Saturday, June 21, 2025

ಯೋಗದಿನ ಒಂದು ಪ್ರದರ್ಶನ




    ಯೋಗ ಅಂದರೆ ಒಂದನ್ನು ಒಂದು ಬೆಸೆಯುವುದು ಅಂದರೆ ಸಂಯೋಗ. ಆದರೆ ಯೋಗ ದಿನಾಚರಣೆಯ ಕಾರ್ಯಕ್ರಮಗಳನ್ನು ನೋಡುವಾಗ ಈ ಭಾವನೆ ಹುಟ್ಟುವುದಿಲ್ಲ.   ನದಿ ಹರಿದು ಸಮುದ್ರವನ್ನು ಸೇರುವಂತೆ ಅದು ನದಿಯ ಯೋಗ. ಮನುಷ್ಯ ಪ್ರಾಣಿ ಸಂಕುಲಗಳೂ ಜೀವಾತ್ಮ ಪರಮಾತ್ಮನಲ್ಲಿ ಸೇರುವುದೇ ಯೋಗ. ಈ ಅರ್ಥದಲ್ಲಿ ಯೋಗದಿನವನ್ನು ಸಂಭ್ರಮಿಸಿದರೆ ಅದು ನಿಜವಾದ ಯೋಗ ದಿನದ ಯಶಸ್ಸು ಎನ್ನಬೇಕು. ಆದರೆ ಇದನ್ನು ಈ ಬಗೆಯಲ್ಲಿ ಅರ್ಥೈಸುವುದಕ್ಕೆ ಮನಸ್ಸು ಕಠಿಣವಾಗಿರಬೇಕು. ಬದುಕು ಅನುಭವದಿಂದ ಪಕ್ವವಾಗಬೇಕು. ಇವೆರಡೂ ಇಲ್ಲದಿರುವಾಗ ಯೋಗದ ಬಗ್ತೆ ತಿಳಿಯುವ ಅದರ ಅಂತರಾಳಕ್ಕೆ ಇಳಿಯುವ ಆಸಕ್ತಿ ಇರಬೇಕು. ಯೋಗ ದಿನಾಚರಣೆಯಿಂದ ಒಂದಷ್ಟು ಪ್ರೇರಣೆಯಾದರೂ ಹುಟ್ಟಿಕೊಳ್ಳಬಹುದು ಎಂಬ ಆಶಾಭಾವ ಇದ್ದರೆ ಈಗಿನ ಆಚರಣೆಗಳನ್ನು , ಆ ಆಡಂಬರವನ್ನು ನೋಡಿದರೆ ಆಶಾಭಾವ ಉಳಿಯುವುದಿಲ್ಲ.  

ನಮ್ಮಲ್ಲಿ ಒಂದು ವಿಚಿತ್ರವಾದ ಸ್ವಭಾವ ಅಥವಾ ವಾಡಿಕೆಯೋ ಗೊತ್ತಿಲ್ಲ. ಯಾವುದೇ ದಿನಾಚರಣೆಯಾದರೂ ಅದಕ್ಕೊಂದು ಆಡಂಬರ ಇದ್ದೇ ಇರುತ್ತದೆ. ಅದರ ಹೆಸರಲ್ಲಿ ಒಂದಷ್ಟು ಅರ್ಥವಿಲ್ಲದ ಆಚರಣೆಗಳು ಕಾಣಬಹುದು. ಯೋಗದಿನವು ಅದೇ ಹಾದಿಯಲ್ಲಿ ಸಾಗುವುದು ದುರ್ದೈವ. 

ಪ್ರತಿವರ್ಷವೂ ಯೋಗ ದಿನ ಬರುತ್ತದೆ. ಇನ್ನೇನು ಎಲ್ಲವೂ ಬದಲಾಗುತ್ತದೆ ಎಂಬ ನಿರೀಕ್ಷೆ ಇಡುವುದು ಸರಿಯಲ್ಲ. ಆದರೆ ಯೋಗದ ಬಗ್ಗೆ ತಿಳಿಯುವುದಕ್ಕೆ ಈ ನಿರೀಕ್ಷೆ ಸಹಕಾರಿಯಾಗಬೇಕು. ಇಂದು ಬಹಳ ಸಡಗರದಿಂದ ಯೋಗ ದಿನ ಆಚರಿಸಿದ ವರದಿಯನ್ನು ಕಾಣುತ್ತಿದ್ದೇವೆ. ಅದನ್ನು ನೋಡುವಾಗ ಈ ಯೋಗ ಸಂಯೋಗದ ಬಗ್ಗೆ ಯಾರೂ ಗಂಭೀರವಾಗಿಲ್ಲ ಅಂತ ಅನ್ನಿಸುತ್ತದೆ. ಕೆಲವು ಯೋಗ ದಿನಾಚರಣೆಗಳು ಅರ್ಥವತ್ತಾಗಿ ನಡೆದರೂ ಇನ್ನು ಕೆಲವು ಯೋಗ ಅಂದರೆ ಇದುವಾ ಅಂತ ಅನ್ನಿಸುವಷ್ಟರ ಮಟ್ಟಿಗೆ ಅರ್ಥಹೀನವಾಗಿ ಕಂಡಿತ್ತು. ನಾವು ಯಾವ ದಿನವನ್ನಾದರೂ ಸಂಭ್ರಮಿಸಿ ಆಚರಿಸುತ್ತೇವೆ. ಆದರೆ ಅದರ ಮೂಲ ಉದ್ದೇಶದ ಗಂಭೀರವಾಗಿ ಯೋಚಿಸುವುದಿಲ್ಲ. ಹಾಡುವುದು ಕುಣಿಯುವುದು ತಿನ್ನುವುದು ಈ ಸಂಭ್ರಮದಲ್ಲಿ ಅತೀ ಮುಖ್ಯವಾಗುತ್ತದೆ. ಹಾಗೆ ನೋಡಿದರೆ ಯಾವುದರ ಮೂಲಕವೂ ಸಂಯೋಗವನ್ನು ಸಾಧಿಸಬಹುದೇನೋ ಸತ್ಯ. ಆದರೆ ಅದು ನಿಜವಾದ ಯೋಗ ಅನ್ನಿಸಬಹುದೇ?  ಎಲ್ಲ ಸಂಭ್ರಮದಂತೆ ಇಲ್ಲೂ ಹಾಡುವುದು ತಿನ್ನುವುದು ಕುಣಿಯುವುದು  ಪ್ರಧಾನವಾದರೆ ಅದು  ಯೋಗ ಹೇಗಾಗುತ್ತದೆ?

ಯೋಗ ಅಂದರೆ  ಚಿತ್ತವೃತ್ತಿಯಿಂದ ದೂರುವವಿರುವುದು. ಚಿತ್ತವೃತ್ತಿ ಎಂದರೆ ಮನಸ್ಸು ಇಂದ್ರಿಯಗಳ ಮೂಲಕ ಗ್ರಹಿಸಿ ಅದಕ್ಕೆ ತಕ್ಕಂತೆ ವರ್ತಿಸುವುದು. ಇಷ್ಟೆಲ್ಲ ಆಳಕ್ಕೆ ಯೋಚಿಸುವುದು ಬಹಳ ಕಷ್ಟವಾಗುತ್ತದೆ. ಆದರೆ ಯೋಗ ಎಂಬುದನ್ನು ತಿಳಿಯುವ ಉದ್ದೇಶವಾದರೂ ನಮ್ಮ ಕೃತಿಯಲ್ಲಿರಬೇಕು. ಯೋಗ ದಿನಾಚರಣೆ ಸಾರ್ಥಕವಾಗಬೇಕಾದರೆ ಇದು ಅತೀ ಅವಶ್ಯ. ಇಲ್ಲವಾದರೆ ಆಸನ ಪ್ರಾಣಾಯಾಮ ಇಷ್ಟನ್ನೇ ಯೋಗ ಅಂತ ತಿಳಿದು ಸನಾತನ ಪದ್ದತಿಗೆ ಮತ್ತೊಂದು ಅರ್ಥವನ್ನು ಕಲ್ಪಿಸುವ ಸಂಭವವಿದೆ. ಯೋಗವನ್ನು ಕೇವಲ ಆಸನ ಪ್ರಾಣಾಯಾಮಕ್ಕೆ ಸೀಮಿತಗೊಳ್ಳಬಾರದು. ಸನಾತನ ಧರ್ಮಾಚರಣೆಗಳು, ಮನುವಾದ ಇವುಗಳೆಲ್ಲ ಅಪಾರ್ಥವನ್ನು ಹುಟ್ಟು ಹಾಕಿದಂತೆ ಯೋಗಾಭ್ಯಾಸವೂ ಅದೇ ಸಾಲಿಗೆ ಸೇರಿಬಿಡುತ್ತದೆ. ಯೋಗಾಭ್ಯಾಸದಲ್ಲಿ ಆಸನಗಳಿಗೇ ಹೆಚ್ಚು ಪ್ರಾಧಾನ್ಯ ಕೊಟ್ಟುಉಳಿದವುಗಳನ್ನೆಲ್ಲ ನಿರ್ಲಕ್ಷಿಸಲಾಗುತ್ತದೆ. ಒಂದು ರೀತಿಯಲ್ಲಿ ಯೋಗಾಭ್ಯಾಸ ಹಾದಿ ತಪ್ಪುವ ಎಲ್ಲ ಸಂಭವಗಳು ಕಣ್ಣ ಮುಂದಿದೆ. ಯಾರೋ ಹೇಳಿದ್ದಾರೆ ಅಂತ ಆಚರಿಸಿ ವರ್ಷದ  ಒಂದು ದಿನಕ್ಕೆ  ಸೀಮಿತಗೊಳಿಸಿ ನಂತರ ಅದಕ್ಕೆ ಸಂಭಂಧವಿಲ್ಲದಂತೆ ಜೀವಿಸುವುದು ಯೋಗ ಜೀವನವನ್ನು ಅವಮಾನಿಸಿದಂತೆ. ಯೋಗಾಭ್ಯಾಸದಲ್ಲಿ ಧ್ಯಾನ ಶವಾಸನ ಇವುಗಳಿಗೆಲ್ಲ ಮಹತ್ವವೇ ಇಲ್ಲದಂತೆ ಮಾಡುವುದನ್ನು ಕಾಣಬಹುದು. ಇವುಗಳೆಲ್ಲ ಮಾಡುವುದಕ್ಕೆ ಬದ್ಧತೆ ಬೇಕು. 

ಯೋಗಾಭ್ಯಾಸದಲ್ಲಿ ಅದರ ಕೃತಿಗಿಂತ ಅದರ ಮೂಲಭೂತವಾದ ನಿಯಮಗಳನ್ನು ಗಮನಿಸಬೇಕು. ಯೋಗ ದಿನ ಕೇವಲ ಪ್ರದರ್ಶನಕ್ಕೆ ಸೀಮಿತವಾಗಿದೆ. ವರ್ಷಕ್ಕೆ ಒಂದು ಸಲ ಉತ್ಸವದಂತೆ ಆಚರಿಸಿದರೆ ಮುಗಿಯಿತು. ಆನಂತರ ಎಲ್ಲವನ್ನೂ ಮರೆತುಬಿಡುತ್ತೇವೆ. ಮತ್ತೆ ಮುಂದಿನ ವರ್ಷ...ಎಲ್ಲೋ ಮೂಲೆ ಸೇರಿದ ವಸ್ತುಗಳನ್ನು ಕೊಡವಿ ಮತ್ತೆ  ಪುನಃ ಢಂಬಾಚಾರಕ್ಕೆ ತೊಡಗುತ್ತೇವೆ. ಬಿಳಿ ಅಂಗಿ ಏಲ್ಲೋ ಬಿದ್ದಿರುತ್ತದೆ ಅದನ್ನು ಕೊಡವಿ ಮತ್ತೆ ಅಣಿಯಾಗುತ್ತೇವೆ. ಎಲ್ಲದರಂತೆ ಯೋಗವೂ ಅರ್ಥವನ್ನು ಕಳೆಯುವುದನ್ನು ಕಾಣಬಹುದು. ನಮಗೆ ಯೋಗದ ಬಗ್ಗೆ ಆಸಕ್ತಿ ಇಲ್ಲದಿದ್ದರೂ ಕೊನೆ ಪಕ್ಷ ಇದನ್ನು ಆಚರಿಸುವುದಕ್ಕೆ ಕಾರಣವನ್ನು ತಿಳಿಯಬೇಕು. ಮತ್ತು ಅದು ನಮ್ಮ ಪ್ರವೃತ್ತಿಯಿಂದ ಪ್ರಯೋಜನ ಸಿಗುವಂತಾಗಬೇಕು. 

ಯೋಗ ದಿನಾಚರಣೆ ಕೇವಲ ಪ್ರದರ್ಶನಕ್ಕೆ ಸೀಮಿತವಾಗಿದೆ. 

 





No comments:

Post a Comment