕೆ ಮೀಸಲು. ಅದೇ ಶಿಷ್ಟಾಚಾರ. ನನ್ಮನ್ನು ಕಾಣುದಕ್ಕೆ,  ಅರ್ಧ ತಾಸು ಕೇವಲ ಹರಟೆ ಹೊಡೆಯುವುದಕ್ಕೆ ಅದೂ ಈ ಕಾಲದಲ್ಲಿ ನಡೆದೇ ಬರುತ್ತಾನೆ ಎಂದರೆ ಅಚ್ಚರಿಯಾಗಬಹುದು.

ಒಂದು‌ ಕಾಲ ಇತ್ತು ಬಹಳ ದೂರ ಏನಲ್ಲ. ವಾಟ್ಸಪ್ ಬರುವ ಮೊದಲು, ಆರ್ಕುಟ್ ನಲ್ಲಿ  ಕುಟ್ಟುವಾಗ ಈತನ ಜತೆ ಸ್ನೇಹ ಬೆಳೆದಿತ್ತು. ಬೆಳಗ್ಗೆ  ಕಂಪ್ಯೂಟರ್ ತರೆದು ಕೆಲಸ ಆರಂಭಿಸುವಾಗ ಆತನ ನಮಸ್ಕಾರ ಹೊತ್ತು ಗೂಗಲ್ ಟಾಕ್ ತೆರೆದುಕೊಳ್ಳುತ್ತದೆ. ಕೆಲಸದ ನಡುವೆ ಬಿಡುವಿನ ಸಮಯ ಇದರ ಮೂಲಕವೇ ನಮ್ಮ‌ಹರಟೆ. ಅರ್ಕುಟ್ ಎಂಬ ಅರಳಿಕಟ್ಟೆಯಲ್ಲಿ ಕೇವಲ ಯಕ್ಷಗಾನದ ಮರುಳು ನಮ್ಮನ್ನು ಬೆಸೆದಿತ್ತು. ದಿನವಿಡೀ ಹರಟೆ. ಆ. ಹರಟೆಯಲ್ಲಿ ನನ್ನ ಅನುಭವ ಕಥೆಗಳು ಹೇಳುವಾಗ ಆತ ಹೇಳಿದ್ದು ಬ್ಲಾಗ್ ಮಾಡಿ ಇದನ್ಬೆಲ್ಲಾ ಲೇಖನ‌ ಬರೆಯಿರಿ ರಾಜಣ್ಣ. ಹಾಗೆ ನನ್ನ ಬರೆ ಹವ್ಯಾಸ ಆರಂಭವಾಯಿತು. ಹಿಂದೆ ಶಾಲೆಗೆ ಹೋಗುವಾಗ ಏನೆಲ್ಲ ಗೀಚಿದ ಚಾಳಿ ಮತ್ತೆ ಗರಿಗೆದರಿತು. ಈಗ ಅದೇ ನನ್ನ ಅತಿದೊಡ್ಡ ಗೆಳೆಯ. ನಾನು ಹೇಳುವುದೆಲ್ಲವನ್ನೂ ಕೇಳುವ ಹೃದಯದ ಗೆಳೆಯ.

ಮುರಳಿ ಒಂದು ರೀತಿಯಲ್ಲಿ ಸೌಮ್ಯ ಭಾವದ ಭಾವುಕ‌ ಮನುಷ್ಯ. ಬೆಂಗಳೂರು ಡೇಸ್ ಮಲಯಾಳಂ ಸಿನೆಮಾದಲ್ಲಿ ಒಂದು ಮುಖ್ಯ ಪಾತ್ರ ಬರುತ್ತದೆ. ನುವಿನ್ ಪೊಲ್ಲಿ ಅಭಿನಯಿಸಿ ಖ್ಯಾತಿ ಗಳಿಸಿದ ಪಾತ್ರವದು. ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಆ ಪಾತ್ರ, ಸದಾ ತನ್ನ ಊರಿನ‌ ಮನೆ ಕೃಷಿ ಪರಂಪರೆ ಧರ್ಮ ಹೀಗೆ ಅದರ ಬಗ್ಗೆಯೇ  ಯೋಚಿಸುವ, ಅದರ ಬಗ್ಗೆ ತುಡಿಯುವ ಮನಸ್ಸು. ಬೆಂಗಳೂರಿನ ಯಾಂತ್ರಿಕ ಜೀವನ‌ ಇಲ್ಲಿನ ಆಧುನಿಕ ಶೈಲಿ, ಸಾಫ್ಟ್‌ವೇರ್ ಪರಿಸರದಲ್ಲಿ ಇದ್ದರೂ ಈ ಪರಂಪರೆಯ ಬಗ್ಗೆ ತುಡಿಯುತ್ದದೆ. ಅದೇ ರೀತಿ ಈ ಸ್ನೇಹಿತ.  ಹಳ್ಳಿಯ ಮನೆ ಸಂಪ್ರದಾಯ ಇದರ ಬಗ್ಗೆ ಗಾಢವಾದ ಅಭಿಮಾನ ಇಟ್ಟುಕೊಂಡವನು.  ಹಾಗಿರುವಾಗ ಅಲ್ಲಿ ನಮ್ಮೂರವನಾಗಿದ್ದು ಯಕ್ಷಗಾನದ ಪ್ರೀತಿ ಇದ್ದರೆ ಅದು ಅತಿಶಯವಲ್ಲ. ಅದೇ ನಮ್ಮ‌ ಗೆಳೆತನದ ಚಿಗುರಾಯಿತು, ಈಗ ಮರವಾಗಿದೆ. 

  ಕೇವಲ‌ ಅರ್ಧ ಘಂಟೆ ಹರಟೆಗೆ ಒಂದು ಘಂಟೆ ನಡೆದು ಬರುತ್ತಾನೆ ಎಂದರೆ ಯಾರಿಗಾದರೂ ಅಚ್ಚರಿಯಾಗಬೇಕು. ಅದೇ ವೈಶಿಷ್ಟ್ಯ. ನಾವು ಮಡಿಕೇರಿ ಗೆ ಮಿತ್ರ ಸುಬ್ಬಣ್ಣನ‌ ಮದುವೆಗೆ ಹೋಗಿದ್ದು‌ ನೆನಪಾಯಿತು. ನಾವಿಬ್ಬರೇ ಇಡೀ ದಿನದ ಕಾರಿನ‌ಪ್ರಯಾಣ.  ಕಾರಿನಲ್ಲಿ ಸ್ಟೀರಿಯೋ ಇದ್ದರೂ ಎಲ್ಲೂ ಅದರ ಧ್ವನಿ ಮೊಳಗಲಿಲ್ಲ. ಕೇವಲ‌ ಹರಟೆಯಲ್ಲೇ ಕಳೆದ ಅದ್ಬತ ವಿಶಿಷ್ಟ ಪ್ರಯಾಣವದು. ಯಾಕೆಂದರೆ ನಮ್ಮಲ್ಲಿ ಹರಟುವುದಕ್ಕೆ ಮುಗಿಯದಷ್ಟು ವಿಷಯಗಳಿವೆ. ಭಾವುಕ ಮನಸ್ಸಿನ ಪ್ರತೀಕಗಳು. ಹಾಗಾಗಿಯೇ ಗೂಗಲ್ ಟಾಕ್ ಗೆ ಒಂದು ಸಲ ಸಿಕ್ಕಾಪಟ್ಟೆ ಕೆಲಸ ಕೊಟ್ಟಿದ್ದೇವೆ.   ಇದನ್ನೆಲ್ಲ ಯೋಚಿಸುವಾಗ ಮೇಲೆ ಹೇಳಿದ ಅರಳೀ ಕಟ್ಟೆ, ಆಟದ ಬಯಲು ನೆನಪಾಗುತ್ತದೆ.‌ಈಗ ಬಯಲು ಇಲ್ಲ  ಅಲ್ಲಿ‌ ನಾವು ಸೇರುವ ಹಾಗೂ ಇಲ್ಲ.ಕೇವಲ ಅವ್ಯಕ್ತ ಸ್ನೇಹ ಮಾತ್ರ.

ಹೇಳಿ ಕೇಳಿ ಯಕ್ಷಗಾನ ಎಂದರೆ ಅದು ಬಯಲಾಟ. ಆಟದ ನಡುವೆ ಸೇರುವ ಮಿತ್ರರು ಆ ಹರಟೆ, ಛೇ ಅದೊಂದು‌ ಮರೆಯಲಾಗದ ಘಳಿಗೆಗಳು. ಬೆಂಗಳೂರಲ್ಲಿ ಒಂದು ಕಾಲ್ಪನಿಕ ಬಯಲನ್ನು ಕಟ್ಟಿಕೊಂಡವರು ನಾವು. ಅದರಲ್ಲಿ ಯಕ್ಷಗಾನದ ವಿಚಾರಗಳು ಅಭಿಮಾನದಿಂದ ಆಟವಾಡುತ್ತಿದ್ದವು. ನಮ್ಮ ಅನುಭವಗಳು ಕಳೆದ ದಿನಗಳು ಅದನ್ನೆಲ್ಲ ಹೇಳುವಾಗ, ಜತೆಗೆ ಊರಿನ ಹಲವು ವಿಚಾರ ಜೀವನ ಘಟನೆ ಅನುಭವಗಳನ್ನು ಹೇಳುವಾಗ ಇದೇ ಮುರಳಿ ಮೊದಲಬಾರಿಕೆ ಪ್ರೇರೇಪಿಸಿದ್ದು ಬ್ಲಾಗ್ ಬರೆಯುವುದಕ್ಕೆ. ಆಗಿನ್ನು ಗೂಗಲ್ ತನ್ನ ಬ್ಲಾಗ್ ಸ್ಪಾಟ್ ನ್ನು ಆರಂಭಿಸಿದ ದಿನಗಳೂ. ಅದನ್ನು ಹೇಗೆ ಉಪಯೋಗಿಸುವುದು, ಅದರಲ್ಲಿ ಕನ್ನಡ ಹೇಗೆ ಬರೆಯಬಹುದು ಇದನ್ನೆಲ್ಲ ತೋರಿಸಿಕೊಟ್ಟದ್ದು ಮುರಳಿ. ಆಗ ಭಾಷಾಂತರಕ್ಕೆಂದೇ ಗೂಗಲ್ ನಲ್ಲಿ ಒಂದು ಉಪಕರಣವಿತ್ತು. ಹೀಗೆ ಪ್ರಚೋದಿಸಲ್ಪಟ್ಟ ನನ್ನ ಲೇಖನದ ಹವ್ಯಾಸ ಇಂದಿಗೂ ಮುಂದುವರೆದಿದೆ. ಅಂತರಂಗದ ಭಾವನೆಗಳಿಗೆ ಒಂದು ಮಾಧ್ಯಮ. ಯಾರು ಓದುತ್ತಾರೋ ಬಿಡುತ್ತಾರೋ ಅದು ಯೋಚನೆ ಇಲ್ಲ. ವಾಸ್ತವದಲ್ಲಿ ವಾಚಾಳಿ, ಹರಟೆ ಹೊಡೆಯುವ ನನಗೆ ಮಾತು ಜಾಸ್ತಿ. ಹಲವರಿಗೆ ಅದು ಬೇಸರ ಉಂಟು ಮಾಡಿಬಿಡುತ್ತದೋ ಎಂದು ಹಲವು ಸಲ ಅನ್ನಿಸುವುದಿದೆ. ಹಾಗಾಗಾಗಿ ಈ ಬ್ಲಾಗ್ ಲೇಖನ ನನ್ನದೆಲ್ಲ ಮಾತುಗಳನ್ನು ಯಾವ ಆಡ್ದಿ ಇಲ್ಲದೇ ಕೇಳುತ್ತದೆ.ನನ್ನದೆಲ್ಲವನ್ನೂ ಕೇಳುವ ಮಿತ್ರನನ್ನು ತೋರಿಸಿದ ಶ್ರೇಯಸ್ಸು ಮುರಳಿಗೆ ಸಲ್ಲಬೇಕು. 

ಮೊದಲು ನಿತ್ಯ ಅಂತರ್ಜಾಲದಲ್ಲಿ ಭೇಟಿಯಾಗಿತ್ತಿದ್ದ ನಾವು ಕಳೆದ ಹಲವು ವರ್ಷಗಳಿಂದ ಭೇಟಿ ವಿರಳವಾಗಿ ಹೋಗಿದೆ. ನಮ್ಮದು ಮಾತ್ರವಲ್ಲ. ನಮ್ಮ ಹಲವು ಮಿತ್ರರು. ಉಲ್ಲಾಸ್ ಸುಬ್ಬಣ್ಣ, ಕೇಶವ, ಶ್ರೀರಾಮ, ಮಿತ್ರರೆಲ್ಲಾ ನೇಪಥ್ಯಕ್ಕೆ ಸರಿದು ಹೋಗಿದ್ದಾರೆ. ಊರ ನಡುವಿನ ಯಕ್ಷಗಾನದ  ಅರಳಿಕಟ್ಟೆ ಅಥವಾ ಆಟದ ಮೈದಾನ ಈಗ ಕಾಣೆಯಾಗಿದೆ.  ಅದಕ್ಕೆ ಮುಖ್ಯ ಕಾರಣ ನಮ್ಮ ನಾವು ಅಭಿಮಾನದಿಂದ ಕಾಣುತ್ತಿದ್ದ ಯಕ್ಷಗಾನ ಹಲವು ಕಾರಣಗಳಿಂದ ಬದಲಾಗಿ ಹೋಗಿ ಭ್ರಮನಿರಸನ ಹುಟ್ಟಿಸಿಬಿಟ್ಟಿತು. ಮುರಳಿಯಲ್ಲಿ ಕೇಳಿದರೂ ಅಷ್ಟೆ ಶ್ರೀರಾಮನಲ್ಲಿ ಕೇಳಿದರೂ ಅಷ್ಟೆ....ಬಯಲು ಇಲ್ಲದ ಮೇಲೆ ಅಲ್ಲಿ ಆಟವಾಡುವ ಮಕ್ಕಳು ಮಿತ್ರರು ಇರುವುದಕ್ಕೆ ಸಾಧ್ಯವೇ? ಹೇಗೆ ಒಂದು ಹಳ್ಳಿಯನ್ನು ವಸಾಹತು ಶಾಹಿ ನುಂಗಿ ಹಾಕಿ ಬಿಡುತ್ತದೋ ಅದೇ ರೀತಿ ನಮ್ಮ ನಡುವಿನ ಯಕ್ಷಗಾನ ಬತ್ತಿ ಹೋಗಿದೆ. ಸರೋವರ ತುಂಬಿಕೊಂಡು ಹಚ್ಚ ಹಸಿರಾಗಿದ್ದರೆ ಅಲ್ಲಿ ಹಕ್ಕಿಗಳು ಬರುತ್ತವೆ. ಇಲ್ಲವಾದರೆ ಆ ಹಕ್ಕಿಗಳು ಎಲ್ಲೋ ಮರೆಯಾಗುತ್ತವೆ. ಅದಕ್ಕೆ ಚಿಲಿಪಿಲಿಗುಟ್ತಿ ವಿಹರಿಸುವುದಕ್ಕೆ ಕೆರೆಯೇ ಇಲ್ಲ ಎಂದ ಮೇಲೆ ವಿಹರಿಸುವ ಮಾತೇ ಇಲ್ಲ. ನಮಗೂ ಅಷ್ಟೆ ಕೆರೆ ಬತ್ತಿ ಹೋಗಿದೆ ಅಲ್ಲಿ ಯಾವುದೋ ಆಧುನಿಕ ನಗರ ರಸ್ತೆ ನಿರ್ಮಾಣವಾಗಿದೆ. 

ಯಕ್ಷಗಾನ ಬದಲಾಗಿದೆ. ಕಾಲದ ಅಭಿರುಚಿ ಎನ್ನಬೇಕೋ ನಮ್ಮ,ಕುಸಿದ ಪ್ರಜ್ಞೆ ಇರಬೇಕೋ ಅಂತೂ ಯಕ್ಷಗಾನ ಅದಾಗಿ ಅದು ಉಳಿಯಲಿಲ್ಲ. ಅದರ ಮೂಲ ಹುಡುಕಿದರೆ ಭಾಗವತರು ಕಲಾವಿದರೂ ಹೀಗೆ ಕಾರಣಗಳು ತೆರೆದುಕೊಳ್ಳುತ್ತವೆ. ಮೊದಲು ರಕ್ತಗತವಾದದ್ದು ಈಗ ಡಿಪ್ಲೋಮವಾಗಿ ಬದಲಾಗಿದೆ. ಐದಾರು ತಿಂಗಳ ಡಿಪ್ಲೊಮ ಮುಗಿಸಿದರೆ ಮೊದಲು ವರ್ಷಾನುಗಟ್ಟಲೆಯ ಶಿಷ್ಯತ್ವದಲ್ಲಿ ರಂಗವೇರುವ ಭಾಗವತರು ಕಲಾವಿದರೂ ಈ ಡಿಪ್ಲೋಮದ ಗಾಳಿಗೆ ಬದಿಗೆ ಸರಿದು ಹೋಗುತ್ತಾರೆ. ಹಲವು ಹಿರಿಯರ ನಿವೃತ್ತಿ ಮಾತ್ರವಲ್ಲ ಕುಸಿದು ಹೋದ ಯಕ್ಷಗಾನದ ರೂಪರೇಷೆಗಳು ನಮ್ಮ ನಡುವಿನ ಬಯಲು ಮೈದಾನವನ್ನು ಆಕ್ರಮಿಸಿ ನಾಶ ಮಾಡಿದೆ. ಬಯಲು ಇಲ್ಲವಾದರೆ ಅಲ್ಲಿ ಬಯಲಾಟ ಎಲ್ಲಿ. ಬಯಲಾಟ ಇಲ್ಲ ಎಂದರೆ ಯಕ್ಷಗಾನ ಇಲ್ಲ. ಅದು ಇಲ್ಲ ಎಂದರೆ ನಾವು ಮಿತ್ರರೂ ದೂರ ದೂರ. ಸ್ನೇಹ ಎಲ್ಲೋ ಮಡುಗಟ್ಟಿದೆ. ಕಾಲದ ಗತಿಗೆ ಹಳ್ಳಿ ಚದುರಿದಂತೆ ನಾವು ಚದುರಿ ವಿಚಿತ್ರರೂಪವನ್ನು ಪಡೆದುಕೊಂಡಿದ್ದೇವೆ. ಬಯಲು ಯಾವತ್ತಿದ್ದರೂ ಬರಿದಾಗಿರುತ್ತದೆ. ಅಲ್ಲಿ ಆಗಾಗ ಏನೋ ತುಂಬಿಸಿ ಕಲರವ ಎಬ್ಬಿಸಿದರೆ ಅದರಲ್ಲಿ ಜಡತ್ವ ಕಳೆದು ಆಗಾಗ ಚೇತನತುಂಬಿ ಬಿಡುತ್ತದೆ. ಇಲ್ಲವಾದರೆ ಊರ ಕಸತುಂಬುವ ಕೊಂಪೆಯಾಗಬಹುದು. ಇಲ್ಲಾ ಆಧುನಿಕ ಜಗತ್ತಿನ ಮರ್ಮರವಾಗಿ ಮಹಲುಗಳು ಏಳಬಹುದು. ರಸ್ತೆಗಳು ಮಲಗಿಬಿಡಬಹುದು. 

Saturday, September 14, 2024

ರಾಮ ನೆಂಬ ಡ್ರೈವರ್ ಮಾಮ

        ಬಾಲ್ಯ ...ಅದೊಂದು ಅದ್ಭುತ ಕನಸುಗಳ ಭಂಡಾರ. ಸಾಕಾರಗೊಳ್ಳದಿದ್ದರೂ ಕನಸು ಪ್ರತಿಯೊಬ್ಬನಿಗೂ ಅತ್ಯಂತ ಆವಶ್ಯಕ ಸಾಧನದಂತೆ ಜತೆಗಿರುತ್ತದೆ. ಅದರಲ್ಲೂ ಬಾಲ್ಯದಲ್ಲಿ ಅದು ಬಹಳ ಸುಂದರವಾಗಿರುತ್ತದೆ. ಹಸಿದಾಗ ಆಹಾರದ ಕನಸು ಬಿದ್ದಂತೆ ಸ್ವಪ್ನ ಸುಷುಪ್ತಿ ಇವುಗಳ ನಡುವೆಯೇ ನಮ್ಮ ಜೀವನ ಇರುತ್ತದೆ. ಹಲವು ಸಲ ಭವಿಷ್ಯತ್ ನ ಹಾದಿ ನಿರ್ಧಾರವಾಗುವುದೂ ಕೂಡ ಈ ಕನಸುಗಳಿಂದ. 

ಬಾಲ್ಯ ಪ್ರತಿಯೋರ್ವನ ಜೀವನದಲ್ಲೂ ಅದ್ಭುತವಾಗಿರುತ್ತದೆ. ಅದು ಬಡತನವಾಗಲಿ,ಸಿರಿತನವಾಗಲೀ ಅದು ಅಮೂಲ್ಯವಾಗುವುದು ಅಲ್ಲಿ ಜವಾಬ್ದಾರಿಯ ಬಂಧನವಾಗಲೀ ಹೊರೆಯಾಗಲೀ ಇರುವುದಿಲ್ಲ. ಹಸಿವಾದಾಗ ತಿನ್ನುವ ಕನಸು. ರಾತ್ರಿಯಾದಾಗ ನಿದ್ರಿಸಬೇಕೆಂಬ ಕನಸು, ನಿದ್ರೆಯಲ್ಲೂ ಮತ್ತೂ ಕನಸು. ಜವಾಬ್ದಾರಿ ಇಲ್ಲದಿರುವುದರಿಂದ ಕನಸುಗಳಿಗೆ ಹೆಚ್ಚು ಅವಕಾಶ. ಹಸಿವಾದಾಗ ಅಮ್ಮ ತುತ್ತು ಕೊಡುತ್ತಾಳೆ ಎಂಬ ಭರವಸೆ. ಆಶೆಗಳು ಮೊಳೆತಾಗ ಅಪ್ಪನಲ್ಲಿ ಪರಿಹಾರವನ್ನು ಕಾಣುವ ಬಾಲ್ಯ ಅದೊಂದು ಸುಂದರ ಸಮಯ. ಮರಿಯಾನೆ ತನ್ನ ತಾಯಿಯ ಹಿಂದೆಯೇ ಅನುಸರಿಸುವುದನ್ನು ಕಾಣಬಹುದು. ಕೇವಲ ತಾಯಿ ಆನೆಯ ಮೈ ಸ್ಪರ್ಷ ಸಾಕು ಅದು ಅನುಸರಿಸುತ್ತದೆ. ನಮ್ಮಲೊಂದು ಹಸು ಇತ್ತು. ಮೇಯುವುದಕ್ಕೆ ಗುಡ್ಡಕ್ಕೆ ಹೋದರೆ ಹಲವು ಸಲ ಅದರ ಕರು ನಮ್ಮ ಕೈಯಿಂದ ತಪ್ಪಿಸಿಕೊಂಡು ಹೋಗುತ್ತಿತ್ತು. ಆಗ ಅದು ತಾಯಿ ಹಸುವನ್ನು ಹಿಂಬಾಲಿಸುವ ಬಗೆ ನೋಡಬೇಕು. ಅದಕ್ಕಿರುವ ಕನಸು ಒಂದೇ, ಅಮ್ಮ ಹಸುವಿನ ಕೆಚ್ಚಲು. ಅಮ್ಮನ ಕಾಲಿಗೆ ಗಲ್ಲವನ್ನು ತಾಗಿಸುತ್ತಾ ಅಮ್ಮ ಹೋದಲ್ಲೆಲ್ಲಾ ಅದು ಹಿಂಬಾಲಿಸಿಬಿಡುತ್ತದೆ. ಅದೇ ಸಣ್ಣ ಕರುವನ್ನು ನಾವು ಕರೆದೊಯ್ದರೆ ಕುಣಿದು ಕುಪ್ಪಳಿಸಿ ಬಿಡುತ್ತದೆ. ಅದನ್ನು ನಿಯಂತ್ರಿಸುವುದೇ ದೊಡ್ಡ ಪರಿಶ್ರವಮವಾಗಿಬಿಡುತ್ತದೆ. ಹಾಗಾಗಿ ಪ್ರತಿಯೊಬ್ಬರಿಗೂ ಬಾಲ್ಯ ಎಂಬುದು ಶೂನ್ಯವಾದರೂ ಅದು ಸುಂದರವಾಗಿರುತ್ತದೆ. ಪುಟ್ಟ ಮಗು ಬೆಳೆಯಲಿ. ತನ್ನ ಕಾಲ ಮೇಲೆ ತಾನು ನಿಲ್ಲಲಿ ಎಂದು ಹೆತ್ತವರು ಸದಾ ಬಯಸುತ್ತಾರೆ. ಆದರೆ ಮಗು ಬೆಳೆಯುತ್ತಾ ಹೋದಂತೆ ಅವರಿಗೆ ಏನೋ ಕಳೆದು ಕೊಂಡ ಅನುಭವ. ಮಗುವಿನ ಆಟ ಪಾಠ ತೊದಲು ನುಡಿ ಇದೆಲ್ಲ ಕಡಿಮೆಯಾದಂತೆ ಛೇ ಕಳೆದು ಹೋಯ್ತಲ್ಲಾ ಎಂಬ ಹಪ ಹಪಿಕೆ ಇರುತ್ತದೆ. ಅದಕ್ಕೆ ಕಾರಣ ಆ ಬಾಲ್ಯ, ಆ ಶೈಶವಾವಸ್ಥೆ. ಈ ಹೊಸತಾದ ಲೋಕವನ್ನು ಬೆರಗು ಕಣ್ಣುಗಳಿಂದ ನೋಡುತ್ತ ಪ್ರಕೃತಿಯನ್ನು ಕಲಿಯಲು ತೊಡಗುವ ಆ ಬಾಲ್ಯ ಅದೊಂದು ಸುಂದರ ಅವಧಿ. 

ನಮ್ಮ ಬಾಲ್ಯದಲ್ಲಿ ವಾಹನ ಎಂದರೆ ನಮಗೆ ಅದ್ಭುತ ವಸ್ತು. ಜೀವ ಇಲ್ಲದೇ ಇದ್ದರೂ ಚಲಿಸುವ ಈ ವಸ್ತು. ಇದಕ್ಕೆ ಕಲು ಕಣ್ಣುಗಳಿಲ್ಲ.  ಚಕ್ರಗಳು ಉರುಳುತ್ತಾ ಹೋಗುವ ಬಗೆ. ಚಕ್ರಗಳು ನಿಂತಲ್ಲೇ ತಿರುಗಿದರೂ ವಾಹನ ಮುಂದಕ್ಕೆ ಚಲಿಸುತ್ತದೆ. ಅತ್ಯಂತ ಅಚ್ಚರಿಯ ವಿಷಯ. ಅದರಲ್ಲೂ ನಮ್ಮೂರಲ್ಲಿ ಓಡಾಡುವ ಬಸ್ಸುಗಳು ಅದೊಂದು ಸುಂದರ ಸ್ವಪ್ನಗಳ ಗೂಡು. ಹಿರಿಯರು ನಮ್ಮನ್ನು ಕರೆದುಕೊಂಡು ಹೋಗುತ್ತಾರೆ ಎಂದರೆ ಅದೇನು ಸಡಗರ. ಬಸ್ಸು ಹತ್ತಿ ಡ್ರೈವರ್ ಪಕ್ಕದಲ್ಲೇ ಸೀಟು ಸಿಕ್ಕಿದರೆ...ಅಲ್ಲಿ ಎದುರಿನ ಗಾಜಿನ ಬಳಿ ನಿಂತುಕೊಂಡು ಎದರಾಗುವ ಸುಂದರ ದೃಶ್ಯಗಳನ್ನು ನೋಡುತ್ತಾ ಇದೇ ಎನು ಸ್ವಪ್ನ ಅಂತ ಭ್ರಮೆಗೊಳ್ಳುವುದೂ ಇದೆ. ಹತ್ತಿದ ಬಸ್ಸು ಇಳಿಯುವುದೆಂದರೆ ಇಷ್ಟವಿಲ್ಲದ ಕೆಲಸ. ಇನ್ನು ಬಸ್ಸನ್ನು ಚಲಾಯಿಸುವ ಡ್ರೈವರ್ ನಮ್ಮ ಕನಸುಗಳ ದೊಡ್ಡ ಕಥಾನಾಯಕ.  ಆದರ್ಶ ಪುರುಷ. ಅಮ್ಮನೂ ಹಾಗೆ ಅಳುವ ಮಗುವಿಗೆ ಮೊದಲು ತೋರಿಸುವುದು ಡ್ರೈವರ್ ಮಾಮನನ್ನು. ಎಲ್ಲ ಮಕ್ಕಳನ್ನು ರಮಿಸಬಲ್ಲ ಅದ್ಭುತ ವ್ಯಕ್ತಿತ್ವ. ಬಸ್ಸನ್ನು ಮುಂದಕ್ಕೆ ಒಯ್ಯುವ ಈತನಿಗೆ ಜಗತ್ತಿನ ಎಲ್ಲಾ ರಸ್ತೆಗಳ ಅರಿವು ಇರುತ್ತದೆ.  ಈಗೀಗ ಎಲ್ಲಾ ಮನೆಯಲ್ಲೂ ಸ್ವಂತ ವಾಹನಗಳು ಇರುವುದರಿಂದ ಈ ಡ್ರೈವರ್ ಮಾಮ ಎಂಬ ಹೀರೋನ ಕನಸು ಎಲ್ಲೋ ಮರೆಯಾಗಿ ಹೋಗಿದೆ. ಡ್ರೈವರ್ ಮಾಮ ಕಣ್ಮರೆಯಾಗಿ ಹೋಗಿದ್ದಾನೆ. 

ನಮ್ಮ ಊರಲ್ಲಿ ಉಪ್ಪಳದಿಂದ ಬಾಯಾರು ತನಕ ಹನ್ನೆರಡು ಮೈಲಿ ಇರಬಹುದು. ಅಗ ಮೂರು ನಾಲ್ಕು ಬಸ್ಸು ಓಡುವುದು ಬಿಟ್ಟರೆ ನೆನಪಾದಾಗ ಒಂದೆರಡು ಲಾರಿ ಕಾರುಗಳು ಕಣ್ಣಿಗೆ ಬೀಳುತ್ತಿದ್ದವು. ಅಟೋ ರಿಕ್ಷಾಗಳನ್ನು ನೋಡಬೇಕಾದರೆ ಮಂಗಳೂರಿಗೆ ಇಲ್ಲ ಕಾಸರಗೋಡಿಗೆ ಹೋಗಬೇಕಿತ್ತು. ಅಂತಹ ಕಾಲದಲ್ಲಿ ನಮಗೆ ಸ್ವರ್ಗದ ರಥದಂತೆ ಭಾಸವಾಗುವುದು ಅಗೊಮ್ಮೆ ಈಗೊಮ್ಮೆ ಓಡುವ ಶಂಕರ್ ವಿಠಲ್ ಬಸ್ಸುಗಳು. ಇನ್ನು ಅದನ್ನು ಚಲಾಯಿಸುವ ಡ್ರೈವಗಳೆಂದರೆ ನಮ್ಮ ಹೀರೋಗಳು. ಸಿನಿಮಾ ನೋಡಿ ಗೊತ್ತಿಲ್ಲ. ಹಾಗಾಗಿ ಸಿನಿಮಾದ ಹೀರೋಗಿಂತಲೂ ಈ ಡ್ರೈವರ್ ಮಾಮ ಆದರ್ಶ ಪುರುಷರು. ದೊಡ್ಡವನಾದ ಮೇಲೆ ಏನಾಗಬೇಕು ಎಂಬ ಪಟ್ಟಿಯಲ್ಲಿ  ಮೊದಲು ಕಾಣುವ ಸ್ಥಾನ ಈ ಡ್ರೈವರ್ ನದ್ದು. ನಾನು ಡ್ರೈವರ್ ಆಗುತ್ತೇನೆ ಅಂತ ಹೇಳದ ಮಕ್ಕಳು ಇರಲಾರದು. ಏನಾದರೂ ಅಂಗಡಿಯಿಂದ ತರುವುದಕ್ಕೆ ಹೇಳಿದರೆ ನಮ್ಮಲ್ಲಿ ಡ್ರೈವರ್ ಆವಾಹನೆಯಾಗಿ ಬಿಡುತ್ತಾನೆ. ಬುರ್ ಅಂತ ಸದ್ದು ಮಾಡಿಕೊಂಡು ಬಾಯಲ್ಲೇ ಹಾರನ್ ಬಿಡುತ್ತ ಗಾಳಿಯಲ್ಲೇ ಕೈಯಲ್ಲಿ ಇಲ್ಲದ ಸ್ಟೇರಿಂಗ್ ತಿರುಗಿಸುತ್ತಾ ಓಡುವುದೆಂದರೆ ಅದೇನೋ ಸಂತೋಷ. ತೋಟದ ಬದುವಿನಲ್ಲಿ ಗದ್ದೆಯ ಹುಣಿಯಲ್ಲಿ ಹೀಗೆ ಬಸ್ಸು ಬಿಟ್ಟುಕೊಂಡು ಹೋದರೆ ಕ್ರಮಿಸಿದ ದಾರಿಯ ದೂರವೇ ತಿಳಿಯುವುದಿಲ್ಲ. ಈಗಲೂ ಊರಿಗೆ ಹೋದರೆ ಹೀಗೇ ಓಡುತ್ತಿದ್ದ ಜಾಗಗಳನ್ನು ನೋಡುತ್ತೇನೆ. ಹಲವು ಕಡೆ ಬದಲಾಗಿದೆ, ಇನ್ನು ಕೆಲವು ಕಡೆ ಅದೇ ಹಾದಿಗಳು ಇವೆ. ಬದುಕಿನಲ್ಲಿ ನಾವು ಎಲ್ಲಿಂದ ಎಲ್ಲಿಗೋ ತಲುಪಿ ಬಿಡುತ್ತೇವೆ. ಆದರೆ ಈ ಹಾದಿಗಳು ಇದ್ದಲ್ಲೇ ಇರುತ್ತವೆ. ಆ ನೆನಪುಗಳ ಬರಹಗಳನ್ನು ತೋರಿಸಿ ಬಾಲ್ಯವನ್ನು ನೆನಪಿಸುತ್ತವೆ.  ಮಳೆ ಬಂದರೂ ಸಂಭ್ರಮ. ಬಿಸಿಲಾದರೂ ಸಂಭ್ರಮ.ಮಳೆ ಬಂದಾಗ ಮಳೆಯ ನೀರನ್ನು ರಟ್ಟಿಸಿಕೊಂಡು ಹೋಗುವಾಗ ದೊಡ್ಡ ಲೈಲೆಂಡ್ ಲಾರಿ ಬಿಟ್ಟುಕೊಂಡು ಹೋದ ಅನುಭವ.  ಈ ಕನಸಿನ ಡ್ರೈವಿಂಗ್ ಮಾಡದ ಬಾಲ್ಯವೇ ಇರಾಲಾರದು. ಈಗ ಬಾಲ್ಯವೂ ಬದಲಾಗಿದೆ. ಕನಸುಗಳೂ ಬದಲಾಗಿ ಹೋಗಿದೆ. ಕಳೆದು ಹೋದ ಬಾಲ್ಯ ಮಾತ್ರವಲ್ಲ. ಕನಸೂ ಕಳೆದು ಹೋಗಿರುತ್ತವೆ. ಹಾಗಾಗಿ ಬಾಲ್ಯದ ನೆನಪು ಮಾಡುವುದೆಂದರೆ ನೆನಪಿಗೆ ಬರುವ ಘಟನೆಗಳನ್ನೆಲ್ಲ ಎಳೆದು ತರುವ ಪ್ರಯತ್ನ. ಹಾಗಿತ್ತು ಹೀಗಿತ್ತು ಎನ್ನುವಾಗ ನಮ್ಮ ಪೆದ್ದುತನ, ನಮ್ಮ ಮುಗ್ದತೆ ಕೂಡ ವೈಶಿಷ್ಟ್ಯವಾಗಿಬಿಡುತ್ತದೆ. 

ನನ್ನ ಬದುಕಿನಲ್ಲು ಹಲವು ಡ್ರೈವರ್ ಗಳು ಹೀರೋಗಳಾಗಿ ಬಿಟ್ಟಿದ್ದಾರೆ. ಅವರಂತೆ ನಾನಾಗಬೇಕು ಅಂತ ಕನಸು ಕಂಡದ್ದಿದೆ. ಆಗ ನೆನಪಿಗೆ ಬರುವುದು ಹಲವರು ಇರಬಹುದು.  ನಾವು ಬಾಲ್ಯದಲ್ಲೇ ಚಕ್ಕುಲಿ ಚೀಲವನ್ನು ಹಿಡಿದು ಸುತ್ತಾಡುವುದರಿಂದ ಎಲ್ಲಾ ಬಸ್ಸುಗಳ ಡ್ರೈವರ್ ಕಂಡಕ್ಟರ್ ಗಳು ನಮಗೆ ಪರಿಚಯದವರಾಗಿದ್ದರು. ಗೋಪಾಲಣ್ಣ, ಮಹಾಬಲ ಶೆಟ್ಟರು, ಪೀರ್ ಸಾಯಿಬರು... ಎಲ್ಲರೂ ನಮ್ಮ ಮನೆಯವರಂತೆ ನಮ್ಮಲ್ಲಿ ವ್ಯವಹರಿಸುತ್ತಿದ್ದರು. ಬಸ್ಸುಗಳು ಬರುವಾಗ ರಸ್ತೆ ಬದಿ ನಿಂತು ಕೈ ಆಡಿಸಿದರೆ, ಇವರು ಒಮ್ಮೆ ಪರಿಚಯದ ನಗು ನಕ್ಕರೆ ಉಳಿದ ಮಕ್ಕಳ ಎದುರು ನಾವು ದೊಡ್ಡ ಮನುಷ್ಯರಾಗುತ್ತಿದ್ದೆವು.  ಆದರೆ ಎಲ್ಲಕ್ಕಿಂತಲೂ ಹೆಚ್ಚು ಭಾವನಾತ್ಮಕವಾಗಿ ನನಗೆ ನೆನಪಿಗೆ ಬರುವುದು ಡ್ರೈವರ್ ರಾಂ ಭಟ್ರು. ಅತ್ಯಂತ ವಿಲಕ್ಷಣ. ಅಷ್ಟೇ ಆತ್ಮೀಯತೆಯನ್ನು ತೋರುವ  ವ್ಯಕ್ತಿತ್ವ.  ತೀರಾ ಸಣ್ಣ ಬಾಲ್ಯದಿಂದಲೂ ಇವರನ್ನು ಕಂಡ ನೆನಪಿದೆ. ಕೋಲು ಶರೀರದ, ಸಣಕಲು ವ್ಯಕ್ತಿ. ತೀಕ್ಷ್ಣವಾದ ಕಣ್ಣುಗಳು ಚಿಕ್ಕದಾದ ಮುಖ. ಬಾಯಲ್ಲಿ ಸದಾ ತಾಂಬೂಲ. ನಾವು ಹೇಳುವುದಿತ್ತು...ಎಲೆ ಅಡಿಕೆ ಹೊಗೆಸೊಪ್ಪು ಹಾಕಿ ಬಸ್ಸು ಬಿಟ್ಟರೆ ರಾಂಭಟ್ರನ್ನು ಹಿಂದಿಕ್ಕುವ ಡ್ರೈವರ್ ಯಾರೂ ಇಲ್ಲ. ಮೊದಲಿಗೆ ಇವರಿಗೆ ಬಿಳೀ ಬಣ್ಣದ ಕಾರು ಇತ್ತು. ಆಗಿನಿಂದಲೇ ಇವರ ಸಂಪರ್ಕ ಬೆಳೆದು ಬಂದಿತ್ತು. ಆನಂತರ ಕಾರು ಬಿಟ್ಟು ಶಂಕರ್ ವಿಟ್ಠಲ್ ಬಸ್ಸಿನ ಡ್ರೈವರ್ ಆಗಿ ಬದಲಾದರು. ಆಗ ಅಚ್ಚರಿ ಎಂದರೆ ಚಿಕ್ಕ ಕಾರನ್ನು ಬಿಡುವ ರಾಮ ಭಟ್ಟರಿಗೆ ಬಸ್ಸು ಬಿಡುವ ಅಭ್ಯಾಸವಾದ ಬಗೆಯಾದರೂ ಹೇಗೆ? 

ಉಪ್ಪಳದಿಂದ ಬಾಯಾರು ತನಕ ಬಸ್ಸುಗಳು ಬಹಳ ವಿರಳವಾಗಿದ್ದುದರಿಂದ ಎಡೆ ಹೊತ್ತಿನಲ್ಲಿ ಹಲವು ಕಾರುಗಳು ಜನರನ್ನು ಕೊಂಡೊಯ್ಯುವ ಸರ್ವೀಸು ನಡೇಸುತ್ತಿದ್ದವು. ಉಪ್ಪಳದ ಮಾರಪ್ಪಣ್ಣ, ಬಾಬಣ್ಣ ಪೈವಳಿಕೆಯ ಅಬ್ಬಾಸ್ ಬ್ಯಾರಿ, ಬಾಯರಿನ ರಾಂಭಟ್ರು ಹೀಗೆ ಇದ್ದರೆ,  ಹಲವರು ಈಗ ನೆನಪಿಗೆ ಬರುವುದಿಲ್ಲ. ಆಗ ಬಸ್ಸು ಇಲ್ಲದೇ ಇರುವುದರಿಂದ ನಾವು ಐದಾರು ಕಿಲೋ ಮೀಟರ್ ದೂರ ಇದ್ದರೆ ನಡೆದೇ ಹೋಗುತ್ತಿದ್ದೆವು. ಹಲವರು ದೂರದ ಶಾಲೆಗೆ ನಡೆದುಕೊಂಡು ಹೋಗುವುದು ಸರ್ವೇಸಾಮಾನ್ಯ. 

ಪೈವಳಿಕೆಯಿಂದ ಬಾಯಾರು ಮೂರು ನಾಲ್ಕು ಕಿಲೋ ಮೀಟರ್ ಇದ್ದರೆ, ಹತ್ತಿರ ಜೋಡುಕಲ್ಲು ಬೇಕೂರು ಇನ್ನೂ ಸ್ವಲ್ಪದೂರ ಇದೆ. ಬಸ್ಸು ಇಲ್ಲದಿರುವುದರಿಂದ ನಡೆದುಕೊಂಡು ಹೋಗುವ ಅನಿವಾರ್ಯತೆ ಇರುತ್ತಿತ್ತು. ಆಗ ಈ ಕಾರುಗಳು ಬಂದರೆ ನಾವು ಕೈ ತೋರಿಸಿದರೂ ಅವರು ನಿಲ್ಲುತ್ತಿರಲಿಲ್ಲ. ಯಾಕೆಂದರೆ ಅದಕ್ಕೆ ಕೊಡುವುದಕ್ಕೆ ನಮ್ಮಲ್ಲಿ ದುಡ್ಡಿರುತ್ತಿರಲಿಲ್ಲ. ಅಥವಾ ನಾವೇ ಹೆದರಿ ಕೈ ತೋರಿಸುತ್ತಿರಲಿಲ್ಲ. ಭರ್ ಅಂತ ಓಡುವ ಕಾರನ್ನು ನೋಡಿ ನಮಗೂ ಹೀಗೆ ಹೋಗುವ ಅವಕಾಶ ಇದ್ದರೆ ಅಂತ ಆಶೆಯಿಂದ ಕನಸು ಕಾಣುತ್ತಿದ್ದೆವು. ಅಗ ನನಗೆ  ನನ್ನ ಹಲವು ಕನಸನ್ನು ನನಸು ಮಾಡಿದವರು..ಇದೇ ರಾಂ ಭಟ್ಟರು. ಕೈಯಲ್ಲಿ ದುಡ್ಡು ಇಲದೇ ಇದ್ದರು..ಖಾಲಿ ಇದ್ದ ಕಾರಿಗೆ ಹತ್ತಿಸಿ...ಮೊದಲಿಗೆ ಬೈಯುತ್ತಿದ್ದರು, ನಂತರ ಹತ್ತಿಸಿಕೊಂಡು ಕರೆದುಕೊಂಡು ಹೋಗುವ ಅವರ ಅತ್ಮೀಯತೆ ಈಗ ಅದೇ ರಸ್ತೆಯಲ್ಲಿ ಓಡಾಡುವಾಗ ನೆನಪಿಗೆ ಬರುತ್ತದೆ. ಪ್ರತಿಯೋಂದು ಚಡಾವು, ತಿರುವುಗಳು ಇಂತಹ ಹಲವು ಕಥೆಗಳನ್ನು ಹೇಳುತ್ತವೆ. ಅ ನೆನಪುಗಳು ರಾಂಭಟ್ರನ್ನು ನೆನಪಿಸುತ್ತವೆ. ಎಲ್ಲೆಲ್ಲ ತಮ್ಮ ಕಾರನ್ನು ನಿಲ್ಲಿಸಿ ನಮ್ಮನ್ನು ಹತ್ತಿಸಿಕೊಂಡಿದ್ದಾರೆ ಎಂದು ನೆನಪಿಸಿಕೊಳ್ಳುವಾಗ ಹೃದಯ ಭಾರವಾಗಿಬಿಡುತ್ತದೆ. 

ರಾಮ ಭಟ್ಟರದು ಉಳಿದ ಡ್ರೈವರ್ ಗಳಂತೆ ಪ್ಯಾಂಟ್ ಶರ್ಟ್ ಧರಿಸುವ ಡ್ರೈವರ್ ಅಲ್ಲ.    ಒಂದು ಮಸುಕಾದ ಅಂಗಿ ಒಳಗಿನ ದೊಡ್ಡ ಚಡ್ಡಿಕಾಣುವಂತೆ ಒಂದು ಲುಂಗಿ ಇದು ಅವರ ಸಹಜ ಉಡುಗೆ. ಅಂಗಿಯಲ್ಲಿ ಕೆಳಗಿನ ಎರಡು ಗುಂಡಿ ಹಾಕಿದರೆ ನಂತರ ಹಾಗೇ ಬಿಟ್ಟಿರುತ್ತಿದ್ದದ್ದೇ ಹೆಚ್ಚು. ಬಸ್ಸಿನಿಂದ ಇಳಿದರೆ ಒಂದು ಬಟ್ಟೆಯ ಚೀಲ.   ಹೀಗಿದ್ದ  ಭಟ್ಟರು ಬಹಳ ಆತ್ಮೀಯರಾಗಿಬಿಡುತ್ತಿದ್ದರು. ಹಲವು ಸಲ ಇವರು ಬೈಯುತ್ತಾರೆ ಎಂದು ರಸ್ತೆಯ ಬದಿಯಲ್ಲಿ ಎಲ್ಲೋ ಮರೆಯಾಗಿ ನಿಲ್ಲುತ್ತಿದ್ದೆವು. ನುಡಿದಂತೆ ನಡೆಯುವ ನೇರ ನಡೆಯ ರಾಂಭಟ್ಟರು ಬೈಯ್ಯುವುದು ಅವರ ಸಹಜ ವ್ಯಕ್ತಿತ್ವವಾದರೂ ಅದರ ಹಿಂದೆ ಇರುವ ಅವರ ಹಿರಿತನದ ಆತ್ಮೀಯತೆ ಅತ್ಯಂತ ದೊಡ್ಡದು. ಅದನ್ನುನೆನನಸಿ ಈಗಲೂ ಭಾವುಕನಾಗಿ ಬಿಡುತ್ತೇನೆ. ಆ ಬಡತನದ ಬಾಲ್ಯದಲ್ಲಿ  ಇವರಿಂದ ಸಿಕ್ಕಿದ ಹಲವು ನಿಸ್ವಾರ್ಥ ಸಹಾಯಗಳು ಮರೆಯುವುದಕ್ಕಿಲ್ಲ.  ರಸ್ತೆ ಬದಿಯಲ್ಲಿ ಎಲ್ಲಿ ಕಂಡರೂ ಹಲವು ಸಲ ವಾಹನ ನಿಲ್ಲಿಸಿ ವಿಚಾರಿಸಿ ಹತ್ತಿಸಿಕೊಳ್ಳುತ್ತಿದ್ದರು, ಸುಮ್ಮನೇ ರಸ್ತೆ ಬದಿ ಓಡಾಡಿಕೊಂಡಿದ್ದರೆ ಗದರುತ್ತಿದ್ದರು. 

ಆಗ ನಾವು ಬಾಲಕರು, ಕೆಲವೊಮ್ಮೆ ಹುಡುಗರಲ್ವಾ ಅಂತ ಕೆಲವು ಪರಿಚಯ ಇಲ್ಲದ ಡ್ರೈವರ್ ಗಳು ಕೈ ತೋರಿಸಿದರೂ ಬಸ್ಸು ನಿಲ್ಲಿಸುತ್ತಿರಲಿಲ್ಲ. ಆಗ ಬಸ್ ಸ್ಟಾಪ್ ನಲ್ಲಿ ಯಾರಾದರೂ ಹಿರಿಯ ಪ್ರಯಾಣಿಕರು ಇದ್ದರೆ ಈಗ ಬಸ್ಸು ನಿಲ್ಲಿಸಬಹುದು ಎಂದು ನಿರಾಳವಾಗುತ್ತಿದ್ದೆವು. ಇನ್ನು ಬಸ್ಸಿನಲ್ಲಿ ಸಂಚರಿಸುವಾಗಲೂ ಅಷ್ಟೇ...ನಮ್ಮ ಸ್ಟಾಪ್ ಬಂದರೂ ಬಸ್ಸು ನಿಲ್ಲುತ್ತಿರಲಿಲ್ಲ. ಮತ್ತೆ ಒಂದಷ್ಟು ದೂರ ಹೋಗಿ ಯಾರಾದರೂ ಇಳಿಯುವುದಕ್ಕಿದ್ದರೆ ಬಸ್ಸು ನಿಲ್ಲುತ್ತಿತ್ತು. ಆಗ ಈಗಿನಂತೆ ಅಲ್ಲಲ್ಲಿ ಬಸ್ ಸ್ಟಾಪ್ ಇಲ್ಲ. ಒಂದು ಕಡೆ ಬಸ್ಸು ನಿಂತರೆ ಆಮೆಲೆ ನಂತರದ ನಿಲುಗಡೆ ಬಹಳ ದೂರ ಇರುತ್ತಿತ್ತು. ಹಾಗಿರುವಾಗ ಬಸ್ಸು ನಿಲ್ಲಿಸದೇ ಇದ್ದರೆ ನಾವು ಅಲ್ಲಿ ಇಳಿದು ಪುನಃ  ಹಿಂದುರಿಗಿ ಬರಬೇಕಿತ್ತು. ಬಸ್ಸಿನ ಒಳಗೆ ನಮಗೆ ಕೂಗಿ ಹೇಳುವುದಕ್ಕೂ ಭಯ. ಆದರೆ ರಾಂಭಟ್ಟರು ಇದ್ದರೆ ನಮ್ಮ ನೋಡಿ ಬಸ್ಸು ನಿಲ್ಲಿಸುತ್ತಿದ್ದರು. ಒಂದು ವೇಳೆ ಇಳಿಯದೇ ಇದ್ದರೆ ತಮಾಷೆಯಲ್ಲಿ  ಗದರಿ ಇಳಿಸುತ್ತಿದ್ದರು. ದೊಡ್ಡ ಚಕ್ಕುಲಿ ಚೀಲ ಹಿಡಿದು ರಸ್ತೆ ಬದಿ ನಿಂತು ಇವರ ಬಸ್ಸಿಗೆ ಕೈ ತೋರಿಸಿದರೆ ನಿಲ್ಲಿಸಿ ಹತ್ತಿಸುತ್ತಿದ್ದರು. ನಂತರ ಗದರುತ್ತಿದ್ದರು...ಇಷ್ಟು ಉದ್ದ ಇದ್ದಿ ಇಷ್ಟು ದೊಡ್ಡ ಬಸ್ಸು ನಿಲ್ಲಿಸುತ್ತಿಯಲ್ಲಾ ಅಂತ ಗದರುವಾಗ ಎಲ್ಲರೂ ನಗೆಯಾಡುತ್ತಿದ್ದರು. ಹಲವು ಸಲ ದೂರದ ಬಾಯಾರಿಗೆ ಉಪ್ಪಳಕ್ಕೆ ಇನ್ನೆಲ್ಲಿಗೋ ಚಕ್ಕುಲಿ ಕೊಡುವುದಿದ್ದರೆ...ಚೀಲದಲ್ಲಿ ಹಾಕಿ ಇವರಲ್ಲಿ ಕೊಡುತ್ತಿದ್ದೆವು. ಇವರೇ ಆ ಅಂಗಡಿಗೆ ಮುಟ್ಟಿಸಿ ಬರುವಾಗ ದುಡ್ದು ತಂದು ಕೊಡುತ್ತಿದ್ದರು. ಈತರ ಸೇವೆಗಳು ಹಲವು ಡ್ರೈವರ್ ಗಳು ಮಾಡುತ್ತಿದ್ದರೂ ರಾಂಭಟ್ರಲ್ಲಿ ನಮಗೆ ಇದ್ದ ಆತ್ಮೀಯತೆ ಸಲುಗೆ ಅತ್ಯಂತ ದೊಡ್ಡದು. 

ಮದುವೆಯಾದ ಹೊಸತರಲ್ಲಿ ನಾನು ಒಬ್ಬನೇ ಬಸ್ಸು ಹತ್ತಿದರೆ , ಕೇಳುತ್ತಿದ್ದರು ಎಲ್ಲಿ ನಿನ್ನ ಪಟ್ಟಿಗೆ..?.ಯಾಕೆ ಬಿಟ್ಟು ಬಂದದ್ದು.? ಅಂತ ಹೆಂಡತಿಯನ್ನು ಕರೆದುಕೊಂಡು ಬರದೇ ಇರುವುದಕ್ಕೆ ಗದರುತ್ತಿದ್ದರು.  ನಿವೃತ್ತಿಯ ಅಂಚಿನ ವರರೆಗೂ ವೃದ್ದಾಪ್ಯದಲ್ಲಿ ಡ್ರೈವರ್ ಆಗಿ ದುಡಿದವರು. ಒಂದು ಸಲ ಬಸ್ ಮುಷ್ಕರದ ದಿನಗಳವು. ಬಸ್ಸುಗಳು ಓಡಾಡುತ್ತಿರಲಿಲ್ಲ. ನಾನು ಕನಿಯಾಲದ ಗುಡ್ದದ ರಸ್ತೆಯಲ್ಲಿ ನಡೆಯುತ್ತಾ ಹೋಗುತ್ತಿರಬೇಕಾದರೆ, ಇವರು ಅಲ್ಲಿನ ಮಣ್ಣ ರಸ್ತೆಯ ಗುಂಡಿಗಳಿಗೆ   ಇವರು ಒಬ್ಬರೇ ಕಲ್ಲು ಮಣ್ಣು ತಂದು ಹಾಕಿ ಗುಂಡಿಗಳನ್ನು ಮುಚ್ಚುತ್ತಿದ್ದರು. ಬಹಳ ಆಶ್ಚರ್ಯವಾಗಿತ್ತು. ಚಾಲಕ ಹುದ್ದೆಯ ವೃತ್ತಿಪರತೆಗೆ ಇದೊಂದು ಚಿಕ್ಕ ಉದಾಹರಣೆ. ಅಂಡಮಾನಿನಂತೆ ಇರುವ ಗ್ರಾಮಕ್ಕೆ ಪಂಚಾಯತ್ ಅಥವಾ ಸರಕಾರದ ದೃಷ್ಟಿ ಬೀಳುತ್ತಿದ್ದದ್ದು ಎರಡು ಮೂರು ವರ್ಷಗಳಿಗೊಮ್ಮೆ. ಹಾಗಾಗಿ ರಸ್ತೆಯ ಗುಂಡಿ ಮುಚ್ಚುವ ಕೆಲಸವನ್ನು ಇವರು ಬಿಡುವಿನ ವೇಳೆಯಲ್ಲಿ ಮಾಡುತ್ತಿದ್ದರು. ಇಂತ ವೃತ್ತಿ ಪರತೆಯನ್ನು ನಾನು ಬೇರೆ ಚಾಲಕರಲ್ಲಿ ಕಾಣಲಿಲ್ಲ. ನೇರ ನಡೆ ಖಾರ ನುಡಿಯ ರಾಮ ಭಟ್ಟರದ್ದು ಮೃದುವಾದ ಹೃದಯ. ಮಾನವೀಯತೆ ಮನುಷ್ಯತ್ವ ಅಂತರಂಗದ ಸೌಂದರ್ಯಕ್ಕೆ ಸಾಕ್ಷಿಯಾಗಿತ್ತು. 

ಇವರ ಮನೆಗೆ ಯಾರಾದರೂ ನೆಂಟರು ಬಂದಾಗ, ಮಗಳು ತವರಿಗೆ ಬಂದಾಗ..ಇವರು ನಮ್ಮಲ್ಲಿ ಚಕ್ಕುಲಿ ಕೊಳ್ಳಲು ಬರುತ್ತಿದ್ದರು. ಆವರ ಅತಿಥಿ ಸತ್ಕಾರದಲ್ಲಿ ನಮ್ಮಲ್ಲಿ ತಯಾರಾಗುತ್ತಿದ್ದ ಚಕ್ಕುಲಿ ಒಂದು ಪ್ರಧಾನ ಅಂಗ. ಹಾಗೆ ಬಂದಾಗ ಚೀಲ ತುಂಬ ಮನೆಯಲ್ಲಿ ಬೆಳೆಯುತ್ತಿದ್ದ ತೆಂಗಿನಕಾಯಿ ತರುತ್ತಿದ್ದರು. ಅದೆಷ್ಟು ಬೆಲೆಯೋ...ಅದಕ್ಕೆ ಲೆಕ್ಕವಿಲ್ಲ. ಒಂದಷ್ಟು ಚಕ್ಕುಲಿ ಪ್ಯಾಕೆಟ್ ಅದರ ಬದಲಿಗೆ ಕೊಂಡೊಯ್ಯುತ್ತಿದ್ದರು. ನಾನು ಮೊತ್ತ ಮೊದಲಿಗೆ ಚೇತಕ್ ಸ್ಕೂಟರ್ ಕೊಂಡಾಗ ಮನೆಗೆ ಬಂದು ನೋಡಿದ್ದರು. ನನ್ನನ್ನು ಅಭಿನಂದಿಸಿದ್ದರು. ಒಂದು ದಿನ ನನ್ನ ಅದೇ ಸ್ಕೂಟರ್ ನಲ್ಲಿ ಹಿಂದೆ ಅವರನ್ನು ಕೂರಿಸಿ ಕರೆದುಕೊಂಡು ಈ ಡ್ರೈವರ್ ಮಾಮನನ್ನು  ಅಭಿಮಾನದಿಂದ ಕರೆದುಕೊಂಡು ಹೋಗಿದ್ದೆ. ನನ್ನ ಬಾಲ್ಯಾವಸ್ಥೆಯಿಂದ ಪ್ರೌಢಾವಸ್ತೆಯ ತನಕ ಗೃಹಸ್ಥನಾದ ಮೇಲೂ ಇವರ ಒಡನಾಟ ಇತ್ತು. ಊರಿನಿಂದ ನಮ್ಮ ವಾಸ ಬೆಂಗಳೂರಿಗೆ ಬಂದ ನಂತರ ಅವರ ಬಗ್ಗೆ ಹೆಚ್ಚಿನ ಅರಿವಿಲ್ಲ. ಹಲವುಸಲ ಊರಿಗೆ ಹೋದಾಗ ವಿಚಾರಿಸಿದರೂ ಸರಿಯಾದ ಮಾಹಿತಿ ಸಿಗಲಿಲ್ಲ.ಅವರದೊಂದು ಫೋಟೊ ತೆಗೆದಿದ್ದೆ. ಅದೂ ಕಳೆದು ಹೋಗಿ ಅವರ ಬಗ್ಗೆ ಯಾವ ಕುರುಹು ಇಲ್ಲ. ಆದರೆ  ಏನಂತೆ ಅವರ ನೆನಪು ಸದಾ ನನ್ನ ಜತೆಯಲ್ಲಿರುತ್ತದೆ. ಈಗ ಊರಿಗೆ ಹೋದಾಗ ರಸ್ತೆಯ ಪ್ರತಿ ತಿರುವುಗಳನ್ನು ನೋಡಿದಾಗ ಈ ಡ್ರೈವರ್ ಮಾಮ ರಾಮನ ನೆನಪಾಗುತ್ತದೆ. 




Friday, September 6, 2024

ಸಂಸ್ಕೃತ ಗಾನ ಸ್ವರ್ಗಯಾನ

ಪೂಜ್ಯ ಸ್ವಾಮೀಜಿ ಹೇಳಿದ ಮಾತು ಸ್ವರ್ಗಕ್ಕೆ ಹೋಗಬೇಕಾದರೆ ಸಂಸ್ಕೃತ ತಿಳಿದಿರಬೇಕು.   

         ಕುರುಕ್ಷೇತ್ರ ಯುದ್ದ ಆರಂಭವಾಗುವ ಮುನ್ನ ಅರ್ಜುನನಿಗಾಗಲೀ ಉಳಿದ ಪರಮ ಭಾಗವತ ಎನಿಸಿದ ಭೀಷ್ಮರಿಗಾಗಲಿ ಇನ್ನುಳಿದ ಯಾರಿಗಾದರೂ ಅಲ್ಲಿ ಭಗವದ್ಗೀತೆ ಭೋಧಿಸಲ್ಪಡಬಹುದು ಎಂದು ನಿರೀಕ್ಷೆಯೂ ಇರಲಿಲ್ಲ. ಅರ್ಜುನನಿಗೆ ಆವರಿಸಿದ ಮೋಹ,  ಖಿನ್ನತೆ, ಕ್ಲೈಬ್ಯ ಎಲ್ಲವೂ  ಒಂದು ದಿವ್ಯ ಬೋಧನೆಗೆ ಕಾರಣವಾಗುತ್ತದೆ ಎಂದು ಸ್ವತಃ ಅರ್ಜುನನಿಗೂ ಅರಿವಿರಲಾರದು. ಭಗವನ್ ಶ್ರೀಕೃಷ್ಣನಿಗಲ್ಲದೇ ಇದು ಬೇರೆಯವರು ಕಲ್ಪಿಸುವುದಕ್ಕೆ ಸಾಧ್ಯವಿಲ್ಲ. ಅದು ಬೋಧನೆಯಾಯಿತು. ಹಲವು ಸಲ ಭಗವಂತನ ಪ್ರಚೋದನೆ ಹಲವು ರೀತಿಯಲ್ಲಿ ಇರುತ್ತದೆ. ಸ್ವಾಮೀಜಿಗಳ ಮಾತು ಹಲವು ವಿಧದಲ್ಲಿ ವಿಶ್ಲೇಷಣೆ ಒಳಗಾಗಬಹುದು. ಅದು ತಪ್ಪೋ ಸರಿಯೋ ...ಅವರ ಜ್ಞಾನದ ಪರಿಧಿಗೆ ಅದುವಿಶ್ಲೇಷಿಸಲ್ಪಡುತ್ತದೆ. ಆದರೆ  ಅವರು ಹೇಳಿದ ಮಾತಿಗೂ ಕುರುಕ್ಷೇತ್ರದ ಗೀತೆಯ ಬೋಧನೆಗೂ ಒಂದು ಸಾಮ್ಯತೆ ಯಾಕೋ ಯೋಚನೆಗೆ ಬಂದುಬಿಡುತ್ತದೆ. 

        ಮಧ್ಯವಯಸ್ಸು ದಾಟಿದ ಮೇಲೆ ಸಂಸ್ಕೃತ ಅರ್ಥವಾಗದೇ ಇದ್ದರೆ ಅದು ಬದುಕಲ್ಲ. ಇಲ್ಲಿ ಹೇಳುವುದು ಸಂಸ್ಕೃತ ಅದು ಕೇವಲ ಭಾಷೆಗೆ ಸೀಮಿತವಾಗಿ ಹೇಳುವುದಲ್ಲ. ಯಾಕೆಂದರೆ ಸಂಸ್ಕೃತ ಅದು ಭಾಷೆಯಲ್ಲ. ಅದು ಬದುಕಿನ ಕ್ರಿಯಾಭಾಗ. ಕೃತ ಎನ್ನುವುದು ಆ ಕ್ರಿಯೆಯ ದರ್ಶನ. ಸಂ ಎನ್ನುವುದು...ಸತ್ಯದ ದರ್ಶನ. ಹೇಗೆ ಸನ್ಮಾರ್ಗ ಸನ್ಮಮನಸ್ಸು, ಸಚ್ಚಿಂತನೆ, ಸದ್ಬುದ್ದಿ...ಹೀಗೆ ಸತ್ಯವನ್ನು ಪ್ರತಿಫಲಿಸುತ್ತದೆಯೋ ಅದೇ ರೀತಿ ಸಂ ಎನ್ನುವುದು ಸತ್ಯದ ಪ್ರತಿಫಲನ. ಸತ್ಯದ ದರ್ಶನವೇ ಕರ್ತವ್ಯವಾಗುವಾಗ ಸಂಸ್ಕೃತವಾಗುತ್ತದೆ. ಈ ಕಲ್ಪನೆ ಎಷ್ಟು ಸರಿಯೋ ಗೊತ್ತಿಲ್ಲ. ನನ್ನ ಸೀಮಿತ ಜ್ಞಾನದಲ್ಲಿ ಅರ್ಥವಿಸಿಕೊಂಡದ್ದು ಇದು. 

        ಯಕ್ಷಗಾನದಲ್ಲಿ , ಪೆರ್ಲ ಸಾಮಗ ಶೇಣಿ ಹೀಗೆ ಮುಂತಾದವರ ತಾಳ ಮದ್ದಲೆಯ  ಅರ್ಥಗಾರಿಕೆ ಕೇಳಿ ಕಳೆದ ಬಾಲ್ಯ ನನ್ನದು. ಯಕ್ಷಗಾನ ಪರಿಚಯ ಇದ್ದವರಿಗೆ ಇದರ ಆಳ ಅರ್ಥವಾದೀತು. ಅಲ್ಲಿ ಚದುರಿ ಬಿದ್ದ ಸಂಸ್ಕೃತದ ಶಬ್ದಗಳು,  ನನಗೆ ಈಗಲೂ ಅದುವೇ  ಸಂಸ್ಕೃತದ ಆದ್ಯಾಕ್ಷರಗಳು . ಆಗ ಅವುಗಳನ್ನು ಅರ್ಥವಿಸುವುದಕ್ಕೆ ಹೆಣಗಿದ್ದೇನೆ. ಅಥವಾ ಯಾವುದೋ ಒಂದು ಅರ್ಥವನ್ನು ಕಂಡುಕೊಂಡಿರಬಹುದು. ಆದರೆ ಈಗ ಲೋಕಜ್ಞಾನದ ದೃಷ್ಟಿಯಲ್ಲಿ ಅದನ್ನು ಕಾಣುವಾಗ ಸಂಸ್ಕೃತ ಕೇವಲ ಭಾಷೆಯಲ್ಲ ಎಂದು ಅರಿವಿಗೆ ಬರುತ್ತದೆ.  ಆಗ ಅದು ಸಂಸ್ಕೃತ ಎನ್ನುವ ಕಲ್ಪನೆಯೇ ಇರಲಿಲ್ಲ. ಆಗ ಅದನ್ನು ಕೇಳಿ  ಅರ್ಥವಿಸಿಕೊಂಡದ್ದು ಎಷ್ಟೋ ಅದೊಂದು  ಜ್ಞಾನ ಅಷ್ಟೇ ಅನಿಸಿದರೂ,   ಈಗ ಅನಿಸುತ್ತದೆ  ಆಗ ಕಲಿಯಬೇಕಿತ್ತು.   ಅದಕ್ಕೆ ಧರ್ಮದ ಲೇಪನವನ್ನು ಕೊಟ್ಟು ಅದನ್ನು ಅಸ್ಪೃಶ್ಯತೆಯಿಂದ ಕಾಣುವಾಗ ಅಲ್ಲಿ ಮೂರ್ಖತನವನ್ನಷ್ಟೇ ಗುರುತಿಸಬಹುದು. ಕನ್ನಡಕ್ಕೆ ಭುವನೇಶ್ವರಿಯನ್ನು ಇಡುವಾಗ ಕಾಣದ ಈ ಧಾರ್ಮಿಕ ಭೇದ ಸಂಸ್ಕೃತದಲ್ಲಿ ಕಾಣುವಾಗ ಈ ಎಡಬಿಡಂಗಿತನದ ಮೂರ್ಖತನ ಅರಿವಾಗುತ್ತದೆ. 

ಅಜ್ಜನ ಜತೆಯಲ್ಲಿ ಕೇವಲ ಎರಡಕ್ಷರದ ಮಂತ್ರ ಬಿಟ್ಟರೆ ಆ ವೇದ ಭಾಷೆ ನಾಲಗೆಯಲ್ಲಿ ಕುಣಿಯಲೇ ಇಲ್ಲ.  ಬಾಲ್ಯದಲ್ಲಿ ಶಾಲೆಗೆ ಒಬ್ಬರು ಸಂಸ್ಕೃತ ಅಧ್ಯಾಪಕರು ಬರುತ್ತಿದ್ದರು. ತಲೆಗೊಂದು ಜುಟ್ಟು ಅವರ ವ್ಯಕ್ತಿತ್ವ ನೋಡಿ ಬಾಲಿಶ ಬುದ್ದಿಯಲ್ಲಿ ಅದೊಂದು ಹಾಸ್ಯದ ಸಂಗತಿಯಾಗಿ ಕಂಡರೂ ಆನಂತರ ಛೇ ಸ್ವರ್ಣಾವಕಾಶವನ್ನು ಕಳೆದುಕೊಂಡೆ ಅಂತ ಅನ್ನಿಸುತ್ತದೆ. ಯಾಕೆಂದರೆ ಆಗ ಅದನ್ನು ಕಲಿ ಎಂದು ಹೇಳುವ ಪ್ರಚೋದನೆಯೇ ಇಲ್ಲ. ಗುರು ಇದ್ದರೆ ಸಾಲದು...ಆ ಗುರುವನ್ನೂ ಗುರುವಿನ ಜ್ಞಾನವನ್ನೂ ತೋರಿಸುವ ಸ್ಥಾನ ಒಂದು ಇರಬೇಕು.  ಸ್ವಾಮೀಜಿ ಹೇಳಿದ ಮಾತು ಇದಕ್ಕೆ ಪೂರಕ. ಸಂಸ್ಕೃತ ಎಂಬುದರ ಅಗತ್ಯವನ್ನು ಸರಳವಾಗಿ ಹೇಳಿದ್ದಾರೆ.  ಈಗ ಸಂಸ್ಕೃತ ಎಂದರೆ ಸಾಗರದ ಬದಿಯಲ್ಲಿ ನಿಂತು ನೋಡಿದ ಅನುಭವಾಗುತ್ತದೆ. ಸಾಗರದ ಘೋಷ ಕೇಳಿಸುತ್ತದೆ, ಒಳಗೆ ಇಳಿದು ತಿಳಿದುಕೊಳ್ಳುವುದಕ್ಕೆ ಈಜು ಬರುವುದಿಲ್ಲ. ಸಾಮರ್ಥ್ಯ ಇರುವುದಿಲ್ಲ. ಭಾಷೆ ಅರ್ಥವಾಗುವುದಿಲ್ಲ.  ಆದರೂ ಅಷ್ಟೋ ಇಷ್ಟೋ ಅರ್ಥವಾಗುವ ಸಂಸ್ಕೃತ ಅದೊಂದು ಬೆಳಕಾಗುತ್ತದೆ.  ಈಗ  ಜೀವನ ಸಂಧ್ಯೆಯಲ್ಲಿ ಆಧ್ಯಾತ್ಮ ಲೋಕದಲ್ಲಿ ಹೆಜ್ಜೆ ಊರುವಾಗ ಅದೇ ಅಲ್ಪ ಸಂಸ್ಕೃತವೇ ಮೂದಿನ ಹಾದಿಯನ್ನು ತೋರಿಸುವುದಕ್ಕೆ ಕಾರಣವಾಗುತ್ತದೆ. ಹಾಗಾದರೆ ಸಂಸ್ಕೃತ ಭಾಷೆ ಅರ್ಥವಾದರೇ ಯೋಚಿಸಬೇಕು.  ಆಧ್ಯಾತ್ಮ ಎಂದರೆ ಪರಮಾತ್ಮನನ್ನು ತಿಳಿದುಕೊಳ್ಳುವುದು. ಹಾಗಾಗಿಯೆ ಸಂಸ್ಕೃತ ತಿಳಿದವನಿಗೆ ಮಾತ್ರ ಸ್ವರ್ಗಕ್ಕೆ ಹೋಗಬಹುದು ಎನ್ನುವ ಮಾತಿಗೆ ಅರ್ಥ ಒದಗಿಬರುತ್ತದೆ. ನಮ್ಮ ಚಿಂತನೆಗೆ ಅಡರಿದ ಪೊರೆಯನ್ನು ಪೂರ್ವಗ್ರಹ ಇಲ್ಲದೇ ಕಳಚಿ ನೋಡಿದರೆ ಮಾತ್ರ ಇದು ಅರಿವಾಗಬಹುದು. 

ಸಂಸ್ಕೃತ ಅದು ಕೇವಲ ಭಾಷೆಯಲ್ಲ. ಉಳಿದ ಭಾಷೆಗಳೆಲ್ಲವೂ ಮನುಷ್ಯ ಅಥವಾ ಈ ಪ್ರಾಣಿ ಪಕ್ಷಿ ಪ್ರಕೃತಿ ಹುಟ್ಟಿಸಿದ್ದರೆ ಸಂಸ್ಕೃತಕ್ಕೆ ಅದರ ಹುಟ್ಟನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ಇಂದು ನಾವು ಭಗವಂತನನ್ನು ಪೂಜಿಸುವ ಮಂತ್ರಗಳೇ ಇದಕ್ಕೆ ಸಾಕ್ಷಿ. ಯಾರು ಬರೆದರು ಇದನ್ನು? ಅಥವಾ ಇದನ್ನು ಮೊದಲು ಬರೆದ ಪುಸ್ತಕಗಳು ಎಲ್ಲಿದೆ?  ಈ ಸೃಷ್ಟಿಯ ಅದ್ಭುತಗಳಲ್ಲಿ ಇದೂ  ಒಂದು. ಸಂಸ್ಕೃತ ಅರ್ಥವಾದರೆ ಭಗವಂತನ ಮಾತುಗಳು ಭವಂತನ ಜ್ಞಾನ ಅರ್ಥವಾಗಬಹುದು. ಪರಿಪೂರ್ಣ ಜ್ಞಾನ ಎಂದರೆ ಅದು ಭಗವಂತ.  ನಮ್ಮ ಲೌಕಿಕ ಜೀವನದ ಪ್ರಭಾವದಲ್ಲಿ, ಆ ಪುಸ್ತಕ ಎಲ್ಲೋ ಇರಬಹುದು, ಎಲ್ಲೋ ಬರೆದಿರಬಹುದು ಎಂದು ಅಂದುಕೊಳ್ಳಬಹುದು. ಒಂದುವೇಳೆ ಇದ್ದರೂ ಆ ಪುಸ್ತಕ ಉಳಿದಿರಬಹುದೇ? ಪುಸ್ತಕ ಉಳೀಯಲಿಲ್ಲ, ಮಂತ್ರ ಮಾತ್ರ ಉಳಿದುಕೊಂಡಿದೆ. ಅದು  ಯಾವಾಗಿನಿಂದ ಎಂದು ಹೇಳುವುದಕ್ಕೆ ಯಾರಿಗೂ ಸಾಧ್ಯವಿಲ್ಲ.

ಪ್ರಣವಸ್ಯ ಪರಬ್ರಹ್ಮ ಋಷಿಃ ಅಂತ ಮುಂಜಾನೆ ಸೂರ್ಯೋದಯ ನೋಡುವ ಒಬ್ಬ ಬ್ರಾಹ್ಮಣ...ಅದನ್ನು  ಜಾತಿಗೆ ಸೀಮಿತವಾಗಿಸಿದ್ದು ಮನುಷ್ಯನ ಅಲ್ಪಜ್ಞಾನ. ಪರಬ್ರಹ್ಮ ಕಲ್ಪನೆ ಇದ್ದರೆ ಅಲ್ಲಿ ಬ್ರಾಹ್ಮಣ ಶಬ್ದದ ಆ ಜೀವನದ ಅರಿವಾದೀತು. ಪರಬ್ರಹ್ಮ ಜಗತ್ತಿನಲ್ಲಿ ಯಾವುದು ಅತ್ಯಂತ ದೊಡ್ಡದು ಅತ್ಯಂತ ಶ್ರೇಷ್ಠವೋ ಅದು. ಯಾವುದು ಎಂದು ನಿರ್ಧರಿಸುವುದು ನಮ್ಮ ಜ್ಞಾನ. ಅದಕ್ಕೆ ಸೀಮಿತವಾಗಿ ಅದು ಗೋಚರವಾಗುತ್ತಾ ಹೋಗುತ್ತದೆ. ಆ ಜ್ಞಾನ ಒದಗಿಬರಬೇಕಾದರೆ ಸಂಸ್ಕೃತದ ಪೂರ್ಣ ಅರಿವು ಆದರೆ ಮಾತ್ರ ಸಾಧ್ಯ. ಇಲ್ಲವಾದರೆ ಭಗವಂತ ಕೇವಲ ಒಂದು ಸ್ಥಾನ ಮಾತ್ರ. ಮುಂಜಾನೆ ಪರಬ್ರಹ್ಮ ಋಷಿಃ ಅಂತ ಪ್ರಣವಿಸುವಾಗ, ಅಲ್ಲಿ ಮೂರ್ತಿ ಕಾಣುವುದಿಲ್ಲ, ಚರಾಚರ ವಸ್ತುಗಳು ಯಾವುದೂ ಗೋಚರಿಸುವುದಿಲ್ಲ, ಕೇವಲ ಮನಸ್ಸು ಮಾತ್ರ ಕಾಣುತ್ತದೆ. ಅಂತರಂಗದ ಭಗವತ್ ಸ್ವರೂಪವನ್ನು ಗ್ರಹಿಸುವಾಗ ಮನಸ್ಸು ನಮಸ್ಕರಿಸುತ್ತದೆ. ಅದೇ ಪ್ರಣವಸ್ಯ ಪರಬ್ರಹ್ಮ ಋಷಿಃ ಅಂತ ಹೇಳುವುದು. ಇದೊಂದು ಕ್ರಿಯೆ...ಅದು ಜಾತಿಯೋ ಜಾತಿಯ ರೂಪದ ಧರ್ಮವೋ ಅಲ್ಲ. ನಮಸ್ಕರಿಸುವುದು ಯಾವ ಜಾತಿಗೂ ಸೀಮಿತವಾಗಿರುವುದಿಲ್ಲ. ಕೇವಲ ನಮಸ್ಕಾರ. ನಮಸ್ಕಾರ ಎನ್ನುವಾಗ ದೇಹ ನಮಸ್ಕರಿಸಬೇಕೆಂದೇನೂ ಇಲ್ಲ. ಮನಸ್ಸು ಮನಸ್ಸಿನ ಭಾವ ನಮಸ್ಕರಿಸಿದರೆ ಸಾಕು. 

ಸಂಸ್ಕೃತ ...ಎಂಬ ಶಬ್ದವನ್ನೂ ಉಚ್ಚರಿಸುವುದಕ್ಕೆ ತಿಳಿಯದವರು ಸಂಸ್ಕೃತದ ಮೇಲೆ ಧಾರ್ಮಿಕ ಭೇದವನ್ನು ಕಲ್ಪಿಸುತ್ತಾರೆ. ಯಾವುದೇ ಒಂದು ವಿಷಯದ ಬಗ್ಗೆ ಅದನ್ನು ವಿಶ್ಲೇಸುವುದು ಅದರ ಸಂಪೂರ್ಣ ಜ್ಞಾನ ಅರಿವಾದಾಗ ಮಾತ್ರ ಸಾಧ್ಯವಾಗುತ್ತದೆ. ಸಂಸ್ಕೃತ ಅರ್ಥವಾಗದವರು ಸಂಸ್ಕೃತದ ಬಗ್ಗೆ ವಿಶ್ಲೇಷಣೆ ಮಾಡುತ್ತಾರೆ. ಸಮುದ್ರದ ಬಗ್ಗೆ ದಡದಲ್ಲಿ ಕುಳಿತು ಕಲ್ಪಿಸಿದಂತೆ, ಸಮುದ್ರದ ಆಳಕ್ಕೆ ಇಳಿದರೆ ಮಾತ್ರ ಸಮುದ್ರದ ಬಗ್ಗೆ ವಿಶ್ಲೇಷಣೆ ಮಾಡಬಹುದು. ಸಂಸ್ಕೃತ ಎಂದರೆ ಅದು ಸಾಗರದಂತೆ. ಅದನ್ನು ಯಾವ ಬಗೆಯಲ್ಲಿ ವಿಶ್ಲೇಷಣೆ ಮಾಡಿದರೂ ಅದು ಅಪೂರ್ವವಾಗುತ್ತದೆ. ಅದರೊಳಗಿನ ಜ್ಞಾನದ ಮುತ್ತುರತ್ನವನ್ನು ಪಡೆಯಬೇಕಾದರೆ ಅದನ್ನು ತಿಳಿಯಬೇಕು. ನಮಗೆ ತಿಳಿಯುವ ಒಂದೆರಡು ಶಬ್ದಗಳೇ ಅಗಾಧವಾದ ಜ್ಞಾನವನ್ನು ಒದಗಿಸುವಾಗ ಇನ್ನು ಸಂಸ್ಕೃತ ಸಂಪೂರ್ಣ ಅರ್ಥವಾದರೆ ಅದು ಹೇಗಿರಬೇಡ? ಸ್ವಾಮೀಜಿಯವರು ಹೇಳಿದ ಮಾತು ಅದು ಕೇವಲ ಅವರ ಸ್ವಯಂ ಪ್ರಜ್ಞೆಗೆ ಸೀಮಿತವಾಗಿ ಉಳಿದಿಲ್ಲ. ಕುರುಕ್ಷೇತ್ರದ ಭಗವದ್ಗೀತೆಯ ಪ್ರಚೋದನೆಯೂ ಅಲ್ಲಿರಬಹುದು. 

ಸಂಸ್ಕೃತ ಮೂಲ ಜ್ಞಾನದ ಸ್ವರೂಪ. ಬೇಕಾದರೆ ಅರ್ಥವಿಸಿಕೊಳ್ಳಬಹುದು. ಲೌಕಿಕ ಜೀವನೇ ಪರಮ ಸತ್ಯ ಎಂದು ತಿಳಿದು ಅದನ್ನುಕಡೆಗಣಿಸುವುದಿದ್ದರೆ ಅದು ಅವರ ಮೌಢ್ಯ. ಬೇಕಾದಂತೆ ಉಳಿದೆಲ್ಲವನ್ನೂ ಆಯ್ಕೆ ಮಾಡುವ ನಮಗೆ ಬೇಕಿದ್ದರೆ ಆಯ್ಕಮಾಡಬಹುದು. ಆಧ್ಯಾತ್ಮವನ್ನು ಹೇಗೆ ಒಪ್ಪಿಕೊಳ್ಳುತ್ತೇವೋ ಹಾಗೆ ಸಂಸ್ಕೃತವನ್ನು ಮಾನ್ಯ ಮಾಡಬಹುದು. ಎಲ್ಲರಿಗೂ ವಾಕ್ ಸ್ವಾತಂತ್ರ್ಯ ಎಂಬುದು ಇರುತ್ತದೆ. ಅದು ಸ್ವಾಮಿಜಿಗೂ ಇರಬೇಕಲ್ಲ? ಅವರು ಹೇಳಿದ ಸಮಯ , ಹೇಳಿದ ಕ್ಷೇತ್ರ ಇದೆಲ್ಲವೂ ಔಚಿತ್ಯ ಮೀರಿ ಬಂದುದಲ್ಲ. ಬೇಕಾದರೆ ಅಂಗೀಕರಿಸಬಹುದು ಇಲ್ಲವಾದರೆ ಬಿಟ್ಟು ಬಿಡಬಹುದು. ಸ್ವರ್ಗ ಎಂಬ ಕಲ್ಪನೆಯಂತೆ. ಸ್ವಾಮೀಜಿ ಹೇಳಿದ್ದಾರೆ, ಹೇಳುವುದನ್ನೆಲ್ಲ ವಿವಾದ ಮಾಡುತ್ತಾ ಹೋದರೆ ನಾವು ಮೌನಿಗಳಾಗಿಬಿಡಬೇಕು. ಅಡಗಿರುವ ಜ್ಞಾನದ ಒಟ್ಟಿಗೆ ಇನ್ನೂ ಹಲವು ಅದರಿಂದ ಸೇರಿಕೊಳ್ಳಬಹುದು. ಆದರೆ ಮುಂದೊಂದು ದಿನ ಅದು ಹೊರಬಾರದು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಹಲವರು ಏನೇನೋ ಹೇಳುತ್ತಿದ್ದಾರೆ. ಅದರ ಬಗ್ಗೆ ಯಾವ ವಿವಾದವು ಇರುವುದಿಲ್ಲ. ಮತ್ತೆ ಇದರೆ ಬಗ್ಗೆ ವಿವಾದ ಹುಟ್ಟಿಸುವುದು ಕೇವಲ ಸಂಸ್ಕೃತ ಎಂಬ  ಕಾರಣದಿಂದ. ಈಗ ಅದೇ ಮಾತು ಬೇರೆ ಯಾವುದೋ ಭಾಷೆಯ ಬಗ್ಗೆ ಹೇಳಿದರೆ ಅದು ವಿವಾದವಾಗಲಾರದೂ. ಅದು ಪರಮ ಸತ್ಯ ಅಂದುಕೊಳ್ಳಬಹುದು. ಹಾಗಿರುವಾಗ ಸಂಸ್ಕೃತದ ಬಗ್ಗೆ ಈ ದೂಷಣೆ ಯಾಕೆ ಇರಬೇಕು? 

ಸ್ವರ್ಗ ಎಂಬ ಕಲ್ಪನೆ , ನಮ್ಮ ಜೀವನವನ್ನು ಆಧರಿಸಿ ಹೇಳುವುದುಂಟು. ಸ್ವರ್ಗ ಬೇರೆ ಎಲ್ಲೂ ಇಲ್ಲ...ಅದು ಇಲ್ಲೇ ಇದೆ ಅಂತ ಹೇಳುತ್ತಾರೆ. ಈ ಜೀವನವನ್ನು ಸ್ವರ್ಗವಾಗಿಸುವುದು ಹೇಗೆ? ಸ್ವರ್ಗವಾಗಿಸುವಾಗ ಸಂಸ್ಕೃತ ಅಲ್ಲಿ ತಡೆಯನ್ನು ತರಬಹುದೇ ? ಸ್ವರ್ಗ ನಮ್ಮ ಕಲ್ಪನೆಯಾದರೂ ಅದು ಏನು ಎಂದು ಒಂದು ಅರ್ಥವಿರಲೇ ಬೇಕು.   ಅದು ಏನಾದರೂ ಆಗಿರಬಹುದು. ಅವರವರ ಮನಸ್ಸಿನ ಕಲ್ಪನೆಗೆ ಬಿಟ್ಟದ್ದು. ಹಾಗೆ ಸಂಸ್ಕೃತದಿಂದಲೂ ಅದು ಸಾಧ್ಯವಾಗುವುದಾದರೆ ಅದಕ್ಕೆ ಒಂದು ಅವಕಾಶವಾದರೂ  ಲಭ್ಯವಾಗಬೇಕು. ಪೂಜ್ಯ ಸ್ವಾಮೀಜಿಗಳ ಮಾತಿನಲ್ಲಿ ಯಾವ ಉತ್ಪ್ರೇಕ್ಷೆಯನ್ನೂ ಗುರುತಿಸುವುದಕ್ಕೆ ಸಾಧ್ಯವಿಲ್ಲ ಸಂಸ್ಕೃತ ಎಂಬ ಮಡವಂತಿಕೆಯ ದೃಷ್ಟಿ ಮಾತ್ರ ಇದನ್ನು ತುಚ್ಚವಾಗಿ ಕಾಣಬಹುದು. ಹಾಗಂತ ಅನುಸರಿಸುವ ಮನಸ್ಸನ್ನು ತಡೆಯುವುದು ಮೂರ್ಖತನವಾಗುತ್ತದೆ.