Saturday, August 2, 2025

ಮುಖವಾಡ

 

"ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವ ಮೊದಲ ವ್ಯಕ್ತಿಗಳೆಂದರೆ ಹೆತ್ತ ಅಪ್ಪ ಅಮ್ಮ"


ಒಬ್ಬ ಗಣ್ಯ ಅಪರಾಧಿಗೆ ಶಿಕ್ಷೆಯಾದಾಗ ವಾರ್ತಾ ಮಾಧ್ಯಮಗಳು ಹಲವು ಗಣ್ಯ ವ್ಯಕ್ತಿಗಳ ಅಭಿಪ್ರಾಯ ಕೇಳುವುದು ಸಾಮಾನ್ಯವಾಗಿದೆ. ಅಭಿಪ್ರಾಯ ಏನೇ ವ್ಯಕ್ತವಾಗಲೀ ಇದರಲ್ಲೊಂದು ಅಂತರ್ಗತ ಭಾವವನ್ನು ಹುಡುಕಬಹುದು. ಒಂದಿಷ್ಟು ಗಣ್ಯವ್ಯಕ್ತಿಗಳೂ ಸಹ ಆತ್ಮಾವಲೋಕನ ಮಾಡಿಕೊಳ್ಳಬಹುದಾದ ಸೂಕ್ಷ ಅವಕಾಶ ಇದು. ನಮ್ಮ ವ್ಯವಸ್ಥೆ ಹೇಗಿದೆ ಎಂದರೆ, ಇಲ್ಲಿ ಸಿಕ್ಕಿಬಿದ್ದವನು ಮಾತ್ರಾ ಅಪರಾಧಿ. ಸಿಕ್ಕಿ ಹಾಕದ ಅಪರಾಧಿಗಳು ಮುಖವಾಡ ಹೊತ್ತು ನಮ್ಮ ನಡುವೆ ಸಂಭಾವಿತರಾಗಿಬಿಡುತ್ತಾರೆ. ಒಬ್ಬ ಕಳ್ಳ ಸಿಕ್ಕಿಬಿದ್ದಾಗ ಮತ್ತೊಬ್ಬ ಕಳ್ಳನೂ ಹಿಡಿದು ಬಡಿದಂತೆ ಮುಖವಾಡಗಳು ಬೇಕಾ ಬಿಟ್ಟಿಯಾಗಿ ಬಿಕರಿಯಾಗಿಬಿಡುತ್ತವೆ. 

ನಿನ್ನೆ ನಡೆದ ಪ್ರಕರಣ ನಿಜಕ್ಕೂ ಒಂದು ಅವಿಸ್ಮರಣೀಯ ಪ್ರಕರಣ. ಒಬ್ಬನಿಗೆ ಶಿಕ್ಷೆಯಾಯಿತು ಏನೋ ನಿಜ. ಆದರೆ ಅದು ಹಲವು ಚಿಂತನೆಗಳಿಗೆ ಅವಕಾಶ ಕೊಡುತ್ತದೆ.  ದೂರು ಕೊಟ್ಟ ಆ ಅವಿದ್ಯಾವಂತ ಹೆಣ್ಣನ್ನು ಇಲ್ಲಿ ಮೊದಲು ಅಭಿನಂದಿಸಬೇಕು. ಅಚಲವಾಗಿ ನಿಂತ ಆಕೆಯ ಎದೆಗಾರಿಕೆಯೊಂದೇ ಈ ಶಿಕ್ಷೆಯ ಪರಿಣಾಮಕ್ಕೆ ಮೂಲ ಕಾರಣ. ಆಕೆ ಅನುಭವಿಸಿದ ನೋವು ಎಂತಹುದಿರಬಹುದು? ಯಾರಾದರೊಬ್ಬರು ನಮ್ಮ ಮೈಯನ್ನು ನಮ್ಮ ಅನುಮತಿಯಿಲ್ಲದೇ  ಸ್ಪರ್ಶಿಸಿದರೆ ಹಲವು ಸಲ ನಮಗೆ ಅಸಹ್ಯವಾಗಿಬಿಡುತ್ತದೆ. ನಮ್ಮ ಮೈ ಯಾರು ಮುಟ್ಟಬೇಕೋ ಬೇಡವೋ ಅದನ್ನು ನಿರ್ಧರಿಸುವ ಸ್ವಾತಂತ್ರ್ಯ ನಮ್ಮದೇ ಆಗಿರುವಾಗ , ಒಂದು ಲೈಂಗಿಕ ದೌರ್ಜನ್ಯ ಸಹಿಸಿ ಮತ್ತದನ್ನು ಪ್ರತಿಭಟಿಸುವುದು ನಿಜಕ್ಕೂ ಆತ್ಮಾಭಿಮಾನದ ಪ್ರಶ್ನೆ.   ಆಕೆಯ ನೋವು ಅವಮಾನ  ಇವುಗಳಿಗೆಲ್ಲ ಈ ಶಿಕ್ಷೆ ತೃಪ್ತಿಯನ್ನಂತೂ ಕೊಡುವುದಕ್ಕೆ ಸಾಧ್ಯವಿಲ್ಲ. ಕೇವಲ ಸಾಂತ್ವನ ಮಾತ್ರ. ಯಾಕೆಂದರೆ ಬದುಕು ಎಂಬುದೇ ಹಾಗೆ. ಅದು ಮುರುಟಿ ಹೋದರೆ ಯಾವ ಧೈರ್ಯ ಸ್ಥಿತ ಪ್ರಜ್ಞತೆ ಇದ್ದರೂ ಸಂತುಲನೆಗೆ ತರುವುದಕ್ಕೆ ಸಾಧ್ಯವಾಗುವುದಿಲ್ಲ.  ಕಳೆಯಿತೋ ಹೋಯಿತು ಎನ್ನುವ ಹಾಗೆ ಇರುತ್ತದೆ.  ಆದರೆ ಎನೂ ಆಗಲಿಲ್ಲ ಬದುಕು ಅಷ್ಟೇ ಅಲ್ಲ ಎಂಬುದನ್ನು ಪರಿಸರ ತೋರಿಸಿಕೊಡುವ ಅನಿವಾರ್ಯತೆ ಇದೆ. 

  ಹುಲಿ ಹಸಿವಿನಿಂದ ಒಂದು ಜಿಂಕೆಯ ಮೇಲೆ ಬಿದ್ದಾಗ ಹುಲಿಯ ಹಸಿವಿನ ಬಗ್ಗೆ ಅನುಕಂಪ ಮೂಡುವುದಿಲ್ಲ. ಆದರೆ ಜಿಂಕೆಯ ಅಸಹಾಯಕತೆಯಬಗ್ಗೆ ಮನಸ್ಸು ಮರುಗುತ್ತದೆ. ಆದರೆ ಮನುಷ್ಯನ ಈ ವಿಕೃತಿಯ ಹುಲಿಯಂತೆ  ಹಸಿವು ಕಾರಣವಲ್ಲ. ವಿಪರ್ಯಾಸವೆಂದರೆ ಶಿಕ್ಷೆ ಏನೋ ಸಿಕ್ಕಿತು. ನ್ಯಾಯಾಂಗ ಬಲಿಷ್ಠವಾಗಿ ಜಯವನ್ನು ಗಳಿಸಿತೇನೋ ಸತ್ಯ. ಆದರೆ ಇದೇ ನ್ಯಾಯ ಪರ್ಯಾಪ್ತವಲ್ಲ. ಸಿಕ್ಕಿಹಾಕಿಕೊಳ್ಳದ ಇದಕ್ಕಿಂತಲೂ ಕ್ರೂರವಾದ ಅಪರಾಧಿಗಳು ಏಷ್ಟೋ ಇದ್ದಾರೆ. ಇವುಗಳು ಪಾಠ ಅಂತ ನಾವು ತಿಳಿದುಕೊಂಡರೂ ಈ ಪಾಠ ಯಾರು ಕಲಿಯುತ್ತಾರೋ ಎಂಬುದು ಅಷ್ಟೇ ವಿಡಂಬನೆಯಾಗಿಬಿಡುತ್ತದೆ. ಆ ಹೆಣ್ಣು ಧೈರ್ಯದಿಂದ ದೂರು ಕೊಟ್ಟ ಕಾರಣ ಶಿಕ್ಷೆಯ ತನಕ ಪ್ರಕರಣ ಬಂದು ಅಂತ್ಯ ಕಂಡಿತು. ಇಲ್ಲವಾದರೆ? ಹಾಗಾಗಿ ದೂರು ಕೊಡುವ ಅವಕಾಶ ಹಕ್ಕು ಇದ್ದರೂ ಅದನ್ನು ಉಪಯೋಗಿಸುವ ಅರ್ಹತೆ ಮಾತ್ರ ಲಭ್ಯವಾಗುವುದು ಅಪರೂಪ. ನಮ್ಮ ವ್ಯವಸ್ಥೆ ಹಾಗಿದೆ. ಸಿಕ್ಕಿದ ಜಯ, ಸಾಬೀತಾದ ಅಪರಾಧವೂ ಹಲವು ಸಲ ದೌರ್ಜನ್ಯಕ್ಕೆ ಒಳಗಾದವರ ಮುಂದಿನ ಬದುಕನ್ನು ಕಮರಿಸಿಬಿಡುತ್ತದೆ. ಸುತ್ತ ಮುತ್ತಲಿನ ಬಂಧು ಬಳಗವೂ ದೂರವಾಗುವ ಸಂಭವ ಇರುತ್ತದೆ. ಯಾಕೆಂದರೆ ಈ ಮರ್ಯಾದೆ ಎಂಬ ಪ್ರಶ್ನೆಯೇ ಹಾಗೆ , ಆದ ಘಟನೆ ಹತ್ತು ಜನರಿಗೆ ತಿಳಿಯದೇ ಇರಲಿ ಎಂಬ ಆತಂಕದಲ್ಲೇ ಮರೆಯಾಗಿಬಿಡುತ್ತದೆ. 

ಅಪರಾಧಿಗೆ ಶಿಕ್ಷೆಯಾಯಿತು. ಒಂದು ಹೆಣ್ಣು ದೌರ್ಜನ್ಯಕ್ಕೆ ಒಳಗಾದರೂ ಅಪರಾಧಿಯ ಪರ ವಾದಿಸಿದ್ದು ಒಂದು ಸುಶಿಕ್ಷಿತ ಹೆಣ್ಣೇ ಎಂದು ತಿಳಿಯುವಾಗ ವಿಚಿತ್ರ ಎನಿಸುತ್ತದೆ. ಇದೇ ದೌರ್ಜನ್ಯ ವಾದಿಸುವವರಿಗೆ ಅಥವ ಅವರ ಸಂಭಂಧಿಕರಿಗೆ ನಡೆದಲ್ಲಿ ಅವರ ಈ ವಾದ ಯಾವ ರೂಪವನ್ನು ಪಡೆಯಬಹುದು. ವಾದ ಗೆಲ್ಲುವುದಕ್ಕೆ ಒದಗಿಸುವ ಸಮರ್ಥನೆ ನೋಡುವಾಗ ಅಯ್ಯೋ ಮನುಷ್ಯ ಯಾವ ವೇಷವನ್ನು ಹಾಕಬಲ್ಲ ಎಂದನಿಸುತ್ತದೆ. ಪ್ರಾಣಿಗಳೂ ಅದೂ ಗೋಸುಂಬೆಯಾದರೂ ರೂಪ ಬದಲಿಸುವುದಿಲ್ಲ. ಆದರೆ ಮನುಷ್ಯ ಮಾತ್ರ ತನ್ನ ರೂಪವನ್ನು ಬದಲಿಸುತ್ತಾ ಇರುತ್ತಾನೆ.  ಯಾರಿಗೋ ಒಬ್ಬರಿಗೆ ಶಿಕ್ಷೆಯಾಗುವಾಗ ಆಗುವ ಸಂತೋಷ, ಶಿಕ್ಷೆಯಿಂದ ತಪ್ಪಿಸ್ಕೊಳ್ಳುವ ಮುಖವಾಡ ಧಾರಿಗಳನ್ನು ನೋಡುವಾಗ ಆ ಸಂತೋಷ ಉಳಿಯುವುದಿಲ್ಲ. ನ್ಯಾಯ ಜಯ ಸಾಧಿಸಿದೆ ಎಂದನಿಸುವುದಿಲ್ಲ.  ಶಿಕ್ಷೆ ಪ್ರಾಯಶ್ಚಿತ್ತ ಅಂತ ತಿಳಿಯುವವರಿದ್ದಾರೆ. ಆದರೆ ಈ  ಅಪರಾಧಿಯ ಮುಖವನ್ನು ನೋಡುವಾಗ ಹಾಗೆ ಅನಿಸುವುದೇ ಇಲ್ಲ. ಸಭ್ಯನಂತೆ ಮುಖವಾಡ ಧರಿಸುವಾಗ ಇವರಿಗೆ ಯಾವ ಶಿಕ್ಷೆ ಸಿಕ್ಕಿದರೂ ಇವರು ಬದಲಾಗುವುದಿಲ್ಲ ಎಂದನಿಸುತ್ತದೆ. 

ಒಬ್ಬ ಅಪರಾಧಿ ಹೇಗೆ ಹುಟ್ಟಿಕೊಳ್ಳುತ್ತಾನೋ ಎಂಬುದು ವಿಚಿತ್ರ ಸಂಗತಿ. ಯಾವ ತಾಯಿಯೂ ತಾನು ಅಪರಾಧಿಗೆ ಜನ್ಮ ಕೊಡಬೇಕು ಎಂದು ಬಯಸುವುದಿಲ್ಲ. ಅದು ಮಹಿಷಾಸುರನ ತಾಯಿಯಂಥವರಿಂದ ಮಾತ್ರ ಸಾಧ್ಯ. ಆದರೂ ಹುಟ್ಟಿದ ನಂತರ ಅಪರಾಧಿಗಳಾಗುತ್ತಾರೆ. ತಂದೆ ತಾಯಿ ಕಾರಣವೋ ಪರಿಸರ ಕಾರಣವೋ ಅಂತು ಅಪರಾಧ ಉಳಿದವರ ಬದುಕನ್ನು ನಾಶಮಾಡಿಬಿಡುತ್ತದೆ. ಉಳಿದವರ ಬದುಕು ಮಾತ್ರವಲ್ಲ...ಒಬ್ಬ ಅಪಾರಾಧಿ ಸೆರೆ ಮನೆಯತ್ತ ಮುಖ ಮಾಡಿದಾಗ ಅನಿಸುವುದು ಛೇ ಹೆತ್ತ ಅಪ್ಪ ಅಮ್ಮನಿಗೆ ಹೇಗೆ ಅನಿಸಬಹುದು ಅಂತ ಯೋಚನೆ ಬಂದು ಬಿಡುತ್ತದೆ. ಯಾಕೆಂದರೆ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವ ಮೊದಲ ವ್ಯಕ್ತಿಗಳೆಂದರೆ ಹೆತ್ತ ಅಪ್ಪ ಅಮ್ಮ. ಇದೇ ಕಾರಣಕ್ಕೆ ಹಲವು ಸಲ ಈ ತಪ್ಪನ್ನು ಮುಚ್ಚಿಡುವುದಕ್ಕೆ ಹೆತ್ತಕರುಳು ಯತ್ನ ಮಾಡುತ್ತದೆ. ಆದರೆ ಒಂದು ಕರುಳಿನ ನೋವು ಮತ್ತೊಂದು ಕರುಳಿನ ನೋವನ್ನು ಅರಿಯುವುದೇ ಇಲ್ಲ. 


No comments:

Post a Comment