Monday, June 30, 2025

ಅಸ್ಪೃಶ್ಯರು

ಮುಂಜಾನೆ ಬೀದಿಯ ದೂರದಲ್ಲಿ ಸೀಟಿಯ ಧ್ವನಿ ಕೇಳಿಸಿದರೆ ಕಸದ ಗಾಡಿ ತಳ್ಳಿಕೊಂಡು ಆಕೆ ಎಂದಿನಂತೆ  ಬಂದಳು ಎಂದು ತಿಳಿಯಬೇಕು.  ಓಡುತ್ತಿರುವ ಬಸ್ಸಿನಲ್ಲಿ ನಿರ್ವಾಕ ಸೀಟಿ (ವಿಸಿಲ್)  ಊದಿದರೆ ಓಡುತ್ತಿರುವ ಬಸ್ಸು ನಿಂತು ಬಿಡುತ್ತದೆ. ಆದರೆ ಆಕೆಯ ಸೀಟಿ ಕೇಳಿದೊಡನೆ ಬೀದಿಯ ಓಟ ಆರಂಭವಾಗಿ,  ಮನೆಯ ಬಾಗಿಲು ತೆರೆದು ಒಬ್ಬೊಬ್ಬರಾಗಿ ಕಸದ ಬುಟ್ಟಿ ಹಿಡಿದುಕೊಂಡು ಪದ್ದಕ್ಕನ ಬಳಿಗೆ ದೌಡಾಯಿಸುವುದನ್ನು ಕಾಣಬಹುದು.  ಪದ್ದಕ್ಕ ನಗರ ಪಾಲಿಕೆಯ ನೌಕರಿಣಿ. ಎಲ್ಲರೂ ಕಸದ ಗಾಡಿಯಿಂದ ಒಂದಷ್ಟು ದೂರ ನಿಂತು ಕೊಂಡು ಕಸದ ಬುಟ್ಟಿಯಿಂದ ಕಸ ಗಾಡಿಗೆ ಸುರಿದು ಅಲ್ಲಿ ನಿಲ್ಲಲಾಗದೇ ಓಡಿ ಬಂದು ಬಿಡುತ್ತಾರೆ. ಏನೇನೋ ಕಸದ ವಾಸನೆ ಕಳೆಯುವುದೆಂದರೆ ಒಂದು ರೀತಿಯ ಹಿಂಸೆ. ಕೆಲವರಂತೂ ಆ ಒಂದು ಘಳಿಗೆ  ಮೂಗು ಮುಚ್ಚಿಕೊಂಡು, ಮಾಸ್ಕ್ ಹಾಕಿಕೊಂಡು ಕಸ ಸುರಿಯುವುದಕ್ಕೆ ಹೋಗುತ್ತಾರೆ. ನಾವೆಷ್ಟು ಅಸಹ್ಯ ಪಟ್ಟುಕೊಂಡರೂ ಆಕೆ ಏನೂ ಆಗಿಲ್ಲ ಎಂಬಂತೆ ಗಾಡಿಯ ಬಳಿಯಲ್ಲೇ ನಿಂತುಕೊಂಡು ತಂದವರ ಕಸವನ್ನು ಗಾಡಿಗೆ ತುಂಬಿಸಿಕೊಳ್ಳುತ್ತಾಳೆ. ಸುರಿಯುವುದು ಮಾತ್ರವಲ್ಲ ಆ ಕಸವನ್ನು ಜಾಲಾಡಿ ಅದರಲ್ಲಿ ಕಬ್ಬಿಣ ಪ್ಲಾಸ್ಟಿ ಕ್ ಇದೆಯೋ ಎಂದು ಹುಡುಕುತ್ತಾಳೆ. ಎನೂ ಅಲ್ಲದ ಏನೂ ಇಲ್ಲದ ಆಕೆಯೆಂಬ ಶೂನ್ಯ ಸ್ಥಾನ ಕೂಡ ಹಲವು ಸಲ ಬಹಳ ಅವಶ್ಯಕವೆನಿಸುತ್ತದೆ. ಒಂದೆರಡು ದಿನ ಆಕೆ ಬಂದಿಲ್ಲ, ಸೀಟಿಯ ಧ್ವನಿ ಕೇಳಲಿಲ್ಲ ಎಂದರೆ ಮನೆ ಮನೆಯಲ್ಲೂ ದುರ್ಗಂಧ  ನೆಲೆಯಾಗುತ್ತದೆ. ಏನೂ ಇಲ್ಲದ ಆಕೆ ಬಂದಿಲ್ಲವೆಂಬುದು ಮುಖ್ಯವಾಗುತ್ತದೆ. ಯಾವುದೋ ಸದ್ದಿನಲ್ಲಿ ಆಕೆಯ ಸೀಟಿಯ ಸದ್ದನ್ನು ಕಿವಿ ಅರಸುತ್ತದೆ. 

ಆಕೆ ಮಹಾನಗರ ಪಾಲಿಕೆ ಕೆಲಸಕ್ಕೆ ತನ್ನ ಯೌವನದಲ್ಲೇ ಸೇರಿದ್ದಳು. ಬೆಂಗಳೂರಿನ ಹಲವಾರು ಬೀದಿ ಸ್ವಚ್ಚ ಮಾಡಿದ ಚರಿತ್ರೆ ಇವಳದು. ನಮ್ಮ ಬೀದಿಯ ಆ ತುದಿಯಿಂದ ಈ ತುದಿ ತನಕವೂ ಸ್ವಚ್ಛ ಮಾಡುತ್ತಾಳೆ. ಪ್ರತಿಮನೆಯವರೂ ತಮ್ಮ ಮನೆ ಎದುರು ಗುಡಿಸಿ ತೊಳೆದು ರಂಗೋಲಿ ಹಾಕಿದರೂ ಈಕೆ ಒಂದಿಷ್ಟು ಪೊರಕೆ ಮುಟ್ಟಿಸುವುದು ಇದ್ದೇ ಇರುತ್ತದೆ.ಆಕೆಯದು  ಮಾಸಲು ಉಡುಪು. ಮೈ ಮೇಲೆಲ್ಲ ಕಸದ ತುಣುಕುಗಳು. ಹತ್ತಿರ ಬಂದರೆ ಸಾಕು ದುರ್ವಾಸನೆ. ಆಕೆಗದು ವೃತ್ತಿ. ಹಸಿವು ನೀಗುವ ವೃತ್ತಿ. 

ಆಕೆಯ ಜಾತಿ ಯಾವುದೋ ಧರ್ಮ ಯಾವುದೋ ನಮ್ಮ ಬೀದಿಯವರಂತೂ ತಲೆಕೆಡಿಸಿಕೊಂಡಿಲ್ಲ. ಆದರೆ ಆಕೆಯ ಮೈಗಂಟಿದ ಕೊಳೆ, ಮೈಲಿಗೆಯಾದ ಬಟ್ಟೆ ಹತ್ತಿರ ಬಂದರೆ ಕಸದ ದುರ್ವಾಸನೆ ಇಷ್ಟು ಮಾತ್ರ ಆಕೆಯಿಂದ ದೂರವಿರುವಂತೆ ಮಾಡಿದೆ. ಹಳ್ಳಿಯಲ್ಲಾದರೆ ಇದನ್ನೇ ಅಸ್ಪೃಶ್ಯತೆ ಎನ್ನಬಹುದು. ಆದರೆ ಇಲ್ಲಿ ಆಕೆಯ ಜಾತಿ ಧರ್ಮ ಯಾರಿಗೂ ತಿಳಿಯದೇ ಇರುವಾಗ ಆ ಸಮಸ್ಯೆಯಂತು ಅಲ್ಲವೇ ಅಲ್ಲ. ಆದರೂ ಬೀದಿ ಮನೆಯವರೆಲ್ಲರೂ ರಸ್ತೆಯ ಒಂದು ಬದಿ ಆಕೆ ಬಂದರೆ ಇವರೊಂದು ಬದಿಯಲ್ಲಿ ಮೂಗು ಮುಚ್ಚಿ ನಡೆಯುತ್ತಾರೆ. ಆಕೆ ಎದುರು ಬಂದರೆ ಕಣ್ಣು ಮುಚ್ಚಿಕೊಳ್ಳುವವರೂ ಇರಬಹುದು. ದೃಷ್ಟಿ ಅಪವಿತ್ರವಾಗಬಹುದು ಎಂಬ ಭ್ರಮೆ.  ಕೇವಲ ದುರ್ಗಂಧದಿಂದ   ಅಂತರ ಕಾದುಕೊಂಡುಬಿಡುತ್ತಾರೆ.     ಇಷ್ಟೆಲ್ಲಾ ಅದರೂ ಹಲವು  ಮನೆಯಲ್ಲಿ ಆಗುವ ವಿಶೇಷ ದಿನಗಳಲ್ಲಿ ಒಂದಷ್ಟು ವಿಶೇಷ ತಿನಿಸುಗಳನ್ನು ಇವಳಿಗೆ ಮೀಸಲಾಗಿರಿಸಿ, ತೆಗೆದು ಇಟ್ಟು ಮರುದಿನ ಆಕೆಗೆ  ಕೊಟ್ಟು ಬಿಡುತ್ತಾರೆ. ಮನೆಯ ಹೊರಗೆ ಒಂದು ಚಿಕ್ಕ ಡಬ್ಬದಲ್ಲೋ ಚೀಲದಲ್ಲೋ ತುಂಬಿಸಿಡುತ್ತಾರೆ.   ಕೆಲವರು ಆಕೆ ಬರುವ ಮೊದಲೇ ಮನೆಯ ಹೊರಗೆ ಇಟ್ಟಿರುತ್ತಾರೆ.  ಕೆಲವರಂತೂ ಆಕೆ ಬರುವಾಗ ದೂರ ನಿಂತು ಆಕೆಯ ಕೈಗೆ ಎಸೆದು ಬಿಡುತ್ತಾರೆ. ಆಕೆ ಬರುವಾಗ ಮೊದಲ ಮಹಡಿಯಲ್ಲಿ ನಿಂತು ಕೆಳಗೆ ಆಕಾಶದಿಂದ ಧರೆಗೆಸೆದು ಅನುಗ್ರಹಿಸಿದಂತೆ ಮಾಡಿಬಿಡುತ್ತಾರೆ. ಆದರೆ ತನ್ನ ಮಾಲಿನ್ಯವನ್ನು ಚಿಂತಿಸದ ನಿರ್ಮಲ ಕಾಯಕ ಆಕೆಯದು. 

ಸದಾ ಮಲಿನ ಬಟ್ಟೆ ಆದರೂ  ಈಗ ಉತ್ತಮವಾದ ಸಮವಸ್ತ್ರ ಸರಕಾರ ಒದಗಿಸಿದೆ. ಯಾವ ಸಮ ವಸ್ತ್ರವಿದ್ದರೂ ಆಕೆ ಕಸದ ಗಾಡಿ ತಳ್ಳುತ್ತ ಬರಬೇಕಾದರೆ ಆಕೆಯಿಂದ ಅಂತರ ಕಾದುಕೊಳ್ಳುತ್ತಾರೆ. ಹೀಗಿದ್ದ ಆಕೆಯನ್ನು  ಒಂದು ದಿನ  ಮೆಟ್ರೋ ರೈಲಿನಲ್ಲಿ ನೋಡುತ್ತೇನೆ. . ಆಕೆಯೇ ಈಕೆಯಾ ಎಂದು ನನಗೆ ಅಚ್ಚರಿಯಾಗುತ್ತದೆ ಶುಭ್ರವಾದ ಬಟ್ಟೆ. ಅಲಂಕಾರ,  ಆ ನಡಿಗೆ ನೋಡಿದರೆ ಆಕೆಯ ಬಳಿಯಿಂದ ಯಾರೂ ದೂರ ಸರಿಯುವುದಿಲ್ಲ. ತಮ್ಮ ಬಳಿಯಲ್ಲಿ ಜಾಗವಾದ ತಕ್ಷಣ ಆಕೆಯನ್ನು ಕುಳಿತುಕೊಳ್ಳುವಂತೆ  ಹೇಳುತ್ತಾರೆ. ಅದು ಉದಾರತೆಯಲ್ಲ. ಎಲ್ಲಲ್ಲೂ ವರ್ತಿಸುವ ಸಾಮಾನ್ಯ ವರ್ತನೆ. ಆಕೆಯ ಕಸದಗಾಡಿ, ಆಕೆಯ ವೃತ್ತಿ ಯಾವುದೂ ಪರಿಗಣಿಸಲ್ಪಡುವುದಿಲ್ಲ. ಹಾಗಾದರೆ ಉಳಿದ ದಿನಗಳಲ್ಲಿ ಆಕೆ ಅಸ್ಪೃಶ್ಯಳಾಗುವುದು ಯಾಕೆ?  ಸ್ಪರ್ಶ ಅಸ್ಪರ್ಶ  ಎಲ್ಲವೂ ಇಂದ್ರಿಯ ಕ್ರಿಯೆಗಳು. ಮತ್ತು ಮನಸ್ಸಿನ ಭಾವನೆಗಳು.

ಒಂದು ಉತ್ತಮ ಇಂಪಾದ ಶೃತಿ ಬದ್ದವಾದ ಹಾಡು ಕೇಳುವಾಗ ನಡುವೆ ಕರ್ಕಶ ಅಪಸ್ವರ ಬಂದರೆ...ನಮ್ಮ ಕಿವಿಯೂ ಸ್ವೀಕರಿಸುವುದಕ್ಕೆ ಒಪ್ಪಿಕೊಳ್ಳುವುದಿಲ್ಲ. ಮನಸ್ಸೂ ಬಯಸುವುದಿಲ್ಲ. ಅದೇ ರೀತಿ ಕರ್ಕಶ ಸದ್ದುಗಳೇ ತುಂಬಿರುವಲ್ಲಿ ಒಂದು ಇಂಪಾದ ಹಾಡು ಕೇಳಿದರೂ ಅದನ್ನು ಸ್ವೀಕರಿಸುವುದಕ್ಕೆ ಮನಸ್ಸು ಒಪ್ಪಿಕೊಳ್ಳುವುದಿಲ್ಲ. ಸ್ಪರ್ಶ ಅಸ್ಪರ್ಶದ ವೆತ್ಯಾಸ ಇಷ್ಟೇ. ಈ ಅಸ್ಪೃಶ್ಯತೆ ಹುಟ್ಟಿಕೊಂಡು ಆನಂತರ ಅದು ಅನರ್ಥದ ಪರಂಪರೆ ಸೃಷ್ಟಿಸಿ ಮೂಲ ಭಾವನೆಯನ್ನೇ ಬದಲಿಸಿಬಿಟ್ಟಿತೇ ಅಂತ ಅನ್ನಿಸುತ್ತದೆ. ಪಾವಿತ್ರ್ಯ ಮತ್ತು ಅಸ್ಪೃಶ್ಯ ಆಧ್ಯಾತ್ಮಿಕಕ್ಕೆ ಸಂಭಂಧಿಸಿ ಅರ್ಥಮಾಡಿಕೊಳ್ಳುವುದಕ್ಕೆಅಸಮರ್ಥರಾದದ್ದು ಮಾತ್ರವಲ್ಲ ಅದರ ಅನುಷ್ಠಾನವನ್ನು ವಿಪರೀತವಾಗಿ  ಬಳಸಿಕೊಂಡು ಒಂದು ಪಿಡುಗಿಗೆ ಕಾರಣರಾಗಿ ಹೋದದ್ದು ಒಂದು ದುರಂತ. 

ಪಾವಿತ್ರ್ಯತೆ ಎಂಬುದು ಮನುಷ್ಯ ಜನ್ಮಕ್ಕೆ ಹೊಂದಿಕೊಂಡು ಬಳಕೆಯಾಗಬೇಕಾದದ್ದು ಧರ್ಮದ ನೆರಳಲ್ಲಿ ಅದು ವಿರೂಪಕ್ಕೆ ಕಾರಣವಾಗಿಬಿಟ್ಟಿತು. ಕಸ ಹೆಕ್ಕುವವಳು ಉಳಿದವರಂತೆ ಸ್ವಚ್ಛ ಸ್ಥಿತಿಯಲ್ಲಿ ಬಂದಾಗ ಎಲ್ಲರೂ ಸೇರಿಸಿಕೊಳ್ಳುವಂತೆ ಪಾವಿತ್ರ್ಯ ಎಂಬುದು ಅನುಸರಿಸುವ ಪ್ರವೃತ್ತಿಯಲ್ಲಿದೆ. ಪರಿಶುದ್ದತೆಯ ಭಾವ ಎಂಬುದು ಅಸ್ಪೃಶ್ಯತೆಗಿಂತಲೂ ಪರಿಶುದ್ದನಾಗುವುದಕ್ಕೆ ಹೆಚ್ಚು ಒತ್ತುಕೊಡುತ್ತದೆ. ತಾನು ಅಪವಿತ್ರ ಎಂದು ತಿಳಿದುಕೊಂಡರೆ ಅಲ್ಲಿ ಪಾವಿತ್ರ್ಯದ ಅರಿವು ಉಂಟಾಗುತ್ತದೆ. ಜೀವ ಭಾವತೊರೆದು ಪರಮಾತ್ಮನಲ್ಲಿ ಐಕ್ಯವಾಗುವುದಕ್ಕೆ ಪಾವಿತ್ರ್ಯತೆ ಅತ್ಯಂತ ಅವಶ್ಯಕ. ಪರಮಾತ್ಮನ ಎದುರು ಎಲ್ಲರೂ ಅಪವಿತ್ರರು ಮತ್ತು ಅಸ್ಪೃಶ್ಯರು. ನಾಮ ರೂಪ ಕ್ರಿಯೆ ಇವುಗಳು ಮನುಷ್ಯನ ಅಸಮಾನತೆಯ ಮೂರು ವೆತ್ಯಾಸಗಳು. ಹೆಸರಿನಿಂದ ರೂಪದಿಂದ ಮತ್ತು ಮಾಡುವ ಕ್ರಿಯೆಯಿಂದ ಮಾತ್ರ ಮನುಷ್ಯ ಪ್ರತ್ಯೇಕಿಸಲ್ಪಡುತ್ತಾನೆ. ಹೆಸರು ಹಲವು ಇರಬಹುದು. ರೂಪ  ಪ್ರತಿಯೊಬ್ಬರದೂ ವೆತ್ಯಾಸವಿರಬಹುದು. ಇನ್ನು ವೃತ್ತಿಯೂ ಬೇರೆ ಬೇರೆ ಇರಬಹುದು. ಇದಲ್ಲದೇ ಮನುಷ್ಯರಲ್ಲಿ ಬೇರೆ ಯಾವ ಬಗೆಯ ವೆತ್ಯಾಸ ಅಸಮಾನತೆ ಇರುವುದಕ್ಕೆ ಸಾಧ್ಯವಿಲ್ಲ.  ಆದರೆ ಇಂದು ಪ್ರತ್ಯೇಕಿಸುವುದಕ್ಕೆ ಹಲವು ವಿಷಯಗಳು ಅರ್ಹತೆಗಳು ಇರುತ್ತವೆ. ಈ ಅಸಮಾನತೆಯ ಅಜ್ಞಾನ ಹಲವನ್ನು ಅಪಾರ್ಥಕ್ಕೆ ಎಡೆಮಾಡಿಕೊಟ್ಟಿದೆ. 

ಬ್ರಹ್ಮಚರ್ಯ ಮತ್ತೊಂದು ಅಹಿಂಸ ಈ ಎರಡು ವಿಷಯಗಳು ಸಾರ್ವತ್ರಿಕ ಆಚರಣೆಗೆ ಸಂಬಂಧಿಸಿ ಅಷ್ಟಾಂಗ ಯೋಗದ ನಿಯಮಗಳಲ್ಲಿ ವಿಧಿಸಿದೆ. ಬ್ರಹ್ಮಚರ್ಯ ಎಂದರೆ ಮದುವೆಯಾಗದೇ ಇರುವುದು  ಎಂದು ತಿಳಿದುಕೊಂಡಿದ್ದಾರೆ. ಆದರೆ ಬ್ರಹ್ಮ ಚರ್ಯ...ಎಂದರೆ ಬ್ರಹ್ಮನನ್ನು ಅಂದರೆ ಪರಬ್ರಹ್ಮನ ಅಸ್ತಿತ್ವವನ್ನು ತಿಳಿದುಕೊಳ್ಳುವುದು.  ಪರಬ್ರಹ್ಮದ ಅರಿವಿನಲ್ಲೇ ಸಂಚರಿಸುತ್ತಿರುವುದು. ಆದನ್ನು ತಿಳಿದುಕೊಂಡವನೇ ಬ್ರಹ್ಮ ಚರ್ಯದ ಹಾದಿಯಲಿ ನಡೆದು ಬ್ರಹ್ಮಚಾರಿ ಎಂದಾಗುತ್ತಾನೆ. ಆದರೆ ವಾಸ್ತವದಲ್ಲಿ ಅದರ ಅರ್ಥ ಬೇರೆಯೇ ಆಗಿ ಬಳಸಿಯಾಗಿದೆ. ಬ್ರಹ್ಮ ಚರ್ಯ ಎಂದರೆ ಅವಿವಾಹಿತ.   ಇನ್ನು ಅಹಿಂಸೆ. ಕೇವಲ ಸಸ್ಯಾಹಾರ ಎಂದರೆ ಅಹಿಂಸೆ ಎಂಬ ಭಾವನೆ ಇದೆ. ಆದರೆ ವಾಸ್ತವದಲ್ಲಿ ಒಬ್ಬ ಮಾಂಸಾಹಾರಿಯೂ ಅಂಹಿಸಾವಾದಿಯಾಗಬಲ್ಲ. ಅಹಿಂಸೆ ಎಂಬುದು ಮನಸ್ಸಿನ ಭಾವನೆಯಲ್ಲಿದೆ. ಹೊರತು ಆಹಾರದಲ್ಲಿ ಇಲ್ಲ. ಇಲ್ಲಿ ಮನಸ್ಸಿನ ಪ್ರವೃತ್ತಿಯೇ ಮುಖ್ಯವಾಗುತ್ತದೆ. ಅಹಿಂಸೆ ಅದು ಕೇವಲ ದೈಹಿಕವಾಗಿ ಮಾತ್ರವಲ್ಲ. ಮಾನಸಿಕವಾಗಿ ಹಿಂಸಿಸುವುದು ಹಿಂಸೆಯಾಗುತ್ತದೆ.  ನಮ್ಮಲ್ಲಿ ಸನಾತನದಿಂದ ಬಂದ ಹಲವು ವಿಚಾರಗಳೂ ಹೀಗೆ ಅವುಗಳನ್ನು ಅರ್ಥವಿಸುವುದರಲ್ಲಿ ಮನುಷ್ಯ ಎಡವಿದ್ದೆ ಹೆಚ್ಚು. ಹಲವು ಅಧ್ಯಾತ್ಮ ತತ್ವಗಳು ಇಂದು ಇದೇ ಬಗೆಯಲ್ಲಿ ನಂಬಿಕೆಯನ್ನು ಕಳೆದುಕೊಂಡಿವೆ. ಕಳೆದು ಕೊಂಡದ್ದು ಅಲ್ಲ ಅಜ್ಞಾನದಿಂದ ಅದನ್ನು ಕಳೆಯಲಾಗಿದೆ. ಯಾಕೆಂದರೆ ಅರ್ಥವಿಸುವುದಕ್ಕೆ ಆಧ್ಯಯನ ಬೇಕು. ಅದಕ್ಕಿಂತಲೂ ಬದ್ದತೆ ಬೇಕು. ಸನಾತನ ಧರ್ಮದ ಆಳ ಅಗಲವನ್ನು ಅರಿಯುವುದಕ್ಕೆ ಕೇವಲ ಒಂದು ಜನ್ಮದಿಂದ ಸಾಧ್ಯವಾಗುವುದಿಲ್ಲ. ಯಾವುದನ್ನು ನಮಗೆ ಅರ್ಥಮಾಡಿಕೊಳ್ಳುವುದಕ್ಕೆ ಅಸಾಧ್ಯವೋ ಅದರ ಬಗ್ಗೆ ಔದಾಸಿನ್ಯವನ್ನು ತಾಳುವುದೇ ಹೆಚ್ಚು. ಅಜ್ಞಾನ ನಮ್ಮ ಅಸಮರ್ಥತೆಯನ್ನು ಮುಚ್ಚಿಹಾಕುತ್ತದೆ. 

ಅಸ್ಪೃಶ್ಯತೆ ದೈಹಿಕವಾಗಿ ಮಾತ್ರವಲ್ಲ. ಮಾನಸಿಕವಾಗಿ. ಎಲ್ಲ ಸ್ಪರ್ಶದಿಂದಲೂ ದೂರವಾಗಿರುವುದು ಎಂದರೆ ಅದು ಪರಮ ಪವಿತ್ರದ ಹಾದಿ. ಅದು ಸುಲಭದಲ್ಲಿ ಸಾಧ್ಯವಾಗುವಂತಹುದಲ್ಲ. ಉಲಿದೆಲ್ಲವನ್ನು ಮನಸ್ಸಿಗೆ ಅಂಟಿಸಿಕೊಂಡು ಕೇವಲ ದೇಹದಿಂದ ಅಸ್ಪ್ರುಶ್ಯನಾಗಿದ್ದರೆ ಪವಿತ್ರನಾದೆ ಎಂಬುದಕ್ಕೆ ಅರ್ಥವಿಲ್ಲ. ಪಾಪ ಅಥವ ದುರಿತ  ವಿದ್ಯುತ್ ತಂತಿಯಲ್ಲಿ ಹರಿವ ವಿದ್ಯುತ್ ನಂತೆ ಅದು ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಸ್ಪರ್ಶವಾದರೆ ಅದು ಅನುಭವಕ್ಕೆ ಬರುತ್ತದೆ. ಪವಿತ್ರತೆ ಇರುವುದು ಈ ಪಾಪಗಳಿಂದ ದೂರವಾಗುವುದರಲ್ಲಿದೆ. 

No comments:

Post a Comment