ಮೊನ್ನೆ ಮಿತ್ರ ಮುರಳಿ ಚೆಂಬರ್ಪು ಕರೆ ಮಾಡಿದ. ಬಹಳ ಹಳೆಯ ಸ್ನೇಹ ನಮ್ಮದು. ಯಾವುದೋ ಕಂಪೆನಿಯಲ್ಲಿ ಇಂಜಿನಿಯರಿಂಗ್ ವೃತ್ತಿಯಲ್ಲಿರುವ ಈತನ ಕರೆ ನನ್ನನ್ನು ಹಿಂದಕ್ಕೆ ಕರೆದೊಯ್ದು ಕೂರಿಸಿತು. ನಮ್ಮ ರಾಜಾಜಿನಗರದ ಕಡೆಯಲ್ಲಿ ಆತನಿಗೆ ಯಾವುದೋ ಕಾರ್ಯಕ್ರಮಕ್ಕೆ ಬರುವುದಿತ್ತು. ನಮ್ಮ ಮನೆಗೂ ಅಲ್ಲಿಗೂ ಮೂರು ನಾಲ್ಕು ಕಿಲೋ ಮೀಟರ್ ದೂರ. ಬೆಂಗರಲ್ಲಿ ಎರಡು ಮೂರು ಗಲ್ಲಿಗಳ ಅಂತರ ಅಷ್ಟೇ.
ಭಾನುವಾರ ಅದು. ನನ್ನನ್ನು ಕಾಣಲು ಬರುತ್ತೇನೆ ಅಂತ ಹೇಳಿದ.ಸರಿ, ಜತೆಗೆಊಟ ಮಾಡೋಣ ಅಂತ ಯೋಚನೆ ಮಾಡಿದರೆ ಆತ ಊಟ ಎಲ್ಲ ಆಯ್ತು, ಕೇವಲ ಹರಟೆಗೆ ರಾಜಣ್ಣ ಅಂತ ಹೇಳಿ ಬರುತ್ತೇನೆ ಎಂದ. ನಮ್ಮ ಸ್ನೇಹದ ರೀತಿ ಅದು. ಅಲ್ಲಿ ಉಪಚಾರ ಎಂದರೆ ಹರಟೆ ಬಿಟ್ಟು ಮತ್ತೇನೂ ಇರುವುದಿಲ್ಲ. ಸಹಕಾರಿ ನಗರದ ಕಡೆಗೆ ನಾನು ಹೋದರೂ ಹೀಗೆ ಅವನ ಮನೆಗೆ ಹೋಗುತ್ತೇನೆ. ಹಾಗೆ ಭೇಟಿಯಾಗದೇ ಬಹಳ ದಿನಗಳು ಕಳೆದಿತ್ತು. ವಿಚಿತ್ರವೆಂದರೆ ಈ ಬಾರಿ ಮೂರು ಕಿಲೋಮೀಟರ್ ದೂರ ಕಾರ್ಯಕ್ರಮದ ಬಳಿ ತಂದ ಕಾರು ಇಟ್ಟು ಹೆಂಡತಿ ಮಗಳನ್ನು ಅಲ್ಲೇ ಬಿಟ್ಟು ನನ್ನನ್ನು ಕಾಣುವುದಕ್ಕೆ ಅಷ್ಟು ದೂರ ನಡೆದೇ ಬಂದಿದ್ದ! ನಮ್ಮ ನಡುವಿನ ಸ್ನೇಹದ ಬಗೆ ಅದು. ಅಲ್ಲಿ ಆಡಂಬರ ಕೇವಲ ಸ್ನೇಹಕ್ಕೆ ಮೀಸಲು. ಅದೇ ಶಿಷ್ಟಾಚಾರ. ನನ್ಮನ್ನು ಕಾಣುದಕ್ಕೆ, ಅರ್ಧ ತಾಸು ಕೇವಲ ಹರಟೆ ಹೊಡೆಯುವುದಕ್ಕೆ ಅದೂ ಈ ಕಾಲದಲ್ಲಿ ನಡೆದೇ ಬರುತ್ತಾನೆ ಎಂದರೆ ಅಚ್ಚರಿಯಾಗಬಹುದು.
ಒಂದು ಕಾಲ ಇತ್ತು ಬಹಳ ದೂರ ಏನಲ್ಲ. ವಾಟ್ಸಪ್ ಬರುವ ಮೊದಲು, ಆರ್ಕುಟ್ ನಲ್ಲಿ ಕುಟ್ಟುವಾಗ ಈತನ ಜತೆ ಸ್ನೇಹ ಬೆಳೆದಿತ್ತು. ಬೆಳಗ್ಗೆ ಕಂಪ್ಯೂಟರ್ ತರೆದು ಕೆಲಸ ಆರಂಭಿಸುವಾಗ ಆತನ ನಮಸ್ಕಾರ ಹೊತ್ತು ಗೂಗಲ್ ಟಾಕ್ ತೆರೆದುಕೊಳ್ಳುತ್ತದೆ. ಕೆಲಸದ ನಡುವೆ ಬಿಡುವಿನ ಸಮಯ ಇದರ ಮೂಲಕವೇ ನಮ್ಮಹರಟೆ. ಅರ್ಕುಟ್ ಎಂಬ ಅರಳಿಕಟ್ಟೆಯಲ್ಲಿ ಕೇವಲ ಯಕ್ಷಗಾನದ ಮರುಳು ನಮ್ಮನ್ನು ಬೆಸೆದಿತ್ತು. ದಿನವಿಡೀ ಹರಟೆ. ಆ. ಹರಟೆಯಲ್ಲಿ ನನ್ನ ಅನುಭವ ಕಥೆಗಳು ಹೇಳುವಾಗ ಆತ ಹೇಳಿದ್ದು ಬ್ಲಾಗ್ ಮಾಡಿ ಇದನ್ಬೆಲ್ಲಾ ಲೇಖನ ಬರೆಯಿರಿ ರಾಜಣ್ಣ. ಹಾಗೆ ನನ್ನ ಬರೆ ಹವ್ಯಾಸ ಆರಂಭವಾಯಿತು. ಹಿಂದೆ ಶಾಲೆಗೆ ಹೋಗುವಾಗ ಏನೆಲ್ಲ ಗೀಚಿದ ಚಾಳಿ ಮತ್ತೆ ಗರಿಗೆದರಿತು. ಈಗ ಅದೇ ನನ್ನ ಅತಿದೊಡ್ಡ ಗೆಳೆಯ. ನಾನು ಹೇಳುವುದೆಲ್ಲವನ್ನೂ ಕೇಳುವ ಹೃದಯದ ಗೆಳೆಯ.
ಮುರಳಿ ಒಂದು ರೀತಿಯಲ್ಲಿ ಸೌಮ್ಯ ಭಾವದ ಭಾವುಕ ಮನುಷ್ಯ. ಬೆಂಗಳೂರು ಡೇಸ್ ಮಲಯಾಳಂ ಸಿನೆಮಾದಲ್ಲಿ ಒಂದು ಮುಖ್ಯ ಪಾತ್ರ ಬರುತ್ತದೆ. ನುವಿನ್ ಪೊಲ್ಲಿ ಅಭಿನಯಿಸಿ ಖ್ಯಾತಿ ಗಳಿಸಿದ ಪಾತ್ರವದು. ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಆ ಪಾತ್ರ, ಸದಾ ತನ್ನ ಊರಿನ ಮನೆ ಕೃಷಿ ಪರಂಪರೆ ಧರ್ಮ ಹೀಗೆ ಅದರ ಬಗ್ಗೆಯೇ ಯೋಚಿಸುವ, ಅದರ ಬಗ್ಗೆ ತುಡಿಯುವ ಮನಸ್ಸು. ಬೆಂಗಳೂರಿನ ಯಾಂತ್ರಿಕ ಜೀವನ ಇಲ್ಲಿನ ಆಧುನಿಕ ಶೈಲಿ, ಸಾಫ್ಟ್‌ವೇರ್ ಪರಿಸರದಲ್ಲಿ ಇದ್ದರೂ ಈ ಪರಂಪರೆಯ ಬಗ್ಗೆ ತುಡಿಯುತ್ದದೆ. ಅದೇ ರೀತಿ ಈ ಸ್ನೇಹಿತ. ಹಳ್ಳಿಯ ಮನೆ ಸಂಪ್ರದಾಯ ಇದರ ಬಗ್ಗೆ ಗಾಢವಾದ ಅಭಿಮಾನ ಇಟ್ಟುಕೊಂಡವನು. ಹಾಗಿರುವಾಗ ಅಲ್ಲಿ ನಮ್ಮೂರವನಾಗಿದ್ದು ಯಕ್ಷಗಾನದ ಪ್ರೀತಿ ಇದ್ದರೆ ಅದು ಅತಿಶಯವಲ್ಲ. ಅದೇ ನಮ್ಮ ಗೆಳೆತನದ ಚಿಗುರಾಯಿತು, ಈಗ ಮರವಾಗಿದೆ.
ಕೇವಲ ಅರ್ಧ ಘಂಟೆ ಹರಟೆಗೆ ಒಂದು ಘಂಟೆ ನಡೆದು ಬರುತ್ತಾನೆ ಎಂದರೆ ಯಾರಿಗಾದರೂ ಅಚ್ಚರಿಯಾಗಬೇಕು. ಅದೇ ವೈಶಿಷ್ಟ್ಯ. ನಾವು ಮಡಿಕೇರಿ ಗೆ ಮಿತ್ರ ಸುಬ್ಬಣ್ಣನ ಮದುವೆಗೆ ಹೋಗಿದ್ದು ನೆನಪಾಯಿತು. ನಾವಿಬ್ಬರೇ ಇಡೀ ದಿನದ ಕಾರಿನಪ್ರಯಾಣ. ಕಾರಿನಲ್ಲಿ ಸ್ಟೀರಿಯೋ ಇದ್ದರೂ ಎಲ್ಲೂ ಅದರ ಧ್ವನಿ ಮೊಳಗಲಿಲ್ಲ. ಕೇವಲ ಹರಟೆಯಲ್ಲೇ ಕಳೆದ ಅದ್ಬತ ವಿಶಿಷ್ಟ ಪ್ರಯಾಣವದು. ಯಾಕೆಂದರೆ ನಮ್ಮಲ್ಲಿ ಹರಟುವುದಕ್ಕೆ ಮುಗಿಯದಷ್ಟು ವಿಷಯಗಳಿವೆ. ಭಾವುಕ ಮನಸ್ಸಿನ ಪ್ರತೀಕಗಳು. ಹಾಗಾಗಿಯೇ ಗೂಗಲ್ ಟಾಕ್ ಗೆ ಒಂದು ಸಲ ಸಿಕ್ಕಾಪಟ್ಟೆ ಕೆಲಸ ಕೊಟ್ಟಿದ್ದೇವೆ. ಇದನ್ನೆಲ್ಲ ಯೋಚಿಸುವಾಗ ಮೇಲೆ ಹೇಳಿದ ಅರಳೀ ಕಟ್ಟೆ, ಆಟದ ಬಯಲು ನೆನಪಾಗುತ್ತದೆ.ಈಗ ಬಯಲು ಇಲ್ಲ ಅಲ್ಲಿ ನಾವು ಸೇರುವ ಹಾಗೂ ಇಲ್ಲ.ಕೇವಲ ಅವ್ಯಕ್ತ ಸ್ನೇಹ ಮಾತ್ರ.
ಹೇಳಿ ಕೇಳಿ ಯಕ್ಷಗಾನ ಎಂದರೆ ಅದು ಬಯಲಾಟ. ಆಟದ ನಡುವೆ ಸೇರುವ ಮಿತ್ರರು ಆ ಹರಟೆ, ಛೇ ಅದೊಂದು ಮರೆಯಲಾಗದ ಘಳಿಗೆಗಳು. ಬೆಂಗಳೂರಲ್ಲಿ ಒಂದು ಕಾಲ್ಪನಿಕ ಬಯಲನ್ನು ಕಟ್ಟಿಕೊಂಡವರು ನಾವು. ಅದರಲ್ಲಿ ಯಕ್ಷಗಾನದ ವಿಚಾರಗಳು ಅಭಿಮಾನದಿಂದ ಆಟವಾಡುತ್ತಿದ್ದವು. ನಮ್ಮ ಅನುಭವಗಳು ಕಳೆದ ದಿನಗಳು ಅದನ್ನೆಲ್ಲ ಹೇಳುವಾಗ, ಜತೆಗೆ ಊರಿನ ಹಲವು ವಿಚಾರ ಜೀವನ ಘಟನೆ ಅನುಭವಗಳನ್ನು ಹೇಳುವಾಗ ಇದೇ ಮುರಳಿ ಮೊದಲಬಾರಿಕೆ ಪ್ರೇರೇಪಿಸಿದ್ದು ಬ್ಲಾಗ್ ಬರೆಯುವುದಕ್ಕೆ. ಆಗಿನ್ನು ಗೂಗಲ್ ತನ್ನ ಬ್ಲಾಗ್ ಸ್ಪಾಟ್ ನ್ನು ಆರಂಭಿಸಿದ ದಿನಗಳೂ. ಅದನ್ನು ಹೇಗೆ ಉಪಯೋಗಿಸುವುದು, ಅದರಲ್ಲಿ ಕನ್ನಡ ಹೇಗೆ ಬರೆಯಬಹುದು ಇದನ್ನೆಲ್ಲ ತೋರಿಸಿಕೊಟ್ಟದ್ದು ಮುರಳಿ. ಆಗ ಭಾಷಾಂತರಕ್ಕೆಂದೇ ಗೂಗಲ್ ನಲ್ಲಿ ಒಂದು ಉಪಕರಣವಿತ್ತು. ಹೀಗೆ ಪ್ರಚೋದಿಸಲ್ಪಟ್ಟ ನನ್ನ ಲೇಖನದ ಹವ್ಯಾಸ ಇಂದಿಗೂ ಮುಂದುವರೆದಿದೆ. ಅಂತರಂಗದ ಭಾವನೆಗಳಿಗೆ ಒಂದು ಮಾಧ್ಯಮ. ಯಾರು ಓದುತ್ತಾರೋ ಬಿಡುತ್ತಾರೋ ಅದು ಯೋಚನೆ ಇಲ್ಲ. ವಾಸ್ತವದಲ್ಲಿ ವಾಚಾಳಿ, ಹರಟೆ ಹೊಡೆಯುವ ನನಗೆ ಮಾತು ಜಾಸ್ತಿ. ಹಲವರಿಗೆ ಅದು ಬೇಸರ ಉಂಟು ಮಾಡಿಬಿಡುತ್ತದೋ ಎಂದು ಹಲವು ಸಲ ಅನ್ನಿಸುವುದಿದೆ. ಹಾಗಾಗಾಗಿ ಈ ಬ್ಲಾಗ್ ಲೇಖನ ನನ್ನದೆಲ್ಲ ಮಾತುಗಳನ್ನು ಯಾವ ಆಡ್ದಿ ಇಲ್ಲದೇ ಕೇಳುತ್ತದೆ.ನನ್ನದೆಲ್ಲವನ್ನೂ ಕೇಳುವ ಮಿತ್ರನನ್ನು ತೋರಿಸಿದ ಶ್ರೇಯಸ್ಸು ಮುರಳಿಗೆ ಸಲ್ಲಬೇಕು.
ಮೊದಲು ನಿತ್ಯ ಅಂತರ್ಜಾಲದಲ್ಲಿ ಭೇಟಿಯಾಗಿತ್ತಿದ್ದ ನಾವು ಕಳೆದ ಹಲವು ವರ್ಷಗಳಿಂದ ಭೇಟಿ ವಿರಳವಾಗಿ ಹೋಗಿದೆ. ನಮ್ಮದು ಮಾತ್ರವಲ್ಲ. ನಮ್ಮ ಹಲವು ಮಿತ್ರರು. ಉಲ್ಲಾಸ್ ಸುಬ್ಬಣ್ಣ, ಕೇಶವ, ಶ್ರೀರಾಮ, ಮಿತ್ರರೆಲ್ಲಾ ನೇಪಥ್ಯಕ್ಕೆ ಸರಿದು ಹೋಗಿದ್ದಾರೆ. ಊರ ನಡುವಿನ ಯಕ್ಷಗಾನದ ಅರಳಿಕಟ್ಟೆ ಅಥವಾ ಆಟದ ಮೈದಾನ ಈಗ ಕಾಣೆಯಾಗಿದೆ. ಅದಕ್ಕೆ ಮುಖ್ಯ ಕಾರಣ ನಮ್ಮ ನಾವು ಅಭಿಮಾನದಿಂದ ಕಾಣುತ್ತಿದ್ದ ಯಕ್ಷಗಾನ ಹಲವು ಕಾರಣಗಳಿಂದ ಬದಲಾಗಿ ಹೋಗಿ ಭ್ರಮನಿರಸನ ಹುಟ್ಟಿಸಿಬಿಟ್ಟಿತು. ಮುರಳಿಯಲ್ಲಿ ಕೇಳಿದರೂ ಅಷ್ಟೆ ಶ್ರೀರಾಮನಲ್ಲಿ ಕೇಳಿದರೂ ಅಷ್ಟೆ....ಬಯಲು ಇಲ್ಲದ ಮೇಲೆ ಅಲ್ಲಿ ಆಟವಾಡುವ ಮಕ್ಕಳು ಮಿತ್ರರು ಇರುವುದಕ್ಕೆ ಸಾಧ್ಯವೇ? ಹೇಗೆ ಒಂದು ಹಳ್ಳಿಯನ್ನು ವಸಾಹತು ಶಾಹಿ ನುಂಗಿ ಹಾಕಿ ಬಿಡುತ್ತದೋ ಅದೇ ರೀತಿ ನಮ್ಮ ನಡುವಿನ ಯಕ್ಷಗಾನ ಬತ್ತಿ ಹೋಗಿದೆ. ಸರೋವರ ತುಂಬಿಕೊಂಡು ಹಚ್ಚ ಹಸಿರಾಗಿದ್ದರೆ ಅಲ್ಲಿ ಹಕ್ಕಿಗಳು ಬರುತ್ತವೆ. ಇಲ್ಲವಾದರೆ ಆ ಹಕ್ಕಿಗಳು ಎಲ್ಲೋ ಮರೆಯಾಗುತ್ತವೆ. ಅದಕ್ಕೆ ಚಿಲಿಪಿಲಿಗುಟ್ತಿ ವಿಹರಿಸುವುದಕ್ಕೆ ಕೆರೆಯೇ ಇಲ್ಲ ಎಂದ ಮೇಲೆ ವಿಹರಿಸುವ ಮಾತೇ ಇಲ್ಲ. ನಮಗೂ ಅಷ್ಟೆ ಕೆರೆ ಬತ್ತಿ ಹೋಗಿದೆ ಅಲ್ಲಿ ಯಾವುದೋ ಆಧುನಿಕ ನಗರ ರಸ್ತೆ ನಿರ್ಮಾಣವಾಗಿದೆ.
ಯಕ್ಷಗಾನ ಬದಲಾಗಿದೆ. ಕಾಲದ ಅಭಿರುಚಿ ಎನ್ನಬೇಕೋ ನಮ್ಮ,ಕುಸಿದ ಪ್ರಜ್ಞೆ ಇರಬೇಕೋ ಅಂತೂ ಯಕ್ಷಗಾನ ಅದಾಗಿ ಅದು ಉಳಿಯಲಿಲ್ಲ. ಅದರ ಮೂಲ ಹುಡುಕಿದರೆ ಭಾಗವತರು ಕಲಾವಿದರೂ ಹೀಗೆ ಕಾರಣಗಳು ತೆರೆದುಕೊಳ್ಳುತ್ತವೆ. ಮೊದಲು ರಕ್ತಗತವಾದದ್ದು ಈಗ ಡಿಪ್ಲೋಮವಾಗಿ ಬದಲಾಗಿದೆ. ಐದಾರು ತಿಂಗಳ ಡಿಪ್ಲೊಮ ಮುಗಿಸಿದರೆ ಮೊದಲು ವರ್ಷಾನುಗಟ್ಟಲೆಯ ಶಿಷ್ಯತ್ವದಲ್ಲಿ ರಂಗವೇರುವ ಭಾಗವತರು ಕಲಾವಿದರೂ ಈ ಡಿಪ್ಲೋಮದ ಗಾಳಿಗೆ ಬದಿಗೆ ಸರಿದು ಹೋಗುತ್ತಾರೆ. ಹಲವು ಹಿರಿಯರ ನಿವೃತ್ತಿ ಮಾತ್ರವಲ್ಲ ಕುಸಿದು ಹೋದ ಯಕ್ಷಗಾನದ ರೂಪರೇಷೆಗಳು ನಮ್ಮ ನಡುವಿನ ಬಯಲು ಮೈದಾನವನ್ನು ಆಕ್ರಮಿಸಿ ನಾಶ ಮಾಡಿದೆ. ಬಯಲು ಇಲ್ಲವಾದರೆ ಅಲ್ಲಿ ಬಯಲಾಟ ಎಲ್ಲಿ. ಬಯಲಾಟ ಇಲ್ಲ ಎಂದರೆ ಯಕ್ಷಗಾನ ಇಲ್ಲ. ಅದು ಇಲ್ಲ ಎಂದರೆ ನಾವು ಮಿತ್ರರೂ ದೂರ ದೂರ. ಸ್ನೇಹ ಎಲ್ಲೋ ಮಡುಗಟ್ಟಿದೆ. ಕಾಲದ ಗತಿಗೆ ಹಳ್ಳಿ ಚದುರಿದಂತೆ ನಾವು ಚದುರಿ ವಿಚಿತ್ರರೂಪವನ್ನು ಪಡೆದುಕೊಂಡಿದ್ದೇವೆ. ಬಯಲು ಯಾವತ್ತಿದ್ದರೂ ಬರಿದಾಗಿರುತ್ತದೆ. ಅಲ್ಲಿ ಆಗಾಗ ಏನೋ ತುಂಬಿಸಿ ಕಲರವ ಎಬ್ಬಿಸಿದರೆ ಅದರಲ್ಲಿ ಜಡತ್ವ ಕಳೆದು ಆಗಾಗ ಚೇತನತುಂಬಿ ಬಿಡುತ್ತದೆ. ಇಲ್ಲವಾದರೆ ಊರ ಕಸತುಂಬುವ ಕೊಂಪೆಯಾಗಬಹುದು. ಇಲ್ಲಾ ಆಧುನಿಕ ಜಗತ್ತಿನ ಮರ್ಮರವಾಗಿ ಮಹಲುಗಳು ಏಳಬಹುದು. ರಸ್ತೆಗಳು ಮಲಗಿಬಿಡಬಹುದು.
No comments:
Post a Comment