ಪೂಜ್ಯ ಸ್ವಾಮೀಜಿ ಹೇಳಿದ ಮಾತು ಸ್ವರ್ಗಕ್ಕೆ ಹೋಗಬೇಕಾದರೆ ಸಂಸ್ಕೃತ ತಿಳಿದಿರಬೇಕು.
ಕುರುಕ್ಷೇತ್ರ ಯುದ್ದ ಆರಂಭವಾಗುವ ಮುನ್ನ ಅರ್ಜುನನಿಗಾಗಲೀ ಉಳಿದ ಪರಮ ಭಾಗವತ ಎನಿಸಿದ ಭೀಷ್ಮರಿಗಾಗಲಿ ಇನ್ನುಳಿದ ಯಾರಿಗಾದರೂ ಅಲ್ಲಿ ಭಗವದ್ಗೀತೆ ಭೋಧಿಸಲ್ಪಡಬಹುದು ಎಂದು ನಿರೀಕ್ಷೆಯೂ ಇರಲಿಲ್ಲ. ಅರ್ಜುನನಿಗೆ ಆವರಿಸಿದ ಮೋಹ, ಖಿನ್ನತೆ, ಕ್ಲೈಬ್ಯ ಎಲ್ಲವೂ ಒಂದು ದಿವ್ಯ ಬೋಧನೆಗೆ ಕಾರಣವಾಗುತ್ತದೆ ಎಂದು ಸ್ವತಃ ಅರ್ಜುನನಿಗೂ ಅರಿವಿರಲಾರದು. ಭಗವನ್ ಶ್ರೀಕೃಷ್ಣನಿಗಲ್ಲದೇ ಇದು ಬೇರೆಯವರು ಕಲ್ಪಿಸುವುದಕ್ಕೆ ಸಾಧ್ಯವಿಲ್ಲ. ಅದು ಬೋಧನೆಯಾಯಿತು. ಹಲವು ಸಲ ಭಗವಂತನ ಪ್ರಚೋದನೆ ಹಲವು ರೀತಿಯಲ್ಲಿ ಇರುತ್ತದೆ. ಸ್ವಾಮೀಜಿಗಳ ಮಾತು ಹಲವು ವಿಧದಲ್ಲಿ ವಿಶ್ಲೇಷಣೆ ಒಳಗಾಗಬಹುದು. ಅದು ತಪ್ಪೋ ಸರಿಯೋ ...ಅವರ ಜ್ಞಾನದ ಪರಿಧಿಗೆ ಅದುವಿಶ್ಲೇಷಿಸಲ್ಪಡುತ್ತದೆ. ಆದರೆ ಅವರು ಹೇಳಿದ ಮಾತಿಗೂ ಕುರುಕ್ಷೇತ್ರದ ಗೀತೆಯ ಬೋಧನೆಗೂ ಒಂದು ಸಾಮ್ಯತೆ ಯಾಕೋ ಯೋಚನೆಗೆ ಬಂದುಬಿಡುತ್ತದೆ.
ಮಧ್ಯವಯಸ್ಸು ದಾಟಿದ ಮೇಲೆ ಸಂಸ್ಕೃತ ಅರ್ಥವಾಗದೇ ಇದ್ದರೆ ಅದು ಬದುಕಲ್ಲ. ಇಲ್ಲಿ ಹೇಳುವುದು ಸಂಸ್ಕೃತ ಅದು ಕೇವಲ ಭಾಷೆಗೆ ಸೀಮಿತವಾಗಿ ಹೇಳುವುದಲ್ಲ. ಯಾಕೆಂದರೆ ಸಂಸ್ಕೃತ ಅದು ಭಾಷೆಯಲ್ಲ. ಅದು ಬದುಕಿನ ಕ್ರಿಯಾಭಾಗ. ಕೃತ ಎನ್ನುವುದು ಆ ಕ್ರಿಯೆಯ ದರ್ಶನ. ಸಂ ಎನ್ನುವುದು...ಸತ್ಯದ ದರ್ಶನ. ಹೇಗೆ ಸನ್ಮಾರ್ಗ ಸನ್ಮಮನಸ್ಸು, ಸಚ್ಚಿಂತನೆ, ಸದ್ಬುದ್ದಿ...ಹೀಗೆ ಸತ್ಯವನ್ನು ಪ್ರತಿಫಲಿಸುತ್ತದೆಯೋ ಅದೇ ರೀತಿ ಸಂ ಎನ್ನುವುದು ಸತ್ಯದ ಪ್ರತಿಫಲನ. ಸತ್ಯದ ದರ್ಶನವೇ ಕರ್ತವ್ಯವಾಗುವಾಗ ಸಂಸ್ಕೃತವಾಗುತ್ತದೆ. ಈ ಕಲ್ಪನೆ ಎಷ್ಟು ಸರಿಯೋ ಗೊತ್ತಿಲ್ಲ. ನನ್ನ ಸೀಮಿತ ಜ್ಞಾನದಲ್ಲಿ ಅರ್ಥವಿಸಿಕೊಂಡದ್ದು ಇದು.
ಯಕ್ಷಗಾನದಲ್ಲಿ , ಪೆರ್ಲ ಸಾಮಗ ಶೇಣಿ ಹೀಗೆ ಮುಂತಾದವರ ತಾಳ ಮದ್ದಲೆಯ ಅರ್ಥಗಾರಿಕೆ ಕೇಳಿ ಕಳೆದ ಬಾಲ್ಯ ನನ್ನದು. ಯಕ್ಷಗಾನ ಪರಿಚಯ ಇದ್ದವರಿಗೆ ಇದರ ಆಳ ಅರ್ಥವಾದೀತು. ಅಲ್ಲಿ ಚದುರಿ ಬಿದ್ದ ಸಂಸ್ಕೃತದ ಶಬ್ದಗಳು, ನನಗೆ ಈಗಲೂ ಅದುವೇ ಸಂಸ್ಕೃತದ ಆದ್ಯಾಕ್ಷರಗಳು . ಆಗ ಅವುಗಳನ್ನು ಅರ್ಥವಿಸುವುದಕ್ಕೆ ಹೆಣಗಿದ್ದೇನೆ. ಅಥವಾ ಯಾವುದೋ ಒಂದು ಅರ್ಥವನ್ನು ಕಂಡುಕೊಂಡಿರಬಹುದು. ಆದರೆ ಈಗ ಲೋಕಜ್ಞಾನದ ದೃಷ್ಟಿಯಲ್ಲಿ ಅದನ್ನು ಕಾಣುವಾಗ ಸಂಸ್ಕೃತ ಕೇವಲ ಭಾಷೆಯಲ್ಲ ಎಂದು ಅರಿವಿಗೆ ಬರುತ್ತದೆ. ಆಗ ಅದು ಸಂಸ್ಕೃತ ಎನ್ನುವ ಕಲ್ಪನೆಯೇ ಇರಲಿಲ್ಲ. ಆಗ ಅದನ್ನು ಕೇಳಿ ಅರ್ಥವಿಸಿಕೊಂಡದ್ದು ಎಷ್ಟೋ ಅದೊಂದು ಜ್ಞಾನ ಅಷ್ಟೇ ಅನಿಸಿದರೂ, ಈಗ ಅನಿಸುತ್ತದೆ ಆಗ ಕಲಿಯಬೇಕಿತ್ತು. ಅದಕ್ಕೆ ಧರ್ಮದ ಲೇಪನವನ್ನು ಕೊಟ್ಟು ಅದನ್ನು ಅಸ್ಪೃಶ್ಯತೆಯಿಂದ ಕಾಣುವಾಗ ಅಲ್ಲಿ ಮೂರ್ಖತನವನ್ನಷ್ಟೇ ಗುರುತಿಸಬಹುದು. ಕನ್ನಡಕ್ಕೆ ಭುವನೇಶ್ವರಿಯನ್ನು ಇಡುವಾಗ ಕಾಣದ ಈ ಧಾರ್ಮಿಕ ಭೇದ ಸಂಸ್ಕೃತದಲ್ಲಿ ಕಾಣುವಾಗ ಈ ಎಡಬಿಡಂಗಿತನದ ಮೂರ್ಖತನ ಅರಿವಾಗುತ್ತದೆ.
ಅಜ್ಜನ ಜತೆಯಲ್ಲಿ ಕೇವಲ ಎರಡಕ್ಷರದ ಮಂತ್ರ ಬಿಟ್ಟರೆ ಆ ವೇದ ಭಾಷೆ ನಾಲಗೆಯಲ್ಲಿ ಕುಣಿಯಲೇ ಇಲ್ಲ. ಬಾಲ್ಯದಲ್ಲಿ ಶಾಲೆಗೆ ಒಬ್ಬರು ಸಂಸ್ಕೃತ ಅಧ್ಯಾಪಕರು ಬರುತ್ತಿದ್ದರು. ತಲೆಗೊಂದು ಜುಟ್ಟು ಅವರ ವ್ಯಕ್ತಿತ್ವ ನೋಡಿ ಬಾಲಿಶ ಬುದ್ದಿಯಲ್ಲಿ ಅದೊಂದು ಹಾಸ್ಯದ ಸಂಗತಿಯಾಗಿ ಕಂಡರೂ ಆನಂತರ ಛೇ ಸ್ವರ್ಣಾವಕಾಶವನ್ನು ಕಳೆದುಕೊಂಡೆ ಅಂತ ಅನ್ನಿಸುತ್ತದೆ. ಯಾಕೆಂದರೆ ಆಗ ಅದನ್ನು ಕಲಿ ಎಂದು ಹೇಳುವ ಪ್ರಚೋದನೆಯೇ ಇಲ್ಲ. ಗುರು ಇದ್ದರೆ ಸಾಲದು...ಆ ಗುರುವನ್ನೂ ಗುರುವಿನ ಜ್ಞಾನವನ್ನೂ ತೋರಿಸುವ ಸ್ಥಾನ ಒಂದು ಇರಬೇಕು. ಸ್ವಾಮೀಜಿ ಹೇಳಿದ ಮಾತು ಇದಕ್ಕೆ ಪೂರಕ. ಸಂಸ್ಕೃತ ಎಂಬುದರ ಅಗತ್ಯವನ್ನು ಸರಳವಾಗಿ ಹೇಳಿದ್ದಾರೆ. ಈಗ ಸಂಸ್ಕೃತ ಎಂದರೆ ಸಾಗರದ ಬದಿಯಲ್ಲಿ ನಿಂತು ನೋಡಿದ ಅನುಭವಾಗುತ್ತದೆ. ಸಾಗರದ ಘೋಷ ಕೇಳಿಸುತ್ತದೆ, ಒಳಗೆ ಇಳಿದು ತಿಳಿದುಕೊಳ್ಳುವುದಕ್ಕೆ ಈಜು ಬರುವುದಿಲ್ಲ. ಸಾಮರ್ಥ್ಯ ಇರುವುದಿಲ್ಲ. ಭಾಷೆ ಅರ್ಥವಾಗುವುದಿಲ್ಲ. ಆದರೂ ಅಷ್ಟೋ ಇಷ್ಟೋ ಅರ್ಥವಾಗುವ ಸಂಸ್ಕೃತ ಅದೊಂದು ಬೆಳಕಾಗುತ್ತದೆ. ಈಗ ಜೀವನ ಸಂಧ್ಯೆಯಲ್ಲಿ ಆಧ್ಯಾತ್ಮ ಲೋಕದಲ್ಲಿ ಹೆಜ್ಜೆ ಊರುವಾಗ ಅದೇ ಅಲ್ಪ ಸಂಸ್ಕೃತವೇ ಮೂದಿನ ಹಾದಿಯನ್ನು ತೋರಿಸುವುದಕ್ಕೆ ಕಾರಣವಾಗುತ್ತದೆ. ಹಾಗಾದರೆ ಸಂಸ್ಕೃತ ಭಾಷೆ ಅರ್ಥವಾದರೇ ಯೋಚಿಸಬೇಕು. ಆಧ್ಯಾತ್ಮ ಎಂದರೆ ಪರಮಾತ್ಮನನ್ನು ತಿಳಿದುಕೊಳ್ಳುವುದು. ಹಾಗಾಗಿಯೆ ಸಂಸ್ಕೃತ ತಿಳಿದವನಿಗೆ ಮಾತ್ರ ಸ್ವರ್ಗಕ್ಕೆ ಹೋಗಬಹುದು ಎನ್ನುವ ಮಾತಿಗೆ ಅರ್ಥ ಒದಗಿಬರುತ್ತದೆ. ನಮ್ಮ ಚಿಂತನೆಗೆ ಅಡರಿದ ಪೊರೆಯನ್ನು ಪೂರ್ವಗ್ರಹ ಇಲ್ಲದೇ ಕಳಚಿ ನೋಡಿದರೆ ಮಾತ್ರ ಇದು ಅರಿವಾಗಬಹುದು.
ಸಂಸ್ಕೃತ ಅದು ಕೇವಲ ಭಾಷೆಯಲ್ಲ. ಉಳಿದ ಭಾಷೆಗಳೆಲ್ಲವೂ ಮನುಷ್ಯ ಅಥವಾ ಈ ಪ್ರಾಣಿ ಪಕ್ಷಿ ಪ್ರಕೃತಿ ಹುಟ್ಟಿಸಿದ್ದರೆ ಸಂಸ್ಕೃತಕ್ಕೆ ಅದರ ಹುಟ್ಟನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ಇಂದು ನಾವು ಭಗವಂತನನ್ನು ಪೂಜಿಸುವ ಮಂತ್ರಗಳೇ ಇದಕ್ಕೆ ಸಾಕ್ಷಿ. ಯಾರು ಬರೆದರು ಇದನ್ನು? ಅಥವಾ ಇದನ್ನು ಮೊದಲು ಬರೆದ ಪುಸ್ತಕಗಳು ಎಲ್ಲಿದೆ? ಈ ಸೃಷ್ಟಿಯ ಅದ್ಭುತಗಳಲ್ಲಿ ಇದೂ ಒಂದು. ಸಂಸ್ಕೃತ ಅರ್ಥವಾದರೆ ಭಗವಂತನ ಮಾತುಗಳು ಭವಂತನ ಜ್ಞಾನ ಅರ್ಥವಾಗಬಹುದು. ಪರಿಪೂರ್ಣ ಜ್ಞಾನ ಎಂದರೆ ಅದು ಭಗವಂತ. ನಮ್ಮ ಲೌಕಿಕ ಜೀವನದ ಪ್ರಭಾವದಲ್ಲಿ, ಆ ಪುಸ್ತಕ ಎಲ್ಲೋ ಇರಬಹುದು, ಎಲ್ಲೋ ಬರೆದಿರಬಹುದು ಎಂದು ಅಂದುಕೊಳ್ಳಬಹುದು. ಒಂದುವೇಳೆ ಇದ್ದರೂ ಆ ಪುಸ್ತಕ ಉಳಿದಿರಬಹುದೇ? ಪುಸ್ತಕ ಉಳೀಯಲಿಲ್ಲ, ಮಂತ್ರ ಮಾತ್ರ ಉಳಿದುಕೊಂಡಿದೆ. ಅದು ಯಾವಾಗಿನಿಂದ ಎಂದು ಹೇಳುವುದಕ್ಕೆ ಯಾರಿಗೂ ಸಾಧ್ಯವಿಲ್ಲ.
ಪ್ರಣವಸ್ಯ ಪರಬ್ರಹ್ಮ ಋಷಿಃ ಅಂತ ಮುಂಜಾನೆ ಸೂರ್ಯೋದಯ ನೋಡುವ ಒಬ್ಬ ಬ್ರಾಹ್ಮಣ...ಅದನ್ನು ಜಾತಿಗೆ ಸೀಮಿತವಾಗಿಸಿದ್ದು ಮನುಷ್ಯನ ಅಲ್ಪಜ್ಞಾನ. ಪರಬ್ರಹ್ಮ ಕಲ್ಪನೆ ಇದ್ದರೆ ಅಲ್ಲಿ ಬ್ರಾಹ್ಮಣ ಶಬ್ದದ ಆ ಜೀವನದ ಅರಿವಾದೀತು. ಪರಬ್ರಹ್ಮ ಜಗತ್ತಿನಲ್ಲಿ ಯಾವುದು ಅತ್ಯಂತ ದೊಡ್ಡದು ಅತ್ಯಂತ ಶ್ರೇಷ್ಠವೋ ಅದು. ಯಾವುದು ಎಂದು ನಿರ್ಧರಿಸುವುದು ನಮ್ಮ ಜ್ಞಾನ. ಅದಕ್ಕೆ ಸೀಮಿತವಾಗಿ ಅದು ಗೋಚರವಾಗುತ್ತಾ ಹೋಗುತ್ತದೆ. ಆ ಜ್ಞಾನ ಒದಗಿಬರಬೇಕಾದರೆ ಸಂಸ್ಕೃತದ ಪೂರ್ಣ ಅರಿವು ಆದರೆ ಮಾತ್ರ ಸಾಧ್ಯ. ಇಲ್ಲವಾದರೆ ಭಗವಂತ ಕೇವಲ ಒಂದು ಸ್ಥಾನ ಮಾತ್ರ. ಮುಂಜಾನೆ ಪರಬ್ರಹ್ಮ ಋಷಿಃ ಅಂತ ಪ್ರಣವಿಸುವಾಗ, ಅಲ್ಲಿ ಮೂರ್ತಿ ಕಾಣುವುದಿಲ್ಲ, ಚರಾಚರ ವಸ್ತುಗಳು ಯಾವುದೂ ಗೋಚರಿಸುವುದಿಲ್ಲ, ಕೇವಲ ಮನಸ್ಸು ಮಾತ್ರ ಕಾಣುತ್ತದೆ. ಅಂತರಂಗದ ಭಗವತ್ ಸ್ವರೂಪವನ್ನು ಗ್ರಹಿಸುವಾಗ ಮನಸ್ಸು ನಮಸ್ಕರಿಸುತ್ತದೆ. ಅದೇ ಪ್ರಣವಸ್ಯ ಪರಬ್ರಹ್ಮ ಋಷಿಃ ಅಂತ ಹೇಳುವುದು. ಇದೊಂದು ಕ್ರಿಯೆ...ಅದು ಜಾತಿಯೋ ಜಾತಿಯ ರೂಪದ ಧರ್ಮವೋ ಅಲ್ಲ. ನಮಸ್ಕರಿಸುವುದು ಯಾವ ಜಾತಿಗೂ ಸೀಮಿತವಾಗಿರುವುದಿಲ್ಲ. ಕೇವಲ ನಮಸ್ಕಾರ. ನಮಸ್ಕಾರ ಎನ್ನುವಾಗ ದೇಹ ನಮಸ್ಕರಿಸಬೇಕೆಂದೇನೂ ಇಲ್ಲ. ಮನಸ್ಸು ಮನಸ್ಸಿನ ಭಾವ ನಮಸ್ಕರಿಸಿದರೆ ಸಾಕು.
ಸಂಸ್ಕೃತ ...ಎಂಬ ಶಬ್ದವನ್ನೂ ಉಚ್ಚರಿಸುವುದಕ್ಕೆ ತಿಳಿಯದವರು ಸಂಸ್ಕೃತದ ಮೇಲೆ ಧಾರ್ಮಿಕ ಭೇದವನ್ನು ಕಲ್ಪಿಸುತ್ತಾರೆ. ಯಾವುದೇ ಒಂದು ವಿಷಯದ ಬಗ್ಗೆ ಅದನ್ನು ವಿಶ್ಲೇಸುವುದು ಅದರ ಸಂಪೂರ್ಣ ಜ್ಞಾನ ಅರಿವಾದಾಗ ಮಾತ್ರ ಸಾಧ್ಯವಾಗುತ್ತದೆ. ಸಂಸ್ಕೃತ ಅರ್ಥವಾಗದವರು ಸಂಸ್ಕೃತದ ಬಗ್ಗೆ ವಿಶ್ಲೇಷಣೆ ಮಾಡುತ್ತಾರೆ. ಸಮುದ್ರದ ಬಗ್ಗೆ ದಡದಲ್ಲಿ ಕುಳಿತು ಕಲ್ಪಿಸಿದಂತೆ, ಸಮುದ್ರದ ಆಳಕ್ಕೆ ಇಳಿದರೆ ಮಾತ್ರ ಸಮುದ್ರದ ಬಗ್ಗೆ ವಿಶ್ಲೇಷಣೆ ಮಾಡಬಹುದು. ಸಂಸ್ಕೃತ ಎಂದರೆ ಅದು ಸಾಗರದಂತೆ. ಅದನ್ನು ಯಾವ ಬಗೆಯಲ್ಲಿ ವಿಶ್ಲೇಷಣೆ ಮಾಡಿದರೂ ಅದು ಅಪೂರ್ವವಾಗುತ್ತದೆ. ಅದರೊಳಗಿನ ಜ್ಞಾನದ ಮುತ್ತುರತ್ನವನ್ನು ಪಡೆಯಬೇಕಾದರೆ ಅದನ್ನು ತಿಳಿಯಬೇಕು. ನಮಗೆ ತಿಳಿಯುವ ಒಂದೆರಡು ಶಬ್ದಗಳೇ ಅಗಾಧವಾದ ಜ್ಞಾನವನ್ನು ಒದಗಿಸುವಾಗ ಇನ್ನು ಸಂಸ್ಕೃತ ಸಂಪೂರ್ಣ ಅರ್ಥವಾದರೆ ಅದು ಹೇಗಿರಬೇಡ? ಸ್ವಾಮೀಜಿಯವರು ಹೇಳಿದ ಮಾತು ಅದು ಕೇವಲ ಅವರ ಸ್ವಯಂ ಪ್ರಜ್ಞೆಗೆ ಸೀಮಿತವಾಗಿ ಉಳಿದಿಲ್ಲ. ಕುರುಕ್ಷೇತ್ರದ ಭಗವದ್ಗೀತೆಯ ಪ್ರಚೋದನೆಯೂ ಅಲ್ಲಿರಬಹುದು.
ಸಂಸ್ಕೃತ ಮೂಲ ಜ್ಞಾನದ ಸ್ವರೂಪ. ಬೇಕಾದರೆ ಅರ್ಥವಿಸಿಕೊಳ್ಳಬಹುದು. ಲೌಕಿಕ ಜೀವನೇ ಪರಮ ಸತ್ಯ ಎಂದು ತಿಳಿದು ಅದನ್ನುಕಡೆಗಣಿಸುವುದಿದ್ದರೆ ಅದು ಅವರ ಮೌಢ್ಯ. ಬೇಕಾದಂತೆ ಉಳಿದೆಲ್ಲವನ್ನೂ ಆಯ್ಕೆ ಮಾಡುವ ನಮಗೆ ಬೇಕಿದ್ದರೆ ಆಯ್ಕಮಾಡಬಹುದು. ಆಧ್ಯಾತ್ಮವನ್ನು ಹೇಗೆ ಒಪ್ಪಿಕೊಳ್ಳುತ್ತೇವೋ ಹಾಗೆ ಸಂಸ್ಕೃತವನ್ನು ಮಾನ್ಯ ಮಾಡಬಹುದು. ಎಲ್ಲರಿಗೂ ವಾಕ್ ಸ್ವಾತಂತ್ರ್ಯ ಎಂಬುದು ಇರುತ್ತದೆ. ಅದು ಸ್ವಾಮಿಜಿಗೂ ಇರಬೇಕಲ್ಲ? ಅವರು ಹೇಳಿದ ಸಮಯ , ಹೇಳಿದ ಕ್ಷೇತ್ರ ಇದೆಲ್ಲವೂ ಔಚಿತ್ಯ ಮೀರಿ ಬಂದುದಲ್ಲ. ಬೇಕಾದರೆ ಅಂಗೀಕರಿಸಬಹುದು ಇಲ್ಲವಾದರೆ ಬಿಟ್ಟು ಬಿಡಬಹುದು. ಸ್ವರ್ಗ ಎಂಬ ಕಲ್ಪನೆಯಂತೆ. ಸ್ವಾಮೀಜಿ ಹೇಳಿದ್ದಾರೆ, ಹೇಳುವುದನ್ನೆಲ್ಲ ವಿವಾದ ಮಾಡುತ್ತಾ ಹೋದರೆ ನಾವು ಮೌನಿಗಳಾಗಿಬಿಡಬೇಕು. ಅಡಗಿರುವ ಜ್ಞಾನದ ಒಟ್ಟಿಗೆ ಇನ್ನೂ ಹಲವು ಅದರಿಂದ ಸೇರಿಕೊಳ್ಳಬಹುದು. ಆದರೆ ಮುಂದೊಂದು ದಿನ ಅದು ಹೊರಬಾರದು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಹಲವರು ಏನೇನೋ ಹೇಳುತ್ತಿದ್ದಾರೆ. ಅದರ ಬಗ್ಗೆ ಯಾವ ವಿವಾದವು ಇರುವುದಿಲ್ಲ. ಮತ್ತೆ ಇದರೆ ಬಗ್ಗೆ ವಿವಾದ ಹುಟ್ಟಿಸುವುದು ಕೇವಲ ಸಂಸ್ಕೃತ ಎಂಬ ಕಾರಣದಿಂದ. ಈಗ ಅದೇ ಮಾತು ಬೇರೆ ಯಾವುದೋ ಭಾಷೆಯ ಬಗ್ಗೆ ಹೇಳಿದರೆ ಅದು ವಿವಾದವಾಗಲಾರದೂ. ಅದು ಪರಮ ಸತ್ಯ ಅಂದುಕೊಳ್ಳಬಹುದು. ಹಾಗಿರುವಾಗ ಸಂಸ್ಕೃತದ ಬಗ್ಗೆ ಈ ದೂಷಣೆ ಯಾಕೆ ಇರಬೇಕು?
ಸ್ವರ್ಗ ಎಂಬ ಕಲ್ಪನೆ , ನಮ್ಮ ಜೀವನವನ್ನು ಆಧರಿಸಿ ಹೇಳುವುದುಂಟು. ಸ್ವರ್ಗ ಬೇರೆ ಎಲ್ಲೂ ಇಲ್ಲ...ಅದು ಇಲ್ಲೇ ಇದೆ ಅಂತ ಹೇಳುತ್ತಾರೆ. ಈ ಜೀವನವನ್ನು ಸ್ವರ್ಗವಾಗಿಸುವುದು ಹೇಗೆ? ಸ್ವರ್ಗವಾಗಿಸುವಾಗ ಸಂಸ್ಕೃತ ಅಲ್ಲಿ ತಡೆಯನ್ನು ತರಬಹುದೇ ? ಸ್ವರ್ಗ ನಮ್ಮ ಕಲ್ಪನೆಯಾದರೂ ಅದು ಏನು ಎಂದು ಒಂದು ಅರ್ಥವಿರಲೇ ಬೇಕು. ಅದು ಏನಾದರೂ ಆಗಿರಬಹುದು. ಅವರವರ ಮನಸ್ಸಿನ ಕಲ್ಪನೆಗೆ ಬಿಟ್ಟದ್ದು. ಹಾಗೆ ಸಂಸ್ಕೃತದಿಂದಲೂ ಅದು ಸಾಧ್ಯವಾಗುವುದಾದರೆ ಅದಕ್ಕೆ ಒಂದು ಅವಕಾಶವಾದರೂ ಲಭ್ಯವಾಗಬೇಕು. ಪೂಜ್ಯ ಸ್ವಾಮೀಜಿಗಳ ಮಾತಿನಲ್ಲಿ ಯಾವ ಉತ್ಪ್ರೇಕ್ಷೆಯನ್ನೂ ಗುರುತಿಸುವುದಕ್ಕೆ ಸಾಧ್ಯವಿಲ್ಲ ಸಂಸ್ಕೃತ ಎಂಬ ಮಡವಂತಿಕೆಯ ದೃಷ್ಟಿ ಮಾತ್ರ ಇದನ್ನು ತುಚ್ಚವಾಗಿ ಕಾಣಬಹುದು. ಹಾಗಂತ ಅನುಸರಿಸುವ ಮನಸ್ಸನ್ನು ತಡೆಯುವುದು ಮೂರ್ಖತನವಾಗುತ್ತದೆ.
No comments:
Post a Comment