Monday, June 30, 2025

ಅಸ್ಪೃಶ್ಯರು

ಮುಂಜಾನೆ ಬೀದಿಯ ದೂರದಲ್ಲಿ ಸೀಟಿಯ ಧ್ವನಿ ಕೇಳಿಸಿದರೆ ಕಸದ ಗಾಡಿ ತಳ್ಳಿಕೊಂಡು ಆಕೆ ಎಂದಿನಂತೆ  ಬಂದಳು ಎಂದು ತಿಳಿಯಬೇಕು.  ಓಡುತ್ತಿರುವ ಬಸ್ಸಿನಲ್ಲಿ ನಿರ್ವಾಕ ಸೀಟಿ (ವಿಸಿಲ್)  ಊದಿದರೆ ಓಡುತ್ತಿರುವ ಬಸ್ಸು ನಿಂತು ಬಿಡುತ್ತದೆ. ಆದರೆ ಆಕೆಯ ಸೀಟಿ ಕೇಳಿದೊಡನೆ ಬೀದಿಯ ಓಟ ಆರಂಭವಾಗಿ,  ಮನೆಯ ಬಾಗಿಲು ತೆರೆದು ಒಬ್ಬೊಬ್ಬರಾಗಿ ಕಸದ ಬುಟ್ಟಿ ಹಿಡಿದುಕೊಂಡು ಪದ್ದಕ್ಕನ ಬಳಿಗೆ ದೌಡಾಯಿಸುವುದನ್ನು ಕಾಣಬಹುದು.  ಪದ್ದಕ್ಕ ನಗರ ಪಾಲಿಕೆಯ ನೌಕರಿಣಿ. ಎಲ್ಲರೂ ಕಸದ ಗಾಡಿಯಿಂದ ಒಂದಷ್ಟು ದೂರ ನಿಂತು ಕೊಂಡು ಕಸದ ಬುಟ್ಟಿಯಿಂದ ಕಸ ಗಾಡಿಗೆ ಸುರಿದು ಅಲ್ಲಿ ನಿಲ್ಲಲಾಗದೇ ಓಡಿ ಬಂದು ಬಿಡುತ್ತಾರೆ. ಏನೇನೋ ಕಸದ ವಾಸನೆ ಕಳೆಯುವುದೆಂದರೆ ಒಂದು ರೀತಿಯ ಹಿಂಸೆ. ಕೆಲವರಂತೂ ಆ ಒಂದು ಘಳಿಗೆ  ಮೂಗು ಮುಚ್ಚಿಕೊಂಡು, ಮಾಸ್ಕ್ ಹಾಕಿಕೊಂಡು ಕಸ ಸುರಿಯುವುದಕ್ಕೆ ಹೋಗುತ್ತಾರೆ. ನಾವೆಷ್ಟು ಅಸಹ್ಯ ಪಟ್ಟುಕೊಂಡರೂ ಆಕೆ ಏನೂ ಆಗಿಲ್ಲ ಎಂಬಂತೆ ಗಾಡಿಯ ಬಳಿಯಲ್ಲೇ ನಿಂತುಕೊಂಡು ತಂದವರ ಕಸವನ್ನು ಗಾಡಿಗೆ ತುಂಬಿಸಿಕೊಳ್ಳುತ್ತಾಳೆ. ಸುರಿಯುವುದು ಮಾತ್ರವಲ್ಲ ಆ ಕಸವನ್ನು ಜಾಲಾಡಿ ಅದರಲ್ಲಿ ಕಬ್ಬಿಣ ಪ್ಲಾಸ್ಟಿ ಕ್ ಇದೆಯೋ ಎಂದು ಹುಡುಕುತ್ತಾಳೆ. ಎನೂ ಅಲ್ಲದ ಏನೂ ಇಲ್ಲದ ಆಕೆಯೆಂಬ ಶೂನ್ಯ ಸ್ಥಾನ ಕೂಡ ಹಲವು ಸಲ ಬಹಳ ಅವಶ್ಯಕವೆನಿಸುತ್ತದೆ. ಒಂದೆರಡು ದಿನ ಆಕೆ ಬಂದಿಲ್ಲ, ಸೀಟಿಯ ಧ್ವನಿ ಕೇಳಲಿಲ್ಲ ಎಂದರೆ ಮನೆ ಮನೆಯಲ್ಲೂ ದುರ್ಗಂಧ  ನೆಲೆಯಾಗುತ್ತದೆ. ಏನೂ ಇಲ್ಲದ ಆಕೆ ಬಂದಿಲ್ಲವೆಂಬುದು ಮುಖ್ಯವಾಗುತ್ತದೆ. ಯಾವುದೋ ಸದ್ದಿನಲ್ಲಿ ಆಕೆಯ ಸೀಟಿಯ ಸದ್ದನ್ನು ಕಿವಿ ಅರಸುತ್ತದೆ. 

ಆಕೆ ಮಹಾನಗರ ಪಾಲಿಕೆ ಕೆಲಸಕ್ಕೆ ತನ್ನ ಯೌವನದಲ್ಲೇ ಸೇರಿದ್ದಳು. ಬೆಂಗಳೂರಿನ ಹಲವಾರು ಬೀದಿ ಸ್ವಚ್ಚ ಮಾಡಿದ ಚರಿತ್ರೆ ಇವಳದು. ನಮ್ಮ ಬೀದಿಯ ಆ ತುದಿಯಿಂದ ಈ ತುದಿ ತನಕವೂ ಸ್ವಚ್ಛ ಮಾಡುತ್ತಾಳೆ. ಪ್ರತಿಮನೆಯವರೂ ತಮ್ಮ ಮನೆ ಎದುರು ಗುಡಿಸಿ ತೊಳೆದು ರಂಗೋಲಿ ಹಾಕಿದರೂ ಈಕೆ ಒಂದಿಷ್ಟು ಪೊರಕೆ ಮುಟ್ಟಿಸುವುದು ಇದ್ದೇ ಇರುತ್ತದೆ.ಆಕೆಯದು  ಮಾಸಲು ಉಡುಪು. ಮೈ ಮೇಲೆಲ್ಲ ಕಸದ ತುಣುಕುಗಳು. ಹತ್ತಿರ ಬಂದರೆ ಸಾಕು ದುರ್ವಾಸನೆ. ಆಕೆಗದು ವೃತ್ತಿ. ಹಸಿವು ನೀಗುವ ವೃತ್ತಿ. 

ಆಕೆಯ ಜಾತಿ ಯಾವುದೋ ಧರ್ಮ ಯಾವುದೋ ನಮ್ಮ ಬೀದಿಯವರಂತೂ ತಲೆಕೆಡಿಸಿಕೊಂಡಿಲ್ಲ. ಆದರೆ ಆಕೆಯ ಮೈಗಂಟಿದ ಕೊಳೆ, ಮೈಲಿಗೆಯಾದ ಬಟ್ಟೆ ಹತ್ತಿರ ಬಂದರೆ ಕಸದ ದುರ್ವಾಸನೆ ಇಷ್ಟು ಮಾತ್ರ ಆಕೆಯಿಂದ ದೂರವಿರುವಂತೆ ಮಾಡಿದೆ. ಹಳ್ಳಿಯಲ್ಲಾದರೆ ಇದನ್ನೇ ಅಸ್ಪೃಶ್ಯತೆ ಎನ್ನಬಹುದು. ಆದರೆ ಇಲ್ಲಿ ಆಕೆಯ ಜಾತಿ ಧರ್ಮ ಯಾರಿಗೂ ತಿಳಿಯದೇ ಇರುವಾಗ ಆ ಸಮಸ್ಯೆಯಂತು ಅಲ್ಲವೇ ಅಲ್ಲ. ಆದರೂ ಬೀದಿ ಮನೆಯವರೆಲ್ಲರೂ ರಸ್ತೆಯ ಒಂದು ಬದಿ ಆಕೆ ಬಂದರೆ ಇವರೊಂದು ಬದಿಯಲ್ಲಿ ಮೂಗು ಮುಚ್ಚಿ ನಡೆಯುತ್ತಾರೆ. ಆಕೆ ಎದುರು ಬಂದರೆ ಕಣ್ಣು ಮುಚ್ಚಿಕೊಳ್ಳುವವರೂ ಇರಬಹುದು. ದೃಷ್ಟಿ ಅಪವಿತ್ರವಾಗಬಹುದು ಎಂಬ ಭ್ರಮೆ.  ಕೇವಲ ದುರ್ಗಂಧದಿಂದ   ಅಂತರ ಕಾದುಕೊಂಡುಬಿಡುತ್ತಾರೆ.     ಇಷ್ಟೆಲ್ಲಾ ಅದರೂ ಹಲವು  ಮನೆಯಲ್ಲಿ ಆಗುವ ವಿಶೇಷ ದಿನಗಳಲ್ಲಿ ಒಂದಷ್ಟು ವಿಶೇಷ ತಿನಿಸುಗಳನ್ನು ಇವಳಿಗೆ ಮೀಸಲಾಗಿರಿಸಿ, ತೆಗೆದು ಇಟ್ಟು ಮರುದಿನ ಆಕೆಗೆ  ಕೊಟ್ಟು ಬಿಡುತ್ತಾರೆ. ಮನೆಯ ಹೊರಗೆ ಒಂದು ಚಿಕ್ಕ ಡಬ್ಬದಲ್ಲೋ ಚೀಲದಲ್ಲೋ ತುಂಬಿಸಿಡುತ್ತಾರೆ.   ಕೆಲವರು ಆಕೆ ಬರುವ ಮೊದಲೇ ಮನೆಯ ಹೊರಗೆ ಇಟ್ಟಿರುತ್ತಾರೆ.  ಕೆಲವರಂತೂ ಆಕೆ ಬರುವಾಗ ದೂರ ನಿಂತು ಆಕೆಯ ಕೈಗೆ ಎಸೆದು ಬಿಡುತ್ತಾರೆ. ಆಕೆ ಬರುವಾಗ ಮೊದಲ ಮಹಡಿಯಲ್ಲಿ ನಿಂತು ಕೆಳಗೆ ಆಕಾಶದಿಂದ ಧರೆಗೆಸೆದು ಅನುಗ್ರಹಿಸಿದಂತೆ ಮಾಡಿಬಿಡುತ್ತಾರೆ. ಆದರೆ ತನ್ನ ಮಾಲಿನ್ಯವನ್ನು ಚಿಂತಿಸದ ನಿರ್ಮಲ ಕಾಯಕ ಆಕೆಯದು. 

ಸದಾ ಮಲಿನ ಬಟ್ಟೆ ಆದರೂ  ಈಗ ಉತ್ತಮವಾದ ಸಮವಸ್ತ್ರ ಸರಕಾರ ಒದಗಿಸಿದೆ. ಯಾವ ಸಮ ವಸ್ತ್ರವಿದ್ದರೂ ಆಕೆ ಕಸದ ಗಾಡಿ ತಳ್ಳುತ್ತ ಬರಬೇಕಾದರೆ ಆಕೆಯಿಂದ ಅಂತರ ಕಾದುಕೊಳ್ಳುತ್ತಾರೆ. ಹೀಗಿದ್ದ ಆಕೆಯನ್ನು  ಒಂದು ದಿನ  ಮೆಟ್ರೋ ರೈಲಿನಲ್ಲಿ ನೋಡುತ್ತೇನೆ. . ಆಕೆಯೇ ಈಕೆಯಾ ಎಂದು ನನಗೆ ಅಚ್ಚರಿಯಾಗುತ್ತದೆ ಶುಭ್ರವಾದ ಬಟ್ಟೆ. ಅಲಂಕಾರ,  ಆ ನಡಿಗೆ ನೋಡಿದರೆ ಆಕೆಯ ಬಳಿಯಿಂದ ಯಾರೂ ದೂರ ಸರಿಯುವುದಿಲ್ಲ. ತಮ್ಮ ಬಳಿಯಲ್ಲಿ ಜಾಗವಾದ ತಕ್ಷಣ ಆಕೆಯನ್ನು ಕುಳಿತುಕೊಳ್ಳುವಂತೆ  ಹೇಳುತ್ತಾರೆ. ಅದು ಉದಾರತೆಯಲ್ಲ. ಎಲ್ಲಲ್ಲೂ ವರ್ತಿಸುವ ಸಾಮಾನ್ಯ ವರ್ತನೆ. ಆಕೆಯ ಕಸದಗಾಡಿ, ಆಕೆಯ ವೃತ್ತಿ ಯಾವುದೂ ಪರಿಗಣಿಸಲ್ಪಡುವುದಿಲ್ಲ. ಹಾಗಾದರೆ ಉಳಿದ ದಿನಗಳಲ್ಲಿ ಆಕೆ ಅಸ್ಪೃಶ್ಯಳಾಗುವುದು ಯಾಕೆ?  ಸ್ಪರ್ಶ ಅಸ್ಪರ್ಶ  ಎಲ್ಲವೂ ಇಂದ್ರಿಯ ಕ್ರಿಯೆಗಳು. ಮತ್ತು ಮನಸ್ಸಿನ ಭಾವನೆಗಳು.

ಒಂದು ಉತ್ತಮ ಇಂಪಾದ ಶೃತಿ ಬದ್ದವಾದ ಹಾಡು ಕೇಳುವಾಗ ನಡುವೆ ಕರ್ಕಶ ಅಪಸ್ವರ ಬಂದರೆ...ನಮ್ಮ ಕಿವಿಯೂ ಸ್ವೀಕರಿಸುವುದಕ್ಕೆ ಒಪ್ಪಿಕೊಳ್ಳುವುದಿಲ್ಲ. ಮನಸ್ಸೂ ಬಯಸುವುದಿಲ್ಲ. ಅದೇ ರೀತಿ ಕರ್ಕಶ ಸದ್ದುಗಳೇ ತುಂಬಿರುವಲ್ಲಿ ಒಂದು ಇಂಪಾದ ಹಾಡು ಕೇಳಿದರೂ ಅದನ್ನು ಸ್ವೀಕರಿಸುವುದಕ್ಕೆ ಮನಸ್ಸು ಒಪ್ಪಿಕೊಳ್ಳುವುದಿಲ್ಲ. ಸ್ಪರ್ಶ ಅಸ್ಪರ್ಶದ ವೆತ್ಯಾಸ ಇಷ್ಟೇ. ಈ ಅಸ್ಪೃಶ್ಯತೆ ಹುಟ್ಟಿಕೊಂಡು ಆನಂತರ ಅದು ಅನರ್ಥದ ಪರಂಪರೆ ಸೃಷ್ಟಿಸಿ ಮೂಲ ಭಾವನೆಯನ್ನೇ ಬದಲಿಸಿಬಿಟ್ಟಿತೇ ಅಂತ ಅನ್ನಿಸುತ್ತದೆ. ಪಾವಿತ್ರ್ಯ ಮತ್ತು ಅಸ್ಪೃಶ್ಯ ಆಧ್ಯಾತ್ಮಿಕಕ್ಕೆ ಸಂಭಂಧಿಸಿ ಅರ್ಥಮಾಡಿಕೊಳ್ಳುವುದಕ್ಕೆಅಸಮರ್ಥರಾದದ್ದು ಮಾತ್ರವಲ್ಲ ಅದರ ಅನುಷ್ಠಾನವನ್ನು ವಿಪರೀತವಾಗಿ  ಬಳಸಿಕೊಂಡು ಒಂದು ಪಿಡುಗಿಗೆ ಕಾರಣರಾಗಿ ಹೋದದ್ದು ಒಂದು ದುರಂತ. 

ಪಾವಿತ್ರ್ಯತೆ ಎಂಬುದು ಮನುಷ್ಯ ಜನ್ಮಕ್ಕೆ ಹೊಂದಿಕೊಂಡು ಬಳಕೆಯಾಗಬೇಕಾದದ್ದು ಧರ್ಮದ ನೆರಳಲ್ಲಿ ಅದು ವಿರೂಪಕ್ಕೆ ಕಾರಣವಾಗಿಬಿಟ್ಟಿತು. ಕಸ ಹೆಕ್ಕುವವಳು ಉಳಿದವರಂತೆ ಸ್ವಚ್ಛ ಸ್ಥಿತಿಯಲ್ಲಿ ಬಂದಾಗ ಎಲ್ಲರೂ ಸೇರಿಸಿಕೊಳ್ಳುವಂತೆ ಪಾವಿತ್ರ್ಯ ಎಂಬುದು ಅನುಸರಿಸುವ ಪ್ರವೃತ್ತಿಯಲ್ಲಿದೆ. ಪರಿಶುದ್ದತೆಯ ಭಾವ ಎಂಬುದು ಅಸ್ಪೃಶ್ಯತೆಗಿಂತಲೂ ಪರಿಶುದ್ದನಾಗುವುದಕ್ಕೆ ಹೆಚ್ಚು ಒತ್ತುಕೊಡುತ್ತದೆ. ತಾನು ಅಪವಿತ್ರ ಎಂದು ತಿಳಿದುಕೊಂಡರೆ ಅಲ್ಲಿ ಪಾವಿತ್ರ್ಯದ ಅರಿವು ಉಂಟಾಗುತ್ತದೆ. ಜೀವ ಭಾವತೊರೆದು ಪರಮಾತ್ಮನಲ್ಲಿ ಐಕ್ಯವಾಗುವುದಕ್ಕೆ ಪಾವಿತ್ರ್ಯತೆ ಅತ್ಯಂತ ಅವಶ್ಯಕ. ಪರಮಾತ್ಮನ ಎದುರು ಎಲ್ಲರೂ ಅಪವಿತ್ರರು ಮತ್ತು ಅಸ್ಪೃಶ್ಯರು. ನಾಮ ರೂಪ ಕ್ರಿಯೆ ಇವುಗಳು ಮನುಷ್ಯನ ಅಸಮಾನತೆಯ ಮೂರು ವೆತ್ಯಾಸಗಳು. ಹೆಸರಿನಿಂದ ರೂಪದಿಂದ ಮತ್ತು ಮಾಡುವ ಕ್ರಿಯೆಯಿಂದ ಮಾತ್ರ ಮನುಷ್ಯ ಪ್ರತ್ಯೇಕಿಸಲ್ಪಡುತ್ತಾನೆ. ಹೆಸರು ಹಲವು ಇರಬಹುದು. ರೂಪ  ಪ್ರತಿಯೊಬ್ಬರದೂ ವೆತ್ಯಾಸವಿರಬಹುದು. ಇನ್ನು ವೃತ್ತಿಯೂ ಬೇರೆ ಬೇರೆ ಇರಬಹುದು. ಇದಲ್ಲದೇ ಮನುಷ್ಯರಲ್ಲಿ ಬೇರೆ ಯಾವ ಬಗೆಯ ವೆತ್ಯಾಸ ಅಸಮಾನತೆ ಇರುವುದಕ್ಕೆ ಸಾಧ್ಯವಿಲ್ಲ.  ಆದರೆ ಇಂದು ಪ್ರತ್ಯೇಕಿಸುವುದಕ್ಕೆ ಹಲವು ವಿಷಯಗಳು ಅರ್ಹತೆಗಳು ಇರುತ್ತವೆ. ಈ ಅಸಮಾನತೆಯ ಅಜ್ಞಾನ ಹಲವನ್ನು ಅಪಾರ್ಥಕ್ಕೆ ಎಡೆಮಾಡಿಕೊಟ್ಟಿದೆ. 

ಬ್ರಹ್ಮಚರ್ಯ ಮತ್ತೊಂದು ಅಹಿಂಸ ಈ ಎರಡು ವಿಷಯಗಳು ಸಾರ್ವತ್ರಿಕ ಆಚರಣೆಗೆ ಸಂಬಂಧಿಸಿ ಅಷ್ಟಾಂಗ ಯೋಗದ ನಿಯಮಗಳಲ್ಲಿ ವಿಧಿಸಿದೆ. ಬ್ರಹ್ಮಚರ್ಯ ಎಂದರೆ ಮದುವೆಯಾಗದೇ ಇರುವುದು  ಎಂದು ತಿಳಿದುಕೊಂಡಿದ್ದಾರೆ. ಆದರೆ ಬ್ರಹ್ಮ ಚರ್ಯ...ಎಂದರೆ ಬ್ರಹ್ಮನನ್ನು ಅಂದರೆ ಪರಬ್ರಹ್ಮನ ಅಸ್ತಿತ್ವವನ್ನು ತಿಳಿದುಕೊಳ್ಳುವುದು.  ಪರಬ್ರಹ್ಮದ ಅರಿವಿನಲ್ಲೇ ಸಂಚರಿಸುತ್ತಿರುವುದು. ಆದನ್ನು ತಿಳಿದುಕೊಂಡವನೇ ಬ್ರಹ್ಮ ಚರ್ಯದ ಹಾದಿಯಲಿ ನಡೆದು ಬ್ರಹ್ಮಚಾರಿ ಎಂದಾಗುತ್ತಾನೆ. ಆದರೆ ವಾಸ್ತವದಲ್ಲಿ ಅದರ ಅರ್ಥ ಬೇರೆಯೇ ಆಗಿ ಬಳಸಿಯಾಗಿದೆ. ಬ್ರಹ್ಮ ಚರ್ಯ ಎಂದರೆ ಅವಿವಾಹಿತ.   ಇನ್ನು ಅಹಿಂಸೆ. ಕೇವಲ ಸಸ್ಯಾಹಾರ ಎಂದರೆ ಅಹಿಂಸೆ ಎಂಬ ಭಾವನೆ ಇದೆ. ಆದರೆ ವಾಸ್ತವದಲ್ಲಿ ಒಬ್ಬ ಮಾಂಸಾಹಾರಿಯೂ ಅಂಹಿಸಾವಾದಿಯಾಗಬಲ್ಲ. ಅಹಿಂಸೆ ಎಂಬುದು ಮನಸ್ಸಿನ ಭಾವನೆಯಲ್ಲಿದೆ. ಹೊರತು ಆಹಾರದಲ್ಲಿ ಇಲ್ಲ. ಇಲ್ಲಿ ಮನಸ್ಸಿನ ಪ್ರವೃತ್ತಿಯೇ ಮುಖ್ಯವಾಗುತ್ತದೆ. ಅಹಿಂಸೆ ಅದು ಕೇವಲ ದೈಹಿಕವಾಗಿ ಮಾತ್ರವಲ್ಲ. ಮಾನಸಿಕವಾಗಿ ಹಿಂಸಿಸುವುದು ಹಿಂಸೆಯಾಗುತ್ತದೆ.  ನಮ್ಮಲ್ಲಿ ಸನಾತನದಿಂದ ಬಂದ ಹಲವು ವಿಚಾರಗಳೂ ಹೀಗೆ ಅವುಗಳನ್ನು ಅರ್ಥವಿಸುವುದರಲ್ಲಿ ಮನುಷ್ಯ ಎಡವಿದ್ದೆ ಹೆಚ್ಚು. ಹಲವು ಅಧ್ಯಾತ್ಮ ತತ್ವಗಳು ಇಂದು ಇದೇ ಬಗೆಯಲ್ಲಿ ನಂಬಿಕೆಯನ್ನು ಕಳೆದುಕೊಂಡಿವೆ. ಕಳೆದು ಕೊಂಡದ್ದು ಅಲ್ಲ ಅಜ್ಞಾನದಿಂದ ಅದನ್ನು ಕಳೆಯಲಾಗಿದೆ. ಯಾಕೆಂದರೆ ಅರ್ಥವಿಸುವುದಕ್ಕೆ ಆಧ್ಯಯನ ಬೇಕು. ಅದಕ್ಕಿಂತಲೂ ಬದ್ದತೆ ಬೇಕು. ಸನಾತನ ಧರ್ಮದ ಆಳ ಅಗಲವನ್ನು ಅರಿಯುವುದಕ್ಕೆ ಕೇವಲ ಒಂದು ಜನ್ಮದಿಂದ ಸಾಧ್ಯವಾಗುವುದಿಲ್ಲ. ಯಾವುದನ್ನು ನಮಗೆ ಅರ್ಥಮಾಡಿಕೊಳ್ಳುವುದಕ್ಕೆ ಅಸಾಧ್ಯವೋ ಅದರ ಬಗ್ಗೆ ಔದಾಸಿನ್ಯವನ್ನು ತಾಳುವುದೇ ಹೆಚ್ಚು. ಅಜ್ಞಾನ ನಮ್ಮ ಅಸಮರ್ಥತೆಯನ್ನು ಮುಚ್ಚಿಹಾಕುತ್ತದೆ. 

ಅಸ್ಪೃಶ್ಯತೆ ದೈಹಿಕವಾಗಿ ಮಾತ್ರವಲ್ಲ. ಮಾನಸಿಕವಾಗಿ. ಎಲ್ಲ ಸ್ಪರ್ಶದಿಂದಲೂ ದೂರವಾಗಿರುವುದು ಎಂದರೆ ಅದು ಪರಮ ಪವಿತ್ರದ ಹಾದಿ. ಅದು ಸುಲಭದಲ್ಲಿ ಸಾಧ್ಯವಾಗುವಂತಹುದಲ್ಲ. ಉಲಿದೆಲ್ಲವನ್ನು ಮನಸ್ಸಿಗೆ ಅಂಟಿಸಿಕೊಂಡು ಕೇವಲ ದೇಹದಿಂದ ಅಸ್ಪ್ರುಶ್ಯನಾಗಿದ್ದರೆ ಪವಿತ್ರನಾದೆ ಎಂಬುದಕ್ಕೆ ಅರ್ಥವಿಲ್ಲ. ಪಾಪ ಅಥವ ದುರಿತ  ವಿದ್ಯುತ್ ತಂತಿಯಲ್ಲಿ ಹರಿವ ವಿದ್ಯುತ್ ನಂತೆ ಅದು ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಸ್ಪರ್ಶವಾದರೆ ಅದು ಅನುಭವಕ್ಕೆ ಬರುತ್ತದೆ. ಪವಿತ್ರತೆ ಇರುವುದು ಈ ಪಾಪಗಳಿಂದ ದೂರವಾಗುವುದರಲ್ಲಿದೆ. 

Saturday, June 21, 2025

ಯೋಗದಿನ ಒಂದು ಪ್ರದರ್ಶನ




    ಯೋಗ ಅಂದರೆ ಒಂದನ್ನು ಒಂದು ಬೆಸೆಯುವುದು ಅಂದರೆ ಸಂಯೋಗ. ಆದರೆ ಯೋಗ ದಿನಾಚರಣೆಯ ಕಾರ್ಯಕ್ರಮಗಳನ್ನು ನೋಡುವಾಗ ಈ ಭಾವನೆ ಹುಟ್ಟುವುದಿಲ್ಲ.   ನದಿ ಹರಿದು ಸಮುದ್ರವನ್ನು ಸೇರುವಂತೆ ಅದು ನದಿಯ ಯೋಗ. ಮನುಷ್ಯ ಪ್ರಾಣಿ ಸಂಕುಲಗಳೂ ಜೀವಾತ್ಮ ಪರಮಾತ್ಮನಲ್ಲಿ ಸೇರುವುದೇ ಯೋಗ. ಈ ಅರ್ಥದಲ್ಲಿ ಯೋಗದಿನವನ್ನು ಸಂಭ್ರಮಿಸಿದರೆ ಅದು ನಿಜವಾದ ಯೋಗ ದಿನದ ಯಶಸ್ಸು ಎನ್ನಬೇಕು. ಆದರೆ ಇದನ್ನು ಈ ಬಗೆಯಲ್ಲಿ ಅರ್ಥೈಸುವುದಕ್ಕೆ ಮನಸ್ಸು ಕಠಿಣವಾಗಿರಬೇಕು. ಬದುಕು ಅನುಭವದಿಂದ ಪಕ್ವವಾಗಬೇಕು. ಇವೆರಡೂ ಇಲ್ಲದಿರುವಾಗ ಯೋಗದ ಬಗ್ತೆ ತಿಳಿಯುವ ಅದರ ಅಂತರಾಳಕ್ಕೆ ಇಳಿಯುವ ಆಸಕ್ತಿ ಇರಬೇಕು. ಯೋಗ ದಿನಾಚರಣೆಯಿಂದ ಒಂದಷ್ಟು ಪ್ರೇರಣೆಯಾದರೂ ಹುಟ್ಟಿಕೊಳ್ಳಬಹುದು ಎಂಬ ಆಶಾಭಾವ ಇದ್ದರೆ ಈಗಿನ ಆಚರಣೆಗಳನ್ನು , ಆ ಆಡಂಬರವನ್ನು ನೋಡಿದರೆ ಆಶಾಭಾವ ಉಳಿಯುವುದಿಲ್ಲ.  

ನಮ್ಮಲ್ಲಿ ಒಂದು ವಿಚಿತ್ರವಾದ ಸ್ವಭಾವ ಅಥವಾ ವಾಡಿಕೆಯೋ ಗೊತ್ತಿಲ್ಲ. ಯಾವುದೇ ದಿನಾಚರಣೆಯಾದರೂ ಅದಕ್ಕೊಂದು ಆಡಂಬರ ಇದ್ದೇ ಇರುತ್ತದೆ. ಅದರ ಹೆಸರಲ್ಲಿ ಒಂದಷ್ಟು ಅರ್ಥವಿಲ್ಲದ ಆಚರಣೆಗಳು ಕಾಣಬಹುದು. ಯೋಗದಿನವು ಅದೇ ಹಾದಿಯಲ್ಲಿ ಸಾಗುವುದು ದುರ್ದೈವ. 

ಪ್ರತಿವರ್ಷವೂ ಯೋಗ ದಿನ ಬರುತ್ತದೆ. ಇನ್ನೇನು ಎಲ್ಲವೂ ಬದಲಾಗುತ್ತದೆ ಎಂಬ ನಿರೀಕ್ಷೆ ಇಡುವುದು ಸರಿಯಲ್ಲ. ಆದರೆ ಯೋಗದ ಬಗ್ಗೆ ತಿಳಿಯುವುದಕ್ಕೆ ಈ ನಿರೀಕ್ಷೆ ಸಹಕಾರಿಯಾಗಬೇಕು. ಇಂದು ಬಹಳ ಸಡಗರದಿಂದ ಯೋಗ ದಿನ ಆಚರಿಸಿದ ವರದಿಯನ್ನು ಕಾಣುತ್ತಿದ್ದೇವೆ. ಅದನ್ನು ನೋಡುವಾಗ ಈ ಯೋಗ ಸಂಯೋಗದ ಬಗ್ಗೆ ಯಾರೂ ಗಂಭೀರವಾಗಿಲ್ಲ ಅಂತ ಅನ್ನಿಸುತ್ತದೆ. ಕೆಲವು ಯೋಗ ದಿನಾಚರಣೆಗಳು ಅರ್ಥವತ್ತಾಗಿ ನಡೆದರೂ ಇನ್ನು ಕೆಲವು ಯೋಗ ಅಂದರೆ ಇದುವಾ ಅಂತ ಅನ್ನಿಸುವಷ್ಟರ ಮಟ್ಟಿಗೆ ಅರ್ಥಹೀನವಾಗಿ ಕಂಡಿತ್ತು. ನಾವು ಯಾವ ದಿನವನ್ನಾದರೂ ಸಂಭ್ರಮಿಸಿ ಆಚರಿಸುತ್ತೇವೆ. ಆದರೆ ಅದರ ಮೂಲ ಉದ್ದೇಶದ ಗಂಭೀರವಾಗಿ ಯೋಚಿಸುವುದಿಲ್ಲ. ಹಾಡುವುದು ಕುಣಿಯುವುದು ತಿನ್ನುವುದು ಈ ಸಂಭ್ರಮದಲ್ಲಿ ಅತೀ ಮುಖ್ಯವಾಗುತ್ತದೆ. ಹಾಗೆ ನೋಡಿದರೆ ಯಾವುದರ ಮೂಲಕವೂ ಸಂಯೋಗವನ್ನು ಸಾಧಿಸಬಹುದೇನೋ ಸತ್ಯ. ಆದರೆ ಅದು ನಿಜವಾದ ಯೋಗ ಅನ್ನಿಸಬಹುದೇ?  ಎಲ್ಲ ಸಂಭ್ರಮದಂತೆ ಇಲ್ಲೂ ಹಾಡುವುದು ತಿನ್ನುವುದು ಕುಣಿಯುವುದು  ಪ್ರಧಾನವಾದರೆ ಅದು  ಯೋಗ ಹೇಗಾಗುತ್ತದೆ?

ಯೋಗ ಅಂದರೆ  ಚಿತ್ತವೃತ್ತಿಯಿಂದ ದೂರುವವಿರುವುದು. ಚಿತ್ತವೃತ್ತಿ ಎಂದರೆ ಮನಸ್ಸು ಇಂದ್ರಿಯಗಳ ಮೂಲಕ ಗ್ರಹಿಸಿ ಅದಕ್ಕೆ ತಕ್ಕಂತೆ ವರ್ತಿಸುವುದು. ಇಷ್ಟೆಲ್ಲ ಆಳಕ್ಕೆ ಯೋಚಿಸುವುದು ಬಹಳ ಕಷ್ಟವಾಗುತ್ತದೆ. ಆದರೆ ಯೋಗ ಎಂಬುದನ್ನು ತಿಳಿಯುವ ಉದ್ದೇಶವಾದರೂ ನಮ್ಮ ಕೃತಿಯಲ್ಲಿರಬೇಕು. ಯೋಗ ದಿನಾಚರಣೆ ಸಾರ್ಥಕವಾಗಬೇಕಾದರೆ ಇದು ಅತೀ ಅವಶ್ಯ. ಇಲ್ಲವಾದರೆ ಆಸನ ಪ್ರಾಣಾಯಾಮ ಇಷ್ಟನ್ನೇ ಯೋಗ ಅಂತ ತಿಳಿದು ಸನಾತನ ಪದ್ದತಿಗೆ ಮತ್ತೊಂದು ಅರ್ಥವನ್ನು ಕಲ್ಪಿಸುವ ಸಂಭವವಿದೆ. ಯೋಗವನ್ನು ಕೇವಲ ಆಸನ ಪ್ರಾಣಾಯಾಮಕ್ಕೆ ಸೀಮಿತಗೊಳ್ಳಬಾರದು. ಸನಾತನ ಧರ್ಮಾಚರಣೆಗಳು, ಮನುವಾದ ಇವುಗಳೆಲ್ಲ ಅಪಾರ್ಥವನ್ನು ಹುಟ್ಟು ಹಾಕಿದಂತೆ ಯೋಗಾಭ್ಯಾಸವೂ ಅದೇ ಸಾಲಿಗೆ ಸೇರಿಬಿಡುತ್ತದೆ. ಯೋಗಾಭ್ಯಾಸದಲ್ಲಿ ಆಸನಗಳಿಗೇ ಹೆಚ್ಚು ಪ್ರಾಧಾನ್ಯ ಕೊಟ್ಟುಉಳಿದವುಗಳನ್ನೆಲ್ಲ ನಿರ್ಲಕ್ಷಿಸಲಾಗುತ್ತದೆ. ಒಂದು ರೀತಿಯಲ್ಲಿ ಯೋಗಾಭ್ಯಾಸ ಹಾದಿ ತಪ್ಪುವ ಎಲ್ಲ ಸಂಭವಗಳು ಕಣ್ಣ ಮುಂದಿದೆ. ಯಾರೋ ಹೇಳಿದ್ದಾರೆ ಅಂತ ಆಚರಿಸಿ ವರ್ಷದ  ಒಂದು ದಿನಕ್ಕೆ  ಸೀಮಿತಗೊಳಿಸಿ ನಂತರ ಅದಕ್ಕೆ ಸಂಭಂಧವಿಲ್ಲದಂತೆ ಜೀವಿಸುವುದು ಯೋಗ ಜೀವನವನ್ನು ಅವಮಾನಿಸಿದಂತೆ. ಯೋಗಾಭ್ಯಾಸದಲ್ಲಿ ಧ್ಯಾನ ಶವಾಸನ ಇವುಗಳಿಗೆಲ್ಲ ಮಹತ್ವವೇ ಇಲ್ಲದಂತೆ ಮಾಡುವುದನ್ನು ಕಾಣಬಹುದು. ಇವುಗಳೆಲ್ಲ ಮಾಡುವುದಕ್ಕೆ ಬದ್ಧತೆ ಬೇಕು. 

ಯೋಗಾಭ್ಯಾಸದಲ್ಲಿ ಅದರ ಕೃತಿಗಿಂತ ಅದರ ಮೂಲಭೂತವಾದ ನಿಯಮಗಳನ್ನು ಗಮನಿಸಬೇಕು. ಯೋಗ ದಿನ ಕೇವಲ ಪ್ರದರ್ಶನಕ್ಕೆ ಸೀಮಿತವಾಗಿದೆ. ವರ್ಷಕ್ಕೆ ಒಂದು ಸಲ ಉತ್ಸವದಂತೆ ಆಚರಿಸಿದರೆ ಮುಗಿಯಿತು. ಆನಂತರ ಎಲ್ಲವನ್ನೂ ಮರೆತುಬಿಡುತ್ತೇವೆ. ಮತ್ತೆ ಮುಂದಿನ ವರ್ಷ...ಎಲ್ಲೋ ಮೂಲೆ ಸೇರಿದ ವಸ್ತುಗಳನ್ನು ಕೊಡವಿ ಮತ್ತೆ  ಪುನಃ ಢಂಬಾಚಾರಕ್ಕೆ ತೊಡಗುತ್ತೇವೆ. ಬಿಳಿ ಅಂಗಿ ಏಲ್ಲೋ ಬಿದ್ದಿರುತ್ತದೆ ಅದನ್ನು ಕೊಡವಿ ಮತ್ತೆ ಅಣಿಯಾಗುತ್ತೇವೆ. ಎಲ್ಲದರಂತೆ ಯೋಗವೂ ಅರ್ಥವನ್ನು ಕಳೆಯುವುದನ್ನು ಕಾಣಬಹುದು. ನಮಗೆ ಯೋಗದ ಬಗ್ಗೆ ಆಸಕ್ತಿ ಇಲ್ಲದಿದ್ದರೂ ಕೊನೆ ಪಕ್ಷ ಇದನ್ನು ಆಚರಿಸುವುದಕ್ಕೆ ಕಾರಣವನ್ನು ತಿಳಿಯಬೇಕು. ಮತ್ತು ಅದು ನಮ್ಮ ಪ್ರವೃತ್ತಿಯಿಂದ ಪ್ರಯೋಜನ ಸಿಗುವಂತಾಗಬೇಕು. 

ಯೋಗ ದಿನಾಚರಣೆ ಕೇವಲ ಪ್ರದರ್ಶನಕ್ಕೆ ಸೀಮಿತವಾಗಿದೆ. 

 





Friday, June 6, 2025

ಮತ್ತೆ ಬರುವುದೇ?


ಈ ಲೇಖನ ಬರೆಯುವುದಿಲ್ಲ ಎಂದು ಹಲವು ಸಲ ಅಂದುಕೊಂಡರೂ, ಕೆಲವು ಅನಿಸಿಕೆಗಳನ್ನು ಹೇಳದೇ ಇರುವುದಕ್ಕೆ ಸಾಧ್ಯವಾಗುವುದಿಲ್ಲ. 



ನನ್ನ ಪರಿಚಯಸ್ಥ ಮಹಿಳೆಯೊಬ್ಬರು ಇದ್ದಾರೆ. ಬೆಂಗಳೂರಿಗೆ ಬಂದು ಐದಾರು ವರ್ಷ ಕಳೆದಿರಬೇಕು. ವೃತ್ತಿಯಿಂದ ಅವರು ಬೆಂಗಳೂರಿಗರೇ ಆದರೂ ಅವರು ಮೂಲತಃ ಕೇರಳದ ಕಾಸರಗೋಡಿನವರು. ಅವರ ಎಲ್ಲಾ ವೈಯಕ್ತಿಕ ದಾಖಲೆಗಳೂ ಅಲ್ಲಿನ ವಿಳಾಸದಲ್ಲಿದೆ. ಬದಲಿಸಬಹುದಿತ್ತು. ಆದರೆ ಅವರೇ ಹೇಳುವಂತೆ ಎಲ್ಲಿಯಾದರೇನೂ ಭೂಮಿ ಮೇಲೆ ಉಸಿರಾಡುತ್ತಿದ್ದೇನಲ್ಲ, ಮಾತ್ರವಲ್ಲ ಕೇರಳವಾದರೇನು ಕರ್ನಾಟಕವಾದರೇನು ನಾನು ಭಾರತೀಯಳು ಅಷ್ಟು ಸಾಕು. ಈ ಅನಿಸಿಕೆಯನ್ನು ಪೂರ್ಣವಾಗಿ ಸರಿ ಎನ್ನುವುದಕ್ಕೆ ಸಾಧ್ಯವಿಲ್ಲದೇ ಇದ್ದರೂ ಅದರಲ್ಲಿ ಸತ್ಯಾಂಶ ಇಲ್ಲದೇ ಇರುವುದಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ. 

ಅವರ ಆಧಾರ್ ಚುನಾವಣಾ ಗುರುತು ಎಲ್ಲವೂ ಕೇರಳದಲ್ಲಿರುವುದರಿಂದ ಅವರಿಗೆ ಯಾವುದೇ ಉಚಿತ ಸೌಲಭ್ಯ ಇರುವುದಿಲ್ಲ. ಅವರಂತೆ ಕರ್ನಾಟಕದಲ್ಲಿ ಹಲವರಿದ್ದಾರೆ. ಈ ಒಂದು ಕಾರಣಕ್ಕೆ ತೀರ ಅನಿವಾರ್ಯ ಎನಿಸುವ ಸೌಲಭ್ಯ ಸಿಗದೇ ಇರುವವರು... ಈ ನಿಯಮ ವೆತ್ಯಾಸ  ತಾರತಮ್ಯ ಅದೇನು ಈಗಿನ ಸಮಸ್ಯೆಯಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ಅದು ಒಂದಲ್ಲ ಒಂದು ವಿಧದಲ್ಲಿ ನಮ್ಮ ನಡುವೆ ಇದೆ.  ಅದು ಸರಿಯೋ ತಪ್ಪೋ ಬೇರೆ ವಿಚಾರ. ಆದರೆ ಒಂದು ಸೌಲಭ್ಯ ಅದು ಮೀಸಲಾತಿಯಾಗಲಿ ಇನ್ನಿತರವೇ ಆಗಲಿ  ಧರ್ಮ ಭಾಷೆಯನ್ನು ಹೊಂದಿಕೊಂಡು ನಮಗೆ ಲಭ್ಯವಾಗುವುದಾದರೆ ಅದನ್ನು ಉಪಯೋಗಿಸುವಲ್ಲೂ ಒಂದು ಕೀಳರಿಮೆ ಹಲವರಿಗೆ ಬಾಧಿಸುತ್ತದೆ. ಅದಕ್ಕೆ ಕಾರಣ ಅವ್ಯಕ್ತವಾದ ಒಂದು ಆತ್ಮ ಗೌರವ. ಸೌಲಭ್ಯವನ್ನು ಅನುಭವಿಸುವಲ್ಲಿ...ಈ  ಅರ್ಹತೆಯೂ ಇಲ್ಲದವರು ಇದ್ದಾರಲ್ಲಾ ಎಂದು ತಿಳಿವಾಗ...ಹೊಟ್ಟೆ ತುಂಬಿದವನಿಗೆ ಆಹಾರ ತಂದಿಟ್ಟರೆ ಆಗುವ ಸಂಕಟ ..ಛೇ ಹೊರಗೆ ಹಸಿವಿನಿಂದ ಬಳಲುವವರ ಮುಖ ಸ್ಮರಣೆಗೆ ಬರುತ್ತಿದ್ದರೆ ಅದೇ ಆತ್ಮ ಗೌರವ. ನನಗೆಷ್ಟು ಅರ್ಹತೆ ಇದೆಯೋ ಅದು ಬೇರೆ ಆದರೆ ಈ ಅರ್ಹತೆ ಇಲ್ಲದೇ ಸೌಲಭ್ಯದ ಅನಿವಾರ್ಯತೆ ಇರುವವರು ಹಲವರಿದ್ದಾರೆ, ಅವರ ಹಸಿವಿನ ಮೇಲೆ ನನ್ನ ಅರ್ಹತೆ ಕೇಕೆ ಹಾಕುತ್ತದೆ ಎಂದು ಅನ್ನಿಸಿಬಿಡುತ್ತದೆ. ಹೊರಗೆ ದುಡಿಯುವುದಕ್ಕೆ ಹೋದ ಅಮ್ಮ ಮನೆಯಲ್ಲಿದ್ದ ಮಕ್ಕಳ ಹಸಿವನ್ನು ನೆನೆದು ಹೋದಕಡೆ ಆಹಾರ ಸಿಕ್ಕಿದರೂ ಹಸಿವಿನಿಂದ ಇರುವಂತೆ  ಆ ಭಾವನೆ ಅನುಭವದಲ್ಲಿ ಮಾತ್ರ ಅರ್ಥವಾಗಬಲ್ಲುದು. 

ಹೀಗೆ ಒಂದು ಸೌಲಭ್ಯ ಅವಕಾಶ ಒಂದು ಭಾಷೆಗೆ ರಾಜ್ಯಕ್ಕೆ ಸೀಮಿತವಾಗಿ ಮೀಸಲಾಗುವಾಗ, ಮೊನ್ನೆ ಮೊನ್ನೆ  ನಡೆದ, ದೊಡ್ಡ ದುರಂತಕ್ಕೆ ಕಾರಣವಾದ ವಿಜಯೋತ್ಸವದ ವಿಡಂಬನೆ ಕಣ್ಣೆದುರು ಬರುತ್ತದೆ. ಯೋಚಿಸಿ...ಸರಕಾರ ಕರೆದು ಸನ್ಮಾನಿಸಿದವರಲ್ಲಿ ಕರ್ನಾಟಕದ ಆಧಾರ್ ಕಾರ್ಡು ಚುನಾವಣಾ ಚೀಟಿ ಇದ್ದವರೆಷ್ಟು ಮಂದಿ ಇದ್ದಾರೆ? ಕರ್ನಾಟಕ ಸರಕಾರಕ್ಕೆ ಮತ ಚಲಾಯಿಸುವವರು ಎಷ್ಟಿದ್ದಾರೆ? ಎಲ್ಲದರಲ್ಲೂ ಭಾಷೆ ಧರ್ಮವನ್ನು ನೋಡುವ ನಾವು ನಮಗೆ ಬೇಕಾದ ಕಡೆಗೆ ಇದು ಗಮನಾರ್ಹವೆನಿಸುವುದಿಲ್ಲ. ಆದರೆ ಸಾವು ಈ ಮೀಸಲಾತಿಯನ್ನು ಹುಡುಕಿಕೊಂಡು ಬರುವುದಿಲ್ಲ. ಹನ್ನೊಂದು ಮಂದಿ ಪ್ರಾಣ ಕಳೆದುಕೊಂಡ ನಂತರ ಎಡವಿದ್ದು ಎಲ್ಲಿ ಎಂದು ಅರಿವಾಗದೇ ಇದ್ದರೆ ಈ ದುರಂತ ಪಾಠವಾಗುವುದಿಲ್ಲ. 

ಇಲ್ಲಿ ಅಪರಾಧಗಳು ತಪ್ಪುಗಳು ಹೋಲಿಕೆಯಲ್ಲಿ ತುಲನೆ ಮಾಡಿ ಸಮರ್ಥಿಸುವ ಹೀನ ಮನಸ್ಥಿತಿ ಇರುತ್ತದೆ. ನಮ್ಮ ತಪ್ಪನ್ನು ಒಪ್ಪಿಕೊಳ್ಳುವುದಕ್ಕೆ ಇನ್ನೊಬ್ಬರ ತಪ್ಪು ಗುರಾಣಿಯಾಗುತ್ತದೆ. ಯಾರೋ ದಾರಿಯ ಕಲ್ಲನ್ನು ನೋಡದೇ ಎಡವಿ ಬೀಳುತ್ತಾರೆ. ಆವರು ಬಿದ್ದಕಾರಣ ನಾವೂ ಉಳಿದವರೂ ಬೀಳಬಹುದು ಎನ್ನುವ ಸಮರ್ಥನೆ ಇದೆಯಲ್ಲ ಅದು ಮೂರ್ಖತನ. ಹನ್ನೊಂದು ಜನರು...ಕಾಲ ಕೆಳಗೆ ಮರಣವನ್ನು ಕಂಡರು. ಆಗ ಕುಂಭಮೇಳದ ನೂಕು ನುಗ್ಗಲಿನಲ್ಲಿ ಸತ್ತವರ ತುಲನೆಯನ್ನು ಮಾಡಿ ಸಮರ್ಥಿಸುವುದಕ್ಕೆ ತೊಡಗುತ್ತಾರೆ. ಕುಂಭಮೇಳದಲ್ಲಿ ಹಾಗಾಗಬಾರದಿತ್ತು. ಅದೂ ಅಜಾಗರೂಕತೆ. ಇಲ್ಲಿ ಒಂದನ್ನೊಂದು ಹೋಲಿಸಿದರೆ ಅದಕ್ಕೆ ಅರ್ಥವಿರುವುದಿಲ್ಲ.  ಕುಂಭ ಮೇಳದಲ್ಲಿ ಆರಂಭದ ದಿನದಲ್ಲಿ ಆಗಿ ಹೋದ ದುರಂತ. ಆದರೆ ಆನಂತರ ಅದನ್ನು ಯಶಸ್ವಿಯಾಗಿ ಕೋಟಿ ಕೋಟಿ ಸಂಖ್ಯೆಯಲ್ಲಿ  ಜನ ಬಂದರೂ ಅದನ್ನು ಯಶಸ್ವಿಯಾಗಿ ನಿರ್ವಹಿಸಿದ ಉದಾಹರಣೆ ನಮ್ಮ ಮುಂದೆ ಇದೆ. ನಿಜಕ್ಕೂ ಕುಂಭಮೇಳದ ಘಟನೆ ಪಾಠವಾಗಬೇಕಿತ್ತು. ಆದರೆ ಅದಕ್ಕೆ ನಮ್ಮ ಅಹಂ ಬಿಡುವುದಿಲ್ಲ. ನಮ್ಮ ತಪ್ಪಿಗೆ ಕ್ಷುಲ್ಲಕ ಕಾರಣಗಳು ಸಿಗುತ್ತವೆ.  ಕುಂಭ ಮೇಳಕ್ಕೋ ಕಾಶಿಗೋ ಅಥವಾ ಶಬರಿಮಲೆ ಹತ್ತುವುದಕ್ಕೋ ಯಾರಾದರೂ ಹೋದರೆ ಅವರು ಮನೆಗೆ ಬರುತ್ತೇನೆ ಎಂದು ಹೇಳುವ ಹಾಗಿಲ್ಲ. ದೂರದ ಹಜ್ ಯಾತ್ರೆಗೆ ಹೋಗುವಾಗಲೂ ಮತ್ತೆ ಬರುವ ಆಶೆ ಇರಕೂಡದು.  ಅದು ಬದುಕಿನ ಚರಮ ಸ್ಥಾನ. ಒಂದು ವೇಳೆ ಸತ್ತರೂ ಸಾಯುಜ್ಯ ಪದವಿ ಸೇರುವ  ತೃಪ್ತಿ ಇರಬಹುದು. ಆದರೆ ಈ ಐಪಿಲ್ ವಿಜಯೋತ್ಸವ....ಸಾಯುಜ್ಯ ಪದವಿಯಾಗಬಹುದೇ? ಹೋಲಿಕೆ ಎಷ್ಟು ಮೂರ್ಖತನ ಅನ್ನಿಸುವುದಿಲ್ಲವೆ? ಪ್ರಾಣ ಭೀತಿ ಇಲ್ಲದೇ ಹೋಗುವವರನ್ನು ನಿಯಂತ್ರಿಸುವುದು ಕಷ್ಟ. ಹಾಗಾಗಿ ಮೆಕ್ಕಾದಲ್ಲೋ ಶಬರಿಮಲೆಯಲ್ಲೋ ಕಾಶಿಯಲ್ಲೋ ಕಾಲ್ತುತುಳಿತವಾದರೆ ಅದರ ಅರ್ಥವೇ ಬೇರೆ. ಅದು ಸರಿ ಎಂಬ ವಾದವಲ್ಲ. ಆದರೆ ತುಲನೆಗೆ ಒಂದಿಷ್ಟು ಚಿಂತನೆ ಅತ್ಯವಶ್ಯ. 

ಮೊನ್ನೆ ಹನ್ನೊಂದು ಜನ ಅಸುನೀಗಿದರು. ಯೋಚಿಸಿ ಇದರಲ್ಲಿ ಎಲ್ಲರೂ ಜನ ಸಾಮಾನ್ಯರು. ಒಂದು ವೇಳೆ ಯಾರದರೂ ಒಬ್ಬ ಶಾಸಕನ ಮಂತ್ರಿಯ ಅಥವ ಒಬ್ಬ ಜನಪ್ರತಿನಿಧಿಯ ಮಕ್ಕಳೋ ಸಂಭಂದಿಕರೋ ಪ್ರಾಣ ಕಳೆದುಕೊಂಡರೆ ಹೇಗಿರುತ್ತಿತ್ತು. ಕಾಲವೇ ಹೀಗೆ, ಇಲ್ಲಿ ಜಲಪ್ರವಾಹದಲ್ಲಿ    ನೆರೆಬಂದರೆ, ನೀರು ನುಗ್ಗಿದರೆ ಅದು ಬಡವರ ಮನೆಯನ್ನಷ್ಟೇ ಗುರಿಯಾಗಿಸಿ ಅಪೋಶನ ತೆಗೆದುಕೊಳ್ಳುತ್ತದೆ. ಎಲ್ಲಿಯೂ ಶಾಸಕರ ಮಂತ್ರಿಯ ಮನೆ ಮುಳಿಗಿದ ನಿದರ್ಶನ ಸಿಗುವುದು ದುರ್ಲಭ. ಪ್ರಕೃತಿಯೂ ಒಂದು ವಿ ಐ ಪಿ ಸ್ಥಾನವನ್ನು ಮೀಸಲಾಗಿರಿಸುವುದು ವಿಚಿತ್ರ. ಮೊನ್ನೆ ವೇದಿಕೆಯಲ್ಲಿ ಸೇರಿದ ಕುಟುಂಬ ವರ್ಗದಲ್ಲಿರುವ ಒಬ್ಬಿಬ್ಬರನ್ನಾದರೂ ಕ್ರೀಡಾಂಗಣದ ಬಳಿಗೆ ಕಳುಹಿಸುವ ಧೈರ್ಯಯಾರಿಗಾದರೂ ಇತ್ತೇ ಎಂಬುದು ವಿಷಯ. ಯಾಕೆಂದರೆ ಇಲ್ಲಿ ಸೌಲಭ್ಯಗಳು ತುಳಿತಗಳು ವರ್ಗವನ್ನು ಅರಸಿಕೊಂಡು ಬರುತ್ತವೆ. 

ದುರಂತ ನಡೆದ ನಂತರ ಅಲ್ಲಿ ರಾಶಿಯಾದ ಚಪ್ಪಲಿಗಳನ್ನು ನೋಡಿ ಅನ್ನಿಸುತ್ತದೆ, ಇಲ್ಲಿ ಬರಿದಾದ ಪಾದಗಳೆಷ್ಟೋ ಬರಿದಾದ ಪ್ರಾಣಗಳೆಷ್ಟೋ....ಆದರೂ ಯಾವ ದುರಂತವೂ ನಮಗೆ ಪಾಠವನ್ನು ಕಲಿಸುವುದಿಲ್ಲ. ಇಲ್ಲವಾದರೆ ...ಆ ಜನಜಂಗುಳಿ ನೋಡಿ ಬುದ್ದಿ ಇದ್ದವರಿಗೆ ಅರ್ಥವಾದೀತು. ಆದರೆ ಇದನ್ನೆ ಕಾಶಿ ಶಬರಿ ಮಲೆ ಎಂದು ತಿಳಿದರೆ ಅದಕ್ಕೆ ಎನು ಹೇಳಬೇಕು?  ಮೊದಲಿಗೆ ನಮ್ಮ ಹಪ ಹಪಿಕೆಯನ್ನು ನಿಯಂತ್ರಿಸಬೇಕು. ಸುಖ ಎಂಬುದು ನಮ್ಮ ನಿಯಂತ್ರಣದ ಮನೋಭಾವದಲ್ಲಿ ಇದೆ ಎಂದು ತಿಳಿಯಬೇಕು. 

ಈಗ ಹಲವು ಸಮರ್ಥನೆಗಳು ಹಲವು ಕಾರಣಗಳು ಸುಲಭದಲ್ಲಿ ಸಿಗಬಹುದು. ಆದರೆ ಹೋದ ಪ್ರಾಣಗಳು ಬಿಟ್ಟು ಹೋದ ಕಥೆಗಳು ಪಾಠವಾಗುತ್ತದೆ. ಆಗಲೂ ಪಶ್ಚಾತ್ತಾಪ ಮೂಡದೇ ಇದ್ದರೆ ನಮ್ಮಲ್ಲಿ ಮಾನವೀಯತೆ ಇದೆ ಎಂದರೆ ಮೂರ್ಖತನವಾಗುತ್ತದೆ. ಈಗ ಸನ್ಮಾನಿಸಿದ ಕ್ರೀಡಾಳುಗಳನ್ನು ಕೇಳಿ. ಮತ್ತೊಮ್ಮೆ ಸನ್ಮಾನಿಸುತ್ತೇವೆ ಬನ್ನಿ ಎಂದರೆ...ಅವರು ಬರಬಹುದೇ? ಅವರ ತಪ್ಪು ಇರದೇ ಇರಬಹುದು. ಆದರೆ ಅವರಿಗೂ ಕಾಡಿ ಬಿಡುತ್ತದೆ..ಎಲ್ಲೋ ಒಂದು ಕಡೆ ಇದಕ್ಕೆ ನಾವೂ ಕಾರಣರಾಗಿಬಿಟ್ಟೆವು. ಈ ಪಾಪ ಪ್ರಜ್ಞೆ ಅವರನ್ನೂ ಕಾಡಬಹುದು. ಹೀಗಾಯಿತಲ್ಲಾ ಎಂದು ಮರುಗಬಹುದು. ಆದರೆ....ಆದರೆ ಮರುಗಲಾರದ ಪಶ್ಚಾತ್ತಾಪ ಪಡದ ಆತ್ಮಗಳು ಇನ್ನೂ ಇವೆ. ಅವುಗಳು ಈತಪ್ಪುಗಳನ್ನು ಸಮರ್ಥಿಸುತ್ತವೆ. ಹೋಲಿಕೆ ಮಾಡುತ್ತವೆ.....ಇಲ್ಲಿ ಒಂದೇ ಒಂದು ಬೇಡಿಕೆ...ಯಾವ ಪರಿಹಾರವೂ ಬೇಡ ಯಾವ ಸನ್ಮಾನವೂ ಬೇಡ...ಆ ಹನ್ನೊಂದು ಮಂದಿಯ ಪ್ರಾಣವನ್ನು ಪುನಃ ತಂದು ಬಿಡಿ. ಅದು ಸಾಧ್ಯವಾಗಬಹುದೇ? ಆ ಪ್ರಾಣ ಮತ್ತೆ ಬರುವುದೇ?