ಈ ಲೇಖನ ಬರೆಯುವುದಿಲ್ಲ ಎಂದು ಹಲವು ಸಲ ಅಂದುಕೊಂಡರೂ, ಕೆಲವು ಅನಿಸಿಕೆಗಳನ್ನು ಹೇಳದೇ ಇರುವುದಕ್ಕೆ ಸಾಧ್ಯವಾಗುವುದಿಲ್ಲ.
ನನ್ನ ಪರಿಚಯಸ್ಥ ಮಹಿಳೆಯೊಬ್ಬರು ಇದ್ದಾರೆ. ಬೆಂಗಳೂರಿಗೆ ಬಂದು ಐದಾರು ವರ್ಷ ಕಳೆದಿರಬೇಕು. ವೃತ್ತಿಯಿಂದ ಅವರು ಬೆಂಗಳೂರಿಗರೇ ಆದರೂ ಅವರು ಮೂಲತಃ ಕೇರಳದ ಕಾಸರಗೋಡಿನವರು. ಅವರ ಎಲ್ಲಾ ವೈಯಕ್ತಿಕ ದಾಖಲೆಗಳೂ ಅಲ್ಲಿನ ವಿಳಾಸದಲ್ಲಿದೆ. ಬದಲಿಸಬಹುದಿತ್ತು. ಆದರೆ ಅವರೇ ಹೇಳುವಂತೆ ಎಲ್ಲಿಯಾದರೇನೂ ಭೂಮಿ ಮೇಲೆ ಉಸಿರಾಡುತ್ತಿದ್ದೇನಲ್ಲ, ಮಾತ್ರವಲ್ಲ ಕೇರಳವಾದರೇನು ಕರ್ನಾಟಕವಾದರೇನು ನಾನು ಭಾರತೀಯಳು ಅಷ್ಟು ಸಾಕು. ಈ ಅನಿಸಿಕೆಯನ್ನು ಪೂರ್ಣವಾಗಿ ಸರಿ ಎನ್ನುವುದಕ್ಕೆ ಸಾಧ್ಯವಿಲ್ಲದೇ ಇದ್ದರೂ ಅದರಲ್ಲಿ ಸತ್ಯಾಂಶ ಇಲ್ಲದೇ ಇರುವುದಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ.
ಅವರ ಆಧಾರ್ ಚುನಾವಣಾ ಗುರುತು ಎಲ್ಲವೂ ಕೇರಳದಲ್ಲಿರುವುದರಿಂದ ಅವರಿಗೆ ಯಾವುದೇ ಉಚಿತ ಸೌಲಭ್ಯ ಇರುವುದಿಲ್ಲ. ಅವರಂತೆ ಕರ್ನಾಟಕದಲ್ಲಿ ಹಲವರಿದ್ದಾರೆ. ಈ ಒಂದು ಕಾರಣಕ್ಕೆ ತೀರ ಅನಿವಾರ್ಯ ಎನಿಸುವ ಸೌಲಭ್ಯ ಸಿಗದೇ ಇರುವವರು... ಈ ನಿಯಮ ವೆತ್ಯಾಸ ತಾರತಮ್ಯ ಅದೇನು ಈಗಿನ ಸಮಸ್ಯೆಯಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ಅದು ಒಂದಲ್ಲ ಒಂದು ವಿಧದಲ್ಲಿ ನಮ್ಮ ನಡುವೆ ಇದೆ. ಅದು ಸರಿಯೋ ತಪ್ಪೋ ಬೇರೆ ವಿಚಾರ. ಆದರೆ ಒಂದು ಸೌಲಭ್ಯ ಅದು ಮೀಸಲಾತಿಯಾಗಲಿ ಇನ್ನಿತರವೇ ಆಗಲಿ ಧರ್ಮ ಭಾಷೆಯನ್ನು ಹೊಂದಿಕೊಂಡು ನಮಗೆ ಲಭ್ಯವಾಗುವುದಾದರೆ ಅದನ್ನು ಉಪಯೋಗಿಸುವಲ್ಲೂ ಒಂದು ಕೀಳರಿಮೆ ಹಲವರಿಗೆ ಬಾಧಿಸುತ್ತದೆ. ಅದಕ್ಕೆ ಕಾರಣ ಅವ್ಯಕ್ತವಾದ ಒಂದು ಆತ್ಮ ಗೌರವ. ಸೌಲಭ್ಯವನ್ನು ಅನುಭವಿಸುವಲ್ಲಿ...ಈ ಅರ್ಹತೆಯೂ ಇಲ್ಲದವರು ಇದ್ದಾರಲ್ಲಾ ಎಂದು ತಿಳಿವಾಗ...ಹೊಟ್ಟೆ ತುಂಬಿದವನಿಗೆ ಆಹಾರ ತಂದಿಟ್ಟರೆ ಆಗುವ ಸಂಕಟ ..ಛೇ ಹೊರಗೆ ಹಸಿವಿನಿಂದ ಬಳಲುವವರ ಮುಖ ಸ್ಮರಣೆಗೆ ಬರುತ್ತಿದ್ದರೆ ಅದೇ ಆತ್ಮ ಗೌರವ. ನನಗೆಷ್ಟು ಅರ್ಹತೆ ಇದೆಯೋ ಅದು ಬೇರೆ ಆದರೆ ಈ ಅರ್ಹತೆ ಇಲ್ಲದೇ ಸೌಲಭ್ಯದ ಅನಿವಾರ್ಯತೆ ಇರುವವರು ಹಲವರಿದ್ದಾರೆ, ಅವರ ಹಸಿವಿನ ಮೇಲೆ ನನ್ನ ಅರ್ಹತೆ ಕೇಕೆ ಹಾಕುತ್ತದೆ ಎಂದು ಅನ್ನಿಸಿಬಿಡುತ್ತದೆ. ಹೊರಗೆ ದುಡಿಯುವುದಕ್ಕೆ ಹೋದ ಅಮ್ಮ ಮನೆಯಲ್ಲಿದ್ದ ಮಕ್ಕಳ ಹಸಿವನ್ನು ನೆನೆದು ಹೋದಕಡೆ ಆಹಾರ ಸಿಕ್ಕಿದರೂ ಹಸಿವಿನಿಂದ ಇರುವಂತೆ ಆ ಭಾವನೆ ಅನುಭವದಲ್ಲಿ ಮಾತ್ರ ಅರ್ಥವಾಗಬಲ್ಲುದು.
ಹೀಗೆ ಒಂದು ಸೌಲಭ್ಯ ಅವಕಾಶ ಒಂದು ಭಾಷೆಗೆ ರಾಜ್ಯಕ್ಕೆ ಸೀಮಿತವಾಗಿ ಮೀಸಲಾಗುವಾಗ, ಮೊನ್ನೆ ಮೊನ್ನೆ ನಡೆದ, ದೊಡ್ಡ ದುರಂತಕ್ಕೆ ಕಾರಣವಾದ ವಿಜಯೋತ್ಸವದ ವಿಡಂಬನೆ ಕಣ್ಣೆದುರು ಬರುತ್ತದೆ. ಯೋಚಿಸಿ...ಸರಕಾರ ಕರೆದು ಸನ್ಮಾನಿಸಿದವರಲ್ಲಿ ಕರ್ನಾಟಕದ ಆಧಾರ್ ಕಾರ್ಡು ಚುನಾವಣಾ ಚೀಟಿ ಇದ್ದವರೆಷ್ಟು ಮಂದಿ ಇದ್ದಾರೆ? ಕರ್ನಾಟಕ ಸರಕಾರಕ್ಕೆ ಮತ ಚಲಾಯಿಸುವವರು ಎಷ್ಟಿದ್ದಾರೆ? ಎಲ್ಲದರಲ್ಲೂ ಭಾಷೆ ಧರ್ಮವನ್ನು ನೋಡುವ ನಾವು ನಮಗೆ ಬೇಕಾದ ಕಡೆಗೆ ಇದು ಗಮನಾರ್ಹವೆನಿಸುವುದಿಲ್ಲ. ಆದರೆ ಸಾವು ಈ ಮೀಸಲಾತಿಯನ್ನು ಹುಡುಕಿಕೊಂಡು ಬರುವುದಿಲ್ಲ. ಹನ್ನೊಂದು ಮಂದಿ ಪ್ರಾಣ ಕಳೆದುಕೊಂಡ ನಂತರ ಎಡವಿದ್ದು ಎಲ್ಲಿ ಎಂದು ಅರಿವಾಗದೇ ಇದ್ದರೆ ಈ ದುರಂತ ಪಾಠವಾಗುವುದಿಲ್ಲ.
ಇಲ್ಲಿ ಅಪರಾಧಗಳು ತಪ್ಪುಗಳು ಹೋಲಿಕೆಯಲ್ಲಿ ತುಲನೆ ಮಾಡಿ ಸಮರ್ಥಿಸುವ ಹೀನ ಮನಸ್ಥಿತಿ ಇರುತ್ತದೆ. ನಮ್ಮ ತಪ್ಪನ್ನು ಒಪ್ಪಿಕೊಳ್ಳುವುದಕ್ಕೆ ಇನ್ನೊಬ್ಬರ ತಪ್ಪು ಗುರಾಣಿಯಾಗುತ್ತದೆ. ಯಾರೋ ದಾರಿಯ ಕಲ್ಲನ್ನು ನೋಡದೇ ಎಡವಿ ಬೀಳುತ್ತಾರೆ. ಆವರು ಬಿದ್ದಕಾರಣ ನಾವೂ ಉಳಿದವರೂ ಬೀಳಬಹುದು ಎನ್ನುವ ಸಮರ್ಥನೆ ಇದೆಯಲ್ಲ ಅದು ಮೂರ್ಖತನ. ಹನ್ನೊಂದು ಜನರು...ಕಾಲ ಕೆಳಗೆ ಮರಣವನ್ನು ಕಂಡರು. ಆಗ ಕುಂಭಮೇಳದ ನೂಕು ನುಗ್ಗಲಿನಲ್ಲಿ ಸತ್ತವರ ತುಲನೆಯನ್ನು ಮಾಡಿ ಸಮರ್ಥಿಸುವುದಕ್ಕೆ ತೊಡಗುತ್ತಾರೆ. ಕುಂಭಮೇಳದಲ್ಲಿ ಹಾಗಾಗಬಾರದಿತ್ತು. ಅದೂ ಅಜಾಗರೂಕತೆ. ಇಲ್ಲಿ ಒಂದನ್ನೊಂದು ಹೋಲಿಸಿದರೆ ಅದಕ್ಕೆ ಅರ್ಥವಿರುವುದಿಲ್ಲ. ಕುಂಭ ಮೇಳದಲ್ಲಿ ಆರಂಭದ ದಿನದಲ್ಲಿ ಆಗಿ ಹೋದ ದುರಂತ. ಆದರೆ ಆನಂತರ ಅದನ್ನು ಯಶಸ್ವಿಯಾಗಿ ಕೋಟಿ ಕೋಟಿ ಸಂಖ್ಯೆಯಲ್ಲಿ ಜನ ಬಂದರೂ ಅದನ್ನು ಯಶಸ್ವಿಯಾಗಿ ನಿರ್ವಹಿಸಿದ ಉದಾಹರಣೆ ನಮ್ಮ ಮುಂದೆ ಇದೆ. ನಿಜಕ್ಕೂ ಕುಂಭಮೇಳದ ಘಟನೆ ಪಾಠವಾಗಬೇಕಿತ್ತು. ಆದರೆ ಅದಕ್ಕೆ ನಮ್ಮ ಅಹಂ ಬಿಡುವುದಿಲ್ಲ. ನಮ್ಮ ತಪ್ಪಿಗೆ ಕ್ಷುಲ್ಲಕ ಕಾರಣಗಳು ಸಿಗುತ್ತವೆ. ಕುಂಭ ಮೇಳಕ್ಕೋ ಕಾಶಿಗೋ ಅಥವಾ ಶಬರಿಮಲೆ ಹತ್ತುವುದಕ್ಕೋ ಯಾರಾದರೂ ಹೋದರೆ ಅವರು ಮನೆಗೆ ಬರುತ್ತೇನೆ ಎಂದು ಹೇಳುವ ಹಾಗಿಲ್ಲ. ದೂರದ ಹಜ್ ಯಾತ್ರೆಗೆ ಹೋಗುವಾಗಲೂ ಮತ್ತೆ ಬರುವ ಆಶೆ ಇರಕೂಡದು. ಅದು ಬದುಕಿನ ಚರಮ ಸ್ಥಾನ. ಒಂದು ವೇಳೆ ಸತ್ತರೂ ಸಾಯುಜ್ಯ ಪದವಿ ಸೇರುವ ತೃಪ್ತಿ ಇರಬಹುದು. ಆದರೆ ಈ ಐಪಿಲ್ ವಿಜಯೋತ್ಸವ....ಸಾಯುಜ್ಯ ಪದವಿಯಾಗಬಹುದೇ? ಹೋಲಿಕೆ ಎಷ್ಟು ಮೂರ್ಖತನ ಅನ್ನಿಸುವುದಿಲ್ಲವೆ? ಪ್ರಾಣ ಭೀತಿ ಇಲ್ಲದೇ ಹೋಗುವವರನ್ನು ನಿಯಂತ್ರಿಸುವುದು ಕಷ್ಟ. ಹಾಗಾಗಿ ಮೆಕ್ಕಾದಲ್ಲೋ ಶಬರಿಮಲೆಯಲ್ಲೋ ಕಾಶಿಯಲ್ಲೋ ಕಾಲ್ತುತುಳಿತವಾದರೆ ಅದರ ಅರ್ಥವೇ ಬೇರೆ. ಅದು ಸರಿ ಎಂಬ ವಾದವಲ್ಲ. ಆದರೆ ತುಲನೆಗೆ ಒಂದಿಷ್ಟು ಚಿಂತನೆ ಅತ್ಯವಶ್ಯ.
ಮೊನ್ನೆ ಹನ್ನೊಂದು ಜನ ಅಸುನೀಗಿದರು. ಯೋಚಿಸಿ ಇದರಲ್ಲಿ ಎಲ್ಲರೂ ಜನ ಸಾಮಾನ್ಯರು. ಒಂದು ವೇಳೆ ಯಾರದರೂ ಒಬ್ಬ ಶಾಸಕನ ಮಂತ್ರಿಯ ಅಥವ ಒಬ್ಬ ಜನಪ್ರತಿನಿಧಿಯ ಮಕ್ಕಳೋ ಸಂಭಂದಿಕರೋ ಪ್ರಾಣ ಕಳೆದುಕೊಂಡರೆ ಹೇಗಿರುತ್ತಿತ್ತು. ಕಾಲವೇ ಹೀಗೆ, ಇಲ್ಲಿ ಜಲಪ್ರವಾಹದಲ್ಲಿ ನೆರೆಬಂದರೆ, ನೀರು ನುಗ್ಗಿದರೆ ಅದು ಬಡವರ ಮನೆಯನ್ನಷ್ಟೇ ಗುರಿಯಾಗಿಸಿ ಅಪೋಶನ ತೆಗೆದುಕೊಳ್ಳುತ್ತದೆ. ಎಲ್ಲಿಯೂ ಶಾಸಕರ ಮಂತ್ರಿಯ ಮನೆ ಮುಳಿಗಿದ ನಿದರ್ಶನ ಸಿಗುವುದು ದುರ್ಲಭ. ಪ್ರಕೃತಿಯೂ ಒಂದು ವಿ ಐ ಪಿ ಸ್ಥಾನವನ್ನು ಮೀಸಲಾಗಿರಿಸುವುದು ವಿಚಿತ್ರ. ಮೊನ್ನೆ ವೇದಿಕೆಯಲ್ಲಿ ಸೇರಿದ ಕುಟುಂಬ ವರ್ಗದಲ್ಲಿರುವ ಒಬ್ಬಿಬ್ಬರನ್ನಾದರೂ ಕ್ರೀಡಾಂಗಣದ ಬಳಿಗೆ ಕಳುಹಿಸುವ ಧೈರ್ಯಯಾರಿಗಾದರೂ ಇತ್ತೇ ಎಂಬುದು ವಿಷಯ. ಯಾಕೆಂದರೆ ಇಲ್ಲಿ ಸೌಲಭ್ಯಗಳು ತುಳಿತಗಳು ವರ್ಗವನ್ನು ಅರಸಿಕೊಂಡು ಬರುತ್ತವೆ.
ದುರಂತ ನಡೆದ ನಂತರ ಅಲ್ಲಿ ರಾಶಿಯಾದ ಚಪ್ಪಲಿಗಳನ್ನು ನೋಡಿ ಅನ್ನಿಸುತ್ತದೆ, ಇಲ್ಲಿ ಬರಿದಾದ ಪಾದಗಳೆಷ್ಟೋ ಬರಿದಾದ ಪ್ರಾಣಗಳೆಷ್ಟೋ....ಆದರೂ ಯಾವ ದುರಂತವೂ ನಮಗೆ ಪಾಠವನ್ನು ಕಲಿಸುವುದಿಲ್ಲ. ಇಲ್ಲವಾದರೆ ...ಆ ಜನಜಂಗುಳಿ ನೋಡಿ ಬುದ್ದಿ ಇದ್ದವರಿಗೆ ಅರ್ಥವಾದೀತು. ಆದರೆ ಇದನ್ನೆ ಕಾಶಿ ಶಬರಿ ಮಲೆ ಎಂದು ತಿಳಿದರೆ ಅದಕ್ಕೆ ಎನು ಹೇಳಬೇಕು? ಮೊದಲಿಗೆ ನಮ್ಮ ಹಪ ಹಪಿಕೆಯನ್ನು ನಿಯಂತ್ರಿಸಬೇಕು. ಸುಖ ಎಂಬುದು ನಮ್ಮ ನಿಯಂತ್ರಣದ ಮನೋಭಾವದಲ್ಲಿ ಇದೆ ಎಂದು ತಿಳಿಯಬೇಕು.
ಈಗ ಹಲವು ಸಮರ್ಥನೆಗಳು ಹಲವು ಕಾರಣಗಳು ಸುಲಭದಲ್ಲಿ ಸಿಗಬಹುದು. ಆದರೆ ಹೋದ ಪ್ರಾಣಗಳು ಬಿಟ್ಟು ಹೋದ ಕಥೆಗಳು ಪಾಠವಾಗುತ್ತದೆ. ಆಗಲೂ ಪಶ್ಚಾತ್ತಾಪ ಮೂಡದೇ ಇದ್ದರೆ ನಮ್ಮಲ್ಲಿ ಮಾನವೀಯತೆ ಇದೆ ಎಂದರೆ ಮೂರ್ಖತನವಾಗುತ್ತದೆ. ಈಗ ಸನ್ಮಾನಿಸಿದ ಕ್ರೀಡಾಳುಗಳನ್ನು ಕೇಳಿ. ಮತ್ತೊಮ್ಮೆ ಸನ್ಮಾನಿಸುತ್ತೇವೆ ಬನ್ನಿ ಎಂದರೆ...ಅವರು ಬರಬಹುದೇ? ಅವರ ತಪ್ಪು ಇರದೇ ಇರಬಹುದು. ಆದರೆ ಅವರಿಗೂ ಕಾಡಿ ಬಿಡುತ್ತದೆ..ಎಲ್ಲೋ ಒಂದು ಕಡೆ ಇದಕ್ಕೆ ನಾವೂ ಕಾರಣರಾಗಿಬಿಟ್ಟೆವು. ಈ ಪಾಪ ಪ್ರಜ್ಞೆ ಅವರನ್ನೂ ಕಾಡಬಹುದು. ಹೀಗಾಯಿತಲ್ಲಾ ಎಂದು ಮರುಗಬಹುದು. ಆದರೆ....ಆದರೆ ಮರುಗಲಾರದ ಪಶ್ಚಾತ್ತಾಪ ಪಡದ ಆತ್ಮಗಳು ಇನ್ನೂ ಇವೆ. ಅವುಗಳು ಈತಪ್ಪುಗಳನ್ನು ಸಮರ್ಥಿಸುತ್ತವೆ. ಹೋಲಿಕೆ ಮಾಡುತ್ತವೆ.....ಇಲ್ಲಿ ಒಂದೇ ಒಂದು ಬೇಡಿಕೆ...ಯಾವ ಪರಿಹಾರವೂ ಬೇಡ ಯಾವ ಸನ್ಮಾನವೂ ಬೇಡ...ಆ ಹನ್ನೊಂದು ಮಂದಿಯ ಪ್ರಾಣವನ್ನು ಪುನಃ ತಂದು ಬಿಡಿ. ಅದು ಸಾಧ್ಯವಾಗಬಹುದೇ? ಆ ಪ್ರಾಣ ಮತ್ತೆ ಬರುವುದೇ?
No comments:
Post a Comment