ಬಾಲ್ಯ ...ಅದೊಂದು ಅದ್ಭುತ ಕನಸುಗಳ ಭಂಡಾರ. ಸಾಕಾರಗೊಳ್ಳದಿದ್ದರೂ ಕನಸು ಪ್ರತಿಯೊಬ್ಬನಿಗೂ ಅತ್ಯಂತ ಆವಶ್ಯಕ ಸಾಧನದಂತೆ ಜತೆಗಿರುತ್ತದೆ. ಅದರಲ್ಲೂ ಬಾಲ್ಯದಲ್ಲಿ ಅದು ಬಹಳ ಸುಂದರವಾಗಿರುತ್ತದೆ. ಹಸಿದಾಗ ಆಹಾರದ ಕನಸು ಬಿದ್ದಂತೆ ಸ್ವಪ್ನ ಸುಷುಪ್ತಿ ಇವುಗಳ ನಡುವೆಯೇ ನಮ್ಮ ಜೀವನ ಇರುತ್ತದೆ. ಹಲವು ಸಲ ಭವಿಷ್ಯತ್ ನ ಹಾದಿ ನಿರ್ಧಾರವಾಗುವುದೂ ಕೂಡ ಈ ಕನಸುಗಳಿಂದ.
ಬಾಲ್ಯ ಪ್ರತಿಯೋರ್ವನ ಜೀವನದಲ್ಲೂ ಅದ್ಭುತವಾಗಿರುತ್ತದೆ. ಅದು ಬಡತನವಾಗಲಿ,ಸಿರಿತನವಾಗಲೀ ಅದು ಅಮೂಲ್ಯವಾಗುವುದು ಅಲ್ಲಿ ಜವಾಬ್ದಾರಿಯ ಬಂಧನವಾಗಲೀ ಹೊರೆಯಾಗಲೀ ಇರುವುದಿಲ್ಲ. ಹಸಿವಾದಾಗ ತಿನ್ನುವ ಕನಸು. ರಾತ್ರಿಯಾದಾಗ ನಿದ್ರಿಸಬೇಕೆಂಬ ಕನಸು, ನಿದ್ರೆಯಲ್ಲೂ ಮತ್ತೂ ಕನಸು. ಜವಾಬ್ದಾರಿ ಇಲ್ಲದಿರುವುದರಿಂದ ಕನಸುಗಳಿಗೆ ಹೆಚ್ಚು ಅವಕಾಶ. ಹಸಿವಾದಾಗ ಅಮ್ಮ ತುತ್ತು ಕೊಡುತ್ತಾಳೆ ಎಂಬ ಭರವಸೆ. ಆಶೆಗಳು ಮೊಳೆತಾಗ ಅಪ್ಪನಲ್ಲಿ ಪರಿಹಾರವನ್ನು ಕಾಣುವ ಬಾಲ್ಯ ಅದೊಂದು ಸುಂದರ ಸಮಯ. ಮರಿಯಾನೆ ತನ್ನ ತಾಯಿಯ ಹಿಂದೆಯೇ ಅನುಸರಿಸುವುದನ್ನು ಕಾಣಬಹುದು. ಕೇವಲ ತಾಯಿ ಆನೆಯ ಮೈ ಸ್ಪರ್ಷ ಸಾಕು ಅದು ಅನುಸರಿಸುತ್ತದೆ. ನಮ್ಮಲೊಂದು ಹಸು ಇತ್ತು. ಮೇಯುವುದಕ್ಕೆ ಗುಡ್ಡಕ್ಕೆ ಹೋದರೆ ಹಲವು ಸಲ ಅದರ ಕರು ನಮ್ಮ ಕೈಯಿಂದ ತಪ್ಪಿಸಿಕೊಂಡು ಹೋಗುತ್ತಿತ್ತು. ಆಗ ಅದು ತಾಯಿ ಹಸುವನ್ನು ಹಿಂಬಾಲಿಸುವ ಬಗೆ ನೋಡಬೇಕು. ಅದಕ್ಕಿರುವ ಕನಸು ಒಂದೇ, ಅಮ್ಮ ಹಸುವಿನ ಕೆಚ್ಚಲು. ಅಮ್ಮನ ಕಾಲಿಗೆ ಗಲ್ಲವನ್ನು ತಾಗಿಸುತ್ತಾ ಅಮ್ಮ ಹೋದಲ್ಲೆಲ್ಲಾ ಅದು ಹಿಂಬಾಲಿಸಿಬಿಡುತ್ತದೆ. ಅದೇ ಸಣ್ಣ ಕರುವನ್ನು ನಾವು ಕರೆದೊಯ್ದರೆ ಕುಣಿದು ಕುಪ್ಪಳಿಸಿ ಬಿಡುತ್ತದೆ. ಅದನ್ನು ನಿಯಂತ್ರಿಸುವುದೇ ದೊಡ್ಡ ಪರಿಶ್ರವಮವಾಗಿಬಿಡುತ್ತದೆ. ಹಾಗಾಗಿ ಪ್ರತಿಯೊಬ್ಬರಿಗೂ ಬಾಲ್ಯ ಎಂಬುದು ಶೂನ್ಯವಾದರೂ ಅದು ಸುಂದರವಾಗಿರುತ್ತದೆ. ಪುಟ್ಟ ಮಗು ಬೆಳೆಯಲಿ. ತನ್ನ ಕಾಲ ಮೇಲೆ ತಾನು ನಿಲ್ಲಲಿ ಎಂದು ಹೆತ್ತವರು ಸದಾ ಬಯಸುತ್ತಾರೆ. ಆದರೆ ಮಗು ಬೆಳೆಯುತ್ತಾ ಹೋದಂತೆ ಅವರಿಗೆ ಏನೋ ಕಳೆದು ಕೊಂಡ ಅನುಭವ. ಮಗುವಿನ ಆಟ ಪಾಠ ತೊದಲು ನುಡಿ ಇದೆಲ್ಲ ಕಡಿಮೆಯಾದಂತೆ ಛೇ ಕಳೆದು ಹೋಯ್ತಲ್ಲಾ ಎಂಬ ಹಪ ಹಪಿಕೆ ಇರುತ್ತದೆ. ಅದಕ್ಕೆ ಕಾರಣ ಆ ಬಾಲ್ಯ, ಆ ಶೈಶವಾವಸ್ಥೆ. ಈ ಹೊಸತಾದ ಲೋಕವನ್ನು ಬೆರಗು ಕಣ್ಣುಗಳಿಂದ ನೋಡುತ್ತ ಪ್ರಕೃತಿಯನ್ನು ಕಲಿಯಲು ತೊಡಗುವ ಆ ಬಾಲ್ಯ ಅದೊಂದು ಸುಂದರ ಅವಧಿ.
ನಮ್ಮ ಬಾಲ್ಯದಲ್ಲಿ ವಾಹನ ಎಂದರೆ ನಮಗೆ ಅದ್ಭುತ ವಸ್ತು. ಜೀವ ಇಲ್ಲದೇ ಇದ್ದರೂ ಚಲಿಸುವ ಈ ವಸ್ತು. ಇದಕ್ಕೆ ಕಲು ಕಣ್ಣುಗಳಿಲ್ಲ. ಚಕ್ರಗಳು ಉರುಳುತ್ತಾ ಹೋಗುವ ಬಗೆ. ಚಕ್ರಗಳು ನಿಂತಲ್ಲೇ ತಿರುಗಿದರೂ ವಾಹನ ಮುಂದಕ್ಕೆ ಚಲಿಸುತ್ತದೆ. ಅತ್ಯಂತ ಅಚ್ಚರಿಯ ವಿಷಯ. ಅದರಲ್ಲೂ ನಮ್ಮೂರಲ್ಲಿ ಓಡಾಡುವ ಬಸ್ಸುಗಳು ಅದೊಂದು ಸುಂದರ ಸ್ವಪ್ನಗಳ ಗೂಡು. ಹಿರಿಯರು ನಮ್ಮನ್ನು ಕರೆದುಕೊಂಡು ಹೋಗುತ್ತಾರೆ ಎಂದರೆ ಅದೇನು ಸಡಗರ. ಬಸ್ಸು ಹತ್ತಿ ಡ್ರೈವರ್ ಪಕ್ಕದಲ್ಲೇ ಸೀಟು ಸಿಕ್ಕಿದರೆ...ಅಲ್ಲಿ ಎದುರಿನ ಗಾಜಿನ ಬಳಿ ನಿಂತುಕೊಂಡು ಎದರಾಗುವ ಸುಂದರ ದೃಶ್ಯಗಳನ್ನು ನೋಡುತ್ತಾ ಇದೇ ಎನು ಸ್ವಪ್ನ ಅಂತ ಭ್ರಮೆಗೊಳ್ಳುವುದೂ ಇದೆ. ಹತ್ತಿದ ಬಸ್ಸು ಇಳಿಯುವುದೆಂದರೆ ಇಷ್ಟವಿಲ್ಲದ ಕೆಲಸ. ಇನ್ನು ಬಸ್ಸನ್ನು ಚಲಾಯಿಸುವ ಡ್ರೈವರ್ ನಮ್ಮ ಕನಸುಗಳ ದೊಡ್ಡ ಕಥಾನಾಯಕ. ಆದರ್ಶ ಪುರುಷ. ಅಮ್ಮನೂ ಹಾಗೆ ಅಳುವ ಮಗುವಿಗೆ ಮೊದಲು ತೋರಿಸುವುದು ಡ್ರೈವರ್ ಮಾಮನನ್ನು. ಎಲ್ಲ ಮಕ್ಕಳನ್ನು ರಮಿಸಬಲ್ಲ ಅದ್ಭುತ ವ್ಯಕ್ತಿತ್ವ. ಬಸ್ಸನ್ನು ಮುಂದಕ್ಕೆ ಒಯ್ಯುವ ಈತನಿಗೆ ಜಗತ್ತಿನ ಎಲ್ಲಾ ರಸ್ತೆಗಳ ಅರಿವು ಇರುತ್ತದೆ. ಈಗೀಗ ಎಲ್ಲಾ ಮನೆಯಲ್ಲೂ ಸ್ವಂತ ವಾಹನಗಳು ಇರುವುದರಿಂದ ಈ ಡ್ರೈವರ್ ಮಾಮ ಎಂಬ ಹೀರೋನ ಕನಸು ಎಲ್ಲೋ ಮರೆಯಾಗಿ ಹೋಗಿದೆ. ಡ್ರೈವರ್ ಮಾಮ ಕಣ್ಮರೆಯಾಗಿ ಹೋಗಿದ್ದಾನೆ.
ನಮ್ಮ ಊರಲ್ಲಿ ಉಪ್ಪಳದಿಂದ ಬಾಯಾರು ತನಕ ಹನ್ನೆರಡು ಮೈಲಿ ಇರಬಹುದು. ಅಗ ಮೂರು ನಾಲ್ಕು ಬಸ್ಸು ಓಡುವುದು ಬಿಟ್ಟರೆ ನೆನಪಾದಾಗ ಒಂದೆರಡು ಲಾರಿ ಕಾರುಗಳು ಕಣ್ಣಿಗೆ ಬೀಳುತ್ತಿದ್ದವು. ಅಟೋ ರಿಕ್ಷಾಗಳನ್ನು ನೋಡಬೇಕಾದರೆ ಮಂಗಳೂರಿಗೆ ಇಲ್ಲ ಕಾಸರಗೋಡಿಗೆ ಹೋಗಬೇಕಿತ್ತು. ಅಂತಹ ಕಾಲದಲ್ಲಿ ನಮಗೆ ಸ್ವರ್ಗದ ರಥದಂತೆ ಭಾಸವಾಗುವುದು ಅಗೊಮ್ಮೆ ಈಗೊಮ್ಮೆ ಓಡುವ ಶಂಕರ್ ವಿಠಲ್ ಬಸ್ಸುಗಳು. ಇನ್ನು ಅದನ್ನು ಚಲಾಯಿಸುವ ಡ್ರೈವಗಳೆಂದರೆ ನಮ್ಮ ಹೀರೋಗಳು. ಸಿನಿಮಾ ನೋಡಿ ಗೊತ್ತಿಲ್ಲ. ಹಾಗಾಗಿ ಸಿನಿಮಾದ ಹೀರೋಗಿಂತಲೂ ಈ ಡ್ರೈವರ್ ಮಾಮ ಆದರ್ಶ ಪುರುಷರು. ದೊಡ್ಡವನಾದ ಮೇಲೆ ಏನಾಗಬೇಕು ಎಂಬ ಪಟ್ಟಿಯಲ್ಲಿ ಮೊದಲು ಕಾಣುವ ಸ್ಥಾನ ಈ ಡ್ರೈವರ್ ನದ್ದು. ನಾನು ಡ್ರೈವರ್ ಆಗುತ್ತೇನೆ ಅಂತ ಹೇಳದ ಮಕ್ಕಳು ಇರಲಾರದು. ಏನಾದರೂ ಅಂಗಡಿಯಿಂದ ತರುವುದಕ್ಕೆ ಹೇಳಿದರೆ ನಮ್ಮಲ್ಲಿ ಡ್ರೈವರ್ ಆವಾಹನೆಯಾಗಿ ಬಿಡುತ್ತಾನೆ. ಬುರ್ ಅಂತ ಸದ್ದು ಮಾಡಿಕೊಂಡು ಬಾಯಲ್ಲೇ ಹಾರನ್ ಬಿಡುತ್ತ ಗಾಳಿಯಲ್ಲೇ ಕೈಯಲ್ಲಿ ಇಲ್ಲದ ಸ್ಟೇರಿಂಗ್ ತಿರುಗಿಸುತ್ತಾ ಓಡುವುದೆಂದರೆ ಅದೇನೋ ಸಂತೋಷ. ತೋಟದ ಬದುವಿನಲ್ಲಿ ಗದ್ದೆಯ ಹುಣಿಯಲ್ಲಿ ಹೀಗೆ ಬಸ್ಸು ಬಿಟ್ಟುಕೊಂಡು ಹೋದರೆ ಕ್ರಮಿಸಿದ ದಾರಿಯ ದೂರವೇ ತಿಳಿಯುವುದಿಲ್ಲ. ಈಗಲೂ ಊರಿಗೆ ಹೋದರೆ ಹೀಗೇ ಓಡುತ್ತಿದ್ದ ಜಾಗಗಳನ್ನು ನೋಡುತ್ತೇನೆ. ಹಲವು ಕಡೆ ಬದಲಾಗಿದೆ, ಇನ್ನು ಕೆಲವು ಕಡೆ ಅದೇ ಹಾದಿಗಳು ಇವೆ. ಬದುಕಿನಲ್ಲಿ ನಾವು ಎಲ್ಲಿಂದ ಎಲ್ಲಿಗೋ ತಲುಪಿ ಬಿಡುತ್ತೇವೆ. ಆದರೆ ಈ ಹಾದಿಗಳು ಇದ್ದಲ್ಲೇ ಇರುತ್ತವೆ. ಆ ನೆನಪುಗಳ ಬರಹಗಳನ್ನು ತೋರಿಸಿ ಬಾಲ್ಯವನ್ನು ನೆನಪಿಸುತ್ತವೆ. ಮಳೆ ಬಂದರೂ ಸಂಭ್ರಮ. ಬಿಸಿಲಾದರೂ ಸಂಭ್ರಮ.ಮಳೆ ಬಂದಾಗ ಮಳೆಯ ನೀರನ್ನು ರಟ್ಟಿಸಿಕೊಂಡು ಹೋಗುವಾಗ ದೊಡ್ಡ ಲೈಲೆಂಡ್ ಲಾರಿ ಬಿಟ್ಟುಕೊಂಡು ಹೋದ ಅನುಭವ. ಈ ಕನಸಿನ ಡ್ರೈವಿಂಗ್ ಮಾಡದ ಬಾಲ್ಯವೇ ಇರಾಲಾರದು. ಈಗ ಬಾಲ್ಯವೂ ಬದಲಾಗಿದೆ. ಕನಸುಗಳೂ ಬದಲಾಗಿ ಹೋಗಿದೆ. ಕಳೆದು ಹೋದ ಬಾಲ್ಯ ಮಾತ್ರವಲ್ಲ. ಕನಸೂ ಕಳೆದು ಹೋಗಿರುತ್ತವೆ. ಹಾಗಾಗಿ ಬಾಲ್ಯದ ನೆನಪು ಮಾಡುವುದೆಂದರೆ ನೆನಪಿಗೆ ಬರುವ ಘಟನೆಗಳನ್ನೆಲ್ಲ ಎಳೆದು ತರುವ ಪ್ರಯತ್ನ. ಹಾಗಿತ್ತು ಹೀಗಿತ್ತು ಎನ್ನುವಾಗ ನಮ್ಮ ಪೆದ್ದುತನ, ನಮ್ಮ ಮುಗ್ದತೆ ಕೂಡ ವೈಶಿಷ್ಟ್ಯವಾಗಿಬಿಡುತ್ತದೆ.
ನನ್ನ ಬದುಕಿನಲ್ಲು ಹಲವು ಡ್ರೈವರ್ ಗಳು ಹೀರೋಗಳಾಗಿ ಬಿಟ್ಟಿದ್ದಾರೆ. ಅವರಂತೆ ನಾನಾಗಬೇಕು ಅಂತ ಕನಸು ಕಂಡದ್ದಿದೆ. ಆಗ ನೆನಪಿಗೆ ಬರುವುದು ಹಲವರು ಇರಬಹುದು. ನಾವು ಬಾಲ್ಯದಲ್ಲೇ ಚಕ್ಕುಲಿ ಚೀಲವನ್ನು ಹಿಡಿದು ಸುತ್ತಾಡುವುದರಿಂದ ಎಲ್ಲಾ ಬಸ್ಸುಗಳ ಡ್ರೈವರ್ ಕಂಡಕ್ಟರ್ ಗಳು ನಮಗೆ ಪರಿಚಯದವರಾಗಿದ್ದರು. ಗೋಪಾಲಣ್ಣ, ಮಹಾಬಲ ಶೆಟ್ಟರು, ಪೀರ್ ಸಾಯಿಬರು... ಎಲ್ಲರೂ ನಮ್ಮ ಮನೆಯವರಂತೆ ನಮ್ಮಲ್ಲಿ ವ್ಯವಹರಿಸುತ್ತಿದ್ದರು. ಬಸ್ಸುಗಳು ಬರುವಾಗ ರಸ್ತೆ ಬದಿ ನಿಂತು ಕೈ ಆಡಿಸಿದರೆ, ಇವರು ಒಮ್ಮೆ ಪರಿಚಯದ ನಗು ನಕ್ಕರೆ ಉಳಿದ ಮಕ್ಕಳ ಎದುರು ನಾವು ದೊಡ್ಡ ಮನುಷ್ಯರಾಗುತ್ತಿದ್ದೆವು. ಆದರೆ ಎಲ್ಲಕ್ಕಿಂತಲೂ ಹೆಚ್ಚು ಭಾವನಾತ್ಮಕವಾಗಿ ನನಗೆ ನೆನಪಿಗೆ ಬರುವುದು ಡ್ರೈವರ್ ರಾಂ ಭಟ್ರು. ಅತ್ಯಂತ ವಿಲಕ್ಷಣ. ಅಷ್ಟೇ ಆತ್ಮೀಯತೆಯನ್ನು ತೋರುವ ವ್ಯಕ್ತಿತ್ವ. ತೀರಾ ಸಣ್ಣ ಬಾಲ್ಯದಿಂದಲೂ ಇವರನ್ನು ಕಂಡ ನೆನಪಿದೆ. ಕೋಲು ಶರೀರದ, ಸಣಕಲು ವ್ಯಕ್ತಿ. ತೀಕ್ಷ್ಣವಾದ ಕಣ್ಣುಗಳು ಚಿಕ್ಕದಾದ ಮುಖ. ಬಾಯಲ್ಲಿ ಸದಾ ತಾಂಬೂಲ. ನಾವು ಹೇಳುವುದಿತ್ತು...ಎಲೆ ಅಡಿಕೆ ಹೊಗೆಸೊಪ್ಪು ಹಾಕಿ ಬಸ್ಸು ಬಿಟ್ಟರೆ ರಾಂಭಟ್ರನ್ನು ಹಿಂದಿಕ್ಕುವ ಡ್ರೈವರ್ ಯಾರೂ ಇಲ್ಲ. ಮೊದಲಿಗೆ ಇವರಿಗೆ ಬಿಳೀ ಬಣ್ಣದ ಕಾರು ಇತ್ತು. ಆಗಿನಿಂದಲೇ ಇವರ ಸಂಪರ್ಕ ಬೆಳೆದು ಬಂದಿತ್ತು. ಆನಂತರ ಕಾರು ಬಿಟ್ಟು ಶಂಕರ್ ವಿಟ್ಠಲ್ ಬಸ್ಸಿನ ಡ್ರೈವರ್ ಆಗಿ ಬದಲಾದರು. ಆಗ ಅಚ್ಚರಿ ಎಂದರೆ ಚಿಕ್ಕ ಕಾರನ್ನು ಬಿಡುವ ರಾಮ ಭಟ್ಟರಿಗೆ ಬಸ್ಸು ಬಿಡುವ ಅಭ್ಯಾಸವಾದ ಬಗೆಯಾದರೂ ಹೇಗೆ?
ಉಪ್ಪಳದಿಂದ ಬಾಯಾರು ತನಕ ಬಸ್ಸುಗಳು ಬಹಳ ವಿರಳವಾಗಿದ್ದುದರಿಂದ ಎಡೆ ಹೊತ್ತಿನಲ್ಲಿ ಹಲವು ಕಾರುಗಳು ಜನರನ್ನು ಕೊಂಡೊಯ್ಯುವ ಸರ್ವೀಸು ನಡೇಸುತ್ತಿದ್ದವು. ಉಪ್ಪಳದ ಮಾರಪ್ಪಣ್ಣ, ಬಾಬಣ್ಣ ಪೈವಳಿಕೆಯ ಅಬ್ಬಾಸ್ ಬ್ಯಾರಿ, ಬಾಯರಿನ ರಾಂಭಟ್ರು ಹೀಗೆ ಇದ್ದರೆ, ಹಲವರು ಈಗ ನೆನಪಿಗೆ ಬರುವುದಿಲ್ಲ. ಆಗ ಬಸ್ಸು ಇಲ್ಲದೇ ಇರುವುದರಿಂದ ನಾವು ಐದಾರು ಕಿಲೋ ಮೀಟರ್ ದೂರ ಇದ್ದರೆ ನಡೆದೇ ಹೋಗುತ್ತಿದ್ದೆವು. ಹಲವರು ದೂರದ ಶಾಲೆಗೆ ನಡೆದುಕೊಂಡು ಹೋಗುವುದು ಸರ್ವೇಸಾಮಾನ್ಯ.
ಪೈವಳಿಕೆಯಿಂದ ಬಾಯಾರು ಮೂರು ನಾಲ್ಕು ಕಿಲೋ ಮೀಟರ್ ಇದ್ದರೆ, ಹತ್ತಿರ ಜೋಡುಕಲ್ಲು ಬೇಕೂರು ಇನ್ನೂ ಸ್ವಲ್ಪದೂರ ಇದೆ. ಬಸ್ಸು ಇಲ್ಲದಿರುವುದರಿಂದ ನಡೆದುಕೊಂಡು ಹೋಗುವ ಅನಿವಾರ್ಯತೆ ಇರುತ್ತಿತ್ತು. ಆಗ ಈ ಕಾರುಗಳು ಬಂದರೆ ನಾವು ಕೈ ತೋರಿಸಿದರೂ ಅವರು ನಿಲ್ಲುತ್ತಿರಲಿಲ್ಲ. ಯಾಕೆಂದರೆ ಅದಕ್ಕೆ ಕೊಡುವುದಕ್ಕೆ ನಮ್ಮಲ್ಲಿ ದುಡ್ಡಿರುತ್ತಿರಲಿಲ್ಲ. ಅಥವಾ ನಾವೇ ಹೆದರಿ ಕೈ ತೋರಿಸುತ್ತಿರಲಿಲ್ಲ. ಭರ್ ಅಂತ ಓಡುವ ಕಾರನ್ನು ನೋಡಿ ನಮಗೂ ಹೀಗೆ ಹೋಗುವ ಅವಕಾಶ ಇದ್ದರೆ ಅಂತ ಆಶೆಯಿಂದ ಕನಸು ಕಾಣುತ್ತಿದ್ದೆವು. ಅಗ ನನಗೆ ನನ್ನ ಹಲವು ಕನಸನ್ನು ನನಸು ಮಾಡಿದವರು..ಇದೇ ರಾಂ ಭಟ್ಟರು. ಕೈಯಲ್ಲಿ ದುಡ್ಡು ಇಲದೇ ಇದ್ದರು..ಖಾಲಿ ಇದ್ದ ಕಾರಿಗೆ ಹತ್ತಿಸಿ...ಮೊದಲಿಗೆ ಬೈಯುತ್ತಿದ್ದರು, ನಂತರ ಹತ್ತಿಸಿಕೊಂಡು ಕರೆದುಕೊಂಡು ಹೋಗುವ ಅವರ ಅತ್ಮೀಯತೆ ಈಗ ಅದೇ ರಸ್ತೆಯಲ್ಲಿ ಓಡಾಡುವಾಗ ನೆನಪಿಗೆ ಬರುತ್ತದೆ. ಪ್ರತಿಯೋಂದು ಚಡಾವು, ತಿರುವುಗಳು ಇಂತಹ ಹಲವು ಕಥೆಗಳನ್ನು ಹೇಳುತ್ತವೆ. ಅ ನೆನಪುಗಳು ರಾಂಭಟ್ರನ್ನು ನೆನಪಿಸುತ್ತವೆ. ಎಲ್ಲೆಲ್ಲ ತಮ್ಮ ಕಾರನ್ನು ನಿಲ್ಲಿಸಿ ನಮ್ಮನ್ನು ಹತ್ತಿಸಿಕೊಂಡಿದ್ದಾರೆ ಎಂದು ನೆನಪಿಸಿಕೊಳ್ಳುವಾಗ ಹೃದಯ ಭಾರವಾಗಿಬಿಡುತ್ತದೆ.
ರಾಮ ಭಟ್ಟರದು ಉಳಿದ ಡ್ರೈವರ್ ಗಳಂತೆ ಪ್ಯಾಂಟ್ ಶರ್ಟ್ ಧರಿಸುವ ಡ್ರೈವರ್ ಅಲ್ಲ. ಒಂದು ಮಸುಕಾದ ಅಂಗಿ ಒಳಗಿನ ದೊಡ್ಡ ಚಡ್ಡಿಕಾಣುವಂತೆ ಒಂದು ಲುಂಗಿ ಇದು ಅವರ ಸಹಜ ಉಡುಗೆ. ಅಂಗಿಯಲ್ಲಿ ಕೆಳಗಿನ ಎರಡು ಗುಂಡಿ ಹಾಕಿದರೆ ನಂತರ ಹಾಗೇ ಬಿಟ್ಟಿರುತ್ತಿದ್ದದ್ದೇ ಹೆಚ್ಚು. ಬಸ್ಸಿನಿಂದ ಇಳಿದರೆ ಒಂದು ಬಟ್ಟೆಯ ಚೀಲ. ಹೀಗಿದ್ದ ಭಟ್ಟರು ಬಹಳ ಆತ್ಮೀಯರಾಗಿಬಿಡುತ್ತಿದ್ದರು. ಹಲವು ಸಲ ಇವರು ಬೈಯುತ್ತಾರೆ ಎಂದು ರಸ್ತೆಯ ಬದಿಯಲ್ಲಿ ಎಲ್ಲೋ ಮರೆಯಾಗಿ ನಿಲ್ಲುತ್ತಿದ್ದೆವು. ನುಡಿದಂತೆ ನಡೆಯುವ ನೇರ ನಡೆಯ ರಾಂಭಟ್ಟರು ಬೈಯ್ಯುವುದು ಅವರ ಸಹಜ ವ್ಯಕ್ತಿತ್ವವಾದರೂ ಅದರ ಹಿಂದೆ ಇರುವ ಅವರ ಹಿರಿತನದ ಆತ್ಮೀಯತೆ ಅತ್ಯಂತ ದೊಡ್ಡದು. ಅದನ್ನುನೆನನಸಿ ಈಗಲೂ ಭಾವುಕನಾಗಿ ಬಿಡುತ್ತೇನೆ. ಆ ಬಡತನದ ಬಾಲ್ಯದಲ್ಲಿ ಇವರಿಂದ ಸಿಕ್ಕಿದ ಹಲವು ನಿಸ್ವಾರ್ಥ ಸಹಾಯಗಳು ಮರೆಯುವುದಕ್ಕಿಲ್ಲ. ರಸ್ತೆ ಬದಿಯಲ್ಲಿ ಎಲ್ಲಿ ಕಂಡರೂ ಹಲವು ಸಲ ವಾಹನ ನಿಲ್ಲಿಸಿ ವಿಚಾರಿಸಿ ಹತ್ತಿಸಿಕೊಳ್ಳುತ್ತಿದ್ದರು, ಸುಮ್ಮನೇ ರಸ್ತೆ ಬದಿ ಓಡಾಡಿಕೊಂಡಿದ್ದರೆ ಗದರುತ್ತಿದ್ದರು.
ಆಗ ನಾವು ಬಾಲಕರು, ಕೆಲವೊಮ್ಮೆ ಹುಡುಗರಲ್ವಾ ಅಂತ ಕೆಲವು ಪರಿಚಯ ಇಲ್ಲದ ಡ್ರೈವರ್ ಗಳು ಕೈ ತೋರಿಸಿದರೂ ಬಸ್ಸು ನಿಲ್ಲಿಸುತ್ತಿರಲಿಲ್ಲ. ಆಗ ಬಸ್ ಸ್ಟಾಪ್ ನಲ್ಲಿ ಯಾರಾದರೂ ಹಿರಿಯ ಪ್ರಯಾಣಿಕರು ಇದ್ದರೆ ಈಗ ಬಸ್ಸು ನಿಲ್ಲಿಸಬಹುದು ಎಂದು ನಿರಾಳವಾಗುತ್ತಿದ್ದೆವು. ಇನ್ನು ಬಸ್ಸಿನಲ್ಲಿ ಸಂಚರಿಸುವಾಗಲೂ ಅಷ್ಟೇ...ನಮ್ಮ ಸ್ಟಾಪ್ ಬಂದರೂ ಬಸ್ಸು ನಿಲ್ಲುತ್ತಿರಲಿಲ್ಲ. ಮತ್ತೆ ಒಂದಷ್ಟು ದೂರ ಹೋಗಿ ಯಾರಾದರೂ ಇಳಿಯುವುದಕ್ಕಿದ್ದರೆ ಬಸ್ಸು ನಿಲ್ಲುತ್ತಿತ್ತು. ಆಗ ಈಗಿನಂತೆ ಅಲ್ಲಲ್ಲಿ ಬಸ್ ಸ್ಟಾಪ್ ಇಲ್ಲ. ಒಂದು ಕಡೆ ಬಸ್ಸು ನಿಂತರೆ ಆಮೆಲೆ ನಂತರದ ನಿಲುಗಡೆ ಬಹಳ ದೂರ ಇರುತ್ತಿತ್ತು. ಹಾಗಿರುವಾಗ ಬಸ್ಸು ನಿಲ್ಲಿಸದೇ ಇದ್ದರೆ ನಾವು ಅಲ್ಲಿ ಇಳಿದು ಪುನಃ ಹಿಂದುರಿಗಿ ಬರಬೇಕಿತ್ತು. ಬಸ್ಸಿನ ಒಳಗೆ ನಮಗೆ ಕೂಗಿ ಹೇಳುವುದಕ್ಕೂ ಭಯ. ಆದರೆ ರಾಂಭಟ್ಟರು ಇದ್ದರೆ ನಮ್ಮ ನೋಡಿ ಬಸ್ಸು ನಿಲ್ಲಿಸುತ್ತಿದ್ದರು. ಒಂದು ವೇಳೆ ಇಳಿಯದೇ ಇದ್ದರೆ ತಮಾಷೆಯಲ್ಲಿ ಗದರಿ ಇಳಿಸುತ್ತಿದ್ದರು. ದೊಡ್ಡ ಚಕ್ಕುಲಿ ಚೀಲ ಹಿಡಿದು ರಸ್ತೆ ಬದಿ ನಿಂತು ಇವರ ಬಸ್ಸಿಗೆ ಕೈ ತೋರಿಸಿದರೆ ನಿಲ್ಲಿಸಿ ಹತ್ತಿಸುತ್ತಿದ್ದರು. ನಂತರ ಗದರುತ್ತಿದ್ದರು...ಇಷ್ಟು ಉದ್ದ ಇದ್ದಿ ಇಷ್ಟು ದೊಡ್ಡ ಬಸ್ಸು ನಿಲ್ಲಿಸುತ್ತಿಯಲ್ಲಾ ಅಂತ ಗದರುವಾಗ ಎಲ್ಲರೂ ನಗೆಯಾಡುತ್ತಿದ್ದರು. ಹಲವು ಸಲ ದೂರದ ಬಾಯಾರಿಗೆ ಉಪ್ಪಳಕ್ಕೆ ಇನ್ನೆಲ್ಲಿಗೋ ಚಕ್ಕುಲಿ ಕೊಡುವುದಿದ್ದರೆ...ಚೀಲದಲ್ಲಿ ಹಾಕಿ ಇವರಲ್ಲಿ ಕೊಡುತ್ತಿದ್ದೆವು. ಇವರೇ ಆ ಅಂಗಡಿಗೆ ಮುಟ್ಟಿಸಿ ಬರುವಾಗ ದುಡ್ದು ತಂದು ಕೊಡುತ್ತಿದ್ದರು. ಈತರ ಸೇವೆಗಳು ಹಲವು ಡ್ರೈವರ್ ಗಳು ಮಾಡುತ್ತಿದ್ದರೂ ರಾಂಭಟ್ರಲ್ಲಿ ನಮಗೆ ಇದ್ದ ಆತ್ಮೀಯತೆ ಸಲುಗೆ ಅತ್ಯಂತ ದೊಡ್ಡದು.
ಮದುವೆಯಾದ ಹೊಸತರಲ್ಲಿ ನಾನು ಒಬ್ಬನೇ ಬಸ್ಸು ಹತ್ತಿದರೆ , ಕೇಳುತ್ತಿದ್ದರು ಎಲ್ಲಿ ನಿನ್ನ ಪಟ್ಟಿಗೆ..?.ಯಾಕೆ ಬಿಟ್ಟು ಬಂದದ್ದು.? ಅಂತ ಹೆಂಡತಿಯನ್ನು ಕರೆದುಕೊಂಡು ಬರದೇ ಇರುವುದಕ್ಕೆ ಗದರುತ್ತಿದ್ದರು. ನಿವೃತ್ತಿಯ ಅಂಚಿನ ವರರೆಗೂ ವೃದ್ದಾಪ್ಯದಲ್ಲಿ ಡ್ರೈವರ್ ಆಗಿ ದುಡಿದವರು. ಒಂದು ಸಲ ಬಸ್ ಮುಷ್ಕರದ ದಿನಗಳವು. ಬಸ್ಸುಗಳು ಓಡಾಡುತ್ತಿರಲಿಲ್ಲ. ನಾನು ಕನಿಯಾಲದ ಗುಡ್ದದ ರಸ್ತೆಯಲ್ಲಿ ನಡೆಯುತ್ತಾ ಹೋಗುತ್ತಿರಬೇಕಾದರೆ, ಇವರು ಅಲ್ಲಿನ ಮಣ್ಣ ರಸ್ತೆಯ ಗುಂಡಿಗಳಿಗೆ ಇವರು ಒಬ್ಬರೇ ಕಲ್ಲು ಮಣ್ಣು ತಂದು ಹಾಕಿ ಗುಂಡಿಗಳನ್ನು ಮುಚ್ಚುತ್ತಿದ್ದರು. ಬಹಳ ಆಶ್ಚರ್ಯವಾಗಿತ್ತು. ಚಾಲಕ ಹುದ್ದೆಯ ವೃತ್ತಿಪರತೆಗೆ ಇದೊಂದು ಚಿಕ್ಕ ಉದಾಹರಣೆ. ಅಂಡಮಾನಿನಂತೆ ಇರುವ ಗ್ರಾಮಕ್ಕೆ ಪಂಚಾಯತ್ ಅಥವಾ ಸರಕಾರದ ದೃಷ್ಟಿ ಬೀಳುತ್ತಿದ್ದದ್ದು ಎರಡು ಮೂರು ವರ್ಷಗಳಿಗೊಮ್ಮೆ. ಹಾಗಾಗಿ ರಸ್ತೆಯ ಗುಂಡಿ ಮುಚ್ಚುವ ಕೆಲಸವನ್ನು ಇವರು ಬಿಡುವಿನ ವೇಳೆಯಲ್ಲಿ ಮಾಡುತ್ತಿದ್ದರು. ಇಂತ ವೃತ್ತಿ ಪರತೆಯನ್ನು ನಾನು ಬೇರೆ ಚಾಲಕರಲ್ಲಿ ಕಾಣಲಿಲ್ಲ. ನೇರ ನಡೆ ಖಾರ ನುಡಿಯ ರಾಮ ಭಟ್ಟರದ್ದು ಮೃದುವಾದ ಹೃದಯ. ಮಾನವೀಯತೆ ಮನುಷ್ಯತ್ವ ಅಂತರಂಗದ ಸೌಂದರ್ಯಕ್ಕೆ ಸಾಕ್ಷಿಯಾಗಿತ್ತು.
ಇವರ ಮನೆಗೆ ಯಾರಾದರೂ ನೆಂಟರು ಬಂದಾಗ, ಮಗಳು ತವರಿಗೆ ಬಂದಾಗ..ಇವರು ನಮ್ಮಲ್ಲಿ ಚಕ್ಕುಲಿ ಕೊಳ್ಳಲು ಬರುತ್ತಿದ್ದರು. ಆವರ ಅತಿಥಿ ಸತ್ಕಾರದಲ್ಲಿ ನಮ್ಮಲ್ಲಿ ತಯಾರಾಗುತ್ತಿದ್ದ ಚಕ್ಕುಲಿ ಒಂದು ಪ್ರಧಾನ ಅಂಗ. ಹಾಗೆ ಬಂದಾಗ ಚೀಲ ತುಂಬ ಮನೆಯಲ್ಲಿ ಬೆಳೆಯುತ್ತಿದ್ದ ತೆಂಗಿನಕಾಯಿ ತರುತ್ತಿದ್ದರು. ಅದೆಷ್ಟು ಬೆಲೆಯೋ...ಅದಕ್ಕೆ ಲೆಕ್ಕವಿಲ್ಲ. ಒಂದಷ್ಟು ಚಕ್ಕುಲಿ ಪ್ಯಾಕೆಟ್ ಅದರ ಬದಲಿಗೆ ಕೊಂಡೊಯ್ಯುತ್ತಿದ್ದರು. ನಾನು ಮೊತ್ತ ಮೊದಲಿಗೆ ಚೇತಕ್ ಸ್ಕೂಟರ್ ಕೊಂಡಾಗ ಮನೆಗೆ ಬಂದು ನೋಡಿದ್ದರು. ನನ್ನನ್ನು ಅಭಿನಂದಿಸಿದ್ದರು. ಒಂದು ದಿನ ನನ್ನ ಅದೇ ಸ್ಕೂಟರ್ ನಲ್ಲಿ ಹಿಂದೆ ಅವರನ್ನು ಕೂರಿಸಿ ಕರೆದುಕೊಂಡು ಈ ಡ್ರೈವರ್ ಮಾಮನನ್ನು ಅಭಿಮಾನದಿಂದ ಕರೆದುಕೊಂಡು ಹೋಗಿದ್ದೆ. ನನ್ನ ಬಾಲ್ಯಾವಸ್ಥೆಯಿಂದ ಪ್ರೌಢಾವಸ್ತೆಯ ತನಕ ಗೃಹಸ್ಥನಾದ ಮೇಲೂ ಇವರ ಒಡನಾಟ ಇತ್ತು. ಊರಿನಿಂದ ನಮ್ಮ ವಾಸ ಬೆಂಗಳೂರಿಗೆ ಬಂದ ನಂತರ ಅವರ ಬಗ್ಗೆ ಹೆಚ್ಚಿನ ಅರಿವಿಲ್ಲ. ಹಲವುಸಲ ಊರಿಗೆ ಹೋದಾಗ ವಿಚಾರಿಸಿದರೂ ಸರಿಯಾದ ಮಾಹಿತಿ ಸಿಗಲಿಲ್ಲ.ಅವರದೊಂದು ಫೋಟೊ ತೆಗೆದಿದ್ದೆ. ಅದೂ ಕಳೆದು ಹೋಗಿ ಅವರ ಬಗ್ಗೆ ಯಾವ ಕುರುಹು ಇಲ್ಲ. ಆದರೆ ಏನಂತೆ ಅವರ ನೆನಪು ಸದಾ ನನ್ನ ಜತೆಯಲ್ಲಿರುತ್ತದೆ. ಈಗ ಊರಿಗೆ ಹೋದಾಗ ರಸ್ತೆಯ ಪ್ರತಿ ತಿರುವುಗಳನ್ನು ನೋಡಿದಾಗ ಈ ಡ್ರೈವರ್ ಮಾಮ ರಾಮನ ನೆನಪಾಗುತ್ತದೆ.
Beautiful story about Driver Ramanna.
ReplyDeleteI was filled with happy tears. 🤍
I am his Granddaughter -
My father's ( S. Krishnaraj) Father was Rambhat☺